My Blog List

Sunday, August 3, 2008

ಇಂದಿನ ಇತಿಹಾಸ History Today ಆಗಸ್ಟ್ 3

ಇಂದಿನ ಇತಿಹಾಸ

ಆಗಸ್ಟ್ 3

ಕನ್ನಡದ ಪ್ರತಿಭಾನ್ವಿತ, ಸೃಜನಶೀಲ, ಗದ್ಯ ಲೇಖಕ ಯಶವಂತ ಚಿತ್ತಾಲ ಅವರು ವಿಠೋಬ- ರುಕ್ಮಿಣಿ ದಂಪತಿಯ ಪುತ್ರನಾಗಿ ಉತ್ತರ ಕನ್ನಡ ಜಿಲ್ಲೆಯ ಹನೇನಹಳ್ಳಿಯಲ್ಲಿ ಜನಿಸಿದರು. ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲ ಅವರು ಯಶವಂತ ಚಿತ್ತಾಲರ ಅಣ್ಣ.

2007: ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಪಠ್ಯವನ್ನು ಈದಿನ ಬಿಡುಗಡೆ ಮಾಡಲಾಯಿತು. ಭಾರತದ ಪರಮಾಣು ಸ್ಥಾವರಗಳಿಗೆ ಅಗತ್ಯವಿರುವ ಇಂಧನವನ್ನು ಎರಡೂ ದೇಶಗಳ ನಡುವಿನ 123 ಒಪ್ಪಂದಗಳನ್ವಯ ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡುವ ಭರವಸೆಯೊಂದಿಗೆ ಅಮೆರಿಕ ತನ್ನ ಬದ್ಧತೆಯನ್ನು ಈ ಪಠ್ಯದಲ್ಲಿ ಪ್ರಕಟಿಸಿತು. ಯಾವುದಾದರೂ ಕಾರಣದಿಂದ ಒಪ್ಪಂದಕ್ಕೆ ಹಿನ್ನಡೆಯುಂಟಾಗಿ ಕೊನೆಗೊಳ್ಳುವ ಹಂತ ತಲುಪಿದಾಗಲೂ ಸೂಕ್ತ ಸಮಾಲೋಚನೆಗೆ ಅವಕಾಶವನ್ನು ಈ ಪಠ್ಯವು ಕಲ್ಪಿಸಿತು.

2007: ತೀವ್ರ ಸುಟ್ಟಗಾಯಗಳಿಂದಾಗಿ ಒಂದು ತಿಂಗಳಿನಿಂದ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಗ್ಲಾಸ್ಗೊ ವಿಫಲ ಬಾಂಬ್ ಸ್ಫೋಟದ ಆರೋಪಿ ಬೆಂಗಳೂರು ಮೂಲದ ಕಫೀಲ್ ಅಹ್ಮದ್, ಈ ರಾತ್ರಿ ಮೃತನಾದ. ಇರಾಕ್ ಮೂಲದ ವೈದ್ಯ ಬಿಲಾಲ್ ಅಬ್ದುಲ್ಲಾನೊಂದಿಗೆ ಬೆಂಗಳೂರಿನ ಏರೋನಾಟಿಕಲ್ ಎಂಜಿನಿಯರ್ ಕಫೀಲ್ ಅಹ್ಮದ್ (27) ಜೂನ್ 30ರಂದು ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟಿಸುವ ಉದ್ದೇಶದಿಂದ ಸ್ಫೋಟಕಗಳು ತುಂಬಿದ್ದ ಜೀಪನ್ನು ವಿಮಾನ ನಿಲ್ದಾಣದ ಟರ್ಮಿನಲ್ ಒಂದಕ್ಕೆ ಗುದ್ದಿಸಲು ಯತ್ನಿಸಿದ್ದ. ಜೀಪ್ ಹೊತ್ತಿ ಉರಿದಾಗ ಸುಟ್ಟುಹೋಗಿದ್ದ ಕಫೀಲ್ ಗೆ `ಗ್ಲಾಸ್ಗೋ ರಾಯಲ್ ಇನ್ಫರ್ಮರಿ'ಯಲ್ಲಿ (ಆಸ್ಪತ್ರೆ) ಚಿಕಿತ್ಸೆ ನೀಡಲಾಗುತ್ತಿತ್ತು. ಜೀಪ್ ಸ್ಫೋಟಿಸಿದಾಗ ಸುರಕ್ಷಿತವಾಗಿ ಪಾರಾಗಿ, ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಬಿಲಾಲ್ ಅಬ್ದುಲ್ಲಾನನ್ನೂ ಬಂಧಿಸಲಾಗಿತ್ತು.

2007: ಸೇನೆಯನ್ನು ಟೀಕಿಸಿದ್ದಕ್ಕಾಗಿ ನಾಲ್ಕು ವರ್ಷಗಳ ಹಿಂದೆ 23 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ಪಿಎಂಎಲ್- ಎನ್ ಮುಖಂಡ ಜಾವೆದ್ ಹಷ್ಮಿ ಅವರನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ ನೀಡುವುದರೊಂದಿಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಎರಡನೇ ಬಾರಿ ಮುಖಭಂಗವಾಯಿತು. ಮುಷರಫ್ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ಹಂಗಾಮಿ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಕಟುವಾಗಿ ಟೀಕಿಸಿ 2003ರಲ್ಲಿ ಸೇನಾ ಯೋಧರಿಗೆ ಕರಪತ್ರ ಹಂಚಿದ್ದ ಹಷ್ಮಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಮುಷರಫ್ ವಿರುದ್ಧದ ಟೀಕೆಗಳ ಸುರಿಮಳೆಯೇ ಕರಪತ್ರದಲ್ಲಿ ಇತ್ತು. ರಾಷ್ಟ್ರೀಯ ಸಭೆಯ ಸದಸ್ಯರೂ ಆಗಿದ್ದ ಹಷ್ಮಿ ಅವರು ಸೇನೆಯಲ್ಲಿ ಒಡಕು ಮೂಡಿಸಲು ಯತ್ನಿಸಿದ್ದರು ಎಂದು ಆಪಾದಿಸಲಾಗಿತ್ತು. ಪ್ರಕಾಶಕರ ನಡುವೆ ಸ್ಪರ್ಧೆ ಏರ್ಪಡುವಂತೆ ಮಾಡುವ ಸಲುವಾಗಿ ಪ್ರಾರಂಭಗೊಂಡಿತು.

2006: ಬೆಂಗಳೂರಿನ ಎನ್ ಎಎಲ್ ವಿಜ್ಞಾನಿ ಡಾ. ಕೋಟಾ ಹರಿನಾರಾಯಣ ಅವರಿಗೆ ಜಿ.ಎಂ. ಮೋದಿ ಪ್ರಶಸ್ತಿ ಲಭಿಸಿತು.

2006: ಇರಾಕ್ ತೈಲ ಹಗರಣದ ತನಿಖಾ ವರದಿಯನ್ನು ಪಾಠಕ್ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವ ನಟವರ್ ಸಿಂಗ್ ಮತ್ತು ಅವರ ಪುತ್ರ ಜಗತ್ ಸಿಂಗ್ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು ಎಂದು 110 ಪುಟಗಳ ಈ ವರದಿ ಆರೋಪಿಸಿತು.

2006: ಪ್ರಜಾಪ್ರಭುತ್ವ ಪರ ರ್ಯಾಲಿಗಳನ್ನು ಹತ್ತಿಕ್ಕುವಲ್ಲಿ ಸೇನೆ ವಹಿಸಿದ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ನ್ಯಾಯಾಂಗ ಆಯೋಗವು ಕಠ್ಮಂಡುವಿನಲ್ಲಿ ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪ್ಯಾರ್ ಜಂಗ್ ಥಾಪಾ ಅವರನ್ನು ಪ್ರಶ್ನಿಸಿತು. ದೊರೆ ಜ್ಞಾನೇಂದ್ರ ಅವರ 14 ತಿಂಗಳುಗಳ ನೇರ ಆಡಳಿತಕ್ಕೆ ಮಂಗಳ ಹಾಡಿ, ಪ್ರಜಾಪ್ರಭುತ್ವ ಸ್ಥಾಪನೆಗೆ ಕಾರಣವಾದ ಜನತಾ ಚಳವಳಿಯನ್ನು ಹತ್ತಿಕ್ಕುವಲ್ಲಿ ಸೇನೆ ಷಾಮೀಲಾದ ಆಪಾದನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಆಯೋಗದಿಂದ ವಿಚಾರಣೆಗೆ ಒಳಗಾದ ಮೊತ್ತ ಮೊದಲ ಸೇನಾ ಅಧಿಕಾರಿ ಥಾಪಾ. ಏಪ್ರಿಲ್ ತಿಂಗಳ ಚಳವಳಿ ಕಾಲದಲ್ಲಿ ಸಹಸ್ರಾರು ಮಂದಿ ನಿರಾಯುಧ ಪ್ರದರ್ಶನಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ 22 ಮಂದಿ ಮೃತರಾಗಿ ನೂರಾರು ಮಂದಿ ಗಾಯಗೊಂಡಿದ್ದರು.

2006: ಸುವಿಹಾರಿ ಬಸ್ಸುಗಳಲ್ಲಿ ದೂರವಾಣಿ ಸೌಲಭ್ಯ ಕಲ್ಪಿಸುವ ವಿನೂತನ ಸೇವೆಯನ್ನು ರಿಲಯನ್ಸ್ ಕಮ್ಯೂನಿಕೇಷನ್ಸ್ ಕರ್ನಾಟಕದಲ್ಲಿ ಆರಂಭಿಸಿತು. ಭಾರತದ ಅತಿದೊಡ್ಡ ಸಾರಿಗೆ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿ.ಆರ್. ಎಲ್. ಟ್ರಾವಲ್ಸ್ ಬಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ಈ ಸೇವೆ ಆರಂಭಗೊಂಡಿತು.

1996: ಲಿಯಾಂಡರ್ ಪೇಸ್ ಅವರು ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಬ್ರೆಝಿಲ್ ನ ಫರ್ನಾಂಡೋ ಮೆಲಿಗೆನಿ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರು. 1952ರಲ್ಲಿ ಕೆ. ಜಾಧವ್ ಅವರು ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರದ ವರ್ಷಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿ ಲಿಯಾಂಡರ್ ಪೇಸ್ ಅವರಿಗೆ ಲಭಿಸಿತು.

1957: ಸಾಹಿತಿ ಭಾರತಿ ಪಾಟೀಲ ಜನನ.

1949: ಸಾಹಿತಿ ಟಿ.ಆರ್. ಅನಂತರಾಮು ಜನನ.

1943: ಸಿಸಿಲಿಯ ಸೇನಾ ಆಸ್ಪತ್ರೆಯಲ್ಲಿ ಜನರಲ್ ಜಾರ್ಜ್ ಎಸ್. ಪ್ಯಾಟ್ಟನ್ ಖಾಸಗಿ ವ್ಯಕ್ತಿಯೊಬ್ಬನನ್ನು ಹೇಡಿ ಎಂದು ನಿಂದಿಸಿ ಆತನ ಕಪಾಳಕ್ಕೆ ಹೊಡೆದ. ಈ ಕೃತ್ಯಕ್ಕಾಗಿ ಕ್ಷಮೆ ಬೇಡುವಂತೆ ಜನರಲ್ ಡ್ವೈಟ್ ಡಿ. ಐಸೆನ್ ಹೊವರ್ ಮಾಡಿದ ಆಜ್ಞೆಗೆ ಅನುಗುಣವಾಗಿ ನಂತರ ಪ್ಯಾಟ್ಟನ್ ತನ್ನ ತಪ್ಪಿಗಾಗಿ ಕ್ಷಮೆ ಬೇಡಿದ.

1936: ಖ್ಯಾತ ಸಾಹಿತಿ ಬನ್ನಂಜೆ ಗೋವಿಂದಾಚಾರ್ಯ ಜನನ.

1928: ಕನ್ನಡದ ಪ್ರತಿಭಾನ್ವಿತ, ಸೃಜನಶೀಲ, ಗದ್ಯ ಲೇಖಕ ಯಶವಂತ ಚಿತ್ತಾಲ ಅವರು ವಿಠೋಬ- ರುಕ್ಮಿಣಿ ದಂಪತಿಯ ಪುತ್ರನಾಗಿ ಉತ್ತರ ಕನ್ನಡ ಜಿಲ್ಲೆಯ ಹನೇನಹಳ್ಳಿಯಲ್ಲಿ ಜನಿಸಿದರು. ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲ ಅವರು ಯಶವಂತ ಚಿತ್ತಾಲರ ಅಣ್ಣ.

1928: ಎನ್. ವಿ. ಶಂಕರನಾರಾಯಣ ರಾವ್ ಜನನ.

1921: ಒಹೈಯೊದ ಟ್ರಾಯ್ ಯಲ್ಲಿ ಎಲೆ ಕೊರಕ ಹುಳಗಳ ನಿವಾರಣೆಗಾಗಿ ಮೊತ್ತ ಮೊದಲ ಬಾರಿಗೆ ವೈಮಾನಿಕ ಔಷಧಿ ಸಿಂಪರಣೆ ಮಾಡಲಾಯಿತು.

1916: ಐರಿಷ್ ರಾಷ್ಟ್ರೀಯವಾದಿ ಸರ್ ರೋಗರ್ ಕೇಸ್ ಮೆಂಟ್ ಅವರನ್ನು ರಾಜದ್ರೋಹದ ಆಪಾದನೆಗಾಗಿ ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು. ಐರಿಷ್ ಹೋರಾಟಕ್ಕೆ ಬೆಂಬಲ ನೀಡುವಂತೆ ಜರ್ಮನಿಯ ಮನವೊಲಿಸಲು ಕೇಸ್ ಮೆಂಟ್ ಪ್ರಯತ್ನಿಸಿದ್ದರು.

1914: ಜರ್ಮನಿಯು ಫ್ರಾನ್ಸ್ ವಿರುದ್ಧ ಸಮರ ಘೋಷಣೆ ಮಾಡಿತು.

1900: ಕ್ರಾಂತಿಕಾರಿ ನಾನಾ ಪಾಟೀಲ್ ಜನನ.

1886: ಖ್ಯಾತ ಹಿಂದಿ ಕವಿ ಮೈಥಿಲಿ ಶರಣ್ ಗುಪ್ತ ಜನ್ಮದಿನ. ಆಧುನಿಕ ಹಿಂದಿ ಸಾಹಿತ್ಯದಲ್ಲಿ ಮೊತ್ತ ಮೊದಲ ಮಹಾಕಾವ್ಯ ರಚಿಸಿದ ಹೆಗ್ಗಳಿಕೆ ಇವರದು.

1811: ಸೇಫ್ಟಿ ಎಲೆವೇಟರ್ ನ್ನು ಸಂಶೋಧಿಸಿದ ಎಲಿಸಾ ಗ್ರೇವ್ಸ್ ಓಟಿಸ್ (1811-1861) ಜನ್ಮದಿನ.

1492: ಹೊಸ ಜಗತ್ತನ್ನು ಶೋಧಿಸುವ ಗುರಿಯೊಂದಿಗೆ ಕ್ರಿಸ್ಟೋಫರ್ ಕೊಲಂಬಸ್ ಹಲವು ನಾವಿಕರೊಂದಿಗೆ ಮೊದಲ ಬಾರಿಗೆ ಸಮುದ್ರಯಾನ ಆರಂಭಿಸಿದ. ಸ್ಪೇನಿನ ಪಾಲೋಸ್ ನಿಂದ `ಸಾಂತಾ ಮಾರಿಯಾ', `ನಿನಾ' ಮತ್ತು `ಫಿಂಟ' ಎಂಬ ಮೂರು ಹಡಗುಗಳೊಂದಿಗೆ ಕೊಲಂಬಸ್ ನ ಯಾನ ಆರಂಭಗೊಂಡಿತು.

No comments:

Advertisement