My Blog List

Wednesday, December 31, 2008

ಮನವಿ ಮಾಡಿದರೂ ವರ್ಗವಾಗದ ಆರ್.ಡಿ. ಖಾತೆ..!

ಮನವಿ ಮಾಡಿದರೂ

ವರ್ಗವಾಗದ ಆರ್.ಡಿ. ಖಾತೆ..!



ನಿಯಮಗಳ ಪ್ರಕಾರ ಅರ್ಜಿದಾರರು ಶೇಕಡಾ 3.5 ಬಡ್ಡಿಗೆ ಅರ್ಹರು ಎಂಬುದು ನಿಜ. ಆದರೆ ಪ್ರತಿವಾದಿ ಅಂಚೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ವರ್ತನೆಯ ಪರಿಣಾಮವಾಗಿ ಅರ್ಜಿದಾರರು ಕಂಬ, ಕಂಬ ಸುತ್ತುವಂತಾಯಿತು ಎಂಬುದನ್ನೂ ಮರೆಯುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು. 

ನೆತ್ರಕೆರೆ ಉದಯಶಂಕರ

ಅಂಚೆ ಇಲಾಖೆ ದೇಶವ್ಯಾಪಿ. ಈ ಇಲಾಖೆಯ ಉಳಿತಾಯ ಖಾತೆಯೊಂದನ್ನು ನೀವು ತೆರೆಯುತ್ತೀರಿ ಎಂದಿಟ್ಟುಕೊಳ್ಳಿ. ಸ್ವಲ್ಪ ಸಮಯದ ಬಳಿಕ ನಿಮಗೆ ಬೇರೆ ಊರಿಗೆ ವರ್ಗಾವಣೆಯಾಗುತ್ತದೆ. ನೀವು ವರ್ಗಾವಣೆಗೊಂಡ ಊರಿನ ಅಂಚೆ ಕಚೇರಿಗೆ ನಿಮ್ಮ ಖಾತೆಯನ್ನು ವರ್ಗಾಯಿಸುವಂತೆ ಮನವಿ ಮಾಡುತ್ತೀರಿ. ದಿನಗಳು ಕಳೆದರೂ ಖಾತೆ ಅಲ್ಲಿಗೆ ವರ್ಗಾವಣೆಯಾಗದೆ ಅದರ ಬಗ್ಗೆ ಮಾಹಿತಿಗಾಗಿ ನೀವು ಅಂಚೆ ಇಲಾಖೆಯ ಕಂಬ, ಕಂಬ ಸುತ್ತಬೇಕಾಗಿ ಬರುತ್ತದೆ. ಕೊನೆಗೂ ನಿಮ್ಮ ಖಾತೆ ಎಲ್ಲಿಗೆ ಹೋಯಿತೆಂಬುದೇ ಗೊತ್ತಾಗುವುದಿಲ್ಲ!

ಈಗ ನೀವೇನು ಮಾಡಬೇಕು? ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆಯೇ?

ಖಂಡಿತವಾಗಿ. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿಕೊಟ್ಟಿದೆ.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಬಾಣಸವಾಡಿ ಬಾಲಾಜಿ ಲೇಔಟಿನ ನಿವಾಸಿ ಎಸ್. ಶಂಕರ್. ಪ್ರತಿವಾದಿ: ಅಂಚೆ ಇಲಾಖೆ, ಅಂಚೆ ಕಚೇರಿಗಳ ಹಿರಿಯ ಸೂಪರಿಂಟೆಂಡೆಂಟ್, ಅಂಚೆ ಇಲಾಖೆ ಬೆಂಗಳೂರು ಪೂರ್ವ, ಬೆಂಗಳೂರು.

ಅರ್ಜಿದಾರ ಶಂಕರ್ ಅವರು ಹೊಸೂರಿನಲ್ಲಿ ಇದ್ದಾಗ ಅಂಚೆ ಕಚೇರಿಯಲ್ಲಿ ಎರಡು ಆರ್.ಡಿ ಖಾತೆಗಳನ್ನು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ತೆರೆದರು. ಸ್ವಲ್ಪ ಸಮಯದ ಬಳಿಕ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು. ಹೀಗಾಗಿ ಅವರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಆರ್.ಡಿ. ಖಾತೆಗಳನ್ನು ಬೆಂಗಳೂರಿನ ಕಲ್ಯಾಣನಗರ ಅಂಚೆ ಕಚೇರಿಗೆ ವರ್ಗಾಯಿಸುವಂತೆ ಹೊಸೂರಿನ ಅಂಚೆ ಕಚೇರಿಗೆ ಮನವಿ ಸಲ್ಲಿಸಿದರು.

ಸ್ವಲ್ಪ ದಿನಗಳ ಬಳಿಕ ಕಲ್ಯಾಣ ನಗರದ ಅಂಚೆ ಕಚೇರಿಯನ್ನು ಸಂಪರ್ಕಿಸಿದ ಶಂಕರ್, ತಮ್ಮ ಮಕ್ಕಳ ಹೆಸರಿನ ಎರಡು ಆರ್.ಡಿ. ಖಾತೆಗಳು ವರ್ಗಾವಣೆಗೊಂಡಿವೆಯೇ ಎಂಬುದಾಗಿ ವಿಚಾರಿಸಿದರು. ಈ ಆರ್.ಡಿ ಖಾತೆಗಳು ಮಾರುತಿ ಸೇವಾ ನಗರ ಅಂಚೆ ಕಚೇರಿಗೆ ವರ್ಗಾವಣೆಗೊಂಡಿರಬಹುದು, ಆದ್ದರಿಂದ ಮಾರುತಿ ಸೇವಾ ನಗರ ಅಂಚೆ ಕಚೇರಿಯನ್ನು ಸಂಪರ್ಕಿಸಿ ವಿಚಾರಿಸಿಕೊಳ್ಳಿ ಎಂಬುದಾಗಿ ಕಲ್ಯಾಣ ನಗರ ಅಂಚೆ ಕಚೇರಿಯಲ್ಲಿ ಶಂಕರ್ ಅವರಿಗೆ ಸಲಹೆ ನೀಡಲಾಯಿತು.

ಅರ್ಜಿದಾರರು ಮಾರುತಿ ಸೇವಾ ನಗರ ಅಂಚೆ ಕಚೇರಿಗೆ ಧಾವಿಸಿದಾಗ ಅಲ್ಲಿಗೆ ಅಂತಹ ಯಾವುದೇ ಖಾತೆಗಳು ಬಂದಿಲ್ಲ ಎಂಬ ಉತ್ತರ ಲಭಿಸಿತು.

ಕಡೆಗೂ ತಮ್ಮ ಮಕ್ಕಳ ಹೆಸರಿನ ಆರ್.ಡಿ. ಖಾತೆಗಳು ಯಾವ ಅಂಚೆ ಕಚೇರಿಗೆ ವರ್ಗಾವಣೆಗೊಂಡಿವೆ ಎಂಬುದನ್ನು ಪತ್ತೆ ಹಚ್ಚಲೂ ಶಂಕರ್ ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಖಾತೆಗಳಿಗೆ ಪ್ರತಿ ತಿಂಗಳೂ ಕಟ್ಟ ಬೇಕಾಗಿದ್ದ ಮಾಸಿಕ ಠೇವಣಿ ಪಾವತಿ ಮಾಡಲೂ ಅವರಿಗೆ ಸಾಧ್ಯವಾಗಲಿಲ್ಲ.

ಶಂಕರ್ ಅವರು ಬೇರೆ ದಾರಿಕಾಣದೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಆದರೆ ಜಿಲ್ಲಾ ಗ್ರಾಹಕ ನ್ಯಾಯಾಲಯವು ಪ್ರತಿವಾದಿ ಅಂಚೆ ಇಲಾಖೆಯಿಂದ ಸೇವಾ ಲೋಪ ಆದುದನ್ನು ಗಮನಿಸದೆಯೇ ಅರ್ಜಿದಾರರ ದೂರನ್ನು ವಜಾ ಮಾಡಿತು.

ಅರ್ಜಿದಾರ ಶಂಕರ್ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪಿನ ವಿರುದ್ಧ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಟಿ. ಹರಿಯಪ್ಪ ಗೌಡ ಮತ್ತು ರಮಾ ಅನಂತ್ ಅವರನ್ನು ಒಳಗೊಂಡ ರಾಜ್ಯ ಗ್ರಾಹಕ ನ್ಯಾಯಾಲಯವು ಅರ್ಜಿದಾರ ಶಂಕರ್ ಪರ ವಕೀಲರಾದ ಮೆ. ಕಸ್ತೂರಿ ಅಸೋಸಿಯೇಟ್ಸ್ ಹಾಗೂ ಪ್ರತಿವಾದಿಗಳ ಪರ ವಕೀಲರಾದ ಕೊತ್ವಾಲ್ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಈ ಪ್ರಕರಣದಲ್ಲಿ ಅರ್ಜಿದಾರರು ಎರಡು ಆರ್.ಡಿ. ಖಾತೆಗಳಲ್ಲಿ ತಲಾ 8000 ರೂಪಾಯಿಗಳನ್ನು ತೊಡಗಿಸಿದ್ದರು ಎಂಬುದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಈ ವಿಚಾರವನ್ನು ಆಯೋಗದ ಮುಂದೆ ಹಾಜರಾದ ಸಾರ್ವಜನಿಕ ಸಂಪರ್ಕ ಇನ್ ಸ್ಪೆಕ್ಟರ್ ಒಪ್ಪಿಕೊಂಡಿದ್ದುದನ್ನು ನ್ಯಾಯಾಲಯ ತನ್ನ ಗಮನಕ್ಕೆ ತೆಗೆದುಕೊಂಡಿತು.

ತಾನು ಆರ್.ಡಿ. ಖಾತೆಗಳಲ್ಲಿ ತೊಡಗಿಸಿದ ಹಣವನ್ನು ಪ್ರತಿವಾದಿಯು ಬಡ್ಡಿ ಸಹಿತವಾಗಿ ಹಿಂತಿರುಗಿಸಿದರೆ ಅರ್ಜಿದಾರರು ತೃಪ್ತರಾಗುತ್ತಾರೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದನ್ನೂ ಪೀಠವು ಗಮನಿಸಿತು.

ಆರ್.ಡಿ. ಖಾತೆಗಳ ಗತಿ ಏನಾಯಿತೆಂದು ಅರಿಯಲು ಅರ್ಜಿದಾರರನ್ನು ಕಂಬದಿಂದ ಕಂಬಕ್ಕೆ ಸುತ್ತುವಂತೆ ಮಾಡಿರುವುದರಿಂದ ಬಡ್ಡಿ ಸಹಿತವಾಗಿ ಠೇವಣಿ ಹಣ ಹಿಂದಿರುಗಿಸುವಂತೆ ನಿರ್ದೇಶನ ನೀಡುವುದು ನ್ಯಾಯೋಚಿತ ಎಂಬ ಅಭಿಪ್ರಾಯವನ್ನು ಗ್ರಾಹಕ ನ್ಯಾಯಾಲಯ ತಳೆಯಿತು.

ನ್ಯಾಯಾಲಯಕ್ಕೆ ಹಾಜರಾದ ಅಂಚೆ ಇಲಾಖೆಯ ಅಧಿಕಾರಿ 27-9-2008ರಂದು ಅಥವಾ ಬಳಿಕ ಆರ್.ಡಿ. ಖಾತೆಗಳಲ್ಲಿ ಠೇವಣಿ ಇಡಲಾದ ಹಣವನ್ನು ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದನ್ನೂ ನ್ಯಾಯಾಲಯ ಗಮನದಲ್ಲಿ ಇರಿಸಿಕೊಂಡಿತು.

ನಿಯಮಗಳ ಪ್ರಕಾರ ಅರ್ಜಿದಾರರು ಶೇಕಡಾ 3.5ರಷ್ಟು ಬಡ್ಡಿ ಪಡೆಯಲು ಅರ್ಹರಾಗಿದ್ದಾರೆ ಎಂಬುದು ನಿಜ. ಆದರೆ ಈ ಪ್ರಕರಣದಲ್ಲಿ ಪ್ರತಿವಾದಿ ಅಂಚೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ವರ್ತನೆಯ ಪರಿಣಾಮವಾಗಿ ಅರ್ಜಿದಾರರು ಕಂಬದಿಂದ ಕಂಬಕ್ಕೆ ಸುತ್ತುವಂತಾಯಿತು ಎಂಬುದನ್ನೂ ಮರೆಯುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರು ವಾರ್ಷಿಕ ಶೇಕಡಾ 6ರಷ್ಟು ಬಡ್ಡಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ಪೀಠವು ಮೇಲ್ಮನವಿಯನ್ನು ಅಂಗೀಕರಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿತು. ಎರಡೂ ಆರ್.ಡಿ. ಖಾತೆಗಳಿಗೆ ಸಂಬಂಧಿಸಿದಂತೆ ತಲಾ 8000 ರೂಪಾಯಿಗಳನ್ನು ಹಣ ಪಾವತಿ ಆಗುವವರೆಗೂ ಶೇಕಡಾ 6ರಷ್ಟು ಬಡ್ಡಿ ಸಹಿತವಾಗಿ ಹಿಂದಿರುಗಿಸಬೇಕು ಎಂದೂ ಪೀಠವು ಆದೇಶ ನೀಡಿತು.

ಇಂದಿನ ಇತಿಹಾಸ History Today ಡಿಸೆಂಬರ್ 31

ಇಂದಿನ ಇತಿಹಾಸ 

ಡಿಸೆಂಬರ್ 31

 
ಕೋಫಿ ಅನ್ನಾನ್ ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನದಿಂದ ಈದಿನ ಮಧ್ಯರಾತ್ರಿ ನಿರ್ಗಮಿಸಿದರು. ಅನ್ನಾನ್ ಉತ್ತರಾಧಿಕಾರಿಯಾಗಿ ದಕ್ಷಿಣ ಕೊರಿಯಾದ ಬಾನ್ ಕಿ ಮೂನ್ ಆಯ್ಕೆಯಾಗಿದ್ದಾರೆ.

2007: ಹಂಪಿ ಕನ್ನಡ ವಿಶ್ವವಿದ್ಯಾಲಯದ 2007ರ ಸಾಲಿನ ನಾಡೋಜ ಗೌರವ ಪದವಿಗೆ ಖ್ಯಾತ ಸಾಹಿತಿ ಶಾಂತರಸ ಹೆಂಬೇರಾಳು, ನ್ಯಾಯಮೂರ್ತಿ ಸುಬ್ರಾಯ ರಾಮನಾಯಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗಯ್ಯ ಹಾಗೂ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಆಯ್ಕೆಯಾದರು.

2007: ಗೋವಾ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದ 12 ವಿಶೇಷ ಆರ್ಥಿಕ ವಲಯಗಳನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ ನಂತರ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿತು ಎಂದು ಮುಖ್ಯಮಂತ್ರಿ ದಿಗಂಬರ ಕಾಮತ್ ಪಣಜಿಯಲ್ಲಿ  ತಿಳಿಸಿದರು. ಕೇಂದ್ರದ ಮುಂದೆ 8 ವಿಶೇಷ ಆರ್ಥಿಕ ವಲಯಗಳ ಪ್ರಸ್ತಾವ ಇದ್ದು ಅದನ್ನು ಕೈಬಿಡಲು ಮನವಿ ಮಾಡಿಕೊಳ್ಳಲಾಗುವುದು. ಈಗಾಗಲೇ ಅನುಮತಿ ದೊರಕಿರುವ 4 ವಲಯಗಳನ್ನು ಜಾರಿಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಕಾಮತ್ ಹೇಳಿದರು.

2007: ಚಿಕ್ಕಮಗಳೂರು ನಗರದ ಪತ್ರಿಕಾ ಛಾಯಾಗ್ರಾಹಕ ಎ.ಎನ್.ಪ್ರಸನ್ನ ಅವರು ತೆಗೆದ ಉರುಳಿಗೆ ಸಿಕ್ಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಚಿರತೆಯ ಚಿತ್ರವು ಸ್ಯಾಂಕ್ಚುಯರಿ ಏಷ್ಯಾ ನಿಯತಕಾಲಿಕದ 2007ನೇ ಸಾಲಿನ ಹವ್ಯಾಸಿ ಛಾಯಾಚಿತ್ರಗ್ರಾಹಕ ಪ್ರಶಸ್ತಿಗೆ ಆಯ್ಕೆಯಾಯಿತು. ಏಷ್ಯಾ ಖಂಡದ ಹಲವು ದೇಶಗಳಿಂದ ಸ್ಪರ್ಧೆಗೆ ಬಂದಿದ್ದ
ನೂರಾರು ಛಾಯಾಚಿತ್ರಗಳಲ್ಲಿ 14 ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಸನ್ನ ಅವರ ಚಿತ್ರ `ದ ನೈನ್ತ್ ಲೈಫ್' ಶೀರ್ಷಿಕೆಯಡಿ ಡಿಸೆಂಬರ್ ತಿಂಗಳ ನಿಯತಕಾಲಿಕದಲ್ಲಿ ಪ್ರಕಟಗೊಂಡಿತು. ಚಿಕ್ಕಮಗಳೂರು ಸಮೀಪದ ಬ್ಯಾಗದಹಳ್ಳಿಯ ಕಾಫಿ ತೋಟವೊಂದರಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಕ್ಕಿ ನರಳಾಡುತ್ತಿದ್ದ ಚಿರತೆ ಪ್ರಸನ್ನ ಅವರ ಕ್ಯಾಮೆರಾದಲ್ಲಿ ಬಂಧಿಯಾಗಿತ್ತು. ಅಂತಿಮವಾಗಿ ಉರುಳಿಗೆ ಜಯವಾಗಿ ಚಿರತೆ ಮೃತಪಟ್ಟಿತ್ತು. ಅರಣ್ಯ ವ್ಯಾಪಕ ಒತ್ತುವರಿಗೊಳಗಾಗಿ ಕಾಫಿ ತೋಟಗಳಾಗಿ ಬದಲಾಗುತ್ತಿರುವ ಪಶ್ಚಿಮಘಟ್ಟದಲ್ಲಿ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಈ ಚಿತ್ರ ಬಿಂಬಿಸಿತ್ತು.

2007: ಗ್ರಾಮಾಂತರ ಪ್ರದೇಶದ ದೇವಸ್ಥಾನಗಳಲ್ಲಿ ಮಹಿಳೆಯರನ್ನು ಕೊಲೆ ಮಾಡಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಸರಣಿ ಹಂತಕಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದರು. ಆರೋಪಿ ಮಹಿಳೆ ಕನಕಪುರ ಮುಖ್ಯ ರಸ್ತೆಯ ಕಗ್ಗಲಿಪುರ ಹೋಬಳಿಯ ಬಾದೆಕಟ್ಟೆ ಗ್ರಾಮದ ನಿವಾಸಿ ಹನುಮಂತಪ್ಪನ ಪತ್ನಿ ಮಲ್ಲಿಕಾ (43). ಈಕೆ ಸೈನೈಡ್ ಬಳಸಿ ಆರು ಮಹಿಳೆಯರನ್ನು ಕೊಲೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. 

2007: ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಕಟ್ಟಡ ಧ್ವಂಸ ಪ್ರಕರಣದ ತನಿಖೆಗಾಗಿ ನೇಮಕಗೊಂಡ ಲಿಬರಾನ್ ಆಯೋಗದ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಯಿತು. ಇದರೊಂದಿಗೆ ಅಸ್ತಿತ್ವಕ್ಕೆ ಬಂದ 15 ವರ್ಷಗಳಲ್ಲಿ ಆಯೋಗದ ಅವಧಿಯನ್ನು 43 ನೇ ಬಾರಿ ವಿಸ್ತರಿಸಿದಂತಾಯಿತು. ನ್ಯಾಯಮೂರ್ತಿ ಎಂ.ಎಸ್.ಲಿಬರಾನ್ ನೇತೃತ್ವದ ತಂಡಕ್ಕೆ  2008ರ ಫೆಬ್ರುವರಿ 29 ರ ತನಕ ಗಡುವು ವಿಸ್ತರಿಸಲಾಯಿತು. 1992 ರ ಡಿಸೆಂಬರ್ 16 ರಂದು  ಈ ಆಯೋಗದ ರಚನೆಯಾಗಿತ್ತು.  

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ನಡೆದ ಸಂದರ್ಭದ ವಿಡಿಯೋ ದೃಶ್ಯವನ್ನು ಬ್ರಿಟಿಷ್ ಚಾನೆಲ್ 4 ಪ್ರಸಾರ ಮಾಡಿತು. ಇದು ಬೆನಜೀರ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಗುಂಡೇಟು ತಗುಲಿದ ಬೆನಜೀರ್ ಭುಟ್ಟೊ ತಮಗೆ ನೀಡಿದ್ದ ಗುಂಡುನಿರೋಧಕ ಕಾರಿನಿಂದ ಕೆಳಗೆ ಬಿದ್ದದ್ದನ್ನು ಈ ವೀಡಿಯೋ ದೃಶ್ಯ ತೋರಿಸಿತು. ಈ ವಿಡಿಯೋ ದೃಶ್ಯದಲ್ಲಿ ಬಿಳಿ ಅಂಗಿ, ಕಪ್ಪು ಜಾಕೆಟ್ ಹಾಗೂ ಕನ್ನಡಕಧಾರಿ ವ್ಯಕ್ತಿ ಬೆನಜೀರ್ ಇದ್ದ ಕಾರಿನ ಎಡಭಾಗಕ್ಕೆ ಗುಂಡು ಹಾರಿಸಿದ ಹಾಗೂ ಆ ನಂತರ ಆತ್ಮಹತ್ಯಾ ದಾಳಿಕೋರನೋರ್ವ  ತನ್ನನ್ನು ಸ್ಫೋಟಿಸಿಕೊಂಡ ದೃಶ್ಯಗಳಿವೆ. ಬೆನಜೀರ್ ಅವರಿಗೆ ಪಾಕ್ ಸರ್ಕಾರ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಇದು ಸಾಕಷ್ಟು ಪುಷ್ಟಿ ನೀಡಿತು.

2007: ಇಸ್ಲಾಮಾಬಾದಿನ ಹವ್ಯಾಸಿ ವಿಡಿಯೋಗ್ರಾಫರನೊಬ್ಬ ತೆಗೆದ ಬೆನಜೀರ್ ಭುಟ್ಟೋ ಅವರ ಕೊನೆಯ ಕೆಲವು ಕ್ಷಣಗಳ ಇನ್ನೆರಡು ಹೊಸ ವಿಡಿಯೊ ಚಿತ್ರಗಳನ್ನು ಪಾಕಿಸ್ಥಾನದ ಸುದ್ದಿ ಚಾನೆಲ್ಲುಗಳು ಪ್ರಸಾರ ಮಾಡಿವು. ಈ ವಿಡಿಯೋ ಚಿತ್ರವು ತಂಪು ಕನ್ನಡಕ (ಸನ್ ಗ್ಲಾಸ್) ಧರಿಸಿದ್ದ ಕೊಲೆಗಾರ  ಪಿಪಿಪಿ ನಾಯಕಿ ಬೆನಜೀರ್  ಭುಟ್ಟೋ ಅವರತ್ತ ಗುಂಡು ಹಾರಿಸುತ್ತಿರುವುದನ್ನು ಮತ್ತು  ಪರಿಣಾಮವಾಗಿ  ಭುಟ್ಟೋ ಅವರು ಹಿಂಜರಿದದ್ದನ್ನು ಸ್ಪಷ್ಟವಾಗಿ ತೋರಿಸಿತು. ಇವುಗಳಲ್ಲಿ ಒಂದನ್ನು ಹವ್ಯಾಸಿ ಫೊಟೋಗ್ರಾಫರ್ ಒಬ್ಬ ತೆಗೆದಿದ್ದು, ಇದರಲ್ಲಿ ಭುಟ್ಟೋ ಅವರತ್ತ ಯುವಕನೊಬ್ಬ ಹಿಂಭಾಗದಿಂದ ಪಿಸ್ತೂಲು ಗುರಿ ಹಿಡಿದದ್ದನ್ನು  ಸ್ಪಷ್ಟವಾಗಿ ತೋರಿಸಿದೆ. ಈ ವೇಳೆಯಲ್ಲಿ ಭುಟ್ಟೋ ಅವರು ತಮ್ಮ ಗುಂಡುನಿರೋಧಕ ವಾಹನದಿಂದಲೇ ಬೆಂಬಲಿಗರತ್ತ ಕೈ ಬೀಸುತ್ತಿದ್ದರು ಎಂದು ಡಾನ್  ನ್ಯೂಸ್ ಚಾನೆಲ್ ಹೇಳಿತು. ಇನ್ನೊಂದು ವಿಡಿಯೋದಲ್ಲೂ ಇದೇ ಯುವಕ, ಮುಖಕ್ಕೆ  ಬಿಳಿಬಟ್ಟೆ ಹಾಕಿಕೊಂಡಿದ್ದ ಇನ್ನೊಬ್ಬ ವ್ಯಕ್ತಿಯ ಪಕ್ಕದಲ್ಲಿ ನಿಂತಿದ್ದುದು ಕಾಣಿಸುತ್ತಿತ್ತು. ಗುಂಡು  ಹಾರಿಸಿದ ಯುವಕನ  ಪಕ್ಕದಲ್ಲಿದ್ದ ಈ ಇನ್ನೊಬ್ಬ ವ್ಯಕ್ತಿ ಶಂಕಿತ ಆತ್ಮಹತ್ಯಾ ಬಾಂಬರ್ ಇರಬಹುದು ಎಂದು ಡಾನ್  ನ್ಯೂಸ್ ವಿವರಿಸಿತು.

2007: ಕೀನ್ಯಾದ ಹಾಲಿ ಅಧ್ಯಕ್ಷ ಮವಾಯಿ ಕಿಬಾಕಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕೀನ್ಯಾದಲ್ಲಿ ಹಿಂಸಾಚಾರ ಭುಗಿಲೆದ್ದು 125ಕ್ಕೂ ಹೆಚ್ಚು ಮಂದಿ ಮೃತರಾದರು.

2006: ಡಿಸೆಂಬರ್ 30ರಂದು ನೇಣುಗಂಬ ಏರಿದ ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಭಾರತೀಯ ಕಾಲಮಾನ ಮುಂಜಾನೆ 4.00 ಗಂಟೆಗೆ ಇರಾಕಿನ ಉತ್ತರ ಭಾಗದಲ್ಲಿ ಇರುವ ಸದ್ದಾಮ್ ಹುಟ್ಟೂರು ಟಿಕ್ರಿತ್ ಸಮೀಪದ ಅವ್ಜಾಹ್ ಗ್ರಾಮದಲ್ಲಿ ನೆರವೇರಿಸಲಾಯಿತು. ಸದ್ದಾಮ್ ತಮ್ಮ ಆಳ್ವಿಕೆ ಕಾಲದಲ್ಲಿ ಸ್ವ-ಗ್ರಾಮದಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲೇ ಅವರ ಸಮಾಧಿ ಮಾಡಲಾಯಿತು. ಬಾಗ್ದಾದಿನಿಂದ 180 ಕಿ.ಮೀ ದೂರದಲ್ಲಿ ಇರುವ ಅವ್ಜಾಹ್ ಗ್ರಾಮದಲ್ಲಿ ಸದ್ದಾಮ್ ನಿರ್ಮಿಸಿದ್ದ ಕಟ್ಟಡವನ್ನು ಈ ಮೊದಲು ಸಾಮಾನ್ಯವಾಗಿ ಶ್ರದ್ಧಾಂಜಲಿ ಸಭೆ ನಡೆಸಲು ಬಳಸಲಾಗುತ್ತಿತ್ತು. ಸಲಾಹೆದ್ದೀನ್ ಪ್ರಾಂತ್ಯದ ರಾಜ್ಯಪಾಲ ಹಮೇದ್-ಅಲ್-ಶಕ್ತಿ ಮತ್ತು ಸದ್ದಾಮ್ ಅವರ ಅಲ್ಬು ನಾಸೀರ್ ಬುಡಕಟ್ಟು ಜನಾಂಗದ ಮುಖ್ಯಸ್ಥ ಅಲಿ -ಅಲ್- ನಿದಾ ಮತ್ತು ಕುಟುಂಬ ವರ್ಗದವರ್ಗದವರು ಅಂತ್ಯಕ್ರಿಯೆಯಲ್ಲಿಪಾಲ್ಗೊಂಡಿದ್ದರು. ಆದರೆ, ರಕ್ಷಣಾ ಪಡೆಯು ಟಕ್ರಿತ್ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದುದರಿಂದ ಸದ್ದಾಮ್ ಅಭಿಮಾನಿಗಳು ಯಾರೂ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ. ಅಮೆರಿಕ ಸೇನಾಪಡೆಯಿಂದ 2003ರಲ್ಲಿ ಹತ್ಯೆಗೀಡಾಗಿದ್ದ  ಸದ್ದಾಮ್ ಪುತ್ರರಾದ ಉದಯ ಮತ್ತು ಖುಸಾಯ ಅವರನ್ನೂ ಇದೇ ಗ್ರಾಮದಲ್ಲಿ ಸಮಾಧಿ ಮಾಡಲಾಗಿತ್ತು.

2006: ಕೋಫಿ ಅನ್ನಾನ್ ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನದಿಂದ ಈದಿನ ಮಧ್ಯರಾತ್ರಿ ನಿರ್ಗಮಿಸಿದರು. ಅನ್ನಾನ್ ಉತ್ತರಾಧಿಕಾರಿಯಾಗಿ ದಕ್ಷಿಣ ಕೊರಿಯಾದ ಬಾನ್ ಕಿ ಮೂನ್ ಆಯ್ಕೆಯಾಗಿದ್ದಾರೆ.

2006: ಜಾವಾದ ಕರಾವಳಿ ಸಮೀಪ ಸಮುದ್ರದಲ್ಲಿ ಡಿಸೆಂಬರ್ 29ರ ನಡುರಾತ್ರಿ ಹವಾಮಾನ ವೈಪರೀತ್ಯದಿಂದ ಮುಳುಗಿದ `ಸೇನಾಪತಿ' ನೌಕೆಯಲ್ಲಿದ್ದ 600 ಜನರ ಪೈಕಿ 200 ಮಂದಿಯನ್ನು ರಕ್ಷಿಸಲಾಗಿದ್ದು, 66 ಮಂದಿಯ ಶವ ಪತ್ತೆಯಾಯತು. 400 ಮಂದಿಗಾಗಿ ಇನ್ನೂ ಶೋಧ ಮುಂದುವರೆದಿದೆ ಎಂದು ಅಂತಾರ ಸುದ್ದಿ ಸಂಸ್ಥೆ ವರದಿ ಮಾಡಿತು.

2006: ಲಿಮ್ಕಾ ದಾಖಲೆ ಸಲುವಾಗಿ ಸುನೀಲ್ (22) ಮತ್ತು ವಂದನಾ ಶರ್ಮಾ (22) ಜೋಡಿ ರಾಜಸ್ಥಾನದ ಜೈಪುರದ ಕ್ರೀಡಾಂಗಣದಲ್ಲಿ ಬಿಸಿಗಾಳಿಯ ಬಲೂನಿನೊಳಗೆ ಕುಳಿತು ಆಕಾಶಕ್ಕೆ ಏರಿ ಅಲ್ಲೇ ಹಾರ ಬದಲಾಯಿಸಿ ಮದುವೆ ಮಾಡಿಕೊಂಡರು. ಮದುವೆಗೆ ಆಕಾಶದ ಮೋಡಗಳಷ್ಟೇ ಸಾಕ್ಷಿಯಾಗಲಿಲ್ಲ. ವಧು, ವರನ ಸಂಬಂಧಿಗಳು ಅಲ್ಲಿ ಸೇರಿ ಶುಭ ಕೋರಿದರು. ಹೊಸ ದಂಪತಿ ಬಲೂನಿನಲ್ಲಿ ಕುಳಿತುಕೊಂಡು ಮೇಲಕ್ಕೆ ಹಾರುತ್ತಿದ್ದಂತೆ ಕೆಳಗಿನ ಜನರೆಲ್ಲ ಕರತಾಡನ ಮಾಡಿ ಹರಸಿದರು. ಆಕಾಶದಲ್ಲಿ ತೇಲುತ್ತಿದ್ದ ಬಲೂನ್ ಮದುವೆ ಮಂಟಪವಾಗಿದ್ದುದನ್ನು ಹೊರತು ಪಡಿಸಿ, ಉಳಿದದ್ದೆಲ್ಲ ಹಿಂದು ಸಂಪ್ರದಾಯದಂತೆಯೇ ಸಾಂಗವಾಗಿ ನಡೆಯಿತು. ಭೂಮಿಯ ಮೇಲಿಂದ ಬರುತ್ತಿದ್ದ ಶಹನಾಯಿ ನಾದ, ಜನರ ಹಷರ್ೋದ್ಘಾರಗಳ ಮಧ್ಯೆ ವರ ಸುನೀಲ್ ಮತ್ತು ವಧು ವಂದನಾ ಪರಸ್ಪರ ಹಾರ ಬದಲಾಯಿಸಿಕೊಂಡರು. ಬಳಿಕ ಸುನೀಲ್ ಬಲೂನಿನಲ್ಲಿ ಹೊಮ್ಮುತ್ತಿದ್ದ ಬಿಸಿಗಾಳಿ ಸಾಕ್ಷಿಯಾಗಿ ತಾಳಿಕಟ್ಟಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ. ಸುನೀಲ್ ಬಂಡವಾಳ ಹೂಡಿಕೆದಾರ ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ ನೌಕರ. ಎಂಟರ್ ಟೇನ್ಮೆಂಟ್ 7 ಕಂಪನಿಯ ಅನುಪ ಶ್ರೀವಾಸ್ತವ ಈ ವಿನೂತನ ಮದುವೆ ಸಂಘಟಿಸಿದ್ದರು. 

2006: ಸಮಕಾಲೀನ ನೃತ್ಯಕ್ಕೆ ವಿನೂತನ ತಿರುವು ತಂದುಕೊಟ್ಟ ಖ್ಯಾತ ನೃತ್ಯ ಕಲಾವಿದೆ ಚಂದ್ರಲೇಖಾ ಅವರು ಚೆನ್ನೈಯಲ್ಲಿ ನಿಧನರಾದರು. 78 ವರ್ಷ ವಯಸ್ಸಿನ ಚಂದ್ರಲೇಖಾ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಭರತನಾಟ್ಯ ಸೇರಿದಂತೆ ವಿವಿಧ ನೃತ್ಯ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಚಂದ್ರಲೇಖಾ ಅವರು 1950ರ ದಶಕದಲ್ಲೇ ಜನರ ಮನಸ್ಸು ಗೆದ್ದಿದ್ದರು. ಚಂದ್ರಲೇಖಾ ಅವರು ಖ್ಯಾತ ಗುರು ಕಂಚೀಪುರ ಎಲ್ಲಪ್ಪಾ ಪಿಳ್ಳೈ ಅವರ ಬಳಿ 50ರ ದಶಕದಲ್ಲಿ ಸಾಂಪ್ರದಾಯಿಕ ನೃತ್ಯಾಭ್ಯಾಸ ಪಡೆದು ತಮ್ಮ ಸಾಧನೆ ಆರಂಭಿಸಿದ್ದರು. ಕಾಳಿದಾಸ ಸಮ್ಮಾನ್, ಸಂಗೀತ ನೃತ್ಯ ನಾಟಕ ಅಕಾಡೆಮಿ ಫೆಲೋಶಿಪ್ ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ  ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಬಂದಿವೆ. 60ರ ದಶಕದ ಬಳಿಕ ಲೇಖಕಿಯಾಗಿ ಮತ್ತು ಮಹಿಳಾ ಹಕ್ಕು ರಕ್ಷಣೆ ಕಾರ್ಯಕರ್ತರಾದ ಚಂದ್ರಲೇಖಾ 1985ರ ನಂತರ ನೃತ್ಯ ನಿರ್ದೇಶನವನ್ನೂ ಮಾಡುತ್ತಿದ್ದರು.

2006: ರಾಜಸ್ಥಾನದ ಭಿಲ್ವಾರದ 72 ವರ್ಷದ ಮಹಿಳೆಯೊಬ್ಬರ 7 ಮಂದಿ ಪುತ್ರಿಯರು ತಮ್ಮ ತಾಯಿಯ ಪಾರ್ಥಿವ ಶರೀರವನ್ನು ತಾವೇ ಹೊತ್ತದ್ದಲ್ಲದೆ, ಚಿತೆಗೆ, ಚಿತೆಗೆ ಅಗ್ನಿಸ್ಪರ್ಶವನ್ನೂ ಮಾಡುವ ಮೂಲಕ ರಾಜಸ್ಥಾನಿ ಸಮಾಜಕ್ಕೆ ಹೊಸ ಮಾದರಿ ಹಾಕಿಕೊಟ್ಟರು. ತಮ್ಮ ತಾಯಿ ಕಾಂಚನ ದೇವಿ ತಮ್ಮನ್ನು ಪುತ್ರರಂತೆಯೇ ಪರಿಗಣಿಸಿದ್ದರು. ತಾವು ಏಳೂ ಮಂದಿ ಕೂಡಾ ಪುತ್ರಿಯರೇ ಆಗಿದ್ದರೂ ಪುತ್ರ ಬೇಕೆಂದು ಆಕೆ ಬಯಸಲಿಲ್ಲ. ಬದಲಾಗಿ ಏಳೂ ಮಂದಿ ಪುತ್ರಿಯರನ್ನು ಹುಡುಗರಿಗೆ ಸರಿಸಮಾನವಾಗಿ ಬೆಳೆಯುವಂತೆ ಪ್ರೋತ್ಸಾಹಿಸಿದರು ಎಂಬುದು ಪುತ್ರಿಯರಲ್ಲಿ ಒಬ್ಬರಾದ ಲತಾ ಮಾದ್ರೇಚಾ ಅಭಿಮತ. ಕಾಂಚನದೇವಿಯ ಪುತ್ರಿಯರು ತಮ್ಮ ತಾಯಿಯ ಪಾರ್ಥಿವ ಶರೀರವನ್ನು ದುಃಖಾಶ್ರುಗಳೊಂದಿಗೆ ಸ್ವತಃ ತಾವೇ ಹೊತ್ತುಕೊಂಡು ರುದ್ರಭೂಮಿಗೆ ತಂದು ಅಗ್ನಿಸ್ಪರ್ಶ ಮಾಡಿದರು. ಪುತ್ರಿಯರನ್ನು ಹೊರೆ ಎಂದೂ ಪುತ್ರರನ್ನು ವರ ಎಂದೂ ಪರಿಗಣಿಸುವ ಸಮಾಜದಲ್ಲಿ, ಈ ಪುತ್ರಿಯರು ಸಂಪ್ರದಾಯದ ಹಾದಿ ತ್ಯಜಿಸಿ ಹೊಸ ಹಾದಿ ಹಿಡಿದಾಗ ಅವರ ಗಂಡಂದಿರು, ಬಂಧುಗಳು ಮತ್ತು ನೆರೆಹೊರೆಯ ಮಂದಿ ಕೂಡಾ ಹೃತ್ಪೂರ್ವಕವಾಗಿ ಬೆಂಬಲಿಸಿದರು. ರಾಜಸ್ಥಾನದಲ್ಲಿ ಹಿಂದಿನ ದಿನಗಳಲ್ಲಿ ಮಹಿಳೆಯರನ್ನೂ ರುದ್ರಭೂಮಿಗೆ ತೆರಳದಂತೆ ತಡೆಯಲಾಗುತ್ತಿತ್ತು, ಆದರೆ ಈ ಘಟನೆಯೊಂದಿಗೆ ಕಾಂಚನ ದೇವಿಯ 35ರ ಹರೆಯ ದಾಟಿದ ಪುತ್ರಿಯರು ರುದ್ರಭೂಮಿಗೆ ತೆರಳಿ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸುವಲ್ಲೂ ಸಫಲರಾದರು.

2006: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಆರ್.ವಿ. ಬಿಡಪ್ಪ (86) ಅವರು ಈದಿನ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಬೀದರಿನಲ್ಲಿ ರಾಷ್ಟ್ರೀಯ ಶಿಕ್ಷಣ ಸೊಸೈಟಿಯನ್ನು ಸ್ಥಾಪಿಸಿರುವ ಬಿಡಪ್ಪ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ಪ್ರಾಂತದ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿಜಾಮ ಆಡಳಿತದ ವಿರುದ್ಧ ಚಳವಳಿ ನಡೆಸಿದ ಮುಖಂಡರಲ್ಲಿ ಇವರೂ ಒಬ್ಬರು. ಕಾರ್ಮಿಕ ಮುಖಂಡರೂ ಆಗಿದ್ದ ಅವರು, ಗುಲ್ಬರ್ಗದ ಎಂ. ಎಸ್. ಕೆ. ಮಿಲ್ಸ್ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2006: ಗಿನ್ನೆಸ್ ದಾಖಲೆ ಸ್ಥಾಪನೆ ಸಲುವಾಗಿ ಕರಾಟೆ ಬಾಲೆ ಐದು ವರ್ಷ 11 ತಿಂಗಳು ಪ್ರಾಯದ ಯುಕೆಜಿ ವಿದ್ಯಾರ್ಥಿನಿ ದಿಯಾ ಅರಸ್ ಮೈಸೂರಿನ ಮಾನಸಗಂಗೋತ್ರಿ ರಂಗಮಂದಿರದಲ್ಲಿ ತನ್ನ ಮೃದುವಾದ ಹಣೆಯಿಂದ ಒಂದು ನಿಮಿಷದಲ್ಲಿ 31 ಮಂಗಳೂರು ಹಂಚುಗಳನ್ನು ಪುಡಿ ಪುಡಿ ಮಾಡಿದಳು. ಈ ಮೂಲಕ 40 ಸೆಕೆಂಡುಗಳಲ್ಲಿ 25 ಹಂಚುಗಳನ್ನು ಪುಡಿ ಪುಡಿ ಮಾಡಿದ್ದ ತನ್ನ ಹಿಂದಿನ ದಾಖಲೆಯನ್ನು ಅಳಿಸಿಹಾಕಿದಳು. ಗಿನ್ನೆಸ್ ದಾಖಲೆ ಸ್ಥಾಪನೆ ಸಲುವಾಗಿ 30 ಹಂಚುಗಳನ್ನು ಪುಡಿಗುಟ್ಟಲು ಯೋಚಿಸಿದ್ದ ದಿಯಾ ಒಂದು ಹಂಚು ಹೆಚ್ಚು ಪುಡಿ ಮಾಡಿ ಗಿನ್ನೆಸ್ ದಾಖಲೆಯತ್ತ ದೃಢ ಹೆಜ್ಜೆ ಇಟ್ಟಳು.

2005: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಲ್ ಕೃಷ್ಣ ಅಡ್ವಾಣಿ ಅವರು ರಾಜೀನಾಮೆ ನೀಡಿದರು. ನೂತನ ಅಧ್ಯಕ್ಷರಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜನಾಥ್ ಸಿಂಗ್ ನೇಮಕಗೊಂಡರು. ತಮ್ಮ ರಾಜೀನಾಮೆ ಮತ್ತು ಹೊಸ ಅಧ್ಯಕ್ಷರ ನೇಮಕ ಸುದ್ದಿಯನ್ನು ಸುದ್ದಿಯನ್ನು ಅಡ್ವಾಣಿ ಸ್ವತಃ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಉತ್ತರ ಪ್ರದೇಶದ ಚಾಂದೌಲಿ ಜಿಲ್ಲೆಯ ಭಾಬೌರಾ ಗ್ರಾಮದಲ್ಲಿ 1951ರ ಜುಲೈ 10ರಂದು ಜನಿಸಿದ ರಾಜನಾಥ್ ಸಿಂಗ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ರೈತ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಕಟವರ್ತಿ. ವಿದ್ಯಾರ್ಥಿ ದೆಸೆಯಿಂದಲೂ ಆರೆಸ್ಸೆಸ್ ಕಾರ್ಯಕರ್ತ. ಆರೆಸ್ಸೆಸ್, ಅಭಾವಿಪಗಳಲ್ಲಿ ದುಡಿದು 1974ರಲ್ಲಿ ಜನಸಂಘದ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. 1975ರಲ್ಲಿ ಜೆಪಿ ಚಳವಳಿಯಲ್ಲಿ ಧುಮುಕಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಕ್ಕೆ ಇಳಿದು ಎರಡು ವರ್ಷ ಸೆರೆವಾಸ ಅನುಭಸಿದರು. 1977 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆ ಪ್ರವೇಶಿಸಿದರು.

2005: ಭವಿಷ್ಯದ ಅನಿಶ್ಚಿತತೆಯೊಂದಿಗೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ (ಕೆಐಒಸಿಎಲ್) ಈದಿನ ಮಧ್ಯರಾತ್ರಿ ತನ್ನ ಚಟುವಟಿಕೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತು. 2005ರ ಡಿಸೆಂಬರ್ 31ಕ್ಕೆ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು 2002ರ ಅಕ್ಟೋಬರ್ 30ರಂದು ತೀರ್ಪಿಗೆ ಪ್ರತಿಯಾಗಿ ಕಂಪೆನಿಯ ಕಾರ್ಮಿಕ ಸಂಘಟನೆಗಳು ಸಲ್ಲಿಸುತ್ತಾ ಬಂದಿದ್ದ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸುತ್ತಲೇ ಬಂದಿತ್ತು. 

1993: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ರಚಿಸಿದರು.

1991: ಸೋವಿಯತ್ ಒಕ್ಕೂಟ (ಯು ಎಸ್ ಎಸ್ ಆರ್) ಕಾನೂನುಬದ್ಧವಾಗಿ ಅಸ್ತಿತ್ವ ಕಳೆದುಕೊಂಡಿತು. 1991ರ ಡಿಸೆಂಬರ್ 21ರಂದೇ ರಷ್ಯ ಮತ್ತು ಇತರ ಹತ್ತು ಹಿಂದಿನ ಸೋವಿಯತ್ ಗಣರಾಜ್ಯಗಳು ತಮಗೆ ತಾವೇ ಸ್ವಾತಂತ್ರ್ಯ ಘೋಷಿಸಿಕೊಂಡು, ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತ್ (ಸಿಐಎಸ್) ಸ್ಥಾಪಿಸಿಕೊಂಡಿದ್ದವು. ಹಾಗೂ ಮಿನ್ಸ್ಕ್ನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡ್ದಿದವು.

1950: ಸಾಹಿತಿ ಡಿ.ಎನ್. ಶ್ರೀನಾಥ್ ಜನನ.

1946: ಸಾಹಿತಿ ಹೊರೆಯಾಲ ದೊರೆಸ್ವಾಮಿ ಜನನ.

1943: ಖ್ಯಾತ ಬ್ರಿಟಿಷ್ ಚಿತ್ರನಟ ಬೆನ್ ಕಿಂಗ್ ಸ್ಲೆ ಹುಟ್ಟಿದ ದಿನ. ರಿಚರ್ಡ್ ಅಟೆನ್ ಬರೊ ಅವರ ಚಲನಚಿತ್ರ `ಗಾಂಧಿ'ಯಲ್ಲಿ ಬೆನ್ ಕಿಂಗ್ ಸ್ಲೆ ಮಹಾತ್ಮಾ ಗಾಂಧೀಜಿ ಪಾತ್ರ ವಹಿಸಿದ್ದರು. 

1934: ಸಾಹಿತಿ ಉಷಾದೇವಿ ಜನನ.

1929: ಈ ದಿನ ನಡುರಾತ್ರಿ `ಪೂರ್ಣ ಸ್ವರಾಜ್' ಪ್ರತಿಜ್ಞೆ ಸ್ವೀಕರಿಸುವ ಸಲುವಾಗಿ ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಲಾಹೋರಿಗೆ ತೆರಳಿದರು. 1930ರ ಜನವರಿ 26ರಂದು ಮೊದಲ ಬಾರಿಗೆ `ಸ್ವರಾಜ್ ದಿನ' ಆಚರಿಸಲಾಯಿತು.

1923: ಹೊಸ ವರ್ಷದ ಮುನ್ನಾದಿನ ರೇಡಿಯೋದಲ್ಲಿ ಮೊತ್ತ ಮೊದಲ ಬಾರಿಗೆ `ಬಿಗ್ ಬೆನ್' ಕೇಳಿಸಿತು. 1924ರ ಫೆಬ್ರುವರಿ 17ರಿಂದ ಬಿ.ಬಿ.ಸಿ.ಯಲ್ಲಿ ಗ್ರೀನ್ ವಿಚ್ `ಪಿಪ್ಸ್' ಜೊತೆಗೆ ಬಿಗ್ ಬೆನ್ ಗಂಟೆ ನಿಯಮಿತವಾಗಿ ಕೇಳಿಸತೊಡಗಿತು.

1903: ಪ್ರತಿಭೆ, ಅನುಭವ, ಕ್ರಿಯಾಶೀಲತೆಯಿಂದ ಹಲವಾರು ಮಂತ್ರಿಗಳಿಗೆ ಲೇಖನ, ಭಾಷಣ, ಭಿನ್ನವತ್ತಳೆಗಳನ್ನು ಬರೆದುಕೊಡುತ್ತ್ದಿದ ಕೆ.ಎಸ್. ಧರಣೇಂದ್ರಯ್ಯ (31-12-1903ರಿಂದ 13-8-1971) ಅವರು ಸಣ್ಣ ಅಂಬಣ್ಣ ಅವರ ಮಗನಾಗಿ ತುಮಕೂರು ಜಿಲ್ಲೆ ಉರುಡುಗೆರೆ ಹೋಬಳಿಯ ತಾಳೇನಹಳ್ಳಿಯಲ್ಲಿ ಜನಿಸಿದರು.

1896: ಸಾಹಿತಿ ಎಂ.ವಿ. ಗೋಪಾಲಸ್ವಾಮಿ ಜನನ.

1864: ಜಾಜ ಮಿಫ್ಲಿನ್ ಡಲ್ಲಾಸ್ (1792-1864) ಅವರು ಫಿಲಡೆಲ್ಫಿಯಾದಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. 1845-1849 ಅವಧಿಯಲ್ಲಿ ಅಮೆರಿಕಾದ ಉಪಾಧ್ಯಕ್ಷರಾಗಿದ್ದ ಅವರ ಗೌರವಾರ್ಥ ಟೆಕ್ಸಾಸ್ ಮತ್ತು ಓರೆಗಾನಿನ ನಗರಗಳಿಗೆ `ಡಲ್ಲಾಸ್ ನಗರ' ಎಂಬ ಹೆಸರಿಡಲಾಯಿತು.

1861: ಅಸ್ಸಾಮಿನ ಚಿರಾಪುಂಜಿಯಲ್ಲಿ ವಿಶ್ವದಾಖಲೆಯ 22,990 ಮಿ.ಮೀ. ಮಳೆ ಸುರಿಯಿತು.

1857: ಕೆನಡಾದ ರಾಜಧಾನಿಯಾಗಿ ಒಟ್ಟಾವವನ್ನು ಆಯ್ಕೆ ಮಾಡಲಾಯಿತು.

1600: ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ 15 ವರ್ಷಗಳ ಅವಧಿಗೆ ಪೂರ್ವ ಸಮುದ್ರದಲ್ಲಿ ವ್ಯಾಪಾರ ನಡೆಸುವ ಏಕಸ್ವಾಮ್ಯವನ್ನು ರಾಣಿ ಒಂದನೇ ಎಲಿಜಬೆತ್ ಮಂಜೂರು ಮಾಡಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, December 30, 2008

'ಗೋವು ಉಳಿದರೆ ನಾವು ಉಳಿದೇವು'

'ಗೋವು ಉಳಿದರೆ ನಾವು ಉಳಿದೇವು'


ಗೋವಿನ ಅಳಿವು-ಉಳಿವಿನ ಮೇಲೆ ನಮ್ಮ ಮುಂದಿನ ಬದುಕು ನಿಂತಿದೆ. 
ಗೋವು   ಉಳಿದರೆ ನಾವು ಉಳಿದೇವು - ಇದು ರಾಮ ಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಸ್ಪಷ್ಟ ನುಡಿ.

ಡಿಸೆಂಬರ್ 28ರ ಭಾನುವಾರ ಬೆಳಗ್ಗೆ ಬೆಂಗಳೂರಿನ ಜಿಗಣಿಯ ಸ್ವಾಮೀ ವಿವೇಕಾನಂದ ಯೋಗ ವಿಶ್ವವಿದ್ಯಾಲಯ   ಆವರಣದ ಪ್ರಶಾಂತಿ ಕುಟೀರದಲ್ಲಿ 'ಯೋಗ, ಗೋವು ಮತ್ತು ಗ್ರಾಮ ಪುನರ್ ನಿರ್ಮಾಣ' ಕುರಿತ ಮೊತ್ತ ಮೊದಲ ಅಂತಾರಾಷ್ಟೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗೋವು ಅನಂತ ಸುಂದರ, ಸಂಪದ್ಭರಿತವಾಗಿದ್ದರೂ ಅತ್ಯಂತ ಸಂಕಟಪಡುತ್ತಿದೆ. ಇದರಿಂದಾಗಿ ಇಡೀ ವಿಶ್ವವೇ  ಸಂಕಟಪಡುವಂತೆ ಆಗುತ್ತಿದೆ. ಹಾಗಾಗದಿರಲು ಭಾವ ಪರವಶ ಸಂತ ಮಂಡಲದ ಮಾರ್ಗದರ್ಶನದ ಅಡಿಯಲ್ಲಿ ರಚನಾತ್ಮಕ ಕೈಗಾರಿಕಾ ಉದ್ಯಮಿಗಳು ಮುನ್ನಡೆಯಬೇಕು. ಅವರನ್ನು ಬುದ್ಧಿಜೀವಿಗಳು ಪರಸ್ಪರ ಬೆಸೆಯಬೇಕು. ಇದಕ್ಕೆ ಇಂತಹ ಸಮ್ಮೇಳನಗಳು ಸೇತುವೆಯಾಗಬೇಕು' ಎಂದು ಸ್ವಾಮೀಜಿ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಯೋಗ ಮಂಡಳಿಯ ನಿರ್ದೇಶಕ ಡಾ. ಚಿದಾನಂದಮೂರ್ತಿ, ಜೋಧಪುರ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಲೋಕೇಶ್ ಶೇಖಾವತ್, ನೊಬೆಲ್ ಪ್ರಶಸ್ತಿಗೆ ನಾಮಾಂಕಿತರಾದ ಡಾ. ರಿಯೋ ರೆಬೆಲೋ, ಉದ್ಯಮಿ ದೇಶಬಂಧು ಗುಪ್ತಾ, ಪ್ರಶಾಂತಿ ಕುಟೀರದ ನಿರ್ದೇಶಕ ಡಾ. ಎಚ್.ಆರ್. ನಾಗೇಂದ್ರ ಮೊದಲಾದ ಗಣ್ಯರು ಹಾಜರಿದ್ದರು.

ಸಮ್ಮೇಳನ ಆರಂಭಕ್ಕೆ ಮೊದಲು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಗೋ ಪೂಜೆ ನೆರವೇರಿಸಿದರು. ಸಮ್ಮೇಳನದ 
ನೆನಪಿಗಾಗಿ ಸ್ಮರಣಸಂಚಿಕೆಯೊಂದನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಡಿಸೆಂಬರ್ 30ರವರೆಗಿನ ಮೂರು ದಿನಗಳ ಸಮ್ಮೇಳನದಲ್ಲಿ ಪಂಚಗವ್ಯದ ಮೇಲೆ ಸಂಶೋಧನೆ ನಡೆಸುತ್ತಿರುವ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಭಾಗವಹಿಸಿವೆ. ಶ್ರೀಲಂಕಾ, ಚೀನಾ, ಜಪಾನ್, ನ್ಯೂಜಿಲೆಂಡಿನಿಂದಲೂ ತಜ್ಞರು ಆಗಮಿಸಿದ್ದಾರೆ. 

ಮೂರು ದಿನಗಳ ಸಮ್ಮೇಳನ ಅವಧಿಯಲ್ಲಿ ಒಟ್ಟು  14 ವಿಷಯಗಳ 
ಮೇಲೆ ವಿಚಾರಗೋಷ್ಠಿ ನಡೆಯುವುದು. ಯೋಗ, ಗೋವು, ಗೋವು-ಗವ್ಯೋತ್ಪನ್ನಗಳ ಉಪಯುಕ್ತತೆ, ಗ್ರಾಮಗಳನ್ನು ಪುನರ್ ನಿರ್ಮಿಸುವಲ್ಲಿ ಗೋವಿನ ಪಾತ್ರ - ಈ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯುವುದು.

ಮಂಗಳವಾರ ಸಂಜೆ 4ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ನೆರವೇರುವುದು ಎಂದು ಶೀ ರಾಮಚಂದ್ರಾಪುರ ಮಠದ ಮಾಧ್ಯಮ ಕೇಂದ್ರ ತಿಳಿಸಿದೆ.
 

ಇಂದಿನ ಇತಿಹಾಸ History Today ಡಿಸೆಂಬರ್ 30

ಇಂದಿನ ಇತಿಹಾಸ

ಡಿಸೆಂಬರ್ 30

ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಸಿಲ್ವನ್ ಕಡಲತೀರದಲ್ಲಿ ರಚಿಸಿದ ಏಸುಕ್ರಿಸ್ತನ ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಸುದರ್ಶನ್ ಅವರು ಮರಳಿನಲ್ಲಿ ಪ್ರಪಂಚದಲ್ಲಿಯೇ ದೊಡ್ಡದಾದ ಏಸುಕ್ರಿಸ್ತನ ಕಲಾಕೃತಿಯನ್ನು ರಚಿಸಿದ್ದು, ಈ ಮರಳು ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಬಗ್ಗೆ ತಮಗೆ  ಪತ್ರ ಬಂದಿರುವುದಾಗಿ ಪ್ರಕಟಿಸಿದರು.

2007: ಹಿಮಾಚಲ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ನಿಚ್ಚಳ ಬಹುಮತ ಪಡೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ ಪ್ರೇಮ್ ಕುಮಾರ್ ಧುಮಾಲ್ ಅವರು ಈದಿನ ಬೆಳಿಗ್ಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಿಮ್ಲಾದ ಐತಿಹಾಸಿಕ ರಿಜ್ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ವಿ ಎಸ್ ಕೊಕ್ಜೆ  63ರ ಹರೆಯದ ಧುಮಾಲ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 1971ರಲ್ಲಿ ಆಸ್ತಿತ್ವಕ್ಕೆ ಬಂದ ಹಿಮಾಚಲ ಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿದ ಧುಮಾಲ್ ಅವರು ಹಿಂದೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದರು. ಮಾಜಿ ಸೈನಿಕನ ಪುತ್ರರಾದ ಧುಮಾಲ್ ಅವರಿಗೆ ಸಂಖ್ಯೆ ಒಂಬತ್ತರ ಮೇಲೆ ವಿಪರೀತ ನಂಬಿಕೆ. ಇದು ಅದೃಷ್ಟ ತಂದು ಕೊಟ್ಟಿದೆ ಎಂದೇ ಅವರ ಅನಿಸಿಕೆ. ಇವರ ಬದುಕಿನಲ್ಲಿ ಹಲವು ಪ್ರಮುಖ ಸಂಗತಿಗಳು ಸಂಖ್ಯೆ 9ರೊಂದಿಗೆ ಹೊಂದಿಕೊಳ್ಳುತ್ತವೆ. ಇವರ ಕಾರಿನ ಸಂಖ್ಯೆಯಲ್ಲಿ ಕೂಡಾ ಸಂಖ್ಯೆ 9 ಎದ್ದು ಕಾಣುತ್ತದೆ. ಅಧಿಕಾರ ಸ್ವೀಕರಿಸಿದ್ದು ಕೂಡಾ ಬೆಳಗ್ಗೆ 1.25ಕ್ಕೆ. ಅಂದರೆ (1+1ಥ2+5) ಒಟ್ಟು ಸಂಖ್ಯೆ 9ಆಗುತ್ತದೆ.

2007: ಹತ್ಯೆಗೀಡಾದ ಬೆನಜೀರ್ ಭುಟ್ಟೊ ಅವರ ಪುತ್ರ ಬಿಲಾವಲ್ ಅವರನ್ನು ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷರನ್ನಾಗಿ ಪಕ್ಷವು ಆಯ್ಕೆ ಮಾಡಿತು. ಬೆನಜೀರ್ ಅವರ ಪತಿ ಆಸಿಫ್ ಅಲಿ ಜರ್ದಾರಿ, ಮಖದ್ದುಮ್ ಫಾಹಿಂ ಮತ್ತು ಶಹಾ ಮೆಹಮೂದ್ ಅವರನ್ನು ಸಹ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

2007:  ಅಂತಾರಾಷ್ಟ್ರೀಯ ಖ್ಯಾತಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಸಿಲ್ವನ್ ಕಡಲತೀರದಲ್ಲಿ ರಚಿಸಿದ ಏಸುಕ್ರಿಸ್ತನ ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಸುದರ್ಶನ್ ಅವರು ಮರಳಿನಲ್ಲಿ ಪ್ರಪಂಚದಲ್ಲಿಯೇ ದೊಡ್ಡದಾದ ಏಸುಕ್ರಿಸ್ತನ ಕಲಾಕೃತಿಯನ್ನು ರಚಿಸಿದ್ದು, ಈ ಮರಳು ಕಲಾಕೃತಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿರುವ ಬಗ್ಗೆ ತಮಗೆ ಪತ್ರ ಬಂದಿರುವುದಾಗಿ ಪ್ರಕಟಿಸಿದರು. ಗೋಲ್ಡನ್ ಮರಳು ಕಲಾಕೃತಿ ಸಂಸ್ಥೆಯ 15 ವಿದ್ಯಾರ್ಥಿಗಳ ನೆರವಿನಿಂದ ತಾವು 60 ಅಡಿ ಉದ್ದ, 30 ಅಡಿ ಅಗಲ ಮತ್ತು 22 ಅಡಿ ಎತ್ತರದ ಏಸುಕ್ರಿಸ್ತನ ಬೃಹತ್ ಕಲಾಕೃತಿ ನಿರ್ಮಿಸಲು ಸಾಧ್ಯವಾಯಿತು. 600 ಟನ್ ಮರಳು ಬಳಸಿ 25 ಗಂಟೆಗಳಲ್ಲಿ ಕಲಾಕೃತಿ ನಿರ್ಮಿಸಲಾಯಿತು ಎಂದು ಅವರು ವಿವರಿಸಿದರು.

 2007: ಕೀನ್ಯಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕಿಬಾಕಿ ಅವರು ಮರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೊಗ ನೈರೋಬಿಯಲ್ಲಿ ಪ್ರಕಟಿಸಿತು.

2007:  ನವದೆಹಲಿಯ ಸ್ವರ್ಣ ಜಯಂತಿ ಪಾರ್ಕಿನಲ್ಲಿ ಸಂಘಟಿಸಲಾಗಿದ್ದ ಪ್ರದರ್ಶನದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ವಿಶ್ವ ಹಿಂದು ಪರಿಷತ್ ಮತ್ತು ಇತರ ಹಿಂದು ಸಂಘಟನೆಗಳ ಸುಮಾರು ಆರು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ರಾಮಸೇತು ಯೋಜನೆ ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಆರೆಸ್ಸೆಸ್ಸಿನ ಮುಖ್ಯಸ್ಥ ಕೆ.ಎಸ್. ಸುದರ್ಶನ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್ಗಢದ  ಮುಖ್ಯಮಂತ್ರಿ ರಮಣ ಸಿಂಗ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ, ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ವಿ ಎಚ್ ಪಿ ನಾಯಕ ಪ್ರವೀಣ್ ತೊಗಾಡಿಯಾ ಮತ್ತು ಇತರ ನಾಯಕರು ರ್ಯಾಲಿಯಲ್ಲಿ ಪಾಲ್ಗೊಂಡ್ದಿದರು. ಬಿಜೆಪಿಯ ಹಿರಿಯ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರ್ಯಾಲಿಗೆ ಶುಭ ಕೋರಿ ಸಂದೇಶ ರವಾನಿಸಿದ್ದರು.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಬಾಗ್ದಾದಿನಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 8.30ಕ್ಕೆ (ಗ್ರೀನ್ ವಿಚ್ ಕಾಲಮಾನ 3 ಗಂಟೆ) ಗಲ್ಲಿಗೇರಿಸಲಾಯಿತು. 1982ರಲ್ಲಿ ದುಜೈಲಿನಲ್ಲಿ ನಡೆದ 148 ಶಿಯಾಗಳ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಸದ್ದಾಮ್ ಅವರಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿತ್ತು. ನಂತರ ಮೇಲ್ಮನವಿ ನ್ಯಾಯಾಲಯ ಈ ತೀರ್ಪನ್ನು ದೃಢಪಡಿಸಿತ್ತು. ತಮ್ಮ ಹತ್ಯೆಗೆ ನಡೆದ ಯತ್ನಕ್ಕೆ ಸೇಡಿನ ಕ್ರಮವಾಗಿ ಸದ್ದಾಮ್ ಶಿಯಾಗಳ ಮಾರಣ ಹೋಮ ನಡೆಸಿದ್ದರು.ಸದ್ದಾಮ್ ಹುಸೇನ್ ಅವರು ಇರಾಕಿನ ಟಿಕ್ರಿತ್ ಬಳಿಯ ಪುಟ್ಟ ಅವ್ಜಾಹ್ ಗ್ರಾಮದಲ್ಲಿ 1937ರ ಏಪ್ರಿಲ್ 28ರಂದು ಜನಿಸಿದರು.  ಅವರು 1957ರಲ್ಲಿ ಬಾತ್ ಪಕ್ಷವನ್ನು ಸೇರಿದರು. 1968ರಲ್ಲಿ ದಂಗೆಯಲ್ಲಿ ಶಾಮೀಲಾದರು. ಈ ದಂಗೆಯಲ್ಲಿ ಬಾತ್ ಪಕ್ಷ ಅಧಿಕಾರಕ್ಕೆ ಬಂತು. 1969ರಲ್ಲಿ ಇರಾಕಿನ ಉಪಾಧ್ಯಕ್ಷರಾದರು. 1979ರಲ್ಲಿ ಇರಾಕಿನ ಅಧ್ಯಕ್ಷರಾದರು. 1980-1988ರ ಅವಧಿಯಲ್ಲಿ ಇರಾನಿನ ವಿರುದ್ಧ ಯುದ್ಧ ನಡೆಸಿದರು. 1990-1991ರಲ್ಲಿ ಕುವೈತ್ ಮೇಲೆ ದಾಳಿನಡೆಸಿ ಕೊಲ್ಲಿ ಸಮರಕ್ಕೆ ನಾಂದಿ ಹಾಡಿದರು.  ಅಮೆರಿಕದ ದಾಳಿಯ ಬಳಿಕ 2003ರ ವಸಂತ ಕಾಲದಲ್ಲಿ ಇರಾಕ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾದರು. 2003ರ ಡಿಸೆಂಬರ್ 13ರಂದು ಟಿಕ್ರಿತ್ ಸಮೀಪ ಅಮೆರಿಕ ಸೇನೆಗೆ ಕೈಸೆರೆಯಾದರು. 2004ರ ಜುಲೈ 1ರಂದು ಮಾನವೀಯತೆ ವಿರುದ್ಧದ 7 ಅಪರಾಧಗಳಿಗೆ ಸಂಬಂಧಿಸಿದಂತೆ ಅವರು  ಮತ್ತು ಸಹಚರರ ವಿರುದ್ಧ ದೋಷಾರೋಪ ಹೊರಿಸಲಾಯಿತು. 2005ರ ಅಕ್ಟೋಬರ್ 19ರಂದು ದುಜೈಲಿನಲ್ಲಿ 1982ರಲ್ಲಿ ನಡೆದ 148 ಶಿಯಾಗಳ ಹತ್ಯಾಕಾಂಡದ ವಿಚಾರಣೆ ಆರಂಭವಾಯಿತು. 2006ರ ಆಗಸ್ಟ್ 21ರಂದು 1987-1988ರ ಅರಾಫಲ್ ಕಾರ್ಯಾಚರಣೆ ಹಾಗೂ ಕುರ್ದರ ಜನಾಂಗಹತ್ಯೆ ಕುರಿತ ವಿಚಾರಣೆ ಆರಂಭವಾಯಿತು. 1979-2003ರ ತಮ್ಮ ಆಡಳಿತ ಅವಧಿಯಲ್ಲಿ ಸದ್ದಾಮ್ ಹುಸೇನ್ ನಡೆಸಿದ್ದರೆಂದು ಆಪಾದಿಸಲಾದ ಪ್ರಮುಖ ದೌರ್ಜನ್ಯಗಳ ವಿವರಗಳು: 1982- ಸದ್ದಾಮ್ ಹತ್ಯೆಯತ್ನದ ವಿರುದ್ಧ ಸೇಡಿನ ಕ್ರಮವಾಗಿ ದುಜೈಲಿನಲ್ಲಿ 148 ಶಿಯಾಗಳ ಹತ್ಯೆ. 1983 ಕುರ್ದಿಸ್ಥಾನದ ಬಲಾಢ್ಯ ಬರ್ಝಾನಿ ಜನಾಂಗದ 8000 ಸದಸ್ಯರಿಗೆ ಗಲ್ಲು. 1988 ಈಶಾನ್ಯ ಇರಾಕಿನ ಹಲಬ್ ಜಾದ್ಲದಲ್ಲಿ ಕುರ್ದರ ವಿರುದ್ಧ ರಾಸಾಯನಿಕ ಅಸ್ತ್ರಗಳ ಬಳಕೆ, 5000 ಕುರ್ದರ ಹತ್ಯೆ. 1991 ದಕ್ಷಿಣ ಇರಾಕಿನಲ್ಲಿ ಶಿಯಾಗಳ ವಿರುದ್ಧ ದಾಳಿ, 1000 ಸಾವು. 1987-1989 ಅನ್ ಫಲ್ ಅಭಿಯಾನ, ರಾಸಾಯನಿಕ ಅಸ್ತ್ರಗಳ ಬಳಕೆ, ಅಂದಾಜು 1,82,000 ಸಾವು, ಕುರ್ದರ ಸಾಮೂಹಿಕ ವಲಸೆ.

2006: ಅರುವತ್ತಮೂರು ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 600 ಜನರನ್ನು ಒಯ್ಯುತ್ತಿದ್ದ `ಸೇನಾಪತಿ' ಹೆಸರಿನ ನೌಕೆಯು ಡಿಸೆಂಬರ್ 29ರ ನಡುರಾತ್ರಿ ಕೇಂದ್ರ ಜಾವಾ ಕರಾವಳಿಯ ಸಮೀಪ ಸಮುದ್ರದಲ್ಲಿ ಮುಳುಗಿ, ನೂರಾರು ಮಂದಿ ಜಲಸಮಾಧಿಯಾಗಿರುವ ಭೀತಿ ಇದೆ ಎಂದು ಇಂಡೋನೇಷ್ಯಾದ ರೇಡಿಯೊ ವರದಿ ಮಾಡಿತು. ನೌಕಾ ಅಧಿಕಾರಿಗಳು ನೌಕೆಯಲ್ಲಿದ್ದ ಜನ 600 ಎಂದು ದೃಢಪಡಿಸಿದರು. ಕೇಂದ್ರ ಜಾವಾದ ಬೋರ್ನಿಯೋದ ಸುಮರಂಗ್ನಿಂದ ಕೇಂದ್ರ ಕಲಿಮಂತನ್ ಪ್ರಾಂತ್ಯದ ಕುಮಾಯಿ ಬಂದರಿಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿತು. ಈ ನೌಕೆಯ ಸಾಮರ್ಥ್ಯ 850. ಇಂಡೋನೇಷ್ಯಾದ 17,000 ದ್ವೀಪಗಳ ಮಧ್ಯೆ ಸಂಚಾರಕ್ಕೆ ಹಡಗುಗಳು ಮತ್ತು ತೆಪ್ಪಗಳು ಜನಪ್ರಿಯ ಸಾಧನಗಳಾಗಿದ್ದು, ವಿಮಾನಯಾನಕ್ಕಿಂತ ಅಗ್ಗ ಕೂಡಾ. ಆದರೆ ಹಡಗು, ತೆಪ್ಪಗಳನ್ನು ಬಳಸುವಾಗ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಬಿಗಿಯಾಗಿ ಅನುಸರಿಸದಿರುವುದೇ ದುರಂತಕ್ಕೆ ಕಾರಣ. 

2006: ವಿಜಯ ಕರ್ನಾಟಕ ಪತ್ರಿಕೆಯ ಓದುಗರ ವರ್ಷದ ಅಗ್ರಮಾನ್ಯ 10 ಸಾಧಕರ ಪಟ್ಟಿಯಲ್ಲಿ ಗೋವಿನ ಸಂರಕ್ಷಣೆಯ ಕುರಿತು ನಡೆಸಿದ ಅಭಿಯಾನಕ್ಕಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮೊದಲ ಸ್ಥಾನ ಅಲಂಕರಿಸಿದರು. ಶ್ರೀಗಳು ದೇಶೀಯ ಗೋ ತಳಿಗಳ ಸಂರಕ್ಷಣೆಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಲಚಲ, ಶ್ರೀಶ್ರೀ ರವಿಶಂಕರ ಗುರೂಜಿ, ಡಾ. ವೀರೇಂದ್ರ ಹೆಗ್ಗಡೆ, ಡಾ. ಜಿ.ಎಸ್. ಶಿವರುದ್ರಪ್ಪ, ರಾಹುಲ್ ದ್ರಾವಿಡ್, ನಿಸಾರ್ ಅಹಮದ್, ವಿಷ್ಣು ವರ್ಧನ್, ವಿ.ಕೆ. ಪಾಟೀಲ್ ಮತ್ತು ಸಿದ್ದರಾಮಯ್ಯ ಅಗ್ರಮಾನ್ಯ ಸಾಧಕರ ಪಟ್ಟಿಗೆ ಸೇರ್ಪಡೆಯಾದ ಇತರರು.

2006: ಹಿರಿಯ ಕನ್ನಡ ಚಲನಚಿತ್ರ ನಟ, ನಿರ್ದೇಶಕ ಪೇ.ಕೆ.ಟಿ. ಶಿವರಾಂ (92) ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಎಂಟು ಕನ್ನಡ ಚಿತ್ರಗಳನ್ನು ನಿರ್ದೇಶಿದ್ದ ಅವರು 85ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿನಟಿಸಿದ್ದರು.

2005: ವಿಶ್ವ ಖ್ಯಾತಿಯ `ಟೈಗರ್' ಕಾರ್ಟೂನ್ ಚಿತ್ರ ಸರಣಿಯ ಸೃಷ್ಟಿಕರ್ತ ಬಡ್ ಬ್ಲೇಕ್ (87) ಪೋರ್ಟ್ ಲ್ಯಾಂಡಿನಲ್ಲಿ ನಿಧನರಾದರು. ನ್ಯೂಯಾರ್ಕಿನ ಜಾಹೀರಾತು ಏಜೆನ್ಸಿಯೊಂದರಲ್ಲಿ ಉದ್ಯೋಗದಲ್ಲಿದ್ದ ಬ್ಲೇಕ್ 1965ರಲ್ಲಿ ಉದ್ಯೋಗ ತೊರೆದು 'ಟೈಗರ್' ಚಿತ್ರ ಸರಣಿ ರಚಿಸಲು ಆರಂಭಿಸಿದ್ದರು. 11 ರಾಷ್ಟ್ರಗಳ 120 ಪತ್ರಿಕೆಗಳಲ್ಲಿ 'ಟೈಗರ್' ಕಾರ್ಟೂನ್ ಸರಣಿ ಈಗಲೂ ಪ್ರಕಟಗೊಳ್ಳುತ್ತಿದೆ.

2005: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆಗೆ ಸಂಬಂಧ ಬಲಪಡಿಸಿಕೊಳ್ಳುವ ಸಂದೇಶದೊಂದಿಗೆ ಪ್ರಾರಂಭಗೊಂಡ ಭಾರತೀಯ ಜನತಾ ಪಕ್ಷದ ರಜತ ಮಹೋತ್ಸವ, ಆದರ್ಶವಾದ ಮತ್ತು ವಿಚಾರಧಾರೆಗಳ ಮೂಲಕ್ಕೆ ಮರಳುವ ನಿರ್ಧಾರದೊಂದಿಗೆ ಅಂತ್ಯಗೊಂಡಿತು.

1971: ಖ್ಯಾತ ಅಣುವಿಜ್ಞಾನಿ ವಿಕ್ರಮ್ ಅಂಬಾಲಾಲ್ ಸಾರಾಭಾಯಿ ನಿಧನರಾದರು.

1968: ನಾರ್ವೆಯ ರಾಜಕಾರಣಿ, ರಾಜತಾಂತ್ರಿಕ ಟ್ರೈಗ್ವೆ ಲೀ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. ಅವರು 1946-1952ರ ಅವಧಿಯಲ್ಲಿ ವಿಶ್ವಸಂಸ್ಥೆಯ ಮೊದಲ ಮಹಾಕಾರ್ಯದರ್ಶಿ (ಸೆಕ್ರೆಟರಿ ಜನರಲ್) ಆಗಿದ್ದರು.

1935: ಭಾರತದ ಚೆಸ್ ಆಟಗಾರ ಮ್ಯಾನ್ಯುಯೆಲ್ ಅರೋನ್ ಹುಟ್ಟಿದ ದಿನ. ಇವರು 1961ರಲ್ಲಿ ಭಾರತದ ಮೊತ್ತ ಮೊದಲ (ಹಾಗೂ ಏಷ್ಯಾದ ಎರಡನೇ) ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಹೆಗ್ಗಳಿಕೆಗೆ ಪಾತ್ರರಾದರು.

1930: ಸಾಹಿತಿ ಸುಲೋಚನಾ ದೇವಿ ಆರಾಧ್ಯ ಜನನ.

1922: ರಷ್ಯ, ಟ್ರಾನ್ಸ್ ಕಾಕೇಸಿಯನ್ ಸೋವಿಯತ್ ಫೆಡರೇಟೆಡ್ ರಿಪಬ್ಲಿಕ್ಸ್, ಉಕ್ರೇನ್ ಹಾಗೂ ಬೆಲೊರಷ್ಯನ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್ ಈ  ನಾಲ್ಕು ಗಣರಾಜ್ಯಗಳು ಒಟ್ಟಾಗಿ `ಸೋವಿಯತ್ ಒಕ್ಕೂಟ'ವನ್ನು (ಸೋವಿಯತ್ ಯೂನಿಯನ್) ಸ್ಥಾಪಿಸಿದವು. 

1906: ಭಾರತದ ಮುಸ್ಲಿಮರ ಹಕ್ಕುಗಳ ರಕ್ಷಣೆಗಾಗಿ ಆಲ್ ಇಂಡಿಯಾ ಮುಸ್ಲಿಂ ಲೀಗನ್ನು ಸ್ಥಾಪಿಸಲಾಯಿತು. ಢಾಕಾದ ನವಾಬ್ ಸಲೀಮುಲ್ಲಾ ಖಾನ್ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಮುಸ್ಲಿಂ ಲೀಗ್ ಹಿಂದು-ಮುಸ್ಲಿಮರ ಏಕತೆಗಾಗಿಯೇ ಕರೆ ನೀಡಿತ್ತು. 1940ರಲ್ಲಿ ಮಾತ್ರ ಅದು ಭಾರತದಿಂದ ಪ್ರತ್ಯೇಕವಾದ ಮುಸ್ಲಿಂ ರಾಷ್ಟ್ರದ ರಚನೆಗೆ ಕರೆ ನೀಡಿತು.

1902: ಡಾ. ರಘುವೀರ (1902-1963) ಹುಟ್ಟಿದ ದಿನ. ಅವರು ಭಾರತ, ಚೀನಾ, ಜಪಾನ್ ಮತ್ತಿತರ ಪೂರ್ವ ಏಷ್ಯಾದ ಭಾಷೆಗಳ ಅಧ್ಯಯನ ನಡೆಸಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಸಂಸ್ಕೃತ, ಹಿಂದಿ ವಿದ್ವಾಂಸರು. ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದರು.

1896: ಕನ್ನಡ ಸಾಹಿತ್ಯಕ್ಕೆ ಹಾಸ್ಯದ ಸ್ಪರ್ಶ ನೀಡಿದ ಪ್ರಮುಖರಲ್ಲಿ ಒಬ್ಬರಾದ ಪಡುಕೋಣೆ ರಮಾನಂದರಾಯ (30-12-1896ರಿಂದ  13-2-1983) ಅವರು ನರಸಿಂಗ ರಾಯ- ಚಂದ್ರಭಾಗಿ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋಣಯಲ್ಲಿ ಜನಿಸಿದರು.

 1887: ಭಾರತೀಯ ವಿದ್ಯಾಭವನದ ಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ, ವಕೀಲ ಕನ್ಹಯ್ಯಲಾಲ್ ಮಣೇಕ್ ಲಾಲ್ ಮುನ್ಶಿ `ಕೆ.ಎಂ. ಮುನ್ಶಿ' (1887-1971) ಅವರು ಹುಟ್ಟಿದ ದಿನ.

1879: ಭಾರತದ ಖ್ಯಾತ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ರಮಣ ಮಹರ್ಷಿ (1879-1950) ಅವರು ಹುಟ್ಟಿದ್ದು ಇದೇ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, December 29, 2008

The Saurus Crane..!

The Saurus Crane..!

The Saurus Cranes are considered as world's tallest flying birds. They mate for life and perhaps the best example of conjugal harmony and fidelity in nature.The Saurus Crane is a large, tall grey bird standing 1.5 to 1.78 m. with long bare red legs and naked red head during Genozic period (in the last 60 million years) writes, Mohan  Pai. (For full view of the article click below). 




ಇಂದಿನ ಇತಿಹಾಸ History Today ಡಿಸೆಂಬರ್ 29

ಇಂದಿನ ಇತಿಹಾಸ

ಡಿಸೆಂಬರ್ 29

ಹಿಮಾಚಲ ಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಅವರಿಗೆ ರಾಜ್ಯಪಾಲ ವಿ.ಎಸ್. ಕೊಕ್ಜೆ ಆಹ್ವಾನ ನೀಡಿದರು. ಅದಕ್ಕೆ ಮುನ್ನ ಬಿಜೆಪಿ  ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಬಿಜೆಪಿ ಶಾಸಕಾಂಗ ನಾಯಕರಾಗಿ ಆಯ್ಕೆಯಾದರು.

2007: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯು ರೂ 105 ರಷ್ಟು ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿತು. ದಿನದ ವಹಿವಾಟು ಅಂತ್ಯಗೊಂಡಾಗ ಪ್ರತಿ 10 ಗ್ರಾಂ ಚಿನ್ನದ ದರವು ರೂ 10715ಕ್ಕೆ ತಲುಪಿತು. ಈ ಹಿಂದೆ ನವೆಂಬರ್ 26, 2007ರಲ್ಲಿ ಪ್ರತಿ 10ಗ್ರಾಂ ಚಿನ್ನದ ಬೆಲೆಯು ರೂ 10695 ರಷ್ಟಾಗಿತ್ತು. ಉದ್ಯಮ ಬೇಡಿಕೆಗೆ ಸ್ಪಂದಿಸಿದ ಬೆಳ್ಳಿಯಲ್ಲೂ ಸಹ ದರ ಏರಿಕೆಯಾಗಿ, ಪ್ರತಿ ಕೆಜಿಗೆ ರೂ 19455ಕ್ಕೆ ತಲುಪಿತು.

2007: ಹಿಮಾಚಲ ಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಅವರಿಗೆ ರಾಜ್ಯಪಾಲ ವಿ.ಎಸ್. ಕೊಕ್ಜೆ ಆಹ್ವಾನ ನೀಡಿದರು. ಅದಕ್ಕೆ ಮುನ್ನ ಬಿಜೆಪಿ  ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಬಿಜೆಪಿ ಶಾಸಕಾಂಗ ನಾಯಕರಾಗಿ ಆಯ್ಕೆಯಾದರು.

2007: ಉತ್ತರ ಪ್ರದೇಶದ ಮೂರು ನ್ಯಾಯಾಲಯಗಳಲ್ಲ್ಲಿ ನವೆಂಬರ್ 23ರಂದು ಸರಣಿ ಬಾಂಬ್ ಸ್ಫೋಟಿಸಿದ ಶಂಕಿತ ಹೂಜಿ ಉಗ್ರನೊಬ್ಬನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು. ಮುಖ್ತರ್ ಆಲಿಯಾಸ್ ರಾಜು ಬಂಧಿತ ಉಗ್ರ. ಈತ ವಾರಣಾಸಿ ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆದ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಮೃತರಾಗಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

2007: ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಆಡಮ್ ಗಿಲ್ ಕ್ರಿಸ್ಟ್ ಅವರು ಮೆಲ್ಬೋರ್ನಿನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನೂತನ ವಿಕ್ರಮ ಸಾಧಿಸಿದರು. ಗಿಲ್ ಕ್ರಿಸ್ಟ್ ಅವರು ಅತಿ ಹೆಚ್ಚು ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾದರು. ಅವರು ಇಯಾನ್ ಹೀಲಿ (395) ಅವರ ದಾಖಲೆಯನ್ನು ಅಳಿಸಿ ಹಾಕಿದರು. ಪಂದ್ಯದ ನಾಲ್ಕನೇ ದಿನ ಬ್ರೆಟ್ ಲೀ ಬೌಲಿಂಗಿನಲ್ಲಿ ವಾಸೀಂ ಜಾಫರ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಗಿಲಿ ಈ ಗೌರವ ಪಡೆದರು. ಅವರು ಈ ಪಂದ್ಯದಲ್ಲಿ ಒಟ್ಟು ಎಂಟು ಕ್ಯಾಚ್ ಪಡೆದರು. ಇದರೊಂದಿಗೆ ಅವರು ಒಟ್ಟು ಬಾರಿ 399 ಮಂದಿ ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದರು. ಗಿಲಿ ಆಡಿರುವ ಟೆಸ್ಟ್ ಸಂಖ್ಯೆ 93. ಈ ವಿಭಾಗದಲ್ಲಿ ವಿಶ್ವ ದಾಖಲೆಯು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಅವರ ಹೆಸರಿನಲ್ಲಿ ಇದೆ. ಅವರು ಒಟ್ಟು 406 ಸಲ ಬ್ಯಾಟ್ಸ್ ಮನ್ನರು  ಔಟ್ ಆಗಲು ಕಾರಣರಾಗಿದ್ದರು.

2007: ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ವಿಜಯಾ ಬ್ಯಾಂಕಿನ 1000ನೇ ಶಾಖೆಯನ್ನು,  ಬನ್ನೇರುಘಟ್ಟ ರಸ್ತೆಯ ಮುಲ್ಕಿ ಸುಂದರ ರಾಮಶೆಟ್ಟಿ ನಗರದಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಉದ್ಘಾಟಿಸಿದರು.

 2007: ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಬಿಡಿಸಲಾರದ ಬಂಧ ಇರುವುದನ್ನು ಸಂಕೇತಿಸುವ ಹೊಸ ಬ್ರ್ಯಾಂಡ್ ಲಾಂಛನದೊಂದಿಗೆ ಕೆನರಾ ಬ್ಯಾಂಕ್ ಕಂಗೊಳಿಸಿತು. ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಹೊಸ ಲಾಂಛನವನ್ನು ಅನಾವರಣಗೊಳಿಸಿದರು.

2007: ಹೊಸಪೇಟೆಯ ಬಿ.ಎಸ್. ಆನಂದ್ ಸಿಂಗ್ ಮತ್ತು ಕುಟುಂಬದವರು  ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮರಿಯಾನೆ `ಯಶಸ್ವಿ'ಯನ್ನು ಕೊಡುಗೆಯಾಗಿ ನೀಡಿದರು. ಧಾರ್ಮಿಕ ವಿಧಿವಿಧಾನ ಹಾಗೂ ದಾಖಲೆ ಹಸ್ತಾಂತರಿಸುವ ಮೂಲಕ ಯಶಸ್ವಿಯನ್ನು ವಿಧ್ಯುಕ್ತವಾಗಿ ದೇವಳಕ್ಕೆ ಅರ್ಪಿಸಲಾಯಿತು.

2007: ಮೈಸೂರಿನ ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ದೇಜಗೌ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ವಿಮರ್ಶಕ ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ ಅವರಿಗೆ `ವಿಶ್ವಮಾನವ ಪ್ರಶಸ್ತಿ', ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರಿಗೆ `ಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ' ಮತ್ತು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ `ಸಾವಿತ್ರಮ್ಮ ದೇಜಗೌ ಪ್ರಶಸ್ತಿ'ಯನ್ನು ಲೋಕಸಭಾ ಸದಸ್ಯ ಎಸ್. ಬಂಗಾರಪ್ಪ ಅವರು ಪ್ರದಾನ ಮಾಡಿದರು.

2007: ದಕ್ಷಿಣ ಏಷ್ಯಾದಲ್ಲಿಯೇ ಮೊತ್ತ ಮೊದಲನೆಯದಾದ, 60 ಸಾವಿರ ಟನ್ನುಗಳಷ್ಟು ದ್ರವರೂಪದ ಪೆಟ್ರೋಲಿಯಂ ಅನಿಲ (ಎಲ್ ಪಿ ಜಿ) ಸಂಗ್ರಹಿಸುವ ವಿಶಿಷ್ಟ ಸುರಕ್ಷಿತ ನೆಲದಾಳದ ಸುರಂಗ ಕಳೆದ ವಾರ ವಿಶಾಕಪಟ್ಟಣದಲ್ಲಿ ಕಾರ್ಯಾರಂಭ ಮಾಡಿತು ಎಂದು ವರುಣ್ ಶಿಪ್ಪಿಂಗ್ ಸಂಸ್ಥೆ ಪ್ರಕಟಿಸಿತು. ಈ ಸಂಸ್ಥೆಗೆ ಸೇರಿರುವ 40 ಸಾವಿರ  ಮೆಟ್ರಿಕ್ ಟನ್ನುಗಳಷ್ಟು ಎಲ್ ಪಿ ಜಿ ಸಾಗಿಸುವ ಮಹರ್ಷಿ ಭಾರದ್ವಾಜ್ ನೌಕೆಯಿಂದ 39,200 ಮೆಟ್ರಿಕ್ ಟನ್ನುಗಳಷ್ಟು ದ್ರವರೂಪದ ಪೆಟ್ರೋಲಿಯಂ ಅನಿಲವನ್ನು ಮೊದಲ ಬಾರಿಗೆ ಈ ಸುರಂಗದಲ್ಲಿ ತುಂಬಲಾಯಿತು ಎಂದು ಸಂಸ್ಥೆ ಹೇಳಿತು. ಇಷ್ಟು ಭಾರಿ ಪ್ರಮಾಣದ ಎಲ್ ಪಿ ಜಿ ಹೊತ್ತ ನೌಕೆಯು ದೇಶಕ್ಕೆ ಆಗಮಿಸಿದ್ದು ಕೂಡಾ ಕೂಡ ಇದೇ ಮೊದಲು. ಫ್ರಾನ್ಸಿನ ತೈಲ ದೈತ್ಯ ಸಂಸ್ಥೆ ಟೋಟಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (ಎಚ್ ಪಿ ಸಿ ಎಲ್) ಸಹಯೋಗದ ದಕ್ಷಿಣ ಏಷ್ಯಾ ಎಲ್ ಪಿ ಜಿ ಕಂಪೆನಿಯು ಈ ಸುರಂಗವನ್ನು  ಕೊರೆಯಿತು. ಸಮುದ್ರ ಪಾತಳಿಯಿಂದ 162 ಮೀಟರ್ ಆಳದಲ್ಲಿ ಗಟ್ಟಿ ಬಂಡೆ ಕೊರೆದು ಈ ಸುರಂಗ ನಿರ್ಮಿಸಲಾಯಿತು. ನೈಸರ್ಗಿಕ ಪ್ರಕೋಪ, ವಿಧ್ವಂಸಕ ಕೃತ್ಯ ಮತ್ತು ವೈಮಾನಿಕ ಬಾಂಬ್ ದಾಳಿಯಿಂದಲೂ ಸುರಕ್ಷಿತವಾಗಿರುವಂತೆ ಈ ಸುರಂಗ ನಿರ್ಮಿಸಲಾಗಿದ್ದು, ಇದು ಬೆಂಕಿ ನಿರೋಧಕ ಮತ್ತು ಸೋರಿಕೆ ಮುಕ್ತವಾಗಿದೆ. ವಿಶಾಖಪಟ್ಟಣ ಬಳಿಯ ಲೋವಾ ಗಾರ್ಡನ್ ಎಂಬಲ್ಲಿ ಈ ವಿಶಿಷ್ಟ ಸುರಂಗವು 333 ಕೋಟಿ ರೂ. ವೆಚ್ಚದಲ್ಲಿ ಅಸ್ತಿತ್ವಕ್ಕೆ ಬಂದಿದೆ.

2006: ಕ್ಯಾನ್ಸರ್ ಕುರಿತು ನಡೆಸಿದ ಸಂಶೋಧನೆಗಾಗಿ ಭಾರತೀಯ ಸಂಜಾತ ವಿಜ್ಞಾನಿ ಶಿಲಾದಿತ್ಯ ಸೇನ್ ಗುಪ್ತ ಅವರು ಅಮೆರಿಕದ 41 ಡಾಲರ್ ಮೌಲ್ಯದ `ಇರಾ ಆಫ್ ಹೋಪ್ ಸ್ಕಾಲರ್ ಅವಾರ್ಡ್' ಗೆ ಪಾತ್ರರಾದರು. ಹಾರ್ವರ್ಡ್ ಎಂಐಟಿಯಲ್ಲಿ ವೈದ್ಯಕೀಯ ವಿಭಾಗ ಸಹಾಯಕ ಪ್ರೊಫೆಸರ್ ಆಗಿರುವ ಸೇನ್ ಗುಪ್ತ ಅವರು `ಸ್ತನದ ಕ್ಯಾನ್ಸರ್' ಬಗ್ಗೆ ನಡೆಸಿದ ಸಂಶೋಧನೆಗಾಗಿ ಈ ಪ್ರಶಸ್ತಿಗೆ ಪಾತ್ರರಾದರು.

2006: ವಿಶ್ವಮಾನವ ಸಂಸ್ಥೆಯು ನೀಡುವ ಪ್ರತಿಷ್ಠಿತ `ವಿಶ್ವ ಮಾನವ' ಪ್ರಶಸ್ತಿಯನ್ನು ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು..

2006:  ಕರ್ನಾಟಕದ ಖ್ಯಾತ ರಂಗಕರ್ಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್. ನಾಗೇಶ್ ಹಾಗೂ ಭರತನಾಟ್ಯ ಕಲಾವಿದೆ ಎಸ್. ನರ್ಮದಾ ಅವರು ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದರು. ಇದರ ಜತೆಗೆ ತಬಲಾ ವಾದಕ ಕಿಶನ್ ಮಹಾರಾಜ್, ಪಿಟೀಲು ವಿದ್ವಾನ್ ಟಿ.ಎನ್. ಕೃಷ್ಣನ್, ಕಥಕ್ ನರ್ತಕಿ ರೋಹಿಣಿ ಭಾತೆ, ಖ್ಯಾತ ರಂಗಕರ್ಮಿ ಗುರುಶರಣ್ ಸಿಂಗ್ ಅವರನ್ನು `ಅಕಾಡೆಮಿ ರತ್ನ' (ಫೆಲೋ) ಆಗಿ ಆಯ್ಕೆ ಮಾಡಲಾಯಿತು. ಸಂಗೀತ ವಿಭಾಗದಲ್ಲಿ ತಬಲಾ ವಾದಕ ಕುಮಾರ್ ಬೋಸ್, ಹಿಂದೂಸ್ಥಾನಿ ಗಾಯಕ ರಶೀದ್ ಖಾನ್, ಸಿತಾರ್ ವಾದಕ ಶಾಹಿದ್ ಪರ್ವೇಜ್ ಖಾನ್, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ಡಿ. ಪಶುಪತಿ ಹಾಗೂ ಚೆಂಗಲ್ ಪಟ್ಟು ರಂಗನಾಥನ್, ಕರ್ನಾಟಕ ಶೈಲಿಯ ಚಿತ್ರವೀಣಾ ವಾದಕ ಎನ್. ರವಿಕಿರಣ್, ಮೃದಂಗ ಪಟು ತಿರುವಾರೂರು ಭಕ್ತವತ್ಸಲಂ ಅವರು ಪ್ರಶಸ್ತಿಗೆ ಪಾತ್ರರಾದರು. ನೃತ್ಯ ವಿಭಾಗದಲ್ಲಿ ಕೊಟ್ಟಕ್ಕಲ್ ಚಂದ್ರಶೇಖರನ್ (ಕಥಕ್ಕಳಿ), ಕಲಾ ಮಂಡಲಂ ವಿಮಲಾ ಮೆನನ್ (ಮೋಹಿನಿಯಾಟ್ಟಂ), ಮತ್ತು ಪಶುಮರ್ತಿ ರಟ್ಟಯ್ಯ (ಕೂಚುಪುಡಿ), ನಾಟಕ ವಿಭಾಗದಲ್ಲಿ ಇ. ಜಯಚಂದ್ರ ಸಿಂಗ್ (ನಿರ್ದೇಶನ) ಮತ್ತು ತಮಿಳುನಾಡಿನ ಕೆ. ಅರ್ವಾಮುದ ಚಾರಿಯರ್ (ಹರಿಕಥೆ) ಈ ಗೌರವಕ್ಕೆ ಪಾತ್ರರಾದರು.

2006:  ಸತೀಶ್ ಅಲಿಯಾಸ್ ಸುರೇಂದ್ರ ಎಂಬ ಸರಣಿ ಹಂತಕನೊಬ್ಬನನ್ನು ಉತ್ತರ ಪ್ರದೇಶದ ನೋಯಿಡಾ  ಪೊಲೀಸರು ಬಂಧಿಸಿ, ಆತ ಕೊಲೆ ಮಾಡಿ ನಾಲೆಯಲ್ಲಿ ಬಿಸಾಡಿದ್ದ ಶವಗಳ ಅಸ್ಥಿ ಪಂಜರಗಳನ್ನು ವಶಪಡಿಸಿಕೊಂಡರು. ಪಾಯಲ್ ಎಂಬ ಬಾಲಕಿಯ ಅಪಹರಣ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿದ್ದಾಗ ಈ ಸರಣಿ ಹಂತಕ ಸಿಕ್ಕಿಬಿದ್ದ. ನೋಯಿಡಾ ಸಮೀಪದ ನಿತಾರಿ ಎಂಬ ಗ್ರಾಮದಲ್ಲಿ ಪೊಲೀಸರು ಈತನನ್ನು ಬಂಧಿಸಿದರು.  ತಾನು ಈವರೆಗೆ ಆರು ಮಕ್ಕಳನ್ನು ಕೊಲೆ ಮಾಡಿರುವುದಲ್ಲದೆ  ಪಾಯಲಳನ್ನು ಕೂಡ ತಾನೇ ಅಪಹರಿಸಿ, ನಂತರ ಕೊಲೆ ಮಾಡಿದ್ದಾಗಿ ವಿಚಾರಣೆ ಸಮಯದಲ್ಲಿ ಆತ ಒಪ್ಪಿಕೊಂಡ. `ಸಿಹಿ ಮತ್ತು ಚಾಕಲೇಟುಗಳನ್ನು ತೋರಿಸಿ, ಮಕ್ಕಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದೆ. ನಂತರ ಈ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರನ್ನು ಕೊಂದು ಹಾಕಿ ಶವಗಳನ್ನು ನಾಲೆಗೆ ಎಸೆಯುತ್ತಿದ್ದೆೆ' ಎಂದು ಸುರೇಂದ್ರ ತಾನು ಅನುಸರಿಸುತ್ತಿದ್ದ ತಂತ್ರವನ್ನು ವಿವರಿಸಿದ. ಹಂತಕನು ಮೂಲತಃ ಉತ್ತರಾಂಚಲದ ಅಲ್ಮೋರಾದವನು. ಒಂದೂವರೆ ವರ್ಷದಿಂದ ಈಚೆಗೆ ಈ ಪರಿಸರದಿಂದ 38 ಮಕ್ಕಳು ಕಾಣೆಯಾಗಿದ್ದರು.

2006: ಮೈಸೂರು ವಿಶ್ವವಿದ್ಯಾಲಯವು ಹೊರತಂದಿರುವ ಇಂಗ್ಲಿಷ್-ಕನ್ನಡ ನಿಘಂಟನ್ನು ವೆಬ್ ಸೈಟಿನಲ್ಲಿ ಹಾಕಲು ವಿಶ್ವ ವಿದ್ಯಾಲಯವು ನಿರ್ಧರಿಸಿತು.

2006: ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಭಾರತೀಯ ಸಂಜಾತ ನ್ಯೂಜೆರ್ಸಿಯ ಸಾರಿಗೆ ಆಯುಕ್ತ ಕ್ರಿಸ್ ಕೊಲ್ಲೂರಿ (38) ಅವರು ಅಮೆರಿಕದ ನ್ಯೂಜೆರ್ಸಿ ಪ್ರಾಂತ್ಯದ ರಾಜ್ಯಪಾಲರಾಗಿ (ಗವರ್ನರ್) ಒಂದು ದಿನದ ಮಟ್ಟಿಗೆ ಕಾರ್ಯ ನಿರ್ವಹಿಸಿದರು. ರಾಜ್ಯಪಾಲ ಜಾನ್ ಕೊರಿಜಿನ್ ಹಾಗೂ ಅವರ ನಂತರದ ಅಧಿಕಾರಿಗಳಾದ ಸೆನೆಟ್ ಅಧ್ಯಕ್ಷ ರಿಚರ್ಡ್ ಕೊಡೇ ಮತ್ತು ಸ್ಪೀಕರ್ ಹೋಯಿ ರಾಬರ್ಟ್ ರಜೆಯ ಮೇಲೆ ತೆರಳಿದ್ದರಿಂದ ಕೊಲ್ಲೂರಿ `ಏಕ್ ದಿನ್ ಕಾ ಸುಲ್ತಾನ್' ಆಗಬೇಕಾಯಿತು.

 2005: ಅಂತಾರಾಷ್ಟ್ರೀಯ ಬೆಳಕು ತಜ್ಞ ವಿ.ರಾಮಮೂರ್ತಿ ಅವರಿಗೆ ರಾಷ್ಟ್ರೀಯ ನಾಟಕ ಶಾಲೆಯ ಡಾ. ಬಿ.ವಿ. ಕಾರಂತ ಪ್ರಶಸ್ತಿ ಲಭಿಸಿತು. ರಾಮಮೂರ್ತಿ ಅವರು 40 ವರ್ಷಗಳಿಂದ ರಂಗಭೂಮಿಯಲ್ಲಿ ಶ್ರೇಷ್ಠ ಬೆಳಕು ತಜ್ಞ ಹಾಗೂ ನಟರಾಗಿ ದುಡಿದವರು.

2005: ಮುಂಬೈಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ (ಟಿ ಐ ಎಫ್ ಆರ್ ಯು) ಪ್ರೊ. ಆರ್. ಪರಿಮಳ ಅವರಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ವಿಜ್ಞಾನ ಅಕಾಡೆಮಿ `ತ್ವಾಸ್' ನೀಡುವ ಪ್ರಸಕ್ತ ವರ್ಷದ ಪ್ರಶಸ್ತಿ ಲಭಿಸಿತು. ಇದರೊಂದಿಗೆ `ತ್ವಾಸ್' ನೀಡುವ ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದಾಯಿತು. ಗಣಿತ ಮತ್ತು ಭೌತಶಾಸ್ತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ ಈ ಪ್ರಶಸ್ತಿಯು 10,000 ಅಮೆರಿಕನ್ ಡಾಲರ್ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. 

2005: ಅಪರಾಧ ವರದಿಗಾರಿಕೆಯಲ್ಲಿ ವಿಶೇಷ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ಕರಣಂ ರಾಜಾರಾವ್ (70) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಂತಪುರ ಜಿಲ್ಲೆ ಮಡಕಶಿರಾ ಬಳಿಯ ಫಳಾರಂನಲ್ಲಿ ಜನಿಸಿದ್ದ ರಾಜಾರಾವ್ ಪತ್ರಿಕಾರಂಗದಲ್ಲಿ 'ಕ್ರೈಂ ರಾಜಾರಾವ್' ಎಂದೇ ಹೆಸರು ಪಡೆದಿದ್ದರು. 'ಸಂಯುಕ್ತ ಕರ್ನಾಟಕ' ಪತ್ರಿಕೆ ಮೂಲಕ 1962ರಲ್ಲಿ ಪತ್ರಿಕಾರಂಗಕ್ಕೆ ಕಾಲಿಟ್ಟ ರಾಜಾರಾವ್ 'ವಾಯ್ಸ್ ಆಫ್ ಡೆಕ್ಕನ್', 'ಮುಂಜಾನೆ', 'ಸಂಜೆ ನುಡಿ', 'ಇಂದು' ಪತ್ರಿಕೆಗಳಲ್ಲಿ ಹಾಗೂ ಸಿಟಿ ಕೇಬಲ್ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದರು.

2005: ನವದೆಹಲಿಯಲ್ಲಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ಗಲಭೆಗಳ ಸಂತ್ರಸ್ತರಿಗೆ ಹೆಚ್ಚುವರಿ ಎಕ್ಸ್ ಗ್ರೇಷಿಯಾ ಸೇರಿದಂತೆ ಪರಿಹಾರ ಧನ ಮತ್ತು ಪುನರ್ ವಸತಿಗೆ 715 ಕೋಟಿ ರೂಪಾಯಿಗಳ ನೆರವನ್ನು ಕೇಂದ್ರ ಸರ್ಕಾರವು ಘೋಷಿಸಿತು.

1997: ನಿಗೂಢ `ಕೋಳಿಜ್ವರ' ತಡೆಯುವ ಸಲುವಾಗಿ ಹಾಂಗ್ ಕಾಂಗ್ 14 ಲಕ್ಷ ಕೋಳಿಗಳನ್ನು ಕೊಲ್ಲುವ ಕಾರ್ಯ ಆರಂಭಿಸಿತು. `ಕೋಳಿ ಜ್ವರ' ಇಲ್ಲಿ ನಾಲ್ಕು ಮಂದಿಯನ್ನು ಬಲಿತೆಗೆದುಕೊಂಡಿತ್ತು.

1986: ಮಾಜಿ ಬ್ರಿಟಿಷ್ ಪ್ರಧಾನಿ ಹರೋಲ್ಡ್ ಮ್ಯಾಕ್ ಮಿಲನ್ ತಮ್ಮ 92ನೇ ವಯಸ್ಸಿನಲ್ಲಿ ಇಂಗ್ಲೆಂಡಿನ ಸಸೆಕ್ನಲ್ಲಿ ನಿಧನರಾದರು.

1972: `ಲೈಫ್' ಮ್ಯಾಗಜಿನ್ 36 ವರ್ಷಗಳ ಪ್ರಕಟಣೆಯ ಬಳಿಕ ಮುಚ್ಚಿತು.

1944: `ಇಂಡಿಯಾ ಟುಡೆ' ಮ್ಯಾಗಜಿನ್ ಸ್ಥಾಪಕ ಅರುಣ್ ಪುರೀ ಹುಟ್ಟಿದ ದಿನ.

1942: ಚಿತ್ರನಟ ರಾಜೇಶ್ ಖನ್ನಾ ಹುಟ್ಟಿದ ದಿನ. (ಅವರ ಪುತ್ರಿ ಟ್ವಿಂಕಲ್ ಹುಟ್ಟಿದ್ದು ಕೂಡಾ ಇದೇ ತಾರೀಕಿನಂದು!)

1939: ಖ್ಯಾತ ಗಾಯಕ ಸಿ. ಅಶ್ವತ್ಥ್ ಜನನ.

1904: ರಾಷ್ಟ್ರಕವಿ ಕುವೆಂಪು (ಕೆ.ವಿ. ಪುಟ್ಟಪ್ಪ) (29-12-1904ರಿಂದ 10-11-1994)  ಅವರು ವೆಂಕಟಪ್ಪ- ಹೇಮಾವತಮ್ಮ ದಂಪತಿಯ ಮಗನಾಗಿ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು.

1899: ಸಾಹಿತಿ ಡಿ.ಕೆ. ಭಾರದ್ವಾಜ್ ಜನನ.

1896: ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಜನನ.

1895: ಲೆಫ್ಟಿನೆಂಟ್ ಆರ್ಕಿಬಾಲ್ಡ್ ಬ್ಲೇರ್ ಮತ್ತು ಲೆಫ್ಟಿನೆಂಟ್ ಆರ್. ಎಚ್. ಕೊಲ್ ಬ್ರೂಕ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಧ್ಯಯನಕ್ಕಾಗಿ ಭಾರತದಿಂದ ಹೊರಟರು. ಬ್ಲೇರ್ ಗೌರವಾರ್ಥ ಒಂದು ದ್ವೀಪಕ್ಕೆ `ಪೋರ್ಟ್ ಬ್ಲೇರ್' ಹೆಸರನ್ನು ಇಡಲಾಯಿತು. 

1844: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊತ್ತ ಮೊದಲ ಅಧ್ಯಕ್ಷ ವುಮೇಶ್ ಚಂದ್ರ ಬ್ಯಾನರ್ಜಿ 1844-1906) ಹುಟ್ಟಿದ ದಿನ.

1809: ವಿಲಿಯಂ ಎವರ್ಟ್ ಗ್ಲಾಡ್ ಸ್ಟೋನ್ (1809-1898) ಹುಟ್ಟಿದ ದಿನ. ಬ್ರಿಟಿಷ್ ರಾಜಕಾರಣಿಯಾದ ಇವರು ನಾಲ್ಕು ಬಾರಿ ಗ್ರೇಟ್ ಬ್ರಿಟನ್ನಿನ ಪ್ರಧಾನಿಯಾಗಿದ್ದರು.

1808: ಅಮೆರಿಕಾದ 17ನೇ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ (1808-1875) ಹುಟ್ಟಿದ ದಿನ. ದೋಷಾರೋಪಕ್ಕೆ ಗುರಿಯಾದ ಮೊತ್ತ ಮೊದಲ ಅಮೆರಿಕನ್ ಅಧ್ಯಕ್ಷರು ಇವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, December 28, 2008

ಇಂದಿನ ಇತಿಹಾಸ History Today ಡಿಸೆಂಬರ್ 28

ಇಂದಿನ ಇತಿಹಾಸ

ಡಿಸೆಂಬರ್ 28

 ನೇಪಾಳದ ದೊರೆ ಬೀರೇಂದ್ರ ಬೀರ ಬಿಕ್ರಮ್ ಶಾ ದೇವ್ (1945-2001) ಹುಟ್ಟಿದ ದಿನ. ಇವರನ್ನು ಪತ್ನಿ ಸೇರಿದಂತೆ ಇಡೀ ಕುಟುಂಬ ಸಹಿತವಾಗಿ ಪುತ್ರ ದೀಪೇಂದ್ರ ಗುಂಡಿಟ್ಟು ಕೊಲೆಗೈದ. 1972ರಿಂದ 2001ರವರೆಗೆ ಇವರು ನೇಪಾಳದ ದೊರೆಯಾಗಿ ಆಡಳಿತ ನಡೆಸಿದ್ದರು.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಹಿನ್ನೆಲೆಯಲ್ಲಿ ದೇಶದಾದ್ಯತಂತ ಸಂಭವಿಸಿದ ಹಿಂಸಾಚಾರಗಳಿಗೆ 34 ಜನ ಬಲಿಯಾದರು. ಹಿಂಸಾಚಾರ ಹತ್ತಿಕ್ಕಲು ಸರ್ಕಾರ ಕಂಡಲ್ಲಿ ಗುಂಡಿಕ್ಕಲು ಆದೇಶಿಸಿತು. ಈ ಮಧ್ಯೆ ಬೆನಜೀರ್ ಹತ್ಯೆಗೆ ಅಲ್ ಖೈದಾ ಕಾರಣ ಎಂದು ಪಾಕ್ ಸರ್ಕಾರ ಹೇಳಿತು. ಬೆನಜೀರ್ ಗುಂಡೇಟಿನಿಂದ ಸತ್ತಿಲ್ಲ, ಬಾಂಬ್ ಸ್ಫೋಟದಿಂದ ಕಾರಿನ ಛಾವಣಿ ಬಡಿದು ಮೃತರಾಗಿದ್ದಾರೆ ಎಂದು ಆಂತರಿಕ ಭದ್ರತಾ ಸಚಿವಾಲಯದ ವಕ್ತಾರ ಜಾವೆದ್ ಇಕ್ಬಾಲ್ ಚೀಮಾ ಸ್ಪಷ್ಟ ಪಡಿಸಿದರು. ಬೆನಜೀರ್ ಹತ್ಯೆಗೆ ಸ್ವಲ್ಪ ಹೊತ್ತಿನ ಮೊದಲಿನ ಚಿತ್ರಗಳನ್ನು ಒಳಗೊಂಡ ವಿಡಿಯೋ ಚಿತ್ರವನ್ನೂ ಸರ್ಕಾರ ಬಿಡುಗಡೆ ಮಾಡಿತು. ಇದರಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದಿರುವುದು ಸ್ಪಷ್ಟವಾಗಿ ಕಾಣಿಸಿತು.

2007: ಬಿಜೆಪಿ ಯಶೋಗಾಥೆ ಮುಂದುವರೆಯಿತು. ಪಂಜಾಬ್, ಉತ್ತರಖಂಡ, ಗುಜರಾತ್ ನಂತರ ಈಗ ಹಿಮಾಚಲ ಪ್ರದೇಶದಲ್ಲೂ ಅದು ತನ್ನ ವಿಜಯ ಪತಾಕೆಯನ್ನು ಹಾರಿಸಿತು. ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳ ಪೈಕಿ 41 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆಯಿತು. 2003ರ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಉತ್ತಮ ಸಾಧನೆ ತೋರಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಶಕ್ತಿ ಬಿಜೆಪಿಗೆ ಬಂತು. ಇದಕ್ಕೂ ಮೊದಲು 1990ರ ಚುನಾವಣೆಯಲ್ಲಿ ಜನತಾ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿದಿತ್ತು. ಬಿಜೆಪಿಗೆ ತೀವ್ರ ಸ್ಪರ್ಧೆ ನೀಡಿದ್ದ ಕಾಂಗ್ರೆಸ್ ಕೇವಲ 23 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ಸಿಗೆ 18 ಸ್ಥಾನಗಳ ಖೋತಾ ಆಯಿತು. ಈ ಮೂಲಕ ಪಕ್ಷದ 123ನೇ ಸಂಸ್ಥಾಪನಾ ದಿನವಾದ ಈ ದಿನವೇ ಪಕ್ಷಕ್ಕೆ ದೊಡ್ಡ ಬರಸಿಡಿಲು ಹೊಡೆದಂತಾಯಿತು.

2007: ಕಂದಮಲ್ನಲ್ಲಿ ಸಂಭವಿಸಿದ ಕೋಮು ಗಲಭೆಯ ಹೊಣೆ ಹೊತ್ತು ರಾಜ್ಯದ ಉಕ್ಕು ಹಾಗೂ ಗಣಿ ಸಚಿವ ಪದ್ಮನಾಭ್ ಬೆಹೆರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಾವು ಪ್ರತಿನಿಧಿಸುವ ಫೂಲ್ ಬನಿ ಮತಕ್ಷೇತ್ರದಡಿ ಬರುವ ಕಂದಮಲ್ನಲ್ಲಿ ನಡೆದ ಈ ಕೋಮು ಗಲಭೆಯ ನೈತಿಕ ಹೊಣೆಯನ್ನು ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬೆಹೆರ್ ಹೇಳಿದರು.

2007: ನಾಡಿನ ಸಜ್ಜನ ಸಾಹಿತಿ, ಸೃಜನಶೀಲ ಮನಸ್ಸಿನ ಸಹೃದಯಿ, ಸಾಹಿತ್ಯದ ಪರಿಚಾರಕ  ಚಿ. ಶ್ರೀನಿವಾಸರಾಜು ಈದಿನ ಮುಂಜಾನೆ ತೀರ್ಥಹಳ್ಳಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಶ್ರೀನಿವಾಸರಾಜು ಅವರ ಇಚ್ಛೆಯಂತೆ ಅವರ ದೇಹವನ್ನು ಬೆಂಗಳೂರಿನಲ್ಲಿ ಸಂಜೆ ಎಂ. ಎಸ್. ರಾಮಯ್ಯ ವೈದ್ಯ ಕೀಯ ಕಾಲೇಜಿಗೆ ದಾನವಾಗಿ ನೀಡಲಾ ಯಿತು. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಏರ್ಪಾಡಾಗಿದ್ದ ಮೂರು ದಿನಗಳ `ಕುವೆಂಪು-ಬೇಂದ್ರೆ ಸಾಹಿತ್ಯ ಅಧ್ಯಯನ ಶಿಬಿರ'ದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬಂದು ಬೆಳಿಗ್ಗೆ 7ಗಂಟೆಗೆ ತೀರ್ಥಹಳ್ಳಿಯಲ್ಲಿ ಇಳಿದ ನಂತರ ಶ್ರೀನಿವಾಸರಾಜು ತೀವ್ರ ಹೃದಯಾಘಾತಕ್ಕೆ ಒಳಗಾದರು. ತತ್ ಕ್ಷಣ ಸ್ಥಳೀಯರು ಇವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಕುವೆಂಪು ನಾಡು ಕುಪ್ಪಳ್ಳಿಯಲ್ಲಿ `ನಾಡು ನುಡಿ ಚಿಂತನೆ` ಎಂಬ ಗೋಷ್ಠಿಯೊಂದರ ಅಧ್ಯಕ್ಷತೆಯನ್ನು ವಹಿಸಿ, ಪ್ರಬಂಧವೊಂದನ್ನು ಅವರು ಮಂಡಿಸಬೇಕಿತ್ತು. ಅದರೆ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.

2007: ರಾವಲ್ಪಿಂಡಿಯಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಪಾಕಿಸ್ಥಾನದ ಮಾಜಿ ಪ್ರಧಾನಿ ಹಾಗೂ  ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೊ ಅಂತ್ಯಕ್ರಿಯೆ ಅವರ ಪೂರ್ವಜರ ಗ್ರಾಮವಾದ ಗರಿ ಖುದಾ ಬಕ್ಷದಲ್ಲಿ ತಂದೆ ಜುಲ್ಫಿಕರ್ ಅಲಿ ಭುಟ್ಟೊ ಸಮಾಧಿಯ ಪಕ್ಕದಲ್ಲಿ ಸಾವಿರಾರು ಮಂದಿಯ ಅಶ್ರುತರ್ಪಣದ ಮಧ್ಯೆ  ನಡೆಯಿತು. ಬೆನಜೀರ್ ಅವರ ಪತಿ ಆಸಿಫ್ ಅಲಿ ಜರ್ದಾರಿ,  ಪುತ್ರ ಬಿಲಾವಲ್, ಪುತ್ರಿಯರಾದ ಭಕ್ತವಾರ್ ಮತ್ತು ಅಸಿಫಾ ಅವರ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆಯ ನಂತರ ಶವಪೆಟ್ಟಿಗೆಯನ್ನು ಸಮಾಧಿಯೊಳಗೆ ಇಳಿಸಲಾಯಿತು. ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ಪಿಪಿಪಿಯ ಧ್ವಜವನ್ನು ಶವಪೆಟ್ಟಿಗೆಗೆ   ಹೊದಿಸಲಾಗಿತ್ತು. ಭುಟ್ಟೊ ಬೆಂಬಲಿಗರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಎದೆ ಬಡಿದುಕೊಂಡು  ಕಣ್ಣೀರಿಟ್ಟರು. ಲರ್ಖಾನಾ ಜಿಲ್ಲೆಯ ಎಲ್ಲಾ ಕಡೆಗಳಿಂದಲೂ ಸಹಸ್ರಾರು ಜನರು ಲಾರಿ, ಟ್ರ್ಯಾಕ್ಟರುಗಳಲ್ಲಿ ಬಂದಿದ್ದರು.

2007: ಹಿರಿಯ ನೃತ್ಯ ಕಲಾವಿದೆ ಶಾಂತಾರಾವ್ (81) ಅವರು ಈದಿನ ನಸುಕಿನ 4.35ಕ್ಕೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವಿವಾಹಿತರಾಗಿದ್ದ ಶಾಂತಾರಾವ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೋಹಿನಿಯಾಟ್ಟಂ ನೃತ್ಯದಲ್ಲಿ ಅಪಾರ ಪ್ರಾವೀಣ್ಯ ಪಡೆದಿದ್ದ ಅವರು,  ನೆಹರೂ, ಇಂದಿರಾ ಗಾಂಧಿ ಮತ್ತಿತರರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಶಾಂತಾರಾವ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದವು. ನೃತ್ಯ ಕಲೆಯಲ್ಲಿನ ಸಾಧನೆಗಾಗಿ ಅವರು ಪದ್ಮಶ್ರೀ, ನಾಟ್ಯರಾಣಿ ಶಾಂತಲಾ, ಕಾಳಿದಾಸ ಪ್ರಶಸ್ತಿಗಳಲ್ಲದೆ ರಾಜ್ಯ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿಗಳ ಗೌರವಕ್ಕೂ ಪಾತ್ರರಾಗಿದ್ದರು.

2006: ಬೆಂಗಳೂರಿನ ನಾರಾಯಣ ನೇತ್ರಾಲಯದ `ಯುವೆಟಿಸ್ ಮತ್ತು ಆಕ್ಯುಲರ್ ಇಮ್ಯುನಾಲಜಿ ಸೇವೆ'ಗಳ ವಿಭಾಗದ ಸಮಾಲೋಚಕಿ ಡಾ. ಎಂ. ಪದ್ಮಮಾಲಿನಿ ಅವರಿಗೆ ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ಪ್ರತಿಷ್ಠಿತ ಪ್ರೊ. ನರಸಿಂಗ ಎ. ರಾವ್. ಪ್ರಶಸ್ತಿ ಲಭಿಸಿತು. ಮಧುರೈನ ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಆರನೇ ಅಖಿಲ ಭಾರತ ಯುವೆಟಿಸ್ ಸಮ್ಮೇಳನದಲ್ಲಿ ಮಂಡಿಸಿದ `ಚಿಕುನ್ ಗುನ್ಯಾ ತರುವ ಸಮಸ್ಯೆಗಳು' ಪ್ರಬಂಧಕ್ಕೆ ಈ ಪ್ರಶಸ್ತಿ ಲಭಿಸಿತು.

2006: ಸಾಹಿತಿ ಎಂ. ಚಿದಾನಂದ ಮೂರ್ತಿ ಅವರಿಗೆ ಬೆಂಗಳೂರಿನ ಪುರಭವನದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನದ ವತಿಯಿಂದ `ವಿಶ್ವ ಚೇತನ' ಪ್ರಶಸ್ತಿ ಪ್ರದಾನ ಮಾಡಲಾಯಿತು.

2006: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ಹಿರಿಯ ಸಾಹಿತಿ ನಾ.ಡಿಸೋಜಾ ಅವರಿಗೆ `ಗೌರವ ಡಾಕ್ಟರೇಟ್' ಪ್ರದಾನ ಮಾಡಲು ಕುವೆಂಪು ವಿಶ್ವ ವಿದ್ಯಾಲಯವು ನಿರ್ಧರಿಸಿತು.

2005: ಬೆಂಗಳೂರಿನಲ್ಲಿ ಇರುವ ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದ ಆವರಣದಲ್ಲಿ ಈ ದಿನ ರಾತ್ರಿ ಉಗ್ರಗಾಮಿಗಳು ಹಠಾತ್ತನೆ ನಡೆಸಿದ ಗುಂಡಿನ ದಾಳಿಯಲ್ಲಿ ವಿಜ್ಞಾನಿ, ದೆಹಲಿ ಐಐಟಿ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಸಿ. ಪುರಿ ಮೃತರಾಗಿ ಇತರ ಐವರು ಗಾಯಗೊಂಡರು. ನಗರದಲ್ಲಿ ಉಗ್ರಗಾಮಿಗಳ ಮೊತ್ತ ಮೊದಲ ವಿಧ್ವಂಸಕ ಕೃತ್ಯವಿದು. ಪಾಕಿಸ್ಥಾನ ಮೂಲಕ ಲಷ್ಕರ್-ಇ-ತೊಯ್ಬಾ ಸಂಘಟನೆ ಇದರ ರೂವಾರಿ ಎಂಬುದು ಪೊಲೀಸರ ಗುಮಾನಿ. ಬಿಳಿಬಣ್ಣದ ಅಂಬಾಸಿಡರ್ ಕಾರಿನಲ್ಲಿ ರಾತ್ರಿ 7.10ರ ವೇಳೆಯಲ್ಲಿ ಪ್ರವೇಶಿಸಿದ ಉಗ್ರಗಾಮಿಗಳು ಯದ್ವಾತದ್ವ ಗುಂಡಿನ ಮಳೆಗರೆದರು. ಈ ಘಟನೆಯೊಂದಿಗೆ ಬೆಂಗಳೂರಿಗೂ ಭಯೋತ್ಪಾದನೆ ಪದಾರ್ಪಣೆ ಮಾಡಿತು.

2005: ದುಬೈಯ ಕಿಂಗ್ ಫೈಸಲ್ ಪ್ರತಿಷ್ಠಾನ ನೀಡುವ 2006ನೇ ಸಾಲಿನ ಅಂತಾರಾಷ್ಟ್ರೀಯ `ಕಿಂಗ್ ಫೈಸಲ್' ಪ್ರಶಸ್ತಿಯು ಮುಂಬೈಯ ಟಾಟಾ ಮುಲಭೂತ ಸಂಶೋಧನಾ ಸಂಸ್ಥೆಯ ಗಣಿತ ಶಾಸ್ತ್ರಜ್ಞ ಎಂ.ಎಸ್. ನರಸಿಂಹನ್ ಅವರಿಗೆ ಲಭಿಸಿತು. ಗಣಿತ ಶಾಸ್ತ್ರ ಮತ್ತು ಭೌತಶಾಸ್ತ್ರಗಳ ನಡುವಣ ಸಂಬಂಧವನ್ನು ಹಿಗ್ಗಿಸುವ ಸಂಶೋಧನಾ ಕಾರ್ಯದಲ್ಲಿ ಗಣನೀಯ ಸಾಧನೆ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದು, ನರಸಿಂಹನ್ ಅವರು ಪ್ರಶಸ್ತಿಯನ್ನು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕ ಸಿಮೊನ್ ಕಿರ್ವಾನ್ ಡೊನಾಲ್ಡ್ ಸನ್ ಅವರ ಜೊತೆ ಹಂಚಿಕೊಂಡರು. ಪ್ರಶಸ್ತಿಯು 24 ಕ್ಯಾರೆಟಿನ 200 ಗ್ರಾಂ ತೂಕದ ಚಿನ್ನದ ಪದಕ ಮತ್ತು 2 ಲಕ್ಷ ಅಮೆರಿಕನ್ ಡಾಲರ್ ನಗದು ಹಣವನ್ನು ಹೊಂದಿದೆ.

2005: ಅರಬ್ ಜಗತ್ತಿನ ಪ್ರತಿಷ್ಠಿತ `ಐಪಿಆರ್ ಮಾಧ್ಯಮ ಪ್ರಶಸ್ತಿ'ಗೆ ಖಲೀಜ್ ಟೈಮ್ಸ್ ಪತ್ರಕರ್ತ ಭಾರತೀಯ ಮೂಲದ ಐಸಾಕ್ ಜಾನ್ ಆಯ್ಕೆಯಾದರು. 

1987: ಕೊಯಮತ್ತೂರಿನಲ್ಲಿ ನಡೆದ ಶಕ್ತಿ ಫೈನಾನ್ಸ್ ಗ್ರ್ಯಾಂಡ್ ಮಾಸ್ಟರ್ ಟೂರ್ನಮೆಂಟಿನಲ್ಲಿ ವಿಶ್ವನಾಥನ್ ಆನಂದ್ ಅವರು ಭಾರತದ ಮೊತ್ತ ಮೊದಲ `ಗ್ರ್ಯಾಂಡ್ ಮಾಸ್ಟರ್' ಹೆಗ್ಗಳಿಕೆಗೆ ಭಾಜನರಾದರು.

1954: ಭಾರತದ `ಕ್ವಿಜ್ ದೊರೆ' ಸಿದ್ಧಾರ್ಥ ಬಸು ಹುಟ್ಟಿದ ದಿನ.

1947: ಸಾಹಿತಿ ಮಾತಂಗಿ ಜನನ.

1945: ನೇಪಾಳದ ದೊರೆ ಬೀರೇಂದ್ರ ಬೀರ ಬಿಕ್ರಮ್ ಶಾ ದೇವ್ (1945-2001) ಹುಟ್ಟಿದ ದಿನ. ಇವರನ್ನು ಪತ್ನಿ ಸೇರಿದಂತೆ ಇಡೀ ಕುಟುಂಬ ಸಹಿತವಾಗಿ ಪುತ್ರ ದೀಪೇಂದ್ರ ಗುಂಡಿಟ್ಟು ಕೊಲೆಗೈದ. 1972ರಿಂದ 2001ರವರೆಗೆ ಇವರು ನೇಪಾಳದ ದೊರೆಯಾಗಿ ಆಡಳಿತ ನಡೆಸಿದ್ದರು.

1944: ಕಾಕೋಳು ಸರೋಜಾರಾವ್ ಜನನ.

1939: ಸಾಹಿತಿ ಎಚ್. ಎಲ್. ಕೇಶವ ಮೂರ್ತಿ ಜನನ.

1937: ಟಾಟಾ ಇಂಡಸ್ಟ್ರೀಸ್ ಅಧ್ಯಕ್ಷ ರತನ್ ಟಾಟಾ ಜನ್ಮದಿನ.

1932: `ರಿಲಯನ್ಸ್ ಇಂಡಸ್ಟ್ರೀಸ್' ಸ್ಥಾಪಕ ಧೀರಜ್ ಲಾಲ್ ಹೀರಾಚಂದ್ `ಧೀರೂಭಾಯಿ' ಅಂಬಾನಿ (1932-2002) ಹುಟ್ಟಿದರು. 

1928: ಸಾಹಿತಿ ಕೆ.ಎಸ್. ಉಮಾಪತಿ ಜನನ.

1923: ಗುಸ್ತಾವ್ ಐಫೆಲ್ (1832-1923) ತಮ್ಮ 91ನೇ ವಯಸ್ಸಿನಲ್ಲಿ ಮೃತರಾದರು. ಖ್ಯಾತ ಫ್ರೆಂಚ್ ಸಿವಿಲ್ ಎಂಜಿನಿಯರ್ ಆದ ಇವರ ಗೌರವಾರ್ಥ ಪ್ಯಾರಿಸ್ಸಿನ ಗೋಪುರಕ್ಕೆ `ಐಫೆಲ್ ಟವರ್' ಹೆಸರು ಇಡಲಾಗಿದೆ. ಅಮೆರಿಕಾದ `ಸ್ಟ್ಯಾಚ್ಯೂ ಆಫ್ ಲಿಬರ್ಟಿ' ಚೌಕಟ್ಟು ನಿರ್ಮಿಸಿದವರೂ ಇವರೇ.

1913: ಪ್ರಖ್ಯಾತ ವೈದ್ಯ, ಸಾಹಿತಿ, ಛಾಯಾಚಿತ್ರಗ್ರಾಹಕ ದೊಡ್ಡೇರಿ ವೆಂಕಟಗಿರಿ ರಾವ್ (28-12-1913ರಿಂದ 26-5-2004) ಅವರು ಸೊರಬ ತಾಲ್ಲೂಕಿನ ದೊಡ್ಡೇರಿ ಹಳ್ಳಿಯಲ್ಲಿ ಜನಿಸಿದರು.

1902: ಸಾಹಿತಿ ರೊದ್ದ ಲಕ್ಷ್ಮೀನರಸಿಂಹಯ್ಯ ಜನನ.

1896: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲ್ಕತ್ತಾ (ಈಗಿನ ಕೋಲ್ಕತ) ಅಧಿವೇಶನದಲ್ಲಿ `ವಂದೇ ಮಾತರಂ' ಗೀತೆಯನ್ನು ಹಾಡಲಾಯಿತು.

1885: ಭಾರತ ರಾಷ್ಟ್ರೀಯ ಕಾಂಗ್ರೆಸಸಿನ ಮೊತ್ತ ಮೊದಲ ಅಧಿವೇಶನ ಬಾಂಬೆಯ (ಈಗಿನ ಮುಂಬೈ) ಗೋಕುಲ್ ದಾಸ್ ತೇಜ್ ಪಾಲ್ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಿತು. ಡಬ್ಲ್ಯೂ.ಸಿ. ಬ್ಯಾನರ್ಜಿ ಅಧ್ಯಕ್ಷತೆ ವಹಿಸಿದ್ದರು. 72 ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, December 27, 2008

Pa.Sa. Kumar at Fish Market..!

Pa.Sa. Kumar at Fish Market..!


Meet  artist Pa.Sa. Kumar at Fish Market today 27 December 2008 at 6 pm.

ಇಂದಿನ ಇತಿಹಾಸ History Today ಡಿಸೆಂಬರ್ 27

ಇಂದಿನ ಇತಿಹಾಸ

ಡಿಸೆಂಬರ್ 27

ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷೆ ಬೆನಜೀರ್ ಭುಟ್ಟೊ (54) ಅವರನ್ನು ರಾವಲ್ಪಿಂಡಿಯ ಲಿಯಾಖತ್ ಬಾಗಿನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದರು. 2008ರ ಜನವರಿ 8ಕ್ಕೆ ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ರಾಲಿಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನಂತರ ಸಂಜೆ ಸುಮಾರು 5.30ಕ್ಕೆ ತಮ್ಮ ಕಾರಿನಲ್ಲಿ ಕೂರುತ್ತಿದ್ದಾಗ ಭಯೋತ್ಪಾದಕನೊಬ್ಬ ಎ.ಕೆ.47 ಬಳಸಿ ಸಮೀಪದಿಂದ ಐದು ಸುತ್ತು ಗುಂಡು ಹಾರಿಸಿದ.

2007: ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷೆ ಬೆನಜೀರ್ ಭುಟ್ಟೊ (54) ಅವರನ್ನು ರಾವಲ್ಪಿಂಡಿಯ ಲಿಯಾಖತ್ ಬಾಗಿನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದರು. 2008ರ ಜನವರಿ 8ಕ್ಕೆ ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ 
ಪ್ರಚಾರ ರಾಲಿಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ನಂತರ ಸಂಜೆ ಸುಮಾರು 5.30ಕ್ಕೆ ತಮ್ಮ ಕಾರಿನಲ್ಲಿ ಕೂರುತ್ತಿದ್ದಾಗ ಭಯೋತ್ಪಾದಕನೊಬ್ಬ ಎ.ಕೆ.47 ಬಳಸಿ ಸಮೀಪದಿಂದ ಐದು ಸುತ್ತು ಗುಂಡು ಹಾರಿಸಿದ. ಬೆನಜೀರ್ ಅವರ ಕುತ್ತಿಗೆ ಮತ್ತು ತಲೆಗೆ ಗುಂಡು ತಗುಲಿದ್ದರಿಂದ ಅವರನ್ನು ತಕ್ಷಣ ಸ್ಥಳೀಯ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಉಪಚರಿಸಿದ ವೈದ್ಯರು ಸಂಜೆ 6 ಗಂಟೆ 16 ನಿಮಿಷಕ್ಕೆ ಬೆನಜೀರ್ ಮೃತರಾಗಿರುವುದಾಗಿ ಘೋಷಿಸಿದರು. ಬೆನಜೀರ್ ಮೇಲೆ ಗುಂಡು ಹಾರಾಟ ನಡೆಯುತ್ತಿದ್ದಂತೆಯೇ ಸಂಭವಿಸಿದ ಇನ್ನೊಂದು ಆತ್ಮಹತ್ಯಾ ದಾಳಿಯಿಂದ ಇದೇ ಸ್ಥಳದಲ್ಲಿ 22ಕ್ಕೂ ಹೆಚ್ಚು ಮಂದಿ ಮೃತರಾಗಿ ಹಲವರು ಗಾಯಗೊಂಡರು. ಘಟನೆಯ ಬೆನ್ನಲ್ಲೇ ಪಾಕಿಸ್ಥಾನದ ವಿವಿಧ ಕಡೆಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ 14 ಮಂದಿ ಮೃತರಾದರು. 2007ರ ಅಕ್ಟೋಬರ್ 19ರಂದು ಬೆನಜೀರ್ ಭುಟ್ಟೊ ಪಾಕಿಸ್ಥಾನಕ್ಕೆ ಮರಳಿದ ನಂತರ ಅವರ ಸಭೆಗಳ ಮೇಲೆ ನಡೆದ ಎರಡನೇ ದಾಳಿ ಇದು. ಅವರು ಪಾಕ್ ಪ್ರವೇಶಿಸಿದ ದಿನವೇ ಪಿಪಿಪಿ ಆಯೋಜಿಸಿದ್ದ ಬೃಹತ್ ಸ್ವಾಗತ ರಾಲಿಯಲ್ಲಿಯೂ ಆತ್ಮಾಹುತಿ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಸುಮಾರು 140ಕ್ಕೂ ಅಧಿಕ ಜನ ಮೃತರಾಗಿದ್ದರು.

2007: ಖ್ಯಾತ ವಿವಾದಾತ್ಮಕ ಚಿತ್ರ ಕಲಾವಿದ ಎಂ.ಎಫ್. ಹುಸೇನ್ ಅವರ ಕಲಾ ಕೃತಿಗಳ ಪ್ರದರ್ಶನವನ್ನು ಸಂಘಟಿಸಿದ್ದ ನವದೆಹಲಿಯ ಭಾರತದ ಅಂತಾರಾಷ್ಟ್ರೀಯ ಕೇಂದ್ರದ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿಮಾಡಿ ಎರಡು ಕಲಾಕೃತಿಗಳನ್ನು ವಿಕೃತಗೊಳಿಸಿದರು. ಘಟನೆಯಲ್ಲಿ 1.5 ಲಕ್ಷ ಬಲೆಬಾಳುವ ಅಕ್ಬರ್ ದೊರೆಯ ಚಿತ್ರ ಸಂಪೂರ್ಣ ಹಾಳಾಗಿದ್ದು, ಮತ್ತೊಂದು ಚಿತ್ರ ಸ್ವಲ್ಪ ಹಾಳಾಯಿತು.

2007:  ಭೂ ಒತ್ತುವರಿ ಹಾವಳಿಯಿಂದಾಗಿ ರಾಷ್ಟ್ರದಾದ್ಯಂತ ಹಲವಾರು ಕೆರೆಗಳೇ ಗುಳುಂ ಆದದ್ದು ಇತಿಹಾಸ.  ಇಂತಹ ಇತಿಹಾಸವನ್ನೆ ಮೀರಿಸುವ ಮತ್ತೊಂದು ಭೂಗಳ್ಳತನದ ಕುಖ್ಯಾತಿಗೆ ರಾಷ್ಟ್ರದ 2ನೇ ಅತಿದೊಡ್ಡ ಕೆರೆ ಎಂದೇ ಪ್ರಸಿದ್ಧಿಯಾಗಿರುವ ಚೆನ್ನೈಯ ಪುಲಿಕ್ಯಾಟ್ ಕೆರೆ ತುತ್ತಾಗಿರುವುದು ಬೆಳಕಿಗೆ ಬಂತು. ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಸಾಗರದಂತಹ ಈ ಕೆರೆ ಕಳೆದ ಎರಡು ದಶಕಗಳಿಂದ ತನ್ನ ವಿಸ್ತೀರ್ಣದಲ್ಲಿ ಭಾರಿ ಪ್ರಮಾಣದಲ್ಲಿ ಕುಗ್ಗುತ್ತ ಬಂದಿದೆ. ಆರಂಭದಲ್ಲಿ ಪುಲಿಕ್ಯಾಟ್ ಕೆರೆಯ ವಿಸ್ತೀರ್ಣ 600 ಚದರ ಕಿ. ಮೀ. ಇತ್ತು. ಕ್ರಮೇಣ ಇದರ ವಿಸ್ತೀರ್ಣ 400 ಚ.ಕಿ.ಮೀ.ಗೆ ಕುಗ್ಗಿದೆ. 4ಮೀ. ಆಳವಿದ್ದ ಕೆರೆ ಈಗ 2ಮೀ. ಮಾತ್ರ ಇದೆ. ಈ ಕೆರೆಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆಯಲ್ಲಿಯೂ ಗಣನೀಯ ಕುಸಿತ ಕಂಡು ಬಂದಿದೆ. ಚಳಿಗಾಲದಲ್ಲಿ ಈ ಕೆರೆಗೆ ವಲಸೆ ಬರುತ್ತಿದ್ದಪಕ್ಷಿಗಳು ಈಗ ನೀರಿನ ಕೊರತೆಯಿಂದ ಬರಲು ಹಿಂದೇಟು ಹಾಕುತ್ತಿವೆ. 2002ರ ಚಳಿಗಾಲದಲ್ಲಿ ಸುಮಾರು 30 ಸಾವಿರ ಪಕ್ಷಿಗಳು ಬಂದಿದ್ದವು. ಆದರೆ, 2006ರಲ್ಲಿ ಕೇವಲ 7 ಸಾವಿರ ಪಕ್ಷಿಗಳು ಈ ಕೆರೆಗೆ ಬಂದಿವೆ ಎಂಬುದು ಸಮೀಕ್ಷೆಯೊಂದರಿಂದ ಬೆಳಕಿಗೆ ಬಂತು. 

2007: ಪ್ಯಾರಿಸ್ಸಿಗೆ ಹೋಗಬೇಕಾಗಿದ್ದ ವಿಷ್ಣುವಿನ `ಟೆರಕೋಟ' ಮೂರ್ತಿಗಳು ಢಾಕಾ ವಿಮಾನ ನಿಲ್ದಾಣದಲ್ಲಿಯೇ ಕಳುವಾದ ಹಿನ್ನೆಲೆಯಲ್ಲಿ ಭುಗಿಲೆದ್ದ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಬಾಂಗ್ಲಾದೇಶ ಸರ್ಕಾರದ ಶಿಕ್ಷಣ ಮತ್ತು ಸಂಸ್ಕೃತಿ ವ್ಯವಹಾರಗಳ ಖಾತೆಯ ಸಲಹೆಗಾರ ಅಯೂಬ್ ಖಾದ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪ್ಯಾರಿಸ್ಸಿನಲ್ಲಿ ನಡೆಯುವ ವಸ್ತು ಪ್ರದರ್ಶನದಲ್ಲಿ ಇಡಲಿಕ್ಕಾಗಿ ಅಲ್ಲಿಗೆ ಕಳುಹಿಸಲು ವಿಷ್ಣುವಿನ ಮೂರ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ಇಡಲಾಗಿತ್ತು. ಆದರೆ ಐದು ದಿನಗಳ ಹಿಂದೆ ಈ ಎರಡು ಮೂರ್ತಿಗಳು ಕಳುವಾಗಿದ್ದವು. 

2007: ದೇವನಹಳ್ಳಿ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರದ ನಡುವಿನ ಅತಿ ವೇಗದ  ಅಟ್ಟಣಿಗೆ (ಎಲಿವೇಟೆಡ್) ರೈಲು ಯೋಜನೆ ಜಾರಿಗೆ ಕೈಗೊಳ್ಳಬೇಕಾದ ಕ್ರಮಗಳಿಗೆ ಚಾಲನೆ ನೀಡುವ ಸಂಬಂಧ ಸರ್ಕಾರಿ ಆದೇಶ ಹೊರ ಬಿದ್ದಿತು. 2007ರ ಸೆಪ್ಟೆಂಬರ್ 26ರಂದು ಹಣಕಾಸು ಇಲಾಖೆ ಈ ಯೋಜನೆಗೆ ಸಮ್ಮತಿ ನೀಡಿತ್ತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟಕ್ಕೆ ಸಮನಾದ ರಾಜ್ಯ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯು ಈ ಯೋಜನೆ ಜಾರಿಗೆ ಅಂತಿಮ ಒಪ್ಪಿಗೆ ಕೊಟ್ಟಿತ್ತು.

2006: ಅಮೆರಿಕದ ಚುನಾವಣೆ ಎದುರಿಸದ ಅಧ್ಯಕ್ಷ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಜೆರಾಲ್ಡ್ ಫೋರ್ಡ್ (93) (1913-2006) ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು. 1974ರಲ್ಲಿ ರಿಚರ್ಡ್ ನಿಕ್ಸನ್ ಅವರು ವಾಟರ್ ಗೇಟ್ ಹಗರಣದ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ಸಲ್ಲಿಸಿದಾಗ ಫೋರ್ಡ್ ಅವರು ಅಮೆರಿಕದ 38ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ರಿಪಬ್ಲಿಕನ್ ಪಕ್ಷಕ್ಕೆ ಸೇರಿದ ಅವರು ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ಎದುರಿಸಲಿಲ್ಲ. ಅಧಿಕಾರ ವಹಿಸಿಕೊಂಡ ಒಂದೇ ತಿಂಗಳಲ್ಲಿ ನಿಕ್ಸನ್ ಅವರಿಗೆ ಸಂಪೂರ್ಣ ಕ್ಷಮಾಪಣೆ ನೀಡಿ ಜನರನ್ನು ಅಚ್ಚರಿಯ ಕೂಪಕ್ಕೆ ಕೆಡವಿದ್ದರು.

2006: ತೈವಾನ್ ರಾಷ್ಟ್ರದ ಅಧ್ಯಕ್ಷ ಚೆನ್ ಶುಯಿ ಬಿಯಾನ್ ಅಳಿಯ ಚೌ ಚುಯಾನ್ ಮಿಂಗ್ ಅವರು ಅಧ್ಯಕ್ಷರ ಹೆಸರು ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾದ ಕಾರಣ ನ್ಯಾಯಾಲಯ 6 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.

2006: ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಬಿ ಎಸ್ ಸಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಮುಕುಂದ ತಿವಾರಿ ಅವರಿಗೆ ಅಂಗವಿಕಲರ ನೆರವಿಗಾಗಿ ಸಂಶೋಧಿಸಿದ ಅಗ್ಗದ ದರದ ತಂತ್ರಜ್ಞಾನಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಲಭಿಸಿತು.

2006: ಸೌರಮಂಡಲದ ಆಚೆಗಿನ ಭೂಮಿಯನ್ನು ಹೋಲುವ ಹೊಸ ಗ್ರಹ ಒಂದನ್ನು ಹುಡುಕುವ ಸಲುವಾಗಿ ಹಾಗೂ ನಕ್ಷತ್ರಗಳ ಆಂತರಿಕ ಒಳಗುಟ್ಟು ಅರಿಯುವ ಸಲುವಾಗಿ ಫ್ರೆಂಚ್ ಪ್ರಾಯೋಜಿತ ಮುಖ್ಯ ಉಪಗ್ರಹ ಯೋಜನೆಯಡಿ `ಕೊರೋಟ್' ಹೆಸರಿನ `ಗ್ರಹ ಅನ್ವೇಷಕ' ಒಂದನ್ನು ಕಜಕಿಸ್ಥಾನದಿಂದ ಉಡಾವಣೆ ಮಾಡಲಾಯಿತು. `ಕೊರೋಟ್' ಸೌರ ಮಂಡಲದಾಚೆಗಿನ ಸೌರ ವ್ಯವಸ್ಥೆ ಹಾಗೂ ಭೂಮಿಯನ್ನು ಹೋಲುವಂತಹ ಗ್ರಹವನ್ನು ಹುಡುಕುವಂತಹ ಪ್ರಪ್ರಥಮ ಬಾಹ್ಯಾಕಾಶ ದೂರದರ್ಶಕ (ಟೆಲೆಸ್ಕೋಪ್) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2005: ಲೈಂಗಿಕ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜಯ ಜೋಶಿ ರಾಜೀನಾಮೆ ನೀಡಿದರು.

1979: ಸೋವಿಯತ್ ಪಡೆಗಳು ಅಪಘಾನಿಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡವು. ಅಧ್ಯಕ್ಷ ಹಫೀಜುಲ್ಲಾ ಅಮೀನ್ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ಅವರ ಸ್ಥಾನಕ್ಕೆ ಬಬ್ರಾಕ್ ಕರ್ಮಾಲ್ ಅವರನ್ನು ನೇಮಿಸಲಾಯಿತು. ಇದು ಹತ್ತು ವರ್ಷಗಳಿಗೂ ಹೆಚ್ಚಿನ ಕಾಲದ ಸಮರದ ಆರಂಭಕ್ಕೆ ನಾಂದಿಯಾಯಿತು.

1965: ಹಿಂದೀ ಚಿತ್ರನಟ ಸಲ್ಮಾನ್ ಖಾನ್ ಹುಟ್ಟಿದ ದಿನ.

1959: ಸಾಹಿತಿ ಮುಕುಂದರಾಜ್ ಎಲ್. ಜನನ.

1948: ಸಾಹಿತಿ ತಾಳ್ತಜೆ ವಸಂತಕುಮಾರ್ ಜನನ.

1945: ವಾಷಿಂಗನ್ನಿನಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ `ವಿಶ್ವ ಬ್ಯಾಂಕ್' ಸ್ಥಾಪನೆಗೊಂಡಿತು. 28 ರಾಷ್ಟ್ರಗಳು ಈ ನಿಟ್ಟಿನ ಒಪ್ಪಂದಕ್ಕೆ ಸಹಿ ಹಾಕಿದವು.

1939: ಸಾಹಿತಿ ಜಯದೇವಪ್ಪ ಜೈನ ಕೇರಿ ಜನನ.

1929: ಉತ್ತಮ ಪ್ರಾಧ್ಯಾಪಕ, ಸುಗಮ ಸಂಗೀತ ಗಾಯಕ ಪ್ರೊ. ಕೆ.ಬಿ. ಪ್ರಭುಪ್ರಸಾದ್ ಅವರು ಬಿ.ಎಸ್. ಕುರುವತ್ತಿ- ಸರ್ವಮಂಗಳೆ ದಂಪತಿಯ ಮಗನಾಗಿ ದಾವಣಗೆರೆಯಲ್ಲಿ ಜನಿಸಿದರು.

1911: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲ್ಕತ್ತಾ (ಈಗಿನ ಕೋಲ್ಕತ) ಅಧಿವೇಶನದಲ್ಲಿ `ಜನ ಗಣ ಮನ' ಗೀತೆಯನ್ನು ಹಾಡಲಾಯಿತು. 1950ರ ಜನವರಿ 24ರಂದು ಅದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು.

1831: ಚಾರ್ಲ್ಸ್ ಡಾರ್ವಿನ್ ಅವರಿದ್ದ ಎಚ್ ಎಂ ಎಸ್ ಬೀಗಲ್ ನೌಕೆಯು ಜಗತ್ತಿಗೆ ಸುತ್ತುಹಾಕುವ ವೈಜ್ಞಾನಿಕ ಪ್ರವಾಸಕ್ಕಾಗಿ ಪ್ಲೈಮೌತ್ನಿಂದ ಯಾನ ಆರಂಭಿಸಿತು. ಈ ಯಾನ ಐದು ವರ್ಷಗಳ ಕಾಲ ಮುಂದುವರೆಯಿತು.

1797: ಪರ್ಷಿಯನ್ ಹಾಗೂ ಉರ್ದು ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಭಾರತದ ಖ್ಯಾತ ಕವಿ, ಬರಹಗಾರ ಮಿರ್ಜಾ ಅಸದುಲ್ಲಾ ಖಾನ್ ಘಾಲಿಬ್ (1797-1869) ಹುಟ್ಟಿದ ದಿನ.

1773: ಸರ್ ಜಾರ್ಜ್ ಗೇಲೇ (1773-1857) ಹುಟ್ಟಿದ ದಿನ. ಈತ ಮಾನವನನ್ನು ಒಯ್ಯಬಹುದಾದ ಮೊತ್ತ ಮೊದಲ ಗ್ಲೈಡರನ್ನು ಯಶಸ್ವಿಯಾಗಿ ನಿರ್ಮಿಸಿದ.

1571: ಜರ್ಮನ್ ಖಗೋಳ ತಜ್ಞ ಹಾಗೂ ಭವಿಷ್ಯಕಾರ ಜೊಹಾನ್ನೆಸ್ ಕೆಪ್ಲರ್ (1571-1630) ಹುಟ್ಟಿದ ದಿನ. ಗ್ರಹಗಳ ಚಲನೆಗೆ ಸಂಬಂಧಿಸಿದ ಮೂರು ತತ್ವಗಳಿಗಾಗಿ ಈತ ಖ್ಯಾತನಾಗಿದ್ದಾನೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಡಿಸೆಂಬರ್ 26

ಇಂದಿನ ಇತಿಹಾಸ

ಡಿಸೆಂಬರ್ 26

2007: ಖ್ಯಾತ ಧಾರ್ಮಿಕ ಯಾತ್ರಾ ಸ್ಥಳವಾದ ದೆಹಲಿಯ ಅಕ್ಷರಧಾಮ ದೇವಾಲಯವು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಸಂಕೀರ್ಣ ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಗಿನ್ನೆಸ್ ಪುಸ್ತಕ ವಿಭಾಗದ ಹಿರಿಯ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಇದಕ್ಕೆ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ದೇವಾಲಯದ ಪ್ರಮುಖರಿಗೆ ನೀಡಿದರು. 86,342 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ದೇವಾಲಯದ ಉದ್ದ 356 ಅಡಿಗಳಾಗಿದ್ದು, ಅಗಲ 316 ಅಡಿಗಳು. ಇದರ ಎತ್ತರ 141 ಅಡಿಗಳು.  

2011:: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ, ಹಿಂದುಳಿದ ವರ್ಗಗಳ ನಾಯಕ, ಹಿರಿಯ ರಾಜಕಾರಣಿ ಸಾರೇಕೊಪ್ಪ ಬಂಗಾರಪ್ಪ (79 ) ಅವರು ಈದಿನ (ಡಿ.26) ನಸುಕಿನ ವೇಳೆ 12.45ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಮೂತ್ರಪಿಂಡ ವೈಫಲ್ಯ ಕಾರಣ ಕೆಲಕಾಲದಿಂದ ಅಸ್ವಸ್ಥರಾಗಿದ್ದ ಅವರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಬಂಗಾರಪ್ಪ ಅವರು ಪತ್ನಿ ಶಕುಂತಲಾ, ಪುತ್ರರಾದ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದರು. 1932ರ ಅಕ್ಟೋಬರ್ 26ರಂದು ಶಿವಮೊಗ್ಗ ಜಿಲ್ಲೆಯ ಕುಬತೂರಿನಲ್ಲಿ ದಿವಂಗತ ಕಲಪ್ಲ್ಪ ಮತ್ತು ಕಲಮ್ಲ್ಮ ದಂಪತಿಯ ಪುತ್ರರಾಗಿ ಜನಿಸಿದ ಬಂಗಾರಪ್ಪ ಕರ್ನಾಟಕದ ವರ್ಣರಂಜಿತ ರಾಜಕಾರಣಿ. ನೇರ ನಡೆ ನುಡಿಯ ವ್ಯಕ್ತಿಯಾಗಿ ಜನಪ್ರಿಯರಾಗಿದ್ದರು. 1990ರಿಂದ 1992ರ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅವರು 14ನೇ ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ರಾಜಕಾರಣದಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಸಾಗುವುದಕ್ಕೆ ಹೆಸರಾದ ಬಂಗಾರಪ್ಪ ಕಾಂಗ್ರೆಸ್ಸಿಗೆ ವಿರುದ್ಧವಾಗಿ ಕರ್ನಾಟಕ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷಗಳನ್ನು ಕಟ್ಟಿದ್ದರು. 1967ರಿಂದ 1996ರವರೆಗೆ ರಾಜ್ಯವಿಧಾನಸಭೆಯ ಸದಸ್ಯರಾಗಿದ್ದ ಬಂಗಾರಪ್ಪ, ಸುದೀರ್ಘ ರಾಜಕಾರಣದ ಅವಧಿಯಲ್ಲಿ ಗೃಹ ರಾಜ್ಯ ಸಚಿವ, ಲೋಕೋಪಯೋಗಿ ಸಚಿವ, ಕಂದಾಯ, ಕೃಷಿ ತೋಟಗಾರಿಕಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1985-87ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅವರು 1996ರಲ್ಲಿ 11ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಲ್ಲಿ ಬಿಜೆಪಿಯ ಅಯನೂರು ಮಂಜುನಾಥ್ ವಿರುದ್ಧ ಸೋತಿದ್ದರು. 1999ರಲ್ಲಿ 12ನೇ ಲೋಕಸಭೆಗೆ ಮತ್ತೆ ಆಯ್ಕೆಯಾಗಿದ್ದ ಅವರು 2003ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. 2005ರಲ್ಲಿ ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷವನ್ನು ಸೇರಿ ಲೋಕಸಭೆಗೆ ರಾಜೀನಾಮೆ ನೀಡಿದ್ದರು. ನಂತರ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೂಲಕ ಪುನಃ ಲೋಕಸಭೆಗೆ ಆಯ್ಕೆಯಾಗಿದ್ದರು. 2009ರಲ್ಲಿ ಸಮಾಜವಾದಿ ಪಕ್ಷ ತ್ಯಜಿಸಿ ಲೋಕಸಭೆಗೆ ರಾಜೀನಾಮೆ ನೀಡಿದ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ ಚುನಾವಣೆಗೆ ನಿಂತಿದ್ದರು. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ಎಸ್. ರಾಘವೇಂದ್ರ ಅವರಿಂದ ಪರಾಜಿತರಾಗಿದ್ದರು. ವರ್ಷದ ಹಿಂದೆಯಷ್ಟೇ ಕಾಂಗ್ರೆಸ್ ತ್ಯಜಿಸಿ ಜನತಾದಳವನ್ನು ಸೇರಿದ್ದ ಬಂಗಾರಪ್ಪ ತಾವು ಮತ್ತು ದೇವೇಗೌಡರು ರಾಜಕೀಯದಿಂದ ನಿವೃತ್ತರಾಗುವುದೇ ಇಲ್ಲ ಎಂದು ಘೋಷಿಸಿದ್ದರು.

2011: ರಾಷ್ಟ್ರೀಯ ಗಣಿತ ವರ್ಷ'ವಾಗಿ 2012ನೇ ಇಸವಿಯನ್ನು ಘೋಷಿಸುವ ಮೂಲಕ 'ಗಣಿತ ಮಾಂತ್ರಿಕ' ಶ್ರೀನಿವಾಸ ರಾಮಾನುಜಂ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಈದಿನ  ತಮಿಳುನಾಡಿನ ಚೆನ್ನೈಯಲ್ಲಿ ಗೌರವ ಸಲ್ಲಿಸಿದರು. ರಾಮಾನುಜಂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಂಗ್ ರಾಮಾನುಜಂ ಅವರ ಜನ್ಮದಿನವಾದ ಡಿಸೆಂಬರ್ 22ನ್ನು 'ರಾಷ್ಟ್ರೀಯ ಗಣಿತ ದಿನ' ವಾಗಿ ಆಚರಿಸಲಾಗುವುದು ಎಂದೂ ಘೋಷಿಸಿದರು.

2007: ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ) ಅವರು ತಮ್ಮ `ಅರಮನೆ' ಕಾದಂಬರಿಗೆ 2007ನೇ  ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೋ ಕಲೆಕ್ಟರ್ ಆಗಿದ್ದ ದಿನಗಳಲ್ಲಿ ಬಳ್ಳಾರಿ, ಕಡಪ, ಅನಂತಪುರ ಪ್ರದೇಶಗಳಲ್ಲಿ ನಡೆದ ಸಾಮಾಜಿಕ ಮತ್ತು ರಾಜಕೀಯ ಘಟನಾವಳಿಗಳನ್ನು ಆಧರಿಸಿದ `ಅರಮನೆ' ಕಾದಂಬರಿ ಕುಂವೀ ಅವರ 35ನೇ ಕೃತಿ. `ಕಪ್ಪು' ಮತ್ತು `ಶಾಮಣ್ಣ' ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕುಂವೀ  ಅವರ ಹದಿನಾಲ್ಕು ಕಾದಂಬರಿ ಮತ್ತು ಎಂಟು ಕಥಾ ಸಂಕಲನಗಳು ಪ್ರಕಟಗೊಂಡಿವೆ. `ಅರಮನೆ' ನನ್ನ ಹದಿನೈದು ವರ್ಷಗಳ ಸಂಶೋಧನೆಯ ಫಲ. ಸುಮಾರು 30 ಸಾವಿರ ಪುಟಗಳಷ್ಟಿದ್ದ ಮೂಲ ಬರಹವನ್ನು ಆರು ಬಾರಿ ತಿದ್ದಿ ಆರುನೂರು ಪುಟಗಳಿಗೆ ಇಳಿಸಲಾಗಿದೆ. ಹಿರಿಯ ಸಾಹಿತಿಗಳಾದ ಸಿ.ಎನ್. ರಾಮಚಂದ್ರನ್ ಮತ್ತು ಎಚ್. ಎಸ್. ರಾಘವೇಂದ್ರರಾವ್ ಅವರ ಮಾರ್ಗದರ್ಶನ ಮರೆಯಲಾಗದ್ದು ಎಂದು ಈ ಸಂದರ್ಭದಲ್ಲಿ ಕುಂವೀ ಸ್ಮರಿಸಿದರು.

2007: ಭಾರತದ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಿರಣ್ ಬೇಡಿ ಅವರ ಸ್ವಯಂ ನಿವೃತ್ತಿಯ ಮನವಿಯನ್ನು ಭಾರತ ಸರ್ಕಾರ ಕೊನೆಗೂ ಅಂಗೀಕರಿಸಿತು. ಪ್ರಸ್ತುತ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ದೆಹಲಿ ಘಟಕದ ಮಹಾ ನಿರ್ದೇಶಕರಾಗಿರುವ ಕಿರಣ್ ಬೇಡಿಯವರು ಆ ಸ್ಥಾನದಿಂದ ಮುಕ್ತಗೊಳ್ಳುವರು. ದೆಹಲಿ ಪೊಲೀಸ್ ಆಯುಕ್ತ ಸ್ಥಾನವನ್ನು ತಮಗಿಂತ ಎರಡು ವರ್ಷ ಕಿರಿಯ ಅಧಿಕಾರಿಗೆ ನೀಡಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದ ಕಿರಣ್ ಬೇಡಿ ನವೆಂಬರ್ 15ರಂದು ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಆಸಕ್ತಿ ಇರುವ ಕಾರಣ, ಅದಕ್ಕೆ ಅನುಕೂಲ ಮಾಡಿಕೊಳ್ಳುವುದಕ್ಕಾಗಿ ಈ ಸ್ವಯಂ ನಿವೃತ್ತಿ ಬಯಸಿದ್ದೇನೆಂದೂ ಅವರು ಸರ್ಕಾರಕ್ಕೆ ತಿಳಿಸಿದ್ದರು.  ಅರ್ಜಿಯ ಅಂಗೀಕಾರಕ್ಕಾಗಿ ಒತ್ತಡ ತರುವ ಸಲುವಾಗಿ ಅವರು ಫೆಬ್ರವರಿ 15ರ ವರೆಗೆ ದೀರ್ಘ ರಜೆಗೂ ಮನವಿ ಸಲ್ಲಿಸಿದ್ದರು. ಅಮೃತಸರದಲ್ಲಿ ಹುಟ್ಟಿದ ಕಿರಣ್ ಬೇಡಿ ತಮ್ಮ ಪೊಲೀಸ್ ಸೇವಾವಧಿಯಲ್ಲಿ ಹಲವು ಅತ್ಯುತ್ತಮ ಕೆಲಸಗಳನ್ನು ಮಾಡಿರುವುದರ ಜೊತೆಗೇ ವಿವಾದಗಳಲ್ಲೂ ಸಿಲುಕಿದ್ದರು. ಮೂರು ದಶಕಗಳ ಹಿಂದೆ ದೆಹಲಿಯ ಸಂಚಾರಿ ಪೊಲೀಸ್ ವಿಭಾಗದಲ್ಲಿದ್ದಾಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡದ್ದರಿಂದ `ಕ್ರೇನ್ ಬೇಡಿ' ಎಂದೇ ಜನಜನಿತರಾಗಿದ್ದರು. ತಿಹಾರ್ ಜೈಲಿನ ಮುಖ್ಯಸ್ಥೆಯಾಗಿದ್ದಾಗ ಅಲ್ಲಿ ತಂದ ಸುಧಾರಣೆಗಳು ಎಲ್ಲೆಡೆ ಸುದ್ದಿಯಾಗಿದ್ದವು. ಹಿಂದೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಪೊಲೀಸ್ ಸಲಹೆಗಾರ್ತಿಯಾಗಿದ್ದ ಕಿರಣ್ ಬೇಡಿಗೆ ಅತ್ಯುನ್ನತ ಸೇವೆಗಾಗಿ ವಿಶ್ವಸಂಸ್ಥೆಯ ಪದಕವೂ ಸಿಕ್ಕಿತ್ತು. ಮ್ಯಾಗ್ಸೆಸೆ ಪ್ರಶಸ್ತಿಯೂ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.

2007: ಬೆಂಗಳೂರಿನ ಪ್ರೆಸ್ ಕ್ಲಬ್ `ವರ್ಷದ ವ್ಯಕ್ತಿ' ಪ್ರಶಸ್ತಿಗೆ ಖ್ಯಾತ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಆಯ್ಕೆಯಾದರು. ಈ ಬಾರಿಯ `ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ'ಗೆ ಹಿರಿಯ ಪತ್ರಕರ್ತ ಕೆ.ಶ್ರೀಧರ ಆಚಾರ್ ಹಾಗೂ ಪತ್ರಿಕಾ ಛಾಯಾಗ್ರಾಹಕ ಡಿ.ಬಾಬುರಾಜ್ ಆಯ್ಕೆಯಾದರು.

2007: ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಧಾರಾಕಾರ ಮಳೆ ಸುರಿದು, ಭೂಕುಸಿತದ ಘಟನೆಗಳು ಸಂಭವಿಸಿ 61 ಮಂದಿ ಅಸು ನೀಗಿದರು. ನೂರಾರು ಮಂದಿ ಕಾಣೆಯಾದರು. 

2007: ಅಲೆಕ್ಸಾಂಡರಿಯಾ ರೋಸ್ ನಗರದಲ್ಲಿ 14 ಮಹಡಿಗಳ ಕಟ್ಟಡ ಕುಸಿದು ಸಂಭವಿಸಿದ ಅನಾಹುತದಲ್ಲಿ ಮಡಿದವರ ಸಂಖ್ಯೆ 14ಕ್ಕೆ ಏರಿತು.

2007: ಪಶ್ಚಿಮ ನೇಪಾಳದಲ್ಲಿ ಸೇತುವೆ ಕುಸಿದ ಪರಿಣಾಮವಾಗಿ ವಾಹನವೊಂದು ನದಿಗೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಸತ್ತವರ ಸಂಖ್ಯೆ 15ಕ್ಕೆ ಏರಿತು.

2007: `ಕಂದಾಯ ಇಲಾಖೆ  ಹಾಗೂ ನ್ಯಾಯಾಲಯದ ದಾಖಲೆಗಳ ಆಧಾರದ ಪ್ರಕಾರ ಚಿಕ್ಕಮಗಳೂರು ಸಮೀಪದ ದತ್ತಪೀಠವು ಹಿಂದೂಗಳಿಗೆ ಸೇರಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಪ್ರತಿಪಾದಿಸಿದರು. `ದತ್ತಪೀಠ ಸಂವರ್ಧನ ಸಮಿತಿ ಕಾರ್ಯದರ್ಶಿ ಬಿ.ಎಸ್.ವಿಠಲರಾವ್, ಸಮಾಜ ಸೇವಕ ಬಿ.ಎಸ್.ಮಂಜುನಾಥಸ್ವಾಮಿ ಜೊತೆಗೆ ಪೀಠಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸಲಾಗಿದೆ. ಇದರ ಪ್ರಕಾರ ದತ್ತಪೀಠ ಹಿಂದುಗಳಿಗೆ ಸೇರಬೇಕು. ರಾಜ್ಯ ಸರ್ಕಾರ ಹಾಗೂ ಕೋಮು ಸೌಹಾರ್ದ ವೇದಿಕೆಗೆ ವಸ್ತುಸ್ಥಿತಿ ಗೊತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಅನಗತ್ಯ ವಿವಾದ ಮಾಡಲಾಗುತ್ತಿದೆ' ಎಂದು ಚಿಮೂ ಆರೋಪಿಸಿದರು.

2006: ಖ್ಯಾಗ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯಾದ ಶೇನ್ ವಾರ್ನ್ ಟೆಸ್ಟಿನಲ್ಲಿ 700 ವಿಕೆಟುಗಳ ಗಡಿ ದಾಟಿ, ಕ್ರಿಕೆಟ್ ಜಗತಿನಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದರು. ಮೆಲ್ಬೋರ್ನಿನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆ್ಯಂಡ್ರ್ಯೂ ಸ್ಪ್ರಾಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 700ನೇ ವಿಕೆಟ್ ಪಡೆಯುವ ಮೂಲಕ ಅವರು ಈ ಸಾಧನೆ ಮೆರೆದರು. ಪಂದ್ಯದಲ್ಲಿ ಅವರು ಪಡೆದ ವಿಕೆಕಟುಗಳ ಸಂಖ್ಯೆ 704ಕ್ಕೆ ಮುಟ್ಟಿತು.

2006: ನೈಜೀರಿಯಾದ ಅತ್ಯಂತ ದೊಡ್ಡ ನಗರವಾದ ಲಾಗೋಸ್ನಲ್ಲಿ ಸಂಭವಿಸಿದ ಭಾರಿ ಪೈಪ್ ಲೈನ್ ಸ್ಫೋಟದಲ್ಲಿ 700ಕ್ಕೂ ಹೆಚ್ಚು ಜನ ಭೀಕರವಾಗಿ ಸಾವನ್ನಪ್ಪಿದರು. ತೈಲ ಪೈಪ್ ಲೈನ್ ಸ್ಫೋಟಗೊಂಡಿರುವ ಸ್ಥಳದಲ್ಲಿ ಗುರುತು ಹಚ್ಚಲೂ ಸಾಧ್ಯವಾಗದಷ್ಟು ಸುಟ್ಟು ಹೋಗಿರುವ 500ಕ್ಕೂ ಹೆಚ್ಚು ಮಂದಿಯ ಶವಗಳನ್ನು ಎಣಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಜನನಿಬಿಡ ಅಬುಲೆ ಎಗ್ಬಾದಲ್ಲಿ ರಾತ್ರಿ ಕಳ್ಳರು ಈ ಪೈಪ್ ಲೈನನ್ನು ತೂತು ಮಾಡಿದ್ದು, ಅದರಿಂದ ಹರಿದು ಬಂದ ತೈಲವನ್ನು ಸಂಗ್ರಹಿಸಲು ನೂರಾರು ಮಂದಿ ಮುಗಿಬಿದ್ದರು. ಈ ಸಂದರ್ಭದಲ್ಲಿ ಬೆಂಕಿಹೊತ್ತಿಕೊಂಡು ಸ್ಫೋಟ ಸಂಭವಿಸಿತು. 

2006: ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಮಾಡಿದ್ದಕ್ಕಾಗಿ ಎರಡು ವರ್ಷಗಳ ಸೆರೆಮನೆವಾಸದ ಶಿಕ್ಷೆಗೆ ಗುರಿಯಾಗಿರುವ ಮಾಜಿ ಮಿಲಿಟರಿ ಆಡಳಿತಗಾರ ಹಾಗೂ ಜತಿಯಾ ಪಕ್ಷ (ಜೆಪಿ)ದ ಅಧ್ಯಕ್ಷ ಜನರಲ್ ಹುಸೇನ್ ಮೊಹಮ್ಮದ್ ಇರ್ಷಾದ್ ಅವರಿಗೆ, ಕೆಳಹಂತದ ನ್ಯಾಯಾಲಯಕ್ಕೆ ಶರಣಾಗುವಂತೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ತಾಕೀತು ಮಾಡಿತು. ರಜಾಕಾಲೀನ ನ್ಯಾಯಮೂರ್ತಿ ಎಂ.ಜಾಯನುಲ್ ಅಬೆದಿನ್ ಅವರು ಇರ್ಷಾದ್ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿ ಈ ಆದೇಶ ಹೊರಡಿಸಿದರು. ಇರ್ಷಾದ್ ಅವರು 1990ರಲ್ಲಿ ರಕ್ತರಹಿತ ಸೇನಾ ಕ್ರಾಂತಿ ಮೂಲಕ ಆಡಳಿತ ಸೂತ್ರ ಹಿಡಿದು, ಅನಂತರ ಒಂಬತ್ತು ವರ್ಷ ಆಡಳಿತ ನಡೆಸಿದ್ದರು. ಆದರೆ ಇದಕ್ಕೂ ಮುಂಚೆಯೇ ಅಪರಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರುವರ್ಷ ಸೆರೆವಾಸ ಅನುಭವಿಸಿದ್ದರು. ಈಗ, ಜಪಾನ್ ನಿರ್ಮಿತ 520 ದೋಣಿ ಮತ್ತು 10 ಜಲಶುದ್ಧೀಕರಣ ಯಂತ್ರಗಳ ಖರೀದಿಯಲ್ಲಿ ಇರ್ಷಾದ್ ಅವರು ಅವ್ಯವಹಾರ ನಡೆಸಿದ್ದಾರೆ ಎಂದು ದೇಶದ ಭ್ರಷ್ಟಾಚಾರ ವಿರೋಧ ದಳದವರು 1991ರಲ್ಲಿಯೇ ಮೊಕದ್ದಮೆಯೊಂದನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇರ್ಷಾದ್ ತಪ್ಪಿತಸ್ಥರು ಎಂದು ವಿಭಾಗೀಯ ವಿಶೇಷ ಸೆಷನ್ಸ್ ನ್ಯಾಯಾಲಯ 1995ರ ಜುಲೈ 6ರಂದು ತೀರ್ಪು ನೀಡಿತ್ತು.

2006: ಸಣ್ಣ ಪ್ರಮಾಣದ ತೀವ್ರತೆಯ ಭೂಕಂಪಗಳಿಗೂ ತಾಳಿಕೆ ಬಾರದ ಕಟ್ಟಡ ನಿರ್ಮಿಸಲು ತಪ್ಪು ನಕಾಶೆ ಸಿದ್ಧಪಡಿಸಿದ ಟೋಕಿಯೋದ  ವಾಸ್ತುಶಿಲ್ಪಿ  ಹಿದೆತ್ಸುಗು ಅನೆಹ್ ಗೆ (49) ಟೋಕಿಯೋದ ಸ್ಥಳೀಯ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. ಆದರೆ, ಶಿಕ್ಷೆಯ ಜಾರಿಯನ್ನು ಅಮಾನತಿನಲ್ಲಿ ಇಟ್ಟಿತು. ದೊಡ್ಡ ಪ್ರಮಾಣದ ಬಹುಮಹಡಿ ಕಟ್ಟಡಗಳು ಮತ್ತು ಹೋಟೆಲುಗಳ ನಿರ್ಮಾಣ ಸಂದರ್ಭದಲ್ಲಿ ಭೂಕಂಪಗಳನ್ನು ತಾಳಿಕೊಳ್ಳಲು ಬೇಕಾದಂತಹ ಸಾಮಗ್ರಿಗಳನ್ನು ಹಾಕಲಾಗಿದೆ ಎನ್ನುವ ತಪ್ಪು ಅಂಕಿ-ಅಂಶಗಳನ್ನು ಆತ ನೀಡಿದ್ದರಿಂದ ಕೋರ್ಟ್ ಈ ಶಿಕ್ಷೆಗೆ ಗುರಿಮಾಡಿತು. ಕಟ್ಟಡ ನಿರ್ಮಾಣ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ, ಪರಿವೀಕ್ಷಣಾಧಿಕಾರಿಗಳಿಗೂ ಅಮಾನತು ಶಿಕ್ಷೆಯನ್ನು ನೀಡಲಾಯಿತು.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಇರಾಕಿ ನ್ಯಾಯಾಧೀಶರ ಮಂಡಳಿ ಎತ್ತಿ ಹಿಡಿಯಿತು. ಈ ನಿರ್ಧಾರದ ಪ್ರಕಾರ ಸದ್ದಾಂ ಹುಸೇನ್ ಅವರನ್ನು 30 ದಿನಗಳ ಒಳಗಾಗಿ ಗಲ್ಲಿಗೆ ಏರಿಸಬೇಕಾಗುತ್ತದೆ. 1982 ರಲ್ಲಿ ದುಜೈಲ್ ಪಟ್ಟಣದಲ್ಲಿ ತಮ್ಮ ಕೊಲೆ ಯತ್ನದ ವಿರುದ್ಧ ನಡೆದ ಸೇಡಿನ ಕಾರ್ಯಾಚರಣೆಯಲ್ಲಿ 148 ಮಂದಿ ಶಿಯಾಗಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಾಂ ಹುಸೇನ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

2006: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿರುವ ಕೆಸಮುಡಿಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಯುವಕ ಕುತ್ಲೂರು ದಿನಕರ ಮೃತನಾದ. ಇದರಿಂದಾಗಿ ಪಶ್ಚಿಮ ಘಟ್ಟದಲ್ಲಿ ನಕ್ಸಲೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈವರೆಗೆ ಪ್ರಾಣತೆತ್ತವರ ಸಂಖ್ಯೆ 8ಕ್ಕೆ ಏರಿತು.

2005: ಬೆಂಗಳೂರು ಸೇರಿದಂತೆ ದೇಶದ ಹಲವು ನಗರ, ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಬಾಂಗ್ಲಾದೇಶದ ಹರ್ಕತ್ ಉಲ್ ಜಿಹಾದ್ ಸಂಘಟನೆಯ ಮೂವರು ಉಗ್ರಗಾಮಿಗಳನ್ನು ದೆಹಲಿ ಪೊಲೀಸರು ಬಂಧಿಸಿದರು. ಹರ್ಕತ್ ಉಲ್ ಸಂಘಟನೆಯ ಸದಸ್ಯ ಬಂಧಿತ ಹಿಲಾಲುದ್ದೀನ್ ಹೈದರಾಬಾದಿನಲ್ಲಿ ಅಕ್ಟೋಬರ್ 12ರಂದು ಎಸ್ ಟಿ ಎಫ್ ಕಚೇರಿ ಮೇಲೆ ನಡೆದ ಬಾಂಬ್ ದಾಳಿಯ ರೂವಾರಿ.

2005: ಏಕದಿನ ಕ್ರಿಕೆಟ್ ಪಂದ್ಯಗಳನ್ನು ಜನಪ್ರಿಯಗೊಳಿಸುವಲ್ಲಿ ಶ್ರಮಿಸಿದ ಆಸ್ಟ್ರೇಲಿಯಾದ ಮಾಧ್ಯಮ ಜಗತ್ತಿನ ದಿಗ್ಗಜ ಕೆರ್ರಿ ಪ್ಯಾಕರ್ (68) ಸಿಡ್ನಿಯ ತಮ್ಮ ನಿವಾಸದಲ್ಲಿ ನಿಧನರಾದರು. 1937ರ ಡಿಸೆಂಬರ್ 17ರಂದು ಸರ್ ಫ್ರಾಂಕ್ ಹಾಗೂ ಗ್ರೆಟೆಲ್ ಅವರ ಪುತ್ರನಾಗಿ ಜನಿಸಿದ ಕೆರ್ರಿ ಬಾಲ್ಯದಲ್ಲಿಯೇ ಲಘು ಪಾರ್ಶ್ವವಾಯುನಿಂದ ಬಳಲಿದ್ದರು. 9 ತಿಂಗಳು ಆಸ್ಪತ್ರೆಯಲ್ಲಿ ಕಳೆದ ಪರಿಣಾಮವಾಗಿ ಸಮವಯಸ್ಕರಿಗಿಂತ ಶಿಕ್ಷಣದಲ್ಲಿ ಹಿಂದುಳಿದಿದ್ದರು. ಕಲಿಕಾ ಸಾಮರ್ಥ್ಯವೂ ಕುಗ್ಗಿತ್ತು. ಆದರೆ ಕ್ರೀಡೆಯಲ್ಲಿ ಭಾರಿ ಆಸಕ್ತಿ ಬೆಳೆಸಿಕೊಂಡ ಅವರು 1956ರಲ್ಲಿ ತಂದೆಯ ಆಸ್ಟ್ರೇಲಿಯನ್ ಕನ್ನಾಲಿ ಡೇಟೆಡ್ ಪ್ರೆಸ್ (ಎಸಿಪಿ) ಸೇರಿಕೊಂಡಿದ್ದರು. 1974ರಲ್ಲಿ ತಂದೆ ಸಾಯುವ ಹೊತ್ತಿಗೆ ಕೆರ್ರಿ ಮಾಧ್ಯಮ ವಲಯದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿದ್ದರು. 1982ರ ವೇಳೆಗೆ ಎಸಿಪಿ ಮೇಲೆ ಪೂರ್ಣ ಸ್ವಾಮ್ಯ ಹೊಂದಿದ್ದರು. ಮಾಧ್ಯಮ ಜಗತ್ತಿನ `ಬಾದಶಹ' ಆಗಿ ಮೆರೆದ ಕೆರ್ರಿ ಕಾಂಗರೂಗಳ ನಾಡಿನಲ್ಲಿ ಟೆಲಿವಿಷನ್ ಜಾಲವನ್ನೂ ಹರಡಿದ್ದಲ್ಲದೆ, ಪತ್ರಿಕಾರಂಗದಲ್ಲಿ ತಮ್ಮ ಛಾಪು ಮೂಡಿಸಿದರು. 1970ರಲ್ಲಿ ಕ್ರಿಕೆಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲು ಕೆರ್ರಿ ಅವರೇ ಕಾರಣ. ವಿಶ್ವ ಕ್ರಿಕೆಟ್ ಸರಣಿ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದ್ದು, 1977ರಲ್ಲಿ ವಿಶ್ವ ಸರಣಿ ನಡೆಸಲು ಆರ್ಥಿಕ ನೆರವು ನೀಡಿದ್ದು ಕೆರ್ರಿ ಪ್ಯಾಕರ್ ಅವರೇ. ಪ್ಯಾಕರ್ ಮುದ್ರಣ ಹಾಗೂ ಪ್ರಸಾರ ಸಂಸ್ಥೆ (ಪಿಬಿಎಲ್) ಆಸ್ಟ್ರೇಲಿಯಾದಲ್ಲಿ ಪ್ರಮುಖ ಚಾನೆಲ್ ಹಾಗೂ ನಿಯತಕಾಲಿಕಗಳನ್ನು ಹೊಂದಿದೆ. 1990ರಲ್ಲಿ ಪ್ಯಾಕರ್ ಪೋಲೋ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಸಾವಿನ ಸಮೀಪಕ್ಕೆ ಹೋಗಿ ಬಂದಿದ್ದರು. ಆಗ ಕೆಲವು ಕ್ಷಣ ಅವರ ಹೃದಯ ಬಡಿತವೇ ಸ್ಥಬ್ದಗೊಂಡಿತ್ತು. ಆಗ ಸಾವಿನ ದವಡೆಯಿಂದ ಪಾರಾಗಿದ್ದರು. 2000ದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಹೆಲಿಕಾಪ್ಟರ್ ಚಾಲಕನೊಬ್ಬ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ. 2003ರಲ್ಲಿ ಮೂತ್ರಕೋಶದಲ್ಲಿ ತೊಂದರೆ ಕಾಣಿಸಿಕೊಂಡು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 

2004: ಇಂಡೋನೇಷ್ಯ, ಶ್ರೀಲಂಕಾ, ಭಾರತ, ಥಾಯ್ಲೆಂಡ್, ಪೂರ್ವ ಆಫ್ರಿಕ, ಮಾಲ್ದೀವ್ಸ್, ಮಲೇಷ್ಯ, ಮ್ಯಾನ್ಮಾರ್, ಬಾಂಗ್ಲಾದೇಶ ಸೇರಿದಂತೆ 13 ರಾಷ್ಟ್ರಗಳ ಕರಾವಳಿ ಪ್ರದೇಶಗಳನ್ನು ಹಿಂದೂ ಮಹಾಸಾಗರದ ಆಳದಿಂದ  ಹೊರಟ ದೈತ್ಯ 'ಸುನಾಮಿ' ಅಲೆಗಳು ನುಂಗಿ ನೀರು ಕುಡಿದವು. ಒಟ್ಟು 2.30 ಲಕ್ಷ ಮಂದಿ ಮೃತರಾದರು. ಅವರಲ್ಲಿ ಅಸುನೀಗಿದವರು 1.85 ಲಕ್ಷಕ್ಕೂ ಹೆಚ್ಚು ಮಂದಿಯಾದರೆ, ಕಣ್ಮರೆಯಾದವರ ಸಂಖ್ಯೆ ಸುಮಾರು 44 ಸಾವಿರ. ಇಂಡೋನೇಷ್ಯ ಒಂದರಲ್ಲೇ ಮೃತರಾದವರ ಸಂಖ್ಯೆ 1.69 ಲಕ್ಷ, ಶ್ರೀಲಂಕೆಯಲ್ಲಿ ಸತ್ತವರು 35,000, ಭಾರತದಲ್ಲಿ 16,000. ಮನುಕುಲದ ಅಚ್ಚಳಿಯದ ದುರಂತವಾಗಿ ನೆನಪಿನಲ್ಲಿ ಉಳಿದ ಈ ಸುನಾಮಿ ಭಾರತದ ಅಂಡಮಾನ್ ದ್ವೀಪವನ್ನು ಸಂಪೂರ್ಣವಾಗಿ ನಾಶ ಮಾಡಿತು. ತಮಿಳುನಾಡಿನ ತೀರಪ್ರದೇಶಗಳೂ ಹಾನಿಗೊಂಡವು. ಸುಮಾತ್ರ, ಇಂಡೋನೇಷ್ಯಗಳ ಕರಾವಳಿಗಳೂ ನೆಲಕಚ್ಚಿದವು. ಯಾವುದೇ ಸುಳಿವು ಕೂಡಾ ಇಲ್ಲದೆ ಬಂದೆರಗಿದ ದುರಂತವಾದ್ದರಂದ ಜನರಿಗೆ ತಪ್ಪಿಸಿಕೊಳ್ಳಲು ದಾರಿಯೇ ಉಳಿಯಲಿಲ್ಲ.

1999: ಭಾರತದ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ (1918-1999) ಅವರು ನವದೆಹಲಿಯಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದರು. 

1985: ಅಮೆರಿಕಾದ ನಿಸರ್ಗ ಚಿಂತಕ, ಪ್ರಾಣಿ ತಜ್ಞ ಡಯನ್ ಫಾಸ್ಸಿ (1932-1985) ಅವರು ರ್ವಾಂಡಾದ ಕರಿಸೋಕೆ ರೀಸರ್ಚ್ ಸೆಂಟರಿನಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಇವರು ಕಾಡಿನಲ್ಲಿ ಗೊರಿಲ್ಲಾಗಳ ಬಗ್ಗೆ ಅಧ್ಯಯನ ನಡೆಸಿದ್ದರು.

1982: `ಟೈಮ್' ಮ್ಯಾಗಜಿನ್ ಮೊತ್ತ ಮೊದಲ ಬಾರಿಗೆ `ವರ್ಷದ ಮನುಷ್ಯ'ನಾಗಿ ಮನುಷ್ಯೇತರ ವಸ್ತುವನ್ನು ಆಯ್ಕೆ ಮಾಡಿತು. 1982ರಲ್ಲಿ ಈ ಗೌರವಕ್ಕೆ ಪಾತ್ರವಾದದ್ದು `ಒಂದು ಕಂಪ್ಯೂಟರ್'!.

1950: ಸಾಹಿತಿ, ಪ್ರಾಧ್ಯಾಪಕಿ ಮಾಲತಿ ಪಟ್ಟಣಶೆಟ್ಟಿ ಅವರು ಶಾಂತೇಶ ಬಸವಣ್ಣೆಪ್ಪ ಕೋಟೂರ- ಶಿವಗಂಗಾ ದಂಪತಿಯ ಮಗಳಾಗಿ ಕೊಲ್ಹಾಪುರದಲ್ಲಿ ಜನಿಸಿದರು.

1941: ವಿನ್ ಸ್ಟನ್ ಚರ್ಚಿಲ್ ಅವರು ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ಸಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊತ್ತ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1929: ಮಲಯಾಳಂ ಚಿತ್ರನಟ ಪ್ರೇಮ್ ನಜೀರ್ (1929-1989) ಹುಟ್ಟಿದ ದಿನ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನ ಪಾತ್ರ ವಹಿಸುವ ಮೂಲಕ ಇವರು ದಾಖಲೆ ಸ್ಥಾಪಿಸಿದ್ದಾರೆ.

1914: ಸಾಹಿತಿ ಟಿ.ಎನ್. ಮಹಾದೇವಯ್ಯ ಜನನ.

1898: ಮೇರಿ ಮತ್ತು ಪಿಯರೇ ಕ್ಯೂರಿ ಫ್ರೆಂಚ್ ವಿಜ್ಞಾನ ಅಕಾಡೆಮಿಯಲ್ಲಿ `ರೇಡಿಯಂ' ಸಂಶೋಧನೆಯನ್ನು ಪ್ರಕಟಿಸಿದರು. ಮಿನರಲ್ ಯುರಿನೈಟ್ನ ಒಂದು ವಿಧವಾದ `ಪಿಚ್ಬ್ಲೆಂಡೆ' ಬಲವಾದ `ರೇಡಿಯೊ ಆಕ್ಟಿವ್' ವಸ್ತುವನ್ನು ಹೊಂದಿದೆ ಎಂದು ಅವರು ಹೇಳಿದರು. 1906ರಲ್ಲಿ ಅಪಘಾತವೊಂದರಲ್ಲಿ ಅಸು ನೀಗಿದ ಪಿಯರೆ ಕ್ಯೂರಿ ಅವರ ಗೌರವಾರ್ಥ ಈ ರೇಡಿಯೊ ಆಕ್ಟಿವಿಟಿಗೆ `ಕ್ಯೂರಿ' ಎಂಬುದಾಗಿ ಹೆಸರಿಡಲಾಯಿತು. ಮೇರಿ ಅವರು `ರೇಡಿಯೊ-ಆಕ್ಟಿವಿಟಿ' ಶಬ್ದವನ್ನು ಚಾಲ್ತಿಗೆ ತಂದರು. ಲ್ಯಾಟಿನ್ನಿನ `ರೇಡಿಯಸ್'ನಿಂದ ರೇಡಿಯಂ ಬಂದಿದ್ದು ಅದರ ಅರ್ಥ `ರೇ' ಅಂದರೆ `ಕಿರಣ' ಎಂದು.

1893: ಚೀನಾದ ಮುತ್ಸದ್ದಿ ಮಾವೋ-ತ್ಸೆ-ತುಂಗ್ (1893-1976) ಹುಟ್ಟಿದ ದಿನ. ಚೀನಾದಲ್ಲಿ ಕಮ್ಯೂನಿಸ್ಟ್ ಕ್ರಾಂತಿಯ ನಾಯಕತ್ವ ವಹಿಸಿದ ಇವರು ಅಲ್ಲಿನ ಮೊತ್ತ ಮೊದಲ ಕಮ್ಯೂನಿಸ್ಟ್ ಧುರೀಣ.

1530: ಭಾರತದಲ್ಲಿ ಮೊಘಲ್ ರಾಜವಂಶವನ್ನು ಸ್ಥಾಪಿಸಿದ ಬಾಬರ್ (1483-1530) ಆಗ್ರಾದಲ್ಲಿ ಮೃತನಾದ. ಈತ 1526-30ರ ಅವಧಿಯಲ್ಲಿ ಚಕ್ರವರ್ತಿಯಾಗಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಸಮುದ್ರ ಮಥನ 16: ಆತ್ಮ ಸಂಯಮ, ಇಂದ್ರಿಯ ನಿಗ್ರಹ

ಸಮುದ್ರ ಮಥನ 16:

ಆತ್ಮ ಸಂಯಮ, ಇಂದ್ರಿಯ ನಿಗ್ರಹ


ಹಲವರ ಮಧ್ಯದಲ್ಲಿ ಕೆಲವರು ಮಾತ್ರ ಶ್ರೀಮಂತರಾಗುತ್ತಾ, ಉಳಿದವರೆಲ್ಲ ಹಾಗೆಯೇ ಅಥವಾ ಬಡವರಾಗುತ್ತಿದ್ದರೆ, ಅಂತಹ ಶ್ರೀಮಂತರ ಶ್ರೀಮಂತಿಕೆ ಹೆಚ್ಚು ಕಾಲ ಬಾಳುವುದಿಲ್ಲ. ಅಲ್ಲಿ ಶ್ರೀಮಂತರಾದವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿದರೆ, ಶ್ರೀಮಂತರಿಗೂ ಸೇರಿದಂತೆ ಎಲ್ಲರಿಗೂ ಶ್ರೇಯಸ್ಕರ.

ಗೆಲ್ಲುವ ಆಸೆ ಇರುವವರಿಗೆ ಆತ್ಮ ಸಂಯಮ, ಇಂದ್ರಿಯ ನಿಗ್ರಹದ ಬಗೆಗಿನ ಮಾತು ಬಲು ಪ್ರಿಯ.

ಆ ಬಗ್ಗೆ ಒಂದಷ್ಟು ಹೇಳಬೇಕು. ಸಂಯಮ, ನಿಗ್ರಹ ಎಂದೆಲ್ಲ ಅಂದುಕೊಳ್ಳುವಾಗ ಆಸೆ-ಆಕಾಂಕ್ಷೆಗಳಿದ್ದು, ಮೇಲ್ನೋಟದಲ್ಲಿ ಸಾಧನೆಗೆ ಪೂರಕ-ಪ್ರೇರಕ ಎನಿಸದಿದ್ದರೆ ಅವುಗಳನ್ನು ಹತ್ತಿಕ್ಕುವ ಪ್ರಯೋಗ ನಡೆಯುತ್ತದೆ. ಆಸೆಗಳನ್ನು ಅದುಮಿಡುವ, ಮುಚ್ಚಿಡುವ ಕ್ರಿಯೆ ಸಾಗುತ್ತಾ ಹೋಗುತ್ತದೆ. ಒಂದೊಮ್ಮೆ ಅದರ ಒತ್ತಡ ಹೆಚ್ಚಾಗಿ ವಿಸ್ಫೋಟಗೊಂಡಾಗ ಹೀಗಾದದ್ದೇಕೆ, ಆದ ತಪ್ಪಾದರೂ ಏನು, ತಿದ್ದಿಕೊಳ್ಳಲು ಸಾಧ್ಯವೇ ಎಂದು ಎಡೆಬಿಡದೇ ಕೊರೆಯುತ್ತದೆ.

ಇದನ್ನೇ ಮಂಡೋದರಿ ತನ್ನ ಪತಿ ರಾವಣನ ಕಳೇಬರದ ಮುಂದಿದ್ದಾಗ "ನೀನು ಮೊದಲು ಇಂದ್ರಿಯಗಳನ್ನು ಗೆದ್ದು ತಪಸ್ಸು ಮಾಡಿದೆ. ಆಮೇಲೆ ಇಂದ್ರಿಯಗಳ ಆಕಾಂಕ್ಷೆ ಭುಗಿಲೆದ್ದು ಸೀತೆಯ ಚೆಲುವಿಗೆ ಸೋತೆ. ಅದರ ಫಲ ಏನಾಯಿತು? ಸರ್ವನಾಶದ ಹೊರತಾಗಿ ಬೇರೇನೂ ಅಲ್ಲ".

ಇಲ್ಲಿ ನೋಡಬೇಕು. ರಾವಣ ತನ್ನೆಲ್ಲ ಆಸೆ-ಆಕಾಂಕ್ಷೆಗಳನ್ನು ಗಟ್ಟಿಯಾಗಿ ಅದುಮಿಟ್ಟುಕೊಂಡು ತಪಸ್ಸು ಮಾಡಿದ. ತಪಸ್ಸಿನ ಕಾರಣದಿಂದ ಅಪಾರವಾದ ಬಲ ಬಂದಿತು. ಅದರಿಂದ ಹದಿನಾಲ್ಕು ಲೋಕಗಳನ್ನೂ ಗೆದ್ದ. ಇನ್ನೊಂದೆಡೆ ಆಂತರ್ಯದಲ್ಲಿ ಅದುಮಿಟ್ಟಿದ್ದ ಆಸೆಯ ಒತ್ತಡ ಏರುತ್ತಾ ಹೋಯಿತು. ಸೀತೆಯ ಚೆಲುವನ್ನು ಕಂಡು ಆಸೆಯ ಕಟ್ಟೆಯೊಡೆಯಿತು. ನಂತರ ಬುದ್ಧಿ-ವಿವೇಕಗಳನ್ನು ಗಾಳಿಗೆ ತೂರಿ ಅವಳನ್ನು ಅಪಹರಿಸಿ, ರಾಮನೊಂದಿಗೆ ಯುದ್ಧಕ್ಕಿಳಿದು, ಸಾವನ್ನಪ್ಪಿದ. 

ಇದನ್ನೆಲ್ಲ ನೋಡಿದಾಗ ಒಂದಂಶ ಸ್ಪಷ್ಟವಾಗುತ್ತದೆ. ಏನೋ ಮಹಾನ್ ಕಾರ್ಯವನ್ನು ಸಾಧಿಸುವ ಭರದಲ್ಲಿ ನಾವೇನು, ನಮ್ಮಿಂದ ಏನೇನು ಸಾಧ್ಯ, ನಮ್ಮ ಬಯಕೆಗಳೇನು, ಅವುಗಳಲ್ಲಿ ಪೂರಕವೆಷ್ಟು, ಮಾರಕವೆಷ್ಟು, ಸಾಧನೆಯ ಸಾಧ್ಯತೆ ಸಾರ್ಥಕವೇ, ಕಾಲ-ದೇಶಗಳಿಗೆ ಪ್ರಸ್ತುತವೇ ಎಂಬೆಲ್ಲ ಪ್ರಶ್ನೆಗಳಿಗೆ ತರ್ಕಬದ್ಧ ಉತ್ತರವನ್ನು ಕಂಡುಕೊಳ್ಳುವ ಕಾಳಜಿ ವಹಿಸುವುದಿಲ್ಲ. ನಮ್ಮದೊಂದೇ, ಸಾಧಿಸಬೇಕು ಎಂದು ಅನ್ನಿಸಿದೆ. ಅದು ಆಗಿಯೇ ತೀರಬೇಕು. ಯಾರಿಗೆ ಏನಾದರೆ ನಮಗೇನು, ಉಳಿದೆಲ್ಲ ಸಂಗತಿಗಳ ಬಗೆಗೆ ಅನಂತರದಲ್ಲಿ ತೀರ್ಮಾನಿಸುವ ಎನ್ನುವ ಮನೋಭಾವ ಘನವಾಗಿ ಮೂಡುತ್ತದೆ.

ಇಲ್ಲೇ ತಪ್ಪುತ್ತೇವೆ ಎನಿಸುತ್ತದೆ. ಹಲವರ ಮಧ್ಯದಲ್ಲಿ ಕೆಲವರು ಮಾತ್ರ ಶ್ರೀಮಂತರಾಗುತ್ತಾ, ಉಳಿದವರೆಲ್ಲ ಹಾಗೆಯೇ ಅಥವಾ ಬಡವರಾಗುತ್ತಿದ್ದರೆ, ಅಂತಹ ಶ್ರೀಮಂತರ ಶ್ರೀಮಂತಿಕೆ ಹೆಚ್ಚು ಕಾಲ ಬಾಳುವುದಿಲ್ಲ. ಅಲ್ಲಿ ಶ್ರೀಮಂತರಾದವರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿದರೆ, ಶ್ರೀಮಂತರಿಗೂ ಸೇರಿದಂತೆ ಎಲ್ಲರಿಗೂ ಶ್ರೇಯಸ್ಕರ.

ಅಂತೆಯೇ, ನಮ್ಮ ಮನಸ್ಸು, ಇಂದ್ರಿಯಗಳ ವ್ಯಾಪಾರಗಳು ಇರುವುದರಿಂದ ಯುಕ್ತಾಯುಕ್ತ ವಿವೇಚನೆಯೊಂದಿಗೆ ಅವುಗಳನ್ನು ತೃಪ್ತಿಪಡಿಸುವುದು ಬಾಳಿಗೆ ಶ್ರೇಯಸ್ಕರ.

ಹಾಗಾಗಿ, ಸಂಯಮ, ನಿಗ್ರಹ ಎಂದರೆ ಬಯಕೆಗಳನ್ನು ಹತ್ತಿಕ್ಕಿದರೆ ಮುಗಿಯಿತು ಎಂದು ಭಾವಿಸಬೇಡಿ. ಅವುಗಳನ್ನು ಅರ್ಥಮಾಡಿಕೊಳ್ಳಿ, ಸಾರ್ಥಕ ಹೆಜ್ಜೆಗಳನ್ನಿಡಿ. ಒಳ್ಳೆಯದಾಗಲಿ.

 

Advertisement