ದೋಷ ಮಾತ್ರವಲ್ಲ, ಗುಣವೂ ಹೌದು

ನಮ್ಮದು ಹಾಗಿಲ್ಲ ಅನಿಸುತ್ತೆ. ಅನಿವಾರ್ಯ ಒತ್ತಡದಲ್ಲಿ ಸಿಲುಕಿದಾಗ ಬಿಡುಗಡೆ ಹೊಂದಲು ಬೇರೆ ದಾರಿಯೇ ಗೋಚರಿಸದಿದ್ದಾಗ ಕೊನೆಯ ಅಸ್ತ್ರವಾಗಿ ಕ್ರೋಧ ಜಾಗೃತವಾಗುತ್ತದೆ. ದಮ್ಮು, ಕಿಮ್ಮತ್ತು ಇಲ್ಲದ ಒಂದು ದುರ್ಬಲ ಕ್ರೋಧ. ಹಾಗಿದ್ದಾಗ ಅದನ್ನು ಕ್ರೋಧ ಎಂದು ಸಂಬೋಧಿಸಲೂ ಹೆದರಿಕೆ ಆಗುತ್ತದೆ. ಅದರ ಘನತೆಗೆ 'ಸಿಟ್ಟು' ಎನ್ನಬಹುದೇನೋ ಅಷ್ಟೆ. ಸಿಟ್ಟು ಆವರಿಸಿಕೊಂಡವರ ಆಟ, ಅದಾರಿದ ನಂತರ ವಾತಾವರಣ ತಿಳಿಗೊಳಿಸಲು ಪಡುವ ಪರದಾಟ ಅದರ ಗಂಭೀರತೆಯನ್ನು ತೋರಿಸುತ್ತದೆ.
ಕ್ರೋಧ ಗುಣ ಎನ್ನುವಾಗ ಇದ್ದರೆ ರಾಮನ ಕ್ರೋಧದಂತಿರಬೇಕು ಅಂದೆವು. ಸುಮ್ಮನೆ ಹೇಳಲಿಲ್ಲ. ರಾಮ ಕ್ರೋಧವನ್ನೂ ತನ್ನ ವಶದಲ್ಲಿಟ್ಟುಕೊಂಡು, ಅನಿವಾರ್ಯ ಸಂದರ್ಭದಲ್ಲಲ್ಲ, ಬಳಸಲೇಬೇಕಾದ ಸಂದರ್ಭದಲ್ಲಿ, ಅಂದರೆ ಅದಕ್ಕೊಪ್ಪುವ ಆದರ್ಶಪ್ರಾಯವಾದ ಸಂದರ್ಭದಲ್ಲಿ ಅಸ್ತ್ರವಾಗಿ ಪ್ರಯೋಗಿಸುತ್ತಿದ್ದ.
ಗಮನಿಸಬೇಕು. ರಾವಣನ ವಧೆಯ ಸಂದರ್ಭದಲ್ಲಿ ಶ್ರೀರಾಮ ಕೋಪವನ್ನು ಕರೆದ ಅಂತ ವಾಲ್ಮೀಕಿಗಳು ವರ್ಣನೆ ಮಾಡುತ್ತಾರೆ. 'ಕ್ರೋಧಂ ಆಹಾರಯಾಮಾಸ'. ನಾವು ಆಹಾರವನ್ನು ಸ್ವೀಕರಿಸುವಷ್ಟೇ ಸಹಜವಾಗಿ ಕ್ರೋಧವನ್ನು ತನ್ನೊಳಗೆ ಸ್ವೀಕರಿಸಿದ. ಹೊರಗೆಲ್ಲೋ ಅದು ನೆಲೆಸಿತ್ತು, ಅಷ್ಟರವರೆಗೂ ರಾಮನಿಗೂ ಅದಕ್ಕೂ ಸಂಬಂಧವೇ ಇರಲಿಲ್ಲವೇನೋ ಅನ್ನುವಂತೆ ವರ್ಣಿಸುತ್ತಾರೆ.
ಸ್ವಭಾವದ ಮೇಲೆ ಅಷ್ಟು ನಿಯಂತ್ರಣ ಸಾಧ್ಯವೇ! ಅಂತ ಅನ್ನಿಸಿದರೂ ಸಾಧ್ಯ ಅನ್ನುತ್ತದೆ ರಾಮಾಯಣ. ರಾಮನನ್ನು ತಂದು ಮನ್ಮಂದಿರದಲ್ಲಿ ನಿಲ್ಲಿಸುತ್ತದೆ. ಅಷ್ಟಾದರೂ ಆಶ್ಚರ್ಯದ ಎಪಿಸೋಡ್ ಮುಗಿಯುವುದಿಲ್ಲ. ಅಲ್ಲ ನಮ್ಮಿಂದ ಸಾಧ್ಯವಾಗದ್ದು ಇವನಿಗೆ ಹೇಗೆ ಸಾಧ್ಯವಾಯಿತು!
ಆ ರಾಮನ ಕ್ರೋಧ ಎಷ್ಟು ನಿಯಂತ್ರಿತ ಮತ್ತು ವೈಜ್ಞಾನಿಕ! (ತರ್ಕಕ್ಕೆ ನಿಲುಕುತ್ತದೆ ಎಂಬ ಧ್ವನಿಯಲ್ಲಿ). ರಾಮ ಕ್ರೋಧವನ್ನು ಆವಾಹಿಸಿಕೊಂಡ. ರಾವಣ ಧರೆಗೆ ಉರುಳಿದ. ರಾಮನ ಸ್ವರೂಪವನ್ನು ಅರಿತು ಶರಣಾದ. ಆಗ ರಾಮ ಕ್ರೋಧವನ್ನು ಸ್ವಸ್ಥಾನಕ್ಕೆ ಕಳಿಸಿದ. ಅದು ಇಳಿದಿದ್ದಲ್ಲ. ರಾವಣನನ್ನು ಧರೆಗುರುಳಿಸಲು ಅದು ಬೇಕಿತ್ತು. ಉರುಳಿಸಿ ಆಯಿತು. ಅದರ ಕೆಲಸ ಮುಗಿಯಿತು. ನಂತರ ಪರಮ ಪ್ರೀತಿಯಿಂದ ಅನುಗ್ರಹ ಸ್ವರೂಪನಾದ. ರಾವಣನ ಅಂತಿಮ ಸಂಸ್ಕಾರಕ್ಕೆ ವಿಭೀಷಣನಿಗೆ ಅಪ್ಪಣೆ ಕೊಡಿಸಿದ.
- ಶ್ರೀಮಜ್ಜಗದ್ಗುರು ಶಂಕರಾಚಾರ್ಯ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು











0 comments:
Post a Comment