My Blog List

Wednesday, September 30, 2009

ಚಾರಿತ್ರಿಕ ಗೋ ಯಾತ್ರೆ ಇಂದು ಶುಭಾರಂಭ

ಚಾರಿತ್ರಿಕ ಗೋ ಯಾತ್ರೆ

ಇಂದು ಶುಭಾರಂಭ






ಗೋ ಸಂರಕ್ಷಣೆಯ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಲ್ಲಿಯೇ ಇದೇ ಪ್ರಪ್ರಥಮ ಬಾರಿಗೆ ಚಾರಿತ್ರಿಕ 'ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ' ಇಂದು (30 ಸೆಪ್ಟೆಂಬರ್ 2009) ಕುರುಕ್ಷೇತ್ರದಿಂದ ಆರಂಭವಾಗಲಿದೆ.

ಸಕಲ ವಿಶ್ವಕ್ಕೆ ಒಳಿತನ್ನು ಉಂಟು ಮಾಡುವ ಆಶಯದೊಂದಿಗೆ ಆರಂಭವಾಗುತ್ತಿರುವ 108 ದಿನಗಳ ಈ ಐತಿಹಾಸಿಕ ಗೋ ಯಾತ್ರೆ ಇಡೀ ಭಾರತಾದ್ಯಂತ ಸಂಚರಿಸಲಿದ್ದು, ಗೋ ಸಂರಕ್ಷಣೆ, ಗೋ ಆಧಾರಿತ ಕೃಷಿಯ ಪುನರುಜ್ಜೀವನ, ಗೋವಿನಿಂದ ಆಗುವ ಅನುಕೂಲಗಳು ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದೆ.

ಕೋಟ್ಯಂತರ ಸಹಿ ಸಂಗ್ರಹ ಕಾರ್ಯ ನಡೆದು ಗೋ ವಂಶ ಸಂರಕ್ಷಣೆಗಾಗಿ ಜನತಾ ಜನಾರ್ದನನ ಕೂಗು ಮೊಳಗಲಿದೆ.

ಇಲ್ಲಿರುವ ಪುಟ್ಟ ವಿಡಿಯೋ 'ಎರಡನೇ ಸ್ವಾತಂತ್ರ್ಯ ಚಳವಳಿ' ಎಂದೇ ಪರಿಗಣಿತವಾಗಿರುವ 'ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ' ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತಿದೆ.



ನೋಡಿ. ನಿಮ್ಮ ಬಂಧು, ಮಿತ್ರರಿಗೂ ತೋರಿಸಿ. ವಿಶ್ವ ಮಂಗಳ ಗೋ ಗ್ರಾಮ ಯಾತ್ರೆಯಲ್ಲಿ ತನು, ಮನ, ಧನಗಳೊಂದಿಗೆ ಮನಃಪೂರ್ವಕವಾಗಿ ಪಾಲ್ಗೊಳ್ಳಿ.

ಗೋ ಸಂರಕ್ಷಣೆಯ ಮೂಲಕ ಕೃಷಿಕರನ್ನು ರಕ್ಷಿಸಿ, ಕೃಷಿಗೆ ಮರುಜೀವ ನೀಡಿ, ತನ್ಮೂಲಕ ನಿಮ್ಮ ಬಟ್ಟಲಿನ ಆಹಾರವನ್ನು, ನಿಮ್ಮ ಆರೋಗ್ಯವನ್ನು, ನಿಮ್ಮ ಮನೆ ಮಂದಿಯ, ಬಂಧು- ಮಿತ್ರರ ಆರೋಗ್ಯವನ್ನು ಸಂರಕ್ಷಿಸಿ.

-ನೆತ್ರಕೆರೆ ಉದಯಶಂಕರ  

ಇಂದಿನ ಇತಿಹಾಸ History Today ಸೆಪ್ಟೆಂಬರ್ 30

ಇಂದಿನ ಇತಿಹಾಸ

ಸೆಪ್ಟೆಂಬರ್ 30
 ಝೆಕ್ ಗಣರಾಜ್ಯದ ಸುಂದರಿ, ಕ್ರೀಡಾಪಟು ಟಟನಾ ಕುಚರೋವಾ ಅವರು ಈ ರಾತ್ರಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 2006ರ ಸಾಲಿನ `ವಿಶ್ವಸುಂದರಿ' ಪ್ರಶಸ್ತಿಗೆ ಪಾತ್ರರಾಗಿ, ಝೆಕ್ ಗಣರಾಜ್ಯಕ್ಕೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಈ ಕಿರೀಟವನ್ನು ತಂದು ಕೊಟ್ಟರು.

2014:  ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಸಹಚರ ಎನಿಸಿಕೊಂಡ ಚೋಟಾ ಶಕೀಲ್ ಘೋಷಿತ ಅಪರಾಧಿಗಳು ಎಂದು ದೆಹಲಿ ನ್ಯಾಯಾಲಯ ಘೋಷಿಸಿದೆ.  ದೆಹಲಿ ಕೋರ್ಟಿನ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಈ ಇಬ್ಬರೂ ಆರೋಪಿಗಳು ತಪ್ಪಿತಸ್ಥರು ಎನ್ನುವುದು ತನಿಖೆಯ ವೇಳೆ ಸಾಬೀತಾಗಿದೆ. ಅಲ್ಲದೆ ಪೋಲಿಸರು ಸಂಬಂಧಿಸಿದ ಎಲ್ಲಾ ಆಸ್ತಿಗಳಿಗೂ ಮುಟ್ಟುಗೋಲು ಹಾಕಿದ್ದು, ಎಲ್ಲಾ ದಾಖಲೆಗಳಿಂದಲೂ ಇವರು ಅಪರಾಧಿಗಳು ಎನ್ನುವುದು ಸಾಬೀತಾಗಿದೆ ಎಂದು ಹೇಳಿತು. ಇತ್ತೀಚೆಗೆ ಕೋರ್ಟ್ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಈದಿನ ವಿಚಾರಣೆ ವೇಳೆ ದೆಹಲಿ ಪೋಲಿಸರು ವಾರಂಟಿಗೆ ಸಂಬಂಧಿಸಿ ಸಲ್ಲಿಸಬೇಕಾದ ಮಾಹಿತಿ ನೀಡಿದರು. ದಾವೂದ್ ಮತ್ತು ಚೋಟಾ ಶಕೀಲ್​ಗೆ ಸೇರಿದ ಮುಂಬೈನಲ್ಲಿರುವ ಆಸ್ತಿಗಳ ದಾಖಲೆಗಳ ಮುಟ್ಟುಗೋಲಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈಗಾಗಲೇ ನೀಡಿದ್ದಾಗಿದೆ. ಅಲ್ಲದೆ 1993ರ ಮುಂಬೈ ದಾಳಿ ಪ್ರಕರಣದ ಬಳಿಕ ಇಬ್ಬರೂ ತಲೆ ಮರೆಸಿಕೊಂಡಿದ್ದು, ಇನ್ನೂ ಭಾರತಕ್ಕೆ ಮರಳಿಲ್ಲ ಎಂದು ಅವರು ಹೇಳಿದರು.

2014: ಬೆಂಗಳೂರು: ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಕಟ್ಟಡದ ಪ್ರಮುಖ ಸ್ಥಳಗಳಲ್ಲಿ ನಿರ್ಮಾಣದ  ಬಳಿಕ 'ಧೂಮಪಾನ ನಿಷೇಧಿಸಿದೆ' ಎಂಬ ಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ಸಂಬಂಧಿತರಿಗೆ ಸೂಚನೆ ನೀಡಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ(ಅಗ್ನಿ ಮತ್ತು ತುರ್ತ ಸೇವೆ) ಸುತ್ತೋಲೆ ಹೊರಡಿಸಿದರು. ಸಿಗರೇಟ್ ಮತ್ತು ಇತರ ತಂಬಾಕು ಪದಾರ್ಥಗಳ ಕಾಯ್ದೆ(ಕೊಟ್ಪಾ)ಯ ಸಮರ್ಪಕ ಅನುಷ್ಠಾನ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆ(ಐಪಿಎಚ್) ಸಲ್ಲಿಸಿದ್ದ ಮನವಿ ಮೇರೆಗೆ ಅಗ್ನಿ ಮತ್ತು ತುರ್ತಸೇವೆ ಡಿಜಿಪಿ ಸೆ. 22ರಂದು ಈ ಆದೇಶ ಹೊರಡಿಸಿದ್ದಾರೆ. ಕೊಟ್ಪಾದ ಸೆಕ್ಷನ್ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಆ ಪ್ರಕಾರ ಸರ್ಕಾರಿ-ಖಾಸಗಿ ಕಚೇರಿ, ಕಾರ್ಪೆರೇಟ್ ಹೌಸ್, ಶಾಪಿಂಗ್ ಮಾಲ್, ಥಿಯೇಟರ್, ರೆಸ್ಟೋರೆಂಟ್, ಕಾರ್ಖಾನೆ, ಆಸ್ಪತ್ರೆ, ಮನರಂಜನಾ ಕೇಂದ್ರ, ನ್ಯಾಯಾಲಯದ ಕಟ್ಟಡ ಮತ್ತಿತರ ಸಾರ್ವಜನಿಕ ಕಚೇರಿ-ಕಟ್ಟಡಗಳಲ್ಲಿ 'ಧೂಮಪಾನ ನಿಷೇಧಿಸಿದೆ' ಎಂಬ ಫಲಕಗಳನ್ನು ಹಾಕುವುದು ಕಡ್ಡಾಯ. ಧೂಮಪಾನಿಗಳ ಅಚಾತುರ್ಯದಿಂದಾಗುವ ಅಗ್ನಿ ಅನಾಹುತದಲ್ಲಿ ಇತರ ಅಗ್ನಿ ಅನಾಹುತಗಳಲ್ಲಿ ಉಂಟಾಗುವುದಕ್ಕಿಂತ ಹೆಚ್ಚು ಜೀವ ಹಾಗೂ ಸ್ವತ್ತು ಹಾನಿಗಳಾಗಿರುವುದು ಸಮೀಕ್ಷೆಯಿಂದ ಸಾಬೀತಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಅಗ್ನಿ ಅನಾಹುತಗಳಿಗೆ ಧೂಮಪಾನಿಗಳ ಅಚಾತುರ್ಯವೇ ಪ್ರಮುಖ ಕಾರಣವಾಗಿದ್ದು, ಅದರಿಂದ ಪ್ರತಿವರ್ಷ 500-700 ಜನ ಸಾವಿಗೀಡಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಐಪಿಎಚ್-ಕ್ಯಾನ್ಸರ್ ತಡೆ ಯೋಜನೆ ನಿರ್ದೇಶಕ ಡಾ.ಯು.ಎಸ್.ವಿಶಾಲ್​ರಾವ್ ಮಾ. 8ರಂದು ಡಿಜಿ ಅವರಿಗೆ ಮನವಿ ಸಲ್ಲಿಸಿದ್ದರು. ಆದ್ದರಿಂದ ಕಟ್ಟಡದ ಪ್ರವೇಶ, ಲಿಫ್ಟ್​ನ ಪ್ರವೇಶದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 'ಧೂಮಪಾನ ನಿಷೇಧಿಸಿದೆ' ಫಲಕಗಳನ್ನು ಹಾಕಲೇಬೇಕು ಎಂದು ನಿರಾಕ್ಷೇಪಣಾ ಪತ್ರ ನೀಡುವ ಮುನ್ನ ಸೂಚನೆ ನೀಡಬೇಕು ಎಂದು ಅಗ್ನಿ ಮತ್ತು ತುರ್ತಸೇವೆ ಡಿಜಿಪಿ ಆದೇಶಿಸಿದ್ದಾರೆ.

2014: ಮಂಗಳನ ಕಕ್ಷೆಯಲ್ಲಿರುವ ಇಸ್ರೋದ ಮಂಗಳ ಯಾನ ಬಾಹ್ಯಾಕಾಶ ನೌಕೆ ಕೆಂಪು ಗ್ರಹದ ನೂತನ ಚಿತ್ರಗಳನ್ನು ಕಳಿಹಿಸಿತು. ಮಂಗಳ ಗ್ರಹದಲ್ಲಿ ಧೂಳಿನ ಸುನಾಮಿ ಬೀಸುತ್ತಿರುವ ದೃಶ್ಯ ಸೆರೆ ಹಿಡಿಯುವಲ್ಲಿ ನೌಕೆ ಯಶಸ್ವಿಯಾಯಿತು.. ಈ ಚಿತ್ರಗಳನ್ನು 74,500 ಕಿ.ಮೀ. ಎತ್ತರದಿಂದ ಕ್ಲಿಕ್ಕಿಸಲಾಯಿತು. ಮಂಗಳನ ಅಧ್ಯಯನಕ್ಕೆ ಈ ಚಿತ್ರ ಸಹಕಾರಿಯಾಗಲಿದೆ ಎಂದು ಇಸ್ರೋ ತಿಳಿಸಿತು.

2014: ಬೆಂಗಳೂರು: ಕನ್ನಡಿಗ ಅಥ್ಲೀಟ್ ವಿಕಾಸ್ ಗೌಡ ಇಂಚೋನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಗೇಮ್ಸ್​ನ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಕಳೆದ ತಿಂಗಳಷ್ಟೆ ಗ್ಲಾಸ್ಗೋನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಸಂಭ್ರಮ ಅನುಭವಿಸಿದ್ದ ವಿಕಾಸ್ ಗೌಡ ಏಷ್ಯನ್ ಗೇಮ್ಸ್​ನಲ್ಲಿ 62.58 ಮೀಟರ್ ದೂರಕ್ಕೆ ಎಸೆದು ಬೆಳ್ಳಿ ಪದಕ ಸಂಪಾದಿಸಿದರು. ಒಲಿಂಪಿಕ್ ಕಂಚಿನ ಪದಕ ವಿಜೇತ ಇರಾನ್​ನ ಇಹ್ಸಾನ್ ಹದಾದಿ 65.11 ಮೀಟರ್ ದೂರಕ್ಕೆಸೆದು ಚಿನ್ನ ಗೆದ್ದರೆ, ಇನ್ನೊಬ್ಬ ಇರಾನಿಯನ್ ಮೊಹಮ್ಮದ್ ಅಹಮ್ಮದ್ ದಾಹೀಬ್ 61.25 ಮೀಟರ್ ದೂರಕ್ಕೆಸೆದು ಕಂಚು ಗೆದ್ದರು.


2014: ಇಂಚೋನ್: ಭಾರತದ ಬಾಕ್ಸರ್ ಪೂಜಾ ರಾಣಿ ಏಷ್ಯನ್ ಗೇಮ್ಸ್​ನ 69-75ಕೆಜಿ ಮಿಡಲ್​ವೇಟ್ ಮಹಿಳಾ ವಿಭಾಗದ ಸೆಮಿಫೈನಲ್​ನಲ್ಲಿ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಪೂಜಾ 02 ಅಂತರದಿಂದ ಚೀನಾದ ಲಿ ಕ್ವಿಯಾನ್ ವಿರುದ್ಧ ಸೋಲನುಭವಿಸಿದರು. ಪುರುಷರ ವಿಭಾಗದಲ್ಲಿ ಸತೀಶ್ ಕುಮಾರ್ 91ಕೆಜಿಗಿಂತ ಮೇಲ್ಪಟ್ಟ ಸೂಪರ್ ಹೆವಿವೇಟ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಕ್ವಾರ್ಟರ್ ಫೈನಲ್​ನಲ್ಲಿ 2-1 ಅಂತರದಿಂದ ಜೋರ್ಡನ್ಸ್ ಹುಸೈನ್ ವಿರುದ್ಧ ಜಯ ಸಾಧಿಸಿದರು. ಇದಕ್ಕೂ ಮೊದಲ ಹಣಾಹಣಿಯಲ್ಲಿ ಶಿವ ಥಾಪಾ 56ಕೆಜಿ ಬ್ಯಾಂಟಮ್ೇಟ್ ವಿಭಾಗದ ಕ್ವಾರ್ಟರ್​ಫೈನಲ್​ನಲ್ಲಿ ಪರಾಭವಗೊಂಡರು. ಹಾಕಿಯಲ್ಲಿ ಫೈನಲ್​ಗೆ: ಆಕಾಶ್​ದೀಪ್ ಸಿಂಗ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಏಷ್ಯಾಡ್ ಫೈನಲ್ ಪ್ರವೇಶಿಸಿತು. ಕೊರಿಯಾ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಕಳೆದ 12 ವರ್ಷಗಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. 

2008: ಜೋಧಪುರ ಸಮೀಪದ ಮೆಹರಂಗಢ ಮೇಲಿನ ಕೋಟೆಯಲ್ಲಿನ ಚಾಮುಂಡಾ ದೇವಿ ದೇವಸ್ಥಾನದ ಬಳಿ ಬೆಳಗಿನ ಜಾವ 5.30ರ ಸುಮಾರಿಗೆ ಸಂಭವಿಸಿದ ಭಾರಿ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಕನಿಷ್ಠ 177 ಜನರು ಮೃತರಾದರು. ದೇವಾಲಯದಿಂದ ಕೇವಲ 150 ಅಡಿ ದೂರದಲ್ಲೇ ಸಂಭವಿಸಿದ ಈ ಹೃದಯವಿದ್ರಾವಕ ದುರಂತದಲ್ಲಿ ಸುಮಾರು 300 ಜನರು ಗಾಯಗೊಂಡರು. ನವರಾತ್ರಿ ಪೂಜೆಯ ಮೊದಲ ದಿನದ ನಿಮಿತ್ತ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಸಹಸ್ರಾರು ಭಕ್ತರು ಬೆಟ್ಟದ ಮೇಲೆ ಸಾಲುಗಟ್ಟಿ ನಿಂತ್ದಿದರು. ಶರದೃತುವಿನ ಸುಕೋಮಲ ವಾತಾವರಣದಲ್ಲಿ ಬೆಟ್ಟದ ಮೇಲಿನ ದೇವಾಲಯದಿಂದ ಪ್ರಾತಃಕಾಲದ ಮಂತ್ರಘೋಷಗಳು ಮೊಳಗುತ್ತಿದ್ದವು. ಆದರೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಪೂಜೆ ಮುಗಿಸಿಕೊಂಡು ದೇವಸ್ಥಾನದಿಂದ ಮರಳುವಾಗ ಆತುರ ತೋರಿದ್ದೇ ದುರ್ಘಟನೆಗೆ ಕಾರಣವಾಯಿತು.
ಈ ಹಿಂದಿನ ಭಕ್ತರ ಸಾವಿನ ಸರಮಾಲೆಗಳ ದಾಖಲೆಗಳು ಈ ಕೆಳಗಿನಂತಿವೆ: (ಆಗಸ್ಟ್ 27, 2003: ಮಹಾರಾಷ್ಟ್ರದ ನಾಸಿಕ್ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತಕ್ಕೆ ಸಿಕ್ಕಿ 39 ಜನರ ಸಾವು, ಜನವರಿ 25, 2005: ಮಹಾರಾಷ್ಟ್ರದ ಮಾಂಧ್ರಾ ದೇವಾಲಯದಲ್ಲಿ ಸಾಂಪ್ರದಾಯಿಕ ವಾರ್ಷಿಕೋತ್ಸವದಲ್ಲಿ ಉಂಟಾದ ಕಾಲ್ತುಳಿತಕ್ಕೆ 340 ಜನರ ಮೃತ್ಯು, ಆಗಸ್ಟ್ 3, 2008: ಹಿಮಾಚಲ ಪ್ರದೇಶದ ನೈನಾ ದೇವಿ ದೇಗುಲದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 162 ಜನರ ಸಾವು. 47 ಜನಕ್ಕೆ ಗಾಯ. ಮೇಲಿನಿಂದ ಬಂಡೆ ಉರುಳಿ ಬೀಳುತ್ತಿದೆ ಎಂಬ ವದಂತಿಯೇ ದುರ್ಘಟನೆಗೆ ಕಾರಣ., ಆಗಸ್ಟ್ 10, 2008: ರಾಜಸ್ಥಾನದ ಕೋಟಾ ಜಿಲ್ಲೆಯ ಮಹಾದೇವ ದೇಗುಲಕ್ಕೆ ಸಾಗುವಾಗ ಉಂಟಾದ ಇಕ್ಕಟ್ಟಿನಲ್ಲಿ ಇಬ್ಬರು ಭಕ್ತರ ಸಾವು.)

2008: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಮರ ಸಾರಿದ ರಾಜ್ಯ ಸರ್ಕಾರ ಅವರ ಅವಧಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದ ಮೂರು ನಿರ್ಣಯಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಧರಿಸಿತು. ಈ ವಿಷಯವನ್ನು ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸವರಾಜ ಬೊಮ್ಮಾಯಿ ಮತ್ತು ಅರವಿಂದ ಲಿಂಬಾವಳಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಇತ್ತೀಚೆಗಷ್ಟೇ ಮೇವರಿಕ್ ಸಂಸ್ಥೆಗೆ ರಾಜ್ಯ ಸರ್ಕಾರ ನೀಡಿದ್ದ ಈಜಿಪುರ ವಸತಿ ಯೋಜನೆಯನ್ನೂ ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಧರಿಸಲಾಯಿತು. ಅಲ್ಲದೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಂಜೂರಾತಿ ನೀಡಿದ್ದ `ಗರುಡಾ ಮಾಲ್' ಕೂಡ ತನಿಖೆ ವ್ಯಾಪ್ತಿಗೆ ಸೇರುವುದು ಎಂದು ಅವರು ಹೇಳಿದರು.

2008: ಶ್ರೀಲಂಕಾದ ಉತ್ತರ ತೀರಕ್ಕೆ ಸಮೀಪದಲ್ಲಿ ಲಂಕಾ ಸೇನೆ ಮತ್ತು ಎಲ್ ಟಿ ಟಿ ಇ ನೌಕಾ ವಿಭಾಗ `ಸೀ ಟೈಗರ್ಸ್' ಮಧ್ಯೆ ಸಮುದ್ರದಲ್ಲಿ ಸಂಭವಿಸಿದ ಕಾಳಗದಲ್ಲಿ ಬಂಡುಕೋರರ ಎರಡು ದೋಣಿಗಳು ಧ್ವಂಸವಾಗಿ, ಎಂಟುಮಂದಿ ಸಾವನ್ನಪ್ಪಿದರು. ಇದೇ ಸಂದರ್ಭದಲ್ಲಿ ಲಂಕಾ ಸೇನೆ ಉತ್ತರ ಭಾಗದ ವಿವಿಧ ಕಡೆ ನಡೆಸಿದ ದಾಳಿಯಲ್ಲಿ 45 ಮಂದಿ ಉಗ್ರರು ಮೃತರಾದರು. ಐವರು ಸೈನಿಕರೂ ಸಾವನ್ನಪ್ಪಿದರು.

2008: ಮಧ್ಯಪ್ರಾಚ್ಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಥಾಚಿತ್ರ ವಿಭಾಗಕ್ಕೆ ಏಕೈಕ ಭಾರತೀಯ ಚಲನಚಿತ್ರವಾಗಿ ಗಿರೀಶ್ ಕಾಸರವಳ್ಳಿ ಅವರ `ಗುಲಾಬಿ ಟಾಕೀಸ್' ಪ್ರವೇಶ ಪಡೆಯಿತು. 2 ಲಕ್ಷ ಡಾಲರ್ ಮೌಲ್ಯದ `ಬ್ಲಾಕ್ ಪರ್ಲ್' ಪ್ರಶಸ್ತಿಗಾಗಿ ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ, ಯೂರೋಪ್ ಹಾಗೂ ಅಮೆರಿಕದ ಇತರ 15 ಚಲನ ಚಿತ್ರಗಳೊಂದಿಗೆ ಈ ಚಿತ್ರ ಸ್ಪರ್ಧಿಸುವುದು.

2007: ಕರ್ನಾಟಕದ 209 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಜನತಾ ದಳ (ಎಸ್) ಅನಿರೀಕ್ಷಿತವಾಗಿ ಭರ್ಜರಿ ಗೆಲುವು ಸಾಧಿಸಿತು. ಆರು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ಸಿಗೆ ತೀವ್ರ ಮುಖಭಂಗವಾಯಿತು. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಬಿಜೆಪಿ ಕಳೆದ ಸಲಕ್ಕಿಂತ ದುಪ್ಪಟ್ಟು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಬಹುಮತ ಪಡೆದಿರುವ ಲೆಕ್ಕದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ಚುನಾವಣೆ ನಡೆದ ಆರು ಮಹಾನಗರ ಪಾಲಿಕೆಗಳ ಪೈಕಿ 3ರಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆಯಿತು. ಎರಡರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಯಿತು. 44 ನಗರಸಭೆಗಳ ಪೈಕಿ ತಲಾ 11ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದವು.

 2007: ಬೆಂಗಳೂರು ನಗರದ ಇನ್ ಫೆಂಟ್ರಿ ರಸ್ತೆಯಲ್ಲಿ ನಿರ್ಮಿಸಲಾದ ನೂತನ 'ವಾರ್ತಾ ಸೌಧ' ಕಟ್ಟಡವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಉದ್ಘಾಟಿಸಿದರು.

2007: ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿದ ಇಂಗ್ಲೆಂಡ್ ಈ ಸಂಬಂಧ ಹೊಸ ಕಾನೂನನ್ನು ಜಾರಿ ತರುವುದಾಗಿ ಪ್ರಕಟಿಸಿತು. ಈ ಕಾನೂನಿನ ಅನ್ವಯ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ರಕ್ಷಣೆ ದೊರೆಯಲಿದೆ. ಸಿಖ್ ಹಾಗೂ ಯಹೂದಿಗಳಿಗೆ ಈಗಾಗಲೇ ಈ ರಕ್ಷಣೆ ನೀಡಲಾಗಿದೆ.

2007: ಭಾರತೀಯರಿಗೆ ಚಿಕ್ಕ ವಯಸ್ಸಿನಲ್ಲೇ ಕಾಡುವ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಅದರಿಂದ ಉಂಟಾಗುವ ಸಾವಿನ ಪ್ರಮಾಣ ಕುರಿತು ಆತಂಕ ವ್ಯಕ್ತಪಡಿಸಿದ ಹೃದಯ ತಜ್ಞರು, ಈ ಕುರಿತು ಜಾಗೃತಿ ಮೂಡಿಸಲು ಜನರಿಗೆ ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಧ್ಯಾನದ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಸಲಹೆ ನೀಡಿದರು. ಜಗತ್ತಿನಲ್ಲಿ ಹೃದಯ ರೋಗದಿಂದ ಸಾವನ್ನಪ್ಪುವ 7ಮಂದಿಯ ಪೈಕಿ ಒಬ್ಬ ಭಾರತೀಯನಾಗಿರುತ್ತಾನೆ. ಬೊಜ್ಜು, ಧೂಮಪಾನ, ಮಧುಮೇಹ, ಅತಿ ರಕ್ತದೊತ್ತಡದಿಂದಾಗಿ ಪ್ರತಿ ನಿಮಿಷಕ್ಕೆ ಕನಿಷ್ಠ ನಾಲ್ಕು ಭಾರತೀಯ ಹೃದಯ ರೋಗಿಗಳು ಸಾವನ್ನಪ್ಪುತ್ತಾರೆ. ಭಾರತದಲ್ಲಿ 40 ಲಕ್ಷ ಜನರು ಹೃದಯರೋಗಗಳಿಂದ ಸಾವನ್ನಪ್ಪುತ್ತಾರೆ. ಅವರಲ್ಲಿ 25 ಲಕ್ಷ ಜನರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಹೃದಯಾಘಾತಕ್ಕೀಡಾಗಿ ಸಾಯುತ್ತಾರೆ. ಭಾರತದಲ್ಲಿ ಹೃದಯಘಾತಕ್ಕೀಡಾಗುವ ಪುರುಷರ ಸರಾಸರಿ ವಯಸ್ಸು 55 ಇದ್ದರೆ, ಮಹಿಳೆಯರಿಗೆ 56 ವರ್ಷ ಎಂಬುದು ಡಾ. ಅಗರ್ ವಾಲ್ ಅಂಕಿ ಅಂಶ. ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರದಂತಿರಲು ಮಾನವ ದೇಹದಲ್ಲಿನ ಗ್ಲೈಕೊಸೊಲೇಟ್ ಹಿಮೊಗ್ಲೊಬಿನ್ ಪ್ರಮಾಣ ಶೇ. 6.5ಕ್ಕಿಂತ ಕಡಿಮೆ ಇರಬೇಕು. ಎಲ್ ಡಿ ಎಲ್ ಅಥವಾ ಕೊಲೆಸ್ಟ್ರಾಲ್ ಪ್ರಮಾಣ 100ಕ್ಕಿಂತ ಜಾಸ್ತಿ ಇರಬಾರದು. ರಕ್ತದೊತ್ತಡದ ಪ್ರಮಾಣ 120/80ಗಿಂತ ಕಡಿಮೆ ಇರಬೇಕು. ಪುರುಷರ ಹೊಟ್ಟೆಯ ಸುತ್ತಳತೆ 35 ಅಂಗುಲಕ್ಕಿಂತ ಹಾಗೂ ಮಹಿಳೆಯರ ಹೊಟ್ಟೆಯ ಸುತ್ತಳತೆ  32 ಅಂಗುಲಕ್ಕಿಂತ ಹೆಚ್ಚಿರಬಾರದು ಎಂಬುದು ತಜ್ಞರ ಸಲಹೆ. ಮೇಲಿನ ಅಳತೆಗೋಲನ್ನು ಹೊಂದಲು ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಅವಶ್ಯಕ. ಆಹಾರದಲ್ಲಿ ಸಂಸ್ಕರಿತ ಕಾರ್ಬೊಹೈಡ್ರೇಟ್ ಮತ್ತು ಕೊಬ್ಬಿನ ಅಂಶ ಕಡಿಮೆ ಇರಬೇಕು. ಕಡಿಮೆ ಆಹಾರ, ನಾರಿನಾಂಶವುಳ್ಳ ಆಹಾರ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ಜೊತೆಗೆ ದೇಹಕ್ಕೆ ಪ್ರತಿನಿತ್ಯ ನಿಯಮಿತ ಪ್ರಮಾಣದ ವ್ಯಾಯಾಮ ಮತ್ತು ಒತ್ತಡ ಕಡಿಮೆಗೊಳಿಸಲು ಯೋಗ-ಧ್ಯಾನ ಅಗತ್ಯ ಎಂಬುದು ತಜ್ಞರ ಕಿವಿಮಾತು.

2006: ಝೆಕ್ ಗಣರಾಜ್ಯದ ಸುಂದರಿ, ಕ್ರೀಡಾಪಟು ಟಟನಾ ಕುಚರೋವಾ ಅವರು ಈ ರಾತ್ರಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ 2006ರ ಸಾಲಿನ `ವಿಶ್ವಸುಂದರಿ' ಪ್ರಶಸ್ತಿಗೆ ಪಾತ್ರರಾಗಿ, ಝೆಕ್ ಗಣರಾಜ್ಯಕ್ಕೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಈ ಕಿರೀಟವನ್ನು ತಂದು ಕೊಟ್ಟರು. 200 ರಾಷ್ಟ್ರಗಳಿಂದ ಆಗಮಿಸಿದ್ದ ಭಾರಿ ಸಂಖ್ಯೆಯ ವೀಕ್ಷಕರ ಎದುರಲ್ಲಿ ಅಂತಿಮ ಸ್ಪರ್ಧೆಯಲ್ಲಿ ಟಟನಾ ಕುಚರೋವಾ `ವಿಶ್ವಸುಂದರಿ' ಕಿರೀಟವನ್ನು ಧರಿಸಿದರು. 18ರ ಹರೆಯದ ಕುಚರೋವಾ ಅವರು ರೊಮಾನಿಯಾದ ಐವೊನಾ ವ್ಯಾಲೆಂಟಿನಾ, ಆಸ್ಟ್ರೇಲಿಯಾದ ಸಬ್ರೀನಾ ಹೌಸ್ಸಮಿ, ಆಂಗೋಲಾದ ಸ್ಟಿವಿಂದ್ರಾ ಒಲಿವೀರಾ, ಬ್ರೆಜಿಲ್ಲಿನ ಜಾನೆ ಸೌಸಾ ಬೋರ್ಗೆಸ್ ಒಲಿವೀರಾ ಮತ್ತು ಜಮೈಕಾದ ಸಾರಾ ಲಾರೆನ್ಸ್ ಅವರನ್ನು ಅಂತಿಮ ಸುತ್ತಿನಲ್ಲಿ ಹಿಂದಿಕ್ಕಿದರು. ಭಾರತದ ಸುಂದರಿ ಮುಂಬೈಯ ನತಾಶಾ ಸುರಿ ಸೇರಿದಂತೆ ಒಟ್ಟು 102 ಮಂದಿ ಸ್ಪರ್ಧಿಗಳು ಈ ಸಲ ಕಣದಲ್ಲಿ ಇದ್ದರು. ನತಾಶಾ ಸುರಿ ಅವರು 6ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

2006: ಮುಂಬೈ ಮಹಾನಗರದ ಉಪನಗರ ರೈಲುಗಳಲ್ಲಿ ಜುಲೈ 11ರಂದು ನಡೆದ ಬಾಂಬ್ ಸ್ಫೋಟಗಳ ಹಿಂದಿನ ಸಂಚನ್ನು ಭೇದಿಸಿರುವುದಾಗಿ ಪೊಲೀಸರು ಪ್ರಕಟಿಸಿದರು. ಪಾಕಿಸ್ಥಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ) ಕೈವಾಡ ಇರುವುದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದರು. ಪೊಲೀಸರ ಪ್ರಕಾರ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ ಎಸ್ ಐ, ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರ ನೆರವಿನಿಂದ ಒಟ್ಟು ಏಳು ರೈಲುಗಳಲ್ಲಿ ಈ ಬಾಂಬ್ ಸ್ಫೋಟಗಳನ್ನು ನಡೆಸಲಾಯಿತು.

2006: ಇರಾನಿನ ಮೊತ್ತ ಮೊದಲ ತದ್ರೂಪಿ ಜೀವಂತ ಕುರಿಮರಿ ಜನಿಸಿದೆ ಎಂದು ಇರಾನಿ ವಿಜ್ಞಾನಿಗಳು ಪ್ರಕಟಿಸಿದರು. ಇಸ್ಫಹಾನ್ ನಗರದ ರೊವುಯನ ಸಂಶೋಧನಾ ಕೇಂದ್ರದಲ್ಲಿ ಈ ತದ್ರೂಪಿ ಜೀವಂತ ಕುರಿಮರಿಯ ಜನನವಾಗಿದೆ ಎಂದು ಅವರು ಹೇಳಿದರು. ಕಳೆದ ಜುಲೈಯಲ್ಲಿ ಇರಾನಿನ ಪ್ರಥಮ ತದ್ರೂಪಿ ಕುರಿಮರಿ ಜನಿಸಿರುವುದಾಗಿ ವಿಜ್ಞಾನಿಗಳು  ಪ್ರಕಟಿಸಿದ್ದರು. ಆದರೆ ಆ ಮರಿ ಹುಟ್ಟಿದ ಕೆಲ ಕ್ಷಣಗಳಲ್ಲೇ ಸತ್ತಿತ್ತು. ಜಗತ್ತಿನ ಮೊತ್ತ ಮೊದಲ ತದ್ರೂಪಿ ಕುರಿಮರಿ `ಡಾಲಿ' ಸೃಷ್ಟಿಗೆ ಬಳಸಿದ ತಂತ್ರಜ್ಞಾನವನ್ನೇ ಬಳಸಿ ಇರಾನಿನಲ್ಲಿ ತದ್ರೂಪಿ ಕುರಿಮರಿ ಸೃಷ್ಟಿಸಲಾಗಿದೆ.

2005: `ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಚರ್ಚೆ' ಅಂಗವಾಗಿ  12 ವ್ಯಂಗ್ಯಚಿತ್ರಗಳನ್ನು ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ `ಜಿಲ್ಲಾಂಡ್ಸ್- ಪೋಸ್ಟೆನ್' ಪ್ರಕಟಿಸಿತು. ಈ ವ್ಯಂಗ್ಯಚಿತ್ರಗಳು ಹಲವಾರು ಐರೋಪ್ಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಮರುಮುದ್ರಣಗೊಂಡದ್ದಲ್ಲದೆ, ಇಟಲಿಯ ಸುಧಾರಣಾ ಸಚಿವ ರಾಬರ್ಟೊ ಕಾಲ್ಡೆರೋಲಿ ಅವರ ಟೀಶರ್ಟಿನಲ್ಲೂ ಮುದ್ರಣಗೊಂಡಿತು. ಪ್ರವಾದಿ ಮಹಮ್ಮದರ ಬಗೆಗಿನ ಈ ವ್ಯಂಗ್ಯಚಿತ್ರಗಳಿಗೆ ವಿಶ್ವದಾದ್ಯಂತ ಮುಸ್ಲಿಮರ ವಿರೋಧ- ಪ್ರತಿಭಟನೆ ವ್ಯಕ್ತಗೊಂಡು ಕೊನೆಗೆ ಪತ್ರಿಕೆಯು ಕ್ಷಮೆ ಯಾಚನೆ ಮಾಡುವುದರೊಂದಿಗೆ ವಿವಾದವು 2006 ಫೆಬ್ರುವರಿಯಲ್ಲಿ ಅಂತ್ಯಗೊಂಡಿತು. ಈ ಅವಧಿಯಲ್ಲಿ ವಿವಿಧೆಡೆ ಸಂಭವಿಸಿದ ಹಿಂಸಾಚಾರಕ್ಕೆ 32 ಮಂದಿ ಬಲಿಯಾದರು. ವಿವಾದದ ಹಿನ್ನೆಲೆಯಲ್ಲಿ ಇಟಲಿಯ ಸಚಿವ ರಾಬರ್ಟೊ ರಾಜೀನಾಮೆ ನೀಡಬೇಕಾಯಿತು.

2000: ವಿಶ್ವ ಸುಂದರಿಯಾಗಿ ಭಾರತದ ಪ್ರಿಯಾಂಕಾ ಚೋಪ್ರಾ ಆಯ್ಕೆ.

1996: ತಮಿಳುನಾಡು ಸರ್ಕಾರವು `ಮದ್ರಾಸ್' ಹೆಸರನ್ನು ಬದಲಾಯಿಸಿ `ಚೆನ್ನೈ` ಎಂಬುದಾಗಿ ಮರು ನಾಮಕರಣ ಮಾಡುವ ನಿರ್ಧಾರವನ್ನು ಕೈಗೊಂಡಿತು.

1980: ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜನನ.

1961: ಮದ್ರಾಸಿನ (ಈಗಿನ ಚೆನ್ನೈ) ನೆಹರೂ ಸ್ಟೇಡಿಯಮ್ಮಿನಲ್ಲಿ ದುಲೀಪ್ ಟ್ರೋಫಿಗಾಗಿ ಮೊತ್ತ ಮೊದಲ ಅಂತರ್ ವಲಯ ಕ್ರಿಕೆಟ್ ಕ್ರೀಡಾಕೂಟದ ಮೊದಲ ಪಂದ್ಯ ಉತ್ತರ ವಲಯ ಮತ್ತು ದಕ್ಷಿಣ ವಲಯದ ಮಧ್ಯೆ ಆರಂಭವಾಯಿತು. ಉತ್ತರ ವಲಯದ ಸುರೇಂದ್ರನಾಥ್ ಮೊದಲ ಚೆಂಡನ್ನು ದಕ್ಷಿಣ ವಲಯದ ಎಂ.ಎಲ್. ಜಯಸಿಂಹರತ್ತ ಎಸೆದರು. ಕ್ರಿಕೆಟಿನ ಮಹಾನ್ ಆಟಗಾರ ರಣಜಿತ್ ಸಿನ್ಹಜಿ ಅವರ ಅಳಿಯ ಕೇಂಬ್ರಿಜ್ ಮತ್ತು ಸಸೆಕ್ಸಿನಲ್ಲಿ ಆಡಿದ್ದ ಕೆ.ಎಸ್. ದುಲೀಪ್ ಸಿನ್ಹಜಿ ಗೌರವಾರ್ಥ ದುಲೀಪ್ ಟ್ರೋಫಿಯನ್ನು ಆರಂಭಿಸಲಾಯಿತು.

1955: ಕ್ಯಾಲಿಫೋರ್ನಿಯಾದ ಕೊಲೇಮಿನಲ್ಲಿ ಎರಡು ಕಾರುಗಳ ಮಧ್ಯ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಚಿತ್ರನಟ ಜೇಮ್ಸ್ ಡೀನ್ (24) ಸಾವನ್ನಪ್ಪಿದರು.

1954: ಅಮೆರಿಕನ್ ನೌಕಾಪಡೆಯ ಮೊತ್ತ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ `ನಾಟಿಲಸ್' ಕಾರ್ಯಾರಂಭ ಮಾಡಿತು.

1947: ಸಾಹಿತಿ ಸು. ರಂಗಸ್ವಾಮಿ ಜನನ.

1943: ಲೇಖಕ ರಮಾನಂದ ಚಟ್ಟೋಪಾಧ್ಯಾಯ ನಿಧನ.

1933: ಸಾಹಿತಿ ಡಾ. ನಿರುಪಮಾ ಜನನ.

1922: ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ಜನ್ಮದಿನ.

1921: ಸಾಹಿತಿ ವರದರಾಜ ಅಯ್ಯಂಗಾರ್ ಜನನ.

1914: ಸಾಹಿತಿ ಟಿ.ಜಿ. ಸಿದ್ದಪ್ಪಾಜಿ ಜನನ.

1908: ರಾಮ್ ಧಾರಿ ಸಿಂಗ್ (1908-74) ಜನ್ಮದಿನ. ಖ್ಯಾತ ಹಿಂದಿ ಕವಿಯಾಗಿದ್ದ ಇವರು `ದಿನಕರ್' ಎಂದೇ ಪರಿಚಿತರಾಗಿದ್ದರು.

1900: ಎಂ.ಸಿ. ಛಾಗ್ಲಾ (1900-81) ಜನ್ಮದಿನ. ಇವರು ಖ್ಯಾತ ನ್ಯಾಯವಾದಿ, ಶಿಕ್ಷಣ ತಜ್ಞ, ರಾಜತಾಂತ್ರಿಕ ಹಾಗೂ ಕೇಂದ್ರ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದರು.

1894: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ನೇತಾರ, ಸಾಹಿತಿ, ಪತ್ರಕರ್ತ ರಂಗರಾವ್ ರಾಮಚಂದ್ರ ದಿವಾಕರ (ಆರ್. ಆರ್. ದಿವಾಕರ) (30-9-1894ರಿಂದ 15-1-1990) ಅವರು ರಾಮಚಂದ್ರ- ಸೀತಾ ದಂಪತಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ ಪತ್ರಿಕೆಗಳ ಸ್ಥಾಪಕ ಸಂಪಾದಕರಾಗಿದ್ದ ಇವರು ಆಗಮ ಮತ್ತು ತಾಂತ್ರಿಕ ಪರಂಪರೆಯನ್ನು ಅಭ್ಯಸಿಸಿ ಭಗವದ್ಗೀತೆ, ಉಪನಿಷತ್ತುಗಳಿಗೆ ಸಂಬಂಧಿಸಿದಂತೆಯೂ ಗ್ರಂಥಗಳನ್ನು ರಚಿಸಿದ್ದಾರೆ.

1881: ಖ್ಯಾತ ಸಂಗೀತ ವಿದ್ವಾಂಸ, ಸಮಾಜ ಸೇವಕ ರಾಜಾ ಅಣ್ಣಾಮಲೈ ಚೆಟ್ಟಿಯಾರ್ ಜನನ.

1846: ಈಥರನ್ನು ಮೊತ್ತ ಮೊದಲ ಬಾರಿಗೆ ಅರಿವಳಿಕೆಯಾಗಿ ಹಲ್ಲು ತೆಗೆಯಲು ಬಳಸಲಾಯಿತು.

1452: ಜೋಹಾನ್ಸ್ ಗುಟನ್ ಬರ್ಗಿನಲ್ಲಿ ಮೊದಲ ಪುಸ್ತಕವಾಗಿ ಬೈಬಲ್ ಪ್ರಕಟವಾಯಿತು.

1773: ಭಾರತೀಯ ಸೇನೆಯ ಅತ್ಯಂತ ಹಳೆಯ ತುಕಡಿಯನ್ನು ವಾರನ್ ಹೇಸ್ಟಿಂಗ್ಸ್ ವಾರಣಾಸಿಯಲ್ಲಿ `ಗವರ್ನರ್ಸ್ ಟ್ರೂಪ್ಸ್ ಆಫ್ ಮೊಘಲ್ಸ್' ಹೆಸರಿನಲ್ಲಿ ಆರಂಭಿಸಿದ. ಈ ತುಕಡಿಗಳು ಶಾಂತಿಕಾಲದಲ್ಲಿ ಗವರ್ನರ್ ಜನರಲ್ ನ ಅಂಗರಕ್ಷಕ ಪಡೆಯಾಗಿಯೂ, ಸಮರ ಕಾಲದಲ್ಲಿ ಕಮಾಂಡರ್- ಇನ್- ಚೀಫ್ ಜೊತೆಗೂ ಸೇವೆ ಸಲ್ಲಿಸಿದವು. ಮುಂದೆ ಇದು `ಪ್ರೆಸಿಡೆಂಟ್ಸ್ ಬಾಡಿ ಗಾರ್ಡ್' ಆಗಿ ಖ್ಯಾತಿ ಪಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, September 29, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 29

ಇಂದಿನ ಇತಿಹಾಸ

ಸೆಪ್ಟೆಂಬರ್ 29
ಎರಡು ಕೋಟಿ ಡಾಲರ್ (ಸುಮಾರು 90 ಕೋಟಿ ರೂಪಾಯಿ) ಶುಲ್ಕ ತೆತ್ತು ಅಂತರಿಕ್ಷ ಯಾತ್ರೆ ಕೈಗೊಂಡಿದ್ದ ಇರಾನ್ ಮೂಲದ ಮಹಿಳೆ ಅನೌಷಿ ಅನ್ಸಾರಿ ಈದಿನ ಬೆಳಗ್ಗೆ ಸುರಕ್ಷಿತವಾಗಿ ಧರೆಗೆ ವಾಪಸಾದರು. ಈ ಮೂಲಕ ಕುತೂಹಲಕ್ಕೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅನೌಷಿ ಪಾತ್ರರಾದರು.

2014: ಚೆನ್ನೈ: ತಮಿಳುನಾಡಿನ ಹಣಕಾಸು ಸಚಿವ ಒ. ಪನ್ನೀರ್​ಸೆಲ್ವಂ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರೋಸಯ್ಯ ಅವರು ಸೆಲ್ವಂ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಹಿಂದಿನ ದಿನ ಸಂಜೆ ಏಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ 63ರ ಹರೆಯದ ಪನ್ನೀರ್​ಸೆಲ್ವಂ ಅವರು, ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಶಿಕ್ಷಿತರಾಗಿ ಸೆರೆಮನೆ ಸೇರಿದ ಜೆ. ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು. ಥೇಣಿ ಜಿಲ್ಲೆಯ ರೈತರಾದ ಪನ್ನೀರ್​ಸೆಲ್ವಂ ಅಥವಾ ಪಕ್ಷದಲ್ಲಿ ಒಪಿಎಸ್ ಎಂದೇ ಪರಿಚಿತರಾದ ಅವರು ಜಯಲಲಿತಾ ಅವರ ಕಟ್ಟಾ ಅನುಯಾಯಿ. 1996ರಲ್ಲಿ ಸ್ಥಳೀಯ ಸಂಸ್ಥೆಯೊಂದರ ಮುಖ್ಯಸ್ಥನಾಗಿ ರಾಜಕೀಯ ಪ್ರವೇಶಿಸಿದರು. 2001ರಲ್ಲಿ ಪೆರಿಕುಲಂ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಅವರು ಲೋಕೋಪಯೋಗಿ ಸಚಿವರಾಗಿದ್ದರು. 2001ರಲ್ಲಿ ಈಗಿನಂತಹುದೇ ಸನ್ನಿವೇಶದಲ್ಲಿ ಪನ್ನೀರ್​ಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. 2006ರಲ್ಲಿ ಏಐಎಡಿಎಂಕೆ ಪರಾಭವಗೊಂಡಿದ್ದಾಗ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಭಾನುವಾರ ಪನ್ನೀರ್​ಸೆಲ್ವಂ ಮತ್ತು ಏಐಡಿಎಂಕೆಯ ಇತರ ಕೆಲವು ನಾಯಕರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಜಯಲಲಿತಾ ಅವರನ್ನು ಭೇಟಿ ಮಾಡಿದ್ದರು.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್ ಟೆನಿಸ್ ಫೈನಲ್​ನಲ್ಲಿ ಭಾರತದ ಸನಮ್​ಸಿಂಗ್ ಮತ್ತು ಸಾಕೇತ್​ವೆುೖನೇನಿ ಜೋಡಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಡಬಲ್ಸ್ ಟೆನಿಸ್ ಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಯೊಂಗ್ಕ್ಯೂ ಲಿಮ್​ವುತ್ತು ಹೈಯಿಯೋನ್ ಚುಂಗ್ ಜೋಡಿಯಿಂದ 7-5, 7-6(2-7) ಅಂಕಗಳ ಅಂತರದಲ್ಲಿ ಪರಾಭವಗೊಳ್ಳುವುದರೊಂದಿಗೆ ಭಾರತದ ಜೋಡಿ ಬೆಳ್ಳಿ ಪದಕ್ಕೆ ತೃಪ್ತಿಪಡಬೇಕಾಯಿತು. ಏಷ್ಯಾಡ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಭಜರಂಗ್ ಎರಡು ನಿರ್ಣಾಯಕ ಪಾಯಿಂಟ್ ಗಳಿಸಿಕೊಂಡು ಜಪಾನಿನ ತಕತ್ಸುಕಾ ಓಟಕ್ಕೆ ಬ್ರೇಕ್ ಹಾಕಿ, ಫೈನಲ್ ತಲುಪಿದರು. ಪುರುಷರ ಫ್ರೀಸ್ಟೈಲ್ 61 ಕೆಜಿ ಸ್ಪರ್ಧೆಯಲ್ಲಿ 3-1 ಅಂಕಗಳ ಅಂತರದಲ್ಲಿ ಅವರು ಜಯಗಳಿಸಿ, ಚಿನ್ನದ ಪದಕದ ಮೇಲೆ ಕಣ್ಣಿಟ್ಟರು.

2014: ಇಸ್ಲಾಮಾಬಾದ್: ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಮಾಡಿದ ಭಾಷಣವನ್ನು ಮೀರಿಸಿದೆ. ಮೋದಿ ಭಾಷಣದಲ್ಲಿ ಎಲ್ಲವೂ ಇತ್ತು, ಆದರೆ ಷರೀಫ್ ಭಾಷಣದಲ್ಲಿ ಏನೂ ಇರಲಿಲ್ಲ ಎಂದು ಪಾಕಿಸ್ತಾನಿ ದಿನ ಪತ್ರಿಕೆ 'ಡೈಲಿ ಟೈಮ್ಸ್ ಶ್ಲಾಘಿಸಿತು. 'ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದೊಂದಿಗೆ ಮೋದಿಯವರು ಪಶ್ಚಿಮ ದೇಶಗಳಲ್ಲಿ ತಮ್ಮ ವರ್ಚಸ್ಸು ವೃದ್ಧಿಯನ್ನು ಮುನ್ನಡೆಸಿದ್ದಾರೆ. ಅವರ ಭಾಷಣದಲ್ಲಿ ಎಲ್ಲವೂ ಇತ್ತು, ನವಾಜ್ ಷರೀಪ್ ಭಾಷಣದಲ್ಲಿ ಏನೂ ಇರಲಿಲ್ಲ' ಎಂದು ಡೈಲಿ ಟೈಮ್ಸ್ ತನ್ನ ಸಂಪಾಕೀಯದಲ್ಲಿ ಹೇಳಿತು. ಮೋದಿಯವರು ಭಾರತದ ಪ್ರಾಚೀನ ವೈದಿಕ ಸಂಸ್ಕೃತಿಯನ್ನು ಉಲ್ಲೇಖಿಸುತ್ತಾ ತಮ್ಮ ಭಾಷಣ ಆರಂಭಿಸಿ ಅದರ ಸಾರವನ್ನು ಭಾಷಣದುದ್ದಕ್ಕೂ ಹರಡಿದರು. ನವಾಜ್ ಷರೀಫ್ ಅವರು ಒಂದು ದಿನದ ಹಿಂದಷ್ಟೇ ಮಾಡಿದ್ದ ಭಾಷಣಕ್ಕೆ ಪರಿಣಾಮಕಾರಿಯಾಗಿ ಉತ್ತರ ನೀಡಲು ಮೋದಿ ಅವರು ಈ ಅವಕಾಶವನ್ನು ಬಳಸಿಕೊಂಡರು ಎಂದು ಪತ್ರಿಕೆ ಬರೆಯಿತು. 'ಬಹುಶಃ ಅವರು (ಮೋದಿ) ಅವರ ನಡೆ ಸರಿ. ವಿಶ್ವಸಂಸ್ಥೆ ಗಂಭೀರ ಚರ್ಚೆಯ ವೇದಿಕೆಯಾಗಿಯಷ್ಟೇ ಉಳಿದಿಲ್ಲ. ತಮ್ಮ ರಾಷ್ಟ್ರ ಹಾಗೂ ತಮ್ಮ ವರ್ಚಸ್ಸು ವೃದ್ಧಿಗಾಗಿ ರಾಷ್ಟ್ರಗಳ ಪ್ರಮುಖರಿಗೆ ಅದೊಂದು ಮಾರ್ಗವಾಗಿದೆ' ಎಂದು ಸಂಪಾದಕೀಯ ಹೇಳಿತು. ಭಾರತದ ಆಧ್ಯಾತ್ಮಿಕ ಪರಂಪರೆಗಳನ್ನು ಉಲ್ಲೇಖಿಸುವ ಮೂಲಕ ಮೋದಿ ಅವರು ಅಮೆರಿಕದ ಜನರಿಗೆ ತಾವು ಹೇಳುವುದನ್ನು ಸುಲಭವಾಗಿ ಅರಗಿಸಿದರು. ಷರೀಫ್ ಅವರ ಸಂಕುಚಿತ ದೃಷ್ಟಿಕೋನದ ಭಾಷಣ ಪಾಶ್ಚಾತ್ಯರು ಪಾಕಿಸ್ತಾನದ್ದು ತಪ್ಪುದಾರಿ ಎಂದು ಭಾವಿಸುವಂತೆ ಮಾಡಿತು ಎಂದು ಪತ್ರಿಕೆ ಹೇಳಿತು. 'ಪಾಕಿಸ್ತಾನಕ್ಕೆ ಭಾರತದ್ದೇ ಗೀಳು, ಅದಕ್ಕಿರುವುದು ಪ್ರದೇಶ ವಿಸ್ತರಣೆಯ ಇಚ್ಛೆ ಎಂದು ಪಾಶ್ಚಾತ್ಯರು ಭಾವಿಸುವಂತೆ ಮಾಡಿತು. ಷರೀಫ್ ಭಾಷಣದಲ್ಲಿ ಪ್ರಭಾವ ಬೀರುವಂತಹ ಯಾವುದೇ ಶಕ್ತಿಯೂ ಇರಲಿಲ್ಲ' ಎಂದು ಅದು ಬಣ್ಣಿಸಿತು. ಭಾರತದ ಪ್ರಧಾನಿಯ ಭಾಷಣ ಎಲ್ಲಿಯೂ ಪಾಕಿಸ್ತಾನದ ಬಗ್ಗೆ ನೇರವಾಗಿ ಹೇಳಲಿಲ್ಲ. ಆದರೆ ಅಂತರ್ಗತವಾಗಿತ್ತು ಎಂದೂ ಪತ್ರಿಕೆ ಹೇಳಿತು.

2014: ನ್ಯೂಯಾರ್ಕ್: ವಿಶ್ವಸಂಸ್ಥೆ ಮಹಾಧಿವೇಶನದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ ರಕ್ಷಣಾ ಸಹಕಾರ ಮತ್ತು ಪಶ್ಚಿಮ ಏಷ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಸೃಷ್ಟಿಸಿದ ಪರಿಸ್ಥಿತಿ ಸೇರಿದಂತೆ ವ್ಯಾಪಕ ವಿಷಯಗಳ ಬಗ್ಗೆ ರ್ಚಚಿಸಿದರು. 30 ನಿಮಿಷಗಳ ಮಾತುಕತೆ ಕಾಲದಲ್ಲಿ ಆದಷ್ಟೂ ಶೀಘ್ರದಲ್ಲೇ ಇಸ್ರೇಲ್​ಗೆ ಭೇಟಿ ನೀಡುವಂತೆ ಮೋದಿ ಅವರಿಗೆ ನೆತನ್ಯಾಹು ಆಹ್ವಾನ ನೀಡಿದರು. ಗುಜರಾತಿನ ಮುಖ್ಯಮಂತ್ರಿಯಾಗಿ ಇಸ್ರೆಲ್​ಗೆ ಮೋದಿ ಅವರು ಭೇಟಿ ನೀಡಿದ್ದುದನ್ನು ನೆನಪಿಸಿದ ನೆತನ್ಯಾಹು, ಈಗ ಪ್ರಧಾನಿಯಾಗಿ ಅವರು ಇಸ್ರೇಲ್​ಗೆ ಭೇಟಿ ನೀಡಬಹುದು ಎಂದು ಹಾರೈಸಿದರು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದರು. ಪ್ರಧಾನಿಯವರು ಆಹ್ವಾನವನ್ನು ಗಮನದಲ್ಲಿ ಇಟ್ಟುಕೊಂಡಿದ್ದು, ರಾಜತಾಂತ್ರಿಕ ವಿಧಾನದ ಮೂಲಕ ಈ ಬಗ್ಗೆ ಹೆಚ್ಚಿನ ಮಾತುಕತೆ ನಡೆಸಲಾಗುವುದು ಎಂದು ಅವರು ನುಡಿದರು. ಆರ್ಥಿಕ ಸಹಕಾರ ವೃದ್ಧಿ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಜಲ ನಿರ್ವಹಣೆ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ತನ್ನ ತಜ್ಞರ ನೆರವು ಒದಗಿಸುವ ಕೊಡುಗೆಯನ್ನು ಇಸ್ರೇಲ್ ಮುಂದಿಟ್ಟಿತು ಎಂದು ವಕ್ತಾರರು ವಿವರಿಸಿದರು. ಭಾರತ ಮತ್ತು ಇಸ್ರೇಲ್ ಮಧ್ಯೆ ಉತ್ತಮ ಬಾಂಧವ್ಯ ಇದ್ದು, ಪ್ರಸ್ತುತ 60 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವಹಿವಾಟು ಉಭಯ ರಾಷ್ಟ್ರಗಳ ನಡುವೆ ಇದೆ.

2014: ಕಾಬೂಲ್ (ಆಫ್ಘಾನಿಸ್ಥಾನ): ಆಫ್ಘಾನಿಸ್ಥಾನದ ನೂತನ ಅಧ್ಯಕ್ಷರಾಗಿ ಅಶ್ರಫ್ ಘನಿ ಅಹ್ಮದ್​ಜೈ ಅವರು ಹಮೀದ್ ಕರ್ಜೈ ಅವರ ಸ್ಥಾನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ಜೈ ಅವರು 2001ರಲ್ಲಿ ಅಮೆರಿಕ ನೇತೃತ್ವದ ದಾಳಿಯಲ್ಲಿ ತಾಲಿಬಾನ್ ಆಡಳಿತಕ್ಕೆ ತೆರೆ ಎಳೆದ ಬಳಿಕ ಅಧಿಕಾರಕ್ಕೆ ಬಂದಿದ್ದರು. 2001ರ ಬಳಿಕ ಇದೇ ಮೊದಲ ಬಾರಿಗೆ ಪ್ರಜಾತಾಂತ್ರಿಕವಾಗಿ ಅಧಿಕಾರ ವರ್ಗಾವಣೆಗೊಂಡಿದ್ದು, ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳ ಬಳಿಕ ಚುನಾವಣೆಯಲ್ಲಿ ತಮಗೆ ಪ್ರಬಲ ಎದುರಾಳಿಯಾಗಿದ್ದ ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಮುಖ್ಯ ಕಾರ್ಯನಿರ್ವಾಹಕರನ್ನಾಗಿ ಘನಿ ಅಹ್ಮದ್​ಜೈ ಅವರು ನೇಮಕ ಮಾಡಿದರು. ತನ್ಮೂಲಕ ಚುನಾವಣಾ ಪ್ರಕ್ಷುಬ್ಧತೆ ಶಮನಗೊಳಿಸಲು ಅಧಿಕಾರ ಹಂಚಿಕೊಳ್ಳುವುದಾಗಿ ಮಾಡಿದ್ದ ರಾಜಕೀಯ ಪ್ರತಿಜ್ಞೆಯನ್ನು ಅವರು ಈಡೇರಿಸಿದರು. ಸ್ಪಷ್ಟ ಬಹುಮತ ಬಾರದೇ ಇದ್ದ ಹಿನ್ನೆಲೆಯಲ್ಲಿ ರಾಷ್ಟ್ರದ ಉತ್ತರ ಭಾಗ ಮತ್ತು ದಕ್ಷಿಣ ಭಾಗದಲ್ಲಿ ಹಿಂಸಾಚಾರದ ಸಂಭಾವ್ಯತೆ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನಗೊಳಿಸಲು ಅಧಿಕಾರ ಹಂಚಿಕೊಳ್ಳುವ ಭರವಸೆಯನ್ನು ಘನಿ ಅಹ್ಮದ್​ಜೈ ನೀಡಿದ್ದರು. ಮೊದಲಿಗೆ ಮಾತನಾಡಿದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಅಬ್ದುಲ್ಲಾ ಅವರು ಕರ್ಜೈ ಅವರಿಗೆ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಧನ್ಯವಾದ ಅರ್ಪಿಸಿದರು. ಚುನಾವಣಾ ಪ್ರಕ್ರಿಯೆಯನ್ನೇ ಹಾಳುಗೆಡವಲು ದಾಳಿಯ ಬೆದರಿಕೆ ಹಾಕಿದ್ದ ತಾಲಿಬಾನ್ ಉಗ್ರರ ಬೆದರಿಕೆ ಹೊರತಾಗಿಯೂ ಹೆದರದೇ ಬಂದು ಮತದಾನದಲ್ಲಿ ಪಾಲ್ಗೊಂಡ ಲಕ್ಷಾಂತರ ಸಂಖ್ಯೆಯ ಜನರಿಗೂ ಅವರು ವಂದನೆಗಳನ್ನು ಸಲ್ಲಿಸಿದರು. 'ರಾಷ್ಟ್ರದ ಐಕ್ಯ ಸರ್ಕಾರದಲ್ಲಿ ನಾವು ಒಂದಾಗಿ ಬದ್ಧತೆಯಿಂದ ಕೆಲಸ ಮಾಡುತ್ತೇವೆ. ರಾಷ್ಟ್ರೀಯ ಏಕತೆಗಾಗಿ ಏಕತಂಡವಾಗಿ ಕೆಲಸ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಈಡೇರಿಸುತ್ತೇವೆ' ಎಂದು ಅವರು ನುಡಿದರು. ಶಾಂತಿಯುತವಾಗಿ ಪ್ರಜಾತಾಂತ್ರಿಕ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸಿದ್ದಕ್ಕಾಗಿ ಘನಿ ಅಹ್ಮದ್​ಜೈ ಅವರು ಕರ್ಜೈ ಅವರನ್ನು ಅಭಿನಂದಿಸಿದರು. ರಾಷ್ಟ್ರೀಯ ಐಕ್ಯ ಸರ್ಕಾರ ರಚನೆಯನ್ನು ಸಾಧ್ಯವಾಗಿಸಿದ್ದಕ್ಕಾಗಿ ಅವರು ಅಬ್ದುಲ್ಲಾ ಅವರಿಗೂ ಧನ್ಯವಾದ ಸಲ್ಲಿಸಿದರು.

2014: ಬೆಂಗಳೂರು: ಸೆರೆವಾಸಕ್ಕೆ ಗುರಿಯಾದ ಏಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ಅವರ ಪರವಾಗಿ ವಕೀಲರು ಕರ್ನಾಟಕ ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದರು. ಜೊತೆಗೇ ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರನ್ನು ಅಪರಾಧಿ ಎಂಬುದಾಗಿ ಘೋಷಿಸಿರುವುದಕ್ಕೆ ಮತ್ತು ಶಿಕ್ಷೆಗೆ ತಡೆಯಾಜ್ಞೆ ಕೋರಿದರು. ಜಾಮೀನು ಕೋರಿ ಈದಿನ ಅರ್ಜಿ ಸಲ್ಲಿಸಲಾಗಿದ್ದರೂ, ಅದು ರಜಾಕಾಲೀನ ಪೀಠದ ಮುಂದೆ ಒಂದು ದಿನದ ಬಳಿಕ ಬರುವ ನಿರೀಕ್ಷೆಯಿದೆ. ಈ ಮಧ್ಯೆ ಜಯಲಲಿತಾ ಅವರ ನಿಕಟವರ್ತಿ ಶಶಿಕಲಾ, ಬಂಧುಗಳಾದ ವಿ.ಎನ್. ಸುಧಾಕರನ್ ಮತ್ತು ಇಳವರಸಿ ಅವರೂ ಜಾಮೀನು ಕೋರಿಕೆ ಅರ್ಜಿಯೊಂದಿಗೆ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. 66.65 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶ ಜಾನ್ ಮೈಕೆಲ್ ಡಿ'ಕುನ್ಹಾ ಅವರಿಂದ ಸೆಪ್ಟೆಂಬರ್ 27ರಂದು ಅಪರಾಧಿ ಎಂಬುದಾಗಿ ಘೋಷಿತರಾಗಿ 4 ವರ್ಷಗಳ ಸೆರೆವಾಸಕ್ಕೆ ಜಯಲಲಿತಾ ಗುರಿಯಾಗಿದ್ದರು.

2014: ನವದೆಹಲಿ: ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಅನಂತ ಗೀತೆ ಅವರು ನರೇಂದ್ರ ಮೋದಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಲು ಸಜ್ಜಾಗುವುದರೊಂದಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಣ ಘರ್ಷಣೆ ರೈಸೀನಾ ಹಿಲ್ಸ್ ತಲುಪಿತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಈ ಬಗ್ಗೆ ಸುಳಿವು ನೀಡಿದರು. ಅನಂತ ಗೀತೆ ಅವರು ಎನ್​ಡಿಎ ಸರ್ಕಾರದಲ್ಲಿ ಶಿವಸೇನೆಯ ಏಕೈಕ ಸಚಿವರಾಗಿದ್ದು, ಮೋದಿ ಅವರು ಅಮೆರಿಕ ಪ್ರವಾಸ ಮುಗಿಸಿ ಹಿಂತಿರುಗಿದ ಬಳಿಕ ಸಂಪುಟ ತ್ಯಜಿಸುವ ಸಾಧ್ಯತೆ ಎನ್ನಲಾಯಿತು. ಅನಂತ ಗೀತೆ ಅವರು ಸಂಪುಟದಲ್ಲಿ ಮುಂದುವರಿಯುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂಬುದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ ಒಂದು ದಿನದ ಬಳಿಕ ಗೀತೆ ಅವರ ರಾಜೀನಾಮೆ ವಿಚಾರ ಬಂದಿತು. ಅಕ್ಟೋಬರ್ 15ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಕುರಿತ ಎರಡು ವಾರಗಳ ಬಿರುಸಿನ ಮಾತುಕತೆ ವೈಫಲ್ಯದ ಬಳಿಕ ಕಳೆದ ವಾರ ಬಿಜೆಪಿ ಮತ್ತು ಶಿವಸೇನೆ ತಮ್ಮ 25 ವರ್ಷಗಳ ಮೈತ್ರಿಯನ್ನು ಕಡಿದುಕೊಂಡಿದ್ದವು.

2008: ಜಮ್ಮಿವಿನ ದೋಡಾ ಜಿಲ್ಲೆಯಲ್ಲಿ ಬಸ್ಸೊಂದು 500 ಅಡಿ ಆಳದ  ಕಂದಕಕ್ಕೆ ಉರುಳಿ ಬಿದ್ದು ಆರು ಜನ  ಮೃತರಾಗಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ  ಘಟನೆ ಘಟಿಸಿತು. ದೋಡಾ ಜಿಲ್ಲೆಯಿಂದ ಸುಮಾರು 200 ಕಿ.ಮೀ. ದೂರದ  ಭದೇರ್ ವಾಹ್ನಿಂದ ಮೂವತ್ತು ಜನರನ್ನು ಹೊತ್ತು ಪ್ರಯಾಣಿಸುತ್ತಿದ್ದ ಈ ಬಸ್ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿ ಬಿತ್ತು..

2008: ಜಾರ್ಖಂಡಿನ ಪಲಮಾವು ಜಿಲ್ಲೆಯಲ್ಲಿ ಮಾವೋ ಉಗ್ರರು ಶಾಲಾ ಕಟ್ಟಡವನ್ನು ಸ್ಫೋಟಿಸಿದರು. ಅಂದಾಜು 20 ರಿಂದ 30ರಷ್ಟಿದ್ದ ಸಿಪಿಐ-ಮಾವೊ ಉಗ್ರರು ಶಾಲೆ ಸುತ್ತುವರಿದು ಕಟ್ಟಡವನ್ನು ಸ್ಫೋಟಿಸಿದರು.  ಈ ಘಟನೆಯಲ್ಲಿ ಯಾರೂ ಗಾಯಗೊಳಲಿಲ್ಲ. ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆಗಳು ಈ ಶಾಲೆಯನ್ನು ಬಳಸುತ್ತಿದ್ದವು. ಈ ಕಾರಣದಿಂದಲೇ ಅದನ್ನು ಸ್ಫೋಟಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

2008: ಸಾರ್ವಜನಿಕರ ಪ್ರವೇಶವಿರುವ ಖಾಸಗಿ ಕಚೇರಿಗಳೂ ಸೇರಿದಂತೆ ಜನರು ಸೇರುವ ಎಲ್ಲಾ ಸ್ಥಳಗಳಲ್ಲಿ ಗಾಂಧಿ ಜಯಂತಿ ದಿನವಾದ ಅ.2ರಿಂದ ಧೂಮಪಾನ ನಿಷೇಧವನ್ನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ನೀಡಿತು. ವಕೀಲರ ಕಚೇರಿ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿ, ವೈದ್ಯರ ಕ್ಲಿನಿಕ್, ವಾಸ್ತುಶಿಲ್ಪಿಗಳ ಕಚೇರಿ ಹಾಗೂ ಸಾರ್ವಜನಿಕರ ಪ್ರವೇಶವಿರುವ ಇನ್ನಿತರ ಖಾಸಗಿ ಕಚೇರಿಗಳಿಗೆ ಇದು ಅನ್ವಯವಾಗುವುದು.

2007: ಮುಖ್ಯಮಂತ್ರಿ ವಿರುದ್ಧ ಕೊಲೆ ಆರೋಪ ಮಾಡುವುದರ ಮೂಲಕ ಮಿತ್ರಪಕ್ಷದೊಂದಿಗೆ ವೈಮನಸ್ಯಕ್ಕೆ ಕಾರಣವಾಗಿ, ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಗೊಂದಲಕ್ಕೆ ಕಾರಣರಾದ ಪ್ರವಾಸೋದ್ಯಮ ಸಚಿವ ಬಿ. ಶ್ರೀರಾಮುಲು ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಡಿ.ವಿ.ಸದಾನಂದಗೌಡರಿಗೆ ಸಚಿವ ಸ್ಥಾನದ ರಾಜೀನಾಮೆ ಪತ್ರ ಸಲ್ಲಿಸಿದರು. ಇದರೊಂದಿಗೆ ರಾಜ್ಯ ರಾಜಕೀಯ ಹಾಗೂ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಎದ್ದಿದ್ದ ಬೆಂಕಿಯನ್ನು ಬಿಜೆಪಿ ವರಿಷ್ಠರು ಶ್ರೀರಾಮುಲು ರಾಜೀನಾಮೆ ಪಡೆಯುವ ಮೂಲಕ ಶಮನಗೊಳಿಸಿದಂತಾಯಿತು. ಬಳ್ಳಾರಿಯಿಂದ ಹೆಲಿಕಾಪ್ಟರಿನಲ್ಲಿ ಆಗಮಿಸಿದ ಶ್ರೀರಾಮುಲು ಅವರು ರಾಜ್ಯದಲ್ಲಿಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹಾ, ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರೆ ಹಿರಿಯ ಸಚಿವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಪತ್ರದಲ್ಲಿ `ಪಕ್ಷದ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ' ಎಂದು ಶ್ರೀರಾಮುಲು ವಿವರಿಸಿದರು. ಮುಖ್ಯಮಂತ್ರಿ ವಿರುದ್ಧವೇ ಮೊಕದ್ದಮೆ ಹೂಡಿದ ಹಿನ್ನೆಲೆಯಲ್ಲಿ ಹಸ್ತಾಂತರ ವಿಚಾರದಲ್ಲಿ ಬಿಜೆಪಿ ವರಿಷ್ಠರ ಜೊತೆ ಚರ್ಚೆನಡೆಸಲು ನವದೆಹಲಿಗೆ ತೆರಳಿದ್ದ ಜೆಡಿ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮಾತುಕತೆ ನಡೆಸದೆ ವಾಪಸಾಗಿದ್ದರು. ಇದರ ಜೊತೆ ಬಳ್ಳಾರಿ ಘಟನೆಯಿಂದ ರಾಜಕೀಯವಾಗಿ ಹೆಚ್ಚೂ ಕಡಿಮೆಯಾದರೆ ತಾವು ಹೊಣೆಯಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಸಿದ್ದರು.

2007: ಆಧುನಿಕ ಪ್ರಜ್ಞೆಯ ಕವಿ, ಕನ್ನಡ ಸಾರಸ್ವತ ಲೋಕದ ವಿಶಿಷ್ಟ ಧ್ವನಿ, ವೀ. ಚಿಕ್ಕವೀರಯ್ಯ (ವೀಚಿ) (77) ಅವರು ತುಮಕೂರಿನ ಸ್ವಗೃಹದಲ್ಲಿ ನಿಧನರಾದರು. ಸಾಹಿತಿ ವೀಚಿ ಅವರದ್ದು ಬಹುಮುಖ ವ್ಯಕ್ತಿತ್ವ. ಓದಿದ್ದು ಮೆಟ್ರಿಕ್ಯುಲೇಷನ್. ಆದರೆ ಜೀವನ ಅನುಭವ ಪದವಿಗಳ ಮಿತಿಯನ್ನು ಮೀರಿದ್ದು. ಅತ್ಯಂತ ಸರಳ, ಸಜ್ಜನಿಕೆಯ ವೀಚಿ ಕೃಷಿಕರಾಗಿ, ಸಮಾಜ ಸೇವಕರಾಗಿ, ಸಮಾಜಕ್ಕಾಗಿ ರಾಜಕೀಯ ಪ್ರವೇಶಿಸಿದ ವಿಶಿಷ್ಟ ವ್ಯಕ್ತಿಯಾಗಿ ತುಮಕೂರಿನ ಬದುಕನ್ನು ಶ್ರೀಮಂತಗೊಳಿಸಿದವರು. `ಪ್ರಣಯ ಚೈತ್ರ' ಇವರ ಮೊದಲ ಕವನ ಸಂಕಲನ. `ವಿಷಾದ ನಕ್ಷೆ', `ಸಂಕರತಳಿ', `ನವಿಲ ಮನೆ', `ಅಭಿನಯದ ಬಯಲು', `ನಿತ್ಯ ಮದುವಣಗಿತ್ತಿ', `ಮಹಾಯಾನ', `ಹಸಿವಿನ ಲೋಕ', `ಹಿಡಿ ಶಾಪ', `ಬಂತೆಂದರೂ ಇದ್ದುದಿದ್ದೆಯಿತ್ತು' ಇತರ ಕವನ ಸಂಕಲನಗಳು. `ಸಿದ್ದರಬೆಟ್ಟ', `ಇವರು ನನ್ನವರು', `ನೆಚ್ಚಿನವರು' ಮತ್ತು `ಇಷ್ಟಮಿತ್ರರು' ವೀಚಿಯವರ ಪ್ರಮುಖ ಗದ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಅವರು ಪಾತ್ರರಾಗಿದ್ದರು. 1971ರಿಂದ 1973ರವರೆಗೆ ತುಮಕೂರು ನಗರಸಭೆಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ವೀಚಿ ಬೈಸಿಕಲ್ಲಿನಲ್ಲಿ ಸುತ್ತಾಡುತ್ತಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕವಿ ವೀ.ಚಿಕ್ಕವೀರಯ್ಯ (ವೀಚಿ)  ತುಮಕೂರು ಸಮೀಪದ ಅಮೀನುದ್ದೀನ್ ಸಾಹೇಬರ ಪಾಳ್ಯದಲ್ಲಿ ನವೆಂಬರ್ 5, 1930ರಂದು ಜನಿಸಿದರು.

2007: ಭಾರತದ ವಿಶ್ವನಾಥನ್ ಆನಂದ್ ಮೆಕ್ಸಿಕೊ ಸಿಟಿಯಲ್ಲಿ ಮುಕ್ತಾಯವಾದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ವಿಶ್ವದ ಎಂಟು ಶ್ರೇಷ್ಠ ಆಟಗಾರರು ಪೈಪೋಟಿ ನಡೆಸಿದ 14 ಸುತ್ತುಗಳ ಡಬಲ್ ರೌಂಡ್ ರಾಬಿನ್ ಲೀಗ್ ಮಾದರಿಯ ಈ ಟೂರ್ನಿಯಲ್ಲಿ ಆನಂದ್ ಉತ್ತಮ ಪ್ರದರ್ಶನದಿಂದ ಗಮನ ಸೆಳೆದು, ಅಗ್ರಸ್ಥಾನದ ಗೌರವ ಪಡೆದು ಕೊಂಡರು. 14ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಆನಂದ್ ಅವರು ಪೀಟರ್ ಲೆಕೊ ಜೊತೆಗೆ ಪಾಯಿಂಟು ಹಂಚಿಕೊಂಡರು.

2007: ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಶಾಲಾ- ಕಾಲೇಜುಗಳಲ್ಲಿ ಮೊಬೈಲ್ ದೂರವಾಣಿ ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು ಅದು ಅಕ್ಟೋಬರ್ 5ರಿಂದ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಅರವತ್ತರ ಹರೆಯದ ಮಹಿಳೆಯೊಬ್ಬಳು ಪ್ರಣಾಳ ಶಿಶು ವಿಧಾನದ ಮೂಲಕ ಪುಣೆಯ ಆಸ್ಪತ್ರೆಯೊಂದರಲ್ಲಿ ತನ್ನ ಪುತ್ರಿಯ ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಏಕಕಾಲದಲ್ಲಿ ಈ ಅವಳಿ ಮಕ್ಕಳಿಗೆ ಅಮ್ಮ ಹಾಗೂ ಅಜ್ಜಿಯಾದರು. ಈ ಅಜ್ಜಿಯ ಪುತ್ರಿ ಕ್ಯಾನ್ಸರಿನಿಂದ ಬಳಲುತ್ತಿದ್ದ ಕಾರಣ ಕೃತಕ ಗರ್ಭ ಧಾರಣೆಯ ಮೂಲಕ ಬಾಡಿಗೆ ತಾಯಿಯ ಗರ್ಭದಲ್ಲಿ ವಂಶದ ಕುಡಿ ಬೆಳೆಸಲು ಸಾಧ್ಯ ಎಂದು ವೈದ್ಯರು  ಹೇಳಿದ್ದರು. ಅಮೆರಿಕದಲ್ಲಿದ್ದ ಈ ಮಹಿಳೆ ತನ್ನ ಮಗುವಿಗೆ ಕುಟುಂಬದವರೇ ಬಾಡಿಗೆ ತಾಯಿ ಆಗಬೇಕೆಂದು ಬಯಸಿದಾಗ, ಮಗಳಿಗೆ ಮಕ್ಕಳನ್ನು ಹೆತ್ತು ಕೊಡಲು ಹೆತ್ತಮ್ಮನೇ ಮುಂದೆ ಬಂದರು. ಕೃತಕ ಗರ್ಭಧಾರಣೆ  ಮೂಲಕ ಇವರು ತಮ್ಮ ಪುತ್ರಿಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಎಂದು ಪುಣೆಯ ರುಬಿ ಹಾಲ್ ಕ್ಲಿನಿಕ್ಕಿನ ಕೃತಕ ಗರ್ಭಧಾರಣೆ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ತೆಂಡೂಲ್ ವಾಡ್ಕರ್ ಸುದ್ದಿಗಾರರಿಗೆ ತಿಳಿಸಿದರು. ಅವಳಿ ಮಕ್ಕಳು ಕ್ರಮವಾಗಿ 1.7 ಕೆ.ಜಿ ಹಾಗೂ 1.4 ಕೆ.ಜಿ ತೂಕ ಹೊಂದಿದ್ದು ಆರೋಗ್ಯವಾಗಿದ್ದವು.

 2007: ರಿಲಯನ್ಸ್ ಸಮೂಹ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಬರೋಡಾದ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾಲಯವು ಡಾಕ್ಟ್ರೇಟ್ ಪದವಿ ನೀಡಿ ಗೌರವಿಸಿತು.

2006: ಎರಡು ವಿಮಾನಗಳ ಪರಸ್ಪರ ಡಿಕ್ಕಿಯ ಬಳಿಕ ಬ್ರೆಜಿಲಿನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ಬ್ರೆಜಿಲ್ ಜೆಟ್ ವಿಮಾನ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ 115 ಜನ ಮೃತರಾದರು. ಬ್ರೆಜಿಲಲಿನ ಇತಿಹಾಸದಲ್ಲೇ ಇದು ಅತಿ ಭೀಕರ ವಿಮಾನ ದುರಂತ ಎನಿಸಿತು. ಬೋಯಿಂಗ್ 737-800 (ಗೋಲ್ ಏರ್ ಲೈನ್ಸ್ ಫ್ಲೈಟ್ 1907) ವಿಮಾನ ಮತ್ತು ಸಣ್ಣ ಎಕ್ಸಿಕ್ಯೂಟಿವ್ ವಿಮಾನ ಗಗನದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಲ್ ಏರ್ ಲೈನ್ಸ್ ವಿಮಾನ ಅಮೆಜಾನ್ ದಟ್ಟ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬ್ರೆಜಿಲಿನಲ್ಲಿ ಹಿಂದೆ 1982ರಲ್ಲಿ ಸಂಭವಿಸಿದ್ದ ಬೋಯಿಂಗ್ 727 ವಿಮಾನ ಅಪಘಾತದಲ್ಲಿ 137 ಜನ ಮೃತರಾಗಿದ್ದುದೇ ರಾಷ್ಟ್ರದ ಅತಿ ಭೀಕರ ಅಪಘಾತವಾಗಿತ್ತು. ವಾಸ್ಪ್ ಏರ್ ಲೈನ್ಸಿನ ಈ ವಿಮಾನ ಅಪಘಾತ ಫೋರ್ಟ್ ಲೇಜಾ ನಗರದ ಈಶಾನ್ಯ ಭಾಗದಲ್ಲಿ ಸಂಭವಿಸಿತ್ತು.

2006: ಎರಡು ಕೋಟಿ ಡಾಲರ್ (ಸುಮಾರು 90 ಕೋಟಿ ರೂಪಾಯಿ) ಶುಲ್ಕ ತೆತ್ತು ಅಂತರಿಕ್ಷ ಯಾತ್ರೆ ಕೈಗೊಂಡಿದ್ದ ಇರಾನ್ ಮೂಲದ ಮಹಿಳೆ ಅನೌಷಿ ಅನ್ಸಾರಿ ಈದಿನ ಬೆಳಗ್ಗೆ ಸುರಕ್ಷಿತವಾಗಿ ಧರೆಗೆ ವಾಪಸಾದರು. ಈ ಮೂಲಕ ಕುತೂಹಲಕ್ಕೆ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅನೌಷಿ ಪಾತ್ರರಾದರು. ಅವರು ಸೆಪ್ಟೆಂಬರ 18ರಂದು ಬೈಕನೂರ್ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಹೊರಟಿದ್ದರು.

2006: ಮಾಜಿ ನಟಿ, ಭೂಗತ ಪಾತಕಿ ಅಬು ಸಲೇಂನ ಗೆಳತಿ ಮೋನಿಕಾ ಬೇಡಿ ಅವರಿಗೆ ಹೈದರಾಬಾದಿನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯಗಳಲ್ಲಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರು ಪಾಸ್ ಪೋರ್ಟ್ಟ್ ನಕಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಸಜೆ ಹಾಗೂ 5000 ರೂಪಾಯಿಗಳ ದಂಡ ವಿಧಿಸಿದರು. ಮೋನಿಕಾಳನ್ನು 2005ರ ನವೆಂಬರ್ 11ರಂದು ಪೋಚರ್ುಗಲ್ಲಿನಿಂದ ಗಡೀಪಾರು ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ನಿವೃತ್ತ ಎಎಸ್ ಐ ಅಬ್ದುಲ್ ಸತ್ತಾರ್ ಮತ್ತು ಪೋಸ್ಟ್ ಮ್ಯಾನ್ ಗೋಕರಿ ಸಾಹೇಬ್ ಗೂ ನ್ಯಾಯಾಲಯ ತಲಾ ಐದು ವರ್ಷಗಳ ಸೆರೆವಾಸವನ್ನು ವಿಧಿಸಿತು.

2006: ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಎರಪಳ್ಳಿ ಪ್ರಸನ್ನ ಅವರನ್ನು ಮುಂಬೈಯಲ್ಲಿ ಕ್ಯಾಸ್ಟ್ರಾಲ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2006: ರಾಯಚೂರಿನ ಹಿಂದೂಸ್ಥಾನಿ ಸಂಗೀತಗಾರ ಪಂಡಿತ್ ಮಾಣಿಕರಾವ್ ರಾಯಚೂರಕರ್ ಅವರು 2006ನೇ ಸಾಲಿನ `ರಾಜ್ಯ ಸಂಗೀತ ವಿದ್ವಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಐದು ದಿನಗಳ ಚಾರಿತ್ರಿಕ ಅಧಿವೇಶನ ಮುಕ್ತಾಯಗೊಂಡಿತು.

1991: ಆಗ್ರಾ ಘರಾಣಾದ ಖ್ಯಾತ ಗಾಯಕ ಉಸ್ತಾದ್ ಯೂನಸ್ ಹುಸೇನ್ ಖಾನ್ ನಿಧನರಾದರು.

1981: ನೂರ ಹದಿನೇಳು ಜನರಿದ್ದ ಇಂಡಿಯನ್ ಏರ್ ಲೈನಿನ ಬೋಯಿಂಗ್-737 ವಿಮಾನವನ್ನು ಪಾಕಿಸ್ಥಾನದ ಲಾಹೋರಿಗೆ ಅಪಹರಿಸಲಾಯಿತು. ದೆಹಲಿಯಿಂದ ಶ್ರೀನಗರಕ್ಕೆ ಅಮೃತಸರ ಮಾರ್ಗವಾಗಿ ಹೊರಟಿದ್ದಾಗ ಈ ಅಪಹರಣ ನಡೆಯಿತು.

1962: ಏಷ್ಯಾದ ಮೊತ್ತ ಮೊದಲ ತಾರಾಲಯ `ಬಿರ್ಲಾ ಪ್ಲಾನೆಟೇರಿಯಂ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಉದ್ಘಾಟನೆಗೊಂಡಿತು.

1936: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಬಾರಿಗೆೆ ರೇಡಿಯೋ ಬಳಸಲಾಯಿತು.

1934: ಕೀಟ ಸಂಶೋಧನಾ ಅಧಿಕಾರಿ, ಛಾಯಾಗ್ರಾಹಕ, ಸಾಹಿತಿ ಕೃಷ್ಣಾನಂದ ಕಾಮತ್ (29-9-1934ರಿಂದ 20-2-2002) ಅವರು ಲಕ್ಷ್ಮಣ ವಾಸುದೇವ ಕಾಮತ್- ರಮಾಬಾಯಿ ದಂಪತಿಯ ಮಗನಾಗಿ ಹೊನ್ನಾವರದಲ್ಲಿ ಜನಿಸಿದರು.

1931: ಸಾಹಿತಿ ನೀಲತ್ತಳ್ಳಿ ಕಸ್ತೂರಿ ಜನನ.

1930: ಸಾಹಿತಿ ಕೃ. ನಾರಾಯಣರಾವ್ ಜನನ.

1919: ಸಾಹಿತಿ ಮಹಾಲಕ್ಷ್ಮೀ ಜನನ.

1914: ಎಸ್ ಎಸ್ ಕೊಮಾಗತಮಾರು ಹಡಗು ವ್ಯಾಂಕೋವರಿನಿಂದ ಕಲ್ಕತ್ತಾದ ಬಜ್ ಬಜ್ ಸಮೀಪ ಬಂದಿತು. ಬ್ರಿಟಿಷ್ ರಾಜ್ಯಕ್ಕೆ ಸವಾಲು ಹಾಕಿದ್ದಕ್ಕಾಗಿ 17 ಯುವಕರನ್ನು ಕೊಂದು 202 ಜನರನ್ನು ಸೆರೆಮನೆಗೆ ತಳ್ಳಲಾಯಿತು. ಮಾರ್ಚಿಯಲ್ಲಿ ಘದರ್ ಚಳವಳಿಯ ಅಂಗವಾಗಿ ಇದೇ ಹಡಗು ಹಾಂಕಾಂಗಿನಿಂದ ವ್ಯಾಂಕೋವರಿಗೆ ಪ್ರಯಾಣ ಬೆಳೆಸಿತು. ಆದರೆ ಜುಲೈ 28ರಂದು ಅದನ್ನು ಬಲಾತ್ಕಾರವಾಗಿ ವ್ಯಾಂಕೋವರಿನಿಂದ ಹೊರಕ್ಕೆ ಕಳುಹಿಸಲಾಯಿತು.

1829: ಲಂಡನ್ನಿನ ಮಾನ್ಯತೆ ಪಡೆದ ಪೊಲೀಸ್ ಪಡೆ ಲಂಡನ್ನಿನ ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸಲು ಆರಂಭಿಸಿತು. ಮುಂದೆ ಇದೇ ಪೊಲೀಸ್ ಪಡೆ `ಸ್ಕಾಟ್ಲೆಂಡ್ ಯಾರ್ಡ್' ಎಂಬ ಹೆಸರು ಪಡೆಯಿತು.

1725: ರಾಬರ್ಟ್ ಕ್ಲೈವ್ (1725-1774) ಜನ್ಮದಿನ. ಪ್ಲಾಸಿ ಕದನದಲ್ಲಿ ಮುಖ್ಯಪಾತ್ರ ವಹಿಸಿದ್ದ ಈತ ಬಂಗಾಳದ ಮೊದಲ ಬ್ರಿಟಿಷ್ ಆಡಳಿತಗಾರನಾಗಿದ್ದು, ಭಾರತದಲ್ಲಿ ಬ್ರಿಟಿಷ್ ಅಧಿಕಾರ ಸ್ಥಾಪನೆ ಮಾಡಿದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, September 28, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 28

ಇಂದಿನ ಇತಿಹಾಸ

ಸೆಪ್ಟೆಂಬರ್ 28



ಸಂಪೂರ್ಣ ಉಕ್ಕಿನಿಂದ ನಿರ್ಮಿಸಲಾದ ಬೃಹತ್ ದೋಣಿಯನ್ನು ಚಲಾಯಿಸುವ ಮೂಲಕ 136 ಮಂದಿ ಹುಟ್ಟು ಹಾಕುವವರು ಮತ್ತು ಐವರು ನಾವಿಕರು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾದರು. ದೋಣಿಗಳನ್ನು ಸಾಮಾನ್ಯವಾಗಿ ಮರದ ದಿಮ್ಮಿಯಿಂದ ತಯಾರಿಸುತ್ತಾರೆ. ಆದರೆ, ಕೋಚಿಯಲ್ಲಿ ಈ `ಚುಂದಾನ್' ವಿಶೇಷ ದೋಣಿಯನ್ನು  `ಆಟೋಶಿಪ್' ಸಾಫ್ಟ್ ವೇರ್ ಬಳಸಿ ವಿನ್ಯಾಸ ಸಂಪೂರ್ಣ ಉಕ್ಕಿನಿಂದ ತಯಾರಿಸಲಾಗಿತ್ತು. ಇದರ ಉದ್ದ 143.25 ಅಡಿ, ಅಗಲ  5.74 ಅಡಿ ಹಾಗೂ ತೂಕ 8 ಟನ್.

2008: ಪರ ವಿರೋಧಿ ಚರ್ಚೆಯ ನಂತರ ಜನಪ್ರತಿನಿಧಿಗಳ ಸಭೆಯು ಭಾರತ - ಅಮೆರಿಕ ಪರಮಾಣು ಒಪ್ಪಂದದ ಮಸೂದೆಗೆ ಒಪ್ಪಿಗೆ ನೀಡುವ ಮೂಲಕ, ಅದಕ್ಕೆ ಇದ್ದ ದೊಡ್ಡ ಆತಂಕ ನಿವಾರಣೆಯಾಯಿತು. ಕುತೂಹಲಕರ ನಾಟಕೀಯ ಬೆಳವಣಿಗೆಯ ನಂತರ ಜನಪ್ರತಿನಿಧಿಗಳ ಸಭೆಯು ನಿಗದಿತ ಕಾಲಾವಧಿಗಿಂತ ಒಂದು ದಿನ ಹೆಚ್ಚಿಗೆ ಕಲಾಪ ನಡೆಸಿ ಕೊನೆಗೂ ಮಸೂದೆಗೆ ಒಪ್ಪಿಗೆ ನೀಡಿತು. ಆದರೂ ಡೆಮಾಕ್ರೆಟಿಕ್ ಪಕ್ಷದ ಅನೇಕ ಸದಸ್ಯರು  ಒಪ್ಪಂದವನ್ನು ವಿರೋಧಿಸುವ ತಮ್ಮ ನಿಲುವು ಬದಲಿಸಲಿಲ್ಲ. ಮಸೂದೆಯ ಪರ 298 ಸದಸ್ಯರು ಮತ ಚಲಾಯಿಸಿದರೆ, 117 ಸದಸ್ಯರು ವಿರೋಧಿಸಿ ಮತ ಚಲಾಯಿಸಿದರು. ಡೆಮಾಕ್ರೆಟಿಕ್ ಪಕ್ಷದಲ್ಲಿಯೇ ಮಸೂದೆಯ ಬಗ್ಗೆ ಭಿನ್ನಮತ ಮೂಡಿತ್ತು. ಈ ಪಕ್ಷದ 107 ಸದಸ್ಯರು ಪರವಾಗಿ ಇದ್ದರೆ, 120 ಸದಸ್ಯರು ವಿರೋಧ ವ್ಯಕ್ತಪಡಿಸಿದರು. ರಿಪಬ್ಲಿಕನ್ ಪಕ್ಷದ 178 ಮಂದಿ ಮಸೂದೆ ಪರವಾಗಿ ಮತ ಚಲಾಯಿಸಿದರೆ 10 ಮಂದಿ ವಿರುದ್ಧ ಮತ ಹಾಕಿದರು..

2008: ಸಂಪೂರ್ಣ ಉಕ್ಕಿನಿಂದ ನಿರ್ಮಿಸಲಾದ ಬೃಹತ್ ದೋಣಿಯನ್ನು ಚಲಾಯಿಸುವ ಮೂಲಕ 136 ಮಂದಿ ಹುಟ್ಟು ಹಾಕುವವರು ಮತ್ತು ಐವರು ನಾವಿಕರು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾದರು. ದೋಣಿಗಳನ್ನು ಸಾಮಾನ್ಯವಾಗಿ ಮರದ ದಿಮ್ಮಿಯಿಂದ ತಯಾರಿಸುತ್ತಾರೆ. ಆದರೆ, ಕೋಚಿಯಲ್ಲಿ ಈ `ಚುಂದಾನ್' ವಿಶೇಷ ದೋಣಿಯನ್ನು  `ಆಟೋಶಿಪ್' ಸಾಫ್ಟ್ ವೇರ್ ಬಳಸಿ ವಿನ್ಯಾಸ ಸಂಪೂರ್ಣ ಉಕ್ಕಿನಿಂದ ತಯಾರಿಸಲಾಗಿತ್ತು. ಇದರ ಉದ್ದ 143.25 ಅಡಿ, ಅಗಲ  5.74 ಅಡಿ ಹಾಗೂ ತೂಕ 8 ಟನ್.

2008: ಜರ್ಮನಿ ರಾಜಧಾನಿ ಬರ್ಲಿನ್ನಿನಲ್ಲಿ `35ನೇ ಬರ್ಲಿನ್ ಮ್ಯಾರಥಾನ್' ಓಟ ಆರಂಭವಾಯಿತು. ಈ ಮ್ಯಾರಥಾನ್ ಓಟದಲ್ಲಿ 100 ದೇಶಗಳ 40,000 ಓಟಗಾರರು ಪಾಲ್ಗೊಂಡರು.

2008: ಹನ್ನೆರಡು ಸಲ ಯೋಗ ಚಿಕಿತ್ಸೆಗೆ ಒಳಪಟ್ಟಲ್ಲಿ ಸಂಧಿವಾತದಿಂದ ನರಳುವ ರೋಗಿಗಳು ಸಾಕಷ್ಟು ಗುಣಮುಖರಾಗಬಹುದು ಎಂದು ಅಧ್ಯಯನವೊಂದು ಬಹಿರಂಗಪಡಿಸಿತು. ಯುಎಇಯ `ಎಮಿರೇಟ್ಸ್ ಅರ್ಥರೈಟಿಸ್ ಫೌಂಡೇಷನ್' ತಜ್ಞರ ತಂಡ ಈ ಸಂಶೋಧನೆ ಕೈಗೊಂಡಿದ್ದು, ಕೀಲು ರೋಗಗಳ ಕುರಿತು ಜಪಾನಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಬಂಧ ಮಂಡಿಸಿತು. ಸಂಧಿವಾತದ ರೋಗಿಗಳ ಮೇಲೆ ಯೋಗ ಚಿಕಿತ್ಸೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಪರಿಣಾಮ ಬೀರುತ್ತದೆ ಎಂದು  ದುಬೈಯ ಎಲುವು ಹಾಗೂ ಕೀಲು ಕೇಂದ್ರದ ತಜ್ಞ ಡಾ. ಹುಮೈರಾ ಬಾದಷಾ ಹೇಳಿದರು. ಸಂಧಿವಾತದಿಂದ ಬಳಲುತ್ತಿದ್ದ 47 ರೋಗಿಗಳನ್ನು ಈ ಅಧ್ಯಯನಕ್ಕಾಗಿ ಆಯ್ದುಕೊಳ್ಳಲಾಗಿತ್ತು. ಇವರಲ್ಲಿ 26 ಜನರಿಗೆ ಯೋಗ ಚಿಕಿತ್ಸೆ ನೀಡಲಾಯಿತು. 21 ಜನರಿಗೆ ಮಾಮೂಲಿ ಚಿಕಿತ್ಸೆ ನೀಡಲಾಯಿತು. ಯೋಗ ಚಿಕಿತ್ಸೆಗೆ ಒಳಗಾದ 26 ಜನ ರೋಗಿಗಳಲ್ಲಿಮೂರು ಜನ ಸ್ಟಿರಾಯ್ಡ್ಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಇನ್ನಿತರರ ಆರೋಗ್ಯವೂ ಗಣನೀಯವಾಗಿ ಸುಧಾರಿಸಿತು.

2008: ನೂತನ ಪ್ರಧಾನಿ ತರೋ ಅಸೋ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದ ಸಾರಿಗೆ ಸಚಿವ ನಾರೈಕಿ ನಕಯಾಮ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದರು. ಹಲವಾರು ವಿಷಯಗಳ ಬಗ್ಗೆ ವಿವೇಚನೆಯಿಲ್ಲದೆ ಮಾತನಾಡಿದ ನಾರೈಕಿ ತಮ್ಮ ಮೊದಲ ಸಂದರ್ಶನದಲ್ಲಿ `ಜಪಾನ್ ಸಮಾನ ಜಾತಿಯ ದೇಶ' ಎಂದು ಹೇಳಿ, ಪ್ರಾದೇಶಿಕತೆ ಬಗ್ಗೆ ಒಲವು ಹೊಂದಿರುವವರ ಕೆಂಗಣ್ಣಿಗೆ ಗುರಿಯಾಗಿದ್ದರು.

2007: ಬೆಂಗಳೂರಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 2006ನೇ ಸಾಲಿನ 'ಬಸವ ಪುರಸ್ಕಾರ' ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

2007: ಕರ್ನಾಟಕದ 209 ನಗರ ಸ್ಥಳೀಯ ಸಂಸ್ಥೆ, ನಗರಸಭೆ, ನಗರಪಾಲಿಕೆಗಳಿಗೆ ಚುನಾವಣೆ ನಡೆಯಿತು.

2007: ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ ರಾಮಸೇತು ಒಡೆದು ಹಾಕುವುದರಿಂದ ಜೀವ ವೈವಿಧ್ಯತೆಗೆ ಹಾಗೂ ಪರಿಸರಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ. ರಾಮಸೇತು ಕೇವಲ ಒಂದು ಮರಳಿನ ದಿಬ್ಬವಷ್ಟೇ ಅಲ್ಲ, ಅದು ಸಮುದ್ರದ ಆಳದಲ್ಲಿ ಉಷ್ಣತೆಯ ಹರಿವಿಗೆ ಸಾಕಷ್ಟು ತಡೆ ಒಡ್ಡುತ್ತಿದೆ. ಕಡಲಾಳದಲ್ಲಿ ಸಂಭವಿಸುವ ಭೂ ಕಂಪನಕ್ಕೂ ತಡೆ ನೀಡುತ್ತದೆ. ಅಲ್ಲದೇ ಪರಿಸರಕ್ಕೆ ಸಾಕಷ್ಟು ಅನುಕೂಲಗಳಿವೆ. ವ್ಯಾವಹಾರಿಕ ಲಾಭಕ್ಕಾಗಿ ಅದನ್ನು ಒಡೆದು ಹಾಕಿದರೆ ಮುಂದೊಂದು ದಿನ ಅಪಾಯ ಖಚಿತ. ರಾಮಸೇತು ಸಮುದ್ರದ ಒಳಗೆ ಭೂಕುಸಿತದಿಂದ ಜಲಾಂತರ್ಗಾಮಿಗಳು ಮುಳುಗದಂತೆಯೂ ಕಡಿವಾಣ ಹಾಕುತ್ತಿದೆ. ಕೆಲವು ಅಧ್ಯಯನಗಳು ಇದನ್ನು ದೃಢಪಡಿಸಿವೆ ಎಂದು ಭಾರತೀಯ ಸರ್ವೇಕ್ಷಣಾ ಇಲಾಖೆಯ ಮಾಜಿ ನಿರ್ದೇಶಕ ಗೋಪಾಲಕೃಷ್ಣನ್ ಹೇಳಿದರು. `ವೈಜ್ಞಾನಿಕವಾಗಿ ಹಾಗೂ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿರುವ ಈ ಯೋಜನೆ ಅನುಷ್ಠಾನದ ಕುರಿತು ಕೇಂದ್ರ ಸರ್ಕಾರ ಪ್ರಾಮಾಣಿಕ ಚರ್ಚೆ ನಡೆಸುತ್ತಿಲ್ಲ. ಹಾಗಾಗಿ ಸರ್ಕಾರ ಇದರ ಸಮಗ್ರ ಅಧ್ಯಯನಕ್ಕೆ ಸಮಿತಿ ರಚಿಸಬೇಕು' ಎಂದು ಗೋಪಾಲಕೃಷ್ಣನ್ ಆಗ್ರಹಿಸಿದರು.

2007: ಅಂತರ್ ಗ್ರಹ ಸಾರಿಗೆಗೆ ಮಾದರಿ ಎಂದು ಹೇಳಲಾದ ಗಗನನೌಕೆಯೊಂದನ್ನು ಕೇಪ್ ಕೆನವರಾಲಿನಿಂದ ಹಾರಿ ಬಿಡಲಾಯಿತು. 'ಡಾನ್' ಎಂದು ಕರೆಯಲಾಗುವ ಈ ಮಾನವ ರಹಿತ ನೌಕೆ ಮಂಗಳ ಮತ್ತು ಗುರು ಗ್ರಹದ ನಡುವೆ ಸಂಚರಿಸಲಿದೆ. ಕಡಿಮೆ ಇಂಧನದಲ್ಲಿ ಹೆಚ್ಚು ದೂರ ಕ್ರಮಿಸುವ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ ಎಂದು ನಾಸಾ ಪ್ರಕಟಿಸಿತು. ಭೂ ಕಕ್ಷೆಯನ್ನು ಬಿಟ್ಟ ನಂತರ ಡಾನ್ ತನ್ನ ರೆಕ್ಕೆಗಳನ್ನು ಬಿಡಿಸಿಕೊಂಡು ಸೌರಶಕ್ತಿಯೊಂದಿಗೆ ಮುಂದಿನ ಪ್ರಯಾಣ ಬೆಳೆಸುವುದು.  ಪ್ರಯಾಣದ ಅವಧಿಯಲ್ಲಿ ಡಾನ್, ಮಂಗಳ ಮತ್ತು ಗುರು ಗ್ರಹಗಳ ಲಕ್ಷಣಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲುವುದು. ನಾಲ್ಕು ವರ್ಷಗಳ ಬಳಿಕ ನೌಕೆ ಈ ಎರಡು ಗ್ರಹಗಳ ನಡುವೆ ಇರುವ ಭೂಮಿಯ ಉಪಗ್ರಹ ಚಂದ್ರನನ್ನು ಹೋಲುವ ವೆಸ್ಟಾ ಆಕಾಶಕಾಯದ ಮೇಲೆ ಇಳಿದು ಆರು ತಿಂಗಳ ಕಾಲ ಅಲ್ಲಿ ಶೋಧ ನಡೆಸಲಿದೆ. ನಂತರ ಕಿರು ಆಕಾಶಕಾಯ ಸೆರೆಸ್ ನತ್ತ ಪಯಣ ಬೆಳೆಸುವುದು.

2007: 1998ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಗಳಿಂದ  ಕೇರಳ ಮೂಲದ ಪಿಡಿಪಿ ನಾಯಕ ಅಬ್ಬುಲ್ ನಾಸಿರ್ ಮದನಿ ಸೇರಿ ಎಂಟು ಮಂದಿ ಖುಲಾಸೆಗೊಂಡರು. ಪ್ರಕರಣದಲ್ಲಿ ಷಾಮೀಲಾದ  ಆರೋಪ ಸಾಬೀತಾಗದ ಕಾರಣ ಎಂಟು ಮಂದಿಯನ್ನು  ಖುಲಾಸೆ ಮಾಡಲಾಗಿದೆ ಎಂದು ಸ್ಫೋಟ ಪ್ರಕರಣದ ವಿಶೇಷ  ನ್ಯಾಯಾಧೀಶ ಕೆ. ಉಥಿರಪತಿ ಅವರು ಕೊಯಮತ್ತೂರಿನಲ್ಲಿ ತೀರ್ಪು ನೀಡಿದರು. 1998ರ ಫೆಬ್ರುವರಿ 14ರಂದು ಕೊಯಮತ್ತೂರಿನಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟಗಳಿಗೆ 58ಮಂದಿ ಬಲಿಯಾಗಿ, ಸುಮಾರು 250 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಿ ಸೇರಿ 166 ಜನರನ್ನು ಒಳಸಂಚು ಹಾಗೂ ಕೊಲೆ ಆರೋಪದ  ಮೇಲೆ ಬಂಧಿಸಲಾಗಿತ್ತು.

2007: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್ ವಿರುದ್ಧ ಅವಹೇಳನಕಾರಿ ವರದಿ ಪ್ರಕಟಿಸಿದ ಆರೋಪದಲ್ಲಿ `ಮಿಡ್ ಡೇ' ಪತ್ರಿಕೆ ನಾಲ್ವರು ಪತ್ರಕರ್ತರಿಗೆ ದೆಹಲಿ ಹೈಕೋರ್ಟ್ ವಿಧಿಸಿದ ನಾಲ್ಕು ತಿಂಗಳು ಜೈಲು ಶಿಕ್ಷೆಗೆ  ಸುಪ್ರೀಂಕೋರ್ಟ್ ತಡೆ ನೀಡಿತು. ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಹಾಗೂ ಪಿ.ಸದಾಶಿವಂ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 21 ರಂದು ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಪತ್ರಿಕೆಯು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಿತು.

2007: ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಕಾಯ್ದೆಯನ್ನು ಅನುಷ್ಠಾನಕ್ಕೆ ತರದಂತೆ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರಕ್ಕೆ ತಡೆಯಾಜ್ಞೆ ನೀಡಿತು. ಧರ್ಮದ ಆಧಾರದ ಮೇರೆಗೆ ಹಿಂದುಳಿದ ವರ್ಗಗಳನ್ನು ಗುರುತಿಸುವುದು ಸಂವಿಧಾನ ವಿರೋಧಿ ಎಂದು ಹೇಳಿ ಟಿ. ಮುರಳೀಧರ ರಾವ್ ಹಾಗೂ ಕೆ. ಶ್ರೀತೇಜಾ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಆಂಧ್ರ ಪ್ರದೇಶ ಸರ್ಕಾರ ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ಕುರಿತು 2007ರ ಜುಲೈ 6ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಈ ಸುಗ್ರೀವಾಜ್ಞೆಗೆ ತಡೆ ನೀಡುವಂತೆ ಕೋರಿ ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ಆಂಧ್ರ ಹೈಕೋರ್ಟ್ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟಿಗೆ ಮೊರೆಹೋಗಿದ್ದರು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಮತ್ತು ಮುಸ್ಲಿಂ ಲೀಗ್-ಎನ್ ಪಕ್ಷದ ಮುಖಂಡ ನವಾಜ್ ಷರೀಫ್ ಅವರನ್ನು ಸೆ.10ರಂದು ಪುನಃ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಿದ ಬಗ್ಗೆ ವಿವರಣೆ ನೀಡುವಂತೆ ಪ್ರಧಾನಿ ಶೌಕತ್ ಅಜೀಜ್ ಸೇರಿ ಹಲವು ಉನ್ನತ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆೆ ಎಂದೂ ನ್ಯಾಯಾಲಯ ಹೇಳಿತು.ನ್ಯಾಯಾಲಯದ ಆದೇಶದ ಹೊರತಾಗಿಯೂ ಷರೀಫ್ ಅವರನ್ನು ದೇಶದೊಳಗೆ ಪ್ರವೇಶಿಸದಂತೆ ತಡೆದು ಸರ್ಕಾರ ಪುನಃ ಗಡೀಪಾರು ಮಾಡಿತು ಎಂದು ಆಪಾದಿಸಿದ ಷರೀಫ್ ಸಂಬಂಧಿ ಹಮ್ಜಾ ಷರೀಫ್ ನ್ಯಾಯಾಲಯದ ಮೊರೆ ಹೋಗಿದ್ದರು.

2007: ಭಾರತೀಯ  ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ರವಿ ಶಾಸ್ತ್ರಿ  ಅವರನ್ನು ಬಿಸಿಸಿಐ  ಸರ್ವ ಸದಸ್ಯರ  ವಾರ್ಷಿಕ ಸಭೆಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಬಂಡಾಯ ಕ್ರಿಕೆಟ್ ಲೀಗ್ (ಐಸಿಎಲ್) ಜೊತೆಗೆ ಸೇರಿಕೊಂಡದ್ದಕ್ಕಾಗಿ  ಕಪಿಲ್ ದೇವ್  ಅವರನ್ನು ಅಧ್ಯಕ್ಷಸ್ಥಾನದಿಂದ ವಜಾ ಮಾಡಿದ ಬಳಿಕ ಉಸ್ತುವಾರಿ ಅಧ್ಯಕ್ಷರಾಗಿ  ನೇಮಕಗೊಂಡ ಅಜಯ್ ಶಿರ್ಕೆ ಅವರಿಂದ ರವಿ ಶಾಸ್ತ್ರಿ ಅಧಿಕಾರ ವಹಿಸಿಕೊಳ್ಳುವರು.

2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸಲು ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಪಾಕಿಸ್ಥಾನಿ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಮುಷರಫ್ ಪುನರಾಯ್ಕೆಗೊಳ್ಳುವುದನ್ನು  ವಿರೋಧಿಸಿ ಸಲ್ಲಿಸಲಾದ ಅರ್ಜಿಗಳನ್ನು ಕೋರ್ಟ್ ತಳ್ಳಿ ಹಾಕಿತು. 9 ಸದಸ್ಯರ ಪೀಠದ 6 ಮಂದಿ ನ್ಯಾಯಮೂರ್ತಿಗಳು ತಮ್ಮ ನಾಮಪತ್ರ ಸಲ್ಲಿಸಿದ ಜನರಲ್ ಮುಷರಫ್ ಅವರು ಅಕ್ಟೋಬರ್ 6ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದರು. ಆದರೆ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ರಾಣಾ ಭಗವಾನ್ ದಾಸ್ ಸೇರಿದಂತೆ ಮೂವರು ನ್ಯಾಯಮೂರ್ತಿಗಳು ಮುಷರಫ್  ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳ ಪರವಾಗಿ ತೀರ್ಪು ನೀಡಿದರು.

2006: ದಲಿತರು ಮತ್ತು ಕೊಳೆಗೇರಿ ಮಹಿಳೆಯರ ಕಲ್ಯಾಣ ಹಾಗೂ ಹಕ್ಕುಗಳ ಹೋರಾಟಗಾರ್ತಿ ಬೆಂಗಳೂರಿನ ರೂತ್ ಮನೋರಮಾ ಅವರು ಪರ್ಯಾಯ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿರುವ `ರೈಟ್ ಲೈವ್ಲಿಹುಡ್' ಪ್ರಶಸ್ತಿಗೆ ಆಯ್ಕೆಯಾದರು. ಬ್ರೆಜಿಲಿನ ಚಿಕೋ ವಿಟೇಕರ್ ಫೆರೀರಾ, ಅಮೆರಿಕದ ಡೇನಿಯಲ್ ಎಲ್ಸ್ ಬರ್ಗ್ ಅವರೂ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದರು.

2006: ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಭಾಷಣ ಮಾಡಿದರು. ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಆಡಳಿತವನ್ನು ಚುರುಕುಗೊಳಿಸುವಂತೆ ಅವರು ಸಲಹೆ ಮಾಡಿದರು.

2006: ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜೈಕರ್ ಜೆರೋಮ್ ಅವರಿಗೆ 10,000 ರೂಪಾಯಿ ದಂಡ ವಿಧಿಸಲಾಯಿತು.

1989: ಫಿಲಿಪ್ಪೀನ್ಸಿನ ಪದಚ್ಯುತ ಅಧ್ಯಕ್ಷ ಫರ್ಡಿನಾಂಡ್ ಇ ಮಾರ್ಕೋಸ್ ಅವರು ಗಡೀಪಾರಾಗಿದ್ದಾಗ ಹವಾಯಿಯಲ್ಲಿ ತಮ್ಮ 72ನೇ ವಯಸಿನಲ್ಲಿ ಮೃತರಾದರು.

1978: ಪೋಪ್ ಒಂದನೆಯ ಜಾನ್ ಪಾಲ್ ಅವರು ಪೋಪ್ ಗುರುಗಳಾದ 34 ದಿನಗಳಲ್ಲೇ ನಿಧನರಾದರು. ಇವರು ಪೋಪ್ ಗುರುಗಳಾಗಿದ್ದ ಅವಧಿ ಆಧುನಿಕ ಕಾಲದಲ್ಲಿಯೇ ಅತ್ಯಂತ ಸಂಕ್ಷಿಪ್ತವಾದುದು. ಎರಡು ಹೆಸರುಗಳನ್ನು ಇಟ್ಟುಕೊಂಡ ಮೊದಲ ಪೋಪ್ ಇವರಾಗಿದ್ದರು. ತಮ್ಮ ಹಿಂದಿನ ಪೋಪ್ ಗುರುಗಳಾಗಿದ್ದ 23ನೆಯ ಜಾನ್ ಮತ್ತು 6ನೆಯ ಪಾಲ್ ಅವರ ನೆನಪಿಗಾಗಿ ಎರಡು ಹೆಸರುಗಳನ್ನು ಇವರು ಇಟ್ಟುಕೊಂಡಿದ್ದರು. ಗ್ರಾಮೀಣ ಹಿನ್ನೆಲೆಯಿಂದ ಬಂದು ಈ ಪದವಿಗೆ ಏರಿದ ಮೊದಲ ವ್ಯಕ್ತಿ ಕೂಡಾ ಇವರಾಗಿದ್ದರು.

1970: ಈಜಿಪ್ಟಿನ ಅಧ್ಯಕ್ಷರಾಗಿದ್ದ ಗಮೆಲ್ ಅಬ್ದುಲ್ ನಾಸ್ಸೇರ್ ಅವರು ತಮ್ಮ 52ನೇ ವಯಸಿನಲ್ಲಿ ಮೃತರಾದರು. ಅವರು 1956ರಿಂದ ಈಜಿಪ್ಟಿನ ಅಧ್ಯಕ್ಷರಾಗಿದ್ದರು.

1960: ಸಾಹಿತಿ ಶಾರದಾ ಗೋಪಾಲ ಜನನ.

1959: ಭಾರತದ ಆರತಿ ಸಹಾ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊದಲ ಏಷ್ಯನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಫ್ರಾನ್ಸಿನಿಂದ ಇಂಗ್ಲೆಂಡ್ವರೆಗಿನ ದೂರವನ್ನು 16 ಗಂಟೆ 20 ನಿಮಿಷಗಳಲ್ಲಿ ಕ್ರಮಿಸಿದರು.

1942: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯನ್ನು (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ -ಸಿಎಸ್ ಐ ಆರ್) ಭಾರತದಲ್ಲಿ ಸ್ಥಾಪಿಸಲಾಯಿತು. ಶಾಂತಿ ಸ್ವರೂಪ್ ಭಟ್ನಾಗರ್ ಅವರು ಅದರ ಮೊದಲ ನಿರ್ದೇಶಕರಾದರು. ಅವರ ಪ್ರಯತ್ನದ ಫಲವಾಗಿ ಸಿಎಸ್ ಐಆರ್ ವಿವಿಧ ರಂಗಗಳಿಗೆ ಸಂಬಂಧಿಸಿದಂತೆ ಐದು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಿತು.

1936: ಖ್ಯಾತ ಕಥೆಗಾರ ಎನ್.ಎಸ್. ಚಿದಂಬರರಾವ್ (28-9-1936ರಿಂದ 6-1-2002) ಅವರು ಎನ್. ಶಂಕರಪ್ಪ ಮಾಲೇನೂರು- ಸೀತಮ್ಮ ದಂಪತಿಯ ಮಗನಾಗಿ ದಾವಣಗೆರೆ ಬಳಿಯ ಹದಡಿಯಲ್ಲಿ ಜನಿಸಿದರು. ಸಾಹಿತ್ಯದ ಅಭಿರುಚಿಯಿಂದ ಅವರು ಬರೆದ ಮೊದಲ ಕಥೆ `ಶಾಂತಿ' ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಸ್ಫೂರ್ತಿಯಿಂದ ಕತೆಗಳನ್ನು ಬರೆಯಲಾರಂಭಿಸಿದ ಅವರು ಬರೆದ ಸಣ್ಣ ಕಥೆಗಳ ಸಂಖ್ಯೆ 512. ಸಣ್ಣ ಕಥಾ ಕ್ಷೇತ್ರದಲ್ಲಿ ಇದೊಂದು ದಾಖಲೆ. ಗಮಕ ವಾಚನ, ಗಾಯನ, ನಾಟಕಾಭಿನಯ ಇತ್ಯಾದಿ ಕಲೆಗಳಲ್ಲೂ ಅವರು ಖ್ಯಾತರಾಗಿದ್ದರು.

1934: ಸಾಹಿತಿ ಪಾ.ಶ. ಶ್ರೀನಿವಾಸ ಜನನ.

1929: ಭಾರತದ ಸಂಗೀತ ಕ್ಷೇತ್ರದ ಕೋಗಿಲೆ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಜನನ. ಸುಮಾರು 50,000 ಗೀತೆಗಳನ್ನು ಹಾಡಿರುವ ಲತಾ ಸಂಗೀತ ಕ್ಷೇತ್ರದಲ್ಲಿ ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಛಾಪನ್ನು ಒತ್ತಿದ್ದಲ್ಲದೆ ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮುಡುಪಿಟ್ಟವರು. 1962ರಲ್ಲಿ ಭಾರತ - ಚೀನಾ ಸಮರದ ಸಂದರ್ಭದಲ್ಲಿ ಲತಾ ಅವರು ಹಾಡಿದ `ಆಯ್ ಮೇರೆ ವತನ್ ಕೇ ಲಗಾನ್', `ಜರಾ ಆಂಖ್ ಮೇ ಭರ್ ಲೋ ಪಾನಿ' ಕವನಗಳನ್ನು ಕೇಳಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಣ್ಣುಗಳಲ್ಲಿ ನೀರು ತುಂಬಿತ್ತು. 2001ರಲ್ಲಿ ಲತಾಗೆ ಭಾರತ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಯಿತು.

1901: ಇದು ರೇಜéರ್ ಹಾಗೂ ಬ್ಲೇಡುಗಳು ಹುಟ್ಟಿದ ದಿನ. ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರು ಅಮೆರಿಕನ್ ಸೇಫ್ಟಿ ರೇಜéರ್ ಕಂಪೆನಿಯನ್ನು ಸ್ಥಾಪಿಸಿದರು. ಮೆಸಾಚ್ಯುಸೆಟ್ಸ್ ಬೋಸ್ಟನ್ನಿನಲ್ಲಿ ಮೀನಿನ ಅಂಗಡಿಯೊಂದರಲ್ಲಿ ಈ ಕಂಪೆನಿಯ ವ್ಯವಹಾರ ಆರಂಭವಾಯಿತು. 1902ರಲ್ಲಿ ಇದು ಗಿಲ್ಲೆಟ್ ಸೇಫ್ಟಿ ರೇಜéರ್ ಕಂಪೆನಿ ಎಂಬ ಹೆಸರು ಪಡೆಯಿತು. 1903ರ ವೇಳೆಗೆ 51 ರೇಜರುಗಳು ಮತ್ತು 168 ಬ್ಲೇಡುಗಳು ಮಾರಾಟವಾದವು. 1904ರ ವೇಳೆಗೆ ಮಾರಾಟ 10 ಲಕ್ಷದ ಗಡಿ ದಾಟಿತು. 1973ರಲ್ಲಿ ಅದರ ಮಾರಾಟ ಮೊತ್ತ ಮೊದಲ ಬಾರಿಗೆ 100 ಕೋಟಿ ಡಾಲರುಗಳನ್ನು ದಾಟಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಸೆಪ್ಟೆಂಬರ್ 27

ಇಂದಿನ ಇತಿಹಾಸ

ಸೆಪ್ಟೆಂಬರ್ 27

ಚೀನಾದ ಗಗನಯಾನಿ ಜೈ ಜಿಗಾಂಗ್ ಗಗನನೌಕೆಯಿಂದ ಹೊರ ಬಂದು ಬಾಹ್ಯಾಕಾಶದಲ್ಲಿ ಇದೇ ಮೊದಲ ಬಾರಿಗೆ ನಡಿಗೆ ಆರಂಭಿಸಿ ಚೀನಾದ ಧ್ವಜವನ್ನು ಪ್ರದರ್ಶಿಸಿದರು.

2008: ರಾಜಧಾನಿ ದೆಹಲಿ ಎರಡು ವಾರಗಳ ಬಳಿಕ ಮತ್ತೊಮ್ಮೆ ಬಾಂಬ್ ಸ್ಫೋಟದಿಂದ ತಲ್ಲಣಿಸಿತು. ದಕ್ಷಿಣ ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್  ಸಮೀಪ ಮೆಹರೋಲಿಯಲ್ಲಿನ ಸರಾಯ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಈದಿನ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟದಿಂದ ಬಾಲಕನೊಬ್ಬ ಮೃತನಾಗಿ 17ಕ್ಕೂ  ಅಧಿಕ ಮಂದಿ ಗಾಯಗೊಂಡರು. ಮಧ್ಯಾಹ್ನ 2.15ರ ಸುಮಾರಿಗೆ ಎಲೆಕ್ಟ್ರಾನಿಕ್ ಅಂಗಡಿಯೊಂದರ ಮುಂಭಾಗಕ್ಕೆ ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು ಯುವಕರು ಕಪ್ಪು ಪ್ಲಾಸ್ಟಿಕ್ ಚೀಲವೊಂದನ್ನು ರಸೆಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾದರು. ಬಾಂಬಿನ ಅರಿವಿಲ್ಲದೆ ಬಾಲಕ ಅದನ್ನು ಎತ್ತಿಕೊಂಡಾಗ ಅದು ಸ್ಫೋಟಿಸಿತು.

2008: ಚೀನಾದ ಗಗನಯಾನಿ ಜೈ ಜಿಗಾಂಗ್ ಗಗನನೌಕೆಯಿಂದ ಹೊರ ಬಂದು ಬಾಹ್ಯಾಕಾಶದಲ್ಲಿ ಇದೇ ಮೊದಲ ಬಾರಿಗೆ ನಡಿಗೆ ಆರಂಭಿಸಿ ಚೀನಾದ ಧ್ವಜವನ್ನು ಪ್ರದರ್ಶಿಸಿದರು.

2008: ಅಪಹರಣಕಾರರು ಪಶ್ಚಿಮ ಅಫ್ಘಾನಿಸ್ಥಾನದಲ್ಲಿ 118 ಮಂದಿ ಕಾರ್ಮಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು..

2008: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ಎರಡು ಬಾರಿ ಪ್ರಬಲ ಭೂಕಂಪನ ಸಂಭವಿಸಿತು. ಮೊದಲ ಭೂಕಂಪನವು ರಿಕ್ಟರ್ ಮಾಪಕದಲ್ಲಿ 5.3ರಷ್ಟು ಇತ್ತು. ಮಿಂಡೋರೊ ಬಟಾನಾದಲ್ಲಿ ಸಂಭವಿಸಿದ ಎರಡನೇ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ 6.5ರಷ್ಟಿತ್ತು ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿದವು.

2008: ಸೈಬೀರಿಯಾದ ರಾಜಧಾನಿ ಡಮಾಸ್ಕಸ್ಸಿನಲ್ಲಿ ಕಾರು ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ 17 ಮಂದಿ ಮೃತರಾಗಿ ಹಲವರು ಗಾಯಗೊಂಡರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯ ಪ್ರಮುಖ ವೃತ್ತದಲ್ಲಿ ಈ ಕಾರು ಬಾಂಬ್ ಸ್ಫೋಟಿಸಿತು..

2007: 2007ರ ಏಪ್ರಿಲ್ 1ರಿಂದ ಎಲ್ಲ ಬಗೆಯ ಲಾಟರಿ ನಿಷೇಧ ಮಾಡಿ ಸರ್ಕಾರ ಕಳೆದ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟಿನ ವಿಭಾಗೀಯ ಪೀಠ ಎತ್ತಿಹಿಡಿಯಿತು. ಸರ್ಕಾರದ ಅಧಿಸೂಚನೆಯನ್ನು ಕಳೆದ ಮೇ 8ರಂದು ಎತ್ತಿಹಿಡಿದ ಏಕಸದಸ್ಯಪೀಠದ ತೀರ್ಪನ್ನು ಪ್ರಶ್ನಿಸಿ ಅನೇಕ ಲಾಟರಿ ಮಾಲೀಕರು, ಏಜೆಂಟರು ಸಲ್ಲಿಸಿದ್ದ ಅರ್ಜಿ, ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ನಾರಾಯಣ ಸ್ವಾಮಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. `ಇದು ಸರ್ಕಾರದ ನೀತಿಗೆ ಸಂಬಂಧಪಟ್ಟ ವಿಚಾರ. ಲಾಟರಿಗೆ ನಿಷೇಧ ಹೇರುವ ವಿಚಾರ ಬಜೆಟ್ಟಿನಲ್ಲಿ ಪ್ರಸ್ತಾಪ ಆಗಿದ್ದು ಎರಡೂ ಸದನಗಳು ಅದಕ್ಕೆ ಅನುಮತಿ ನೀಡಿವೆ. ಅಲ್ಲದೇ ಲಾಟರಿ ಕಾಯ್ದೆಯು ಸಂಸತ್ತಿನಲ್ಲಿಯೂ ಅಂಗೀಕಾರ ಪಡೆದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಪರಾಮರ್ಶೆ ಸಲ್ಲದು' ಎಂದು ಪೀಠ ಸ್ಪಷ್ಟಪಡಿಸಿತು. `ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಕೆಲ ಲಾಟರಿ ಮಾಲೀಕರು ಅಥವಾ ಏಜೆಂಟರ ಹಿತಾಸಕ್ತಿಗಿಂತ ಲಾಟರಿ ಆಟವಾಡಿ ನಾಶವಾಗುತ್ತಿರುವ ಅನೇಕ ಕುಟುಂಬಗಳನ್ನು ರಕ್ಷಿಸುವಂಥ ಸಾರ್ವಜನಿಕ ಹಿತಾಸಕ್ತಿಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಂಡಿದೆ. ಈ ಕಾರಣದಿಂದ ಲಾಟರಿ ನಿಷೇಧ ಕಾನೂನು ಬಾಹಿರ ಎನ್ನಲಾಗದು' ಎಂದು ಕೋರ್ಟ್ ಹೇಳಿತು.

2007: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಕಂಪೆನಿಗೆ (ನೈಸ್) ನೀಡಲಾಗಿದ್ದ ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆ (ಬಿಎಂಐಸಿ) ಗುತ್ತಿಗೆಯನ್ನು ರದ್ದುಗೊಳಿಸಿ ಹೊಸ ಟೆಂಡರ್ ಕರೆಯುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. `ನ್ಯಾಯಾಲಯದ ಮುಂದಿರುವ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಹೊಸ ಟೆಂಡರ್ ಕರೆಯಲು ರಾಜ್ಯಸರ್ಕಾರ ಸೆಪ್ಟೆಂಬರ್ 17 ರಂದು ಹೊರಡಿಸಿರುವ ಅಧಿಸೂಚನೆ ಮೇಲೆ ಕ್ರಮಕೈಗೊಳ್ಳಬಾರದು' ಎಂದು ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಹೇಳಿತು. ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳುವಂತೆ ಕೋರಿ ಅಶೋಕ್ ಖೇಣಿ ಅವರ ನೈಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಆದೇಶ ನೀಡಿತು.

 2007: ಒರಿಸ್ಸಾ, ಉತ್ತರ ಪ್ರದೇಶ ಸರ್ಕಾರಗಳು `ರಿಲಯನ್ಸ್ ಹಣ್ಣು ಮತ್ತು ತರಕಾರಿ ಚಿಲ್ಲರೆ ಮಾರಾಟ ಮಳಿಗೆಗಳನ್ನು' (ರಿಲಯನ್ಸ್ ಫ್ರೆಶ್) ಮುಚ್ಚುವಂತೆ ಆದೇಶದ ನೀಡಿದ ಹಿನ್ನೆಲೆಯಲ್ಲಿ, ರಿಲಯನ್ಸ್ ಕಂಪೆನಿ ಈ ರಾಜ್ಯಗಳಲ್ಲಿ ಹೂಡಬೇಕಾಗಿದ್ದ ಅಂದಾಜು 13000 ಕೋಟಿ ರೂಪಾಯಿ ಬಂಡವಾಳದ ಯೋಜನೆಯನ್ನು ಸ್ಥಗಿತಗೊಳಿಸಿತು. ಡೆಹ್ರಾಡೂನಿನಲ್ಲೂ ಸಣ್ಣ ವ್ಯಾಪಾರಸ್ಥರ ಒಕ್ಕೂಟದವರು ರಿಲಯನ್ಸ್  ಫ್ರೆಶ್ ಮಳಿಗೆಗಳ ಮೇಲೆ ದಾಳಿ  ನಡೆಸಿದರು. ಡೂನ್ ಉದ್ಯೋಗ ವ್ಯಾಪಾರ ಮಂಡಲ್ ಮತ್ತು  ಲಘು ವ್ಯಾಪಾರ ಅಸೋಸಿಯೇಷನ್ ಸಂಸ್ಥೆಗಳು ಸೇರಿ ಮಳಿಗೆಗಳ  ಮೇಲೆ ದಾಳಿ ನಡೆಸಿದವು.

2007: ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅ.6 ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಗೆ  ನಾಮಪತ್ರ ಸಲ್ಲಿಸಿದರು. ಪ್ರಧಾನಿ ಶೌಕತ್ ಅಜೀಜ್ ನೇತೃತ್ವದಲ್ಲಿ ಹಲವು ಸಚಿವರು ಹಾಗೂ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಡಳಿತರೂಢ ಪಾಕಿಸ್ಥಾನ ಮುಸ್ಲಿಂ ಲೀಗ್-ಕ್ಯೂ ಪಕ್ಷದ ಪ್ರಮುಖ ನಾಯಕರು ಮುಷರಫ್ ಪರವಾಗಿ ನಾಮಪತ್ರವನ್ನು ಮುಖ್ಯ ಚುನಾವಣಾ ಆಯುಕ್ತ ಫಾರೂಕ್ ಅವರಿಗೆ ಸಲ್ಲಿಸಿದರು.

2007: ವಿಶ್ವವಿದ್ಯಾಲಯದ 12 ಯುವತಿಯರನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ ಮೂವರು ದುಷ್ಕರ್ಮಿಗಳನ್ನು ಇರಾನಿನಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಸಹಸ್ರಾರು ಜನರ ಸಮ್ಮುಖದಲ್ಲಿ ಅವರನ್ನು ನೇಣುಬಿಗಿದು ಸಾಯಿಸಲಾಯಿತು.

2006: ಫ್ರೆಂಚ್ ವೈದ್ಯರು ತೂಕರಹಿತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ 10 ನಿಮಿಷಗಳ ಅವಧಿಯ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದರು. ಬೋರ್ಡಿಯಕ್ಸ್ ವಿಶ್ವವಿದ್ಯಾಲಯ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಘಟಕದ ಮುಖ್ಯಸ್ಥ ಡೊಮಿನಿಕ್ ಮಾರ್ಟಿನ್ ನೇತೃತ್ವದ ನಾಲ್ವರು ವೈದ್ಯರ ತಂಡವು ಪಾರಾಬೋಲಿಕ್ ಫ್ಲೈಟ್- 25 ವಿಮಾನದಲ್ಲಿ 22 ಸೆಕೆಂಡುಗಳ ತೂಕರಹಿತ ಸ್ಥಿತಿಯಲ್ಲಿ ರೋಗಿಯ ಕೈಯ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಈ ಶಸ್ತ್ರಚಿಕಿತ್ಸೆಗಾಗಿ ಏರ್ಬಸ್ ಎ 300 ವಿಮಾನವನ್ನು ಸಜ್ಜುಗೊಳಿಸಲಾಗಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐಎಸ್ಎಸ್) ಗಗನಯಾತ್ರಿಗಳಿಗಾಗಿ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಈ ಪ್ರಯೋಗ ನೆರವಾಗುವುದು.

2006: ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಗಾರ ಟೈಗರ್ ಮೆಮನ್ ನ ಸಹಚರರಲ್ಲಿ ಒಬ್ಬನಾದ ಮೊಹಮ್ಮದ್ ಮುಸ್ತಫಾ ಮುಸಾ ತರಾನಿಯನ್ನು ಟಾಡಾ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿತು. ಈತನ ವಿರುದ್ಧದ ಎಲ್ಲ 12 ಆರೋಪಗಳೂ ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿತು.

2006: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಆಟಗಾರ ದಿಲೀಪ್ ವೆಂಗ್ ಸರ್ಕಾರ್ ಆಯ್ಕೆಯಾದರು.

2006: ಬೆಳಗಾವಿಗೆ ರಾಜ್ಯದ ಎರಡನೇ ರಾಜಧಾನಿಯ ಸ್ಥಾನಮಾನ ನೀಡಲಾಗುವುದು. ಜೊತೆಗೆ ಅಲ್ಲಿ ಸುವರ್ಣ ವಿಧಾನ ಸೌಧ ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯಲ್ಲಿ ನಡೆದ ಚಾರಿತ್ರಿಕ ವಿಧಾನ ಮಂಡಲ ಅಧಿವೇಶನ ಕಾಲದಲ್ಲಿ ವಿಧಾನಪರಿಷತ್ತಿನಲ್ಲಿ ಪ್ರಕಟಿಸಿದರು.

1998: ಸೋಷಿಯಲ್ ಡೆಮಾಕ್ರಾಟ್ ಸದಸ್ಯ ಗೆರ್ಹಾರ್ಡ್ ಶ್ರೋಡರ್ ಅವರು ಜರ್ಮನಿಯ ಚಾನ್ಸಲರ್ ಆಗಿ ಚುನಾಯಿತರಾದರು. ಇದರೊಂದಿಗೆ ಜರ್ಮನಿಯಲ್ಲಿ 16 ವರ್ಷಗಳ ಕನ್ಸರ್ವೇಟಿವ್ ಆಡಳಿತ ಕೊನೆಗೊಂಡಿತು.

1998: ಕೆನಡಾದ ಓಟಗಾರ ಬೆನ್ ಜಾನ್ಸನ್ ಅವರು ನಿಷೇಧಿತ ಸ್ಟೀರಾಯಿಡ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ರುಜುವಾತಾಗಿರುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿತು. ಸೋಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾನ್ಸನ್ ಪಡೆದುಕೊಂಡಿದ್ದ ಸ್ವರ್ಣ ಪದಕವನ್ನು ಕಿತ್ತುಕೊಂಡ ಸುದ್ದಿ ಜಗತ್ತಿನಾದ್ಯಂತ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಯಿತು. ಜಾನ್ಸನ್ ತಾನು ಸ್ಟೀರಾಯಿಡ್ ಸೇವಿಸಿದ್ದು ಹೌದೆಂದೂ, ಸಾರ್ವಜನಿಕರ ಎದುರು ತಾನು ಸೇವಿಸಿಲ್ಲ ಎಂದು ಸುಳ್ಳು ಹೇಳ್ದಿದುದಾಗಿಯೂ 1989ರ ಜೂನ್ ತಿಂಗಳಲ್ಲಿ ಒಪ್ಪಿಕೊಂಡ.

1996: ತಾಲಿಬಾನ್ ಬಂಡುಕೋರರು ಆಫ್ಘಾನಿ ಅಧ್ಯಕ್ಷ ಬರ್ ಹಾನ್ದುದೀನ್ ರಬ್ಬಾನಿ ಅವರ ಸರ್ಕಾರವನ್ನು ಪದಚ್ಯುತಿಗೊಳಿಸಿ, ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡರು. ಮಾಜಿ ನಾಯಕ ಮಹಮ್ಮದ್ ನಜೀಬುಲ್ಲಾ ಅವರನ್ನು ಗಲ್ಲಿಗೇರಿಸಿ, ಆಫ್ಘಾನಿಸ್ಥಾನವನ್ನು `ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರ' ಎಂಬುದಾಗಿ ಘೋಷಿಸಿದರು.

1989: ಹಿನ್ನೆಲೆ ಮತ್ತು ಸಂಗೀತ ನಿರ್ದೇಶಕ ಹೇಮಂತ ಕುಮಾರ್ ಮುಖರ್ಜಿ ನಿಧನರಾದರು.

1968: ಪೋರ್ಚುಗಲ್ ಪ್ರಧಾನಮಂತ್ರಿ ಆಂಟೋನಿಯೋ ಸಾಲಝಾರ್ ಅವರು ತಮ್ಮ 36 ವರ್ಷ 84 ದಿನಗಳ ಸುದೀರ್ಘ ಆಳ್ವಿಕೆಯ ಬಳಿಕ ನಿವೃತ್ತರಾದರು.

1958: ಮಿಹಿರ್ ಸೆನ್ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಡೋವರಿನಿಂದ ಕ್ಯಾಲಯಿಸ್ ವರೆಗಿನ 34 ಕಿ.ಮೀ. ದೂರವನ್ನು 14 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿದರು.

1833: ಭಾರತದ ಧಾರ್ಮಿಕ, ಸಾಮಾಜಿಕ, ಶಿಕ್ಷಣ ಸುಧಾರಕ ರಾಜಾ ರಾಮ್ ಮೋಹನ ರಾಯ್ ಅವರು ಗ್ಲೌಸ್ಟರ್ ಶೈರ್ ನ ಬ್ರಿಸ್ಟಲಿನಲ್ಲಿ ತಮ್ಮ 61ನೇ ವಯಸಿನಲ್ಲಿ ನಿಧನರಾದರು.

1931: ಕೆಳದಿ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿ ವಿಶ್ವ ಭೂಪಟದಲ್ಲಿ ಕೆಳದಿಯ ಹೆಸರು ಮೂಡಿಸಿದ ಗುಂಡಾ ಜೋಯಿಸ ಅವರು ನಂಜುಂಡಾ ಜೋಯಿಸರು- ಮೂಕಾಂಬಿಕೆ ದಂಪತಿಯ ಮಗನಾಗಿ ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಜನಿಸಿದರು. ಕೆಳದಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ ಅವರು ಗ್ರಾಮಾಂತರ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಸಿ ಆಯುರ್ವೇದ, ಸಂಗೀತ, ಜ್ಯೋತಿಷ್ಯಕ್ಕೆ ಸಂಬಂಧಿಸಿದ 2000ಕ್ಕೂ ಹೆಚ್ಚು ಓಲೆಗರಿ, 120 ಚಾರಿತ್ರಿಕ ದಾಖಲೆಗಳು, 2-3 ಸಾವಿರ ವಿವಿಧ ಭಾಷಾ ಗ್ರಂಥಗಳು, ಕೃಷ್ಣದೇವರಾಯನ ಕಾಲದ ದಿನಚರಿಯ ಓಲೆಗಳು, ಸರ್ವಜ್ಞನ ಪೂರ್ವೋತ್ತರದ ತಾಡಪತ್ರಿಗಳು, ಮಹಾಭಾರತದ ಸೂಕ್ಷ್ಮ ವರ್ಣಚಿತ್ರಗಳು ಇತ್ಯಾದಿಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ.

1927: ಕೇಶವ ಬಲಿರಾಂ ಹೆಡ್ಗೇವಾರ್ ಅವರು ತಮ್ಮ ಕೆಲವು ಗೆಳೆಯರನ್ನು ಸೇರಿಸಿಕೊಂಡು ಮಹಾರಾಷ್ಟ್ರದ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಸ್ಥಾಪಿಸಿದರು.

1907: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ (27-9-1907ರಿಂದ 24-3-1931) ಜನ್ಮದಿನ. ಅವಿಭಜಿತ ಭಾರತದ ಲಾಯಲ್ ಪುರದ ಪಶ್ಚಿಮ ಪಂಜಾಬಿಗೆ ಸೇರಿದ ಬಾಂಗಾ (ಈಗ ಪಾಕಿಸ್ಥಾನದಲ್ಲಿದೆ) ಗ್ರಾಮದಲ್ಲಿ ಈದಿನ ಜನಿಸಿದ ಭಗತ್ ಸಿಂಗ್ ಗೆ ತಂದೆ ಮತ್ತು ಚಿಕ್ಕಪ್ಪನಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ. 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ಥಳಕ್ಕೆ ಭೇಟಿ ನೀಡಿದ ಅವರು 12ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ದೀಕ್ಷೆ ಪಡೆದರು. ಸೈಮನ್ ಚಳವಳಿಯಲ್ಲಿ ಲಾಲಾ ಲಜಪತ್ ರಾಯ್ ಅವರ ಸಾವಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿಯನ್ನು ಗುಂಡಿಟ್ಟು ಕೊಂದರು. 1929 ರಲ್ಲಿ ಸಂವಿಧಾನ ಸಭೆಗೆ ಬಾಂಬ್ ಹಾಕಿ ಬಂಧನಕ್ಕೆ ಒಳಗಾದರು. ಬ್ರಿಟಿಷ್ ವಿರೋಧಿ ಆರೋಪದಲ್ಲಿ ಅವರನ್ನು 1931ರ ಮಾರ್ಚ್ 24ರಂದು  ಗಲ್ಲಿಗೇರಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, September 27, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 26

ಇಂದಿನ ಇತಿಹಾಸ

ಸೆಪ್ಟೆಂಬರ್ 26

ಭಾರತೀಯ ಪ್ರಕೃತಿ ಚಿತ್ರಗಳ ನಿರ್ಮಾಪಕ, ಮೂರು ಬಾರಿ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೈಕ್ ಪಾಂಡೆ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ರಾಜೀವ್ ಗಾಂಧಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿಗೆ ಆಯ್ಕೆಯಾದರು.

2008: ಗುಜರಾತಿನ  ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಆಯೋಗದ ವರದಿಯ ಪ್ರಸಾರವನ್ನು ತಡೆ ಹಿಡಿಯಲು ಸುಪ್ರೀಂಕೋರ್ಟ್ ನಿರಾಕರಿಸಿತು. ವರದಿಗೆ ತಡೆಯಾಜ್ಞೆ ವಿಧಿಸುವಂತೆ ಕೋರಲಾದ ಅರ್ಜಿಯೊಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠದ ಮುಂದೆ ಈದಿನ ಪ್ರಸ್ತಾಪಕ್ಕೆ ಬಂದಾಗ ಪೀಠವು ಅದನ್ನು ಆಲಿಸಲು ಅಕ್ಟೋಬರ್ ತಿಂಗಳ 13ರ ದಿನಾಂಕವನ್ನು ನಿಗದಿ ಪಡಿಸಿತು. ಸಿಟಿಜನ್  ಫಾರ್ ಜಸ್ಟೀಸ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ ನ್ಯಾಯಮೂರ್ತಿ ನಾನಾವತಿ  ಆಯೋಗದ  ವರದಿಯನ್ನು  ತಡೆ ಹಿಡಿಯಲು ಕೋರಿತು. ಗೋಧ್ರಾ ಹತ್ಯಾಕಾಂಡದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಯು.ಸಿ. ಬ್ಯಾನರ್ಜಿ ಸಮಿತಿಯ ವರದಿಯನ್ನು ಹಿಂದೆ ತಡೆ ಹಿಡಿಯಲಾಗಿತ್ತು. ಗುಜರಾತ್ ವಿಧಾನಮಂಡಲದಲ್ಲಿ ಮಂಡನೆಯಾದ  ನ್ಯಾಯಮೂರ್ತಿ ನಾನಾವತಿ ಆಯೋಗದ ವರದಿ ಬಗೆಗೂ ಅದೇ ಮಾದರಿ ಕ್ರಮ ಕೈಗೊಳ್ಳಬೇಕು ಎಂದು  ಸರ್ಕಾರೇತರ ಸಂಸ್ಥೆ ಕೋರಿತು. ಗೋಧ್ರಾ ಘಟನಯಲ್ಲಿ ಮುಖ್ಯಮಂತ್ರಿ, ಅವರ ಸಂಪುಟ ಸದಸ್ಯರು ಇಲ್ಲವೇ ಪೊಲೀಸ್ ಅಧಿಕಾರಿಗಳು ಪಾತ್ರ ವಹಿಸಿದ್ದರು ಎಂಬುದನ್ನು ಸಾಬೀತು ಪಡಿಸುವಂತಹ ಯಾವ ಸಾಕ್ಷ್ಯಾಧಾರವೂ ಇಲ್ಲ ಎಂದು ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ನಾನಾವತಿ ಆಯೋಗದ ವರದಿ ಹೇಳಿತ್ತು. 2002ರ ಫೆಬ್ರುವರಿಯಲ್ಲಿ ಅಯೋಧ್ಯೆಯಿಂದ ವಾಪಸಾಗುತ್ತಿದ್ದ 58 ಮಂದಿ ಕರಸೇವಕರು ಸಬರಮತಿ ಎಕ್ಸ್  ಪ್ರೆಸ್ ರೈಲು ಗಾಡಿಯ ಅಗ್ನಿ ದುರಂತದಲ್ಲಿ ಅಸು ನೀಗಿದ್ದರು. ಈ ಘಟನೆಯ ತನಿಖೆ ನಡೆಸಿದ ನ್ಯಾಯಮೂರ್ತಿ ನಾನಾವತಿ ಅವರು ತಮ್ಮ ವರದಿಯಲ್ಲಿ `ಇದು  ಗೋಧ್ರಾದ ಅಮನ್ ಅತಿಥಿಗೃಹದಲ್ಲಿ ರೂಪುಗೊಂಡ ಪೂರ್ವ ಯೋಜಿತ ಸಂಚು' ಎಂದು ಹೇಳಿದ್ದರು.

2008: ಹಿರಿಯ ನಾಗರಿಕರ ಕಾಯ್ದೆಯು 2007ರ್ಲಲಿ ಅಸ್ತಿತ್ವಕ್ಕೆ ಬಂದ ಬಳಿಕ ಬಹುಶಃ ಮೊತ್ತ ಮೊದಲ ಪ್ರಕರಣದಲ್ಲಿ ಕೊಟ್ಟಾಯಂನ 58 ವರ್ಷದ ವ್ಯಕ್ತಿಯೊಬ್ಬರನ್ನು ತನ್ನ ವೃದ್ಧ ತಾಯಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಕೊಲ್ಲಂ ಪೊಲೀಸರು ಅವರ ಇಬ್ಬರು ಸಹೋದರರು ಮತ್ತು ಮೂವರು ಸಹೋದರಿಯರು ಸೇರಿದಂತೆ ಇತರ ಐವರ ವಿರುದ್ಧವೂ ಖಟ್ಲೆ ದಾಖಲಿಸಿದರು. ಜಿಲಾ ಅಧಿಕಾರಿಯ  ಕೇಂದ್ರ ಕಚೇರಿಯಿಂದ ಬಂದ ಸೂಚನೆಯ ಮೇರೆಗೆ ಪಾಲಕರ ನಿರ್ವಹಣೆ ಮತ್ತು  ಕಲ್ಯಾಣ ಹಾಗೂ ಹಿರಿಯ  ನಾಗರಿಕರ ಕಾಯ್ದೆಯ ಅಡಿಯಲ್ಲಿ ಈ ಐದು ಮಂದಿಯ  ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಪೊಲೀಸರು ಮತ್ತು ವಕೀಲರ ಪ್ರಕಾರ ಕೇರಳದಲ್ಲಿ ಮಾತ್ರವೇ ಅಲ್ಲ, ರಾಷ್ಟ್ರದಲ್ಲೂ ಹಿರಿಯ ನಾಗರಿಕರ ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಪ್ರಥಮ ಪ್ರಕರಣ ಇದು ಎನ್ನಲಾಯಿತು. 84 ವರ್ಷದ ವಯೋವೃದ್ಧೆ ಲಕ್ಷ್ಮಿ ಕುಟ್ಟಿಯ  ದುಃಸ್ಥಿತಿ, ಈ ಪ್ರದೇಶದ ಸಾಮಾಜಿಕ ಕಾರ್ಯಕರ್ತರ ಮೂಲಕ ಅಧಿಕಾರಿಗಳ ಗಮನಕ್ಕೆ ಬಂತು. ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಈಕೆಯನ್ನು ಆಕೆಯ ಮನೆಯಲ್ಲಿ ಬಿಟ್ಟು ಬಿಡಲಾಗಿತ್ತು. ಈಕೆಯ ದುಃಸ್ಥಿತಿ ಗಮನಿಸಿದ ಸಾಮಾಜಿಕ ಕಾರ್ಯಕರ್ತರು ಮೂರು ವಾರಗಳ ಹಿಂದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಲಕ್ಷ್ಮಿ ಕುಟ್ಟಿಯ  ಸೊಸೆ ಮೂರು ದಿನಗಳ  ಬಳಿಕ ಅತ್ತೆಯನ್ನು ಸೇವಾ ಕಾರ್ಯಕರ್ತರ ಆಶ್ರಯದಲ್ಲಿ ಬಿಟ್ಟು ಹೊರಟು ಹೋದಳು. ಆಕೆಯ ಆರೋಗ್ಯ ಸ್ವಲ್ಪ ಸುಧಾರಿಸಿದ ಬಳಿಕ ಜಿಲ್ಲಾ ಆಧಿಕಾರಿಗಳು ಮತ್ತು  ಸಾಮಾಜಿಕ ಕಾರ್ಯಕರ್ತರು ಆಕೆಯನ್ನು ಇಲ್ಲಿಗೆ ಸಮೀಪದ ಮಯ್ಯನ್ನಾಡಿನ ಅನಾಥಾಲಯವೊಂದಕ್ಕೆ ಸ್ಥಳಾಂತರಿಸಿದರು. ನಂತರ ಥಂಕಶ್ಯೇರಿಯಲ್ಲಿ ಇಗರ್ಜಿಯೊಂದು ನಡೆಸುತ್ತಿರುವ ನಿರ್ಗತಿಕರ ಧಾಮಕ್ಕೆ ಸೇರಿಸಿದರು. ಆ ಬಳಿಕ ವಯೋವೃದ್ಧರ ರಕ್ಷಣೆಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನದ ಹೊಣೆ ಹೊತ್ತ ಜಿಲ್ಲಾ ಕೇಂದ್ರದ ಅಧಿಕಾರಿ ಈ ವೃದ್ಧೆಯ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಲಕ್ಷ್ಮಿ ಕುಟ್ಟಿಯ ಹಿರಿಯ ಮಗ ರಮಣನ್ ಅವರನ್ನು ಕೊಟ್ಟಾಯಮ್ಮಿನಲ್ಲಿ ಬಂಧಿಸಿದ ಸಬ್ ಇನ್ಸ್ಪೆಕ್ಟರ್, ಪ್ರಕರಣ ದಾಖಲಿಸಿ ನಂತರ  ಬಿಡುಗಡೆ ಮಾಡಿದರು.

2008: ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಜಿಲ್ಲೆ ರಚಿಸಲು ಗುಲ್ಬರ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತು. ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿಯನ್ನು ಘೋಷಿಸಲಾಗುವುದು. ಶಹಪುರ ತಾಲ್ಲೂಕನ್ನು ಉಪ ವಿಭಾಗವಾಗಿ ಮಾಡಲಾಗುವುದು ಎಂದು ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು ಪ್ರಕಟಿಸಿದರು.

2007: ಎಲ್ಲ ನ್ಯಾಯಾಲಯಗಳು ಮತ್ತು ಟ್ರಿಬ್ಯೂನಲ್ಲುಗಳ ನ್ಯಾಯಾಂಗ ಕಲಾಪಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯನ್ನು ಮೀರಿದವುಗಳು ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಮಹತ್ವದ ತೀರ್ಪು ನೀಡಿತು. ನ್ಯಾಯಾಂಗ ಸಂಸ್ಥೆಯು ಸಂಪೂರ್ಣ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ನ್ಯಾಯಾಂಗ ಕಲಾಪದ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯ ಬಳಕೆಗೆ ಆಯೋಗ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ನೇತೃತ್ವದ ಆಯೋಗದ ಪೂರ್ಣಪೀಠವು ತನ್ನ 22 ಪುಟಗಳ ತೀರ್ಪಿನಲ್ಲಿ ಹೇಳಿತು. ದೆಹಲಿಯ ಚಾರ್ಟರ್ಡ್ ಅಕೌಂಟೆಂಟ್ ರಾಕೇಶ್ ಕುಮಾರ ಗುಪ್ತ ಅವರ ಅರ್ಜಿಯ ವಿಚಾರಣೆ ನಡೆಸಿದ ಆಯೋಗವು ಈ ತೀರ್ಪು ನೀಡಿತು. ಆದಾಯ ತೆರಿಗೆ ಮೇಲ್ಮನವಿ ಟ್ರಿಬ್ಯೂನಲ್ಲಿನಿಂದ (ಐಟಿಎಟಿ) ಎಸ್ಕಾರ್ಟ್ಸ್  ಲಿಮಿಟೆಡ್ಡಿನ ಆದಾಯ ತೆರಿಗೆ ಅಂದಾಜಿಗೆ ಸಂಬಂಧಿಸಿದಂತೆ ಟ್ರಿಬ್ಯೂನಲ್ ಸದಸ್ಯರ ಕಲಾಪದ ಮಾಹಿತಿ ಕೊಡಿಸುವಂತೆ ರಾಕೇಶ್ ಕುಮಾರ ಗುಪ್ತ ಕೋರಿದ್ದರು. ಪ್ರಕರಣಕ್ಕೆ  ಸಂಬಂಧಿಸಿದ ದಾಖಲೆಗಳ ತಪಾಸಣೆ ನಡೆಸಬೇಕು ಎಂದೂ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.

2007: ಭಾರತೀಯ ಪ್ರಕೃತಿ ಚಿತ್ರಗಳ ನಿರ್ಮಾಪಕ, ಮೂರು ಬಾರಿ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೈಕ್ ಪಾಂಡೆ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ರಾಜೀವ್ ಗಾಂಧಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿಗೆ ಆಯ್ಕೆಯಾದರು. ಪ್ರಶಸ್ತಿಯು 1ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.  ಕೀನ್ಯಾದಲ್ಲಿ  ಹುಟ್ಟಿದ ಪಾಂಡೆ, ಬ್ರಿಟನ್ ಹಾಗೂ ಅಮೆರಿಕದಲ್ಲಿ ತರಬೇತಿ ಪಡೆದು ತಮ್ಮ ವೃತ್ತಿ ಬದುಕನ್ನು ಭಾರತದಲ್ಲಿ ಆರಂಭಿಸಿದ್ದರು. ವನ್ಯಜೀವಿ ಹಾಗೂ ಪರಿಸರದ ಬಗ್ಗೆ ಇವರು ನಿರ್ಮಿಸಿದ ಚಿತ್ರ ಮತ್ತು ಧಾರಾವಾಹಿಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ.

2007: 70 ದಶ ಲಕ್ಷ ವರ್ಷದ ವಿಶ್ವದಲ್ಲೇ ಅತಿ ಹಳೆಯದಾದ ಹಾವಿನ ಪಳೆಯುಳಿಕೆಯೊಂದನ್ನು ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ವಿಜ್ಞಾನಿಗಳು  ಪತ್ತೆ ಮಾಡಿದರು.

2007: ಮ್ಯಾನ್ಮಾರಿನಲ್ಲಿ (ಹಿಂದಿನ ಬರ್ಮಾ) ದಶಕಗಳಿಂದ ಅಧಿಕಾರವನ್ನು ಅಕ್ರಮವಾಗಿ ಕೇಂದ್ರೀಕರಣ ಮಾಡಿಕೊಂಡ ಸೇನಾಡಳಿತದ ವಿರುದ್ಧ 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಚಳವಳಿ ಆರಂಭವಾಗಿದ್ದು, ಪ್ರತಿಭಟನೆ ನಡೆಸಿದ ಬಿಕ್ಕುಗಳ ನೇತೃತ್ವದ ಗುಂಪನ್ನು ಚದುರಿಸಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ನೂರಾರು ಬಿಕ್ಕುಗಳನ್ನು ಬಂಧಿಸಲಾಯಿತು.

 2007: ದಕ್ಷಿಣ ವಿಯೆಟ್ನಾಮಿನ ಕ್ಯಾನ್ ಥೋ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಕಾರಣ 60 ಕೆಲಸಗಾರರು ಮೃತರಾಗಿ ಇತರ 100 ಮಂದಿ ಕಣ್ಮರೆಯಾದರು. ಜಪಾನ್ ನೆರವಿನೊಂದಿಗೆ ಈ ಸೇತುವೆಯನ್ನು ಹ್ಯೂ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿತ್ತು. ಬೆಳಗ್ಗೆ 8 ಗಂಟೆಗೆ ಸೇತುವೆ ಕುಸಿದಾಗ  ಸ್ಥಳದಲ್ಲಿ ಸುಮಾರು 250 ಮಂದಿ ಕೆಲಸ ಮಾಡುತ್ತಿದ್ದರು.

2007: ಕರ್ನಾಟಕ ಮುಖ್ಯಮಂತ್ರಿಯ ನಿವಾಸದ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಹಾಕಿ ಗೆದ್ದ ತಂಡದಲ್ಲಿದ್ದ ರಾಜ್ಯದ ಮೂವರು ಹಾಕಿ ಆಟಗಾರರಿಗೆ ತಲಾ ಎರಡು ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು. ವಿಶ್ವಕಪ್ ಗೆದ್ದು ತಂದರೆ ಹಾಕಿ ಆಟಗಾರರನ್ನು ಗೌರವಿಸಲಾಗುವುದು ಎಂದು ಇದಕ್ಕೆ ಮುನ್ನ ಕುಮಾರಸ್ವಾಮಿ ಕಟುವಾಗಿ ಹೇಳಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಗ್ಗಾಮುಗ್ಗಾ ಬಹುಮಾನ ಪ್ರಕಟಿಸಿದವು, ಆದರೆ ಭಾರತ ಹಾಕಿ ತಂಡ ವಿಶ್ವಕಪ್ ಗೆದ್ದಾಗ ಕ್ಯಾರೇ ಎನ್ನಲಿಲ್ಲ ಎಂದು ದೂರಿದ ಹಾಕಿ ಆಟಗಾರರು ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಕಿದ್ದರು.

2007: ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ 20 ವಿಶ್ವಕಪ್ ಟೂರ್ನಿಯಲ್ಲಿ ಕಿರೀಟ ಜಯಿಸಿ ಐತಿಹಾಸಿಕ ಸಾಧನೆಗೈದು ಭಾರತೀಯ ಕ್ರಿಕೆಟಿನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಮುಂಬೈ ನಗರ ಅದ್ದೂರಿಯ ಸ್ವಾಗತ ನೀಡಿತು.

2007:  ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ದಾಖಲೆ ಪ್ರಮಾಣದಲ್ಲಿ ಮುಂದುವರಿದು ಇನ್ನೊಂದು ಮಜಲು ತಲುಪಿತು. ಕೇವಲ ಆರು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು ಮತ್ತೆ ಒಂದು ಸಾವಿರ ಅಂಶಗಳಷ್ಟು ಹೆಚ್ಚಳ ಸಾಧಿಸಿ, ದಿನದ ಗರಿಷ್ಠ ಮಟ್ಟ 17 ಸಾವಿರ ಅಂಶಗಳ ಗಡಿ ದಾಟಿ  ಹೊಸ ದಾಖಲೆ ಬರೆಯಿತು. ಇದರಿಂದ ಷೇರು ಹೂಡಿಕೆದಾರರಿಗೆ ಕೇವಲ 6 ದಿನಗಳಲ್ಲಿ ರೂ 2 ಲಕ್ಷ ಕೋಟಿಗಳಷ್ಟು ಲಾಭವಾಯಿತು. ಮಾರುಕಟ್ಟೆಯ ಒಟ್ಟು ಬಂಡವಾಳ ಮೌಲ್ಯವೂ ರೂ 51,19,729 ಕೋಟಿಗಳಷ್ಟಾಯಿತು.

2007: ವಿಶ್ವಾದ್ಯಂತ ಪ್ರಾಮಾಣಿಕತೆಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾರತ ಪ್ರಸಕ್ತ ವರ್ಷ 72 ನೇ ಸ್ಥಾನ ಪಡೆದಿದೆ ಎಂದು ಪಾರದರ್ಶಕತೆ ಕುರಿತ ಅಂತಾರಾಷ್ಟ್ರೀಯ ಸಮಿತಿ (ಟಿಐ) ಪ್ರಕಟಿಸಿತು. ಪ್ರಾಮಾಣಿಕತೆ ಪಟ್ಟಿಯಲ್ಲಿ 2006ರಲ್ಲಿ ಭಾರತ 70 ನೇ ಸ್ಥಾನದಲ್ಲಿ ಇತ್ತು. ಆದರೆ ಈ ವರ್ಷ ಶೇ 3.5 ರಷ್ಟು ಸುಧಾರಿಸಿದೆ ಎಂದು ಟಿಐ ವರದಿ ತಿಳಿಸಿತು. ಚೀನಾ, ಮೆಕ್ಸಿಕೊ, ಮೊರಾಕ್ಕೊ ಹಾಗೂ ಪೆರು ದೇಶಗಳೂ 72 ನೇ ಸ್ಥಾನ ಗಳಿಸಿವೆ. ಡೆನ್ಮಾರ್ಕ್, ಫಿನ್ಲ್ಯಾಂಡ್ ಹಾಗೂ ನ್ಯೂಜಿಲ್ಯಾಂಡ್ ದೇಶಗಳಲ್ಲಿ ಭ್ರಷ್ಟಾಚಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ವರದಿ ಹೇಳಿತು.

2007: `ಒಸಾಮಾ ಬಿನ್ ಲಾಡೆನ್ ಕುರಿತಂತೆ ಇತ್ತೀಚೆಗೆ ಬಿಡುಗಡೆಯಾದ `ವೀಡಿಯೋದಲ್ಲಿದ್ದ ವ್ಯಕ್ತಿ ನನ್ನ ತಂದೆಯಲ್ಲ' ಎಂದು ಆತನ ನಾಲ್ಕನೇ ಪುತ್ರ ಒಮರ್ ಲಾಡೆನ್ ಲಂಡನ್ನಿನಲ್ಲಿ ಸ್ಪಷ್ಟಪಡಿಸಿದ. ಬ್ರಿಟನ್ನಿನಲ್ಲಿ ವಾಸವಾಗಿರುವ 27 ವರ್ಷದ ಒಮರ್ 51 ವರ್ಷದ ತನ್ನ ಬ್ರಿಟಿಷ್ ಪತ್ನಿ ಜೇನ್ ಫೆಲಿಕ್ಸ್ ಬ್ರೌನ್ ಗೆ ಈ ವಿಷಯ ತಿಳಿಸಿದ್ದಾನೆ ಎಂದು `ನ್ಯೂಸ್ ಆಫ್ ದಿ ವರ್ಲ್ಡ್' ಪತ್ರಿಕೆ ವರದಿ ಮಾಡಿತು. ವೀಡಿಯೋದಲ್ಲಿರುವ  ವ್ಯಕ್ತಿ ನನ್ನ ತಂದೆಯಲ್ಲ. ಆತ ನಕಲಿ ಲಾಡೆನ್ ಎಂದು ವೀಡಿಯೋವನ್ನು ಐದಾರು ಬಾರಿ ವೀಕ್ಷಿಸಿದ ಬಳಿಕ ಒಮರ್ ತಿಳಿಸಿರುವುದಾಗಿ ಪತ್ನಿ ಜೇನ್ ಫೆಲಿಕ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿ ಹೇಳಿತು. ಒಮರನಿಂದ ತನಗೆ ಸೆಪ್ಟೆಂಬರ್ 15ರಂದು ವಿಚ್ಛೇದನ ದೊರೆತಿರುವುದಾಗಿ ಹೇಳಿರುವ ಜೇನ್, ಅಂದೇ ನಮ್ಮ ವಿವಾಹ ವಾರ್ಷಿಕೋತ್ಸವ ಇದ್ದುದು ದುರಂತ ಎಂದು ಪ್ರತಿಕ್ರಿಯಿಸಿರುವುದಾಗಿ ಪತ್ರಿಕೆ ಪ್ರಕಟಿಸಿದೆ.

2007: ಸಾಗರದಾಚೆಯ ಉದ್ದಿಮೆ ಸಂಸ್ಥೆಗಳ ಸ್ವಾಧೀನ ಪ್ರಕ್ರಿಯೆ ಮುಂದುವರಿಸಿದ ಬೆಂಗಳೂರು ಮೂಲದ ಮದ್ಯದ ದೊರೆ ವಿಜಯ್ ಮಲ್ಯ ಅವರು, ಅಮೆರಿಕದ ಜೆಟ್ ತಯಾರಿಕಾ ಖಾಸಗಿ ಸಂಸ್ಥೆ ಎಪಿಕ್ ನ ಶೇ. 50ರಷ್ಟು ಷೇರುಗಳನ್ನು ರೂ 480 ಕೋಟಿಗಳಿಗೆ ಖರೀದಿಸಿದರು. ಯುಬಿ ಗ್ರೂಪ್ ಮುಖ್ಯಸ್ಥರಾಗಿರುವ ವಿಜಯ್ ಮಲ್ಯ, ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಈ ಕಂಪೆನಿಯ ಶೇ 50 ರಷ್ಟು ಷೇರು ಖರೀದಿಸಿದರು.

2006: 2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಬಾರಾಮುಲ್ಲಾ ನಿವಾಸಿ ಮೊಹಮ್ಮದ್ ಅಫ್ಜಲನನ್ನು ಅಕ್ಟೋಬರ್ 20ರಂದು  ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೆ ಏರಿಸಬೇಕು ಎಂದು ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರಾದ ರವೀಂದರ್ ಕೌರ್ ಆಜ್ಞಾಪಿಸಿದರು. ಕೌರ್ ಅವರು ದಾಳಿ ನಡೆದ ಸುಮಾರು ಐದು ವರ್ಷಗಳ ಬಳಿಕ ಮರಣದಂಡನೆ ಜಾರಿ ವಾರಂಟ್ ಹೊರಡಿಸಿದರು. 2002ರ ಡಿಸೆಂಬರ್ 18ರಂದು ವಿಶೇಷ ಪೋಟಾ ನ್ಯಾಯಾಲಯವು ಅಫ್ಜಲನಿಗೆ ಮರಣದಂಡನೆ ವಿಧಿಸಿತ್ತು. ದೆಹಲಿ ಹೈಕೋಟರ್್ ದೃಢಪಡಿಸಿದ್ದ ಈ ಮರಣದಂಡನೆ ಆದೇಶವನ್ನು ಸುಪ್ರೀಂಕೋರ್ಟ್ ಕೂಡಾ 2005ರ ಆಗಸ್ಟ್ 4ರಂದು ಎತ್ತಿ ಹಿಡಿದಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರನ್ನು 1989ರ ಜನವರಿ 6ರಂದು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಇಲ್ಲಿ ಜಾರಿಯಾಗಿದ್ದ ಕೊನೆಯ ಮರಣದಂಡನೆ ಪ್ರಕರಣ ಇದು.

2006: ಜಪಾನಿನ ನೂತನ ಪ್ರಧಾನ ಮಂತ್ರಿಯಾಗಿ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ನಾಯಕ ಶಿಂಜೊ ಅಬೆ (52) ಆಯ್ಕೆಯಾದರು. ವಾರದ ಹಿಂದೆಯಷ್ಟೇ ಆಡಳಿತಾರೂಢ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು. ಅಬೆ ಅವರು ಎರಡನೇ ವಿಶ್ವ ಸಮರದ ಬಳಿಕ ಜಪಾನಿನ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದು ವಿಶ್ವ ಸಮರದ ಬಳಿಕ ಜನಿಸಿದವರು.

2006: ಅವಳಿ ಸಹೋದರಿಯರಾದ ಪ್ಯಾಟ್ ಗುಡಿನಾಸ್ ಮತ್ತು ಶಿರ್ಲೆ ಮೆಕ್ ಗುಯಿರಿ ತಾವು ಹುಟ್ಟಿದ 71 ವರ್ಷಗಳ ಬಳಿಕ ಮಿಲ್ ವೌಕಿಯಲ್ಲಿ ಮೊತ್ತ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. ಇದರೊಂದಿಗೆ ಪ್ಯಾಟ್ ಗುಡಿನಾಸ್ ಳ ಎಂಟು ವರ್ಷಗಳ ಯತ್ನ ಫಲಿಸಿತು. ಆಸ್ಟಿನಿನ ಟೆಕ್ಸಾಸ್ ಬಳಿ ವಾಸವಿದ್ದ ಶಿರ್ಲೆ ಸುದೀರ್ಘ ಕಾಲದ ಬಳಿಕ ಭೇಟಿಯಾದ ಪ್ಯಾಟ್ ಳನ್ನು ಅಪ್ಪಿಕೊಂಡು ಚುಂಬಿಸಿ `ಇಷ್ಟೊಂದು ವರ್ಷಗಳ ಕಾಲ ನಾನು ಈಕೆಯನ್ನು ಕಳೆದುಕೊಂಡು ಬಿಟ್ಟಿದ್ದ' ಎಂದು ಬಿಕ್ಕಳಿಸಿದಳು. ವಿವಾಹಿತ ಪುರುಷನೊಬ್ಬನಿಗೆ ಆಪ್ತಳಾಗಿದ್ದ ಮಹಿಳೆಗೆ ಈ ಇಬ್ಬರು ಅವಳಿ ಮಕ್ಕಳು ಜನಿಸಿದ್ದರು. ಇವರಿಬ್ಬರನ್ನೂ ಬೇರ್ಪಡಿಸಿ ಮಿಲ್ ವೌಕಿಯ ದಕ್ಷಿಣ ಭಾಗದ ಸೈಂಟ್ ಜೋಸೆಫ್ ಅನಾಥಾಲಯದಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಬೆಳೆಸಲಾಗಿತ್ತು. ಆ ಬಳಿಕ ಅವರನ್ನು ಬೇರೆ ಬೇರೆ ವ್ಯಕ್ತಿಗಳು ದತ್ತು ಪಡೆದು ಸಾಕಿದ್ದರು. ಬೆಳೆಯುವ ವೇಳೆಯಲ್ಲಿ ಅವರಿಗೆ ಅವರಿಬ್ಬರು ಅವಳಿಗಳು ಎಂದು ತಿಳಿಸಲಾಗಿತ್ತು. ಆದರೆ ಹೆಸರು ಗೊತ್ತಿರಲಿಲ್ಲ.

2006: ಲಂಡನ್ನಿನ ಜ್ಯಾಕ್ ನೀಲ್ ಎಂಬ ಮೂರು ವರ್ಷದ ಬಾಲಕನೊಬ್ಬ ತಾಯಿಯ ಕಂಪ್ಯೂಟರ್ ಬಳಸಿ ಇಂಟರ್ನೆಟ್ ಇಬೇ ಹರಾಜು ಸೈಟಿನ ಮೂಲಕ ನಡೆದ ಹರಾಜಿನಲ್ಲಿ 9000 ಪೌಂಡುಗಳಿಗೆ ಕಾರು ಖರೀದಿಸಿದ. ಪಿಂಕ್ ನಿಸ್ಸಾನ್ ಫಿಗರೊ ವೆಬ್ ಸೈಟಿನಿಂದ ಹರಾಜು ಗೆದ್ದುದಕ್ಕಾಗಿ ಅಭಿನಂದನೆಗಳ ಸಂದೇಶ ಬಂದಾಗ ಮೂರು ವರ್ಷದ ಪೋರ ಪುತ್ರನ ಪ್ರತಾಪ ತಂದೆ ತಾಯಿಯರ ಗಮನಕ್ಕೆ ಬಂತು. ಬಾಲಕನ ತಾಯಿ ಮಾರಾಟಗಾರನಿಗೆ ದೂರವಾಣಿ ಮೂಲಕ ಆದ ತಪ್ಪನ್ನು ವಿವರಿಸಿದಾಗ ಅದೃಷ್ಟವಶಾತ್ ಆತ ಮರು ಜಾಹೀರಾತು ನೀಡಲು ಒಪ್ಪಿಕೊಂಡ.

1991: ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರು ಅರಿಝೋನಾದ ಒರೇಕಲ್ಲಿನಲ್ಲಿ `ಬಯೋಸ್ಫಿಯರ್-2' ಹೆಸರಿನ ಕೋಶದೊಳಗೆ ಎರಡು ವರ್ಷಗಳ ವಾಸ ಆರಂಭಿಸಿದರು. ಕೃತಕ ಜೀವಗೋಲದಲ್ಲಿ ಬದುಕುವ ಬಗೆಯನ್ನು ತೋರಿಸುವ ಜೀವಂತ ಉದಾಹರಣೆಯನ್ನು ಒದಗಿಸುವುದು ಇದರು ಉದ್ದೇಶವಾಗಿತ್ತು.

1981: ಸುವಾದ ಸೌತ್ ಫೆಸಿಫಿಕ್ ವಿಶ್ವವಿದ್ಯಾನಿಲಯವು ಫಿಜಿ ರಾಷ್ಟ್ರೀಯ ಜಿಮ್ನಾಸಿಯಂ ಸಮಾರಂಭದಲ್ಲಿ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಪುರಸ್ಕರಿಸಿತು.

1959: ಶ್ರೀಲಂಕಾ ಪ್ರಧಾನಿ ಸೋಲೋಮನ್ ಬಂಡಾರನಾಯಿಕೆ ಅವರು ಗುಂಡೇಟಿನ ಪರಿಣಾಮವಾಗಿ ಮೃತರಾದರು. ಹಿಂದಿನ ದಿನವಷ್ಟೇ ಸೋಲೋಮನ್ ಅವರ ಮೇಲೆ ಅತೃಪ್ತ ಬೌದ್ಧ ಬಿಕ್ಷು ತಲ್ದುವೆ ಸೊಮರಮ ಗುಂಡು ಹಾರಿಸಿದ್ದರು.

1950: ವಿಶ್ವಸಂಸ್ಥೆ ಪಡೆಗಳು ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ನ್ನು ಉತ್ತರ ಕೊರಿಯನ್ನರಿಂದ ಮರುವಶ ಪಡಿಸಿಕೊಂಡವು.

1931: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿಜಯ್ ಮಾಂಜ್ರೇಕರ್ (1931-83) ಜನ್ಮದಿನ.

1928: ನಂಜೇಗೌಡ ಹಾರೋಹಳ್ಳಿ ಜನನ.

1926: ಸಾಹಿತಿ ಶ್ರೀನಿವಾಸ ತೋಫಖಾನೆ ಜನನ.

1924: ಮಹಾತ್ಮಾ ಗಾಂಧಿಯವರು ದೆಹಲಿಯಲ್ಲಿ `ದಿ ಹಿಂದುಸ್ತಾನ್ ಟೈಮ್ಸ್' ಪತ್ರಿಕೆಯನ್ನು ಉದ್ಘಾಟಿಸಿದರು. ಮಹಾತ್ಮಾ ಗಾಂಧಿಯವರು ಮಗ ದೇವದಾಸ್ ಗಾಂಧಿ ಅವರು 1937ರಿಂದ 1957ರವರೆಗೆ 20 ವರ್ಷಗಳ ಕಾಲ ಈ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು.

1923: ಭಾರತೀಯ ಚಿತ್ರನಟ, ನಿರ್ದೇಶಕ ದೇವ್ ಆನಂದ್ ಜನ್ಮದಿನ.

1904: ರಂಗಭೂಮಿಗೆ ಹೊಸ ದಿಕ್ಕು ತೋರಿದ ಶ್ರೀರಂಗ ಕಾವ್ಯನಾಮದ ರಂಗಾಚಾರ್ಯ ಅವರು ವಾಸುದೇವಾಚಾರ್ಯ- ರಮಾಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು.

1902: ಜೀನ್ಸ್ ಪ್ಯಾಂಟುಗಳ ಸಂಶೋಧಕ ಹಾಗೂ ಉತ್ಪಾದಕ ಬವೇರಿಯಾ ಮೂಲದ ಲೆವಿ ಸ್ಟ್ರಾಸ್ ತನ್ನ 73ನೇ ವಯಸಿನಲ್ಲಿ ಮೃತನಾದ. ಮೊದಲಿಗೆ ದೊರಗು ಕ್ಯಾನ್ವಾಸಿನಿಂದ ಟೆಂಟ್ ಹಾಗೂ ವ್ಯಾಗನ್ ಹೊದಿಕೆಗಳನ್ನು ಮಾಡುವ ಯೋಜನೆ ಹೊಂದಿದ್ದ ಈತ ಶ್ರಮದ ದುಡಿಮೆಗಾರರಿಗಾಗಿ ದೊರಗು ಕ್ಯಾನ್ವಾಸಿನಿಂದ ದೀರ್ಘಾವಧಿ ಬಾಳುವ ಪ್ಯಾಂಟುಗಳನ್ನು ಉತ್ಪಾದಿಸಿದರೆ ಹೆಚ್ಚಿನ ಮಾರುಕಟ್ಟೆ ದೊರೆಯಬಹುದೆಂಬ ಸುಳಿವು ಹತ್ತಿ ಅದನ್ನು ಜಾರಿಗೊಳಿಸಿದ. ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಈತನ ಪ್ಯಾಂಟುಗಳು ಬಿಸಿ ಬಿಸಿಯಾಗಿ ಮಾರಾಟವಾದವು. ಲೆವಿ ಸ್ಟ್ರಾಸ್ ಫ್ಯಾಕ್ಟರಿ ತೆರೆದು ಈ ಪ್ಯಾಂಟುಗಳನ್ನು ಇನ್ನಷ್ಟು ಸುಧಾರಿಸಿದ. ಫ್ರಾನ್ಸಿನಲ್ಲಿ ದೊರಕುತ್ತಿದ್ದ ಜೀನ್ಸ್ ಎಂಬ ವಸ್ತುವನ್ನು ಅದಕ್ಕೆ ಬಳಸಿದ. ಇದರಿಂದಾಗಿ ಇವುಗಳಿಗೆ `ಜೀನ್ಸ್' ಎಂಬ ಹೆಸರು ಬಂತು.

1820: ಬಂಗಾಳಿ ಸಾಹಿತಿ ಈಶ್ವರಚಂದ್ರ ವಿದ್ಯಾಸಾಗರ್ (1820-91) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, September 25, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 25

ಇಂದಿನ ಇತಿಹಾಸ

ಸೆಪ್ಟೆಂಬರ್ 25
ಕರ್ನಾಟಕ ಕಾಂಗ್ರೆಸ್ಸಿನೊಳಗಿನ `ಮೂಲನಿವಾಸಿಗಳು' ಮತ್ತು `ವಲಸೆಕೋರರ' ನಡುವಿನ ಶೀತಲ ಸಮರದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಬಿದ್ದರು. ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ಅವರನ್ನು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನೇಮಿಸಿದರು.


2008: ಕರ್ನಾಟಕ ಕಾಂಗ್ರೆಸ್ಸಿನೊಳಗಿನ `ಮೂಲನಿವಾಸಿಗಳು' ಮತ್ತು `ವಲಸೆಕೋರರ' ನಡುವಿನ ಶೀತಲ ಸಮರದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಬಿದ್ದರು. ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ಅವರನ್ನು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನೇಮಿಸಿದರು. ಹೊಸದಾಗಿ ಸೃಷ್ಟಿಸಲಾದ ಕಾಯರ್ಾಧ್ಯಕ್ಷ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಒಲಿಯಿತು.. ಇದರೊಂದಿಗೆ ಮೂರು ತಿಂಗಳ ಕಾಲ ನಡೆದ ಕೆಪಿಸಿಸಿ ಅಧ್ಯಕ್ಷರ ನೇಮಕದ ಕಸರತ್ತು ಕೊನೆಗೂ ಅಂತ್ಯ ಕಂಡಿತು.. ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಹೊಸದಾಗಿ ಹುಟ್ಟಿಕೊಂಡ ಮೂಲನಿವಾಸಿಗಳು ಮತ್ತು ವಲಸೆಕೋರರ ನಡುವಿನ ಸಂಘರ್ಷದಿಂದಾಗಿ ಯಾವ ಹೆಸರನ್ನೂ ಅಂತಿಮಗೊಳಿಸಲು ಪಕ್ಷದ ಹೈಕಮಾಂಡಿಗೆ ಸಾಧ್ಯವಾಗಿರಲಿಲ್ಲ.

2008: ಗೋಧ್ರಾದಲ್ಲಿ 2002ರ ಫೆಬ್ರುವರಿ 27ರಂದು ಸಾಬರಮತಿ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಪ್ರಸಂಗ ಪೂರ್ವಯೋಜಿತ ಕೃತ್ಯವೇ ಹೊರತು ಅದು ಆಕಸ್ಮಿಕ ದುರಂತ ಅಲ್ಲ ಎಂದು ನಾನಾವತಿ ಆಯೋಗ ಹೇಳಿತು. ಗುಜರಾತ್ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಆಯೋಗದ ಪ್ರಥಮ ವರದಿಯಲ್ಲಿ ಈ ವಿಷಯ ತಿಳಿಸಲಾಯಿತು. ಈ ಮೂಲಕ ನರೇಂದ್ರ ಮೋದಿ ಸರ್ಕಾರ ಆಯೋಗದಿಂದ ಕಳಂಕ ರಹಿತ ಪ್ರಮಾಣ  ಪತ್ರ  ಪಡೆದಂತಾಯಿತು. ಆದರೆ, ರೈಲ್ವೆ ಸಚಿವ ಲಾಲು ಪ್ರಸಾದ್ ನಾಲ್ಕು ವರ್ಷಗಳ ಹಿಂದೆ ರಚಿಸಿದ್ದ ನ್ಯಾಯಮೂರ್ತಿ ಯು. ಸಿ. ಬ್ಯಾನರ್ಜಿ ಸಮಿತಿ ನೀಡಿದ ವರದಿಗೆ ಈ ವರದಿ ತೀರಾ ತದ್ವಿರುದ್ಧ ಆಗಿರುವುದು ಅಚ್ಚರಿ ಮೂಡಿಸಿತು. ಗೋಧ್ರಾ ಘಟನೆ ಆಕಸ್ಮಿಕ ಮತ್ತು ಇದೊಂದು ಯೋಜಿತ ಕೃತ್ಯ ಎಂಬುದನ್ನು ಸಾಬೀತುಪಡಿಸುವುದಕ್ಕೆ ಯಾವುದೇ ಪುರಾವೆಯೂ ಇಲ್ಲ ಎಂದು ಬ್ಯಾನರ್ಜಿ ವರದಿ ತಿಳಿಸಿತ್ತು. ರೈಲಿನ ಬೋಗಿ  ಸುಡುವ ಪಿತೂರಿಯ ಸಲುವಾಗಿಯೇ 140 ಲೀಟರ್ ಪೆಟ್ರೋಲ್ ಖರೀದಿಸಲಾಗಿತ್ತು. ಗೋಧ್ರಾದ ಅಮಾನ್ ಅತಿಥಿಗೃಹದಲ್ಲಿ ಪಿತೂರಿ  ರೂಪಿಸಲಾಯಿತು.  ಈ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಿಸುವುದೇ ಮುಖ್ಯ ಉದ್ದೇಶವಾಗಿತ್ತು ಎಂದು ನಾನಾವತಿ ವರದಿ ಹೇಳಿದೆ. ಮೋದಿ ಸರ್ಕಾರ ನ್ಯಾಯಮೂರ್ತಿ (ನಿವೃತ್ತ) ಜಿ. ಟಿ. ನಾನಾವತಿ ನೇತೃತ್ವದ ಸಮಿತಿಯನ್ನು 2002ರ ಮಾರ್ಚ್ ತಿಂಗಳಲ್ಲಿ ರಚಿಸಿತ್ತು.

2007: ಜನತಾದಳ ಕಾರ್ಯಕರ್ತರು ತನ್ನ ಮೇಲೆ ಗುಂಡು ಹಾರಿಸಿ ಸಾಯಿಸಲು ಯತ್ನಿಸಿದ್ದಾರೆ, ಪೊಲೀಸರೂ ಅವರೊಂದಿಗೆ ಕೈ ಜೋಡಿಸಿದ್ದಾರೆ, ಇದರಲ್ಲಿ ಮುಖ್ಯಮಂತ್ರಿಯವರ ಕೈವಾಡವಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಆರೋಪಿಸಿದರು.  ಬಳ್ಳಾರಿಯ ವಿದ್ಯಾನಗರದಲ್ಲಿ ಮಧ್ಯರಾತ್ರಿ ಶಾಸಕ ಜನಾರ್ದನ ರೆಡ್ಡಿಯವರ ಸಂಬಂಧಿಕರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶ್ರೀರಾಮುಲು ಪೊಲೀಸರ ಮೇಲೆ ಕಿಡಿ ಕಾರಿ, `ನನ್ನ ಸಾವಿಗೆ ಜೆಡಿಎಸ್ ಸಂಚು ರೂಪಿಸಿದೆ' ಎಂದು ಹೇಳಿದರು.

2007: ದೇವೇಗೌಡ ಮತ್ತು ಅವರ ಕುಟುಂಬದವರು 10 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ತೀವ್ರ ಆರೋಪ ಮಾಡಿದ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು. ಇದರಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಆಸ್ತಿಯ ದಾಖಲೆ ಇದೆ ಎಂದು ಅವರು ಹೇಳಿದರು.  ಸತ್ಯಶೋಧ ಮಾಡಲು ವಿಧಾನಸೌಧದ ಮುಂದೆ ಮುಖಾಮುಖಿ ಚರ್ಚೆಗೆ ಬನ್ನಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬ ವರ್ಗದವರಿಗೆ ಖೇಣಿ ಬಹಿರಂಗ ಸವಲು ಹಾಕಿದರು.

2007:  ಒರಿಸ್ಸಾ ರಾಜ್ಯ ಮಟ್ಟದ ಸಣ್ಣ ವ್ಯಾಪಾರಸ್ಥರ ಒಕ್ಕೂಟದ ಸದಸ್ಯರು ಭುವನೇಶ್ವರದ ಲೆವಿಸ್ ರಸ್ತೆ ಮತ್ತು ಗೊಪಬಂಧು ವೃತ್ತದಲ್ಲಿನ ಎರಡು `ರಿಲಯನ್ಸ್ ಫ್ರೆಶ್' ಹಣ್ಣು, ತರಕಾರಿ ಚಿಲ್ಲರೆ ಮಾರಾಟ ಮಳಿಗೆಗೆ ದಾಳಿ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಂಗಡಿಗಳನ್ನು ತೆರೆಯದಂತೆ ರಿಲಯನ್ಸ್ ಕಂಪೆನಿಗೆ ಆದೇಶ ನೀಡಲಾಯಿತು. ಈ ನಗರದಲ್ಲಿ ಸುಮಾರು 11 ರಿಲಯನ್ಸ್ ಫ್ರೆಶ್ ಮಳಿಗೆಗಳು ಆರಂಭವಾಗಿವೆ. ಇಡೀ ರಾಜ್ಯದಲ್ಲಿ 235 ಮಳಿಗೆಗಳನ್ನು ತೆರೆಯಲು ರಿಲಯನ್ಸ್ ತಯಾರಿ ನಡೆಸಿತ್ತು. ಸಣ್ಣ ವ್ಯಾಪಾರಿ ಒಕ್ಕೂಟದವರ ವಿರೋಧವಿದ್ದದ್ದರಿಂದ ಅದು ಸಾಧ್ಯವಾಗಲಿಲ್ಲ. ಅಂದಾಜು 7 ಲಕ್ಷ ಸಣ್ಣ ವ್ಯಾಪಾರಸ್ಥರ ಜೀವನಕ್ಕೆ ಅಡ್ಡವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ರಿಲಯನ್ಸ್ ಫ್ರೆಶ್ ಮಳಿಗೆಗಳನ್ನು ಮುಚ್ಚಿಸಲು `ನಿಖಿಲ್ ಒರಿಸ್ಸಾ ಉಥಾ ದೊಕನಿ ಮತ್ತು ಖ್ಯುದ್ರಾ ವೈವಶ್ಯಿ ಮಹಾಸಂಘ'ಗಳು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಕೈಹಾಕಿದವು.

 2007: ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷೇರುಪೇಟೆ  ಸೂಚ್ಯಂಕ ಏರಿದ ಪರಿಣಾಮ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಸಮೂಹದ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿ 2,04,945 ಕೋಟಿ ರೂಪಾಯಿಗೆ ತಲುಪಿತು. ಮುಖೇಶ್ ಅಂಬಾನಿ ತಮ್ಮ ಅನಿಲ್ ಅಂಬಾನಿ ಎರಡನೇ ಸ್ಥಾನಕ್ಕೆ (1,77,710 ಕೋಟಿ ರೂ), ಡಿಎಲ್ ಎಫ್ ರಿಯಲ್ ಎಸ್ಟೇಟ್ ಸಮೂಹದ ಮಾಲೀಕ ಕೆ.ಪಿ. ಸಿಂಗ್ ಮೂರನೇ ಸ್ಥಾನಕ್ಕೆ (1,15,225 ಕೋಟಿ ರೂ) ಬಂದರು. ಒಂದು ಕಾಲದಲ್ಲಿ ಅತಿ ಶ್ರೀಮಂತ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಂಜಿ ಅವರ ಆಸ್ತಿ ಮೌಲ್ಯ 50,600 ಕೋಟಿಗೆ (5ನೇ ಸ್ಥಾನ)ಇಳಿಯಿತು, ಏರ್ ಟೆಲ್ ನ ಭಾರತಿ ಮಿತ್ತಲ್ 91,500 ಕೋಟಿ ರೂಗೆ (4ನೇ ಸ್ಥಾನ) ಏರಿತು.

2007: ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಜನಾ ಕೃಷ್ಣಮೂರ್ತಿ (79) ಅವರು ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1928ರಲ್ಲಿ ಮದುರೈಯಲ್ಲಿ ಜನಿಸಿದ ಕೃಷ್ಣಮೂರ್ತಿ 2001-2002 ರ ಅವಧಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 2003ರಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. ಆರೆಸ್ಸೆಸ್ ಪ್ರಚಾರಕ, ಜನಸಂಘ ಕಾರ್ಯದರ್ಶಿಯಾಗಿದ್ದ ಅವರು ತಮಿಳುನಾಡಿನಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷತೆಗೆ ಏರಿದ ಮೊಟ್ಟ ಮೊದಲ ಮುಖಂಡ. ಪ್ರಸ್ತುತ ರಾಜ್ಯಸಭೆಯಲ್ಲಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು.

2007:  ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಅವರ ಸಚಿವ ಸಂಪುಟ ರಾಜೀನಾಮೆ ಸಲ್ಲಿಸಿದ್ದು ಈ ಮೂಲಕ ಅವರ ಉತ್ತರಾಧಿಕಾರಿಯಾಗಿ ಸಂಸತ್ ಹೆಸರಿಸಿರುವ ಆಡಳಿತ ಪಕ್ಷದ ಹೊಸ ನಾಯಕ ಯಸುವೋ ಫಕುಡ ಅವರು ಅಧಿಕಾರ ವಹಿಸಿಕೊಳ್ಳಲು ಮಾರ್ಗ ಸುಗಮಗೊಂಡಿತು. 53 ವರ್ಷದ ಅಬೆ ಅವರು ಸೆ. 12ರಂದು ದಿಢೀರ್ ಅಧಿಕಾರ ತ್ಯಜಿಸುವ ನಿರ್ಧಾರ ಪ್ರಕಟಿಸಿ, ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದರು.

2007: ರಿಪ್ಪನ್ಪೇಟೆ ಸಮೀಪದ ಹರತಾಳು ಶ್ರೀ ರಾಮಾಶ್ರಮದ ಸಂಸ್ಥಾಪಕರು ಹಾಗೂ ಶ್ರೀ ಗುರು ರಾಘವೇಂದ್ರರ ಆರಾಧಕರಾಗಿದ್ದ ವಿದ್ಯಾಮಿತ್ರ ತೀರ್ಥ ಸ್ವಾಮೀಜಿ (80) ಈದಿನ ಬೆಳಗ್ಗೆ ನಿಧನರಾದರು. ಶ್ರೀಶನದಾಸ ಎಂಬುದು ಅವರ ಪೂರ್ವಾಶ್ರಮದ ಹೆಸರು.

2007: ಸ್ವಸಹಾಯ ಗುಂಪುಗಳಿಗೆ (ಎಸ್ ಎಚ್ ಜಿ) 2006-07ನೇ ಸಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾಲ ಸಹಾಯ ನೀಡಿದ ಹಣಕಾಸು ಸಂಸ್ಥೆಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಮೊದಲ ಸ್ಥಾನ ಗಳಿಸಿತು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸ್ಥಾಪಿಸಿರುವ ಈ ವಾರ್ಷಿಕ ಪ್ರಶಸ್ತಿಯನ್ನು ಈದಿನ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ವಾಣಿಜ್ಯ ಬ್ಯಾಂಕ್ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಮತ್ತು ಸಿಂಡಿಕೇಟ್ ಬ್ಯಾಂಕ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದವು.

2006: ಬಿಹಾರಿನ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ ಇಲಾಖೆಯ ಮಾಜಿ ಅಧಿಕಾರಿ ಹೇಮೇಂದ್ರ ನಾಥ ವರ್ಮ ಸೇರಿದಂತೆ ಎಂಟು ಮಂದಿ ಆಪಾದಿರತನ್ನು ವಿಶೇಷ ಸಿಬಿಐ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದ್ದು, ವಿನೋದ ಕುಮಾರ್ ಝಾ ಅವರನ್ನು ಖುಲಾಸೆ ಮಾಡಿತು. ಅವಿಭಜಿತ ಬಿಹಾರಿನ ದುಮ್ಕಾ ಬೊಕ್ಕಸದಿಂದ 49 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಸರ್ಕಾರಿ ಹಣವನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಸಂಜಯ ಪ್ರಸಾದ್ ಅವರು ಈ ತೀರ್ಪು ನೀಡಿದರು. ಸೆಪ್ಟೆಂಬರ್ 23ರಂದು ನ್ಯಾಯಾಲಯವು ಪಶು ಸಂಗೋಪನಾ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಸೇರಿದಂತೆ 28 ಮಂದಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿತ್ತು. ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರಿನ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಅವರೂ ಹಗರಣದಲ್ಲಿ ಆರೋಪಿಗಳು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನ ಸಹಚರರಾದ ಮೊಹಮ್ಮದ್ ಇಕ್ಬಾಲ್ ಮೊಹಮ್ಮದ್ ಯೂಸುಫ್ ಖಾನ್ ಮತ್ತು ನಸೀಂ ಬರ್ಮರೆ ತಪ್ಪಿತಸ್ಥರು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಭಯೋತ್ಪಾದಕ ಕೃತ್ಯ ಎಸಗಿದ ಮತ್ತು ಸಂಚಿನಲ್ಲಿ ಭಾಗಿಯಾದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

2006: ಅಂತಾರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನ ಮಂಡಲದ ಐತಿಹಾಸಿಕ ವಿಶೇಷ ಅಧಿವೇಶನದ ಮೊದಲ ದಿನವೇ ಉಭಯ ಸದನಗಳೂ ಅಂಗೀಕರಿಸಿದವು. ರಾಜದಾನಿ ಬೆಂಗಳೂರಿನಿಂದ ಹೊರಗೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುವುದರೊಂದಿಗೆ ರಾಜ್ಯದಲ್ಲಿ ಹೊಸ ಇತಿಹಾಸ ನಿರ್ಮಾಣಗೊಂಡಿತು. ಕೆಎಲ್ ಇ ಶಿಕ್ಷಣ ಸಂಸ್ಥೆಯಲ್ಲಿ ಮೈದಳೆದ ಪ್ರತಿರೂಪಿ ವಿಧಾನ ಮಂಡಲದಲ್ಲಿ ಈ  ಅಧಿವೇಶನ ಸಮಾವೇಶಗೊಳ್ಳುವುದರೊಂದಿಗೆ ಹೊಸ ಮನ್ವಂತರಕ್ಕೆ ಬೆಳಗಾವಿ ಸಾಕ್ಷಿಯಾಯಿತು. ಬೆಳಗಾವಿ ಮತ್ತು ಕಾಸರಗೋಡು ಎರಡೂ ಕರ್ನಾಟಕದ್ದೇ ಎಂಬ ಸ್ಪಷ್ಟ ಸಂದೇಶವನ್ನು ಚಾರಿತ್ರಿಕ ನಿರ್ಣಯ ಅಂಗೀಕಾರದ ಮೂಲಕ ವಿಧಾನ ಮಂಡಲ ಇತರ ರಾಜ್ಯಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ರವಾನಿಸಿತು.

2001: ಮೊಣಕಾಲಿನ ಕೆಳಗಿನ ಭಾಗಗಳಿಲ್ಲದ ಅಂಗವಿಕಲ ಕೋಲ್ಕತ್ತಾದ ಮಸುದುರ್ ರಹಮಾನ್ ಬೈದ್ಯ ಅವರು ಜಿಬ್ರಾಲ್ಟರ್ ಕಾಲುವೆಯ 22 ಕಿ.ಮೀ. ದೂರವನ್ನು 4 ಗಂಟೆ 20 ನಿಮಿಷಗಳಲ್ಲಿ ಈಜುವ ಮೂಲಕ ಈ ಸಾಹಸ ಗೈದ ಮೊದಲ ಅಂಗವಿಕಲ ಎಂಬ ಕೀರ್ತಿಗೆ ಪಾತ್ರರಾದರು.

1997: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ (ಇ.ಎಸ್. ವೆಂಕಟರಾಮಯ್ಯ)(18-12-1924ರಿಂದ 25-9-1997) ಈದಿನ ಬೆಂಗಳೂರಿನಲ್ಲಿ ನಿಧನರಾದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಇಂಗಳಗುಪ್ಪೆಯಲ್ಲಿ 1924ರ ಡಿಸೆಂಬರ್ 18ರಂದು ಜನಿಸಿದ್ದ ವೆಂಕಟರಾಮಯ್ಯ ಹೈಕೋರ್ಟ್ ವಕೀಲ, ಸರ್ಕಾರಿ ಅಡ್ವೋಕೇಟ್ ಜನರಲ್, ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

1969: ದಕ್ಷಿಣ ಆಫ್ರಿಕದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಹ್ಯಾನ್ಸೀ ಕ್ರೋನಿಯೆ (1969-2002) ಜನ್ಮದಿನ. ಮ್ಯಾಚ್ ಫಿಕ್ಸಿಂಗ್ ಹಗರಣ ಮೂಲಕ ಕ್ರಿಕೆಟ್ ಕ್ರೀಡೆಗೆ ಮಸಿ ಬಳಿದ ಅಪಖ್ಯಾತಿಗೆ ಈಡಾದ ಇವರು ಇವರು ದಕ್ಷಿಣ ಆಫ್ರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಅಸು ನೀಗಿದರು.

1969: ಬ್ರಿಟಿಷ್ ಚಿತ್ರನಟಿ ಕ್ಯಾಥರೀನ್ ಝೇಟಾ-ಜೋನ್ಸ್ ಜನ್ಮದಿನ. ವಿಶೇಷವೆಂದರೆ ಈಕೆಯ ಪತಿ ಅಮೆರಿಕನ್ ನಟ, ನಿರ್ದೇಶಕ ಮೈಕೆಲ್ ಡಗ್ಲಾಸ್ ಅವರ ಜನ್ಮದಿನವೂ ಇದೇ ದಿನ. ಡಗ್ಲಾಸ್ ಅವರು ಜನಿಸಿದ್ದು 1944ರ ಸೆಪ್ಟೆಂಬರ್ 25ರಂದು.

1948: ಸಾಹಿತಿ ಅರ್ಜುನಪುರಿ ಅಪ್ಪಾಜಿಗೌಡ ಜನನ.

1946: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಸ್ಪಿನ್ ಬೌಲರ್ ಬಿಷನ್ ಸಿಂಗ್ ಬೇಡಿ ಜನ್ಮದಿನ.

1940: ಅಧ್ಯಾಪಕ, ಸಾಹಿತಿ, ನ್ಯಾಯಾಧೀಶ ಶಂಕರ ಖಂಡೇರಿ ಅವರು ಸುಬ್ಬಪ್ಪ- ಗಂಗಮ್ಮ ದಂಪತಿಯ ಮಗನಾಗಿ ಕಾಸರಗೋಡು ತಾಲ್ಲೂಕು ಕಾಟುಕುಕ್ಕೆ ಗ್ರಾಮದ ಖಂಡೇರಿಯಲ್ಲಿ ಜನಿಸಿದರು.

1930: ಸಾಹಿತಿ ಎಚ್. ವಿ. ನಾರಾಯಣ್ ಜನನ.

1921: ನೂಜಿಲೆಂಡಿನ ಮಾಜಿ ಪ್ರಧಾನಿ ರಾಬರ್ಟ್ ಡೇವಿಡ್ ಮುಲ್ಡೂನ್ (1921) ಜನ್ಮದಿನ.

1916: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ  (1916-1968) ಜನ್ಮದಿನ.

1914: ಭಾರತದ ರಾಜಕಾರಣಿ ಹಾಗೂ ಉಪ ಪ್ರಧಾನಿಯಾಗಿದ್ದ ದೇವಿಲಾಲ್ (1914-2001) ಜನ್ಮದಿನ.

1829: ಅಸ್ಸಾಮಿ ಆಧುನಿಕ ಕಾವ್ಯದ ಜನಕ ಆನಂದರಾಮ್ ಧೇಕಿಯಲ್ ಫೂಕಾನ್ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, September 24, 2009

Want to Marry..?

Want to Marry..?

Vaarey-Korey-September-2009

Then first have the experiences from married ones! To get such experience read 'Vaarey Korey' September 2009 immediately.

To get your copy contact: No. 646, Ajanta Classics, F.F.-5, 18th Main Road, 16th Cross, Raja Rajeshwari Nagar, Bangalore-560098. Phone: 080-28606030. Email: vaareykorey@gmail.com

Clikc the link to image here.


ಇಂದಿನ ಇತಿಹಾಸ History Today ಸೆಪ್ಟೆಂಬರ್ 24

ಇಂದಿನ ಇತಿಹಾಸ

ಸೆಪ್ಟೆಂಬರ್ 24


ನೊರೋಧಮ್ ಸಿಹಾನೌಕ್ ಅವರು ಕಾಂಬೋಡಿಯಾ ಸಿಂಹಾಸನದ ಮೇಲೆ  ಅಧಿಕಾರ ಮರುಸ್ಥಾಪನೆ ಮಾಡಿ, `ಪ್ರಜಾತಾಂತ್ರಿಕ, ಸಂವೈಧಾನಿಕ ರಾಜಪ್ರಭುತ್ವ' ರಾಷ್ಟ್ರ ತಮ್ಮದು ಎಂದು ಘೋಷಿಸುವ ಸಂವಿಧಾನಕ್ಕೆ ಸಹಿ ಹಾಕಿದರು.

2008: ಚೀನಾದಲ್ಲಿ ಕಲುಷಿತ ಹಾಲು ಕುಡಿದ ಮಕ್ಕಳು ಮೃತರಾದ ಘಟನೆಗಳ ಹಿನ್ನೆಲೆಯಲ್ಲಿ ಅಲ್ಲಿಂದ ಮೂರು ತಿಂಗಳು ಕಾಲ ಹಾಲೂ ಸೇರಿದಂತೆ ಹಾಲಿನ ಇತರ ಉತ್ಪನ್ನಗಳ ಆಮದಿಗೆ ಭಾರತ ನಿಷೇಧ ಹೇರಿತು.. ವಿದೇಶ ವ್ಯವಹಾರ ಇಲಾಖೆಯ ಡೈರೆಕ್ಟರ್ ಜನರಲ್ ಅವರು, ಈ ಕುರಿತಂತೆ ಈದಿನ ರಾತ್ರಿ ಆದೇಶ ಹೊರಡಿಸಿದರು. ಚೀನಾದಲ್ಲಿ ಕಲುಷಿತ ಹಾಲು ಕುಡಿದು ನಾಲ್ಕು ಹಸುಗೂಸುಗಳು ಮೃತಪಟ್ಟಿವೆಯೆಂದು ವರದಿಯಾಗಿತ್ತು. ಹಾಲಿಗೆ ಮತ್ತಷ್ಟು  ಬಿಳುಪು ತರಲು ಬಳಸಿದ ರಾಸಾಯನಿಕದಿಂದ ಸಾವಿರಾರು ಮಂದಿ ಅಸ್ವಸ್ಥರಾಗಿದ್ದರು ಎಂದೂ ವರದಿಗಳು ತಿಳಿಸಿದ್ದವು. ಪ್ಲಾಸ್ಟಿಕ್ ಮತ್ತು  ಗೊಬ್ಬರ ತಯಾರಿಕೆಯಲ್ಲಿ ಬಳಸುವ ಮೆಲಮೈನ್ ರಾಸಾಯನಿಕವು ಮಕ್ಕಳ ಹಾಲಿನಲ್ಲಿ ಮತ್ತು ಹಾಲಿನ 22 ಇತರ ಉತ್ಪನ್ನಗಳಲ್ಲಿ ಬೆರೆತಿರುವುದು ಪತ್ತೆಯಾಗಿತ್ತು. ಈ ಅಪಾಯಕರ ರಾಸಾಯನಿಕ ಮೂತ್ರಕೋಶದಲ್ಲಿಕಲ್ಲುಗಳು ಉಂಟಾಗಲು, ಒಮ್ಮೊಮ್ಮೆ ಮೂತ್ರಕೋಶ ವೈಫಲ್ಯಕ್ಕೂ ಕಾರಣವಾಗಬಹುದು.

2008: ಮಾಜಿ ಪ್ರಧಾನಿ ರಾಜೀವ ಗಾಂಧಿ ಹಂತಕಿ ನಳಿನಿ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ ಸಲಹಾ ಮಂಡಳಿಯೊಂದು ನೀಡಿದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದು ಮಾಡಿತು. ಸನ್ನಡತೆ ಆಧಾರದಲ್ಲಿ ತನಗೆ ವಿಧಿಸಿರುವ ಶಿಕ್ಷೆ ಪ್ರಮಾಣ ಕಡಿವೆು ಮಾಡಬೇಕೆಂದು ಕೋರಿ ನಳಿನಿ ಕಳೆದ ಮೇ ತಿಂಗಳಿನಲ್ಲಿ ಮನವಿ ಸಲ್ಲಿಸಿದ್ದಳು. ನಳಿನಿಗೆ ಕ್ಷಮಾದಾನ ನೀಡುವ ವಿಷಯವನ್ನು ತಮಿಳುನಾಡು ಸರ್ಕಾರನಿರಾಕರಿಸುತ್ತಲೇ ಬಂದಿತ್ತು. ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕೆಂದು ಹೇಳುವ ಮೂಲಕ ಮದ್ರಾಸ್ ಹೈಕೋರ್ಟ್ ನಳಿನಿ ಪರವಾಗಿ ಆದೇಶ ನೀಡಿತು. ನಳಿನಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 19 ರಂದು ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು. ರಾಜೀವ್ ಹತ್ಯೆಗೆ ಸಂಬಂಧಿಸಿದಂತೆ 1991 ರಲ್ಲಿ ನಳಿನಿ ಹಾಗೂ ಇತರ ಮೂವರನ್ನು ಪೊಲೀಸರು ಬಂಧಿಸಿದ್ದರು. 2000ದಲ್ಲಿ ನಳಿನಿಗೆ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆದರೆ ಸೋನಿಯಾ ಗಾಂಧಿ ಅವರ ಶಿಫಾರಸಿನಂತೆ  ಈ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು.

2008: ದಲಿತರ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಅಪರಾಧಕ್ಕಾಗಿ ಮಹಾರಾಷ್ಟ್ರದ ಭಂದರದ ನ್ಯಾಯಾಲಯವು ಆರು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪಯ ನೀಡಿತು. ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮತ್ತಿಬ್ಬರಿಗೆ ಜೀವಾವಧಿ ಸಜೆ ಘೋಷಿಸಿತು. 2006ರ ಸೆಪ್ಟೆಂಬರ್ 29ರಂದು ಗುಂಪೊಂದು ವಿದರ್ಭ ಜಿಲ್ಲೆಯ ಖೈರಂಜ್ಲಿ ಗ್ರಾಮದ ದಲಿತ ಕುಟುಂಬದ ಮೇಲೆ ದಾಳಿ ನಡೆಸಿ  ಸುರೇಖಾ, ಅವರ ಪುತ್ರಿ ಪ್ರಿಯಾಂಕ ಮಗ ಸುಧೀರ್  ಹಾಗೂ ರೋಷನ್ ಎಂಬುವರನ್ನು ಹತ್ಯೆ ಮಾಡಿದ್ದರು.

2008: ಭಾರತ- ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದ ಕಾರ್ಯಗತಗೊಳಿಸುವತ್ತ ಮತ್ತೊಂದು ಹೆಜ್ಜೆ ಇಡಲಾಯಿತು.. ಅಮೆರಿಕ ಸೆನೆಟಿನ ವಿದೇಶಾಂಗ ಸಂಬಂಧ ಸಮಿತಿ ಒಪ್ಪಂದದ ಪರವಾಗಿ ಮತ ಚಲಾಯಿಸಿತು.. ಅಮೆರಿಕ ಕಾಂಗೆಸ್ಸಿನಲ್ಲಿ ಭಾರಿ ಪ್ರಭಾವಶಾಲಿಯಾದ ಸೆನೆಟ್ ವಿದೇಶಾಂಗ ಸಂಬಂಧ ಸಮಿತಿ 19-2 ಮತಗಳ ಅಂತರದಲ್ಲಿ ಒಪ್ಪಂದದ ಪರವಾಗಿ ಮತ ಚಲಾಯಿಸಿತು.

2007: ಆಫ್ರಿಕಾದ ಜೋಹಾನ್ಸ್ ಬರ್ಗಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತದ `ಟೀಮ್ ಇಂಡಿಯಾ'ಕ್ಕೆ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಕಿರೀಟ ಲಭಿಸಿತು. ಫೈನಲಿನಲ್ಲಿ ಮಹೇಂದ್ರಸಿಂಗ್ ದೋನಿ ನೇತೃತ್ವದ ಯುವ ಪಡೆ ಪಾಕಿಸ್ಥಾನ ತಂಡವನ್ನು ಕೇವಲ ಐದು ರನ್ನುಗಳಿಂದ ಬಗ್ಗುಬಡಿಯಿತು. 1983ರ ಜೂನ್ 25ರ ಮುಸ್ಸಂಜೆಯ ನಂತರ ಹಿಂದೂಸ್ಥಾನವನ್ನು 2007ರ ಸೆಪ್ಟೆಂಬರ್ 24 ಸಂಭ್ರಮದ ಮಳೆಯಲ್ಲಿ ತೋಯಿಸಿತು.

2007: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಮೂಲಕ  ಪಕ್ಷದಲ್ಲಿ ರಾಹುಲ್ ಗಾಂಧಿ ಅವರ ಅಧಿಕೃತ ಪಟ್ಟಾಭಿಷೇಕ ನಡೆಯಿತು. ಪಕ್ಷದ ಕಾರ್ಯಕರ್ತರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮಗನಿಗೆ ಯುವ ಕಾಂಗ್ರೆಸ್ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ಸಿನ ಜವಾಬ್ದಾರಿ ನೀಡಿದರು. ಇದರ ಜೊತೆಗೆ ಭವಿಷ್ಯದ ಸವಾಲುಗಳತ್ತ ಮುನ್ನೋಟ ಹರಿಸಲಿಕ್ಕಾಗಿ ರಚಿಸಿದ ಗುಂಪಿನಲ್ಲಿಯೂ ರಾಹುಲ್ ಸದಸ್ಯರಾಗಿ ನೇಮಕಗೊಂಡರು.

2007: ಮುಂದಿನ ವರ್ಷದ ಆರಂಭದಲ್ಲಿ ತನ್ನ ಮೊದಲ ಚಂದ್ರಯಾನಕ್ಕೆ ಭಾರತ ವೇದಿಕೆ ಸಜ್ಜುಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಜಿ. ಮಾಧವನ್ ನಾಯರ್ ಪ್ರಕಟಿಸಿದರು. ಹೈದರಾಬಾದಿನಲ್ಲಿ ನಡೆದ 58ನೇ ಅಂತಾರಾಷ್ಟ್ರೀಯ ಗಗನಯಾನ ಸಮಾವೇಶದ ಸಂದರ್ಭದಲ್ಲಿ ನಾಯರ್ ಈ ವಿಷಯ ಬಹಿರಂಗಪಡಿಸಿದರು. `ಚಂದ್ರಯಾನ 1' ಎಂದು ಕರೆಯಲಾಗುವ ಭಾರತದ ಬಾಹ್ಯಾಕಾಶ ಸಾಹಸಕ್ಕೆ ನಾಸಾ ಮತ್ತು ಯುರೋಪ್ ಬಾಹ್ಯಾಕಾಶ ಸಂಸ್ಥೆ (ಇಎಸ್ ಎ) ಸಹಕಾರ  ನೀಡಿದ್ದು, ಯೋಜನೆಗಾಗಿ ನಾಸಾ ಮತ್ತು ಇಎಸ್ ಎ ಜತೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಒಂದೇ ವರ್ಷದಲ್ಲಿ ನಾಲ್ಕು ಬಾರಿಚಂದ್ರನಲ್ಲಿಗೆ ಹೋಗುವ ಭಾರತ, ನಂತರದ 5 ವರ್ಷಗಳಲ್ಲಿ ಇಂಥ 60 ಯಾನಗಳನ್ನು ಕೈಗೊಳ್ಳುವುದು ಎಂದು ನಾಯರ್ ನುಡಿದರು.

2007: ಪ್ರತಿಷ್ಠಿತ `ಆಸ್ಕರ್' ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಚಿತ್ರದ ವಿಭಾಗಕ್ಕೆ ಭಾರತದ ಅಧಿಕೃತ ಚಿತ್ರವಾಗಿ ಅಮಿತಾಭ್ ಬಚ್ಚನ್ ನಟನೆಯ ಏಕಲವ್ಯ ಹಿಂದಿ ಸಿನಿಮಾ ಪ್ರವೇಶ ಪಡೆಯಿತು. ಇದರೊಂದಿಗೆ ಮೂರನೇ ಬಾರಿಗೆ ವಿದುವಿನೋದ್ ಛೋಪ್ರಾ ಅವರ ಸಿನಿಮಾ ಆಸ್ಕರ್ ಪ್ರಶಸ್ತಿಯ ಪೈಪೋಟಿಯಲ್ಲಿ ಕಾಣಿಸಿಕೊಂಡಿತು. 1980 ರಲ್ಲಿ `ಆನ್ ಎನ್ ಕೌಂಟರ್ ವಿತ್ ಫೇಸಸ್' ಮತ್ತು 1989ರಲ್ಲಿ `ಪರಿಂದಾ' ಸಿನಿಮಾಗಳು ಇದೇ ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದವು.

2007: 1857ರ ಸಿಪಾಯಿ ದಂಗೆಯಲ್ಲಿ ಮಡಿದ ತಮ್ಮ ಪೂರ್ವಿಕರಿಗೆ ಗೌರವ ಸಲ್ಲಿಸಲು ಆಗಮಿಸಿದ 39 ಜನ ಬ್ರಿಟಿಷ್ ಪ್ರವಾಸಿಗರ ತಂಡವು ಗ್ವಾಲಿಯರಿನಲ್ಲಿ ಕಪ್ಪುಬಾವುಟ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಪ್ರತಿಭಟನಾಕಾರರಲ್ಲಿ ಹಿಂದೂ ಮಹಾಸಭಾ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಿದ್ದರು.  19 ಜನ ಮಹಿಳೆಯರೂ ಇದ್ದ ಬ್ರಿಟಿಷ್ ತಂಡವನ್ನು ಬಿಗಿ ಪೊಲೀಸ್ ಕಾವಲಿನಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಯಿತು.

2007: ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲೀಜ್ ಟೈಮ್ಸ್ ಪತ್ರಿಕೆಯ ಭಾರತೀಯ ಆವೃತ್ತಿಯ ನಿವೃತ್ತ ಸಂಪಾದಕ ಸೇರಿದಂತೆ ಇಬ್ಬರು ಪತ್ರಕರ್ತರಿಗೆ ದುಬೈಯ ಸ್ಥಳೀಯ ನ್ಯಾಯಾಲಯ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿತು. ಇರಾನ್ ಮೂಲದ ಮಹಿಳೆಯೊಬ್ಬರ ವಿರುದ್ಧ ವರದಕ್ಷಿಣೆ ಲೇಖನ ಪ್ರಕಟಿಸಿದ್ದಕ್ಕಾಗಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತು.

2007: ಇಂಡೋನೇಷ್ಯಾ ರಾಜಧಾನಿ ಜಕಾರ್ತ ದ್ವೀಪದ ಬಳಿ ಸಮುದ್ರ ತಳದಲ್ಲಿ ಮತ್ತೆ ಭೂಕಂಪ ಸಂಭವಿಸಿತು.

2006: ಸಿಖ್ ಯುವಕನನ್ನು ನೇಮಿಸಿಕೊಂಡ ಒಂದು ತಿಂಗಳ ನಂತರ ದೇಶದ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ಥಾನಿ ಸೇನೆಯು ಹಿಂದೂ ಧರ್ಮದ ಧಾನೇಶ್ ಎಂಬ (ಸಿಂಧ್ ಗ್ರಾಮೀಣ ಪ್ರದೇಶದ ಥಾರ್ ಪರ್ಕೆರ್ ಜಿಲ್ಲೆ) ವ್ಯಕ್ತಿಯನ್ನು ಯೋಧನನ್ನಾಗಿ ನೇಮಕ ಮಾಡಿಕೊಂಡಿತು. ಹರಿಚರಣ್ ಸಿಂಗ್ ಪಾಕಿಸ್ಥಾನಿ ಸೇನಾಪಡೆ ಸೇರಿದ ಮೊತ್ತ ಮೊದಲ ಸಿಖ್ ವ್ಯಕ್ತಿ.

2006: ಚಿತ್ರರಂಗದ ಜನಪ್ರಿಯ ಪಂಚಭಾಷಾ (ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ) ತಾರೆಯಾಗಿದ್ದ ಪದ್ಮಿನಿ (74) (12-6-1932ರಿಂದ 24-9-2006) ತಮಿಳುನಾಡಿನ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಶಾಸ್ತ್ರೀಯ ನರ್ತಕಿಯಾಗಿ ಕೂಡಾ ಜನಮನ್ನಣೆ ಗಳಿಸಿದ್ದ ಪದ್ಮಿನಿ 1932ರ ಜೂನ್ 12ರಂದು ತಿರುವನಂತಪುರದ ಪೂಜಾಪ್ಪುರು ಎಂಬಲ್ಲಿ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದರು. ಸೂಪರ್ ಸ್ಟಾರ್ ಗಳಾಗಿದ್ದ ಶಿವಾಜಿ ಗಣೇಶನ್, ವರನಟ ರಾಜಕುಮಾರ್, ಪ್ರೇಮ್ ನಜೀರ್, ದೇವಾನಂದ್ ಸೇರಿದಂತೆ ಹಲವಾರು ನಾಯಕರೊಂದಿಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಪದ್ಮಿನಿ ಸಹೋದರಿಯರಾದ ಲಲಿತಾ ಮತ್ತು ರಾಗಿಣಿ ಕೂಡಾ ಚಿತ್ರನಟಿ, ನೃತ್ಯಗಾತಿಯರಾಗಿ `ತಿರುವನಂತಪುರ (ತಿರುವಾಂಕೂರು) ಸಹೋದರಿಯರು' ಎಂದೇ ಈ ಮೂವರು ಖ್ಯಾತರಾಗಿದ್ದರು. ನಾಲ್ಕನೇ ವಯಸ್ಸಿನಲ್ಲೇ ಕಾಲಿಗೆ ಗೆಜ್ಜೆ ಕಟ್ಟಿದ ಪದ್ಮಿನಿ 1949 ರಲ್ಲಿ ಚಿತ್ರ ಜಗತ್ತಿಗೆ ಕಾಲಿಟ್ಟು `ಕಲ್ಪನಾ' ಹಿಂದಿ ಚಿತ್ರದಲ್ಲಿ ನಟಿಸಿದರು. ಡಾ. ಕೆ.ಟಿ. ರಾಮಚಂದ್ರನ್ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಳಿಕ ಬೆಳ್ಳಿ ತೆರೆಯಿಂದ ಮಾಯವಾದ ಪದ್ಮಿನಿ ಅಮೆರಿಕದಲ್ಲಿ ನೆಲಸಿದ್ದರು. 1977ರಲ್ಲಿನ್ಯೂಜೆರ್ಸಿಯಲ್ಲಿ ತಮ್ಮದೇ ಆದ ಲಲಿತಕಲಾ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಇವರ ಸೋದರ ಸಂಬಂಧಿ ಸುಕುಮಾರಿ ಮತ್ತು ಅಂಬಿಕಾ ಸಹ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದವರು. 1981ರಲ್ಲಿ ಭಾರತಕ್ಕೆ ಮರಳಿದ ಪದ್ಮಿನಿ ಅವರನ್ನು ಬೆಳ್ಳಿತೆರೆ ಮತ್ತೆ ಕರೆಯಿತು. ಎರಡನೇ ಇನ್ನಿಂಗ್ಸಿನಲ್ಲಿ ಅವರು ನಟಿಸಿ `ವಾಸ್ತುಹಾರ' ಮತ್ತಿತರ ಮಲಯಾಳಿ ಚಿತ್ರಗಳು ಅಪಾರ ಜನಮನ್ನಣೆ ಗಳಿಸಿದವು. ಹಿಂದಿಯ `ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ', `ಮೇರಾ ನಾಮ್ ಜೋಕರ್', ಮಲಯಾಳಂನ `ಸ್ನೇಹಸೀಮಾ', `ಅಧ್ಯಾಪಿಕಾ', `ವಿವಾಹಿತ', `ಕುಮಾರ ಸಂಭವ', ತಮಿಳಿನ `ಮೋಹನಾಂಬಾಳ್' ಅವರ ಕೆಲವು ಪ್ರಮುಖ ಚಿತ್ರಗಳು.

2006: ಒರಿಸ್ಸಾದ ಬಾಲಕ ಬುಧಿಯಾಸಿಂಗ್ ಮ್ಯಾರಥಾನ್ ನೆನನಪು ಮಾಸುವ ಮುನ್ನವೇ ಅದೇ ರಾಜ್ಯದ 7ವರ್ಷದ ಇನ್ನೊಬ್ಬ ಬಾಲಕ ಮೃತ್ಯುಂಜಯ ಮಂಡಲ್ ಥಾಣೆ ಜಿಲ್ಲೆಯ ಕಲ್ಯಾಣದಿಂದ 68 ಕಿ.ಮೀ. ದೂರ ಓಡಿ ಅಚ್ಚರಿ ಮೂಡಿಸಿದ. ಈತ ಕಲ್ಯಾಣದಿಂದ ಮುಂಬೈಯ ಗೇಟ್ ವೇ ಆಫ್ ಇಂಡಿಯಾವರೆಗೆ ಓಡಬೇಕಿತ್ತು. ಆದರೆ 68 ಕಿ.ಮೀ. ಓಡಿದ ಬಳಿಕ ನಿಗದಿತ ಗುರಿ ಮುಟ್ಟುವ ಮುನ್ನವೇ ತೀವ್ರವಾಗಿ ಬಸವಳಿದ ಆತ ಕುಸಿದು ಬಿದ್ದ. ಬಳಿಕ ಆತನನ್ನು ಕಾರಿನಲ್ಲಿ ಗೇಟ್ ವೇ ಆಫ್ ಇಂಡಿಯಾಕ್ಕೆ ಕರೆತರಲಾಯಿತು. ಮೂರನೇ ತರಗತಿಯ ಈ ಬಾಲಕ ನಸುಕಿನ 4 ಗಂಟೆಗೆ ತನ್ನ ಓಟ ಪ್ರಾರಂಬಿಸಿದ್ದ. 50ಕ್ಕೂ ಹೆಚ್ಚು ಮಂದಿ ಈತನ ಜೊತೆಗೆ ಮ್ಯಾರಥಾನಿನಲ್ಲಿಪಾಲ್ಗೊಂಡಿದ್ದರು.

2006: ಮೂರ್ತಿ ವಿ.ಎನ್. ರಾವ್ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಂಗಳೂರು ಗಾಯನ ಸಮಾಜ ಭಾನುವಾರ ಜಂಟಿಯಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಗೀತಗಾರ ಪದ್ಮಶ್ರೀ ಎಂ.ಎಸ್. ಗೋಪಾಲಕೃಷ್ಣನ್ ಅವರಿಗೆ `ವೀಣೆ ಶೇಷಣ್ಣ ಸ್ಮಾರಕ ಪ್ರಶಸ್ತಿ' ಮತ್ತು ಡಾ. ಆರ್. ಕೆ. ಶ್ರೀಕಂಠನ್ ಅವರಿಗೆ `ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

2006: ಬೆಲ್ಜಿಯಂನ ರಾಜತಾಂತ್ರಿಕ ಮಹಿಳಾ ಅಧಿಕಾರಿ ಇಸಬೆಲ್ಲಾ ಡಿಸಾಯ್ ಅವರನ್ನು ದಕ್ಷಿಣ ದೆಹಲಿಯ ಪ್ರತಿಷ್ಠಿತ ವಸಂತವಿಹಾರ ಬಡಾವಣೆಯಲ್ಲಿನ ಅವರ ನಿವಾಸದಲ್ಲಿ ಕಾರಿನ ಚಾಲಕ ವಿಜಯಪಾಲ್ ಚೌಧರಿ ಇರಿದು ಕೊಲೆಗೈದ.

2006: ಮೃತ ವ್ಯಕ್ತಿಯ ಭ್ರೂಣದಿಂದ (ಗರ್ಭಪಿಂಡ) ಅಣುಕೋಶಗಳನ್ನು ತೆಗೆದು ಅವುಗಳನ್ನು ಜೀವಂತ ಅಂಗಾಂಶಗಳಾಗಿ ಮಾರ್ಪಡಿಸುವಲ್ಲಿ ಯಶಸ್ವಿಯಾಗಿರುವುದಾಗಿ ಬ್ರಿಟಿಷ್ ಲ್ಯಾಬೋರೇಟರಿಯ ವಿಜ್ಞಾನಿಗಳು ಪ್ರಕಟಿಸಿದರು. `ಸ್ಟೆಮ್ ಸೆಲ್ ವಿಜ್ಞಾನ'ದಲ್ಲಿ ಅತ್ಯಂತ ಮಹತ್ವದ ಸಂಶೋಧನಾ ಸಾಧನೆ ಇದಾಗಿದೆ. ಅಲ್ಜಿಮೀರ್ಸ್, ಪಾರ್ಕಿನ್ ಸನ್ಸ್ ನಂತಹ ರೋಗಗಳಿಂದ ನರಳುತ್ತಿರುವವರಿಗೆ ಇದು ವರದಾನ ಆಗಬಲ್ಲುದು ಎಂದು ವಿಜ್ಞಾನಿಗಳು ಪ್ರತಿಪಾದಿಸಿದರು. ನ್ಯೂ ಕ್ಯಾಸಲ್ ಯುನಿವರ್ಸಿಟಿಯ ಸೆಂಟರ್ ಫಾರ್ ಸ್ಟೆಮ್ ಸೆಲ್ ಬಯಾಲಜಿಯ ಪ್ರೊಫೆಸರ್ ಮಿಯೋಡ್ರಾಗ್ ಸ್ಟೊಜ್ಕೊವಿಕ್ ಮತ್ತು ಅವರ ಸಹೋದ್ಯೋಗಿ ಸಂಶೋಧಕರ ತಂಡ ಈ ಸಾಧನೆ ಮಾಡಿದ್ದು `ಸ್ಟೆಮ್ ಸೆಲ್ಸ್' ಜರ್ನಲ್ ನಲ್ಲಿ ಈ ಕುರಿತ ವಿವರವನ್ನು ಪ್ರಕಟಿಸಿದ್ದಾರೆ. ಆದರೆ ನೈತಿಕತೆಯ ಸ್ಟೆಮ್ ಸೆಲ್ ಸಂಶೋಧನೆಗಳಿಗೆ ತೀವ್ರ ವಿರೋಧವಿದ್ದು ಈ ಸಂಶೋಧನೆ ವಿವಾದಾತ್ಮಕ ರೂಪವನ್ನೂ ಪಡೆದಿದೆ.

1993: ನೊರೋಧಮ್ ಸಿಹಾನೌಕ್ ಅವರು ಕಾಂಬೋಡಿಯಾ ಸಿಂಹಾಸನದ ಮೇಲೆ  ಅಧಿಕಾರ ಮರುಸ್ಥಾಪನೆ ಮಾಡಿ, `ಪ್ರಜಾತಾಂತ್ರಿಕ, ಸಂವೈಧಾನಿಕ ರಾಜಪ್ರಭುತ್ವ' ರಾಷ್ಟ್ರ ತಮ್ಮದು ಎಂದು ಘೋಷಿಸುವ ಸಂವಿಧಾನಕ್ಕೆ ಸಹಿ ಹಾಕಿದರು.

1988: ಕೆನಡಾದ ವೇಗದ ಓಟಗಾರ ಬೆನ್ ಜಾನ್ಸನ್ ಅವರು ಸೋಲ್ ಒಲಿಂಪಿಕ್ಸಿನಲ್ಲಿ 100 ಮೀಟರ್ ದೂರವನ್ನು 9.79 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದರು. ಮೂರು ದಿನಗಳ ಬಳಿಕ ನಿಷೇಧಿತ ಉತ್ತೇಜಕ ಮದ್ದು ಸೇವಿಸಿದ್ದರೆಂಬುದು ಬಹಿರಂಗಗೊಂಡು ಅವರ ಪದಕವನ್ನು ಕಿತ್ತುಕೊಳ್ಳಲಾಯಿತು.

1951: ಸಾಹಿತಿ ನಾಗರತ್ನಮ್ಮ ಎಂ. ಶಿವರ ಜನನ.

1947: ಪಾಕಿಸ್ಥಾನಿ ಸೈನಿಕರಿಂದ ಕಾಶ್ಮೀರದ ಮೇಲೆ ದಾಳಿ.

1932: ಚಿತ್ತಗಾಂಗಿನ ಐರೋಪ್ಯ ಕ್ಲಬ್ ಒಂದರ ಮೇಲೆ ಸಶಸ್ತ್ರ ದಾಳಿಯ ನೇತೃತ್ವ ವಹಿಸಿದ್ದ ಪ್ರೀತಿಲತಾ ವಡ್ಡೆದಾರ್ ಆತ್ಮಾಹುತಿ ಮಾಡಿಕೊಳ್ಳುವುದರೊಂದಿಗೆ ರಾಷ್ಟ್ರಕ್ಕಾಗಿ ಆತ್ಮಾರ್ಪಣೆ ಮಾಡಿದ ಮೊದಲ ಭಾರತೀಯ ಮಹಿಳಾ ಉಗ್ರಗಾಮಿ ಎಂಬ ಕೀರ್ತಿಗೆ ಪಾತ್ರರಾದರು.

1932: ಭಾರತದಲ್ಲಿನ ಹಿಂದೂ ನಾಯಕರು ಸಹಿ ಹಾಕಿದ ಒಪ್ಪಂದವೊಂದು ರಾಷ್ಟ್ರದಲ್ಲಿನ `ಅಸ್ಪೃಶ್ಯ'ರಿಗೆ ಹೊಸ ಹಕ್ಕುಗಳನ್ನು ನೀಡಿತು. `ಪೂನಾ ಕಾಯ್ದೆ' ಎಂದೇ ಹೆಸರು ಪಡೆದ ಈ ಒಪ್ಪಂದವು `ಪ್ರತ್ಯೇಕ ಮತದಾರ' ವ್ಯವಸ್ಥೆಯನ್ನು ಹಿಂತೆಗೆದುಕೊಂಡು  ಪರಿಶಿಷ್ಟ ಜಾತಿಗಳಿಗೆ ಹತ್ತು ವರ್ಷಗಳ ಅವಧಿಗೆ ಹೆಚ್ಚಿನ ಪ್ರಾನಿಧ್ಯವನ್ನು ಒದಗಿಸಿತು. ಮಹಾತ್ಮಾ ಗಾಂಧೀಜಿಯವರು `ಪ್ರತ್ಯೇಕ ಮತದಾರ' ವ್ಯವಸ್ಥೆಯು ಪರಿಶಿಷ್ಟರನ್ನು ಹಿಂದೂ ಸಮುದಾಯದಿಂದ ಇನ್ನಷ್ಟು ದೂರಮಾಡುತ್ತದೆ ಎಂದು ವಾದಿಸಿ ಅದನ್ನು ಕಿತ್ತುಹಾಕಲು ಉಪವಾಸ ಹೂಡಿದಾಗ ಡಾ. ಬಿ.ಆರ್. ಅಂಬೇಡ್ಕರ್ ಅವರು ಅದನ್ನು ತೆಗೆದುಹಾಕಿದರು.

1910: `ಗ್ರಾಮಾಯಣ'ದ ಮೂಲಕ ಖ್ಯಾತರಾದ ರಾಮಚಂದ್ರ ರಾವ್ ಭೀಮರಾವ್ ಕುಲಕರ್ಣಿ ಯಾನೆ ರಾವ್ ಬಹದ್ದೂರ್ (24-9-1910ರಿಂದ 31-12-1984) ಅವರು ಭೀಮರಾಯರು- ಸುಭದ್ರಾಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಕೃಷ್ಣಾ ನದಿ ತೀರ ಗ್ರಾಮವಾದ ಹಿರೇ ಪಡಸಲಗಿಯಲ್ಲಿ ಜನಿಸಿದರು.

1861: ಭಾರತೀಯ ಸ್ವಾತಂತ್ರ್ಯ ಯೋಧೆ ಭಿಕಾಜಿ ಕಾಮಾ (1861-1936) ಜನ್ಮದಿನ. 1907ರಲ್ಲಿ ಸ್ಟಟ್ ಗರ್ಟಿನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಸೋಶಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಕೆಂಪು, ಬಿಳಿ ಮತ್ತು ಹಸಿರು ಪಟ್ಟಿಗಳಿದ್ದ ತ್ರಿವರ್ಣ ರಂಜಿತ ಭಾರತೀಯ ರಾಷ್ಟ್ರಧ್ವಜದ ಮೊದಲ ಮಾದರಿಯನ್ನು ಹಾರಿಸಿದ ವಿಶೇಷ ಕೀರ್ತಿಗೆ ಕಾಮಾ ಅವರು ಭಾಜನರಾಗಿದ್ದಾರೆ.

1829: ಅಸ್ಸಾಮಿ ಕವಿ ಆನಂದರಾಂ ಫೂಕಾನ್ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಸೆಪ್ಟೆಂಬರ್ 23

ಇಂದಿನ ಇತಿಹಾಸ

ಸೆಪ್ಟೆಂಬರ್ 23


ಭಾರತ ಅಂಚೆ ಇಲಾಖೆಯು `ಹಾರುತ್ತಿರುವ ಪಕ್ಷಿ'ಯ ಹೊಸ ಲಾಂಛನವನ್ನು (ಲೋಗೊ) ಪಡೆದುಕೊಂಡಿತು. ಲಾಂಛನದಲ್ಲಿನ ದಟ್ಟ ಗೆರೆಗಳು ಸ್ವತಂತ್ರ  ಹಾರಾಟವನ್ನು ಬಿಂಬಿಸುತ್ತವೆ.  ಬಣ್ಣಗಳು- ಕೆಂಪು, ಹಳದಿ. ಕೆಂಪು  - ಅಂಚೆ ಸೇವೆಯೊಂದಿಗಿನ  ಪಾರಂಪರಿಕ  ಬಾಂಧವ್ಯವನ್ನು ಮತ್ತೆ ಬೆಸೆಯುತ್ತದೆ. ಸೇವೆ, ಶಕ್ತಿ ಹಾಗೂ ಬದ್ಧತೆಗಳನ್ನು ಇದು ಧ್ವನಿಸುತ್ತದೆ. ಹಳದಿ ಬಣ್ಣ ಭರವಸೆ, ಖುಷಿ, ಸಂತೋಷವನ್ನು ಬಿಂಬಿಸುತ್ತದೆ.


2014: ಇಂಚೋನ್: ಭಾರತದ ಜನಪ್ರಿಯ ಶೂಟರ್, ಒಲಿಂಪಿಕ್ ಸ್ವರ್ಣ ವಿಜೇತ ಅಭಿನವ್ ಬಿಂದ್ರಾ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಅಭಿನವ್ ಬಿಂದ್ರಾ ಅವರಿಗೆ ವೃತ್ತಿಜೀವನದ ಏಷ್ಯನ್ ಗೇಮ್ಸ್​ನಲ್ಲಿ ಸಂಪಾದಿಸಿದ ಚೊಚ್ಚಲ ವೈಯಕ್ತಿಕ ಪದಕ’ ಈಗಾಗಲೇ ಶೂಟಿಂಗ್ ವಿದಾಯ ಪ್ರಕಟಿಸಿರುವ ಅಭಿನವ್ ಬಿಂದ್ರಾಗೆ ಇದೇ ಕಡೆಯ ಕ್ರೀಡಾಕೂಟ. ಒನ್ಗೆಯಾನ್ ಅಂತಾರಾಷ್ಟ್ರೀಯ ಶೂಟಿಂಗ್ ರೇಂಜ್​ನಲ್ಲಿ ಈದಿನ ಬೆಳಗ್ಗೆ ನಡೆದ ಸ್ಪರ್ಧೆಯಲ್ಲಿ ಅಭಿನವ್ 187.1 ಅಂಕಗಳನ್ನು ಗಳಿಸಿ ಕಂಚು ಸಂಪಾದಿಸಿದರೆ, ಚೀನಾದ ಹೌರಾನ್ ಯಾಂಗ್ 209.6 ಅಂಕಗಳೊಂದಿಗೆ ಸ್ವರ್ಣ ಪದಕವನ್ನು, ರಿಫೀ ಕಾವೊ 208.9 ಅಂಕಗಳೊಂದಿಗೆ ಬೆಳ್ಳಿ ಪದಕವನ್ನೂ ಸಂಪಾದಿಸಿದರು.

2014:  ಮುಂಬೈ: ಭೂಗತ ಪಾತಕಿ ರವಿ ಪೂಜಾರಿ ಮೂರು ಕೋಟಿ ರೂಪಾಯಿ ಹಣಕ್ಕಾಗಿ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿತು. ಈ ಹಿನ್ನೆಲೆಯಲ್ಲಿ ಅವರ ಜುಹುನಲ್ಲಿರುವ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಯಿತು. ಈ ಸಂಬಂಧ ಮುಂಬೈ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಹಣಕ್ಕಾಗಿ ಎರಡು ಬಾರಿ ಕುಂದ್ರಾ ಮೊಬೈಲ್​ಗೆ ಕರೆ ಬಂದಿತ್ತು ಎನ್ನಲಾಯಿತು. ಮೊದಲ ಕರೆಯಲ್ಲೆ 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ಹೇಳಲಾಯಿತು. ಬಾಲಿವುಡ್​ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿಯಾಗಿರುವ ರಾಜ್ ಕುಂದ್ರಾ ಖ್ಯಾತ ಉದ್ಯಮಿಗಳಲ್ಲಿ ಒಬ್ಬರು. ಐಪಿಎಲ್​ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕರೂ ಹೌದು. ಪ್ರಕರಣ ದಾಖಲಿಸಿಕೊಂಡ ಮುಂಬೈ ಪೋಲಿಸರು ತನಿಖೆ ಮುಂದುವರಿಸಿದರು.

2014: ನವದೆಹಲಿ: ಗೀತು ಮೋಹನ್​ದಾಸ್ ನಿರ್ದೇಶನದ ಚೊಚ್ಚಲ ಹಿಂದಿ ಚಿತ್ರ 'ಲಯರ್ಸ್ ಡೈಸ್' ವಿಶ್ವದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಲ್ಲಿ ಒಂದಾದ ಆಸ್ಕರ್ ಅಂಗಣ ಪ್ರವೇಶಿಸಿತು. ಮಲೆಯಾಳಂ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿಕೊಂಡಿರುವ ಗೀತು ಮೋಹನ್ ದಾಸ್ ಅವರ 'ಲಯರ್ಸ್ ಡೈಸ್' ಆಯ್ಕೆ ಮಾಡಲಾಗಿದೆ ಎಂದು ಎಫ್​ಎಫ್​ಐನ ಪ್ರಧಾನ ಕಾರ್ಯದರ್ಶಿ ಸುಪ್ರಾಣ್ ಸೇನ್ ಹೇಳಿದರು. ಆಸ್ಕರ್​ಗಾಗಿ ನಡೆದ ಅಂತಿನ ಸುತ್ತಿನಲ್ಲಿ 30ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿದ ಫೆಡರೇಷನ್ ಆಫ್ ಇಂಡಿಯಾದ 12 ಸದಸ್ಯರ ತಂಡ 'ಲಯರ್ಸ್ ಡೈಸ್' ಚಿತ್ರವನ್ನು ಆಯ್ಕೆ ಮಾಡಿಕೊಂಡಿದೆ. ಹಿಮಾಚಲ ಪ್ರದೇಶದ ಬುಡಕಟ್ಟು ಜನಾಂಗದ ಮಹಿಳೆ ತನ್ನ 3 ವರ್ಷದ ಮಗಳ ಜೊತೆ ಕಾಣೆಯಾದ ಪತಿಗಾಗಿ ಅರಸುವ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನವಾಜುದ್ದೀನ್ ಸಿದ್ಧಿಕಿ ಮತ್ತು ಗೀತಾಂಜಲಿ ಥಾಪಾ ನಟಿಸಿದ್ದು, ಈ ಮೊದಲೇ 2 ಬಾರಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಸಂಪಾದಿಸಿತ್ತು.

2013: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದರು. ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜೂಬಾಯಿ ವಾಲಾ ಭವ್ಯ ಸ್ವಾಗತ ಕೋರಿದರು. ಮೋದಿ ಆಗಮನ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಪ್ರಧಾನಿ ಆದ ಬಳಿಕ ಮೋದಿ ಅವರ ಕರ್ನಾಟಕಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿದರು. ಬಿಜೆಪಿಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.

2014:  ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಸೀಟು ಹಂಚಿಕೆ ಬಿಕಟ್ಟು ಶಮನವಾಗಿದ್ದು, ಶಿವಸೇನೆ 151 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 130 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಬರಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನಡೆಸಿದ ಸಂಧಾನ ಕೊನೆಗೂ ಸಫಲವಾಗಿದ್ದು, ಶಿವಸೇನೆ ಮತ್ತು ಬಿಜೆಪಿಯ ಎರಡೂವರೆ ದಶಕದ ಮೈತ್ರಿ ಪ್ರಸಕ್ತ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು, ಈ ಹಂತದಲ್ಲಿ ಯಾವುದೇ ಗೊಂದಲಗಳು ಸೃಷ್ಟಿಯಾಗುವುದು ಬೇಡ ಎನ್ನುವ ನಿರ್ಧಾರಕ್ಕೆ ಉಭಯ ನಾಯಕರು ಬಂದರು. ಹೀಗಾಗಿ ಸೀಟು ಹಂಚಿಕೆ ಸಂಬಂಧ ಈದಿನ ಮುಂಬೈನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಉಭಯ ನಾಯಕರು ಚರ್ಚಿಸಿದರು. ಬಿಜೆಪಿಗೆ 130 ಸ್ಥಾನಗಳನ್ನು ಬಿಟ್ಟು ಕೊಡಲು ಶಿವಸೇನೆ ಸಿದ್ಧವಿದೆ. ಅಂತೆಯೇ ತಾನು 151 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಶಿವಸೇನೆ ಸ್ಪಷ್ಟಪಡಿಸಿದ್ದು, ಉಳಿದ 7 ಸ್ಥಾನಗಳಲ್ಲಿ ಮೈತ್ರಿಕೂಟದ ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ಇದಕ್ಕೂ ಮೊದಲು 2009ರ ಸೀಟು ಹಂಚಿಕೆಯನ್ನೇ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದ್ದ ಶಿವಸೇನೆ ನಾಯಕರು, ಬಿಜೆಪಿಗೆ 119 ಸ್ಥಾನ, ಮೈತ್ರಿಕೂಟದಲ್ಲಿರುವ ಇತರೆ ಪಕ್ಷಗಳಿಗೆ 18 ಸ್ಥಾನ ಮತ್ತು ತನಗೆ 151 ಸ್ಥಾನ ಬೇಕು ಎಂದು ಒತ್ತಡ ಹೇರಿದ್ದರು. ಈ ಸೂತ್ರಕ್ಕೆ ಒಪ್ಪದೇ ಇದ್ದರೆ ತಾನು ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧ ಎಂದು ಶಿವಸೇನೆ ಖಾರವಾಗಿ ಪ್ರತಿಕ್ರಿಯಿಸಿತ್ತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಸಲಹೆಯ ಮೇರೆಗೆ ನೂತನ ಸೂತ್ರಕ್ಕೆ ಶಿವಸೇನೆ ಒಪ್ಪಿಗೆ ಸೂಚಿಸಿತು.

2014: ನವದೆಹಲಿ: ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತಿನಲ್ಲಿದ್ದ ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್. ಕೆ. ಜೈನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು. ಜೈನ್ ಅವರನ್ನು ಹಿಂದಿನ ದಿನ ನ್ಯಾಯಾಲಯ ಸಿಬಿಐ ಕಸ್ಟಡಿಗೊಪ್ಪಿಸಿದ ಬಳಿಕ ಸೇವೆಯಿಂದ ವಜಾಗೊಳಿಸಲಾಯಿತು. ಲಂಚ ವ್ಯವಹಾರದ ದಲ್ಲಾಳಿ ಪುರುಷೋತ್ತಮ್ ತೋತ್ಲಾನಿಗೆ ಜೈನ್ರನ್ನು ಮುಖಾಮುಖೀಯಾಗಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತು. ಎಸ್ .ಕೆ. ಜೈನ್, ಪ್ರಕಾಶ್ ಇಂಡಸ್ಟ್ರೀಸ್ನ ಸಿಎಂಡಿ ವೇದ್ ಪ್ರಕಾಶ್ ಅಗರ್ವಾಲ್, ಭೂಷಣ್ ಸ್ಟೀಲ್ ಲಿಮಿಟೆಡ್ನ ಉಪಾಧrಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನೀರಜ್ ಸಿಂಘಲ್, ದಲ್ಲಾಳಿ ವಿನೀತ್ ಗೋಧ ಸಹಿತ ಕೆಲವು ಮಂದಿಯನ್ನು ಸಿಬಿಐ ಸಾಲ ಮಂಜೂರು ಮಾಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿಸಿತ್ತು.

2014; ದುಬೈ: ಧ್ವನಿ ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಖ್ಯಾತ ಸಾಹಿತಿ ಪ್ರೊ.ಎಚ್.ಎಸ್.ಶಿವಪ್ರಕಾಶ್ ಆಯ್ಕೆಯಾದರು. ಸೆ.26ರಂದು ದುಬೈನ ಸರ್ಕಾರಿ ಸ್ವಾಮ್ಯದ ಆಲ್ ನಾಸರ್ ಲೀಜರ್ ಲ್ಯಾಂಡ್​ನ ಅಲ್ ನಶ್ವನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯರ್ ತಿಳಿಸಿದರು.

2014: ನವದೆಹಲಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಜೋಧಪುರದಲ್ಲಿ ಜೈಲಿನಲ್ಲಿ ಇರುವ ಸ್ವಯಂ ಘೋಷಿತ ದೇವಮಾನವ ಅಸರಾಮ್​ ಬಾಪುಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅನಾರೋಗ್ಯದ ಕಾರಣ ನೀಡಿ 72 ವರ್ಷ ವಯಸ್ಸಿನ ಅಸರಾಮ್​ಬಾಪು ಜಾಮೀನು ನೀಡುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. 2013ರಲ್ಲಿ ಜೋಧಪುರದ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಸರಾಮ್​ ಬಂಧನಕ್ಕೊಳಗಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡುವ ತುರ್ತ ಏನಿಲ್ಲ ಎಂದಿದೆ.

2014: ನವದೆಹಲಿ: ಜನಪ್ರಿಯ ಕ್ರಿಕೆಟ್ ಇತಿಹಾಸಕಾರ ಮತ್ತು ಅಂಕಿ-ಅಂಶ ತಜ್ಞ ಆನಂದಜೀ ದೊಸ್ಸಾ ಹಿಂದಿನ ದಿನ (ಸೆಪ್ಟೆಂಬರ್ 22) ನಿಧನರಾದರು. ಮೃತರಿಗೆ 98 ವರ್ಷ ವಯಸ್ಸಾಗಿತ್ತು. ಆನಂದಜೀ ಮತ್ತು ಅವರ ಪತ್ನಿ ಕಳೆದೊಂದು ವರ್ಷದಿಂದ ತಮ್ಮ ಮಗಳ ಜತೆ ನ್ಯೂಯಾರ್ಕ್​ನಲ್ಲೇ ವಾಸವಿದ್ದರು. ಆನಂದಜೀ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಆನಂದಜೀ ಸ್ವತಃ ಕ್ರಿಕೆಟಿಗರಾಗಿದ್ದು, ಶಾಲಾ, ಕಾಲೇಜು ಜೀವನದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಕೂಡ ಹೊಂದಿದ್ದರು. ಬ್ಯಾಟ್ಸ್​ಮನ್ ಆಗಿದ್ದ ಆನಂದಜೀ ಹಿಂದೂ ಜಮಖಾನ ಪರ ಕೂಡ ಆಡಿದ್ದರು. ಕ್ರಿಕೆಟ್ ಕುರಿತ ಪತ್ರಿಕೆಗಳಿಗೆ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದ ಹೆಗ್ಗಳಿಕೆ ಅವರದ್ದಾಗಿತ್ತು.

2008: ದೆಹಲಿಯಲ್ಲಿ ನಡೆದ ಸರಣಿ ಸ್ಫೋಟ ಸಂಚಿನಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರಗಾಮಿಯೊಬ್ಬನ ಬ್ಯಾಂಕ್ ಖಾತೆ ಮೂಲಕ ಕೇವಲ ಆರು ತಿಂಗಳ ಅವಧಿಯಲ್ಲಿ 3 ಕೋಟಿ ರೂಪಾಯಿಯ ಭಾರಿ ಮೊತ್ತದ ವ್ಯವಹಾರ ನಡೆದಿರುವುದು ಪತ್ತೆಯಾಯಿತು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇದನ್ನು ಪತ್ತೆಹಚ್ಚಿತು..ದೆಹಲಿ ಪೊಲೀಸ್ ಹಾಗೂ ಎಟಿಎಸ್ ಜಂಟಿ ತಂಡವು ಖ್ಯಾತ ವೈದ್ಯರೊಬ್ಬರನ್ನೂ ಈ ಸಂಬಂಧ ಪ್ರಶ್ನಿಸಿದ್ದಲ್ಲದೆ, ದೆಹಲಿ ಗುಂಡಿನ ಚಕಮಕಿಯಲ್ಲಿ ಹತರಾದ ಇಬ್ಬರು ಉಗ್ರರ ಸ್ವಂತ ಊರಾದ ಸಂಜಾರ್ ಪುರಕ್ಕೆ ತೆರಳಿ ಕೆಲವು ಸಿ.ಡಿ.ಗಳು ಹಾಗೂ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿತು..

2008: ಭಾರತ ಅಂಚೆ ಇಲಾಖೆಯು `ಹಾರುತ್ತಿರುವ ಪಕ್ಷಿ'ಯ ಹೊಸ ಲಾಂಛನವನ್ನು (ಲೋಗೊ) ಪಡೆದುಕೊಂಡಿತು. ಲಾಂಛನದಲ್ಲಿನ ದಟ್ಟ ಗೆರೆಗಳು ಸ್ವತಂತ್ರ  ಹಾರಾಟವನ್ನು ಬಿಂಬಿಸುತ್ತವೆ.  ಬಣ್ಣಗಳು- ಕೆಂಪು, ಹಳದಿ. ಕೆಂಪು  - ಅಂಚೆ ಸೇವೆಯೊಂದಿಗಿನ  ಪಾರಂಪರಿಕ  ಬಾಂಧವ್ಯವನ್ನು ಮತ್ತೆ ಬೆಸೆಯುತ್ತದೆ. ಸೇವೆ, ಶಕ್ತಿ ಹಾಗೂ ಬದ್ಧತೆಗಳನ್ನು ಇದು ಧ್ವನಿಸುತ್ತದೆ. ಹಳದಿ ಬಣ್ಣ ಭರವಸೆ, ಖುಷಿ, ಸಂತೋಷವನ್ನು ಬಿಂಬಿಸುತ್ತದೆ. ಈ ಲಾಂಛನವನ್ನು ಅಂಚೆ ಸಿಬ್ಬಂದಿ ಸಹಕಾರದೊಂದಿಗೆ ಆಗ್ಲಿವಿ ಅಂಡ್ ಮಾಥರ್ ವಿನ್ಯಾಸಗೊಳಿಸಿದೆ. ಮೊದಲ ನೋಟಕ್ಕೆ ಇದೊಂದು ಲಕೋಟೆ. ಅಲ್ಲಿ `ಹಾರುತ್ತಿರುವ ಪಕ್ಷಿ' ಅಂಚೆ ಸೇವೆಗೆ ಕಾಪರ್ೊರೆಟ್ ರೂಪ ಹಾಗೂ ಬಿಸಿನೆಸ್ ಬಗ್ಗೆ ಹೊಂದಿರುವಂತಹ ಹೊಸ ದೃಷ್ಟಿಕೋನವನ್ನು ಧ್ವನಿಸಲಿದೆ ಎಂಬುದು ಕೇಂದ್ರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಎ.ರಾಜ ಅವರ ಅಭಿಪ್ರಾಯ..

2008: ಬಣ್ಣ, ಬಣ್ಣದ ಬಲೂನುಗಳೆಂದರೆ ಮಕ್ಕಳಿಗೆ ಪಂಚಪ್ರಾಣ. ದೊಡ್ಡವರಿಗೂ ಇಷ್ಟ. ಹತ್ತಾರು ಜನರನ್ನು ಆಕಾಶದಲ್ಲಿ ತೇಲಾಡಿಸುವ ಗಾಳಿ ಬುಗ್ಗೆ ಸಹ ಬಲೂನಿನ ದೈತ್ಯ ರೂಪ. ಈಗ ವಿಜ್ಞಾನಿಗಳು ವಿಶ್ವದಲ್ಲೇ ಅತಿ ಚಿಕ್ಕದಾದ ಬಲೂನ್ ಕಂಡುಹಿಡಿದಿರುವುದನ್ನು ಪ್ರಕಟಿಸಿದರು. ಈ ಬಲೂನು ಎಷ್ಟು ಚಿಕ್ಕದು ಅಂದರೆ ಇದರ ಪದರಗಳ ದಪ್ಪ  ಕೇವಲ ಒಂದು ಪರಮಾಣುವಿನಷ್ಟು...! ಗ್ರಾಫೈಟ್ ಹಾಗೂ ಸಿಲಿಕಾನ್ ಬಳಸಿ ಅಮೆರಿಕದ ಕಾರ್ನೆಲ್ ವಿವಿ ವಿಜ್ಞಾನಿಗಳು ವಿಶ್ವದಲ್ಲೇ ಅತಿ ಚಿಕ್ಕದಾದ ಈ ಬಲೂನ್ ರೂಪಿಸಿದ್ದು, ಇದು ಭಾರಿ ಒತ್ತಡವನ್ನು ತಡೆದುಕೊಳ್ಳಬಲ್ಲುದು. ಈ ಅತಿ ಚಿಕ್ಕ ಬಲೂನ್ ಸಂಶೋಧನೆಯಿಂದ ಹತ್ತು ಹಲವು ತಂತ್ರಜ್ಞಾನ ರೂಪಿಸಬಹುದಾಗಿದೆ ಎಂದು ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು.

 2008: ಬೆಂಗಳೂರು ನಗರದಲ್ಲಿ ಹೊಸದಾಗಿ ಸ್ಥಾಪಿಸಿದ `ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ'ಕ್ಕೆ ವಿಶೇಷ ಅಧಿಕಾರಿಯಾಗಿ ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿತು. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ವಿಶ್ವೇಶ್ವರಪುರದವರಾದ ಮಲ್ಲೇಪುರಂ, ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲಯಲ್ಲಿ ಕನ್ನಡ ಪಂಡಿತ, ಹಂಪಿ ವಿ.ವಿ.ಯಲ್ಲಿ ಕುಲಸಚಿವ, ಭಾಷಾ ನಿಕಾಯ ಡೀನ್, ಪ್ರಸಾರಾಂಗ, ಅಧ್ಯಯನಾಂಗ ನಿರ್ದೇಶಕರು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.

2007: ಶ್ರೀರಾಮನನ್ನು ನಿಂದಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ತಲೆ ತೆಗೆಯಬೇಕು ಎಂದು ಬಿಜೆಪಿಯ ಮಾಜಿ ಸಂಸದರೊಬ್ಬರು ಹೊರಡಿಸಿದ್ದ `ಫತ್ವಾ'ದಿಂದ ಕುಪಿತಗೊಂಡ ಆಡಳಿತ ಡಿಎಂಕೆ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು ಚೆನ್ನೈಯಲ್ಲಿ ವೈದ್ಯರಾಮನ್ ಬೀದಿಯಲ್ಲಿನ ಬಿಜೆಪಿ, ವಿಎಚ್ಪಿ ಮತ್ತು ಹಿಂದೂ ಮುನ್ನಣಿ ಕಚೇರಿಗಳ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಪಕ್ಷದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ತಮಿಳಿಸೈ ಸೌಂದರ್ ರಾಜನ್ ಸೇರಿ 8 ಮಂದಿ ಗಾಯಗೊಂಡರು. ಕೆಲ ಪೊಲೀಸರಿಗೂ ಪೆಟ್ಟಾಯಿತು. ಕಾರೈಕುಡಿಯಲ್ಲಿ ಮಾಜಿ ಸಂಸದ, ಬಿಜೆಪಿಯ ಎಚ್.ರಾಜಾ ಅವರ ಮನೆ ಕೂಡ ದಾಳಿಗೆ ತುತ್ತಾಯಿತು. ಟಿವಿ ಕ್ಯಾಮರಾಗಳ ಸಮ್ಮುಖದಲ್ಲಿಯೇ ಇಡಿ ದಾಳಿ ನಡೆಯಿತು. ಆದರೆ ಪೊಲೀಸರು ಮಾತ್ರ ಅಕ್ಷರಶಃ ಮೂಕಪ್ರೇಕ್ಷರಾಗಿದ್ದರು. ಬಿಜೆಪಿ ಕಚೇರಿ ಮೇಲಿನ ದಾಳಿಯ ನೇತೃತ್ವವನ್ನು ದಕ್ಷಿಣ ಚೆನ್ನೈನ ಡಿಎಂಕೆ ಘಟಕದ ಕಾರ್ಯದರ್ಶಿ ಅನ್ಬಳಗನ್ ವಹಿಸಿದ್ದರು. ರಾಮ ನಿಂದನೆ ಮಾಡಿದ ಕರುಣಾನಿಧಿ ಅವರ ತಲೆ ತೆಗೆಯುವವರಿಗೆ ಅಷ್ಟೇ ತೂಕದ ಚಿನ್ನ ಕೊಡುವುದಾಗಿ ಬಿಜೆಪಿ ಮಾಜಿ ಸಂಸದ ಹಾಗೂ ವಿಎಚ್ಪಿ ನಾಯಕ ರಾಮ್ ವಿಲಾಸ್ ವೇದಾಂತಿ ಅಯೋಧ್ಯೆಯಲ್ಲಿ ನೀಡಿದ ಪ್ರಚೋದನಕಾರಿ ಫತ್ವಾ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಯಿತು. ಇದನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಿಎಂಕೆ ಧುರೀಣ ಹಾಗೂ ರಾಜ್ಯದ ವಿದ್ಯುತ್ ಖಾತೆ ಸಚಿವ ಅರ್ಕಾಟ್ ಎನ್.ವೀರಾಸ್ವಾಮಿ ಎಚ್ಚರಿಸಿದ ಬೆನ್ನಲ್ಲೇ ಈ ದಾಳಿ ನಡೆಯಿತು.

2007: ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮತ್ತು ಮೂವರು ಕೇಂದ್ರ ಸಚಿವರ ವಿರುದ್ಧ ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾ ಭಾರತಿ ಅವರು ನವದೆಹಲಿಯ ಸಂಸತ್ ಭವನ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ಧ ವಿಎಚ್ ಪಿ ಕಾರ್ಯಕರ್ತರು ಮತ್ತು ಸಮಾನಮನಸ್ಕರು ದೂರು ದಾಖಲಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಕರೆ ನೀಡಿತು.

2007: ಭಾರತೀಯ ಸಂಗೀತ ಲೋಕಕ್ಕೆ ಮೊಟ್ಟ ಮೊದಲ ಸಲ ಲತಾ ಮಂಗೇಶ್ಕರ್ ಅವರ ಮಧುರ ಧ್ವನಿಯನ್ನು ಪರಿಚಯಿಸಿದ್ದ ಮರಾಠಿಯ ಹೆಸರಾಂತ ಸಂಗೀತ ನಿರ್ದೇಶಕ ದತ್ತಾ ದವಜೇಕರ್ (90)ಅವರು ಮುಂಬೈಯಲ್ಲಿ ನಿಧನರಾದರು.

2007: ಉದಾರವಾದಿ ಮುಖಂಡ ಯಸುವೊ ಫುಕುಡಾ (71) ಅವರು ಜಪಾನಿನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಹೀಗಾಗಿ ಇತ್ತೀಚೆಗೆ ರಾಜೀನಾಮೆ ನೀಡಿದ ಶಿಂಜೊ ಅಬೆ ಸ್ಥಾನದಲ್ಲಿ ಅವರು ಪ್ರಧಾನಿ ಹುದ್ದೆಗೆ ಏರಲು ಹಾದಿ ಸುಗಮಗೊಂಡಿತು.

2007: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶದ ಸುಮಾರು 1 ಸಾವಿರಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾದರು. ಬರಿಸಾಲ್, ಬರ್ಗುನ, ಪತುಖೊಲಿ, ಬಗೇರ್ ಹತ್ ಹಾಗೂ ಕಾಕ್ಸ್ ಬಜಾರ್ ಕರಾವಳಿಯಲ್ಲಿ ಸುಮಾರು 91 ಮಂದಿಯನ್ನು ರಕ್ಷಿಸಲಾಯಿತು.

2007: ಭಾರತೀಯ ಗೋರಕ್ಷೆಯ ಆಂದೋಲನ ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಗೋವಿನ ಹಾಲುಂಡ ಎಲ್ಲರೂ ಜಾತಿಭೇದ, ಪಕ್ಷ ಭೇದವಿಲ್ಲದೆ ಈ ಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ  ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಎಚ್.ಬಿ.ಆರ್. ಬಡಾವಣೆಯ ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದ ಸಮೀಪ ನಡೆದ ಯಲಹಂಕ ವಲಯ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಸ್ವಾತಂತ್ರ್ಯ ಲಭಿಸಿದ್ದರೂ ನಾವು ಇಂದಿಗೂ ಉಡುಗೆ, ತೊಡುಗೆ, ಶಿಕ್ಷಣ, ವ್ಯವಹಾರ, ಹಾಲಿನ ವಿಚಾರದಲ್ಲಿ ಕೂಡಾ ಬ್ರಿಟಿಷರ ದಾಸರಾಗಿ ಉಳಿದಿದ್ದೇವೆ. ಹಾಲು-ತುಪ್ಪದ ಹೊಳೆ ಹರಿಸಿ, `ಗೋರಾಷ್ಟ್ರ' ಎಂಬ ಹೆಸರಿಗೆ ಪಾತ್ರವಾಗಿದ್ದ ಈ ಭಾರತದಲ್ಲಿ ಗೋವಿಗೆ ಅಪಚಾರ, ಗೋವಧೆ ಮಾಡುತ್ತಿದ್ದೇವೆ ಎಂದು ಅವರು ವಿಷಾದಿಸಿದರು. ನಮ್ಮ ದೇಹದ ಬಿಂದು ಬಿಂದು ರಕ್ತದ ಹಿಂದೆ ಹಂಡೆ ಹಂಡೆ ಗೋವಿನ ಹಾಲು ಇದೆ. ಗೋಮೂತ್ರ, ಗೋಮಯದಿಂದ ಬೆಳೆದ ಅನ್ನ ಉಂಡು ನಮ್ಮ ದೇಹ ಬೆಳೆದಿದೆ. ಗೋವಿನಿಂದ ಬಂದ ಈ ದೇಹವನ್ನು ಗೋವಿಗಾಗಿ ತೆರಲೂ ಸಿದ್ಧವಿರಬೇಕು. ಮುಂದಿನ ಪೀಳಿಗೆಗಾಗಿ ಗೋರಕ್ಷೆಯ ಮಹಾ ಸಂಕಲ್ಪ ತೊಡಬೇಕು ಎಂದು ಅವರು ಹೇಳಿದರು. ಕೃಷ್ಣರಾಜಪುರ ಭಾರತಮಾತಾ ಆಶ್ರಮದ ಸಾಧು ರಂಗರಾಜನ್, ಮಾರತ್ ಹಳ್ಳಿ ವಿಭೂತಿಪುರ ಮಠದ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ,  ಪಾರ್ವತಮ್ಮ ರಾಜಕುಮಾರ್ ಮಾತನಾಡಿ ಭಾರತೀಯ ಗೋತಳಿ ರಕ್ಷಣೆಯ ಕಾರ್ಯ ಎಲ್ಲೆಡೆಗೆ ಹರಡಲಿ ಎಂದು ಹಾರೈಸಿದರು. ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮ ಅವರು ಸಾಕ್ಷಾತ್ಕಾರ ಶಾಲೆಯ ಮಕ್ಕಳು ಗೋವಿನ ಹಾಡು ಹಾಡುತ್ತಿದ್ದಂತೆಯೇ ಗೋವಿನ ಸುಂದರ ಚಿತ್ರ ರಚಿಸಿದರು.

2006: ಕೇಂದ್ರದ ಯುಪಿಎ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ತೆಲಂಗಾಣ ರಾಷ್ಟ್ರೀಯ ಸಮಿತಿಯು (ಟಿಆರ್ ಎಸ್) ಹಿಂತೆಗೆದುಕೊಂಡಿತು.

2001: ಗೀತ್ ಸೇಥಿ ಅವರು ನ್ಯೂಜಿಲೆಂಡಿನ ಕ್ರೈಸ್ಟ್ ಚರ್ಚಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅಶೋಕ ಶಾಂಡಿಲ್ಯ ಅವರನ್ನು 3484-1289 ಅಂತರದಲ್ಲಿ ಪರಾಭವಗೊಳಿಸಿ ವಿಶ್ವ ಪ್ರೊಫೆಷನಲ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. ಇದರೊಂದಿಗೆ ಈ ಜಾಗತಿಕ ಪ್ರಶಸ್ತಿಯನ್ನು ಏಳನೇ ಬಾರಿಗೆ ಗೆದ್ದ ಹೆಗ್ಗಳಿಕೆ ಅವರದಾಯಿತು.

2000: ರೋವರ್ ಸ್ಟೀವನ್ ರೆಡ್ ಗ್ರೇವ್ ಅವರು  ಸಿಡ್ನಿ ಒಲಿಂಪಿಕ್ಸಿನ ಕಾಕ್ಸ್ ಲೆಸ್ ಪೇರ್ಸಿನಲ್ಲಿಸ್ವರ್ಣಪದಕ ಗೆಲ್ಲುವುದರೊಂದಿಗೆ ಒಲಿಂಪಿಕ್ಸಿನಲ್ಲಿ ನಿರಂತರವಾಗಿ ಐದು ಬಾರಿ ಸ್ವರ್ಣ ಪದಕ ಗೆದ್ದ ಪ್ರಥಮ ಬ್ರಿಟಿಷ್ ಅಥ್ಲೆಟ್ ಎಂಬ ಕೀರ್ತಿಗೆ ಭಾಜನರಾದರು. ಎಂಡ್ಯೂರೆನ್ಸ್ ಕ್ರೀಡೆಯಲ್ಲಿ ಸತತವಾಗಿ ಐದು ಬಾರಿ ಪದಕ ಗೆದ್ದ ವಿಶ್ವದ ಮೊದಲ ಅಥ್ಲೆಟ್ ಎಂಬ ಹೆಗ್ಗಳಿಕೆ ಕೂಡಾ ಇವರದೇ.

1997: ವೇಲ್ಸಿನ ರಾಜಕುಮಾರಿ ಡಯಾನಾಳ ಅಂತ್ಯಸಂಸ್ಕಾರ ಕಾಲದಲ್ಲಿ ಎಲ್ಟನ್ ಜಾನ್ ಅವರು ಸ್ವತಃ ಬರೆದು ಹಾಡಿದ  `ಕ್ಯಾಂಡಲ್ ಇನ್ ದಿ ವಿಂಡ್ 1997' ಹಾಡಿನ ರೆಕಾರ್ಡ್  ನ್ಯೂಯಾರ್ಕ್   ನಗರದಲ್ಲಿ ಮಾರಾಟಕ್ಕೆ ಬಿಡುಗಡೆಯಾಯಿತು. 37 ದಿನಗಳ ನಂತರ ಈ ಹಾಡಿನ ಸಿಡಿ ಮಾರಾಟದಲ್ಲಿ ದಾಖಲೆ ಸ್ಥಾಪಿಸಿತು. ಅದರ ಸುಮಾರು 3.20 ಕೋಟಿ ಪ್ರತಿಗಳು ಮಾರಾಟವಾದವು.

1952: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕೋಚ್ ಅಂಶುಮಾನ್ ಗಾಯಕವಾಡ್ ಜನ್ಮದಿನ.

1939: `ಮನೋವಿಶ್ಲೇಷಣೆ'ಯ ಸ್ಥಾಪಕ ಸಿಗ್ಮಂಡ್ ಫ್ರಾಯ್ಡ್ ಅವರು ಲಂಡನ್ನಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. `ಕೊಪರ್ನಿಕಸ್ ಆಫ್ ಮೈಂಡ್' ಎಂದೇ ಅವರು ಖ್ಯಾತಿ ಪಡೆದಿದ್ದರು.

1934: ಪ್ರಕಾಶಕಿ, ಲೇಖಕಿ, ಅಧ್ಯಾಪಕಿ ಬಿ.ಎಸ್. ರುಕ್ಕಮ್ಮ ಅವರು ಬಿ.ಟಿ. ಶ್ರೀನಿವಾಸ ಅಯ್ಯಂಗಾರ್- ಸೀತಮ್ಮ ದಂಪತಿಯ ಮಗಳಾಗಿ ಜನಿಸಿದರು.

1862: ಚಂದಮ ದೇಶಭಕ್ತ ಶ್ರೀನಿವಾಸ ಶಾಸ್ತ್ರಿ ಜನನ.

1848: ಜಾನ್ ಕರ್ಟಿಸ್ ಅವರು `ಚ್ಯೂಯಿಂಗ್ ಗಮ್'ನ್ನು ಮೊತ್ತ ಮೊದಲ ಬಾರಿಗೆ ಮಾರಾಟದ ಸಲುವಾಗಿ ಉತ್ಪಾದಿಸಿದರು. ಮೈನ್ ನ  ಬ್ಯಾಂಗೋರಿನ ತಮ್ಮ ಮನೆಯಲ್ಲಿ ಸ್ಟೌವಿನಲ್ಲಿ ಇದನ್ನು ಉತ್ಪಾದಿಸಿದ ಅವರು `ಸ್ಟೇಟ್ ಆಫ್ ಮೈನ್ ಪ್ಯೂರ್ ಸ್ಪ್ರೂಸ್ ಗಮ್' ಎಂಬ ಹೆಸರಿನಲ್ಲಿ ಮಾರಾಟ ಮಾಡಿದರು.

1846: ಜರ್ಮನ್ ಖಗೋಳ ತಜ್ಞ ಜೊಹಾನ್ ಗೊಟ್ ಫ್ರೈಡ್ ಗ್ಯಾಲ್ ಅವರು ನೆಪ್ಚೂನ್ ಗ್ರಹವನ್ನು ಕಂಡು ಹಿಡಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement