My Blog List

Thursday, December 31, 2009

ಇಂದಿನ ಇತಿಹಾಸ History Today ಡಿಸೆಂಬರ್ 04

ಇಂದಿನ ಇತಿಹಾಸ

ಡಿಸೆಂಬರ್ 04

ನವದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮೀನಾರಿನ ಮೆಟ್ಟಿಲು ಸಾಲಿನಲ್ಲಿ ನೂಕು ನುಗ್ಗಲು ಸಂಭವಿಸಿ 21 ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ಅಸು ನೀಗಿದರು. ಇತರ 21 ಮಂದಿ ಗಾಯಗೊಂಡರು. ವಿದ್ಯುತ್ ವೈಫಲ್ಯದಿಂದ ಉಂಟಾದ ಗಾಬರಿಯಿಂದ ಈ ನೂಕುನುಗ್ಗಲು ಸಂಭವಿಸಿತು.

2008: ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಮಾದರಿಯಲ್ಲೇ ಸುಮಾರು 750 ಮಂದಿ ಕಮಾಂಡೊ ಪಡೆ ಮತ್ತು ತ್ವರಿತ ಪ್ರಹಾರ ದಳದ ಆಂತರಿಕ ಭದ್ರತಾ ವಿಭಾಗ ಸ್ಥಾಪಿಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ಮುಂಬೈಯಲ್ಲಿ ನಡೆದ ಉಗ್ರರ ದಾಳಿ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತು.

2008: ವಿಜಾಪುರ ತಾಲ್ಲೂಕಿನ ಬಗ್ಗಲೇಶ್ವರದ ವೀರಭದ್ರೇಶ್ವರ ಜಾತ್ರೆಯಲ್ಲಿ ವೃದ್ಧ ಪುರವಂತರೊಬ್ಬರು ತಮ್ಮ ಕೆನ್ನೆಯಲ್ಲಿ 2525 ಅಡಿ ಉದ್ದದ ಹಗ್ಗವನ್ನು ತೂರಿಸಿಕೊಳ್ಳುವ ಮೂಲಕ ಸಾಹಸ ಮೆರೆದ ಘಟನೆ ನಡೆಯಿತು. ಬಗ್ಗಲೇಶ್ವರದ ಲಕ್ಷ್ಮಣ ಚಿನ್ನಪ್ಪ ಬೂದಿಹಾಳ (65) ಎಂಬಾತ ಈ ಸಾಹಸಿ. ತಾಯಿಯ ಹರಕೆ ತೀರಿಸಲಿಕ್ಕಾಗಿ ಈ ಭಕ್ತಿ ಸೇವೆ ಮಾಡಿದರು. ಬಗ್ಗಲೇಶ್ವರದ ಶ್ರೀ ಪ್ರಭು ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಅಗ್ನಿ ಹಾಯುವ ಹಾಗೂ ಪುರವಂತರಿಂದ ಸಾಹಸ ಪ್ರದರ್ಶನ ಏರ್ಪಡಿಸಲಾಗಿತ್ತು. ಕಿರುಬೆರಳಿನಷ್ಟು ದಪ್ಪದ 2525 ಅಡಿ ಉದ್ದದ ನೂಲಿನಿಂದ ತಯಾರಿಸಿದ್ದ ಹಗ್ಗ ಇದಾಗಿತ್ತು. ಸೂಜಿಗೆ ದಾರ ಪೋಣಿಸುವಂತೆ ದೊಡ್ಡದಾದ ಶಸ್ತ್ರಕ್ಕೆ ಈ ಹಗ್ಗದ ತುದಿಯನ್ನು ಪೋಣಿಸಲಾಗಿತ್ತು. ಲಕ್ಷ್ಮಣ ಶಸ್ತ್ರದಿಂದ ತನ್ನ ಎಡಭಾಗದ ಕೆನ್ನೆಗೆ ಚುಚ್ಚಿಕೊಂಡು ಹಗ್ಗವನ್ನು ಕೆನ್ನೆಯಲ್ಲಿ ತೂರಿಸಿಕೊಂಡರು. ಅತ್ತ ಕಡೆ ನಾಲ್ಕಾರು ಜನರು ಹಗ್ಗವನ್ನು ಎಳೆದು ಕೊಡುತ್ತಿದ್ದರು. ಈತ ತನ್ನ ಕೆನ್ನೆಯಲ್ಲಿ ತೂರಿದ್ದ ಹಗ್ಗವನ್ನು ತನ್ನ ಎರಡೂ ಕೈಗಳಿಂದ ಹೊರ ಜಗ್ಗುತ್ತಿದ್ದ. ಹೀಗೆ ಕೆನ್ನೆಗೆ ತೂರುತ್ತಿದ್ದ ಹಗ್ಗವನ್ನು ಇನ್ನು ಕೆಲವರು ಸುತ್ತುತ್ತಿದ್ದರು. ಸುಮಾರು 20 ನಿಮಿಷಗಳವರೆಗೆ ನಡೆದ ಈ ರೋಮಾಂಚನಕಾರಿ ಸಾಹಸವನ್ನು ನೋಡಲು ಸಹಸ್ರಾರು ಜನರು ನೆರೆದಿದ್ದರು.
2008: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸಹೋದರ ಹರದನಹಳ್ಳಿ .ಡಿ. ಬಸವೇಗೌಡ (64) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

2008: ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ನೂತನ ಅಧ್ಯಕ್ಷರಾಗಿ ವಿ.ಪಿ. ಅಗರವಾಲ್ ಅವರನ್ನು ನೇಮಕ ಮಾಡಲಾಯಿತು.

2007: ದೇಶದ ಎಲ್ಲೆಡೆ ಹರಡುತ್ತಿರುವ ಉಗ್ರರ ದಾಳಿಗಳ ಹಿಂದೆ ಬಲವಾದ ಹಣಕಾಸಿನ ಜಾಲ ಇರಬಹುದು ಎಂಬ ಶಂಕೆ ಇದೀಗ ದೃಢಪಟ್ಟಿದ್ದು, `ಉಗ್ರರಿಗೆ ಷೇರುಪೇಟೆಯ ಮೂಲಕ ಹಣ ದೊರೆಯುತ್ತಿದೆ' ಎಂದು ಹಣಕಾಸು ಸಚಿವ ಪಿ. ಚಿದಂಬರಂ ರಾಜ್ಯಸಭೆಯಲ್ಲಿ ಒಪ್ಪಿಕೊಂಡರು. `ಇಂತಹ ಒಬ್ಬ ವ್ಯಕ್ತಿಯ ಚಟುವಟಿಕೆ ಸರ್ಕಾರದ ಗಮನಕ್ಕೆ ಬಂದಿದ್ದು, ಆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ' ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರು 2007ರ ಫೆಬ್ರುವರಿಯಲ್ಲಿ ಮ್ಯೂನಿಚ್ಚಿನಲ್ಲಿ ನೀಡಿದ ಹೇಳಿಕೆ ಈ ಅನುಮಾನ ಹುಟ್ಟು ಹಾಕಿತ್ತು. `ಹಲವಾರು ಉಗ್ರ ಸಂಘಟನೆಗಳು ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆಲೆ ಕಂಡುಕೊಳ್ಳುತ್ತಿವೆ. ಮುಂಬೈ ಮತ್ತು ಚೆನ್ನೈ ಷೇರುಪೇಟೆಯಲ್ಲಿ ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ವಹಿವಾಟು ನಡೆಸುತ್ತಿವೆ' ಎಂಬ ಅವರ ಹೇಳಿಕೆ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಚಿದಂಬರಂ ಅವರ ಈದಿನದ ಬಹಿರಂಗ ಹೇಳಿಕೆ ಆ ಶಂಕೆಯನ್ನು ದೃಢಪಡಿಸಿತು.

2007: ಅಕ್ರಮ ಕಟ್ಟಡಗಳ ಸಕ್ರಮದ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಇದರಿಂದಾಗಿ ಪ್ರಕರಣ ಹೈಕೋರ್ಟಿನಿಂದ ಸರ್ಕಾರದ ಅಂಗಳಕ್ಕೆ ಬಂದಿತು. `ಸಕ್ರಮ' ಯೋಜನೆ ಕುರಿತು ರಾಜ್ಯಪಾಲರು ಇನ್ನೊಮ್ಮೆ ಅವಲೋಕನ ಮಾಡುವ ಅಗತ್ಯ ಇದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

2007: ನಂದಿಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ವಿಷಾದ ವ್ಯಕ್ತಪಡಿಸಿದರು. `ಅವರದೇ ವಿಧಾನದ ಮೂಲಕ ಅವರಿಗೆ ಪಾಠ ಕಲಿಸಿದ್ದೇವೆ ಎಂಬ ಹೇಳಿಕೆಯನ್ನು ನಾನು ನೀಡಬಾರದಿತ್ತು. ಏಕೆಂದರೆ ಎಲ್ಲ ವರ್ಗಗಳಲ್ಲಿ ಶಾಂತಿ ನೆಲೆಸಬೇಕಾಗಿರುವುದು ಈಗಿನ ಅವಶ್ಯಕತೆ' ಎಂದು ಭಟ್ಟಾಚಾರ್ಯ ಹೇಳಿದರು.

2007: ಕೆಮ್ಮಿನಿಂದ ನರಳುವ ಮಕ್ಕಳಿಗೆ ಸಿರಪ್ ಕುಡಿಸುವ ಬದಲು ಹಳೇ ಜೇನುತುಪ್ಪ ಕುಡಿಸಿ. ಇದು ಈಗ ಜಾಗತಿಕವಾಗಿ ಸಂಶೋಧಕರು ಒಪ್ಪಿಕೊಂಡ ಸತ್ಯ. ಜೇನುತುಪ್ಪವನ್ನು ಹಿಂದಿನಿಂದಲೂ ಸ್ವಸ್ಥ ಆರೋಗ್ಯಕ್ಕೆ ಪೂರಕ ಎಂದು ಭಾರತದಲ್ಲಿ ಭಾವಿಸಲಾಗುತ್ತಿದೆ. ಈಗ ಅದಕ್ಕೆ ಲಂಡನ್ನಿನ ಸಂಶೋಧಕರೂ ಅಧಿಕೃತ ಮುದ್ರೆ ಒತ್ತಿದರು. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ತೀವ್ರ ಕೆಮ್ಮಿನಿಂದ ಬಳಲುತ್ತಿರುವವರು ರಾತ್ರಿ ಮಲಗುವಾಗ ದುಬಾರಿ ಸಿರಪ್ಪುಗಳನ್ನು ಕುಡಿಯುವ ಬದಲಿಗೆ ಜೇನುತುಪ್ಪವನ್ನು ಕುಡಿದರೆ ಹೆಚ್ಚು ನೆಮ್ಮದಿ ಸಿಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.

2007: ಜಪಾನಿನ ಸೇನಾ ತುಕಡಿಗಳು 1937ರ ಡಿಸೆಂಬರ್ 13ರಂದು ಚೀನಾದ ರಾಜಧಾನಿಯನ್ನು ವಶಪಡಿಸಿಕೊಂಡಾಗ ಹುತಾತ್ಮರಾದ 30 ಸಾವಿರ ಚೀನಿಯರ ಪೈಕಿ 13 ಸಾವಿರ ಜನರ ಹೆಸರುಗಳನ್ನು ಎಂಟು ಸಂಪುಟಗಳಲ್ಲಿ ಚೀನಾ ಪ್ರಕಟಿಸಿತು. ಚೀನಾದ ಮೇಲೆ ದಂಡೆತ್ತಿ ಬಂದ ಜಪಾನಿನ ಸೈನಿಕರು 30 ಸಾವಿರ ನಾಗರಿಕರನ್ನು ನಿರ್ದಯವಾಗಿ ಹತ್ಯೆಗೈದರು. ಅವರೆಲ್ಲರ ಹೆಸರುಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಹೇಳಿತು. `ಜಸ್ಟ್ ಸ್ಟಾರ್ಟ್' ಹೆಸರಿನಲ್ಲಿ ಪ್ರಕಟವಾಗಿರುವ ಎಂಟು ಸಂಪುಟಗಳಲ್ಲಿ ಮೃತಪಟ್ಟವರ ಕುರಿತು ಮಾಹಿತಿಗಳನ್ನು ಒದಗಿಸಲಾಗಿದೆ. ಇನ್ನುಳಿದ ಮಾಹಿತಿಯನ್ನು ಒಟ್ಟು 27 ಸಂಪುಟಗಳಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಸಂಪಾದಕರು ತಿಳಿಸಿದರು.

2006: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ದಲಿತರ ಸಜೀವ ಹತ್ಯಾಕಾಂಡದ ಎಲ್ಲ 32 ಆರೋಪಿಗಳನ್ನೂ ಕೋಲಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ವಿರೋಧಿ ವಿಶೇಷ ನ್ಯಾಯಾಲಯವು ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನೀಡಿದ ಕಾರಣ ಆರೋಪಿಗಳ ವಿರುದ್ಧ ದೋಷಾರೋಪ ಸಾಬೀತಾಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

2006: ನಾಡಿನ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರು ಸಂಗೀತ ಕ್ಷೇತ್ರದ ಪ್ರತಿಷ್ಠಿತ ವತ್ಸಲಾಬಾಯಿ ಭೀಮಸೇನ್ ಜೋಶಿ ಪ್ರಶಸ್ತಿಗೆ ಆಯ್ಕೆಯಾದರು. ಪುಣೆಯ ಆರ್ಯ ಸಂಗೀತ ಪ್ರಸಾರಕ ಮಂಡಳಿ ಈ ಪ್ರಶಸ್ತಿಯನ್ನು ನೀಡುತ್ತಿದೆ.

2006: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಿದ ಸಂಸ್ಥೆಗಳಿಗೆ ನೀಡುವ `ಟೆಕ್ನಾಲಜಿ ಪಯೋನೀರ್ಸ್ 2007' ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಿಧಾನವಾಗಿ ಹೆಸರು ಮಾಡುತ್ತಿರುವ ಬೆಂಗಳೂರಿನ `ಸ್ಟ್ರಾಂಡ್ ಲೈಫ್ ಸೈನ್ಸಸ್' ಮತ್ತು ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುತ್ತಿರುವ `ದೃಷ್ಟಿ' ಈ ಎರಡು ಕಂಪೆನಿಗಳು ಪಡೆದುಕೊಂಡವು. ಜಿನೀವಾದಲ್ಲಿರುವ ವಿಶ್ವ ಆರ್ಥಿಕ ವೇದಿಕೆ ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ವೇದಿಕೆ ಜಗತ್ತಿನ 47 ಕಂಪೆನಿಗಳನ್ನು ಈ ಪ್ರಶಸ್ತಿಗಾಗಿ ಗುರುತಿಸಿದೆ.

2006: ಎಂ.ಎಲ್.ವಸಂತಕುಮಾರಿ ಸ್ಮಾರಕ ಸಂಗೀತ ಸಭಾ ನೀಡುವ `ಎಂ.ಎಲ್.ವಸಂತಕುಮಾರಿ ಮೆಮೋರಿಯಲ್ ಸಂಗೀತ ಪ್ರಶಸ್ತಿ'ಗೆ ಖ್ಯಾತ ಚಲನಚಿತ್ರ ನಟಿ, ಶ್ರೀಲತಾ ನಂಬೂದರಿ ಆಯ್ಕೆಯಾದರು.

2005: ಸಮಕಾಲೀನ ಕಲಾ ಪರಂಪರಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳ ಮೂಲಕ ಹೆಸರಾಗಿದ್ದ ಕಲಾವಿದ, ಚಿಂತಕ ಹಡಪದ್ ಅವರ ನೆನಪಿಗೆ ನೀಡುವ ನಾಡೋಜ ಎಂ. ಹಡಪದ್ ಪ್ರಶಸ್ತಿ-2005ನ್ನು ಕಲಾವಿದ ಎನ್. ಕೃಷ್ಣಾಚಾರ್ ಅವರಿಗೆ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಬೆಂಗಳೂರು ಶೇಷಾದ್ರಿಪುರದ ಕೆನ್ ಕಲಾಶಾಲೆಯಲ್ಲಿ ಪ್ರದಾನ ಮಾಡಿದರು.

2005: ವೋಲ್ಕರ್ ವರದಿಯ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಕಳೆದುಕೊಂಡ ಸಚಿವ ನಟವರ್ ಸಿಂಗ್ ವಿರುದ್ಧ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ ಕ್ರೊಯೇಷಿಯಾದ ಮಾಜಿ ರಾಯಭಾರಿ ಅನಿಲ್ ಮಥೆರಾನಿ ಅವರನ್ನು ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ವಿಭಾಗ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಅಧಿಕಾರಿಗಳ ತಂಡಗಳು ವಿಚಾರಣೆಗೆ ಒಳಪಡಿಸಿದವು.

1993: ಮುಲಯಂ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1982: ಚೀನಾದಲ್ಲಿ ಸಂವಿಧಾನ ಅಳವಡಿಸಿಕೊಳ್ಳಲಾಯಿತು.

1981: ನವದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮೀನಾರಿನ ಮೆಟ್ಟಿಲು ಸಾಲಿನಲ್ಲಿ ನೂಕು ನುಗ್ಗಲು ಸಂಭವಿಸಿ 21 ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ಅಸು ನೀಗಿದರು. ಇತರ 21 ಮಂದಿ ಗಾಯಗೊಂಡರು. ವಿದ್ಯುತ್ ವೈಫಲ್ಯದಿಂದ ಉಂಟಾದ ಗಾಬರಿಯಿಂದ ಈ ನೂಕುನುಗ್ಗಲು ಸಂಭವಿಸಿತು.

1924: ವೈಸ್ ರಾಯ್ ದಿ ಅರ್ಲ್ ಅಫ್ ರೀಡಿಂಗ್ ಅವರಿಂದ ಬಾಂಬೆಯ (ಈಗಿನ ಮುಂಬೈ) `ಗೇಟ್ ವೇ ಆಫ್ ಇಂಡಿಯಾ' ಉದ್ಘಾಟನೆಗೊಂಡಿತು. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಲಾದ ಇದನ್ನು ದೊರೆ 5ನೇ ಜಾರ್ಜ್ ಮತ್ತು ರಾಣಿ ಮೇರಿ 1911ರ ಡಿಸೆಂಬರಿನಲ್ಲಿ ಬಾಂಬೆಗೆ ನೀಡಿದ ಭೇಟಿಯ ನೆನಪಿಗಾಗಿ ನಿರ್ಮಿಸಲಾಯಿತು. ಇದಕ್ಕೆ 1911ರ ಮಾಚರ್ಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಶಿಲ್ಪಿ ಜಾರ್ಜ್ ವಿಟ್ಟೆಟ್ ಅವರ ಅಂತಿಮ ವಿನ್ಯಾಸಕ್ಕೆ 1914ರ ಆಗಸ್ಟಿನಲ್ಲಿ ್ಲಮಂಜೂರಾತಿ ದೊರಕಿತ್ತು.

1919: ಭಾರತದ ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಹುಟ್ಟಿದ ದಿನ. ಅವರು 1997ರ
ಏಪ್ರಿಲ್ನಿಂದ ನವೆಂಬರವರೆಗೆ ಪ್ರಧಾನಿಯಾಗಿದ್ದರು.

1910: ಭಾರತದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟ್ರಾಮನ್ ಹುಟ್ಟಿದ ದಿನ. ರಾಜಕಾರಣಿ, ಅಧಿಕಾರಿ ಹಾಗೂ ವಕೀಲರಾಗಿದ್ದ ಅವರು 1987 ಜುಲೈ 25ರಂದು ಭಾರತದ ರಾಷ್ಟ್ರಪತಿಯಾದರು.

1888: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (1888-1980) ಹುಟ್ಟಿದ ದಿನ.

1829: ರೆಗ್ಯೂಲೇಷನ್ 17 ಜಾರಿ ಮಾಡುವ ಮೂಲಕ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿದ.

1775: ಬ್ರಿಟಿಷ್ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ (1795-1881) ಹುಟ್ಟಿದ ದಿನ. `ಫ್ರೆಂಚ್ ರೆವಲ್ಯೂಷನ್' ಕೃತಿ ಈತನಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಈ ಕೃತಿಯ ಇಡೀ ಮೊದಲ ಸಂಪುಟದ ಹಸ್ತಪ್ರತಿಯನ್ನು ಜಾನ್ ಸ್ಟುವರ್ಟ್ ಮಿಲ್ ಓದಲು ಒಯ್ದು ತನ್ನ ಭಾವೀ ಪತ್ನಿಯ ಕೈಯಲ್ಲಿ ಕೊಟ್ಟಿದ್ದ. ಆಕೆಯ ಸೇವಕಿ ಅದು ನಿರುಪಯುಕ್ತ ಹಾಳೆ ಎಂದು ಭಾವಿಸಿ ಸುಟ್ಟು ಹಾಕಿದಳು! ಹೀಗಾಗಿ ಥಾಮಸ್ ಕಾರ್ಲೈಲ್ ಕೃತಿಯ ಮೊದಲ ಇಡೀ ಸಂಪುಟವನ್ನು ಮತ್ತೆ ಬರೆಯಬೇಕಾಗಿ ಬಂದಿತ್ತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, December 30, 2009

ಇಂದಿನ ಇತಿಹಾಸ History Today ಡಿಸೆಂಬರ್ 03

ಇಂದಿನ ಇತಿಹಾಸ

ಡಿಸೆಂಬರ್ 03

ಅಮೆರಿಕಾದ ಟೋರಿ ಮರ್ಡನ್ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾದರು. ಆಫ್ರಿಕಾ ಸಮೀಪದ ಕ್ಯಾನರಿ ದ್ವೀಪಗಳಿಂದ ಹೊರಟು 81 ದಿನಗಳ ಬಳಿಕ ಆಕೆ ಫ್ರೆಂಚ್ ಕ್ಯಾರಿಬಿಯನ್ ದ್ವೀಪವಾದ ಗುವಾಡೆಲೊಪ್ ನ್ನು ತಲುಪಿದರು.

2008: ಮುಂಬೈ ದಾಳಿ ಹಿನ್ನೆಲೆಯಲ್ಲಿ ಲಷ್ಕರ್-ಎ- ತೊಯ್ಬಾ ಮುಖ್ಯಸ್ಥ ಸೇರಿದಂತೆ 20 ಪ್ರಮುಖ ಉಗ್ರರನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂಬ ಭಾರತದ ಬೇಡಿಕೆಯನ್ನು ಪಾಕಿಸ್ಥಾನ ಸಾರಾಸಗಟು ತಳ್ಳಿಹಾಕಿತು. ಈ ಮಧ್ಯೆ ಮುಂಬೈ ಘಟನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಒಂದು ದಿನದ ಭೇಟಿಗಾಗಿ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್, ಭಯೋತ್ಪಾದನೆ ನಿಗ್ರಹಿಸಲು ಪಾಕಿಸ್ಥಾನ ಪಾರದರ್ಶಕ ನೀತಿ ಅನುಸರಿಸಬೇಕು, ತುರ್ತಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟರು.
2008: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಖರ್ಚು-ವೆಚ್ಚ ತಗ್ಗಿಸುವ ದೃಷ್ಟಿಯಿಂದ ಅಮೆರಿಕದ ಪ್ರಸಿದ್ಧ ಉಕ್ಕು ಕಾರ್ಖಾನೆ ಆಲ್ಟೋಸ್ ಹಾರ್ನೋಸ್ 12000 ಹುದ್ದೆಗಳನ್ನು ಕಡಿತಗೊಳಿಸಿದೆ ಎಂದು ಪ್ರಕಟಿಸಿತು. ಜಾಗತಿಕ ಅರ್ಥ ವ್ಯವಸ್ಥೆಯ ಕುಸಿತ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಉಕ್ಕಿಗೆ ಬೇಡಿಕೆ ಕುಸಿದ ಕಾರಣ ಮೂರು ಘಟಕಗಳಲ್ಲಿ ಉಕ್ಕಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಟೀಲ್ ಕಾರ್ಪೊರೇಷನ್ ಘೋಷಿಸಿತು. ಸಂಸ್ಥೆಯ ಈ ನಿರ್ಧಾರದಿಂದ ಅಮೆರಿಕ ಸ್ಟೀಲ್ಸ್ ಕೀವ್ಯಾಟಿನ್, ಡೆಟ್ರಾಯಿಟ್ ಮತ್ತು ಸೇಂಟ್ ಲೂಯಿಸ್ ಘಟಕದಲ್ಲಿನ ಕನಿಷ್ಠ 3,500 ನೌಕರರು ಉದ್ಯೋಗ ಕಳೆದುಕೊಳ್ಳುವರು ಎಂದು ಕಂಪೆನಿ ಹೇಳಿತು.

2008: ಕ್ವಾಲಾಂಲಪುರ ನಗರಾಡಳಿತವು ಸುಮಾರು 15 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯವನ್ನು ಮಲೇಷ್ಯಾ ಸರ್ಕಾರದ ಆದೇಶದ ಮೇರೆಗೆ ಧ್ವಂಸ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಆದರೆ ದೇವಾಲಯ ಸ್ಥಳಾಂತರಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ ಹಿಂದೂ ಸಮುದಾಯದವರು, ಕಟ್ಟಡ ಕೆಡಹುವ ಕಾಯಿದೆಯಲ್ಲಿ ಏನಿದೆ ಎಂದು ವಿವರಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

2008: ಸ್ವರ್ಣ ಮಯೂರ ಸೇರಿದಂತೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಕಜಕಿಸ್ಥಾನಿ ನಿರ್ದೇಶಕ ಸರ್ಜಿ ಡ್ವೊರ್ಟ್‌ಸೆವೊಯ್ ಭಾಜನರಾದರು. ಪಣಜಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ತುಲಿಪ್' ಸಿನಿಮಾಕ್ಕೆ ಈ ಗೌರವ ಲಭಿಸಿತು. ಭರವಸೆ ನಿರ್ದೇಶಕ ಪ್ರಶಸ್ತಿ ರೂಪದಲ್ಲಿ 15 ಲಕ್ಷ ರೂಪಾಯಿ ಬಹುಮಾನ ಸಂದರೆ, ಶ್ರೇಷ್ಠ ಚಿತ್ರ ಎಂಬ ಕಾರಣಕ್ಕೆ ಸ್ವರ್ಣ ಮಯೂರ ಲಭಿಸಿತು. ಈ ಪ್ರಶಸ್ತಿಯ ಮೊತ್ತ 50 ಲಕ್ಷ ರೂ. ಆಯ್ಕೆ ಸಮಿತಿ ನೀಡುವ ವಿಶೇಷ ಪ್ರಶಸ್ತಿಯು ಶ್ರೀಲಂಕಾ ನಟಿ ಮಾಲಿನಿ ಪೌನ್ಸೆಕಾ ಅವರಿಗೆ ಸಂದಿತು. 'ಆಕಾಶ ಕುಸುಮ್' ಚಿತ್ರದ ನಟನೆಗೆ ಈ ಸಮ್ಮಾನ ಲಭಿಸಿತು.. ರಜತ ಮಯೂರ ಸ್ಮರಣಿಕೆ ಹಾಗೂ 15 ಲಕ್ಷ ರೂ. ಮೊತ್ತ ಅವರಿಗೆ ಸೇರಿತು.

2008: ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಅಂಗೀಕರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರು ನವದೆಹಲಿಯಲ್ಲಿ ಪ್ರಕಟಿಸಿದರು. ಯುಪಿಎ ಸರ್ಕಾರದಲ್ಲಿನ ಕಾಂಗ್ರೆಸ್ ಮಿತ್ರ ಪಕ್ಷಗಳ ಒತ್ತಡದ ಕಾರಣ ದೇಶ್‌ಮುಖ್ ಅವರನ್ನು ಪದಚ್ಯುತಿಗೊಳಿಸಲಾಯಿತು.

2008: ಮುಂಬೈಯಲ್ಲಿ ಉಗ್ರರ ವಿರುದಟ ಸೆಣಸಾಡಿ ವೀರಮರಣವನ್ನಪ್ಪಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಬೆಂಗ ಳೂರಿನ ಮನೆಗೆ ಭೇಟಿ ನೀಡಿದ ನಂತರ ಅವಮಾನಕರ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಒಳಗಾಗಿದ್ದ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಈದಿನ ತಿರುವನಂತಪುರದಲ್ಲಿ ಕ್ಷಮೆಯಾಚಿಸಿದರು.. ಆದರೆ ಈ ಕ್ಷಮೆಯಾಚನೆ ಹೇಳಿಕೆಯಲ್ಲೂ ಅವರು ತಮ್ಮ ಚೌಕಾಸಿತನ ಮೆರೆಯುವ ಮೂಲಕ ಮತ್ತೊಮ್ಮೆ ವಿರೋಧಿಗಳ ಕೆಂಗಣ್ಣಿಗೆ ಗುರಿಯಾದರು.

2008: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಸವಿ ನೆನಪಿಗಾಗಿ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಸಂಗೀತ ಶಿಕ್ಷಕ, ಅಂಧ ಸ್ಕೇಟಿಂಗ್‌ ಪಟು ನಾನೂ ಪಾಟೀಲ ಈದಿನ ಗದಗದಿಂದ ಕೊಪ್ಪಳದವರೆಗೆ ಯಶಸ್ವಿ ಸ್ಕೇಟಿಂಗ್ ಯಾತ್ರೆ ಕೈಗೊಂಡರು. ಗದಗ ತೋಂಟದಾರ್ಯ ಮಠದ ಆವರಣದಲ್ಲಿ ಬೆಳಗಿನ ಜಾವ ನಾನೂ ಪಾಟೀಲರ ಯಾತ್ರೆಗೆ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹಸಿರು ನಿಶಾನೆ ತೋರಿದರು. ಈದಿನ ಸಂಜೆ 4.25ಕ್ಕೆ ಕೊಪ್ಪಳ ತಲುಪಿದ ನಾನೂ ಪಾಟೀಲ ಅವರಿಗೆ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಅದೂಟರಿಯ ಸ್ವಾಗತ ದೊರೆಯಿತು. ಯಲಬುರ್ಗಾ ತಾಲ್ಲೂಕಿನ ತಳಕಲ್‌ನಲ್ಲಿ ಶಿಕ್ಷಕರಾಗಿರುವ ಪಾಟೀಲರಿಗೆ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಸ್ವಾಗತಿಸಿ ಹುರಿದುಂಬಿಸಿದರು. 1999ರಿಂದ ಸ್ಕೇಟಿಂಗ್ ಗೀಳು ಅಂಟಿಸಿಕೊಂಡ ನಾನೂ ಪಾಟೀಲ್, 2000ನೇ ಇಸ್ವಿಯ ಜನವರಿಯಲ್ಲಿ ಸ್ಕೇಟಿಂಗ್ ಗುರು ಹುಬ್ಬಳ್ಳಿಯ ಈರಣ್ಣ ಕಾಡಪ್ಪನವರ ಮಾರ್ಗದರ್ಶನದಲ್ಲಿ ಕಾರವಾರದವರೆಗೆ ಹೆದ್ದಾರಿಯಲ್ಲಿ ಸ್ಕೇಟಿಂಗ್ ಯಾನ ಮಾಡಿದ ದಾಖಲೆ ಸ್ಥಾಪಿಸಿದ್ದರು. ಕೆಲದಿನಗಳ ಹಿಂದೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಕನ್ನಡ ಧ್ವಜದ ಸಮೇತ ಮತ್ತೊಂದು ಯಾತ್ರೆ ಕೈಗೊಂಡಿದ್ದರು.

2008: 94 ವರ್ಷದ ವಯೋವೃದ್ಧ ಸ್ವಾಮೀಜಿಗೆ ಶಸ್ತ್ರಚಿಕಿತ್ಸೆ ನಡೆಸಿ ಮುರಿದ ಮೂಳೆ ಜೋಡಿಸುವಲ್ಲಿ ಹುಬ್ಬಳ್ಳಿ ನಗರದ ಲೈಫ್‌ಲೈನ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾದರು. ಶಿವಮೊಗ್ಗ ಸಮೀಪದ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಪೀಠಾಧಿಪತಿ ರಘುತೀರ್ಥ ಸ್ವಾಮೀಜಿ ಕಾಲು ಜಾರಿ ಬಿದ್ದು ಬಲತೊಡೆಯ ಮೂಳೆ ಮುರಿದಿತ್ತು. ಇವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಕಲಮದಾನಿ, ಡಾ.ಹರೀಶ ಕನಕಾಪೂರ, ಡಾ.ನಾಗರಾಜ, ಡಾ.ರಾಜೇಶ, ಡಾ. ಶ್ರೀನಿವಾಸ ದೇಶಪಾಂಡೆ ಮೂಳೆ ಜೋಡಿಸುವ ಅಪೂರ್ವ ಸಾಧನೆ ಮಾಡಿದರು.

2007: ಇಂಗ್ಲೆಂಡ್ ತಂಡದ ವಿರುದ್ಧ ಕ್ಯಾಂಡಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ ಪಾಲ್ ಕಾಲಿಂಗ್ ವುಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 709ನೇ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಹಿರಿಮೆಯೊಂದಿಗೆ 'ವಿಶ್ವದಾಖಲೆ' ನಿರ್ಮಿಸಿದರು. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೆಸರಿನಲ್ಲಿ ಇದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. 35ರ ಹರೆಯದ ಮುರಳಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸಿನ 89ನೇ ಓವರಿನ (ದಿನದ 10ನೇ ಓವರ್) ನಾಲ್ಕನೇ ಎಸೆತದಲ್ಲಿ ತಮ್ಮ ಫೇವರಿಟ್ ದೂಸ್ರಾ ಎಸೆತ ಪ್ರಯೋಗಿಸಿ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಪಾಲ್ ಕಾಲಿಂಗ್ ವುಡ್ ಅವರನ್ನು ಬೌಲ್ಡ್ ಮಾಡಿ ಚರಿತ್ರೆಯೆಡೆಗೆ ಹೆಜ್ಜೆಯಿಟ್ಟರು. ವಿಶ್ವದಾಖಲೆ ಸ್ಥಾಪಿಸಿದ ಬಳಿಕ ಮ್ಯಾಥ್ಯೂ ಹೊಗಾರ್ಡ್ ಅವರನ್ನು ಔಟ್ ಮಾಡಿದ ಮುರಳಿ ಒಟ್ಟು ವಿಕೆಟ್ಟುಗಳ ಸಂಖ್ಯೆಯನ್ನು 710ಕ್ಕೆ ಹೆಚ್ಚಿಸಿದರು. ಲಂಕಾ ಬೌಲರಿಗೆ ಇದು 116ನೇ ಟೆಸ್ಟ್ ಪಂದ್ಯ. ಶೇನ್ ವಾರ್ನ್ ಅವರು 709 ವಿಕೆಟ್ ಪಡೆಯಲು 145 ಟೆಸ್ಟುಗಳನ್ನು ಆಡಿದ್ದರು. ಇಂಗ್ಲೆಂಡಿನ ಮೊದಲ ಇನಿಂಗ್ಸಿನಲ್ಲಿ 55 ರನ್ನುಗಳಿಗೆ 6 ವಿಕೆಟ್ ಪಡೆದ ಮುರಳಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು 61ನೇ ಬಾರಿ ಮಾಡಿದರು. ಅದೇ ರೀತಿ ಟೆಸ್ಟ್ ಪಂದ್ಯದಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಅವರು 20 ಬಾರಿ ಮಾಡಿದರು. ಕಳೆದ 15 ವರ್ಷಗಳಿಂದ ಬ್ಯಾಟ್ಸ್ ಮನ್ನರ ನಿದ್ದೆಗೆಡಿಸುತ್ತಿರುವ ಮುರಳಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿ. 2004ರಲ್ಲಿ ಮೊದಲ ಬಾರಿ ವೆಸ್ಟ್ ಇಂಡೀಸಿನ ವೇಗದ ಬೌಲರ್ ಕರ್ಟ್ನಿ ವಾಲ್ಷ್ ಅವರನ್ನು ಹಿಂದಿಕ್ಕಿ ವಿಶ್ವದ ಅತಿಹೆಚ್ಚು ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾಗಿದ್ದರು. ಆ ಬಳಿಕ ವಾರ್ನ್, ಮುರಳಿಯನ್ನು ಹಿಂದಿಕ್ಕಿ ಮುನ್ನಡೆದಿದ್ದರು. ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಹೊಂದಿರುವ ಕಾರಣ ಮುರಳಿಯ ದಾಖಲೆಯನ್ನು ಮುರಿಯಲು ಇನ್ನು ಯಾರಿಗೂ ಸುಲಭದಲ್ಲಿ ಸಾಧ್ಯವಿಲ್ಲ. ಚೆಂಡನ್ನು ಮಾರಕ ರೀತಿಯಲ್ಲಿ ತಿರುಗುವಂತೆ ಮಾಡುವ ತಮ್ಮ ಸಾಮರ್ಥ್ಯದಿಂದ ಸ್ಪಿನ್ ಬೌಲಿಂಗಿಗೆ ಹೊಸ ರೂಪವನ್ನೇ ನೀಡಿದ ಮುರಳಿ ಈ ಹಿಂದೆ `ಚಕ್ಕಿಂಗ್' ಆರೋಪಕ್ಕೂ ಗುರಿಯಾಗಿದ್ದರು. 1995ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬೌಲಿಂಗ್ ವೇಳೆ ಚೆಂಡನ್ನು ಥ್ರೋ ಮಾಡುತ್ತಿದ್ದಾರೆ ಎಂದು ಅಂಪೈರ್ ಡೆರೆಲ್ ಹೇರ್ ಏಳು ಬಾರಿ ಮುರಳಿಗೆ ನೋಬಾಲ್ ನೀಡಿದ್ದರು. ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜಾನ್ ಹೊವಾರ್ಡ್ ಮುರಳಿಯನ್ನು `ಚಕ್ಕರ್' ಎಂದೂ ಕರೆದಿದ್ದರು. ಆದರೆ ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಮುರಳಿ ತಮ್ಮ ವಿಕೆಟ್ `ಬೇಟೆ'ಯ ಕಾಯಕ ಮುಂದುವರೆಸಿದ್ದರು.

2007: ತೈವಾನಿನ `ದಿ ವಾಲ್' ಚಿತ್ರಕ್ಕೆ ಪಣಜಿಯಲ್ಲಿ ನಡೆದ 38ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ವರ್ಣ ಮಯೂರ ಪ್ರಶಸ್ತಿ ಲಭಿಸಿತು. ಪಣಜಿಯ ಕಲಾ ಅಕಾಡೆಮಿ ಸಭಾಂಗಣದಲ್ಲಿ ಜರುಗಿದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಹಂಗೇರಿಯ ಮಾರ್ತಾ ಮಿಜಾರೋಸ್ ಅಧ್ಯಕ್ಷತೆಯ ತೀರ್ಪುಗಾರರ ಮಂಡಳಿ (ಜ್ಯೂರಿ) ಪ್ರಶಸ್ತಿ ವಿಜೇತ ಚಿತ್ರಗಳ ಹೆಸರು ಪ್ರಕಟಿಸಿತು. ಹಿಂದಿನ ವರ್ಷ ಚೀನಾದ `ದಿ ಓಲ್ಡ್ ಬಾರ್ಬರ್' ಚಿತ್ರ ಸ್ವರ್ಣ ಮಯೂರ ಪಡೆದಿತ್ತು.

2007: ಬೆಂಗಳೂರಿನ `ನಮ್ಮ ಮೆಟ್ರೊ' ಯೋಜನೆಗಾಗಿ ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸದ್ದಿಲ್ಲದೆ ಆರಂಭಿಸಿತು. ಇಂದಿರಾನಗರದ 100 ಅಡಿ ರಸ್ತೆಯ ನಿವಾಸಿ ನಿವೃತ್ತ ಕಂದಾಯ ಆಯುಕ್ತ ಎಸ್. ವೆಂಕಟೇಶ್ ಅವರು ಪರಿಹಾರ ಪಡೆದ ಮೊದಲ ಭೂಮಾಲೀಕರೆನಿಸಿದರು. ಅವರಿಗೆ ಕೆಐಎಡಿಬಿ 2.69 ಕೋಟಿ ರೂಪಾಯಿ ಚೆಕ್ ನೀಡಿತು. ವೆಂಕಟೇಶ್ ಅವರ 2009 ಚದರ ಅಡಿ ಜಾಗವನ್ನು ಮೆಟ್ರೊ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

2007: ಅಖಿಲ ಭಾರತ ವೈದ್ಯಕೀಯ ಸಂಸ್ಥೆಯ (ಏಮ್ಸ್) ನಿರ್ದೇಶಕ ಪಿ. ವೇಣುಗೋಪಾಲ್ ಅವರನ್ನು ಆ ಸ್ಥಾನದಿಂದ ಕಿತ್ತೊಗೆದ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತು. ನ್ಯಾಯಮೂರ್ತಿ ತರುಣ್ ಚಟರ್ಜಿ ಮತ್ತು ದಲ್ವೀರ್ ಭಂಡಾರಿ ಅವರಿದ್ದ ಪೀಠವು `ವೇಣುಗೋಪಾಲ್ ಅವರಂತಹ ಗಣ್ಯ ವ್ಯಕ್ತಿಯನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುವ ಅಗತ್ಯವಿತ್ತೇ' ಎಂದೂ ಪ್ರಶ್ನಿಸಿತು. `ಮುಂದಿನ ಆರು ತಿಂಗಳ ಒಳಗೆ ವೇಣುಗೋಪಾಲ್ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿತ್ತು. ವಾಸ್ತವ ಹೀಗಿರುವಾಗ ಅವರನ್ನು ತತ್ ಕ್ಷಣವೇ ಆ ಹುದ್ದೆಯಿಂದ ಕಿತ್ತೊಗೆಯಲಿಕ್ಕಾಗಿಯೇ `ಏಮ್ಸ್' ಮಸೂದೆಗೇ ತಿದ್ದುಪಡಿ ತಂದದ್ದು ಎಷ್ಟು ಸರಿ ಎಂದೂ ಪೀಠವು ಪ್ರಶ್ನಿಸಿತು.

2007: ಲೇಬರ್ ಪಕ್ಷದ ನಾಯಕ ಕೆವಿನ್ ರುಡ್ ಆಸ್ಟ್ರೇಲಿಯಾದ 26ನೇ ಪ್ರಧಾನಿಯಾಗಿ ಮೆಲ್ಬೋರ್ನಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಂಬತ್ತು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ, ಜಾನ್ ಹೊವರ್ಡ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವನ್ನು ಸಂಪೂರ್ಣವಾಗಿ ನೆಲ ಕಚ್ಚಿಸಿತ್ತು. ಹನ್ನೊಂದುವರೆ ವರ್ಷಗಳ ನಂತರ ಲೇಬರ್ ಪಕ್ಷ ಆಸ್ಟ್ರೇಲಿಯಾದಲ್ಲಿ ಅಧಿಕಾರಕ್ಕೆ ಬಂದಿತು. ಕ್ಯಾನ್ ಬೆರಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗವರ್ನರ್ ಜನರಲ್ ಮೈಕೆಲ್ ಜೆಫ್ರಿ ಅವರ ಸಮ್ಮುಖದಲ್ಲಿ ಕೆವಿನ್ ರುಡ್ ಹಾಗೂ ಉಪ ಪ್ರಧಾನಿ ಜುಲಿಯಾ ಗಿಲಾರ್ಡ್ ಪ್ರಮಾಣ ವಚನ ಸ್ವೀಕರಿಸಿದರು.

2007: ಚುನಾವಣಾ ಅಧಿಕಾರಿಯೂ ಆದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಮರ್ ಉಝ್ ಜಮಾನ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಾಮಪತ್ರವನ್ನು ತಿರಸ್ಕರಿಸಿದರು. 2000ನೇ ಇಸ್ವಿಯ ಹೈಜಾಕ್ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದ್ದು ಷರೀಫ್ ನಾಮಪತ್ರ ತಿರಸ್ಕರಿಸಲು ಕಾರಣ ಎಂದು ಹೇಳಲಾಯಿತು. ಹಿಂದಿನ ವಾರ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕಾರಣ ನೀಡಿ ನವಾಜ್ ಷರೀಫ್ ಸಹೋದರನ ನಾಮಪತ್ರವನ್ನೂ ತಿರಸ್ಕರಿಸಲಾಗಿತ್ತು.

2007: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ `ಯುನೈಟೆಡ್ ರಷ್ಯಾ ಪಾರ್ಟಿ' ಸಂಸದೀಯ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿತು. ರಷ್ಯಾ ರಾಜಕೀಯದಲ್ಲಿ `ಕಿಂಗ್ ಮೇಕರ್' ಎಂಬ ಬಿರುದು ಪಡೆದ ಪುಟಿನ್ ಈ ಸ್ಥಾನ ಉಳಿಸಿಕೊಂಡರು. ಚುನಾವಣೆಯಲ್ಲಿ ಯುನೈಟೆಡ್ ರಷ್ಯಾ ಪಾರ್ಟಿ, ಸಂಸತ್ತಿನ ಕೆಳಮನೆ (ಡ್ಯೂಮಾ) 450 ಸ್ಥಾನಗಳಲ್ಲಿ 313 ಸ್ಥಾನಗಳನ್ನು ಗೆದ್ದು, ಶೇ 64.1ರಷ್ಟು ಮತಗಳನ್ನು ಪಡೆಯಿತು. ಕಮ್ಯುನಿಸ್ಟ್ ಪಾರ್ಟಿ ಕೇವಲ ಶೇ 11.6ರಷ್ಟು ಮತಗಳನ್ನು ಪಡೆದು, ಅರ್ಧದಷ್ಟು ಸ್ಥಾನಗಳಲ್ಲಿ ಸೋಲನ್ನಪ್ಪಿತು.

2007: ತಾತ್ಕಾಲಿಕ ಸಂಚಾರಿ ಪೀಠ ಸ್ಥಾಪನೆಗೆ ಧಾರವಾಡದ ಕಲಾಭವನದ ಸಮೀಪ ಇರುವ ಜಿಲ್ಲಾ ನ್ಯಾಯಾಲಯವು ಪ್ರಶಸ್ತವಾಗಿದೆ ಎಂದು `ತಾತ್ಕಾಲಿಕ ಪೀಠ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳ ಸಮಿತಿ'ಯು ಮುಖ್ಯ ನ್ಯಾಯಮೂರ್ತಿ ಅವರಿಗೆ ವರದಿ ಸಲ್ಲಿಸಿತು. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಜನತೆಗೆ `ಮರೀಚಿಕೆ'ಯಾಗಿದ್ದ ತಾತ್ಕಾಲಿಕ ಸಂಚಾರಿ ಪೀಠದ ಕನಸು ಬಹುತೇಕ ನನಸಾದಂತಾಯಿತು.

2006: ದೋಹಾ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಮಹಿಳಾ ಆಥ್ಲೀಟ್ ಸೀಮಾ ಅಂಟಿಲ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಾ ಕಣದಲ್ಲಿ ಕಾಣಿಸಿಕೊಳ್ಳುವ ಮೊದಲೇ ಉದ್ದೀಪನ ಮದ್ದು ತೆಗೆದುಕೊಂಡದ್ದು ಸಾಬೀತಾಗಿದ್ದು, ಆಕೆಯನ್ನು ಕೂಟದಿಂದಲೇ ವಾಪಸ್ ಕಳುಹಿಸಲು ತಂಡದ ಆಡಳಿತ ತೀರ್ಮಾನಿಸಿತು.

2006: ಭಾರತದ ಖ್ಯಾತ ಚಿತ್ರಕಾರ ರಾಜಾ ರವಿವರ್ಮ ನಿಧನದ ಶತಮಾನದ ಬಳಿಕ ಅವರ ಅಪರೂಪದ ಚಿತ್ರಪಟ (ಸ್ಕೆಚ್ ಬುಕ್) ತಿರುವನಂತಪುರದಲ್ಲಿ ಪತ್ತೆಯಾಯಿತು. ಹಿಂದೂ ದೇವಾನುದೇವತೆಗಳು ಹಾಗೂ ಪೌರಾಣಿಕ ಪ್ರಸಂಗಗಳ ಬಗ್ಗೆ ರವಿವರ್ಮ ಬರೆದ ಚಿತ್ರಗಳು ಇಂದಿಗೂ ಅತ್ಯುತ್ತಮ ಎಂಬ ಹೆಗ್ಗಳಿಕೆಯನ್ನು ಹೊಂದಿವೆ.

2005: ಅಂತಾರಾಷ್ಟ್ರೀಯ ಖ್ಯಾತಿಯ ಪೊಗೊ ಟಿವಿ ಚಾನೆಲಿನ ಪ್ರತಿಷ್ಠಿತ `ಅಮೇಜಿಂಗ್ ಕಿಡ್ಸ್ ಪ್ರಶಸ್ತಿ'ಗೆ ಕನ್ನಡಿಗ ಬಾಲಕ ಶಶಾಂಕ ಎಂ. ಕಾಶಿ ಆಯ್ಕೆಯಾದ. ಬೆಂಗಳೂರಿನ ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲೆಯ 4ನೇ ತರಗತಿ ವಿದ್ಯಾಥರ್ಿ ಶಶಾಂಕ ಮೂಲತಃ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದವನು. ಪೊಗೊ ಚಾನೆಲ್ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಪೈಕಿ ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಿ ಶಶಾಂಕ್ ಈ ಪ್ರಶಸ್ತಿಯನ್ನು ಗೆದ್ದುಕೊಂಡ.

2005: ಹಿರಿಯ ರಾಜಕಾರಣಿ, ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ವಿ. ಕೃಷ್ಣರಾವ್ (82) ಬೆಂಗಳೂರಿನಲ್ಲಿ ನಿಧನರಾದರು. 1972ರಲ್ಲಿ ಗೌರಿ ಬಿದನೂರು ಕ್ಷೇತ್ರದಿಂದ ವಿಧಾನಸಭೆಗೆ ಗೆದ್ದ ಅವರು ನಂತರ ಲೋಕಸಭೆಗೆ 1984-1996ರ ನಡುವಣ ಅವಧಿಯಲ್ಲಿ ಸತತ ಮೂರುಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹರಾವ್ ಅವರ ನಿಕಟವರ್ತಿ. 1992-95ರ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರ್. ಎಲ್. ಜಾಲಪ್ಪ ಅವರನ್ನು ಎರಡು ಬಾರಿ ಪರಾಭವಗೊಳಿಸಿದ್ದರು. 1941-1976ರವರೆಗಿನ ಅವಧಿಯಲ್ಲಿ 35 ವರ್ಷ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷರಾಗಿ, ಬಳಿಕ ಎಪಿಎಂಸಿ ಅಧ್ಯಕ್ಷರಾಗಿ, ಭೂ ಬ್ಯಾಂಕ್ ನಿರ್ದೇಶಕರಾಗಿ, ಗೌರಿಬಿದನೂರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರು ಏಷ್ಯಾ ಕ್ರಿಕೆಟ್ ಮಂಡಳಿ (ಎಸಿಸಿ) ಹಾಗೂ ಏಷ್ಯಾ ಕ್ರಿಕೆಟ್ ಕಾರ್ಪೊರೇಷನ್ನಿಗೆ (ಎಎಪಿಸಿ) ರಾಜೀನಾಮೆ ನೀಡಿದರು.

2005: ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರು ವಿಜಯ ಕರ್ನಾಟಕ ಪತ್ರಿಕೆಯ ಅತಿಥಿ ಸಂಪಾದಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗ ಒಂದಕ್ಕೆ ನಾಂದಿ ಹಾಡಿದರು. ಬ್ರಿಟಿಷ್ ಪತ್ರಿಕೋದ್ಯಮದಲ್ಲಿ ಇಂತಹ ಪ್ರಯೋಗ ನೂರಾರು ವರ್ಷಗಳಿಂದ ಇದ್ದರೂ ಭಾರತದಲ್ಲಿ ಜಾರಿಗೆ ಬಂದದ್ದು ಕಡಿಮೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಸಾನಿಯಾ ಮಿರ್ಜಾ, ಕಾದಂಬರಿಕಾರ ವಿಕ್ರಂ ಸೇಠ್. ಇನ್ಫೋಸಿಸ್ಸಿನ ನಾರಾಯಣಮೂರ್ತಿ ಅವರನ್ನು ಅತಿಥಿ ಸಂಪಾದಕರನ್ನಾಗಿ ಕರೆಸಿ ಅವರಿಂದ ಆಯಾ ದಿನದ ಸಂಚಿಕೆಗಳನ್ನು ಮಾಡಿಸಿತ್ತು. ಎಕನಾಮಿಕ್ ಟೈಮ್ಸ್ ನಂತರ ಹಣಕಾಸು ಸಚಿವ ಚಿದಂಬರಂ ಅವರನ್ನು ಅತಿಥಿ ಸಂಪಾದಕರನ್ನಾಗಿ ಆಹ್ವಾನಿಸಿತ್ತು.

1999: ಅಮೆರಿಕಾದ ಟೋರಿ ಮರ್ಡನ್ ಅಟ್ಲಾಂಟಿಕ್ ಸಾಗರವನ್ನು ಏಕಾಂಗಿಯಾಗಿ ದಾಟಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾದರು. ಆಫ್ರಿಕಾ ಸಮೀಪದ ಕ್ಯಾನರಿ ದ್ವೀಪಗಳಿಂದ ಹೊರಟು 81 ದಿನಗಳ ಬಳಿಕ ಆಕೆ ಫ್ರೆಂಚ್ ಕ್ಯಾರಿಬಿಯನ್ ದ್ವೀಪವಾದ ಗುವಾಡೆಲೊಪ್ ನ್ನು ತಲುಪಿದರು.

1984: ಈದಿನ ಭಾರತದ ಪಾಲಿಗೆ ಹೃದಯ ವಿದ್ರಾವಕ ದುರಂತದ ದಿನ. ಭೋಪಾಲಿನ ಯೂನಿಯನ್ ಕಾರ್ಬೈಡ್ ಕೀಟನಾಶಕ ತಯಾರಿ ಕಾರ್ಖಾನೆಯ ಘಟಕದಿಂದ ಮಿಥೈಲ್- ಐಸೊಸಯನೇಟ್ ವಿಷಾನಿಲ ಸೋರಿಕೆಯಾಯಿತು. ಸೋರಿಕೆಯಾದ 40 ಟನ್ನಿಗೂ ಹೆಚ್ಚಿನ ವಿಷಾನಿಲ 40 ಚದರ ಕಿ.ಮೀ.ವರೆಗೆ ವ್ಯಾಪಿಸಿತು. 4000 ಮಂದಿ ಅದನ್ನು ಸೇವಿಸಿ ತತ್ ಕ್ಷಣವೇ ಅಸು ನೀಗಿದರು. ಇತರ 5 ಲಕ್ಷ ಮಂದಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ ನರಳಿದರು. 1989ರಲ್ಲಿ ಯೂನಿಯನ್ ಕಾರ್ಬೈಡ್ 47ಕೋಟಿ ಡಾಲರುಗಳನ್ನು ಭಾರತ ಸರ್ಕಾರಕ್ಕೆ ಪರಿಹಾರ ರೂಪದಲ್ಲಿ ನೀಡುವುದಾಗಿ ಒಪ್ಪಿತು. ಇದಕ್ಕೆ ಪ್ರತಿಯಾಗಿ ಸರ್ಕಾರವು ಕಂಪೆನಿ ಹಾಗೂ ಅದರ ಅಧ್ಯಕ್ಷರ ವಿರುದ್ಧ ಹೂಡಲಾಗಿದ್ದ ಎಲ್ಲ ಕ್ರಿಮಿನಲ್ ಖಟ್ಲೆಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿತು.

1967: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ಡಾ. ಕ್ರಿಸ್ಟಿಯನ್ ಬರ್ನಾರ್ಡ್ ನೇತೃತ್ವದಲ್ಲಿ ಸರ್ಜನ್ ಗಳು ಮೊತ್ತ ಮೊದಲ ಮಾನವ ಹೃದಯ ಕಸಿ ಮಾಡಿದರು. ಹೃದಯ ಕಸಿ ಮಾಡಿಸಿಕೊಂಡ ಲೂಯಿ ವಾಶ್ಖನ್ ಸ್ಕಿ ಹೊಸ ಹೃದಯದೊಂದಿಗೆ 18 ದಿನಗಳ ಕಾಲ ಬದುಕಿದರು. ಅಪಘಾತದಲ್ಲಿ ಮೃತರಾದ ಡೆನಿಸ್ ದರ್ವಾಲಿ ಎಂಬವರ ಹೃದಯವನ್ನು ಈ ಕಸಿಗಾಗಿ ಪಡೆದುಕೊಳ್ಳಲಾಗಿತ್ತು.

1936: ಸಾಹಿತಿ ಲೀಲಾವತಿ ತೋರಣಗಟ್ಟಿ ಜನನ.

1934: ಸಾಹಿತಿ ಸೋಮಶೇಖರರಾವ್ ಎಚ್. ಜಿ. ಜನನ.

1934: ನಟ, ನಾಟಕಕಾರ, ಕಾದಂಬರಿಕಾರ ನವರತ್ನರಾಂ (3-12-1934ರಿಂದ 17-101991) ಅವರು ನವರತ್ನ ರಾಮರಾವ್ ಮತ್ತು ಪುಟ್ಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1926: ಅಗಾಥಾ ಕ್ರಿಸ್ಟೀ ತಮ್ಮ ಬೆರ್ಕ್ಷೈರಿನ ನಿವಾಸದಿಂದ ನಾಪತ್ತೆಯಾದರು. 10 ದಿನಗಳ ಬಳಿಕ ಯಾರ್ಕ್ ಷೈರಿನ ಆರೋಗ್ಯ ಕೇಂದ್ರವೊಂದರಲ್ಲಿ ಬೇರೆ ಹೆಸರಿನಲ್ಲಿ ಆಕೆ ಪತ್ತೆಯಾದರು. ತಾನು ಮರೆವಿಗೆ ಒಳಗಾದುದಾಗಿ ಆಕೆ ಹೇಳಿಕೊಂಡರು. ಆದರೆ ತನ್ನ ಪತಿ ಬೇರೊಬ್ಬ ಮಹಿಳೆಯ ಮನೆಗೆ ಆಗಾಗ ಹೋಗುತ್ತಿದ್ದುದನ್ನು ಗಮನಿಸಿ ಪ್ರತೀಕಾರ ತೀರಿಸಿಕೊಳ್ಳಲು ಆಕೆ ನಾಪತ್ತೆಯಾದಳು ಎಂದು ಶಂಕಿಸಲಾಯಿತು. ಈ ಘಟನೆಗೆ ಸಮರ್ಪಕ ವಿವರಣೆ ಲಭಿಸಲೇ ಇಲ್ಲ.

1923: ಸಾಹಿತಿ ವಿ.ಜಿ. ಭಟ್ಟ ಜನನ.

1889: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ಖುದೀರಾಮ್ ಬೋಸ್ (1889-1908) ಅವರು 1889ರ ಈ ದಿನ ಜನಿಸಿದರು. ಮ್ಯಾಜಿಸ್ಟ್ರೇಟ್ ಕಿಂಗ್ಸ್ ಫೋರ್ಡ್ ಮೇಲೆ ಬಾಂಬ್ ದಾಳಿ ನಡೆಸಿದ್ದಕ್ಕಾಗಿ ಬೋಸ್ ಅವರನ್ನು 1908ರಲ್ಲಿ ಗಲ್ಲಿಗೇರಿಸಲಾಯಿತು.

1884: ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ (1884-1963) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಡಿಸೆಂಬರ್ 02

ಇಂದಿನ ಇತಿಹಾಸ

ಡಿಸೆಂಬರ್ 02
ಸಿತಾರ್ ರತ್ನ ರಹಿಮತ್ ಖಾನ್ ಅವರ ಮೊಮ್ಮಗ ಸಿತಾರ್ ವಾದಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಬಾಲೇಖಾನ್ (65) (28-8-1942ರಿಂದ 2-12-2007) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದೇಶ, ವಿದೇಶಗಳಲ್ಲಿ ಸಿತಾರ್ ವಾದನ ಕಾರ್ಯಕ್ರಮ ನೀಡಿ ಶ್ರೋತೃಗಳ ಮನ ಗೆದ್ದಿದ್ದ ಬಾಲೇಖಾನ್ ಕರ್ನಾಟಕ ಸಂಗೀತ ಅಕಾಡೆಮಿಯ ಸದಸ್ಯರಾಗಿ ಮೂರು ಅವಧಿ ಕಾರ್ಯ ನಿರ್ವಹಿಸಿದ್ದರು.
2008: ಮುಂಬೈಯ ನಾರಿಮನ್ ಹೌಸಿನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೃತರಾದ ರಬ್ಬಿ ಗ್ಯಾವ್ರಿಯಲ್ ಹೋಲ್ಜರ್ಗ್, ಅವರ ಪತ್ನಿ ರಿವ್ಕಾ ಸೇರಿದಂತೆ ಆರು ಯಹೂದಿಗಳ ಅಂತ್ಯಸಂಸ್ಕಾರ ಇಸ್ರೇಲ್‌ನಲ್ಲಿ ನಡೆಯಿತು. ಟೆಲ್ ಅವೀವ್ ಸಮೀಪದ ಪ್ರದೇಶದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.

2008: ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬದ ವಿರುದ್ಧ ಮಾಡಿದ ಟೀಕೆಗೆ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದ ಅವರು ಹೈದರಾಬಾದಿಗೆ ತೆರಳುವ ಮುನ್ನ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 'ಆ ಮನೆ ಮೇಜರ್ ಸಂದೀಪ್ ಅವರದಲ್ಲದಿದ್ದಿದ್ದರೆ ನಾಯಿಯೂ ಆ ಮನೆಗೆ ಹೋಗುತ್ತಿರಲಿಲ್ಲ' ಎಂಬುದಾಗಿ ನೀಡಿದ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾವು ಕ್ಷಮೆ ಕೋರುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ 'ನೋ ನೋ' ಎಂದಷ್ಟೇ ಅಚ್ಯುತಾನಂದನ್ ಉತ್ತರಿಸಿದರು.

2007: ಸಿತಾರ್ ರತ್ನ ರಹಿಮತ್ ಖಾನ್ ಅವರ ಮೊಮ್ಮಗ ಸಿತಾರ್ ವಾದಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಸ್ತಾದ್ ಬಾಲೇಖಾನ್ (65) (28-8-1942ರಿಂದ 2-12-2007) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದೇಶ, ವಿದೇಶಗಳಲ್ಲಿ ಸಿತಾರ್ ವಾದನ ಕಾರ್ಯಕ್ರಮ ನೀಡಿ ಶ್ರೋತೃಗಳ ಮನ ಗೆದ್ದಿದ್ದ ಬಾಲೇಖಾನ್ ಕರ್ನಾಟಕ ಸಂಗೀತ ಅಕಾಡೆಮಿಯ ಸದಸ್ಯರಾಗಿ ಮೂರು ಅವಧಿ ಕಾರ್ಯ ನಿರ್ವಹಿಸಿದ್ದರು. ದಕ್ಷಿಣ ಭಾರತದಲ್ಲಿ ಸಿತಾರ್ ಜನಪ್ರಿಯ ಗೊಳಿಸುವಲ್ಲಿ ಬಾಲೇಖಾನ್ ಅವರ ಕೊಡುಗೆ ಅಪಾರ. ತಮ್ಮ ಅಜ್ಜ ಸಿತಾರರತ್ನ ರಹಿಮತ್ ಖಾನ್ ಅವರಿಂದ ಎರಡು ವಿಶೇಷತೆಗಳನ್ನು ಬಾಲೇಖಾನ್ ಕರಗತ ಮಾಡಿಕೊಂಡಿದ್ದರು. ಏಕಕಾಲಕ್ಕೆ ಎರಡೂ ಕೈಗಳ ಚಲನೆ ಒಂದಾದರೆ, ಮೊಹರಾ ಶೈಲಿ ಇನ್ನೊಂದು. ಮೊಹರಾ ಎಂದರೆ 16 ಮಾತ್ರೆಗಳ ತೀನತಾಲದ ಕೊನೆಗೆ ಎರಡೂವರೆ ಮಾತ್ರೆಗಳಲ್ಲಿ ಹೆಣೆದ ಸುಮಧುರ ಸ್ವರಗುಚ್ಛ. ಇದರಿಂದ ಕಲಾ ರಸಿಕರ ಮನ ತಣಿಯುತ್ತಿತ್ತು. ಸಂಗೀತ ಪರಂಪರೆಯ ಮನೆತನದಲ್ಲಿ 1942ರ ಆಗಸ್ಟ್ 28 ರಂದು ಜನಿಸಿದ ಬಾಲೇಖಾನ್, ಶಾಲೆ ಸೇರುವುದಕ್ಕಿಂತ ಮುಂಚೆಯೆ ಸಂಗೀತ ಕಲಿಯಲಾರಂಭಿಸಿದ್ದರು. ತಂದೆ ಪ್ರೊ. ಎ.ಕರೀಂ ಖಾನ್ ಅವರು ತಮ್ಮ ಒಂಬತ್ತು ಮಕ್ಕಳಲ್ಲಿ ಒಬ್ಬರನ್ನಾದರೂ ಗಾಯಕನನ್ನಾಗಿ ರೂಪಿಸುವ ಬಯಕೆಯಿಂದ ಬಾಲೇಖಾನ್ ಅವರಿಗೆ ಗಾಯನ ಕಲಿಸಲು ಮುಂದಾಗಿ ಒಂದು ದಶಕ ಕಾಲ ಗಾಯನ ಪಾಠ ಮಾಡಿದರು. ಬಾಲೇಖಾನರ ಮೊದಲ ಹೆಸರು ಬಾಬುಖಾನ್. ಇವರನ್ನು ಅಜ್ಜ ರಹಿಮತ್ ಖಾನ್ `ಬಾಲೆ' (ಪುಟ್ಟ) ಎಂದು ಕರೆಯುತ್ತಿದ್ದರು. ಈ ಹೆಸರೇ ಕಾಯಂ ಆಗಿ ಉಳಿಯಿತು. ಹನ್ನೊಂದು ವರ್ಷದವರಿದ್ದಾಗಲೇ ಮಿರಜಿನಲ್ಲಿ ತೋಡಿ ರಾಗ ಹಾಡಿದ್ದರು. ಆದರೆ ಸಿತಾರ್ ವಾದನದ ಗೀಳು ಬಿಡಲಿಲ್ಲ. ಒಂದು ವರ್ಷದ ನಂತರ ಸಿತಾರ್ ರಿಯಾಜ್ ಆರಂಭಿಸಿದರು. ಪುಣೆಯ ರಸಿಕ ವಲಯದಲ್ಲಿ ಇವರ ಮನೆತನ ಸಿತಾರ್ ವಾದಕರ ಮನೆತನ ಎಂದೇ ಪ್ರಸಿದ್ಧಿ ಪಡೆದಿತ್ತು. ಅಜ್ಜ ತೀರಿಕೊಂಡ ಧಾರವಾಡಕ್ಕೆ ಬಂದು ನೆಲೆಸಿದರು. 1968ರಲ್ಲಿ ಆಕಾಶವಾಣಿ ಕಲಾವಿದರಾದ ಬಾಲೇಖಾನ್, 1971ರಲ್ಲಿ ಆಕಾಶವಾಣಿನಿಲಯ ಕಲಾವಿದರಾಗಿ ನಿಯುಕ್ತಿಗೊಂಡರು. ನಂತರ `ಎ' ಶ್ರೇಣಿ ಗಿಟ್ಟಿಸಿ ಕೊಂಡರು. ಪುಣೆ, ಪಣಜಿ, ನಾಗಪುರ, ಔರಂಗಾಬಾದ, ಮಂಗಳೂರು, ಬೆಂಗಳೂರಿನಲ್ಲಿ ಶ್ರೋತೃವೃಂದವನ್ನು ಮಂತ್ರಮುಗ್ಧಗೊಳಿಸಿದವರು ಅವರು. ಲಂಡನ್, ಕಿನ್ಯಾ, ಉಗಾಂಡಾ, ತಾಂಜಾನಿಯಾ, ಮ್ಯಾಂಚೆಸ್ಟರ್, ಪ್ಯಾರಿಸ್ ಮತ್ತಿತರ ಕಡೆಗಳಲ್ಲೂ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡವರು. ಬಾಲೇಖಾನರಿಗೆ 1987ರಲ್ಲಿ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ ಹಾಗೂ ಇತ್ತೀಚೆಗೆ ಪಂ. ಪುಟ್ಟರಾಜ ಗವಾಯಿ ಪ್ರಶಸ್ತಿ ದೊರಕಿತ್ತು.

2007: ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರ ದಾಖಲೆಯನ್ನು ಸರಿಗಟ್ಟಿದರು. ಕ್ಯಾಂಡಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನ ಮುರಳಿ ಹೊಸ ವಿಕ್ರಮ ಸಾಧಿಸಿದರು. ಇಂಗ್ಲೆಂಡ್ ತಂಡದ ರವಿ ಬೋಪಾರ ಅವರನ್ನು ವಿಕೆಟ್ ಕೀಪರ್ ಪ್ರಸನ್ನ ಜಯವರ್ಧನೆ ಸಹಾಯದಿಂದ ಔಟ್ ಮಾಡಿದ ಮುರಳಿ ತಮ್ಮ ವಿಕೆಟುಗಳ ಸಂಖ್ಯೆಯನ್ನು 708ಕ್ಕೆ ಹೆಚ್ಚಿಸಿದರು. ವಿಶ್ವ ಕಂಡಂತಹ ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರೂ 708 ವಿಕೆಟುಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

2007: `ಆಜಾ ನಚ್ ಲೇ' ಚಲನಚಿತ್ರ ತನ್ನ ಶೀರ್ಷಿಕೆ ಗೀತೆಯ ಮಾರ್ಪಾಡಿನೊಂದಿಗೆ ಉತ್ತರಪ್ರದೇಶ ಮತ್ತು ಪಂಜಾಬಿನ ಚಿತ್ರ ಮಂದಿರಗಳಿಗೆ ಮರಳಿತು. ಬಾಲಿವುಡ್ಡಿನಲ್ಲಿ ಮಾಧುರಿ ದೀಕ್ಷಿತ್ ಅವರು ಎರಡನೇ ಇನಿಂಗ್ಸ್ ಆರಂಭಿಸಿರುವ ಈ `ಆಜಾ ನಚ್ ಲೇ' ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಹಿಂದುಳಿದ ಜನಾಂಗವೊಂದನ್ನು ಅವಹೇಳನ ಮಾಡಲಾಗಿದೆ ಎಂದು ನಿಷೇಧಿಸಲಾಗಿತ್ತು. ವಿವಾದಿತ ಸಾಲುಗಳನ್ನು ತೆಗೆದು ಹಾಕಿದ ನಂತರ ಪಂಜಾಬ್ ಸರ್ಕಾರ ಚಿತ್ರವನ್ನು ಪ್ರದರ್ಶಿಸಲು ಹಸಿರು ನಿಶಾನೆ ತೋರಿತು.

2007: `ಯಾವುದೇ ಕಾರಣಕ್ಕೂ ಶ್ರೀಕೃಷ್ಣನ ಪೂಜೆ ಬಿಡುವುದಿಲ್ಲ ಎಂಬ ಸಂಕಲ್ಪ ಮಾಡಿರುವುದಾಗಿ ಹೇಳಿದ್ದೇನೆಯೇ ಹೊರತು, ಪೂಜೆಯನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿಲ್ಲ' ಎನ್ನುವ ಮೂಲಕ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದರು. ಹಂಪಿಯಲ್ಲಿ ನಡೆದ ರಘುನಂದನತೀರ್ಥರ 503ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಸಂದರ್ಭದಲ್ಲಿ ರಘುನಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

2007: ಭಾರತೀಯ ಸಂಸತ್ತಿನ ಚರಿತ್ರೆಯಲ್ಲಿ `ಮೊದಲ ದಂಪತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದ ಜೋಕಿಂ ಮತ್ತು ವಯಲೆಟ್ ಆಳ್ವ ಜೋಡಿಯ ಭಾವಚಿತ್ರ 2007ರ ಡಿಸೆಂಬರ್ 5ರಂದು ಲೋಕಸಭೆಯಲ್ಲಿ ಅನಾವರಣಗೊಳ್ಳಲಿದೆ ಎಂದು ಈದಿನ ಪ್ರಕಟಿಸಲಾಯಿತು. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ರಾಷ್ಟ್ರೀಯ ರಾಜಕಾರಣದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ ಈ `ಜೋಡಿ'ಯ ಬದುಕು ವರ್ಣರಂಜಿತ. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಜೋಕಿಂ ಆಳ್ವ ಅವರು ಲೋಕಸಭೆಗೆ ಆಯ್ಕೆಯಾದರೆ, ವಯಲೆಟ್ ಆಳ್ವ ರಾಜ್ಯಸಭೆಗೆ ಆಯ್ಕೆಯಾಗಿ ಸುದ್ದಿಯಾಗಿದ್ದರು. ಇವರಿಬ್ಬರೂ ಆಗಿನ ಮುಂಬೈ ರಾಜ್ಯವನ್ನು ಪ್ರತಿನಿಧಿಸಿದ್ದರು. ಜೋಕಿಂ ಆಳ್ವ ಅವರ ಜನ್ಮಶತಾಬ್ಧಿಯ ಪ್ರಯುಕ್ತ ಈ ದಂಪತಿಯ ಭಾವಚಿತ್ರವನ್ನು ಲೋಕಸಭೆಯಲ್ಲಿ ಅನಾವರಣ ಮಾಡಲು ನಿರ್ಧರಿಸಲಾಯಿತು. ಮುಂಬೈ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಜೋಕಿಂ ಆಳ್ವ ಅವರಿಗೆ ಗುಜರಾತಿ ಮೂಲದ ವಯಲೆಟ್ ಎಂಬ ವಿದ್ಯಾರ್ಥಿನಿಯ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗಲು ನಿರ್ಧರಿಸಿದರು. ಆಗ ಅದೊಂದು ಕ್ರಾಂತಿಕಾರಿ ಹೆಜ್ಜೆ. ಏಕೆಂದರೆ ವಯಲೆಟ್ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದರೆ, ಜೋಕಿಂ ಉಡುಪಿಯ ಕೊಂಕಣಿ ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದವರು. ಈ ಎರಡು ಸಮುದಾಯದ ಮಂದಿ ಪರಸ್ಪರ ಮದುವೆಯಾಗುವುದು ಅಸಾಧ್ಯ ಎಂಬ ಕಟ್ಟುಪಾಡಿನ ದಿನಗಳವು. ವಯಲೆಟ್ ಹರಿ ಅವರು 1937ರ ನವೆಂಬರ್ 20ರಂದು ಜೋಕಿಂ ಆಳ್ವರ ಕೈಹಿಡಿಯುವ ಮೂಲಕ ವಯಲೆಟ್ ಆಳ್ವ ಆದರು. ತಮ್ಮ ಪತಿಯ ಪ್ರೋತ್ಸಾಹದಿಂದಾಗಿ ಇವರು ಸಾರ್ವಜನಿಕ ಜೀವನದಲ್ಲಿ ಯಶಸ್ಸಿನ ಹೆಜ್ಜೆಗಳನ್ನು ಇರಿಸತೊಡಗಿದರು. ಇವರಿಬ್ಬರೂ ಮುಂಬೈನಲ್ಲಿ ಮೊದಲು ವಕೀಲರಾಗಿ, ನಂತರ ಪತ್ರಿಕೋದ್ಯಮದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದರು. 1943ರ ಆಗಸ್ಟ್ 9ರಂದು ಈ ದಂಪತಿ `ಫೋರಂ' ಎಂಬ ರಾಜಕೀಯ ವಾರಪತ್ರಿಕೆ ಆರಂಭಿಸಿದರು. ನಂತರ ವಯಲೆಟ್ ಅವರು `ಬೇಗಮ್' ಎಂಬ ಮಹಿಳಾ ಮಾಸಪತ್ರಿಕೆ ಪ್ರಾರಂಭಿಸಿದರು. ಜೋಕಿಂ ಆಳ್ವ ಅವರು ಉತ್ತರ ಕನ್ನಡ ಜಿಲ್ಲೆಯಿಂದ 1952, 1957 ಮತ್ತು 1962ರಲ್ಲಿ ಲೋಕಸಭೆಗೆ ಆಯ್ಕೆ ಯಾಗಿದ್ದರು. ಉಡುಪಿಯಲ್ಲಿ 1907ರಲ್ಲಿ ಜನಿಸಿದ ಜೋಕಿಂ ಆಳ್ವ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಕೂಡಾ ಪಾಲ್ಗೊಂಡಿದ್ದರು. ಆ ದಿನಗಳಲ್ಲಿಯೇ ಇವರು ರಾಷ್ಟ್ರೀಯ ಕಿಶ್ಚಿಯನ್ನರ ಪಕ್ಷವನ್ನು ಕಟ್ಟಿ, ಇದರ ಮೂಲಕ ಸ್ವಾತಂತ್ರ್ಯ ಚಳವಳಿಗೆ ಕ್ರಿಶ್ಚಿಯನ್ ಸಮುದಾಯದವರನ್ನು ಆಕರ್ಷಿಸಲು ಯತ್ನಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡದ್ದಕ್ಕಾಗಿ ಮೂರು ವರ್ಷ ಕಾಲ ಸೆರೆವಾಸದ ಶಿಕ್ಷೆಯನ್ನೂ ಅನುಭವಿಸಿದ್ದರು. 32ನೇ ವೈವಾಹಿಕ ವರ್ಷದಂದು ವಯಲೆಟ್ ನಿಧನರಾದರು. ಜೋಕಿಂ 1979ರಲ್ಲಿ ನಿಧನರಾದರು. ದೆಹಲಿಯ ಕಾಂಗ್ರೆಸ್ ವಲಯದಲ್ಲಿ ಪ್ರಭಾವಿ ರಾಜಕಾರಣಿ ಎನಿಸಿದ ಕರ್ನಾಟಕದ ಮಾರ್ಗರೆಟ್ ಆಳ್ವ ಅವರು ಜೋಕಿಂ ಆಳ್ವ ಕುಟುಂಬದ ಸೊಸೆ. ಎರಡು ದಶಕಗಳ ಹಿಂದೆ ಕೇಂದ್ರ ಸರ್ಕಾರದಲ್ಲಿ ಕ್ರೀಡಾ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದ ಮಾರ್ಗರೆಟ್, ಹಿಂದೆ ಉತ್ತರ ಕನ್ನಡ ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

2007: ಭೂಮಿಯಿಂದ ಭೂಮಿಗೆ ಚಿಮ್ಮುವ ಪೃಥ್ವಿ- 2 ಕ್ಷಿಪಣಿಯ `ಪೂರ್ವಸಿದ್ಧತಾ' ಪರೀಕ್ಷೆಯನ್ನು ಭಾರತವು ಬಂಗಾಳ ಕೊಲ್ಲಿಯ ಧಮ್ರಾ ಕಡಲ ತಡಿಯ ಬಳಿಯಿರುವ ಚಾಂದಿಪುರ ಹಾಗೂ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ಕೈಗೊಂಡಿತು

2006: ಬಿಹಾರಿನ ಭಾಗಲ್ಪುರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪಾದಚಾರಿ ಮೇಲುಸೇತುವೆಯ ಭಾಗವೊಂದು ಹೌರಾ- ಜಮಾಲ್ ಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕುಸಿದ ಪರಿಣಾಮವಾಗಿ 7 ಮಹಿಳೆಯರು ಸೇರಿ 37 ಜನ ಮೃತರಾಗಿ ಇತರ 55 ಜನ ಗಾಯಗೊಂಡರು. ಬೆಳಗ್ಗೆ 7.50ರ ಸುಮಾರಿಗೆ ರೈಲು ಭಾಗಲ್ಪುರ ನಿಲ್ದಾಣ ಪ್ರವೇಶಿಸುವ ಕೆಲ ಕ್ಷಣ ಮೊದಲು ಈ ದುರಂತ ಸಂಭವಿಸಿತು.

2006: ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಗೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ನಟಿ ಬಿ. ಸರೋಜಾದೇವಿ, ಸಾಮಾಜಿಕ ಕಾರ್ಯಕರ್ತೆ ರುತ್ ಮನೋರಮಾ ಅವರನ್ನು ಆಯ್ಕೆ ಮಾಡಿತು.

2005: ಮದ್ರಸಾಗಳು ಉಗ್ರವಾದಕ್ಕೆ ಕುಮ್ಮಕ್ಕು ನೀಡುವುದು, ಪಂಥಾಭಿಮಾನ ಹಾಗೂ ಧಾರ್ಮಿಕ ದ್ವೇಷವನ್ನು ಪ್ರಚೋದಿಸುವಂತಹ ಬೋಧನೆ ಹಾಗೂ ಸಾಹಿತ್ಯ ಪ್ರಕಟಿಸುವುದನ್ನು ನಿಷೇಧಿಸಿ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಸುಗ್ರೀವಾಜ್ಞೆ ಹೊರಡಿಸಿದರು.

2005: ಇರಾಕಿನ ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಚಿವ ನಟವರ್ ಸಿಂಗ್ ಕಮಿಷನ್ ಪಡೆದಿದ್ದಾರೆ ಎಂಬ ಆರೋಪಗಳನ್ನು ಸಮರ್ಥಿಸಿ ಕ್ರೊಯೇಷಿಯಾದಲ್ಲಿ ಭಾರತೀಯ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ನೀಡಿದ ಕುತೂಹಲಕರ ಹೇಳಿಕೆ ಭಾರತದ ಸಂಸತ್ತಿನ ಉಭಯ ಸದನಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು.

1982: ಯುನಿವರ್ಸಿಟಿ ಆಫ್ ಉಟಾಹ್ ಮೆಡಿಕಲ್ ಸೆಂಟರಿನ ವೈದ್ಯರು ಡಾ. ವಿಲಿಯಂ ಡೆ ವ್ರೀಸ್ ನೇತೃತ್ವದಲ್ಲಿ ಕಾಯಂ ಕೃತಕ ಹೃದಯವನ್ನು ನಿವೃತ್ತ ದಂತವೈದ್ಯ ಬಾರ್ನಿ ಕ್ಲಾರ್ಕ್ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಿದರು. ಈ ಕೃತಕ ಉಪಕರಣದೊಂದಿಗೆ ಅವರು 112 ದಿನಗಳ ಕಾಲ ಬದುಕಿದ್ದರು. ತಮ್ಮ ಹೃದಯ ಅಪ್ರಯೋಜಕವಾಗಿದ್ದು ತಮಗಿನ್ನು ಸಾವೇ ಖಚಿತ ಎಂಬುದು ದೃಢವಾದುದನ್ನು ಅನುಸರಿಸಿ ಕ್ಲಾರ್ಕ್ ಈ ಪ್ರಯೋಗಕ್ಕೆ ಒಪ್ಪಿಗೆ ನೀಡಿದ್ದರು. `ನನಗೆ ಇದರಿಂದ ಪ್ರಯೋಜನ ಆಗದಿರಲೂ ಬಹುದು. ಆದರೆ ಮುಂದಿನ ರೋಗಿಗಾಗಿ ನಾನು ಈ ಪ್ರಯೋಗಕ್ಕೆ ಒಪ್ಪಿಕೊಳ್ಳುವೆ' ಎಂದು ಅವರು ಹೇಳಿದ್ದರು.

1969: ಬೋಯಿಂಗ್ 747 ಜಂಬೋಜೆಟ್ ತನ್ನ ಚೊಚ್ಚಲ ಪಯಣ ಆರಂಭಿಸಿತು. ವಿಮಾನದಲ್ಲಿ 191 ಜನರಿದ್ದರು. ಅವರಲ್ಲಿ ಹೆಚ್ಚಿನವರು ವರದಿಗಾರರು ಮತ್ತು ಛಾಯಾಗ್ರಾಹಕರು. ವಿಮಾನ ಸಿಯಾಟಲ್ ನಿಂದ ನ್ಯೂಯಾರ್ಕ್ ನಗರಕ್ಕೆ ಪ್ರಯಾಣ ಬೆಳೆಸಿತು.

1962: ಟಿ.ವಿ. ಧಾರಾವಾಹಿಗಳ ಸಂವೇದನಾಶೀಲ ಬರಹಗಾರ್ತಿ ಗೀತಾ ಬಿ.ಯು. ಅವರು ಎಚ್.ಎಸ್. ಉಪೇಂದ್ರರಾವ್- ಶಾಂತಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1859: ಗುಲಾಮೀ ಪದ್ಧತಿ ವಿರೋಧಿ ಪ್ರಚಾರಕ ಜಾನ್ ಬ್ರೌನ್ ನನ್ನು ವರ್ಜೀನಿಯಾದ ಚಾರ್ಲ್ಸ್ ಟೌನಿನಲ್ಲಿ ಗಲ್ಲಿಗೇರಿಸಲಾಯಿತು. ಇದು ಆತನನ್ನು ಹುತಾತ್ಮನನ್ನಾಗಿ ಮಾಡಿತು. ಅಷ್ಟೇ ಅಲ್ಲ 1861-1865ರಲ್ಲಿ ನಡೆದ ಅಮೆರಿಕದ ಅಂತರ್ ಯುದ್ಧಕ್ಕೆ (ಅಮೆರಿಕನ್ ಸಿವಿಲ್ ವಾರ್) ಮೂಲ ಪ್ರೇರಣೆಯೂ ಆಯಿತು.

1804: ಫ್ರಾನ್ಸಿನ ಚಕ್ರವರ್ತಿಯಾಗಿ ಪ್ಯಾರಿಸ್ಸಿನಲ್ಲಿ ನೆಪೋಲಿಯನ್ ಸಿಂಹಾಸನ ಏರಿದ. ಫ್ರಾನ್ಸಿನ ನೋಟ್ರೆ ಡೇಮ್ ಎಂಬಲ್ಲಿ ನಡೆದ ಸಮಾರಂಭಕ್ಕೆ ಪೋಪ್ 7ನೇ ಪಯಸ್ ಆಗಮಿಸಿದ್ದರು. ಅದರೆ ಕೊನೆಯ ಕ್ಷಣದಲ್ಲಿ ಪೋಪ್ ಕೈಯಲ್ಲಿದ್ದ ಕಿರೀಟವನ್ನು ತಾನು ಸ್ವತಃ ತೆಗೆದುಕೊಂಡು ತನ್ನ ತಲೆಯ ಮೇಲೆ ಇರಿಸಿಕೊಂಡ.

Sunday, December 27, 2009

ಇಂದಿನ ಇತಿಹಾಸ History Today ಡಿಸೆಂಬರ್ 01

ಇಂದಿನ ಇತಿಹಾಸ

ಡಿಸೆಂಬರ್
01
ಚೀನಾದ ಸನ್ಯಾದಲ್ಲಿ ನಡೆದ 2007ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಚೀನಾದ ಝಂಗ್ ಜಲಿನ್ ಅವರು ವಿಶ್ವಸುಂದರಿಯಾಗಿ ಆಯ್ಕೆಯಾದರು.

ಇಂದು ವಿಶ್ವ ಏಡ್ಸ್ ದಿನ. ಏಡ್ಸ್ ಹಾಗೂ ಎಚ್ ಐ ವಿ ಸೋಂಕು ವಿರುದ್ಧ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಸಮರ್ಪಿತವಾದ ದಿನ. 1988ರಲ್ಲಿ ಆರೋಗ್ಯ ಸಚಿವರ ಜಾಗತಿಕ ಶೃಂಗ ಸಮ್ಮೇಳನದಲ್ಲಿ ಈ ವಿಚಾರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಚನೆ ಮೂಡಿತು. ಅಂದಿನಿಂದ ವಿಶ್ವದಾದ್ಯಂತ ಎಲ್ಲ ಸರ್ಕಾರಗಳು ಅಂತಾರಾಷ್ಟ್ರೀಯ ಸಂಘಟನೆಗಳು ಈ ದಿನ ವಿಶ್ವ ಏಡ್ಸ್ ದಿನ ಆಚರಿಸುತ್ತಿವೆ.

2008: ಮುಂಬೈಯಲ್ಲಿ ನಡೆದ ಭಯೋತ್ಪಾದನೆ ಕೃತ್ಯಕ್ಕೆ ಕಾರಣವಾದ ಪಾಕಿಸ್ಥಾನದ ವಿರುದ್ಧ ಭಾರತ ಕಠಿಣ ನಿಲುವು ತಳೆಯಿತು. ಈದಿನ ಪಾಕಿಸ್ಥಾನದ ಹೈಕಮಿಷನರ್ ಶಾಹಿದ್ ಮಲ್ಲಿಕ್ ಅವರನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿತು. ಸೆರೆ ಸಿಕ್ಕಿದ ಉಗ್ರ ಕಸಾಬ್ ಹೇಳಿಕೆ, ಪಾಕಿಸ್ಥಾನದ ಕೈವಾಡವನ್ನು ಬಹಿರಂಗಗೊಳಿಸುತ್ತಿದ್ದಂತೆಯೇ ಭಾರತ ಮತ್ತು ಪಾಕಿಸ್ಥಾನ ನಡುವಣ ಸಂಬಂಧ ಅನಿರೀಕ್ಷಿತ ತಿರುವುಗಳನ್ನು ಕಂಡಿತು. ಭಾರತ ಸೇನೆಯು ಏಕಾಏಕಿ ಪಾಕಿಸ್ಥಾನದ ಗಡಿಯಲ್ಲಿ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿದ ಬಗ್ಗೆ ಪಾಕಿಸ್ಥಾನದಲ್ಲಿ ಆತಂಕ ಕಂಡು ಬಂದಿತು. ಈ ನಡುವೆ ಪಾಕ್ ವಿರುದ್ಧ ಧ್ವನಿ ಎತ್ತಿದ ಭಾರತ ಕುಖ್ಯಾತ ದಾವೂದ್ ಇಬ್ರಾಹಿಂನನ್ನು ತನ್ನ ವಶಕ್ಕೆ ಒಪ್ಪಿಸಬೇಕೆಂದು ಆಗ್ರಹಿಸಿತು..

2008: ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಆರ್. ಆರ್.ಪಾಟೀಲ್ ಅವರ ಸ್ಥಾನಕ್ಕೂ ಸಂಚಕಾರ ತಂದಿತು. ಉಗ್ರರ ದಾಳಿ ಹಿನ್ನೆಲೆಯಲ್ಲಿ ಎನ್‌ಸಿಪಿಯ ಪಾಟೀಲ್ ರಾಜೀನಾಮೆ ನೀಡಿದರು. 'ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಅವರಿಗೆ ನೀಡಿದ್ದೇನೆ. ಇದು ನನ್ನ ಆತ್ಮಸಾಕ್ಷಿ ಮತ್ತು ವಿವೇಚನೆಯ ತೀರ್ಮಾನ' ಎಂದು ಸುದ್ದಿ ಸಂಸ್ಥೆಗೆ ಅವರು ತಿಳಿಸಿದರು.. ರಾಜ್ಯ ಗೃಹ ಸಚಿವರೂ ಆದ ಪಾಟೀಲ್ ಮುಂಬೈಯಲ್ಲಿನ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದ್ದರು.. ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯಸ್ಥೆ ಕಾಪಾಡುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದ ಶಿವಸೇನಾ ರಾಜೀನಾಮೆ ನೀಡುವಂತೆ ಪಾಟೀಲರನ್ನು ಒತ್ತಾಯಿಸಿತ್ತು.

2008: ಚಿಕ್ಕಮಗಳೂರಿನ ದತ್ತಾತ್ರೇಯಸ್ವಾಮಿ ಬಾಬಾ ಬುಡನ್ಗಿರಿ ದರ್ಗಾದ ದತ್ತ ಪೀಠದಲ್ಲಿನ ಪೂಜಾ ವಿಧಾನಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಆರ್. ವಿ.ರವೀಂದ್ರನ್ ಮತ್ತು ಡಿ.ಕೆ.ಜೈನ್ ಅವರನ್ನೊಳಗೊಂಡ ನ್ಯಾಯಪೀಠವು, 1989ರ ಧಾರ್ಮಿಕ ದತ್ತಿ ಆಯುಕ್ತರ ಆದೇಶಕ್ಕೆ ಅನುಗುಣವಾಗಿ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಆದೇಶ ನೀಡಿತು.

2008: ಅಮೆರಿಕದ ಚುನಾಯಿತ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದರು.

2008: ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಹಿರಿಯ ಉಪಾಧ್ಯಕ್ಷ ವಿಶ್ವನಾಥ ರೆಡ್ಡಿ ಮುದ್ನಾಳ (85) ಅವರು ಈದಿನ ರಾತ್ರಿ ಯಾದಗಿರಿಯಲ್ಲಿ ನಿಧನರಾದರು.

2008: ಹಲವು ಮೌಲ್ಯ ವರ್ಧಿತ ಸೇವೆಗಳನ್ನು ಆರಂಭಿಸಿದ ಭಾರ ತೀಯ ಅಂಚೆ ಇಲಾಖೆ ಕರ್ನಾಟಕ ವೃತ್ತವು ಹೊಸದಾಗಿ ಚಿನ್ನದ ನಾಣ್ಯ ಮಾರಾಟಕ್ಕೆ ಚಾಲನೆ ನೀಡಿತು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅಂಚೆ ಇಲಾಖೆಯ ಸೇವಾ ವಿಭಾಗದ ನಿರ್ದೇಶಕ ಕೆ.ಕೆ. ಶರ್ಮಾ, 'ದೇಶದಲ್ಲಿ ಚಿನ್ನದ ನಾಣ್ಯ ಮಾರಾಟವು ಪ್ರಮುಖ ವಹಿವಾ ಟಾಗಿ ಪರಿವರ್ತನೆಯಾಗಿದ್ದು, ಚಿನ್ನದ ಹೊಳಪು ಸದಾಕಾಲ ಜನರ ಆಕರ್ಷಣೆಯಿಂದ ದೂರಾಗಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಗುಣಮಟ್ಟದ ಸೇವೆಯ ವಿಶ್ವಾಸವನ್ನು ಅಂಚೆ ಇಲಾಖೆ ಮುಂದುವರೆಸುವುದು' ಎಂದು ಹೇಳಿದರು.

2008: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು 2008ರ ಅತ್ಯುತ್ತಮ ಬ್ಯಾಂಕ್ ಎಂದು ಲಂಡನ್ ಮೂಲದ ಫೈನಾನ್ಷಿಯಲ್ ಟೈಮ್ಸ್ ಗ್ರೂಪ್‌ಗೆ ಸೇರಿದ 'ದಿ ಬ್ಯಾಂಕರ್' ಮ್ಯಾಗಜಿನ್ ಪರಿಗಣಿಸಿತು. ಸ್ಟೇಟ್ ಬ್ಯಾಂಕ್ ಅಧ್ಯಕ್ಷ ಓ. ಪಿ. ಭಟ್ ಅವರು ಈ ಪ್ರಶಸ್ತಿಯನ್ನು ಮ್ಯಾಗಜಿನ್ ಪ್ರಧಾನ ಸಂಪಾದಕ ಸ್ಟೀಫನ್ ಟೈಮ್‌ವೆಲ್ ಅವರಿಂದ ಸ್ವೀಕರಿಸಿದರು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿತು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಲಂಡನ್‌ನ ಡೊರ್ಷೆಸ್ಟರ್ ಹೋಟೆಲಿನಲ್ಲಿ ನವೆಂಬರ್ 26ರಂದು ಏರ್ಪಡಿಸಲಾಗಿತ್ತು.

2007: ಚೀನಾದ ಸನ್ಯಾದಲ್ಲಿ ನಡೆದ 2007ನೇ ಸಾಲಿನ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಚೀನಾದ ಝಂಗ್ ಜಲಿನ್ ಅವರು ವಿಶ್ವಸುಂದರಿಯಾಗಿ ಆಯ್ಕೆಯಾದರು.

2007: ಲಘು ಹೃದಯಾಘಾತ ಸಂಭವಿಸಿದಾಗ ಹೃದಯದ ಕೆಲವೊಂದು ಜೀವಕೋಶಗಳು ನಾಶವಾಗುತ್ತವೆ. ನಾಶವಾದ ಈ ಜೀವಕೋಶಗಳನ್ನು ಹೊಸ ಆಕರ ಕೋಶಗಳೊಂದಿಗೆ ಬದಲಾಯಿಸಿದರೆ ಗಂಭೀರ ಪ್ರಮಾಣದ ಹೃದಯಾಘಾತವನ್ನು ತಡೆಯಬಹುದು ಎಂದು ವಾಷಿಂಗ್ಟನ್ನಿನಲ್ಲಿ ಸಂಶೋಧಕರು ಪ್ರಕಟಿಸಿದರು. ಆಕರ ಕೋಶಗಳನ್ನು ದೇಹದೊಳಗೆ ತೂರಿಸಿದಾಗ ಹೃದಯದ ರಕ್ತನಾಳಗಳು ಬಲಿಷ್ಠಗೊಳ್ಳುತ್ತವೆ. ಇವು ಮುಂದೆ ಸಂಭವಿಸಬಹುದಾದ ಗಂಭೀರ ಆಘಾತವನ್ನು ತಡೆಯಲು ಸಹಾಯ ಮಾಡುತ್ತವೆ ಎಂದು ಲೆಡೆನ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಂಟರ್ ಅಭಿಪ್ರಾಯ ಪಟ್ಟಿತು.

2007: ಅಗ್ನಿಶಾಮಕದಳ ಹಾಗೂ ಹಗಲು-ರಾತ್ರಿ ಎರಡೂ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಕ್ಯಾನ್ಸರ್ ಬರುವ ಸಂಭವ ಸಾಮಾನ್ಯ ಜನರಿಗಿಂತಲೂ ಹೆಚ್ಚು ಎಂದು ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹೇಳಿತು. ಇಂತಹ ಅಪಾಯಕಾರಿ ಕೆಲಸಗಳನ್ನು ಕ್ಯಾನ್ಸರಿಗೆ ದಾರಿ ಮಾಡಿಕೊಡುವ ಕೆಲಸಗಳೆಂದು ಘೋಷಿಸಬೇಕೆಂದು ಸಂಸ್ಥೆಯು ಅಂತಾರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯ ಮಾಡಿತು. ಈ ಕುರಿತು ಲಾನ್ಸೆಟ್ ಓಂಕಾಲಜಿ ವೈದ್ಯಕೀಯ ನಿಯತಕಾಲಿಕದ ಡಿಸೆಂಬರ್ ಸಂಚಿಕೆಯಲ್ಲಿ ಸಂಪೂರ್ಣ ವಿವರವನ್ನು ಪ್ರಕಟಿಸಲಾಯಿತು.

2007: ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಹಿಲೆರಿ ಕ್ಲಿಂಟನ್ ಅವರ ಚುನಾವಣಾ ಪ್ರಚಾರದ ಕಚೇರಿಯೊಳಗೆ ನುಗ್ಗಿ, ಅಲ್ಲಿನ ಸಿಬ್ಬಂದಿಯನ್ನು ಕೆಲಹೊತ್ತು ಒತ್ತೆಯಾಳುಗಳಾಗಿ ಇರಿಸಿಕೊಂಡು ಆತಂಕ ಸೃಷ್ಟಿಸಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 47 ವರ್ಷದ ಲೀ ಐಸೆನ್ ಬರ್ಗ್ ಎಂಬಾತ ರೊಕೆಸ್ಟರ್ ಪ್ರದೇಶದಲ್ಲಿನ ಚುನಾವಣಾ ಪ್ರಚಾರದ ಕಚೇರಿಗೆ ನುಗ್ಗಿ ಮೂವರು ಮಹಿಳೆಯರು, ಆರು ತಿಂಗಳ ಮಗು ಸೇರಿದಂತೆ ಐವರನ್ನು ಒತ್ತೆ ಸೆರೆ ಇಟ್ಟುಕೊಂಡು ತನ್ನ ಬಳಿ ಬಾಂಬ್ ಇರುವುದಾಗಿ ಬೆದರಿಕೆಯೊಡ್ಡಿದ. ನಂತರ ಸಿಬ್ಬಂದಿಯನ್ನು ತನ್ನ ವಶಕ್ಕೆ ತೆಗೆದುಕೊಂಡು ಮಗು ಮತ್ತು ಅದರ ತಾಯಿಯನ್ನು ಬಿಡುಗಡೆ ಮಾಡಿದ. ಆದರೆ ಕಚೇರಿಯಿಂದ ಹೊರಬಂದ ಈ ಮಹಿಳೆ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ, ಅವರು ಕಾರ್ಯ ಪ್ರವರ್ತರಾಗಿ ಐಸೆನ್ ಬರ್ಗನನ್ನು ಬಂಧಿಸಿದರು. ಆತನ ಬಳಿ ಯಾವುದೇ ಬಾಂಬ್ ಇರಲಿಲ್ಲ ಎಂದು ನಂತರ ಗೊತ್ತಾಯಿತು.

2007: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಪಕ್ಷವು ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕಾಗಿ ರಚಿಸಿದ ಉನ್ನತ ಮಟ್ಟದ ಸಮಿತಿಯಿಂದ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರನ್ನು ಕೈಬಿಟ್ಟಿತು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಪ್ತರೆನ್ನಲಾದ ರಮೇಶ್ ಈ ಹಿಂದೆ ಸಮಿತಿಯ ಸಂಚಾಲಕರಾಗಿದ್ದರು. ಆದರೆ, ವೀರಪ್ಪ ಮೊಯಿಲಿ ಅಧ್ಯಕ್ಷರಾಗಿರುವ ಈ ಸಮಿತಿ ಕೆಲ ದಿನಗಳ ಹಿಂದೆ ಮೊದಲ ಸಭೆ ನಡೆಸಿದ ನಂತರ ಜೈರಾಮ್ ರಮೇಶ್ ಅವರನ್ನು ಸಮಿತಿಯಿಂದ ಕೈಬಿಟ್ಟಿತು. ಆದರೆ ಇದಕ್ಕೆ ಕಾರಣ ನೀಡಿಲ್ಲ. ಸೇತು ಸಮುದ್ರಂ ಯೋಜನೆ ವಿಚಾರದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದ್ದ ಪ್ರಮಾಣ ಪತ್ರದ ಹಿನ್ನೆಲೆಯಲ್ಲಿ ಸಚಿವೆ ಅಂಬಿಕಾ ಸೋನಿ ಅವರನ್ನು ಬಹಿರಂಗವಾಗಿ ಜೈರಾಮ್ ರಮೇಶ್ ಅವರು ಟೀಕಿಸಿದ್ದೇ ಈ ಕ್ರಮಕ್ಕೆ ಕಾರಣ ಎಂದು ರಾಜಕೀಯ ತಜ್ಞರು ಲೆಕ್ಕ ಹಾಕಿದರು.

2007: ಶ್ರೀಲಂಕಾದ ಉತ್ತರ ಭಾಗದಲ್ಲಿ ಸೈನಿಕರು ಹಾಗೂ ಎಲ್ಟಿಟಿಇ ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ 19 ಉಗ್ರರು ಮತ್ತು ಮೂವರು ಯೋಧರು ಮೃತರಾದರು. 57 ಮಂದಿ ಗಾಯಗೊಂಡರು.

2007: ಇರಾಕಿನ ಷಿಯಾ ಮುಸ್ಲಿಮರು ಪ್ರಾಬಲ್ಯದಲ್ಲಿರುವ ಉತ್ತರ ಬಾಗ್ದಾದ್ ಹಳ್ಳಿಯನ್ನು ವಶಕ್ಕೆ ತಗೆದುಕೊಂಡ ಅಲ್ ಖೈದಾ ಉಗ್ರರು 12ಮಂದಿ ನಾಗರಿಕರನ್ನು ಹತ್ಯೆ ಮಾಡಿ, ಎಂಟು ಮಂದಿಯನ್ನು ಗಾಯಗೊಳಿಸಿದರು. ಜೊತೆಗೆ 35 ಜನರನ್ನು ಅಪಹರಿಸಿ ಎಂಟು ಮನೆಗಳಿಗೆ ಬೆಂಕಿ ಹಚ್ಚಿದರು.

2007: ಎಚ್ಐವಿ/ಏಡ್ಸ್ ನಿರ್ಮೂಲನೆ ಹಾಗೂ ಅದರಿಂದ ರಕ್ಷಣೆ ಪಡೆಯುವ ಬಗೆ ಹೇಗೆಂಬ ಮಾಹಿತಿ ಹೊತ್ತ ವಿಶೇಷ ವಿನ್ಯಾಸದ ಏಳು ಬೋಗಿಯ `ದಿ ರೆಡ್ ರಿಬ್ಬನ್ ಎಕ್ಸ್ ಪ್ರೆಸ್' ರೈಲಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಏಡ್ಸ್ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಚಾಲನೆ ನೀಡಿದರು.

2007: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕಲ್ಲಿನ ಮಾಧ್ಯಮದಲ್ಲಿ ಹೂವಿನಹಡಗಲಿಯ ಬಿ. ಶಿವಾನಂದಚಾರ್, ಬೆಂಗಳೂರಿನ ಸುರೇಂದ್ರ ಕಾಳಪ್ಪ ವಿಶ್ವಕರ್ಮ, ಮೈಸೂರಿನ ಗುರುರಾಜ ಎಸ್. ನಾಯಕ್ ಹಾಗೂ ಮರ, ಮಿಶ್ರ ಮಾಧ್ಯಮ ಮತ್ತು ಲೋಹ ಮಾಧ್ಯಮದಲ್ಲಿ ಬಿಡದಿಯ ರುಕ್ಕಪ್ಪ ಕುಂಬಾರ, ಮೈಸೂರಿನ ಆನಂದಬಾಬು ಎಂ. ಅಂಬರಖಾನೆ ಮತ್ತು ಶಿವಾರಪಟ್ಟಣದ ಎಸ್. ಶಶಿಧರ್ ಈ ಆರು ಕಲಾವಿದರನ್ನು ಶಿಲ್ಪಕಲಾ ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಿತು. ಗುಲ್ಬರ್ಗದ ಮಲ್ಲಿಕಾರ್ಜುನ ಕೆ. ಚಿಕನಹಳ್ಳಿ ಅವರಿಗೆ ಮೈಸೂರಿನ `ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಪ್ರಶಸ್ತಿ'ಯನ್ನು ಪ್ರಕಟಿಸಿತು.

2006: ಹದಿನೆಂಟು ವರ್ಷಗಳ ಹಿಂದೆ ರಸ್ತೆ ಬದಿ ನಡೆದ ಜಗಳವೊಂದರಲ್ಲಿ ಗುರ್ನಾಮ್ ಸಿಂಗ್ ಎಂಬಾತನ ಸಾವಿಗೆ ಕಾರಣವಾಗಿದ್ದುದಕ್ಕಾಗಿ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಬಿಜೆಪಿಯ ಲೋಕಸಭಾ ಸದಸ್ಯ ನವಜೋತ್ ಸಿಂಗ್ ಸಿಧು ತಪ್ಪಿತಸ್ಥ ಎಂದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಸಿಧು ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

2006: ಫಿಲಿಪ್ಪೀನ್ಸಿನಲ್ಲಿ ಭೀಕರ ಬಿರುಗಾಳಿ ಮಳೆ, ಭೂಕುಸಿತಗಳ ಪರಿಣಾಮವಾಗಿ 400ಕ್ಕೂ ಹೆಚ್ಚು ಜನ ಅಸು ನೀಗಿದರು.

2006: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ನಗರ ಪಂಚಾಯತ್ ಸದಸ್ಯ ಹಾಗೂ ಮೂಲ್ಕಿ- ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದಶಿರ್ಶಿ ಸುಖಾನಂದ ಶೆಟ್ಟಿ (32) ಅವರನ್ನು ಮಂಗಳೂರಿಗೆ ಸಮೀಪದ ಕುಳಾಯಿಯಲ್ಲಿ ಕೊಲೆಗೈಯಲಾಯಿತು. ಪರಿಣಾಮವಾಗಿ ಮೂಲ್ಕಿಯಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದು ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾದರು.

2005: ಭಾರತದ ನಾಲ್ಕನೇ `ತೇಜಸ್' ಹಗುರ ಯುದ್ಧ ವಿಮಾನದ ಯಶಸ್ವೀ ಚೊಚ್ಚಲ ಹಾರಾಟ (ಪಿವಿ2) ಬೆಂಗಳೂರಿನಲ್ಲಿ ನಡೆಯಿತು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಈ ಯುದ್ಧ ವಿಮಾನದಲ್ಲಿ ಬಹುಪಾಲು ಕಾರ್ಯಗಳನ್ನು ಸಾಫ್ಟವೇರ್ ತಂತ್ರಜ್ಞಾನದ ಮೂಲಕವೇ ನಿಯಂತ್ರಿಸಬಹುದು. ಭಾರತದ ಯುದ್ಧ ವಿಮಾನಗಳ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿರುವ ಇದು ಯುದ್ಧ ವಿಮಾನಗಳ ಪಟ್ಟಿಗೆ ಇನ್ನೊಂದು ಮಹತ್ವದ ಸೇರ್ಪಡೆ.

2005: ಬಿಸಿನೆಸ್ ಇಂಡಿಯ ನಿಯತಕಾಲಿಕವು ನೀಡುವ `ಬಿಸಿನೆಸ್ ಮನ್ ಆಫ್ ದಿ ಈಯರ್ 2005' ಪ್ರಶಸ್ತಿಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಆಯ್ಕೆಯಾದರು.

2005: ಮೈಸೂರಿನ ರಮಣಶ್ರೀ ಪ್ರತಿಷ್ಠಾನವು ಹಾಸ್ಯ ಸಾಹಿತ್ಯದಲ್ಲಿ ಮಾಡಿದ ಸಾಧನೆಗಾಗಿ ನೀಡುವ ಪ್ರಸಕ್ತ ಸಾಲಿನ `ನಗೆರಾಜ' ಪ್ರಶಸ್ತಿಗೆ ಪತ್ರಕರ್ತ ಜಿ.ಎಚ್. ರಾಘವೇಂದ್ರ ಆಯ್ಕೆಯಾದರು.

2005: ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ಥಾನ ಮೂಲದ ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಐರೋಪ್ಯ ಸಮುದಾಯ ರಾಷ್ಟ್ರಗಳು ಕಪ್ಪು ಪಟ್ಟಿಗೆ ಸೇರಿಸಿದವು. 2001ರ ಸೆಪ್ಟೆಂಬರ್ 11ರಂದು ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ನಂತರ ಐರೋಪ್ಯ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಆರಂಭಿಸಿದವು.

1990: ಬ್ರಿಟಿಷ್ ಮತ್ತು ಫ್ರಾನ್ಸ್ ಮಧ್ಯೆ ಸುರಂಗ ಕಾಲುವೆ ತೋಡುತ್ತಿದ್ದ ಕಾರ್ಮಿಕರು ಬಂಡೆಯ ಕೊನೆಯ ತುಂಡನ್ನು ತುಂಡರಿಸುವ ಮೂಲಕ ಪರಸ್ಪರ ಸಂಧಿಸಿ ಕೈ ಕುಲುಕಿದರು. ಇಂಗ್ಲೆಂಡಿನಿಂದ 22.3 ಕಿ.ಮೀ. ಹಾಗೂ ಫ್ರಾನ್ಸಿನಿಂದ 15.6 ಕಿ.ಮೀ. ದೂರದಲ್ಲಿ ಉಭಯ ದೇಶಗಳ ಕಡೆಗಳ ಈ ಸುರಂಗಗಳು ಪರಸ್ಪರ ಸಂಧಿಸಿದವು. ಬ್ರಿಟಿಷ್ ಕನ್ ಸ್ಟ್ರಕ್ಷನ್ ಕಾರ್ಮಿಕ ಗ್ರಹಾಂ ಫಾಗ್ ಹಾಗೂ ಫ್ರೆಂಚ್ ಕಾರ್ಮಿಕ ಫಿಲಿಪ್ ಕೊಝೆಟ್ಟ್ ಈ ಕೊನೆಯ ಬಂಡೆಯನ್ನು ತುಂಡರಿಸಿ ಉಭಯ ರಾಷ್ಟ್ರಗಳು ಮೊತ್ತ ಮೊದಲ ಬಾರಿಗೆ ಸುರಂಗ ಮೂಲಕ ಸಂಪರ್ಕಿಸುವಂತೆ ಮಾಡಿದರು. ಈ ಸುರಂಗ ತೋಡುವ ಕಾರ್ಯ ಮೂರು ವರ್ಷಗಳ ಹಿಂದೆ 1987ರಲ್ಲಿ ಇದೇ ದಿನ ಆರಂಭವಾಗಿತ್ತು.

1990: ಭಾರತದ ಪ್ರಥಮ ರಾಯಭಾರಿ ಮತ್ತು ರಾಜಕಾರಣಿ ವಿಜಯಲಕ್ಷ್ಮಿ ಪಂಡಿತ್ ನಿಧನ.

1989: ಪೋಪ್ ಎರಡನೇ ಜಾನ್ ಪಾಲ್ ಮತ್ತು ಸೋವಿಯತ್ ಒಕ್ಕೂಟದ ಧುರೀಣ ಮಿಖಾಯಿಲ್ ಗೊರ್ಬಚೆವ್ ಅವರ ಐತಿಹಾಸಿಕ ಭೇಟಿ ಹಾಗೂ ಮಾತುಕತೆಯು ಸೋವಿಯತ್ ಒಕ್ಕೂಟ ಮತ್ತು ವ್ಯಾಟಿಕನ್ ಮಧ್ಯೆ ಬೆಳೆದಿದ್ದ 70 ವರ್ಷಗಳ ವೈರತ್ವದ ಭಾವನೆಗಳಿಗೆ ತೆರೆ ಎಳೆಯಿತು.

1974: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸುಚೇತಾ ಕೃಪಲಾನಿ ನಿಧನ.

1973: ಇಸ್ರೇಲಿನ ಪ್ರಥಮ ಪ್ರಧಾನಿ ಡೇವಿಡ್ ಬೆನ್- ಗುರಿಯನ್ ಅವರು ಟೆಲ್ ಅವೀವಿನಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

1963: ಶ್ರೀಲಂಕಾದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅರ್ಜುನ ರಣತುಂಗ ಹುಟ್ಟಿದ ದಿನ.

1957: ಸಾಹಿತಿ ಲೋಕಾಪುರ ಐ.ಎ. ಜನನ.

1955: ಕರಿಯ ಮಹಿಳೆ ರೋಸಾ ಪಾರ್ಕ್ಸ್ ಈದಿನ ಅಲಾಬಾಮಾದ ಮಾಂಟ್ಗೊಮೆರಿ ಪಟ್ಟಣದ ಬಸ್ ಪ್ರಯಾಣದಲ್ಲಿ ಬಿಳಿಯ ಪ್ರಯಾಣಿಕನಿಗೆ ಆಸನ ತೆರವುಗೊಳಿಸಲು ನಿರಾಕರಿಸಿದರು. ಆಕೆಯ ಬಂಧನ ಬಸ್ ಬಹಿಷ್ಕಾರ ಚಳವಳಿಗೆ ನಾಂದಿ ಹಾಡಿತು. ಮಾರ್ನಿನ್ ಲೂಥರ್ ಕಿಂಗ್ ಜ್ಯೂನಿಯರ್ ಈ ಚಳವಳಿಯ ನೇತೃತ್ವ ವಹಿಸಿದರು. ಇದು ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಯುಗಾರಂಭಕ್ಕೆ ಕಾರಣವಾಯಿತು.

1955: ಸಾಹಿತಿ ತುಳಸೀಪ್ರಿಯ ಜನನ.

1948: ಪಾಕಿಸ್ಥಾನದ ಮಾಜಿ ಬೌಲರ್ ಸರ್ ಫ್ರಾಜ್ ನವಾಜ್ ಹುಟ್ಟಿದ ದಿನ.

1939: `ಗಾನ್ ವಿದ್ ದಿ ವಿಂಡ್' ಚಲನಚಿತ್ರವು ಅಟ್ಲಾಂಟಾದಲ್ಲಿ ಪ್ರದರ್ಶನಗೊಂಡಿತು. ಅತ್ಯಂತ ಜನಪ್ರಿಯತೆ ಗಳಿಸುತ್ತಾ ಸಾಗಿದ ಈ ಚಿತ್ರ ಒಂಬತ್ತು ಪ್ರಮುಖ ಆಸ್ಕರ್ ಪ್ರಶಸ್ತಿಗಳನ್ನು, ಎರಡು ವಿಶೇಷ ಆಸ್ಕರ್ ಪ್ರಶಸ್ತಿಗಳನ್ನು ತನ್ನ ಬಗಲಿಗೆ ಏರಿಸಿಕೊಂಡಿತು. ಅಷ್ಟೇ ಅಲ್ಲ ಎರಡು ದಶಕಗಳ ಕಾಲ ಅತ್ಯಂತ ಹೆಚ್ಚು ಹಣ ಗಳಿಕೆಯ ಚಿತ್ರವಾಯಿತು.

1923: ನವೋದಯ, ಪ್ರಗತಿಶೀಲ, ನವ್ಯ ಹೀಗೆ ಸಾಹಿತ್ಯದ ಎಲ್ಲ ಮಜಲುಗಳಲ್ಲೂ ಹಾದು ಮಧ್ಯಮವರ್ಗದ ಬದುಕಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಯ ಮೂಲಕ ನಿರೂಪಿಸುವ ವ್ಯಾಸರಾಯ ಬಲ್ಲಾಳ ಅವರು ರಾಮದಾಸ- ಕಲ್ಯಾಣಿ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದರು.

1918: ಸಾಹಿತಿ ಕೆ.ಟಿ. ಪಾಂಡುರಂಗಿ ಜನನ.

1918: ಸಾಹಿತಿ ಸುನಂದಾ ತುಂಕೂರು ಜನನ.

1878: ವಾಷಿಂಗ್ಟನ್ ಡಿಸಿಯಲ್ಲಿ ಇರುವ ಶ್ವೇತಭವನಕ್ಕೆ ಮೊತ್ತ ಮೊದಲ ಟೆಲಿಫೋನ್ ಸಂಪರ್ಕ ಕಲ್ಪಿಸಲಾಯಿತು. ಅಧ್ಯಕ್ಷ ರುತ್ ಫೋರ್ಡ್ ಬಿ. ಹೇಸ್ ಆಡಳಿತದ ಕಾಲದಲ್ಲಿ ಅಲೆಗ್ಸಾಂಡರ್ ಗ್ರಹಾಂಬೆಲ್ ಸ್ವತಃ ಈ ಕಾರ್ಯವನ್ನು ನೆರವೇರಿಸಿದ. ಶ್ವೇತಭವನದಿಂದ ಹೊರಹೋಗುವ ಮೊದಲ ಕರೆ 13 ಮೈಲುಗಳಷ್ಟು ದೂರದಲ್ಲಿದ್ದ ಗ್ರಹಾಂಬೆಲ್ ಗೆ ಹೋಯಿತು. `ನಿಧಾನವಾಗಿ ಮಾತನಾಡಪ್ಪಾ!' ಎಂಬುದಾಗಿ ಹೇಸ್ ಅವರು ಗ್ರಹಾಂಬೆಲ್ ಗೆ ಸೂಚಿಸಿದರು. ವಾಷಿಂಗ್ಟನ್ನಿನಲ್ಲಿ ಬೇರೆ ಯಾರಲ್ಲೂ ಟೆಲಿಫೋನುಗಳು ಇಲ್ಲದೇ ಇದ್ದುದರಿಂದ ಹೇಸ್ ಈ ಟೆಲಿಫೋನನ್ನು ಹೆಚ್ಚು ಬಳಸಲಾಗಲಿಲ್ಲ.

Saturday, December 26, 2009

ಇಂದಿನ ಇತಿಹಾಸ History Today ನವೆಂಬರ್ 30

ಇಂದಿನ ಇತಿಹಾಸ

ನವೆಂಬರ್ 30

ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 70 ಕಡೆ ಸರಣಿ ಸ್ಛೋಟಗಳು ನಡೆದ ನಂತರ ವ್ಯಾಪಕ ಟೀಕೆಗೆ ಒಳಗಾಗಿದ್ದ ಗೃಹಸಚಿವ ಶಿವರಾಜ್ ಪಾಟೀಲ್ ಕೊನೆಗೂ ರಾಜೀನಾಮೆ ನೀಡಿದರು. ಪಾಟೀಲ್ ರಾಜೀನಾಮೆ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಲಾಯಿತು.
 2014: ನವದೆಹಲಿ: ಒಂದು ಕಾಲದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಯುಪಿಎ ಸರ್ಕಾರವನ್ನು ಒತ್ತಾಯಿಸಿದ್ದ ಬಿಜೆಪಿ ಈಗ ಅಧಿಕಾರಕ್ಕೆ ಬಂದಿದ್ದರೂ ಸರ್ಕಾರ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದ್ದು ಬೆಳಕಿಗೆ ಬಂದಿತು. ಈ ವರ್ಷದ ಜನವರಿಯಲ್ಲಿ ನೇತಾಜಿಯ 117ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕರು ಸುಭಾಷ್ ಚಂದ್ರ ಬೋಸ್ ಬಗ್ಗೆ ಸರ್ಕಾರದ ಬಳಿಯಿರುವ 41 ವರ್ಗೀಕೃತ ದಾಖಲೆಗಳನ್ನು ಬಹಿರಂಗ ಪಡಿಸಲು ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ವ್ಯಕ್ತಿಯೊಬ್ಬರು ದಾಖಲೆ ಬಹಿರಂಗಕ್ಕೆ ಕೋರಿ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿದ ಘಟನೆ ಘಟಿಸಿತು. ಪ್ರಧಾನಿ ಕಾರ್ಯಾಲಯ 41 ದಾಖಲೆಗಳ ಪೈಕಿ 2 ದಾಖಲೆಗಳನ್ನು ವರ್ಗೀಕೃತವಲ್ಲದ ದಾಖಲೆಗಳ ಪಟ್ಟಿಗೆ ಸೇರಿಸಿ ಉಳಿದ 39 ದಾಖಲೆಗಳನ್ನು ವರ್ಗೀಕೃತ ದಾಖಲೆ ಪಟ್ಟಿಯಲ್ಲೇ ಉಳಿಸಿಕೊಂಡಿದ್ದು, ದಾಖಲೆ ಬಹಿರಂಗಕ್ಕೆ ನಿರಾಕರಿಸಿತು. ದಾಖಲೆಗಳ ಬಹಿರಂಗದಿಂದ ಕೆಲವೊಂದು ದೇಶಗಳೊಂದಿಗೆ ಭಾರತದ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಆರ್​ಟಿಐನ ಸೆಕ್ಷನ್ 8(1)(ಎ) ಮತ್ತು ಸೆಕ್ಷನ್ 8(2)ರ ಅನ್ವಯ ದಾಖಲೆಗಳನ್ನು ಬಹಿರಂಗ ಪಡಿಸದೆ ಇರಬಹುದು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿತು. ಇಡೀ ದೇಶವೇ ಸುಭಾಷ್ ಚಂದ್ರ ಬೋಸ್ ಸಾವಿನ ಕುರಿತು ಮಾಹಿತಿ ತಿಳಿದುಕೊಳ್ಳಲು ಉತ್ಸುಕವಾಗಿದೆ. ಆದರೆ ಸರ್ಕಾರ ದಾಖಲೆ ಬಿಡುಗಡೆಗೆ ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ಮಾಹಿತಿ ಕೋರಿದ ಅರ್ಜಿದಾರರು ಹೇಳಿದರು..


2014: ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ, ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಸುಮಾರು 25 ಸುತ್ತು ಗುಂಡು ಹಾರಿಸಿತು.. ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ನಿರಂತರ ಗುಂಡಿನ ದಾಳಿ ನಡೆಸಿದವು. ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಯೋಧರು ಈದಿನ ನಿರಂತರ ಒಂದೂ ಮುಕ್ಕಾಲು ಗಂಟೆ ಗುಂಡಿನ ದಾಳಿ ನಡೆಸಿದರು. ಇಂದು ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿನಲ್ಲಿ ಆರಂಭವಾದ ಗುಂಡಿನ ದಾಳಿ 12.45ರ ಸುಮಾರಿನಲ್ಲಿ ನಿಂತಿತು ಎಂದು ಸೇನಾ ಮೂಲಗಳು ತಿಳಿಸಿದವು. ಸಾಂಬಾ ವಿಭಾಗದ ಭಾರತೀಯ ಗಡಿಯಲ್ಲಿ ಭಾರತೀಯ ಯೋಧರು ನಿರ್ಮಿಸುತ್ತಿರುವ ನಿರ್ಮಾಣ ಕಾಮಗಾರಿಯನ್ನು ಗುರಿಯಾಗಿಸಿಕೊಂಡೇ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿದವು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವೊಬ್ಬ ಭಾರತೀಯ ಯೋಧನಿಗೂ ಗಾಯಗಳಾಗಿಲ್ಲ. ಪಾಕ್ ಸೇನೆಯ ಉದ್ಧಟತನಕ್ಕೆ ಭಾರತೀಯ ಯೋಧರು ತಿರುಗೇಟು ನೀಡಿದ್ದು, ಪಾಕ್ ಪಡೆಗಳತ್ತ ಗುಂಡಿನ ದಾಳಿ ನಡೆಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ಹೆಚ್ಚಾಗುತ್ತಿದ್ದು, ಚಳಿಯಿಂದ ರಕ್ಷಣೆ ಪಡೆಯಲು ಮತ್ತು ಗಡಿಯನ್ನು ನಿರಂತರವಾಗಿ ಕಾಯುವ ಉದ್ದೇಶದಿಂದ ಭಾರತೀಯ ಗಡಿಯಲ್ಲಿ ಭಾರತೀಯ ಸೇನೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಇದು ಪಾಕಿಸ್ತಾನಿ ಪಡೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇದನ್ನು ನಿಲ್ಲಿಸುವ ಉದ್ದೇಶದಿಂದಲೇ ದಾಳಿ ಮಾಡಿದ್ದಾರೆ ಎಂದು ಹೇಳಲಾಯಿತು.

2014: ಬೆಂಗಳೂರು: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಮರಿ ಮೊಮ್ಮಗ ಮಧುಕೇಶ್ವರ ದೇಸಾಯಿ ಅವರ ಮದುವೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ಕೂಡ ಆಗಿರುವ ಮಧುಕೇಶ್ವರ ದೇಸಾಯಿ ಅವರು ಕಿಲೋಸ್ಕರ್ ಸಂಸ್ಥೆಯ ಮಾಲೀಕರ ಮಗಳು ಮತ್ತು ಮುಂಬೈ ಮೂಲದ ಪತ್ರಕರ್ತೆಯಾದ ಸ್ನೇಹ ಮೆನನ್ ಈದಿನ ವಿವಾಹವಾದರು. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕಾಫಿಬೋರ್ಡ್ ಲೇಔಟ್‌ನಲ್ಲಿರುವ ಕಿರ್ಲೋಸ್ಕರ್ ಹೌಸ್‌ನಲ್ಲಿ ಮಧುಕೇಶ್ವರ ದೇಸಾಯಿ ಮತ್ತು ಸ್ನೇಹ ಮೆನನ್ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಮಾಜಿ ಶಾಸಕ ವಿ.ಸೋಮಣ್ಣ ಅವರು ಸೇರಿದಂತೆ ವಿವಿಧ ಗಣ್ಯರು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಲ್‌ಕೆ ಅಡ್ವಾಣಿ ಅವರು, ಬೆಂಗಳೂರಿಗೂ ನನಗೂ ನಿಕಟ ಸಂಬಂಧವಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲವನ್ನು ಇಲ್ಲಿನ ಜೈಲಿನಲ್ಲಿ ಕಳೆದಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. 'ಬೆಂಗಳೂರಿಗೆ ಬಂದು ತುಂಬಾ ದಿನಗಳಾಗಿದ್ದವು. ಅಲ್ಲದೆ ಬರುವಂಥ ಸಂದರ್ಭಗಳು ಎದುರಾಗಿರಲಿಲ್ಲ. ಹಿಂದೆ ಜನಚೇತನ ಯಾತ್ರೆ ವೇಳೆ ಇಲ್ಲಿಗೆ ಆಗಮಿಸಿದ್ದೆ. ಈಗ ಮಧು ಮದುವೆ ನನ್ನನ್ನು ಬೆಂಗಳೂರಿಗೆ ಕರೆತಂದಿದೆ ಎಂದು ಹೇಳಿದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಕುಟುಂಬದ ಕುಡಿಯಾಗಿರುವ ಮಧುಕೇಶ್ವರ ದೇಸಾಯಿ ಜಗದೀಶ್ ದೇಸಾಯಿ ಅವರ ಪುತ್ರರಾಗಿದ್ದು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಈ ಹಿಂದೆ ಎಲ್‌ಕೆ ಅಡ್ವಾಣಿ ಅವರು ಹಮ್ಮಿಕೊಂಡಿದ್ದ ಜನಚೇತನ ಯಾತ್ರೆಯ ಸಂದರ್ಭದಲ್ಲಿಯೂ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧುಕೇಶ್ವರ ದೇಸಾಯಿ ಅವರು ಮುಂದಾಳತ್ವ ವಹಿಸಿಕೊಂಡಿದ್ದರು.

2014: ಆಷ್​ಡಾಡ್: ಫಿಲ್ ಹ್ಯೂಸ್ ಸಾವು ಇನ್ನೂ ಹಸಿರಾಗಿರುವಾಗಲೇ ಕ್ರಿಕೆಟ್ ವಲಯಕ್ಕೆ ಮತ್ತೊಂದು ಆಘಾತಕಾರಿ ಸಾವಿನ ಸುದ್ದಿ ಅಪ್ಪಳಿಸಿತು. ವೇಗವಾಗಿ ಬಂದ ಚೆಂಡು ಕತ್ತಿಗೆ ಅಪ್ಪಳಿಸಿದ ಪರಿಣಾಮ ಭಾರತೀಯ ಮೂಲದ ಇಸ್ರೇಲ್ ತಂಡದ ಮಾಜಿ ನಾಯಕ, ಹಾಲಿ ಅಂಪೈರ್ ಹಿಲೆಲ್ ಅವಸ್ಕಾರ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದರು.. ಆಷ್​ಡಾಡ್ ಕರಾವಳಿ ನಗರದಲ್ಲಿ ನಡೆಯುತ್ತಿದ್ದ ಲೀಗ್ ಟೂರ್ನಿಯಲ್ಲಿ ಈ ಘಟನೆ ನವೆಂಬರ್ 29ರ ಶನಿವಾರ ಸಂಭವಿಸಿದೆ ಎಂದು ವರದಿ ತಿಳಿಸಿತು. ಚೆಂಡು ಮೊದಲು ಸ್ಟಂಪ್ ತಗುಲಿ ಬಳಿಕ ಹಿಲೆಲ್ ಅವಸ್ಕಾರ್ ಅವರ ಕತ್ತಿಗೆ ಬಡಿದಿದ್ದು, ತಕ್ಷಣ ಅವಸ್ಕಾರ್ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದು ಬಿದ್ದರು. ತಕ್ಷಣ ಆಟಗಾರರೆಲ್ಲ ಸೇರಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಪ್ರಯೋಜನಕಾರಿಯಾಗದೇ ಪ್ರಾಣ ಕಳೆದುಕೊಂಡರು ಎಂದು ಪಂದ್ಯದಲ್ಲಿ ಆಡುತ್ತಿದ್ದ ಆಟಗಾರ ಯೋನಾ ತಿಳಿಸಿದರು. 55 ವರ್ಷ ವಯಸ್ಸಿನ ಅವಸ್ಕಾರ್ ಮೂಲತಃ ಮುಂಬೈ ಮೂಲದವರಾಗಿದ್ದು, 1982ರಿಂದ 1997ರ ತನಕ ಇಸ್ರೇಲ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಅವಸ್ಕಾರ್ ಸಾವಿನ ಬಗ್ಗೆ ಇಸ್ರೇಲ್​ನ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ವೈದ್ಯರು, ಅವಸ್ಕಾರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ಚಿಕಿತ್ಸೆ ಫಲಕಾರಿಯಾಗುವ ಸ್ಥಿತಿಯಲ್ಲಿರಲಿಲ್ಲ. ಅವರು ಹೃದಯಾಘಾತದಿಂದ ಪ್ರಾಣಬಿಟ್ಟಿದ್ದಾರೆ ಎಂದು ತಿಳಿಸಿದರು. ಮೊನ್ನೆ ಮೊನ್ನೆಯಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ದೇಶಿ ಕ್ರಿಕೆಟ್ ಪಂದ್ಯದಲ್ಲಿ ಅಬೋಟ್ ಎಸೆದ ವೇಗದ ಚೆಂಡು ತಗುಲಿ ಫಿಲ್ ಹ್ಯೂಸ್ ಕೆಲವೇ ಘಂಟೆಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಈ ಆಘಾತವನ್ನು ಮರೆಯುವುದಕ್ಕೂ ಮುನ್ನವೇ ಇಂತದೇ ಮತ್ತೊಂದು ಘಟನೆ ಕ್ರಿಕೆಟ್ ವಲಯದಲ್ಲಿ ಇನ್ನಷ್ಟು ಆತಂಕ ಮೂಡಿಸುವಂತೆ ಮಾಡಿತು.

2014:) ಅಟ್ಟಾರಿ (ಪಂಜಾಬ್): ಗುಜರಾತಿನ 35 ಮಂದಿ ಮೀನುಗಾರರು ಸೇರಿದಂತೆ 40 ಮಂದಿ ಭಾರತೀಯ ಕೈದಿಗಳನ್ನು ಪಾಕಿಸ್ತಾನವು ಬಿಡುಗಡೆ ಮಾಡಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದರು. ಕೈದಿಗಳನ್ನು 29 ನವೆಂಬರ್ 2014ರ ಶನಿವಾರ ತಡವಾಗಿ ಅಮೃತಸರದಿಂದ 30 ಕಿ.ಮೀ. ದೂರದ ಇಲ್ಲಿನ ಅಟ್ಟಾರಿ-ವಾಘಾ ಚೆಕ್​ಪೋಸ್ಟ್​ಗೆ ಕರೆತಂದ ಪಾಕಿಸ್ತಾನಿ ಸೈನಿಕರು ಭಾರತದ ಗಡಿ ಭದ್ರತಾ ಪಡೆ ವಶಕ್ಕೆ ಒಪ್ಪಿಸಿದರು. ಪಾಕಿಸ್ತಾನಿ ಜಲಪ್ರದೇಶ ಪ್ರವೇಶಿಸಿದ್ದಕ್ಕಾಗಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಬಹುತೇಕ ಕೈದಿಗಳು ಪಾಕಿಸ್ತಾನಿ ಸೆರೆಮನೆಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಇದ್ದರು.

2014: ಥಾಣೆ (ಮಹಾರಾಷ್ಟ್ರ): ರಾಸಾಯನಿಕ ವಿಷದ ಪ್ರಭಾವದಿಂದ 601 ಜನರು ಅಸ್ವಸ್ಥವಾಗಿರುವ ಘಟನೆ ಮಹಾರಾಷ್ಟ್ರದ ಧಾಣಿ ಬಳಿಯ ಉಲ್ಲಾಸ ನಗರ ಪ್ರದೇಶದಲ್ಲಿ ಘಟಿಸಿತು. ಉಲ್ಲಾಸ ನಗರದ ಬಳಿಯ ತೊರೆಯಲ್ಲಿ ರಾಸಾಯನಿಕ ಸಾಗಿಸುವ ಟ್ಯಾಂಕರ್​ನ್ನು ತೊಳೆದಿದ್ದರು.  ಆ ನೀರನ್ನು ಉಪಯೋಗಿಸಿದ ಜನರಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. 601 ಜನರನ್ನು 5 ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಪಡೆದ ನಂತರ ಬಹುತೇಕರನ್ನು ಬಿಡುಗಡೆ ಮಾಡಲಾಯಿತು. ಹಿಂದಿನ ದಿನ ಉಸಿರಾಟದ ತೊಂದರೆ, ಕಣ್ಣುಗಳಲ್ಲಿ ಉರಿ ಮತ್ತು ತಲೆಸುತ್ತಿನ ಸಮಸ್ಯೆಗಳಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಹಾನಿಕಾರಕ ರಾಸಾಯನಿಕ ಮೊದಲಿಗೆ ಅಂಬೆರ್​ನಾಥ್ ಬಳಿ ತೊರೆಗೆ ಸೇರಿದೆ. ನಂತರ ಈ ಕಲುಷಿತ ನೀರು ಉಲ್ಲಾಸನಗರದ ಬಳಿ ಹರಿಯುವ ವಾಲ್ದುನಿ ನದಿಗೆ ಸೇರ್ಪಡೆಯಾಗಿತ್ತು. ಆ ನೀರನ್ನು ಸೇವಿಸಿದ್ದರಿಂದ ಜನರು ಅಸ್ವಸ್ಥರಾದರು ಎಂದು ಹೇಳಲಾಯಿತು.


2014: ಶಾರ್ಜಾ: ಅಸಾದ್ ಶಫೀಕ್ (137 ರನ್) ಶತಕದ ನಡುವೆಯೂ ಟ್ರೆಂಟ್ ಬೌಲ್ಟ್ (38ಕ್ಕೆ 4) ಹಾಗೂ ಮಾರ್ಕ್ ಕ್ರೇಗ್ (109ಕ್ಕೆ 3) ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಶಾರ್ಜಾ ಸ್ಟೇಡಿಯಂನಲ್ಲಿ ನಡೆದ 3ನೇ ಮತ್ತು ಕಡೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ 80 ರನ್ ಸೋಲನುಭವಿಸಿತು, ಪರಿಣಾಮ 3 ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲದಲ್ಲಿ ಅಂತ್ಯಗೊಂಡಿತು. ಅಬುಧಾಬಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ಗೆದ್ದಿದ್ದರೆ, 2ನೇ ಟೆಸ್ಟ್ ಡ್ರಾಗೊಂಡಿತ್ತು. 339 ರನ್ ಹಿನ್ನಡೆಯೊಂದಿಗೆ 4ನೇ ದಿನದಾಟವಾದ ಈದಿನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕ್, 259 ರನ್​ಗೆ ಸರ್ವಪತನ ಕಂಡಿತು. ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 351 ರನ್ ಗಳಿಸಿದ್ದರೆ, ನ್ಯೂಜಿಲೆಂಡ್ 690 ರನ್ ಕಲೆಹಾಕಿತು. ಕ್ರೇಗ್ ಪಂದ್ಯಶ್ರೇಷ್ಠ ಹಾಗೂ ಮೊಹಮ್ಮದ್ ಹಫೀಜ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
 
2008: ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 70 ಕಡೆ ಸರಣಿ ಸ್ಛೋಟಗಳು ನಡೆದ ನಂತರ ವ್ಯಾಪಕ ಟೀಕೆಗೆ ಒಳಗಾಗಿದ್ದ ಗೃಹಸಚಿವ ಶಿವರಾಜ್ ಪಾಟೀಲ್ ಕೊನೆಗೂ ರಾಜೀನಾಮೆ ನೀಡಿದರು. ಪಾಟೀಲ್ ರಾಜೀನಾಮೆ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಲಾಯಿತು. ಅರ್ಥಶಾಸ್ತ್ರಜ್ಞರೂ ಆದ ಪ್ರಧಾನಿ ಮನಮೋಹನ್ ಸಿಂಗ್ ಹೆಗಲಿಗೆ ಹಣಕಾಸಿನ ಹೊಣೆ ಏರಿತು. ಹಿಂದಿನ ದಿನ ರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ (ಸಿಡಬ್ಲ್ಯೂಸಿ) ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದ ಪಾಟೀಲ್, ಈದಿನ ಬೆಳಿಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದರು. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.

2008: ಭಾರತಕ್ಕೆ 26 ಅಶುಭ ಸೂಚಕವೇ?  ಈ ಮೊದಲು ವಿಶ್ವದಾದ್ಯಂತ 13ಅನ್ನು ಅಶುಭ ಸೂಚಕ ಸಂಖ್ಯೆ ಎಂದೇ ಬಹಳಷ್ಟು ಜನರು ಪರಿಗಣಿಸುತ್ತಿದ್ದರು. ಈಗ ಭಾರತೀಯರ ಪಾಲಿಗೆ 26 ಅಶುಭ ಸೂಚಕ ದಿನವಾಗಿ ಕಾಣಿಸುತ್ತಿರುವುದು ಹೊಸ ಸಂಗತಿ. ಸುಮ್ಮನೇ ಈ ದಿಸೆಯಲ್ಲಿ ಒಂದು ಸಣ್ಣ ಸಿಂಹಾವಲೋಕನ ಮಾಡಿದರೆ ಸಾಕು 26 ಭಾರತೀಯರ ಪಾಲಿಗೆ ಎಷ್ಟೊಂದು ಅಶುಭ ಘಟನೆಗಳನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡಿದೆ ಎಂಬುದು ಅರ್ಥವಾಗುತ್ತದೆ. 2001ರ ಮೇ ತಿಂಗಳಿನಲ್ಲಿ ಗುಜರಾತಿನ ಕಛ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪದ ದಿನ 26, 2004ರ ಡಿಸೆಂಬರ್ 26ರಂದು ಅಪ್ಪಳಿಸಿದ ಸುನಾಮಿ, 2007ರ ಮೇ ತಿಂಗಳಿನ 26ರಂದು ಗುವಾಹಟಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಹಾಗೂ ಇದೇ ವರ್ಷದ ಸೆಪ್ಟೆಂಬರ್ 26ರಂದು ಅಹಮದಾಬಾದಿನಲ್ಲಿ ಸಂಭವಿಸಿದ ಬಾಂಬು ಸ್ಫೋಟ ಮತ್ತು ಎಂದೆಂದಿಗೂ ಮರೆಯಲಾಗದಂತಹ ಮುಂಬೈನ ಮೇಲಿನ  ದಾಳಿ ನವೆಂಬರ್ ತಿಂಗಳ 26ರಂದೇ ನಡೆದಿರುವುದು ಈ ಹೊಸ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಟ್ಟಿತು. ಸಂಖ್ಯಾಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳ ಪ್ರಕಾರ ಇದೇನೂ ಕಾಕತಾಳೀಯವಲ್ಲ. ಸಂಖ್ಯಾಶಾಸ್ತ್ರದ ಅನುಸಾರ 26 ಅತ್ಯಂತ ದುರದೃಷ್ಟ ಸೂಚಕ ಸಂಖ್ಯೆ. 2+6=8 ಅಂದರೆ ಇದು ವಿನಾಶವನ್ನು ಸೂಚಿಸುತ್ತದೆ ಎಂದು ಮುಂಬೈನ ಸಂಖ್ಯಾಶಾಸ್ತ್ರಜ್ಞ ಸಂಜಯ್ ಜುಮಾನಿ ಅಭಿಪ್ರಾಯ. ಮುಂಬೈ ದಾಳಿಯ ದಿನವನ್ನು ಕೇವಲ ಸಂಖ್ಯಾಶಾಸ್ತ್ರದ ಆಧಾರದಲ್ಲೇ ಗಮನಿಸುವುದು ತರವಲ್ಲ ಎಂದು ಖ್ಯಾತ ಜ್ಯೋತಿಷಿ ಬೇಜನ್ ದಾರುವಾಲ ಹೇಳುತ್ತಾರೆ. ಮುಂಬೈ ದಾಳಿಗೆ ಜ್ಯೋತಿಷ್ಯದಲ್ಲೂ ಕಾರಣಗಳು ದೊರೆಯುತ್ತವೆ ಎಂಬುದು ಅವರ ಪ್ರತಿಪಾದನೆ. ಕುಜ ಮತ್ತು ಶನಿ ಸಮಾಗಮದಲ್ಲಿರುವುದರಿಂದ ಈ ಕಾಲವನ್ನು 'ಅಂಗಾರ ಯೋಗ' ಎಂದು ಕರೆಯಲಾಗುತ್ತದೆ. ಇದು ವಿನಾಶಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ಅವರ ಅಂಬೋಣ. ಪ್ರಧಾನಿ ಮನಮೋಹನ ಸಿಂಗ್ ಅವರು ಸೆಪ್ಟೆಂಬರ್ 26ರಂದೇ ಜನಿಸಿದ್ದಾರೆ. ನಮ್ಮ ಗಣರಾಜ್ಯೋತ್ಸವ ದಿನದ ಆಚರಣೆಯೂ ಜನವರಿ 26ರಂದು. ಹಾಗಂತ ಈ ಸಂಖ್ಯೆ ಸದಾ ಅಶುಭ ಸೂಚಕ ಎಂದು ನಾವು ಭಾವಿಸಬೇಕಾಗಿಲ್ಲ. ಸಂಖ್ಯಾಶಾಸ್ತ್ರ ಎಲ್ಲ ಸಮಯದಲ್ಲೂ ಕೆಲಸ ಮಾಡುವುದಿಲ್ಲ ಎಂದೂ ಅವರು ಹೇಳುತ್ತಾರೆ. 2008ರಲ್ಲಿ 26ರಂದು ಎರಡು ಬಾರಿ ಭಯೋತ್ಪಾದಕರ ದುಷ್ಕೃತ್ಯಗಳು ಜರುಗಿವೆ. ಇನ್ನೆರಡು 13ರಂದು ನಡೆದಿವೆ. ಜೈಪುರ ಬಾಂಬ್ ಸ್ಫೋಟದ ಘಟನೆಗಳು ನಡೆದದ್ದು ಮೇ 13 ಮತ್ತು ಅಹಮದಾಬಾದಿನಲ್ಲಿ ಜುಲೈ 26ರಂದು. ದೆಹಲಿಯಲ್ಲಿ ಸೆಪ್ಟೆಂಬರ 13ರಂದು ನಡೆದರೆ ಮುಂಬೈನಲ್ಲಿ 26 ರಂದು ಉಗ್ರರ ದಾಳಿ ಪ್ರಕರಣಗಳು ಸಂಭವಿಸಿವೆ.  ಈ ಮುಂಚೆಯೂ ಭಾರತ 13ನೇ ದಿನಾಂಕದಂದು ಭಾರಿ ದಾಳಿಗಳನ್ನು ಎದುರಿಸಿದೆ. ಮುಂಬೈಯಲ್ಲಿ 2003ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳು ಮಾರ್ಚ್ 13ರಂದು ನಡೆದಿದ್ದರೆ, ಸಂಸತ್ ಭವನದ ಮೇಲಿನ ದಾಳಿ ನಡೆದದ್ದು ಡಿಸೆಂಬರ್ 13ರಂದು. ಸಂಖ್ಯಾಶಾಸ್ತ್ರಜ್ಞರ ಪ್ರಕಾರ 13 ಮತ್ತು 26 ಎರಡೂ ದುರದೃಷ್ಟದ ಸಂಖ್ಯೆಗಳೇ. 13 ನಾವು ನಿರೀಕ್ಷಿಸದ ಸಂಗತಿಗಳನ್ನು ನಮಗೆ ಸಾದರಪಡಿಸಬಲ್ಲುದು. ಸ್ಪಲ್ಪ ಎಚ್ಚರಿಕೆಯಿಂದ ಇರದೆ ಹೋದರೆ ಈ ದಿನ ಅಪಾಯ ತಪ್ಪಿದ್ದಲ್ಲ. 26 ವಿನಾಶವನ್ನು ಹೊತ್ತು ತರಬಹುದಾದ ಸಂಖ್ಯೆ ಎನಿಸಿದರೂ ಅದು ಉತ್ತಮ ದಿನವೇ ಎಂಬುದು ನೀರಜ್ ಮನ್‌ ಚಂದಾ ಅನಿಸಿಕೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ 62ನೇ ವರ್ಷ ಅಷ್ಟೇನೂ ಶುಭದಾಯಕ ವರ್ಷವಲ್ಲ ಎಂಬುದು ಜುಮಾನಿ ಅಭಿಪ್ರಾಯ. ಸಂಕಲನದ ದೃಷ್ಟಿಯಿಂದ 62 ಮತ್ತು 26 ರ ಎರಡೂ ಸಂಖ್ಯೆಗಳ ಮೊತ್ತ 8 ಆಗುತ್ತದೆ. ಆದ್ದರಿಂದ ಎರಡೂ ಒಂದೇ ಪರಿಣಾಮ ಹೊಂದಿವೆ. ಇದರಿಂದಾಗಿ ಭಾರತದ ಮೇಲೆ ಈ ವರ್ಷ ದಾಳಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ಅವರ ಅಂದಾಜು. ಮನ್‌ ಚಂದಾ ಅವರ ಪ್ರಕಾರ 2 ಚಂದ್ರನನ್ನು ಪ್ರತಿನಿಧಿಸಿದರೆ 6 ಶುಕ್ರನೊಂದಿಗೆ ಗುರುತಿಸಿಕೊಳ್ಳುತ್ತದೆ. ಇವೆರಡೂ ಒಟ್ಟಾದಾಗ ಭಾರಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿಯೇ 26ನ್ನು ಕ್ರೂರ ದಿನ ಎಂದು ಭಾವಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.

2008:  2004ರಲ್ಲಿ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆದ ಸುಮಾರು 25 ಸಾವಿರ ಭಯೋತ್ಪಾದಕ ಹಾಗೂ ಇನ್ನಿತರ ಉಗ್ರಗಾಮಿಗಳ ಹಾವಳಿಯಲ್ಲಿ ಒಟ್ಟು ಏಳು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. 2004ರಲ್ಲಿ ನಡೆದ 6,029 ಘಟನೆಗಳಲ್ಲಿ 1,721 ಜನರು ಸತ್ತಿದ್ದಾರೆ. 2005ರಲ್ಲಿ 5,709 ಘಟನೆಗಳಲ್ಲಿ 1,598, 2006ರಲ್ಲಿ 5,240 ಘಟನೆಗಳಲ್ಲಿ  1,352 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಖಾತೆಯು ಬಹಿರಂಗಪಡಿಸಿರುವ ಅಂಕಿ ಅಂಶಗಳು ತಿಳಿಸಿದವು.  2007ರಲ್ಲಿ ನಡೆದ 4,709 ಘಟನೆಗಳಲ್ಲಿ 1,215 ಜನರು ಮಡಿದರು.
2008ರಲ್ಲಿ ಕಳೆದ ಸೆಪ್ಟೆಂಬರದವರೆಗೆ 3,157 ಘಟನೆಗಳಲ್ಲಿ 760 ಜನರು ಮೃತರಾದರು. ಹೈದರಾಬಾದ್ ಬಾಂಬ್ ಸ್ಫೋಟದಲ್ಲಿ 40 ಜನರು, ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಸ್ಫೋಟದಲ್ಲಿ 68 ಜನರು , ರೈಲು ಮತ್ತು ಮಾಲೆಗಾಂವ್ ಸರಣಿ ಸ್ಫೋಟಗಳಲ್ಲಿ ಮುಂಬೈನಲ್ಲಿ 230 ಮಂದಿ ಸತ್ತಿದ್ದರು. ಹಿಂದಿನವಾರ ಮುಂಬೈಯಲ್ಲಿ ನಡೆದ ದಾಳಿಯಲ್ಲಿ 183 ಜನರು ಸತ್ತರು. ಎನ್‌ಡಿಎ ಆಡಳಿತ ಕಾಲದಲ್ಲಿ ನಡೆದ 36,259 ಘಟನೆಗಳಲ್ಲಿ 11,714 ಮಂದಿ ಸತ್ತಿದ್ದರು. ಎನ್‌ಡಿಎ ಆಡಳಿತದ ಪ್ರಮುಖ ಘಟನೆಗಳೆಂದರೆ ಸಂಸತ್ ಭವನ, ಅಕ್ಷರಧಾಮ ದೇವಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲಿನ ದಾಳಿಗಳು ಎಂದು ಗೃಹಖಾತೆ ಅಂಕಿ ಅಂಶಗಳು ತಿಳಿಸಿದವು.

2008: ದಕ್ಷಿಣ ಆಸ್ಟ್ರೇಲಿಯಾದ ಸ್ಯಾಂಡಿ ಕ್ಯಾಪ್ ಸಮುದ್ರ ತೀರದಲ್ಲಿ ಬಂಡೆಗಳ ನಡುವೆ ಸಿಕ್ಕಿಹಾಕಿಕೊಂಡ 80 ತಿಮಿಂಗಿಲಗಳು ಸಮುದ್ರಕ್ಕೆ ಹಿಂದಿರುಗಲಾರದೆ ಸಾವನ್ನಪ್ಪಿದವು. ರಕ್ಷಣಾ ತಂಡದ ನೆರವು ಲಭಿಸುವ ವೇಳೆಗೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದರು.

2008:  ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ವ್ಯಾಸರಾಯ ಬಲ್ಲಾಳ ಸಭಾಂಗಣದಲ್ಲಿ ನಡೆದ 'ಆಳ್ವಾಸ್ ನುಡಿಸಿರಿ-2008' ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ನಾಡೋಜಿ ದರೋಜಿ ಈರಮ್ಮ, ಗೊ.ರು. ಚನ್ನ್ಗಸಪ್ಪ, ಡಾ.ಸಾ.ಶಿ. ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ, ನಾಡೋಜ ಜಾನಪದ ಸಿರಿ ಸಿರಿಯಜ್ಜಿ ಅವರಿಗೆ ಹಾಗೂ ಬಹ್ರೈನಿನ ಕನ್ನಡ ಸಂಘಕ್ಕೆ 'ಆಳ್ವಾಸ್ ನುಡಿಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡಿದರು. ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಚನ್ನವೀರ ಕಣವಿ ಅಧ್ಯಕ್ಷತೆ ವಹಿಸಿದ್ದರು.

2007: `ಮಿಸೈಲ್ ಮ್ಯಾನ್' ಎಂದೇ ಗುರುತಿಸಿಕೊಂಡ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು `ಇ-ಪತ್ರಿಕೆ' ಆರಂಭಿಸುವ ಮೂಲಕ ಇದೀಗ `ಮೀಡಿಯಾ ಮ್ಯಾನ್' ಆದರು. ದೇಶದ ಯಶೋಗಾಥೆಯನ್ನು ಬಿಂಬಿಸುವ ಹಾಗೂ ಜ್ಞಾನ ಪ್ರಸಾರದ ಉದ್ದೇಶವುಳ್ಳ `ಬಿಲಿಯನ್ ಬೀಟ್ಸ್' ಪಾಕ್ಷಿಕ ಇ-ಪತ್ರಿಕೆಗೆ ಕಲಾಂ ಚಾಲನೆ ನೀಡಿದರು. ಕಲಾಂ ಅವರ www.abdulkalam.com  ನಲ್ಲಿ ಇ-ಪತ್ರಿಕೆಯ ಆವೃತ್ತಿ ಓದಲು ಸಿಗುತ್ತದೆ.

2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ  ನಿರ್ದೇಶಕರ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಮ್ಮ ಅಂಕಿತ ಹಾಕಿದರು. ಬಿಜೆಪಿ ಹಾಗೂ ಎಐಎಡಿಎಂಕೆ ವಿರೋಧದ ನಡುವೆಯೂ ಎರಡು ದಿನಗಳ ಹಿಂದೆ ಏಮ್ಸ್ ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ ನೀಡಿತ್ತು.

2007: ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ದೇವರ ಮುಂದೆ ಪಾದರಕ್ಷೆ ಧರಿಸಿ ಕುಳಿತಿದ್ದುದಕ್ಕಾಗಿ ಬಾಲಿವುಡ್ ನಟಿ ಖುಷ್ಬೂ ವಿರುದ್ಧ ರಾಮೇಶ್ವರಂನಲ್ಲಿ ಮತ್ತೊಂದು ಮೊಕದ್ದಮೆ ದಾಖಲಾಯಿತು. ಹಿಂದೂ ಮುನ್ನಣಿ ಸಂಘಟನೆಯ ಸ್ಥಳೀಯ ಕಾರ್ಯದರ್ಶಿ ರಾಮಮೂರ್ತಿ ಅವರು ರಾಮೇಶ್ವರದ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರು. ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಕಾರ್ಯಕರ್ತ ಬಿ.ಆರ್. ಕುಮಾರ್ ಕೂಡ ಈ ಸಂಬಂಧ ದೂರು ಸಲ್ಲಿಸಿದ್ದರು.

2007: ನವದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ವಿಶ್ವ ಪರಂಪರೆ ಸ್ಥಾನಮಾನ ನೀಡಿದ ಪ್ರಮಾಣಪತ್ರವನ್ನು ನವದೆಹಲಿಯಲ್ಲಿ ಯುನೆಸ್ಕೋ ಮಹಾನಿರ್ದೇಶಕ ಕೊಯಿಚಿರೋ ಮತ್ಸೂರ ಅವರು ಅಧಿಕೃತವಾಗಿ ಅಭಿಜಿತ್ ಸೇನ್ ಗುಪ್ತಾ ಅವರಿಗೆ ಹಸ್ತಾಂತರಿಸಿದರು. ವಿಶ್ವಪರಂಪರೆಯ ಸ್ಥಾನ ಪಡೆದ ಪಟ್ಟಿಗೆ ಸೇರಿದ 27ನೇ ಸ್ಥಳ ಎಂಬ ಖ್ಯಾತಿ ಕೆಂಪುಕೋಟೆಗೆ ಲಭಿಸಿದೆ.

2007: ಯಶವಂತಪುರ- ಮಂಗಳೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು ಸಂಚಾರವು 2007 ಡಿಸೆಂಬರ್ 8 ರಿಂದ ಆರಂಭವಾಗುವುದು ಎಂದು ನೈಋತ್ಯ ರೈಲ್ವೇ ವಲಯ ಪ್ರಕಟಿಸಿತು. ಮಂಗಳೂರಿನಿಂದ ರೈಲು ಪ್ರಯಾಣ ಡಿಸೆಂಬರ್ 9ರಿಂದ ಆರಂಭವಾಗುವುದು. ರೈಲ್ವೇ ಪ್ರಯಾಣ ದರವನ್ನೂ ಅದು ನಿಗದಿ ಪಡಿಸಿತು.

2007: ವಿವಾದಗಳಿಗೆ ಕಾರಣವಾಗಿರುವ ತಮ್ಮ ಆತ್ಮಕತೆ 'ದ್ವಿಖಂಡಿತ'ದಲ್ಲಿನ ವಿವಾದಾತ್ಮಕ ಭಾಗ ವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಬಾಂಗ್ಲಾದೇಶದ  ಲೇಖಕಿ ತಸ್ಲೀಮಾ ನಸ್ರೀನ್ ಕೋಲ್ಕತ್ತಾದಲ್ಲಿ ಪ್ರಕಟಿಸಿದರು. ಈ ಮೂಲಕ ತಮ್ಮ ಮೇಲೆ ಹೆಚ್ಚಿದ ಒತ್ತಡಗಳಿಗೆ ತಸ್ಲೀಮಾ ಮಣಿದರು.

2007: ಅಮೆರಿಕದ ವಾಣಿಜ್ಯ ಸಮುಚ್ಚಯವಾಗಿದ್ದ ಅವಳಿ ಗೋಪುರದ ಮೇಲೆ ನಡೆದ ದಾಳಿಯ ಹಿಂದೆ ತಾನೊಬ್ಬನೇ ಇರುವುದಾಗಿ ಖಾಸಗಿ ಟಿವಿ ಚಾನೆಲ್ ಅಲ್-ಜಜೀರಾಗೆ ಕಳುಹಿಸಿರುವ ಟೇಪಿನಲ್ಲಿ ಕುಖ್ಯಾತ ಭಯೋತ್ಪಾದಕ ಅಲ್ ಖೈದಾ ಧುರೀಣ ಬಿನ್ ಲಾಡೆನ್ ಹೇಳಿಕೊಂಡ. ಅಮೆರಿಕ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ಹಾಗೂ ಆಪ್ಘಾನಿಸ್ಥಾನ ತೊರೆಯುವಂತೆ ಯುರೋಪಿಯನ್ನರಿಗೆ ಕರೆ ನೀಡಿದ ಲಾಡೆನ್ ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ಮೇಲೆ ನಡೆದ ಈ ದಾಳಿಗೆ ತಾನೊಬ್ಬನೇ ಹೊಣೆಗಾರ' ಎಂದು ಘೋಷಿಸಿದ.

2007: ಅತ್ಯಂತ ಕಿರಿಯ ಸೌರ ಮಂಡಲವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಹಚ್ಚಿದರು. ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧಕರು ಸುಮಾರು ಹತ್ತು ಲಕ್ಷ ವರ್ಷಗಳಷ್ಟು ಹಳೆಯದು ಎನ್ನಲಾದ ಕಿರಿಯ ನಕ್ಷತ್ರಗಳಾದ `ಯುಎಕ್ಸ್ ತೌ ಎ' ಮತ್ತು `ಎಲ್ ಕೆಕಾ 15'ಗಳ ಸುತ್ತಮುತ್ತ ಈ ಹೊಸ ಸೌರ ಮಂಡಲವನ್ನು ಕಾಣಬಹುದೆಂದು ಪ್ರಕಟಿಸಿದರು. ಈ ಸೌರ ಮಂಡಲವು ತಾರಸ್ ನಕ್ಷತ್ರದ ರಚನಾ ಪ್ರದೇಶದಲ್ಲಿದ್ದು ಕೇವಲ 450 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಇದೆ ಎಂದು ಸಂಶೋಧಕರನ್ನು ಉಲ್ಲೇಖಿಸಿ ವಾಷಿಂಗ್ಟನ್ನಿನ ವಿಜ್ಞಾನ ಪತ್ರಿಕೆಯೊಂದು ವರದಿ ಮಾಡಿತು.

2007: ಮಧ್ಯ ಟರ್ಕಿಯ ಕೆಸಿಬೊರ್ಲು ನಗರದ ಬಳಿ ಅಟ್ಲಾಸ್ ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟು 56 ಮಂದಿ ಮೃತರಾದರು. 7 ಸಿಬ್ಬಂದಿ ಹಾಗೂ 49 ಪ್ರಯಾಣಿಕರನ್ನು ಹೊತ್ತು ಇಸ್ತಾಂಬುಲ್ ನಿಂದ ಇಸ್ಪಾರ್ತ ನಗರಕ್ಕೆ ಹೊರಟಿದ್ದಾಗ ಈ ಎಂಡಿ 83 ಜೆಟ್ ಲೈನರ್ ಅಪಘಾತಕ್ಕೀಡಾಯಿತು.

2006: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಬೇಡ್ಕರ್ ವಿಗ್ರಹ ವಿರೂಪ ಘಟನೆಗೆ ಪ್ರತಿಕ್ರಿಯೆಯಾಗಿ ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ, ಗೋಲಿಬಾರಿಗೆ ನಾಲ್ವರು ಬಲಿಯಾದರು.

2006: ಮುಸ್ಲಿಂ ಸಮುದಾಯವು ಸೌಲಭ್ಯ ವಂಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ರಾಜಿಂದರ್ ಸಾಚಾರ್ ಸಮಿತಿಯು  ಮುಸ್ಲಿಂ ಸಮುದಾಯದ ಹಿಂದುಳಿದ ವರ್ಗಕ್ಕೆ ಮೀಸಲು ನೀಡಲು ಮತ್ತು ಸಮಾನಾವಕಾಶ ನೀಡಲು ಆಯೋಗ ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಮುಸ್ಲಿಮರು ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 4.9, ರಕ್ಷಣಾ ಪಡೆಗಳಲ್ಲಿ ಶೇಕಡಾ 3.2ರಷ್ಟಿದ್ದರೆ, 543 ಸಂಸದರಲ್ಲಿ ಮುಸ್ಲಿಂ ಸಂಸದರ ಸಂಖ್ಯೆ 33 ಮಾತ್ರ ಎಂದು ಸಮಿತಿ ಹೇಳಿತು.

2005: ಪಕ್ಷದ ವರಿಷ್ಠ ಮಂಡಳಿ ವಿರುದ್ಧ ಬಂಡೆದ್ದ ಉಮಾಭಾರತಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಯಿತು.

2005: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಒರಿಸ್ಸಾದ ಬಾಲಸೋರಿನಿಂದ 15 ಕಿ.ಮೀ ದೂರದಲ್ಲಿ ಸಮುದ್ರ ಮಧ್ಯೆ ನಿರ್ಮಿಸಲಾದ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸೇನೆಯ ಮೂರೂ ವಿಭಾಗಗಳಲ್ಲಿ ಬಳಸಬಹುದಾದ 8 ಮೀಟರ್ ಎತ್ತರದ ಈ ಕ್ಷಿಪಣಿಯು 2-3 ಟನ್ ಸಾಂಪ್ರದಾಯಿಕ ಸಿಡಿತಲೆಯನ್ನು ಹೊತ್ತು 290 ಕಿ.ಮೀ. ದೂರ ಚಲಿಸಬಲ್ಲುದು. ಇದು ಶಬ್ಧದ ವೇಗಕ್ಕಿಂತ 2.8ರಿಂದ 3 ಪಟ್ಟು ವೇಗವಾಗಿ ಹಾರಾಟ ನಡೆಸಬಲ್ಲುದು.

2000: ಬಾಹ್ಯಾಕಾಶ ಷಟಲ್ ನೌಕೆ ಎಂಡೇವರ್ `ಸೌರ ರೆಕ್ಕೆ'ಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿತು. ಈ ಸೌರರೆಕ್ಕೆಗಳು ಇಡೀ ನಿಲ್ದಾಣಕ್ಕೆ ಬೇಕಾದ ವಿದ್ಯುತ್ ಒದಗಿಸಬಲ್ಲವು.
1999: ಭಾರತದ ಸಮಾಜ ವಿಜ್ಞಾನಿ ಎಂ.ಎನ್. ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

1956: ಫ್ಲಾಯ್ಡ್ ಪ್ಯಾಟ್ಟರ್ಸನ್ ಅವರು ವಿಶ್ವ ಹೆವಿವೇಯ್ಟ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷಿಕಾಗೋದಲ್ಲಿ ಆರ್ಚೀ ಮೂರ್ ಅವರನ್ನು ಪರಾಭವಗೊಳಿಸುವ ಮೂಲಕ ಅವರು ಈ ಪ್ರಶಸ್ತಿಗೆ ಪಾತ್ರರಾದರು.

1940: ಸಾಹಿತಿ ಎಚ್. ಆರ್. ಇಂದಿರಾ ಜನನ.

1940: ಸಾಹಿತಿ ಸರೋಜ ತುಮಕೂರು ಜನನ.

1939: ಸಾಹಿತಿ ಎಸ್. ಸಿದ್ಧಲಿಂಗಪ್ಪ ಜನನ.

1925: ಪ್ರಗತಿಶೀಲ ಬರಹಗಾರ ಅನಂತನಾರಾಯಣ (30-11-1925ರಿಂದ 25-8-1992) ಅವರು ಆರ್. ಸದಾಶಿವಯ್ಯ- ರಂಗಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1900: ಐರಿಷ್ ಸಾಹಿತಿ, ನಾಟಕಕಾರ ಆಸ್ಕರ್ ವೈಲ್ಡ್ ತಮ್ಮ 46ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತರಾದರು. ಈ ವೇಳೆಯಲ್ಲಿ ಅವರು ಕಡು ಬಡತನದಿಂದ ನಲುಗಿದ್ದರು.

1874: ಇಂಗ್ಲೆಂಡಿನ ಮಾಜಿ ಪ್ರಧಾನಿ ಸರ್ ವಿನ್ ಸ್ಟನ್ ಚರ್ಚಿಲ್ (1874-1965) ಹುಟ್ಟಿದ ದಿನ.

1858: ಭಾರತೀಯ ಸಸ್ಯತಜ್ಞ ಹಾಗೂ ಭೌತವಿಜ್ಞಾನಿ ಸರ್ ಜಗದೀಶ ಚಂದ್ರ ಬೋಸ್ (1858-1937) ಜನ್ಮದಿನ. ಸಸ್ಯ ಹಾಗೂ ಪ್ರಾಣಿಗಳ ಜೀವಕೋಶಗಳು ಏಕಪ್ರಕಾರವಾಗಿ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಅತ್ಯಂತ ಸೂಕ್ಷ್ಮಗ್ರಾಹಿ ಉಪಕರಣವನ್ನು ಸಂಶೋಧಿಸಿದವರು ಇವರು. ಮೈಕ್ರೋ ಅಲೆಗಳು ಹಾಗೂ ರೇಡಿಯೋ ಅಲೆಗಳನ್ನು ಉತ್ಪಾದಿಸುವ ಮೈಕ್ರೋವೇವ್ ಉಪಕರಣವನ್ನು ಮೊತ್ತ ಮೊದಲ ಬಾರಿಗೆ ನಿರ್ಮಿಸಿ ಸಾರ್ವಜನಿಕವಾಗಿಪ್ರದರ್ಶಿಸಿದವರೂ ಇವರೇ. ವೈರ್ ಲೆಸ್ ಟೆಲಿಗ್ರಾಫಿಯ ಜನಕ ಮಾರ್ಕೋನಿ ಅಲ್ಲ, ಈ  ಗೌರವ ಮೈಕ್ರೋವೇವ್ ಉಪಕರಣ ಸಂಶೋಧಿಸಿದ ಬೋಸ್ ಅವರಿಗೆ ಸಲ್ಲಬೇಕು ಎಂಬ ವಾಸ್ತವಕ್ಕೆ ಈಗ ಬೆಲೆ ಸಿಗತೊಡಗಿದೆ. ಆದರೆ ವೈರ್ ಲೆಸ್ ಟೆಲಿಗ್ರಾಫಿಗೆ ಪೇಟೆಂಟ್ ಪಡೆದದ್ದು ಮಾರ್ಕೋನಿ.

1835: ಮಾರ್ಕ್ ಟ್ವೇನ್ ಎಂದೇ ಜನಪ್ರಿಯರಾಗಿದ್ದ ಖ್ಯಾತ ಕಾದಂಬರಿಕಾರ ಸ್ಯಾಮ್ಯುಯೆಲ್ ಲಾಂಗ್ಹೋರ್ನ್ ಕ್ಲೆಮೆನ್ಸ್ (1835-1910) ಹುಟ್ಟಿದ ದಿನ.

1667: `ಗಲಿವರ್ಸ್ ಟ್ರಾವಲ್ಸ್' ಪ್ರವಾಸ ಕಥನದಿಂದ ವಿಶ್ವವ್ಯಾಪಿ ಖ್ಯಾತಿ ಗಳಿಸಿದ ಆಂಗ್ಲೊ ಐರಿಷ್ ಸಾಹಿತಿ ಜೊನಾಥನ್ ಸ್ವಿಫ್ಟ್ (1667-1745) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, December 25, 2009

ಇಂದಿನ ಇತಿಹಾಸ History Today ನವೆಂಬರ್ 29

ಇಂದಿನ ಇತಿಹಾಸ

ನವೆಂಬರ್ 29

ಕಂಪೆನಿಯ ಮುಖ್ಯಸ್ಥರ ವಿರುದ್ಧ ಜನಾಂಗೀಯ ನಿಂದನೆ ಆರೋಪ ದಾಖಲಿಸಿದ್ದ ಭಾರತೀಯ ಮೂಲದ ಕಾಲ್ ಸೆಂಟರ್ ಉದ್ಯೋಗಿ ನಾರ್ಥ್ಯಾಂಪ್ಟನ್  ನಿವಾಸಿ ಚೇತನ್ ಕುಮಾರ್ ಮೆಶ್ರಾಮ್ ಅವರಿಗೆ ಪರಿಹಾರವಾಗಿ 5 ಸಾವಿರ ಪೌಂಡುಗಳನ್ನು ನೀಡಲು ಸಂಬಂಧಿಸಿದ ಕಂಪೆನಿಗೆ ನಾರ್ಥ್ಯಾಂಪ್ಟನ್ ಜನಾಂಗೀಯ ಸಮಾನತೆ ಮಂಡಳಿ ಲಂಡನ್ನಿನಲ್ಲಿ ಆದೇಶಿಸಿತು.

2014: ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ವಿುಸಿರುವ ಡಾ. ರಾಜ್ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಈದಿನ ಲೋಕಾರ್ಪಣೆ ಮಾಡಿದರು. ಸಮಾಧಿಯಿಂದ ತುಸು ದೂರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಡಾ. ರಾಜ್ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯಿತು. ಡಾ. ರಾಜ್​ಕುಮಾರ್ ನಡೆದು ಬಂದ ಹಾದಿ ಚಿತ್ರ ಸಂಪುಟ ಪುಸ್ತಕವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದರು ಮತ್ತು ರಾಜ್​ಕುಮಾರ್ ಕುರಿತ ಸಾಕ್ಷ್ಯಚಿತ್ರವನ್ನು ಮೆಗಾಸ್ಟಾರ್ ಚಿರಂಜೀವಿ ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಚಿತ್ರರಂಗದ ಗಣ್ಯರು ಹಾಜರಿದ್ದರು.

2014: ಕೈರೋ: ಈಜಿಪ್ಟಿನ ಪದಚ್ಯುತ ಅಧ್ಯಕ್ಷ ಹೊಸ್ನಿ ಮುಬಾರಕ್‌ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತು. 2011ರಲ್ಲಿ ನಡೆದ ಕ್ಷಿಪ್ರಕ್ರಾಂತಿಯ ವೇಳೆ ನೂರಾರು ಪ್ರತಿಭಟನಕಾರರನ್ನು ಹತ್ಯೆಗೈದ ಆರೋಪವನ್ನು ಮುಬಾರಕ್‌ ವಿರುದ್ಧ ಹೊರಿಸಲಾಗಿತ್ತು. ಈ ಹಿಂದೆ ನ್ಯಾಯಾಲಯ ಮುಬಾರಕ್‌ ವಿರುದ್ಧದ ಆರೋಪವನ್ನು ಎತ್ತಿ ಹಿಡಿದು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದೇ ವೇಳೆ ಮುಬಾರಕ್‌ ಅವರ
ಕಮಾಂಡರ್‌ಗಳನ್ನೂ ದೋಷಮುಕ್ತಿಗೊಳಿಸಿರುವ ನ್ಯಾಯಾಧೀಶ ಕಾಮೆಲ್‌ ಅಲ್‌-ರಶೀದ್ ಅವರು ಇಸ್ರೇಲಿಗೆ ಗ್ಯಾಸ್‌ನ್ನು ರಫ್ತು ಮಾಡಿದ ಹಿನ್ನೆಲೆಯಲ್ಲಿ ಹೊರಿಸಲಾಗಿದ್ದ ಭಷ್ಟಾಚಾರ ಪ್ರಕರಣದಲ್ಲಿಯೂ ಮುಬಾರಕ್‌ ಅವರನ್ನು ನಿರ್ದೋಷಿ ಎಂದು ಸಾರಿದರು. ಹೋಸ್ನಿ ಮುಬಾರಕ್‌ ಅವರ ಸಂಪುಟದಲ್ಲಿ ಒಳಾಡಳಿತ ಖಾತೆಯ ಸಚಿವರಾಗಿದ್ದ ಹಬೀಬ್‌ ಅಲ್‌-ಅಡ್ಲಿà ಸೇರಿದಂತೆ ಮುಬಾರಕ್‌ ಅವರ ಏಳು ಮಂದಿ ಮಾಜಿ ಕಮಾಂಡರ್‌ಗಳ ವಿರುದ್ಧ ದಾಖಲಿಸಲಾಗಿದ್ದ ಸರಕಾರ ವಿರೋಧಿ ಪ್ರತಿಭಟನಕಾರರ ಹತ್ಯೆ ಪ್ರಕರಣದಲ್ಲಿ ಅಮಾಯಕರಾಗಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿತ್ತರು. ಮುಬಾರಕ್‌ ಅವರ ಈರ್ವರು ಪುತ್ರರ ವಿರುದ್ಧ ದಾಖಲಾಗಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳಿಂದಲೂ ನ್ಯಾಯಾಲಯ ದೋಷಮುಕ್ತಗೊಳಿಸಿತು. 2011ರಲ್ಲಿ ನಡೆದ ಕ್ರಾಂತಿಯ ವೇಳೆ ಸರಕಾರ ವಿರೋಧಿ ಪ್ರತಿಭಟನಕಾರರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಜೂನ್‌ನಲ್ಲಿ ಮುಬಾರಕ್‌ ಮತ್ತವರ ಸಹಚರರನ್ನು ದೋಷಿಗಳೆಂದು ಸಾರಿದ್ದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಮುಬಾರಕ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ನ್ಯಾಯಾಲಯ ಪುರಸ್ಕರಿಸಿ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ್ದೇ ಅಲ್ಲದೆ ದೋಷಮುಕ್ತಗೊಳಿಸಿತು. ಆದರೆ ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಮುಬಾರಕ್‌ ಇದೀಗ ದಕ್ಷಿಣ ಕೈರೋದ ಹೊರಭಾಗದಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

2014: ರಾಯ್ಸೆನ್: ಮಧ್ಯಪ್ರದೇಶದ ಭೋಪಾಲ್​ನ ರಾಯ್ಸೆನ್ ಕೈಗಾರಿಕಾ ಪ್ರದೇಶದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 39 ಕಾರ್ವಿುಕರು ಅಸ್ವಸ್ಥಗೊಂಡ ಘಟನೆ ಈದಿನ ಮಧ್ಯಾಹ್ನ ಘಟಿಸಿತು. ಘಟನೆಯಲ್ಲಿ ಅಸ್ವಸ್ಥಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೃಷ್ಟಿಯ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎನ್ನಲಾಯಿತು. ಅನಿಲ ಸೋರಿಕೆಯಾಗಿ ಕೆಲ ಗಂಟೆಗಳಲ್ಲೇ ಕಣ್ಣು ಉರಿ ಮತ್ತು ವಾಂತಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಕಾರ್ವಿುಕರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.

2014: ಬೀಜಿಂಗ್: ಕ್ಸಿನ್​ಜಿಯಾಂಗ್​ನ ವಾಯವ್ಯ ಭಾಗದಲ್ಲಿರುವ ಸಾಕೆ ಕೌಂಟಿಯಲ್ಲಿ ಉಗ್ರಗಾಮಿಗಳ ಬಾಂಬ್ ದಾಳಿಯಲ್ಲಿ ದಾಳಿಕೋರರು ಸೇರಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. 10ಕ್ಕೂ ಹೆಚ್ಚು ಮಂದಿ ತೀವ್ರವಾಗಿ  ಗಾಯಗೊಂಡರು. ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ದಾಳಿಕೋರರು ಜನಸೇರುವ ಸಮಯ ನೋಡಿ ಈ ಕೃತ್ಯವೆಸಗಿದರು. ದಾಳಿಯಲ್ಲಿ ಸಾವನ್ನಪ್ಪಿರುವವರಲ್ಲಿ 10ಕ್ಕೂ ಹೆಚ್ಚು ಮಂದಿ ದಾಳಿಕೋರರು ಸೇರಿದ್ದಾರೆ ಎನ್ನಲಾಯಿತು. ಉಯಿಗರ್ ಮುಸ್ಲಿಮ ಸಮೂದಾಯದವರೇ ಹೆಚ್ಚಿರುವ ಈ ಭಾಗದಲ್ಲಿ ವಲಸಿಗರಾದ ಹಾನ್ ಚೀನಿಸ್ ಮತ್ತು ಸ್ಥಳೀಯರ ನಡುವೆ ಸಂಘರ್ಷವಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಯಿತು. ಈಸ್ಟ್ ಟರ್ಕಿಸ್ಥಾನ್ ಇಸ್ಲಾಮಿಕ್ ಕೂಡ ಹಿಂಸಾತ್ಮಕ ದಾಳಿ ನಡೆಸಿದ ಉದಾಹರಣೆಗಳಿದ್ದು, ಈಗ ಈ ಸಂಘಟನೆ ಕೂಡ ನಡೆಸಿರಬಹುದಾದ ಸಾಧ್ಯತೆ ಇದೆ ಎಂದು ಶಂಕಿಸಲಾಯಿತು.

2014:ನವದೆಹಲಿ: ಹಾಡಹಗಲೇ ಖಾಸಗಿ ಬ್ಯಾಂಕ್​ನ ವಾಹನದ ಮೇಲೆ ದಾಳಿ ನಡೆಸಿದ ದುಷ್ಕರ್ವಿುಗಳು 1.5 ಕೋಟಿಯಷ್ಟು ಹಣವನ್ನು ದೋಚಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ದೆಹಲಿಯ ಪ್ರಮುಖ ನಗರಗಳಲ್ಲಿ ನಾಕಾಬಂದಿ ಹಾಕಲಾಯಿತು. ಘಟನೆ ಜನತೆಯಲ್ಲಿ ಸಾಕಷ್ಟು ಭಯ ಹುಟ್ಟಿಸಿತು. ಎಟಿಎಂಗೆ ಹಣ ಭರ್ತಿ ಮಾಡಲೇಂದು ಬಂದಿದ್ದ ವಾಹನದ ಮೇಲೆ ದಾಳಿ ನಡೆಸಿದ ದರೋಡೆಕೋರರು ತಡೆಯಲು ಬಂದ ಬ್ಯಾಂಕ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಆದರೂ ಜೀವದ ಹಂಗಿಲ್ಲದೇ ಅವರನ್ನು ತಡೆಯಲು ಮುಂದಾದಾಗ ಹಠಾತ್ ಗುಂಡಿನ ದಾಳಿ ನಡೆಸಿ ಅಂದಾಜು ಒಂದುವರೆ ಕೋಟಿ ರೂ. ದೋಚಿ ಪರಾರಿಯಾದರು


2014: ಹುಬ್ಬಳ್ಳಿ:  ಹುಬ್ಬಳ್ಳಿ ನಗರದ ಚುಕ್​ಬುಕ್ ಸಂಸ್ಥೆಯಿಂದ ಜೂ.28ರಂದು ಆಯೋಜಿಸಿದ್ದ ದೇಶದ ಅತೀ ಉದ್ದನೆಯ ಮಕ್ಕಳ ರೈಲು ಬಂಡಿಯು 2015ರ ಲಿಮ್ಕಾ ರಾಷ್ಟ್ರೀಯ ದಾಖಲೆ ಪುಸ್ತಕದ ಪ್ರಶಂಸೆಗೆ ಪಾತ್ರವಾಯಿತು. ನಗರದ ವಿವಿಧ ಶಾಲೆಗಳ 6ರಿಂದ 12 ವರ್ಷದ 1,600 ಮಕ್ಕಳು ಗೋಕುಲ ರಸ್ತೆಯಲ್ಲಿ 700 ಮೀ. ಉದ್ದದ ರೈಲಿನಂತೆ ಸಂಚರಿಸಿ ಈ ಸಾಧನೆಗೆ ಕಾರಣರಾಗಿದ್ದಾರೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಅರುಣ ಚಿಕ್ಕೊಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಮಕ್ಕಳ ಒಳ ಉಡುಪುಗಳ ತಯಾರಿಕೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಚುಕ್​ಬುಕ್ ಸಂಸ್ಥೆ ಈ ವಿಶಿಷ್ಟ ಕಾರ್ಯಕ್ರಮ ಮೂಲಕ ಹುಬ್ಬಳ್ಳಿಗೆ ಕೀರ್ತಿ ತಂದಿದ್ದು, ಇನ್ನು ಮುಂದೆ ಸಂಸ್ಥೆಯ ಲಾಭಾಂಶದಲ್ಲಿ ಶೇ.10 ಹಣವನ್ನು ಸಮಾಜ ಸೇವೆಗೆ ಮೀಸಲಿಡಲಾಗುವುದು ಎಂದು ಚಿಕ್ಕೊಪ್ಪ ಹೇಳಿದರು.

2014: ಬೆಂಗಳೂರು: ಬೆಲ್ಜಿಯಂನ ವೆಂಡಿ ಜಾನ್ಸ್ ಐಬಿಎಸ್​ಎಫ್ ವಿಶ್ವ ಸ್ನೂಕರ್ ಚಾಂಪಿಯನ್​ಷಿಪ್​ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರಿಂದ ವೆಂಡಿ ಜಾನ್ಸ್ 3ನೇ ಬಾರಿಗೆ ವಿಶ್ವ ಸ್ನೂಕರ್ ಚಾಂಪಿಯನ್ ಕಿರೀಟಕ್ಕೆ ಮುತ್ತಿಕ್ಕಿದರು. ಈ ಮೊದಲು 2006 ಹಾಗೂ 2012ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಈದಿನ ನಡೆದ 7 ಫ್ರೇಮ್ಳ ಫೈನಲ್ ಪಂದ್ಯದಲ್ಲಿ ವೆಂಡಿ ಜಾನ್ಸ್ 5-2 (31-76, 72-2, 25-65, 74-35, 72-32, 82-23, 60-31)ರಿಂದ ರಷ್ಯಾದ ಅನಾಸ್ತೇಷಿಯಾ ನೆಚಾವೆಯಾ ವಿರುದ್ಧ ಜಯ ಸಾಧಿಸಿದರು. 1998ರಿಂದಲೂ ಬೆಲ್ಜಿಯಂನ ಸ್ನೂಕರ್​ನಲ್ಲಿ ಪಾರಮ್ಯ ಮೆರೆಯುತ್ತಿರುವ ವೆಂಡಿ ಜಾನ್ಸ್, ಅಲ್ಲಿನ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ಸತತವಾಗಿ 4 ಬಾರಿಗೆ ಸೇರಿದಂತೆ ಒಟ್ಟು 12 ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದಾರೆ.

2014: ಇಸ್ಲಾಮಾಬಾದ್‌: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿನ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನಿ ವಾಯುಪಡೆಯ ಸಮರ ವಿಮಾನಗಳು ನಡೆಸಿದ ವಾಯು ದಾಳಿಗಳಿಗೆ ಕನಿಷ್ಠ 11 ಉಗ್ರರು ಬಲಿಯಾದರು. ಖೈಬರ್‌ ಬುಡಕಟ್ಟು ಜಿಲ್ಲೆಯ ತಿರಾಹ್‌ ಕಣಿವೆ ಪ್ರದೇಶದಲ್ಲಿನ ತಾಲಿಬಾನಿಗಳೊಂದಿಗೆ ನಂಟು ಹೊಂದಿರುವ ಉಗ್ರರ ಹಲವು ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನ ಸೇನೆಯ ಸಮರ ವಿಮಾನಗಳು ದಾಳಿ ನಡೆಸಿದುವು. ತಾರಿಕ್‌ ಅಫ್ರಿದಿ ಉಗ್ರಗಾಮಿ ಗುಂಪಿಗೆ ಸೇರಿದ ಎಂಟು ಮಂದಿ ಉಗ್ರರು ಮತ್ತು ಲಷ್ಕರೆ ಇಸ್ಲಾಮ್‌ಗೆ ಸೇರಿದ ಮೂವರು ಉಗ್ರರು ಈ ದಾಳಿಯಲ್ಲಿ ಹತರಾದರು. ಈ ಪ್ರದೇಶದಲ್ಲಿನ ಉಗ್ರರ ಹಲವಾರು ಅಡಗುದಾಣಗಳನ್ನು ಸಂಪೂರ್ಣವಾಗಿ ನಾಶ ಪಡಿಸಲಾಗಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದರು.

2008: ಎರಡೂವರೆ ದಿನಗಳ ಕಾಲ ಮುಂಬೈ ಮಹಾನಗರವನ್ನು ಭಯದ ನೆರಳಿಗೆ ತಳ್ಳಿದ್ದ ಭಯೋತ್ಪಾದಕರನ್ನು ಸತತ ಕಾರ್ಯಾಚರಣೆ ಬಳಿಕ ಈದಿನ ಬೆಳಿಗ್ಗೆ 8ರ ಹೊತ್ತಿಗೆ ಸಂಪೂರ್ಣ ಸದೆ ಬಡಿಯುವಲ್ಲಿ ಕಮಾಂಡೋಗಳು ಯಶಸ್ವಿಯಾದರು. ಅಮೆರಿಕದ ಅವಳಿ ಕಟ್ಟಡ ನಾಶದ ರೀತಿಯಲ್ಲಿ ತಾಜ್ ಹೋಟೆಲನ್ನೇ ಸಂಪೂರ್ಣ ಧ್ವಂಸಗೊಳಿಸುವ ಮತ್ತು ಕನಿಷ್ಠ 5 ಸಾವಿರ ಜನರನ್ನು ಕೊಲ್ಲುವ ಹುನ್ನಾರವನ್ನು ಉಗ್ರರು ರೂಪಿಸಿದ್ದು ಇದರೊಂದಿಗೇ ಬಯಲಿಗೆ ಬಂತು. ತಾಜ್ ಹೋಟೆಲಿನಲ್ಲಿ ಕೇವಲ ಒಬ್ಬ ಉಗ್ರ ಮಾತ್ರ ಇದ್ದಾನೆ ಎಂಬ ನಂಬಿಕೆಯನ್ನು ಹುಸಿಗೊಳಿಸಿ, ಮೂವರು ಉಗ್ರರನ್ನು ಅತ್ಯಂತ ಯೋಜನಾ ಬದ್ಧವಾಗಿ ಮುಗಿಸುತ್ತ ಬಂದ ಎನ್‌ಎಸ್‌ಜಿ ಕಮಾಂಡೋಗಳು, ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ವಿಜಯದ ನಗೆ ಬೀರಿದರು. ಉಗ್ರರ ಅಟ್ಟಹಾಸಕ್ಕೆ ಸಿಲುಕಿ 22 ಮಂದಿ ವಿದೇಶಿಯರು, 15 ಮಂದಿ ಮಹಾರಾಷ್ಟ್ರ ಪೊಲೀಸರು, ಇಬ್ಬರು ಎನ್‌ಎಸ್‌ಜಿ ಕಮಾಂಡೋಗಳು, 141 ಮಂದಿ ನಾಗರಿಕರ ಸಹಿತ ಒಟ್ಟು 183 ಮಂದಿ ಪ್ರಾಣ ಕಳೆದುಕೊಂಡು 327 ಮಂದಿ ಗಾಯಗೊಂಡರು.

2008: ಮುಂಬೈ ನಗರದಲ್ಲಿ ನಡೆದ 60 ಗಂಟೆಗಳ ಕಾಲದ ಭಯೋತ್ಪಾದನಾ ದಾಳಿಯಿಂದಾಗಿ, ದೇಶದ ಈ ವಾಣಿಜ್ಯ ರಾಜಧಾನಿಗೆ ರೂ 4000 ಕೋಟಿ ಯಷ್ಟು ನಷ್ಟದ ಹೊಡೆತ ಬಿದ್ದಿದೆ ಎಂದು  ಉದ್ಯಮ ಪರಿಣತರು ತಿಳಿಸಿದರು.

2008: ಕರ್ನಾಟಕ ರಾಜ್ಯವನ್ನು ತಲ್ಲಣಗೊಳಿಸಿದ್ದ 2000ನೇ ಇಸವಿಯ ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿ 11 ಆರೋಪಿಗಳಿಗೆ ಮರಣದಂಡನೆ ವಿಧಿಸಿತು. ಉಳಿದ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎಸ್.ಎಂ.ಶಿವನಗೌಡರ್ ತೀರ್ಪು ನೀಡಿದರು. ಭಯೋತ್ಪಾದನೆ ಪ್ರಕರಣದಲ್ಲಿ 11 ಮಂದಿಗೆ ಮರಣದಂಡನೆ ವಿಧಿಸಿರುವುದು ಇದೇ ಮೊದಲು. ದೀನದಾರ್ ಅಂಜುಮನ್ ಸಂಘಟನೆಯ ಸದಸ್ಯರಾದ ಆರೋಪಿಗಳು ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿಯ ಇಗರ್ಜಿಗಳಲ್ಲಿ (ಚರ್ಚ್) ಸ್ಫೋಟ ನಡೆಸಿದ್ದರು. ಶಿಕ್ಷೆಗೆ ಒಳಗಾದವರ ವಿರುದ್ಧ ಭಾರತೀಯ ದಂಡ ಸಂಹಿತೆಯ 121 (ದೇಶದ ವಿರುದ್ಧ ಸಮರ) ಮತ್ತು ಇತರ ಕಲಮುಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. 'ಇದೊಂದು ಐತಿಹಾಸಿಕ ತೀರ್ಪು. ಇದರ ಮೂಲಕ ಸಮಾಜಘಾತುಕರಿಗೆ ನ್ಯಾಯಾಧೀಶರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಮುಂಬೈ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವದ್ದು' ಎಂದು ವಿಶೇಷ ಪಬಿಕ್ಲ್ ಪ್ರಾಸೆಕ್ಯೂಟರ್ ಎಚ್.ಎನ್. ನಿಲೋಗಲ್ ಹೇಳಿದರು. ಸರಣಿ ಇಗರ್ಜಿ (ಚರ್ಚ್) ಸ್ಪೋಟ ಪ್ರಕರಣದ ತನಿಖಾ ತಂಡಕ್ಕೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದೂ ಅವರು ಹೇಳಿದರು. ಹಾಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಶ್ರೀಕುಮಾರ್, ಗುಪ್ತಚರದಳ ಎಡಿಜಿಪಿ ಜ್ಯೋತಿ ಪ್ರಕಾಶ್ ಮಿರ್ಜಿ, ಸಿಓಡಿ ಐಜಿಪಿ ಎಚ್.ಸಿ.ಕಿಶೋರಚಂದ್ರ, ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್.ಪೂಜಾರ್, ಮೈಸೂರು ನಗರ (ಕಾನೂನು ಮತ್ತು ಸುವ್ಯವಸ್ಥೆ) ಡಿಸಿಪಿ ವಿ.ಎಸ್.ಡಿಸೋಜ, ಗುಪ್ತದಳ ಮಂಗಳೂರು ಎಸ್ಪಿ ಮಹಂತೇಶ್, ನಿವೃತ್ತ ಡಿವೈಎಸ್ಪಿ ಹಿರೇಮಠ್, ನಿವೃತ್ತ ಎಸ್ಪಿ ಅಪ್ಪಣ್ಣ ಅವರ ತಂಡ ಪ್ರಕರಣದ ತನಿಖೆ ನಡೆಸಿತ್ತು. ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣಕ್ಕೆ ಮರಣದಂಡನೆಗೆ ಗುರಿಯಾದವರು: ಬೆಂಗಳೂರಿನ ಮಹಮ್ಮದ್ ಇಬ್ರಾಹಿಂ (40), ಅಮಾನತ್ ಹುಸೇನ್ ಮುಲ್ಲಾ (58), ಚಿಕ್ಕಬಳ್ಳಾಪುರದ ಅಬ್ದುಲ್ ರಹಮಾನ್ ಸೇಠ್ (50), ಹುಬ್ಬಳ್ಳಿಯ ಸೈಯದ್ ಮುನಿರುದ್ದೀನ್ ಮುಲ್ಲಾ (40), ಆಂಧ್ರಪ್ರದೇಶದವರಾದ ಹಸ್ನುಜಾಮಾ (55), ಶೇಖ್ ಹಷಂ ಅಲಿ (30), ಮಹಮ್ಮದ್ ಶಫುದ್ದೀನ್ (37), ಮಹಮ್ಮದ್ ಅಖಿಲ್ ಅಹಮ್ಮದ್ (29), ಇಜಹಾರ್ ಬೇಗ್ (32), ಸೈಯದ್ ಅಬ್ಬಾಸ್ ಅಲಿ (28), ಮಹಮ್ಮದ್ ಖಾಲಿದ್ ಚೌದರಿ (32). ಜೀವಾವಧಿ ಶಿಕ್ಷೆಗೆ ಗುರಿಯಾದವರು: ಚಿಕ್ಕಬಳ್ಳಾಪುರದ ಮಹಮ್ಮದ್ ಸಿದ್ದಿಕಿ (45), ಆಂಧ್ರಪ್ರದೇಶದ ಮಹಮ್ಮದ್ ಡಿ ಫಾರೂಕ್ ಅಲಿ (30), ಅಬ್ದುಲ್ ಹಬೀಬ್ (48), ಷಂಷುಜಮಾ (49), ಶೇಖ್ ಫರ್ದೀನ್ ವಲಿ (45), ಸೈಯದ್ ಅಬ್ದುಲ್ ಖಾದರ್ ಜಿಲಾನಿ (36), ಮಹಮ್ಮದ್ ಜಿಯಾಸುದ್ದೀನ್ (35), ಹುಬ್ಬಳ್ಳಿಯ ರಿಷ್ ಹಿರೇಮಠ್ (40), ಕೊಕಟನೂರಿನ ಬಷೀರ್ ಅಹಮ್ಮದ್ (52), ಮಹಾರಾಷ್ಟ್ರದ ಮಹಮ್ಮದ್ ಹುಸೇನ್ (45), ಭಟಕುರ್ಕಿಯ ಸಾಂಗಿ ಬಲಬಾಷಾ (45) ಮತ್ತು ಮೀರಾಸಾಬ್ ಕೌಜಲಗಿ (49). ತಲೆಮರೆಸಿಕೊಂಡ ಭಯೋತ್ಪಾದಕರು: ಜಿಯಾವುಲ್ ಹಸನ್ ಮತ್ತು ಆತನ ಮಕ್ಕಳಾದ ಸೈಯದ್ ಖಾಲಿದ್ ಪಾಷಾ, ಜಯೇದ್ ಉಲ್ ಹಸನ್, ಶಬಿ ಉಲ್ ಹಸನ್, ಖಲೀಲ್ ಪಾಷಾ ಇವರು ಪಾಕಿಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ನಂಬಲಾಯಿತು. ಶೇಖ್ ಅಮಿರ್ ಮತ್ತು ಚಾಹಬ್ ಸಹ ನಾಪತ್ತೆಯಾದವರಲ್ಲಿ ಒಬ್ಬ.

2008: ನಿಶಾ ಚಂಡ ಮಾರುತದ ಪರಿಣಾಮವಾಗಿ  ತಮಿಳುನಾಡಿನಲ್ಲಿ ಐದು ದಿನಗಳಿಂದ ಸುರಿದ ಭಾರಿ  ಮಳೆಗೆ ಈವರೆಗೆ  ಒಟ್ಟು 103 ಜೀವಗಳು ಬಲಿಯಾಗಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿದರು. ಭಾರಿ ಮಳೆಗೆ 450ಕ್ಕೂ ಹೆಚ್ಚು ಜಾನುವಾರುಗಳೂ ಪಾಣ ಕಳೆದುಕೊಂಡಿದ್ದು, 50,890 ಮನೆಗಳು ಹಾನಿಗೊಂಡಿವೆ ಎಂದು ಅವರು ನುಡಿದರು.

2008: ಬ್ರೆಜಿಲ್ ದೇಶಾದ್ಯಂತ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 100ಕ್ಕೆ ಏರಿತು.

2008:  ದಕ್ಷಿಣ ಆಫ್ಘಾನಿಸ್ಥಾನದಲ್ಲಿ ಆಫ್ಘನ್ ಯೋಧರು ಹಾಗೂ ಅಮೆರಿಕ ನೇತೃತ್ವದ ಜಂಟಿ ಪಡೆಗಳು ನಡೆಸಿದ ವಾಯು ಮತ್ತು ಭೂಮಿಯ ಮೇಲಿನ ದಾಳಿಗಳಲ್ಲಿ  ಒಬ್ಬ ಕಮಾಂಡರ್ ಸೇರಿದಂತೆ 53 ತಾಲಿಬಾನ್ ಉಗ್ರರು ಮೃತರಾದರು.

2007: ಪಾಕಿಸ್ಥಾನದ ಅಧ್ಯಕ್ಷರಾಗಿ ಜನರಲ್ ಪರ್ವೇಜ್ ಮುಷರಫ್ ಅವರು ಸತತ ಎರಡನೇ ಅವಧಿಗಾಗಿ ಇಸ್ಲಾಮಾಬಾದಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐವಾನ್- ಎ -  ಅಧ್ಯಕ್ಷರ ಅರಮನೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗರ್ ಅವರು ಮುಷರಫ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. ಅಂತಾರಾಷ್ಟ್ರೀಯ ಹಾಗೂ ದೇಶದಲ್ಲಿ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮುಷರಫ್ ಅವರು ಇದಕ್ಕೆ ಒಂದು ದಿನ ಮೊದಲು ಸೇನಾ ಮುಖ್ಯಸ್ಥನ ಹುದ್ದೆಯನ್ನು ತೊರೆದಿದ್ದರು.

2007: ಕಂಪೆನಿಯ ಮುಖ್ಯಸ್ಥರ ವಿರುದ್ಧ ಜನಾಂಗೀಯ ನಿಂದನೆ ಆರೋಪ ದಾಖಲಿಸಿದ್ದ ಭಾರತೀಯ ಮೂಲದ ಕಾಲ್ ಸೆಂಟರ್ ಉದ್ಯೋಗಿ ನಾರ್ಥ್ಯಾಂಪ್ಟನ್  ನಿವಾಸಿ ಚೇತನ್ ಕುಮಾರ್ ಮೆಶ್ರಾಮ್ ಅವರಿಗೆ ಪರಿಹಾರವಾಗಿ 5 ಸಾವಿರ ಪೌಂಡುಗಳನ್ನು ನೀಡಲು ಸಂಬಂಧಿಸಿದ ಕಂಪೆನಿಗೆ ನಾರ್ಥ್ಯಾಂಪ್ಟನ್ ಜನಾಂಗೀಯ ಸಮಾನತೆ ಮಂಡಳಿ ಲಂಡನ್ನಿನಲ್ಲಿ ಆದೇಶಿಸಿತು. ಬ್ರಿಟಿಷರಂತೆ ಇಂಗ್ಲಿಷಿನಲ್ಲಿ ಮಾತನಾಡದ ಕಾರಣವೊಡ್ಡಿ ಕಂಪೆನಿಯ ಮುಖ್ಯಸ್ಥರು ತನ್ನನ್ನು ಕೆಲಸದಿಂದ ಕಿತ್ತುಹಾಕಿರುವುದಾಗಿ ಚೇತನ್ ಕುಮಾರ್ ಮೆಶ್ರಾಮ್ ಅವರು ಮಂಡಳಿಗೆ ದೂರು ಸಲ್ಲಿಸಿದ್ದರು.

2007: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಪಾತ್ರದ ಕುರಿತು ಸಾಕ್ಷ್ಯ ಹೇಳುವುದಾಗಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ ಜಸ್ಬೀರ್ ಸಿಂಗ್ ಪ್ರಕಟಿಸಿದರು. ಇದರಿಂದ ಇಡೀ ಪ್ರಕರಣಕ್ಕೆ ಹೊಸ ತಿರುವು ಲಭಿಸಿತು. ಸಿಖ್ಖರ ವಿರುದ್ಧ ದೌರ್ಜನ್ಯ, ಹಲ್ಲೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಟೈಟ್ಲರ್ ಮೇಲಿದ್ದು, ಅಕ್ಟೋಬರ್  ತಿಂಗಳಲ್ಲಷ್ಟೇ ಸಿಬಿಐ ಅವರ ವಿರುದ್ಧ ತನಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಹೇಳಿತ್ತು.

2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ಪಿ.ವೇಣುಗೋಪಾಲ್ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆ ವಿರೋಧಿಸಿ ಆರಂಭಿಸಿದ್ದ ತಮ್ಮ ಮುಷ್ಕರವನ್ನು ಏಮ್ಸ್ ವೈದ್ಯರು ಹೈಕೋರ್ಟ್ ಆದೇಶದ ಮೇರೆಗೆ ಹಿಂತೆಗೆದುಕೊಂಡರು.

2007:  ಮಿತ `ವೈನ್' ಸೇವನೆ ಹೃದಯಕ್ಕೆ ಒಳ್ಳೆಯದು ಎಂಬ ಮಾತಿದೆ. ಆದರೆ ಈ ತೆರನಾದ `ವೈನ್' ಸೇವನೆಯು ಮಹಿಳೆಯರ ರಕ್ತನಾಳದ ಉರಿಯನ್ನು ತಂಪಾಗಿ ಇಡುತ್ತದಂತೆ..! ಸ್ಪೇನ್ ದೇಶದ ಸಂಶೋಧಕರು ಒಂದು ತಿಂಗಳ ಕಾಲ ನಡೆಸಿದ ಪ್ರಯೋಗವೊಂದರಲ್ಲಿ ಕಂಡುಬಂದ ಸತ್ಯಾಂಶವಿದು. ಕೆಲವು ಮಹಿಳೆಯರಿಗೆ ನಿತ್ಯವೂ ಎರಡು ಲೋಟಗಳಷ್ಟು `ಕೆಂಪು ವೈನ್' ಅನ್ನು ನಾಲ್ಕು ವಾರಗಳ ಕಾಲ ನೀಡಲಾಯಿತು. ಆ ಒಂದು ತಿಂಗಳ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಉರಿ ಉಂಟು ಮಾಡುವ ಅಂಶದಲ್ಲಿ ಗಣನೀಯ ಇಳಿತ  ಕಂಡುಬಂದಿತು.

2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ `ಪುಸ್ತಕ ಸೊಗಸು' ಬಹುಮಾನಕ್ಕೆ ಆಯ್ಕೆಯಾದ 4 ಕೃತಿಗಳ ಪೈಕಿ ಮೊದಲ ಬಹುಮಾನವು ಬೆಂಗಳೂರಿನ ಅಸೀಮ ಪ್ರತಿಷ್ಠಾನ ಪ್ರಕಾಶಿಸಿದ ಹರೀಶ್ ಆರ್. ಭಟ್ ಮತ್ತು ಪ್ರಮೋದ್ ಸುಬ್ಬರಾವ್ ಅವರ `ಪಕ್ಷಿ ಪ್ರಪಂಚ' ಪುಸ್ತಕದ ಪಾಲಾಯಿತು. ಬೆಂಗಳೂರಿನ ಚಾರ್ವಾಕ ಪ್ರಕಾಶನ ಹೊರತಂದ ಈರಪ್ಪ ಎಂ. ಕಂಬಳಿ ಅವರ `ಚಾಚಾ ನೆಹರು ಮತ್ತು ಈಚಲು ಮರ' ಕೃತಿಗೆ 2ನೇ ಬಹುಮಾನ, ಅಂಕಿತ ಪುಸ್ತಕ ಹೊರತಂದ ಜಯಂತ ಕಾಯ್ಕಿಣಿ ಅವರ `ಶಬ್ದತೀರ' ಕೃತಿಗೆ 3ನೇ ಬಹುಮಾನ ಹಾಗೂ ಅಭಿನವ ಪ್ರಕಾಶನ ಹೊರತಂದ ಭಾಗೀರಥಿ ಹೆಗಡೆ ಅವರ `ಗುಬ್ಬಿಯ ಸ್ವರ್ಗ' ಕೃತಿಗೆ ಮಕ್ಕಳ ಪುಸ್ತಕ ಬಹುಮಾನ ಲಭಿಸಿತು.

2007: ಸರ್ಕಾರಕ್ಕೆ ಪಾವತಿ ಮಾಡಬೇಕಾದ ಸುಮಾರು 20.3 ಕೋಟಿ ರೂಪಾಯಿಯ ವಾಣಿಜ್ಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿತ್ರನಟ ಹಾಗೂ ನಿರ್ದೇಶಕ ಸಂಜಯ್ ಖಾನ್ ಅವರು ನಿರ್ದೇಶಕರಾಗಿರುವ ನಗರದಲ್ಲಿನ `ವರ್ಲ್ಡ್ ರೆಸಾರ್ಟ್' ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು.

2007: ವಿದೇಶ ಯಾತ್ರೆ ಹಾಗೂ ವಿದೇಶ ವಾಸಕ್ಕೆ ಶಾಸ್ತ್ರ ಹಾಗೂ ಸಂಪ್ರದಾಯಗಳಲ್ಲಿ ವಿರೋಧವಿರುವುದರಿಂದ ಯಾವುದೇ ಕಾರಣಕ್ಕೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ವೇಳೆ ಕೃಷ್ಣನ ಪೂಜೆ ಮಾಡುವಂತಿಲ್ಲ ಎಂದು ಉಡುಪಿ ಅಷ್ಟಮಠಗಳ ಯತಿಗಳು ತಾಕೀತು ಮಾಡಿದರು. ಕೃಷ್ಣಮಠದಲ್ಲಿ ತುರ್ತುಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು, ವಿದೇಶ ಯಾತ್ರೆ ಮಾಡಿದವರಿಗೆ ಕೃಷ್ಣನ ಪೂಜೆಗೆ ಈ ತನಕ ಅವಕಾಶ ನೀಡಲಾಗಿಲ್ಲ. ಆ ನಿಯಮವನ್ನು ಪುತ್ತಿಗೆ ಶ್ರೀಗಳೂ ಪಾಲಿಸಬೇಕಾಗಿದೆ ಎಂದು ಹೇಳಿದರು.

2007: ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೆ. ವಿ. ಕಾಮತ್ ಅವರನ್ನು  ಫೋಬ್ಸ್  ಏಷ್ಯಾ `ವರ್ಷದ ಉದ್ಯಮಿ' ಎಂಬುದಾಗಿ ಗುರುತಿಸಿತು.

2006: ಇಂಡೋನೇಷ್ಯದ ಮೊಲುಕಾಸ್ ದ್ವೀಪದ ಸಾಗರ ತಳದಲ್ಲಿ ಬೆಳಗ್ಗೆ 7 ಗಂಟೆ ವೇಳೆಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು.

2006: ತಮಿಳುನಾಡಿನ ಮದುರೈಯಲ್ಲಿ ಜನಿಸಿದ ಚಿತ್ರಾ ಭರೂಚ ಅವರು ಬಿಬಿಸಿಯ ಪ್ರಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ನೇಮಕಗೊಂಡರು. ಬಿಬಿಸಿ ಅಧ್ಯಕ್ಷ ಮೈಕೆಲ್ ಗ್ರೇಡ್ ರಾಜೀನಾಮೆ ಕಾರಣ ಭರೂಚ ಅವರು ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.

2006: ಭಾರತೀಯ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಆಟಗಾರ ಹನುಮಂತ ಸಿಂಗ್ (67) ಮುಂಬೈಯಲ್ಲಿ ನಿಧನರಾದರು.

2006: ವೈಜ್ಞಾನಿಕ ಸಂಶೋಧನೆಗಳಿಗಾಗಿ ಪ್ರತಿವರ್ಷ ನೀಡಲಾಗುವ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಭೌತಶಾಸ್ತ್ರ ವಿಜ್ಞಾನಿ ಪ್ರೋ. ಶ್ರೀರಾಮ್ ರಾಮಸ್ವಾಮಿ ಆಯ್ಕೆಯಾದರು.

2006: ಮಣಿಪಾಲ ಕೆ.ಎಂ.ಸಿ.ಯ ಪ್ರಾಕ್ತನ ವಿದ್ಯಾರ್ಥಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ರಾಧಾಕೃಷ್ಣ ಸುಧಾಕರ ಶಾನಭಾಗ ಅವರು ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಗೊಂಡರು. ಇಂಗ್ಲೆಂಡಿನ ಲಾರ್ಡ್ ಚಾನ್ಸಲರ್ ಅವರು ಈ ನೇಮಕ ಮಾಡಿದ್ದು, ಇಂಗ್ಲೆಂಡಿನಲ್ಲಿ ಈ ಹ್ದುದೆಗೆ ನೇಮಕ ಗೊಂಡ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಶಾನಭೋಗ ಪಾತ್ರರಾದರು.

2006: ಕೇರಳದ ನಿಲಕ್ಕಲ್ ಎಕ್ಯುಮಾನಿಕಲ್ ಟ್ರಸ್ಟ್ ಸ್ಥಾಪಿಸಿದ ಧಾರ್ಮಿಕ ಸದ್ಭಾವನಾ ಪ್ರಶಸ್ತಿಗೆ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಮತ್ತು ಆರ್ಚ್ ಬಿಷಪ್ ಮಾರ್ ಜೋಸೆಫ್ ಪೊವಾಥಿಲ್ ಆಯ್ಕೆಯಾದರು.

2005: ಕುದುರೆಮುಖ ಕಬ್ಬಿಣದ ಅದಿರು ಗಣಿಯನ್ನು 2005ರ ಡಿಸೆಂಬರ್ 31ರ ಒಳಗೆ ಕಾಯಂ ಆಗಿ ಮುಚ್ಚುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ ಆದೇಶವನ್ನು ಪುನರ್ವಿಮರ್ಶಿಸಬೇಕು ಎಂದು ಕೋರಿ ಕುದುರೆಮುಖ ಶ್ರಮಶಕ್ತಿ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು.

2005: ಬೆಂಗಳೂರು ಕಾನೂನು ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಶ್ರೀಪಾದ್ ಗಣಪ ಭಟ್ ಅವರು ಕೇರಳದ ಎರ್ನಾಕುಳಂನಲ್ಲಿ ಸ್ಥಾಪನೆಗೊಂಡಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸಡ್ ಲೀಗಲ್ ಸ್ಟಡೀಸ್ನ ಪ್ರಥಮ ಕುಲಪತಿಯಾಗಿ ನೇಮಕಗೊಂಡರು.

2005: ದೂರದರ್ಶಿತ್ವ, ವೈಯಕ್ತಿಕ ಪ್ರತಿಭೆ ಹಾಗೂ 21ನೇ ಶತಮಾನದಲ್ಲಿ ವಿಶ್ವಶಾಂತಿಯೆಡೆಗೆ ತೋರಿದ ಆಸಕ್ತಿಗಾಗಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರಿಗೆ 2005ರ ಸಾಲಿನ `ವಿಶ್ವ ಸಹಿಷ್ಣುತೆ ಪ್ರಶಸ್ತಿ'ಯನ್ನು ಜರ್ಮನಿಯ ಬರ್ಲಿನ್ನಿನಲ್ಲಿ ಪ್ರದಾನ ಮಾಡಲಾಯಿತು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ಪ್ರಶಸ್ತಿ ಪ್ರದಾನ ಮಾಡಿದರು.

2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಕೇಂದ್ರ ಸಚಿವ ಶರದ್ ಪವಾರ್ ಆಯ್ಕೆಯಾದರು. ಹಾಲಿ ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯಾ ಬಣದ ರಣಬೀರ್ ಸಿಂಗ್ ಮಹೇಂದ್ರ ಅವರು ಪವಾರ್ ಕೈಯಲ್ಲಿ ಸೋಲು ಅನುಭವಿಸಿದರು.

2005: ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ವೇಣೂರು ಸುಂದರ ಆಚಾರ್ಯ (65) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.

2001: ಖ್ಯಾತ ಗಾಯಕ ಜಾರ್ಜ್ ಹ್ಯಾರಿಸನ್ ತಮ್ಮ 58ನೇ ವಯಸ್ಸಿನಲ್ಲಿ ಲಾಸ್ ಏಂಜೆಲಿಸ್ನಲ್ಲಿ ಗಂಟಲ ಕ್ಯಾನ್ಸರ್ ಪರಿಣಾಮವಾಗಿ ನಿಧನರಾದರು.

1993: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಭಾರತದಲ್ಲಿ ವಿಮಾನಯಾನದ ಮೊದಲಿಗರಾದ ಜೆ. ಆರ್. ಡಿ. ಟಾಟಾ (http://en.wikipedia.org/wiki/J._R._D._Tata) ಅವರು ಜಿನೇವಾದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಪ್ಯಾರಿಸ್ಸಿನ ಅತ್ಯಂತ ದೊಡ್ಡದಾದ ಹಾಗೂ ಹೆಸರುವಾಸಿಯಾದ ಪೇರೆ ಲಾಚೈಸ್ನ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಲ್ಜಾಕ್, ಪಿಸ್ಸಾರೊ, ಚೋಪಿನ್ ಮತ್ತು ಸರಾಹ ಬೆರ್ನಾರ್ಡ್ ಅವರ ಸಾಲಿನಲ್ಲೇ ಟಾಟಾ ಸಮಾಧಿಯನ್ನೂ ನಿರ್ಮಿಸಲಾಯಿತು.

1988: ಪ್ರಧಾನಿ ಸ್ಥಾನಕ್ಕೆ ರಾಜೀವಗಾಂಧಿ ರಾಜೀನಾಮೆ ನೀಡಿದರು.

1977: ಭಾರತದ ಮೈಕೆಲ್ ಫರೀರಾ ಅವರು ತಮ್ಮ ಮೂರು ವಿಶ್ವ ಬಿಲಿಯರ್ಡ್ಸ್ ಅಮೆಚೂರ್ ಚಾಂಪಿಯನ್ ಶಿಪ್ ಗಳ ಪೈಕಿ ಮೊದಲನೆಯದನ್ನು ಮೆಲ್ಬೋರ್ನಿನಲ್ಲಿ ಗೆದ್ದುಕೊಂಡರು. 1981ರಲ್ಲಿ ನವದೆಹಲಿಯಲ್ಲಿ ಹಾಗೂ 1983ರಲ್ಲಿ ಮಾಲ್ಟಾದಲ್ಲೂ ಅವರು ವಿಶ್ವ ಬಿಲಿಯರ್ಡ್ಸ್ ಹವ್ಯಾಸಿ ಚಾಂಪಿಯನ್ ಶಿಪ್ ಗಳನ್ನು ತಮ್ಮ ಹೆಗಲಿಗೆ ಏರಿಸಿಕೊಂಡರು.

1977: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಅಂತಾರಾಷ್ಟ್ರೀಯ ಸಾಮರಸ್ಯ ದಿನವಾಗಿ ಆಚರಿಸಲು ಪ್ರಾರಂಭಿಸಿತು. ಈ ದಿನ ಪ್ಯಾಲೆಸ್ಟೈನ್ ವಿಭಜನೆ ಕರಡನ್ನು ಸಭೆ ಅಂಗೀಕರಿಸಿತು. ಸ್ವತಂತ್ರ ಯಹೂದ್ಯ ಮತ್ತು ಅರಬ್ ರಾಜ್ಯವಾಗಿ ಪ್ಯಾಲೆಸ್ಟೈನನ್ನು  ವಿಭಜಿಸಲಾಯಿತು. ಪ್ಯಾಲೆಸ್ಟೈನ್ ಜನರಿಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಲಭಿಸಿತು.

1960: ಸಾಹಿತಿ ಚಂದ್ರಿಕಾ ಪುರಾಣಿಕ ಜನನ.

1951: ಭಾಷಾಶಾಸ್ತ್ರ, ಕನ್ನಡ ಶೈಲಿ ಶಾಸ್ತ್ರದಲ್ಲಿ ವಿದ್ವಾಂಸರಾದ ಡಾ. ಬಿ. ಮಲ್ಲಿಕಾರ್ಜುನ ಅವರು ಆರ್. ಭದ್ರಣ್ಣ- ತಾಯಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು.

1947: ಪ್ಯಾಲೆಸ್ಟೈನನ್ನು ಅರಬರು ಮತ್ತು ಯಹೂದ್ಯರ ಮಧ್ಯೆ ವಿಭಜನೆ ಮಾಡಲು ಕರೆ ನೀಡುವ ಗೊತ್ತುವಳಿಯನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯು ಅಂಗೀಕರಿಸಿತು.

1945: ಯುಗೋಸ್ಲಾವಿಯಾವು ಗಣರಾಜ್ಯವಾಯಿತು.

1924: ಇಟಲಿಯ ಖ್ಯಾತ ಒಪೇರಾ ಗಾಯಕ ಗಿಯಾಕೊಮೊ ಪುಸ್ಸಿನಿ ಗಂಟಲ್ ಕ್ಯಾನ್ಸರ್ ಪರಿಣಾಮವಾಗಿ ಬ್ರಸ್ಸೆಲ್ಸಿನಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ಮೃತರಾದರು. ಲಾ ಬೊಹೇಮ್ ಮತ್ತು ಮ್ಯಾಡೇಮ್ ಬಟರ್ ಫ್ಲೈ ಹಾಡುಗಳು ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, December 24, 2009

ಇಂದಿನ ಇತಿಹಾಸ History Today ನವೆಂಬರ್ 28

ಇಂದಿನ ಇತಿಹಾಸ

ನವೆಂಬರ್ 28

2014:  ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿ ನುಸುಳುಕೋರರ ಮಧ್ಯೆ ಈದಿನ ಪುನರಾರಂಭವಾದ ಗುಂಡಿನ ಘರ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಜಮ್ಮು ಪ್ರವಾಸಕ್ಕೆ ಮುನ್ನವೇ ಮುಕ್ತಾಯಗೊಂಡಿದ್ದು, ಎರಡು ದಿನಗಳ ಘರ್ಷಣೆಯಲ್ಲಿ ಒಟ್ಟು 11 ಜನ ಅಸು ನೀಗಿದರು. ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಗಡಿಯೊಳಕ್ಕೆ ಪಾಕಿಸ್ತಾನದಿಂದ ನುಗ್ಗಲು ಭಯೋತ್ಪಾದಕರ ಗುಂಪು ನಡೆಸಿದ್ದ ಯತ್ನ ಕಡೆಗೂ ವಿಫಲಗೊಂಡಿದೆ. ಜಮ್ಮು ಜಿಲ್ಲೆಯ ಅರ್ನಿಯಾದಲ್ಲಿ ಈದಿನ ಬೆಳಗ್ಗೆ ಗುಂಡಿನ ಕಾಳಗ ಪುನರಾರಂಭಗೊಂಡಿತ್ತು. ಗುಂಡಿನ ಘರ್ಷಣೆ ಕಾರಣ ಪ್ರದೇಶದಲ್ಲಿ ಬೆಳಗ್ಗೆ ಆರಂಭಿಸಲಾಗಿದ್ದ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. 27.11.2014ರ  ಗುರುವಾರದ ಭೀಕರ ಗುಂಡಿನ ಕಾಳಗದ ವೇಳೆ 10 ಮಂದಿ ಹತರಾಗಿದ್ದರು. ಈದಿನ ಗುಂಡಿನ ಘರ್ಷಣೆ ಮುಕ್ತಾಯದ ಬಳಿಕ ಶೋಧ ಕಾರ್ಯಾಚರಣೆ ನಡೆಸಿದಾಗ ಇನ್ನೊಂದು ಶವ ಪತ್ತೆಯಾಯಿತು. ಇದರೊಂದಿಗೆ ಎರಡು ದಿನಗಳ ಗುಂಡಿನ ಕಾಳಗ ವೇಳೆ ಮೃತರಾದವರ ಸಂಖ್ಯೆ 11ಕ್ಕೆ ಏರಿತು. 11 ಮಂದಿಯ ಪೈಕಿ ನಾಲ್ವರು ನಾಗರೀಕರು, ಮೂವರು ಸೈನಿಕರು ಮತ್ತು ನಾಲ್ವರು ಉಗ್ರಗಾಮಿಗಳು ಎಂದು ಅಧಿಕಾರಿಗಳು ತಿಳಿಸಿದರು.  ಇದಕ್ಕೆ ಮೊದಲು ಊಧಮ್ ಪುರದಿಂದ ಬಂದ ವರದಿಯಂತೆ ಜಮ್ಮು ಜಿಲ್ಲೆಯ ಅರ್ನಿಯಾ ಗಡಿ ವಿಭಾಗದಲ್ಲಿ ಗುಂಡಿನ ಕಾಳಗದ ವೇಳೆ ಹತರಾಗಿದ್ದ ನಾಗರಿಕರ ಶವಗಳನ್ನು ವಶಕ್ಕೆ ಪಡೆಯಲು ಮತ್ತು ಬಂಕರ್ ಒಳಗೆ ಅವಿತಿದ್ದ ಉಗ್ರಗಾಮಿಯನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದಾಗ ಈದಿನ ಮತ್ತೆ ಹೊಸದಾಗಿ ಗುಂಡಿನ ಸದ್ದುಗಳು ಮೊಳಗಿದವು. ಭಾರತ - ಪಾಕ್ ಗಡಿಗೆ ಸಮೀಪ ಎರಡು ಸೇನಾ ಬಂಕರ್​ಗಳ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದ ವೇಳೆಯಲ್ಲಿ ಮೂವರು ನಾಗರೀಕರು ಮತ್ತು ಹಲವಾರು ಮಂದಿ ಸೇನಾ ಸಿಬ್ಬಂದಿ ಮೃತರಾದ ಒಂದು ದಿನದ ಬಳಿಕ ಅಲ್ಲೇ ಅವಿತುಕೊಂಡ ಉಗ್ರಗಾಮಿಗಳ ಪತ್ತೆಗಾಗಿ ಸಶಸ್ತ್ರ ಪಡೆಗಳು ಈದಿನ ಶೋಧ ಆರಂಭಿಸಿದ್ದವು. ಕಾಳಗ ಕಾಲದಲ್ಲಿ ಮೃತರಾದ ನಾಗರೀಕರ ಶವಗಳನ್ನು ಪಡೆಯಲು ಅರ್ನಿಯಾದ ಕಾಳಗ ಸ್ಥಳದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದಾಗ ಅವರ ಮೇಲೆ ಉಗ್ರಗಾಮಿಗಳು ಅವಿತುಕೊಂಡಿದ್ದ ಬಂಕರ್ ಒಂದರಿಂದ ಗುಂಡುಗಳು ಹಾರಲಾರಂಭಿಸಿದವು. ಬೆನ್ನಲ್ಲೇ ಭದ್ರತಾ ಪಡೆಗಳು ಗುಂಡು ಹಾರಿಸಿದವು. ಗುಂಡಿನ ಘರ್ಷಣೆ ನಡೆಯುತ್ತಿದ್ದ ಕಾರಣ ಹತರಾಗ ನಾಗರೀಕರ ಶವಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.
          



2014: ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಸೂಚಿಸುವುದರೊಂದಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಬದಲು ಮೂರನೆಯ ಭಾಷೆಯಾಗಿ ಸಂಸ್ಕೃತ ಕಡ್ಡಾಯಗೊಳಿಸಬೇಕು ಎಂಬ ಕೇಂದ್ರದ ನಿರ್ಧಾರಕ್ಕೆ ಹಿನ್ನಡೆಯಾಯಿತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು ಜರ್ಮನಿಸಂಸ್ಕೃತ  ವಿವಾದಲ್ಲಿ ವಿದ್ಯಾರ್ಥಿಗಳನ್ನು ಯಾಕೆ ಬಲಿಪಶು ಮಾಡುತ್ತೀರಿ? ನಿಮ್ಮ ಕೈಯಿಂದ ಆದ ತಪ್ಪಿಗೆ ಅವರು ಏಕೆ ಶಿಕ್ಷೆ ಅನುಭವಿ­ಸಬೇಕು ಎಂದು ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು.  ಕೇಂದ್ರೀಯ ವಿದ್ಯಾಲಯಗಳಲ್ಲಿ ಮೂರನೆಯ ಭಾಷೆಯಾಗಿ ಜರ್ಮನ್ ಬೋಧಿಸಬೇಕು ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ಗೊಥೆ ಇನ್ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನ್ ನಡುವೆ ಒಪ್ಪಂದ ಆಗಿದೆ. ಆದರೆ, ಇದು ಅಕ್ರಮ ಎಂದು ಅಟಾರ್ನಿ ಜನರಲ್ ಮುಕುಲ್ ರಸ್ತೋಗಿ ಕೋರ್ಟ್ಗೆ ಹೇಳಿದರುಆದರೆ, ವಾದವನ್ನು ಒಪ್ಪದ ಕೋರ್ಟ್, ನೀವು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷೆ. ಮುಖ್ಯ ಪರೀಕ್ಷೆಗೆ ಇನ್ನು ಕಲವೇ ತಿಂಗಳುಗಳು ಮಾತ್ರ ಬಾಕಿ ಇದೆ. ಹಂತದಲ್ಲಿ ರೀತಿಯ ಬದಲಾವಣೆಗಳನ್ನು ಮಾಡುವುದು ಸರಿಯಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ  ಯಥಾಸ್ಥಿತಿಯೇ ಮುಂದುವರಿಯಲಿ ಎಂದು ಸೂಚಿಸಿತು. ಕೋರ್ಟ್ ತೀರ್ಪಿನಿಂದ ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ 70,000 ವಿದ್ಯಾರ್ಥಿಗಳು ಮತ್ತು ಜರ್ಮನ್ ಭಾಷೆ ಕಲಿಯುತ್ತಿದ್ದ 700 ಶಿಕ್ಷಕರು ನಿಟ್ಟುಸಿರು ಬಿಟ್ಟರು.


2014: ನವದೆಹಲಿ: ಇರಾಕ್​ನಲ್ಲಿ ಐಎಸ್​ಐಎಸ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ 39 ಮಂದಿ ಭಾರತೀಯರು ಇನ್ನೂ ಜೀವಂತವಾಗಿದ್ದಾರೆ ಎಂದು ಭಾರತ
ಸರ್ಕಾರ ನಂಬಿದೆ. ಅವರನ್ನು ಕೊಲ್ಲಲಾಗಿದೆ ಎಂಬ ವರದಿಗಳು ದೃಢಪಟ್ಟಿಲ್ಲ ಎಂದು ಸಂಸತ್ತಿಗೆ ತಿಳಿಸಲಾಯಿತು. ಉಗ್ರಗಾಮಿಗಳು ಸೆರೆ ಹಿಡಿದು ಇಟ್ಟಿರುವ ಭಾರತೀಯರ ಬಗ್ಗೆ ಸದಸ್ಯರು ತೀವ್ರ ಕಳವಳ ವ್ಯಕ್ತ ಪಡಿಸಿದ ಸಂದರ್ಭದಲ್ಲಿ ಸರ್ಕಾರ ಈ ವಿಚಾರವನ್ನು ಸ್ಪಷ್ಟ ಪಡಿಸಿತು. ಒತ್ತೆಯಾಳಾಗಿ ಇಟ್ಟುಕೊಂಡ 39 ಮಂದಿ ಭಾರತೀಯರನ್ನು ಉಗ್ರಗಾಮಿಗಳು ಐದು ತಿಂಗಳ ಹಿಂದೆ ಗುಂಡಿಟ್ಟು ಕೊಂದು ಹಾಕಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದರು. ತಪ್ಪಿಸಿಕೊಂಡವರು ಎಂದು ಹೇಳಲಾದ ಇಬ್ಬರು ಬಾಂಗ್ಲಾದೇಶೀಯರ ಪೈಕಿ ಹರಜೀತ್ ಎಂಬವರನ್ನು ಉಲ್ಲೇಖಿಸಿ ಮಾಧ್ಯಮಗಳು ಈ ವರದಿ ಮಾಡಿವೆ. ಅವರು ಭಾರತೀಯರನ್ನು ಅಪಹರಿಸಿ ಕೊಲ್ಲಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ ಅದನ್ನು ದೃಢ ಪಡಿಸುವಂತಹ ಯಾವುದೇ ಸಾಕ್ಷ್ಯಾರವೂ ಇಲ್ಲ ಎಂದು ಸುಷ್ಮಾ ಹೇಳಿದರು. 'ಒಂದು ಮೂಲ ದೃಢಪಡದೇ ಇರುವ ಈ ಸುದ್ದಿಯನ್ನು ನೀಡಿದೆ. ಆದರೆ ಉಳಿದ 6 ವಿವಿಧ ಮೂಲಗಳು ಅವರನ್ನು ಕೊಲ್ಲಲಾಗಿಲ್ಲ ಎಂದು ಸರ್ಕಾರಕ್ಕೆ ತಿಳಿಸಿವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ನುಡಿದರು. ಕಾಂಗ್ರೆಸ್ ಉಪನಾಯಕ ಆನಂದ ಶರ್ಮ ಅವರು ರಾಜ್ಯಸಭೆಯಲ್ಲಿ ಮತ್ತು ಪಕ್ಷ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಸದನಗಳಿಗೂ ಸುಷ್ಮಾ ಒಂದೇ ಮಾದರಿಯ ಹೇಳಿಕೆ ನೀಡಿದರು. ಸರ್ಕಾರವು ಒಬ್ಬ ವ್ಯಕ್ತಿ ಹೇಳಿದ್ದನ್ನು ನಂಬಬೇಕೇ ಅಥವಾ ಇತರ ಆರು ಮೂಲಗಳನ್ನು ನಂಬಬೇಕೇ ಎಂದು ಸದನವನ್ನು ಪ್ರಶ್ನಿಸಿದ ಸುಷ್ಮಾ, ಜವಾಬ್ದಾರಿಯುತ ಸರ್ಕಾರವಾಗಿ ಸ್ಪಷ್ಟವಾದ ಸಾಕ್ಷ್ಯಲಭಿಸುವವರೆಗೂ ಈ ಬಗ್ಗೆ ಶೋಧಿಸುವುದನ್ನು ಬಿಟ್ಟುಕೊಡಲು ತಾನು ತಯಾರಿಲ್ಲ ಎಂದು ಹೇಳಿದರು. 'ಅವರ ಹೇಳಿಕೆಯನ್ನು ನಾವು ಅಂಗೀಕರಿಸುವುದಿಲ್ಲ. ನಮ್ಮ ಪ್ರಾರ್ಥನೆಗಳು ಮತ್ತು ಭರವಸೆಗಳು ಜೀವಂತವಾಗಿವೆ. ಸುರಕ್ಷಿತ ಬಿಡುಗಡೆಗಾಗಿ ನಮ್ಮ ಶೋಧ ಮುಂದುವರೆಯುತ್ತದೆ. ಅವರನ್ನು ಜೀವಂತವಾಗಿ ಶೋಧಿಸಿ, ಸುರಕ್ಷಿತವಾಗಿ ಮನೆಗಳಿಗೆ ಮುಟ್ಟಿಸುವ ಆಶಯ ಇಟ್ಟುಕೊಳ್ಳುವುದು ನನ್ನ ಕರ್ತವ್ಯ' ಎಂದು ಸ್ವರಾಜ್ ನುಡಿದರು.

2014: ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್​ಡಿಒ 2001ರಿಂದ 2,776 ವಿಜ್ಞಾನಿಗಳ ಕೊರತೆ ಎದುರಿಸುತ್ತಿದೆ ಎಂದು ಸರ್ಕಾರ ಹೇಳಿತು. ಈ ಕುರಿತು ಲೋಕಸಭೆಗೆ ಪತ್ರ ಮುಖೇನ ಮಾಹಿತಿ ನೀಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ ಸಾಕಷ್ಟು ಕೊರತೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಬೇಕಾದ ಜನಬಲದ ಕೊರತೆ ನೀಗಿಸಿಕೊಳ್ಳಬೇಕಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಒಟ್ಟು 4966 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಅನಿವಾರ್ಯತೆಯ ಬಗ್ಗೆ ತಿಳಿಸಲಾಗಿದೆ. 2,776 ವಿಜ್ಞಾನಿಗಳ ನೇಮಕ ಕೂಡ ಇದರಲ್ಲೊಳಗೊಂಡಿರುತ್ತದೆ  ಎಂದು ತಿಳಿಸಿದರು. ಹೊಸ ನೇಮಕಾತಿಗೆ ಒಪ್ಪಿಗೆ ಸಿಕ್ಕ ಬಳಿಕ ಐದು ಹಂತಗಳಲ್ಲಿ 2,776 ವಿಜ್ಞಾನಿಗಳ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ಹಂತದಲ್ಲಿ 555 ವಿಜ್ಞಾನಿಗಳಂತೆ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

2014: ಊಧಮ್​ ಪುರ: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಕಳೆದ 30 ವರ್ಷಗಳಿಂದ ನಿಂತಲ್ಲಿಯೇ ನಿಂತುಕೊಂಡಿದೆ. ಇಲ್ಲಿನ ನಾಯಕರು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್​ ಮೇಲ್ ಮಾಡುತ್ತಾ ಕಾಲ ತಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಎರಡನೇ ಹಂತದ ಚುನಾವಣೆಗೆ ಮುಂಚಿತವಾಗಿ ಊಧಮ್ ಪುರದಲ್ಲಿ ಬಿಜೆಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ 'ಭಾರತದಲ್ಲಿ ಒಂದು ಡಜನ್ 
ಪ್ರಧಾನಿಗಳಿದ್ದರು,  ಆದರೆ ಯಾರಿಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ನನಗೆ ಲಭಿಸಿದಷ್ಟು ಅವಕಾಶವೇ ಸಿಗಲಿಲ್ಲ. ನಾನು ದೀಪಾವಳಿಯ ದಿನಗಳನ್ನು ಇಲ್ಲಿನ ಪ್ರವಾಹ ಸಂತ್ರಸ್ಥರ ಜೊತೆಗೆ ಕಳೆದೆ. ನನ್ನ ನಿರ್ಧಾರ ರಾಜಕೀಯ ಸಲುವಾಗಿ ಅಥವಾ ಓಟುಗಳನ್ನು ಗಳಿಸುವುದಕ್ಕಾಗಿ ಮಾಡಿದ್ದಲ್ಲ' ಎಂದು ಅವರು ನುಡಿದರು. '30 ವರ್ಷಗಳಲ್ಲಿ ಏನು ಆಗಿಲ್ಲವೋ ಅದನ್ನು ನಾನು ಮುಂದಿನ ಐದು ವರ್ಷಗಳಲ್ಲಿ ಮಾಡದಿದ್ದರೆ ನೀವು ನನ್ನನ್ನು ಜವಾಬ್ದಾರಿಯನ್ನಾಗಿ ಮಾಡಬಹುದು ಮತ್ತು ಪ್ರಶ್ನಿಸಲೂ ಬಹುದು. 30 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಥಿ ಸ್ಥಗಿತಗೊಂಡಿದೆ. ಆಳುವ ಮತ್ತು ವಿರೋಧ ಪಕ್ಷಗಳ ನಾಯಕರು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್​ವೆುೕಲ್ ಮಾಡುವುದರಲ್ಲಿಯೇ ಮಗ್ನರಾಗಿದ್ದಾರೆ' ಎಂದು ಮೋದಿ ಹೇಳಿದರು. 'ನಾವು ಕಣಿವೆಯ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ. ಅದಕ್ಕಾಗಿ ನನಗೆ ನಿಮ್ಮ ನೆರವು ಬೇಕು' ಎಂದು ಪ್ರಧಾನಿ ನುಡಿದರು.

2014: ಕಠ್ಮಂಡು: ನೇಪಾಳದ ರಾಜಧಾನಿಯ ಮೂರು ದಿನಗಳ ಯಶಸ್ವೀ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ವಾಪಸಾದರು. ಮೂರು ದಿನಗಳ ಪ್ರವಾಸದ ಅವಧಿಯಲ್ಲಿ 18ನೇ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ ಅವರು ಆರು ಸದಸ್ಯರ ಸಾರ್ಕ್ ರಾಷ್ಟ್ರಗಳ ನಾಯಕರ ಜೊತೆಗೆ ನೆರೆಹೊರೆ ಬಾಂಧವ್ಯ ವೃದ್ಧಿ ಹಾಗೂ ಅಭಿವೃದ್ಧಿಗೆ ಆದ್ಯತೆ ಮೇರೆಗೆ ದ್ವಿಪಕ್ಷೀಯ
ಮಾತುಕತೆಗಳನ್ನು ನಡೆಸಿದರು. ನಿರೀಕ್ಷೆಯಂತೆಯೇ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಜೊತೆಗೆ ಪ್ರತ್ಯೇಕ ಮಾತುಕತೆಯನ್ನು ಅವರು ನಡೆಸಲಿಲ್ಲ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೇಪಾಳಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ ಪ್ರಧಾನಿ ಟ್ವಿಟ್ಟರ್​ನಲ್ಲಿ ನೇಪಾಳಕ್ಕೆ ಸಂಬಂಧಿಸಿದಂತೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. 'ನೇಪಾಳಕ್ಕೆ ಮತ್ತೊಮ್ಮೆ ಬಂದಿರುವುದು ಅದ್ಭುತ. ಇಲ್ಲಿ ಲಭಿಸಿದ ಆತ್ಮೀಯ ಸ್ವಾಗತವನ್ನು ಎಂದಿಗೂ ಮರೆಯಲಾರೆ' ಎಂದು ನೇಪಾಳದ ರಾಜಧಾನಿಯಲ್ಲಿ ಬಂದಿಳಿದೊಡನೆಯೇ ಅವರು ಟ್ವೀಟ್ ಮಾಡಿದ್ದರು. ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ ಜೊತೆಗಿನ ಮಾತುಕತೆ ಕಾಲದಲ್ಲಿ ಪ್ರವಾಸೋದ್ಯಮ ಮತ್ತು ಯುವ ವಿನಿಮಯ ಹಾಗೂ ಮೋಟಾರು ವಾಹನ ಒಪ್ಪಂದ ಸೇರಿದಂತೆ ಉಭಯ ರಾಷ್ಟ್ರಗಳ ನಡುವಣ ಬಾಂಧ್ಯವ ವೃದ್ಧಿಗೆ ನೆರವಾಗುವ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಅಯೋಧ್ಯಾ-ಜನಕಪುರ, ಕಠ್ಮಂಡು- ವಾರಾಣಸಿ ಹಾಗೂ ಲುಂಬಿನಿ-ಬುದ್ಧ ಗಯಾ ಮಧ್ಯೆ ಪರಸ್ಪರ ಸಹಕಾರ ಅಭಿವೃದ್ಧಿಯ ಮೂರು ಅವಳಿನಗರ ಒಪ್ಪಮದಗಳಿಗೆ ಸಹಿಹಾಕಲಾಯಿತು. ಧ್ರುವ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್​ಎಚ್) ಮಾರ್ಕ್ 3ನ್ನು ಪ್ರಧಾನಿ ಮೋದಿ ನೇಪಾಳಿ ಸೇನೆಗೆ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಅವರು 150 ಕೋಟಿ ರೂಪಾಯಿ ವೆಚ್ಚದ ಆಘಾತ ಕೇಂದ್ರ (ಟ್ರೂಮಾ ಸೆಂಟರ್)ವನ್ನೂ ನೇಪಾಳದಲ್ಲಿ ಉದ್ಘಾಟಿಸಿದರು. ಕಠ್ಮಂಡುವಿನಿಂದ ನವದೆಹಲಿಗೆ ಬಸ್ ಸೇವೆಯನ್ನೂ ಉದ್ಘಾಟಿಸಲಾಯಿತು.

2014: ನವದೆಹಲಿ: ಎಬೋಲ ಬಾಧಿತ ದೇಶಗಳಿಂದ ಬರುವವರು ಎಬೋಲ ಇಲ್ಲ ಎಂಬುದನ್ನು ದೃಢಪಡಿಸುವ ಪ್ರಮಾಣಪತ್ರ ತರಬೇಕೆಂದು ಭಾರತ ಹೇಳಿತು. ಎಬೋಲ ಗುಣಮುಖನಾಗಿ ಬಂದ ವ್ಯಕ್ತಿಯೊಬ್ಬನ ವೀರ್ಯದಲ್ಲಿ ಎಬೋಲ ವೈರಾಣು ಪತ್ತೆಯಾದ ಬಳಿಕ ರೋಗದ ಹಾವಳಿಯಿರುವ ದೇಶದಿಂದ ಬರುವವರು ತಮ್ಮ ದೇಹದ ಸ್ರಾವಗಳಲ್ಲಿ ಎಬೋಲ ವೈರಾಣು ಇಲ್ಲ ಎನ್ನುವುದನ್ನು ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿತು. ಎಬೋಲದಿಂದ ಗುಣಮುಖರಾಗಿದ್ದರೂ ಸಂಬಂಧಿಸಿದ ದೇಶ ಅವರಿಗೆ ನೋ ಎಬೋಲ ಪ್ರಮಾಣಪತ್ರ ನೀಡಿರದಿದ್ದರೆ ಅಂತವರು ಆಸ್ಪತ್ರೆಯಿಂದ ಬಿಡುಗಡೆಯಾದ  90 ದಿನಗಳ ನಂತರವೇ ಭಾರತಕ್ಕೆ ಬರಬೇಕು ಎಂದು ಆರೋಗ್ಯ ಸಚಿವ ಜೆ. ಪಿ. ನಡ್ಡ ಲೋಕಸಭೆಗೆ ತಿಳಿಸಿದರು. ನೋ ಎಬೋಲ ಪ್ರಮಾಣಪತ್ರದ ಬಗ್ಗೆ ಭಾರತ ಐವರಿ ಕೋಸ್ಟ್‌, ಸೆನೆಗಲ್‌, ನೈಜೀರಿಯ, ಘಾನಾ ಮತ್ತು ನೈಗರ್ದೇಶಗಳಲ್ಲಿರುವ ತನ್ನ ದೂತವಾಸಕ್ಕೆ ಮಾಹಿತಿ ನೀಡಿದೆ.

2014: ತಿರುಚಿನಾಪಲ್ಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಗುಡ್ಬೈ ಹೇಳಿದ ಮಾಜಿ ಕೇಂದ್ರ ಸಚಿವ ಜಿ.ಕೆ.ವಾಸನ್  ಹೊಸ ಪಕ್ಷದ ಹೆಸರು ಬಿಡುಗಡೆ ಮಾಡಿದರು. ತಂದೆ ಜಿ.ಕೆ. ಮೂಪ್ಪನಾರ್ ಕಟ್ಟಿ ಬೆಳೆಸಿದ್ದ ತಮಿಳು ಮಾನಿಲ ಕಾಂಗ್ರೆಸ್ ಪಕ್ಷವನ್ನೇ ಮತ್ತೆ ಬೆಳೆಸಲು ಮುಂದಾದ ವಾಸನ್, ತಂದೆಯ ಹೆಸರನ್ನು ಸೇರ್ಪಡೆ ಮಾಡಿ 'ಮೂಪನಾರ್ ತಮಿಳ್ ಮಾನಿಲ ಕಾಂಗ್ರೆಸ್' ಎಂದು ಪಕ್ಷಕ್ಕೆ ಮರು ನಾಮಕರಣ ಮಾಡಿದರು. ಈದಿನ ನಡೆದ ಸಮಾರಂಭದಲ್ಲಿ ಪಕ್ಷದ ಹೊಸ ಹೆಸರು ಪ್ರಕಟಿಸಲಾಯಿತು. ಸಮಾರಂಭದಲ್ಲಿ 50,000ಕ್ಕೂ ಹೆಚ್ಚು ಬೆಂಬಲಿಗರು ಪಾಲ್ಗೊಂಡಿದ್ದರು.

2014: ನವದೆಹಲಿ/ಕೋಲ್ಕತ: ಭಾರತೀಯ ಸೇನಾ ಪಡೆಯ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್(ಜಿಆರ್ಎಸ್) ಇದೇ ಮೊದಲ ಬಾರಿ ಸಮರನೌಕೆಯನ್ನು ಮಾರಿಷಸ್ಗೆ ರಫ್ತು ಮಾಡಲು ಮುಂದಾಯಿತು. 'ಸಿಜಿಎಸ್ ಬರಾಕುಡಾ' ಸಮರನೌಕೆಯನ್ನು ಮುಂದಿನ ಡಿಸೆಂಬರ್ನಲ್ಲಿ ರಫ್ತು ಮಾಡಲಾಗುತ್ತಿದೆ ಎಂದು ರೇರ್ ಅಡ್ಮಿರಲ್ .ಕೆ. ವರ್ವ ಮಾಹಿತಿ ನೀಡಿದರು. 300 ಕೋಟಿ ರೂ. ಮೌಲ್ಯದ ಸಮರನೌಕೆ ರಫ್ತು ರಕ್ಷಣಾ ಕ್ಷೇತ್ರದಲ್ಲಾಗುತ್ತಿರುವ ಪ್ರಮುಖ ಬೆಳವಣಿಗೆಯಾಗಿದ್ದು, ಆಫ್ರಿಕಾ, ಲ್ಯಾಟಿನ್ ಅಮೆರಿಕಕ್ಕೂ ರಕ್ಷಣಾ ಸಾಮಗ್ರಿ ರಫ್ತು ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. 2011ರಿಂದ  ಭಾರತ 1800 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ.  
ಎಚ್ಎಎಲ್ ಜತೆ ಒಪ್ಪಂದ: ಅಂತೆಯೇ ಎಚ್ಎಎಲ್ ಜತೆ ಅಂದಾಜು 100 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೂ ಮಾರಿಷಸ್ ಸರ್ಕಾರ ಸಹಿ ಮಾಡಿತು. ಎಚ್ಎಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಬ್ರಹ್ಮಣ್ಯನ್ ಮತ್ತು ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್ನಲ್ಲಿ ಒಪ್ಪಂದ ಏರ್ಪಟ್ಟಿತು. ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಕನ್ ಓಯಿ ಫಾಂಗ್ ವೆಂಗ್ ಪೂರುನ್ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎಂದು ಎಚ್ಎಎಲ್ ಚೇರ್ಮನ್ ಆರ್ಕೆ ತ್ಯಾಗಿ ತಿಳಿಸಿದರು.

2014: ಬೆಂಗಳೂರು: 12 ಬಾರಿ ವಿಶ್ವ ಚಾಂಪಿಯನ್ ಆದ ಪಂಕಜ್ ಆಡ್ವಾಣಿ ಅವರನ್ನು ಚೀನಾದ 14 ವರ್ಷ ವಯಸ್ಸಿನ ಯಾನ್ ಬಿಂಗ್ಟೋ ಮಣಿಸುವ ಮೂಲಕ ಅಚ್ಚರಿಯ ಗೆಲುವು ಸಾಧಿಸಿದರು. ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಟೂರ್ನಿಯಲ್ಲಿ ಈದಿನ ನಡೆದ ಪಂದ್ಯದಲ್ಲಿ ಯಾನ್ 6-4 ಅಂತರದಿಂದ ಪಂಕಜ್ ಆಡ್ವಾಣಿ ಅವರನ್ನು ಮಣಿಸಿದರು. ಟೂರ್ನಿಯ ಆರಂಭದಿಂದ ಉತ್ತಮ ಪ್ರದರ್ಶನ ನೀಡುತ್ತ ಬಂದ ಪಂಕಜ್ ಆಡ್ವಾಣಿ ಚೀನಾದ ಬಾಲಕನ ವಿರುದ್ಧ ಆಡುವಾಗ ಏಕಚಿತ್ತದ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಮೊದಲ ಫ್ರೇಮ್ ಸ್ಪರ್ಧೆಯಲ್ಲಿ 38-63ರಿಂದ ಸೋಲನುಭವಿಸಿದರು. ನಂತರದ ಫ್ರೇಮ್ಲ್ಲಿ 47-75 ಅಂತರದಿಂದ ಪರಾಭವಗೊಂಡರು. ನಂತರದ ಮೂರು ಫ್ರೇಮ್ಲ್ಲಿ ಪಂಕಜ್ 107-0, 68-10 ಮತ್ತು 60-16 ಅಂತರದಿಂದ ಗೆಲುವು ಸಾಧಿಸಿ 3-2ರಿಂದ ಮುನ್ನಡೆ ಕಂಡುಕೊಂಡರು. ಆದರೆ 6ನೇ ಫ್ರೇಮ್ಲ್ಲಿ ಪಂಕಜ್ ನಿರೀಕ್ಷೆಯ ಆಟ ಪ್ರದರ್ಶಿಸದೆ ಎದುರಾಳಿಯ ಜಯಕ್ಕೆ ಕಾರಣರಾದರು. ಯಾನ್ 83-4ರಿಂದ ಜಯಿಸಿ 3-3 ಸಮಬಲ ಸಾಧಿಸಿದರು. ರೋಚಕ ಘಟ್ಟಕ್ಕೆ ತಲುಪಿದ್ದ ಸೆಣಸಾಟದ 7ನೇ ಫ್ರೇಮ್ಲ್ಲಿ ಪಂಕಜ್ ಹಿಡಿತ ಸಾಧಿಸಿ 89-40ರಿಂದ ಗೆದ್ದು ಮುನ್ನಡೆ ಕಂಡುಕೊಂಡರು. ಯಾನ್ ಹೋರಾಟ ಅಷ್ಟಕ್ಕೇ ನಿಂತಿರಲಿಲ್ಲ. ಅಂತಿಮ ಮೂರೂ ಫ್ರೇಮ್ಲ್ಲಿ 40-67, 26-71 ಮತ್ತು 40-59 ಅಂತರದಿಂದ ಯಾನ್ ಬಲಿಷ್ಠ ಎದುರಾಳಿಯನ್ನು ಮಣಿಸಿ ಜಯಭೇರಿ ಬಾರಿಸಿ ಕೇಕೆ ಹಾಕಿದರು. ಸೋಲಿನ ಬಳಿಕ ಪ್ರತಿಕ್ರಿಯಿಸಿದ ಕರ್ನಾಟಕದ ಶ್ರೇಷ್ಠ ಆಟಗಾರ ಪಂಕಜ್, ಏಕಾಗ್ರತೆಗೆ ಪ್ರೇಕ್ಷಕರಿಂದ ವಿಪರೀತವಾದ ಅಡಚಣೆ ಉಂಟಾಯಿತು. ಇದರಿಂದಾಗಿ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಯಾನ್ ಶ್ರೇಷ್ಠ ಆಟ ಪ್ರದರ್ಶಿಸಿದ್ದಾನೆಂದು ಹೇಳಲು ಸಾಧ್ಯವಿಲ್ಲ. ಅವರ ಪ್ರದರ್ಶನದಿಂದ ನಾನು ಕಲಿಯಬೇಕಾಗಿದ್ದಿಲ್ಲ ಎಂದು ಹೇಳಿದ್ದಾರೆ.

2008: ಮುಂಬೈಯಲ್ಲಿ ನಡೆದ ಎರಡು ದಿನಗಳ ಸತತ ಭಾರಿ ಹೋರಾಟದ ಬಳಿಕ ಈದಿನ ರಾತ್ರಿ ಉಗ್ರರ ದನಿಯನ್ನು ಉಡುಗಿಸುವಲ್ಲಿ ಕಮಾಂಡೋಗಳು ಯಶಸ್ಸು ಸಾಧಿಸಿದರು. ದೇಶದಲ್ಲಿ ಇದೇ ಪ್ರಥಮ ಬಾರಿಗೆ ಮಹಾನಗರವೊಂದರಲ್ಲಿ ಸತತ 48 ಗಂಟೆಗಳ ಕಾಲ ಉಗ್ರರೊಂದಿಗೆ ನಡೆದ ಕಾಳಗ ಇದೆನಿಸಿತು. ನಾರಿಮನ್ ಹೌಸಿನಲ್ಲಿ 5 ಮಂದಿ ಒತ್ತೆಯಾಳುಗಳು ಮತ್ತು ಇಬ್ಬರು ಉಗ್ರರು ಮೃತಪಟ್ಟಿರುವುದು ಸಂಜೆ ಹೊತ್ತಿಗೆ ದೃಢಪಟ್ಟಿತು. ಇದೇ ಪ್ರಥಮ ಬಾರಿಗೆ ಜನನಿಬಿಡ ನಗರ ಪ್ರದೇಶದಲ್ಲಿ ಉಗ್ರರ ಬಂದೂಕಿನ ಬೆದರಿಕೆಯ ನಡುವೆಯೂ ವಾಯುಪಡೆ ಹೆಲಿಕಾಪ್ಟರ್ ಮೂಲಕ ಎನ್‌ಎಸ್‌ಜಿ ಕಮಾಂಡೋಗಳನ್ನು ನಾರಿಮನ್ ಹೌಸ್ ಕಟ್ಟಡದ ಮೇಲ್ಭಾಗಕ್ಕೆ ಇಳಿಸಿ ಅತ್ಯಂತ ಯೋಜನಾಬದ್ಧವಾಗಿ ನಡೆದ ಕಾರ್ಯಾಚರಣೆಗೆ ಇಡೀ ದೇಶವೇ ಸಾಕ್ಷಿಯಾಯಿತು. ಈ ಕಾರ್ಯಾಚರಣೆಗೆ 'ಆಪರೇಷನ್ ಬ್ಲಾಕ್ ಟಾರ್ನೆಡೊ' ಎಂಬ ಹೆಸರು ಇಡಲಾಗಿತ್ತು. ಹಗಲು ವೇಳೆ ಇಂಥ ಕಾರ್ಯಾಚರಣೆಯನ್ನು ಈ ಹಿಂದೆ ದೇಶದಲ್ಲಿ ಎಲ್ಲೂ ಕೂಡ ನಡೆಸಿರಲಿಲ್ಲ. ಎನ್‌ಎಸ್‌ಜಿ ಕಮಾಂಡೋಗಳು ನಾರಿಮನ್  ಭವನದ ಮೇಲ್ತುದಿ ಮಾತ್ರವಲ್ಲ; ಕೆಳಗಿನಿಂದಲೂ ಉಗ್ರರ ವಿರುದ್ಧ  ಕಾರ್ಯಾಚರಣೆ ನಡೆಸಿದರು. ಆದರೆ ನಾರಿಮನ್ ಹೌಸ್ ಸೆಣಸಾಟದ ವೇಳೆ ಬೆಂಗಳೂರು ಮೂಲದ ಎನ್‌ಎಸ್‌ಜಿ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್ (31) ಮತ್ತು ಇನ್ನೊಬ್ಬ ಎನ್‌ಎಸ್‌ಜಿ ಕಮಾಂಡೊ ವೀರ ಮರಣ ಅಪ್ಪಿದರು. ಒಬೆರಾಯ್ ಹೋಟೆಲಿನಲ್ಲಿ ಇನ್ನೂ 24 ಮೃತದೇಹಗಳು ಪತ್ತೆಯಾಗುವುದರೊಂದಿಗೆ ಈ ಭಯೋತ್ಪಾದನಾ ಕೃತ್ಯಗಳಲ್ಲಿ ಮೃತರಾದವರ ಸಂಖ್ಯೆ 8 ಮಂದಿ ವಿದೇಶಿಯರ ಸಹಿತ 200ಕ್ಕೆ ಏರಿದಂತಾಯಿತು. ಕನಿಷ್ಠ 11 ಮಂದಿ ಉಗ್ರರು ಹತರಾದರು. ಒಬ್ಬನನ್ನು ಜೀವಂತವಾಗಿ ಬಂಧಿಸಲಾಯಿತು. ಈ ಬಂಧಿತ ಉಗ್ರ ಪಾಕಿಸ್ಥಾನಿ ಪ್ರಜೆ ಎಂಬುದನ್ನು ಮಹಾರಾಷ್ಟ್ರದ ಗೃಹ ಸಚಿವ ಆರ್. ಆರ್. ಪಾಟೀಲ್ ದೃಢಪಡಿಸಿದರು.

2008: 2007ರಲ್ಲಿ ವಿಶ್ವದ ಹಿರಿಯ ಅಜ್ಜಿ ಎನ್ನುವ ಖ್ಯಾತಿಗೆ ಪಾತ್ರರಾದ ಈಡನ್ ಪಾರ್ಕರ್ ಅವರು 115 ವರ್ಷ ವಯಸ್ಸಿನಲ್ಲಿ ಈದಿನ ಶೆಲ್‌ಬೈವಿಲ್ಲೆಯಲ್ಲಿ ನಿಧನರಾದರು. ಇಂಡಿಯಾನಾ ಪ್ರದೇಶದ ಶೆಲ್‌ಬೈವಿಲ್ಲೆಯಲ್ಲಿ ಇರುವ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಾಗ ಅವರ ಆಯಸ್ಸು ಬರೋಬ್ಬರಿ 115 ವರ್ಷ 220 ದಿನಗಳಾಗಿದ್ದವು ಎಂದು ಗಿನ್ನೆಸ್ ವಿಶ್ವ ದಾಖಲೆಯ ಸಲಹೆಗಾರ ರಾಬರ್ಟ್ ಯಂಗ್ ತಿಳಿಸಿದರು. ಪಾರ್ಕರ್ ಅವರು 1893ರ ಏಪ್ರಿಲ್ 20ರಂದು ಮಧ್ಯೆ ಇಂಡಿಯಾನಾದಲ್ಲಿ       ಜನಿಸಿದ್ದರು. 2007ರಲ್ಲಿ ಜಪಾನಿನ ಯೊನ್ ಮಿನಗವಾ ಅವರು ಮೃತರಾದ ನಂತರ ಪಾರ್ಕರ್ ಅವರು ವಿಶ್ವದ ಹಿರಿಯ ವ್ಯಕ್ತಿಯಾಗಿ ದಾಖಲೆಯ ಪುಟಗಳಲ್ಲಿ ಸೇರಿದರು. ಮಿನಗವಾ ಅವರು ಪಾರ್ಕರ್ ಅವರಿಗಿಂತ ನಾಲ್ಕು ತಿಂಗಳು ಹಿರಿಯರಾಗಿದ್ದರು. ಈಡನ್ ಪಾರ್ಕರ್ ಅವರ ಪತಿ ಇರ್ಲ್ ಪಾರ್ಕರ್ 1939ರಲ್ಲಿ ಹೃದಯಾಘಾತದಿಂದ ಮೃತರಾಗಿದ್ದರು. 100 ವರ್ಷ ವಯಸ್ಸಿನವರೆಗೂ ಈಡನ್ ಏಕಾಂಗಿಯಾಗಿಯೇ ಬದುಕಿದರು. ನಂತರ ಮಗನ ಮನೆಯಲ್ಲಿ ಸ್ವಲ್ಪ ದಿನಗಳ ಕಾಲ ಇದ್ದು ಆ ಬಳಿಕ ವೃದ್ಧಾಶ್ರಮ ಸೇರಿದ್ದರು. ಈಡನ್ ಪಾರ್ಕರ್ ಅವರಿಗೆ ಇಬ್ಬರು ಮಕ್ಕಳು, ಐವರು ಮೊಮ್ಮಕ್ಕಳು, 13 ಜನ ಮರಿಮಕ್ಕಳು ಹಾಗೂ 13 ಜನ ಮರಿಮಕ್ಕಳ ಮಕ್ಕಳು.  ಅವರು ಯಾವತ್ತೂ ಮದ್ಯ ಸೇವನೆಯಾಗಲಿ ಅಥವಾ ಧೂಮಪಾನ ಮಾಡುವುದಾಗಲಿ ಮಾಡಿರಲಿಲ್ಲ.

2008: ಸೋಮಾಲಿಯಾ ಕಡಲ್ಗಳ್ಳರ ಅಟ್ಟಹಾಸ ಮತ್ತೆ ಮುಂದುವರಿಯಿತು. ರಾಸಾಯನಿಕ ವಸ್ತು ಸಾಗಿಸುತ್ತಿದ್ದ ಲೆಬನಾನ್ ದೇಶಕ್ಕೆ ಸೇರಿದ ಹಡಗನ್ನು ಕಡಲ್ಗಳ್ಳರು ಅಪಹರಿಸಿದರು. ಅಪಹೃತರಲ್ಲಿ 25 ಜನ ಭಾರತೀಯ ಸಿಬ್ಬಂದಿ. ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದ ಬ್ರಿಟಿಷ್ ಸುರಕ್ಷಾ ಪಡೆಯ ಮೂವರು ಯೋಧರನ್ನು ಹೆಲಿಕಾಪ್ಟರ್ ಬಳಸಿ ಪಾರು ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಸೋಮಾಲಿಯಾ ಪ್ರದೇಶದಲ್ಲಿ ಈ ವರ್ಷ ಅಪಹರಣಕ್ಕೀಡಾದ 97ನೇ ಹಡಗು ಇದು.

2008: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಕನ್ನಡ ನಾಡು- ನುಡಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ- 2008' ಈದಿನ ಮೂಡುಬಿದಿರೆ ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆರಂಭಗೊಂಡಿತು. 'ಕನ್ನಡ ಮನಸ್ಸು- ಶಕ್ತಿ ಮತ್ತು ವ್ಯಾಪ್ತಿ' ಎಂಬ ಪರಿಕಲ್ಪನೆಯಲ್ಲಿ 'ಸಾಹಿತ್ಯ- ಸಂಸ್ಕೃತಿ'ಗೆ ಸಂಬಂಧಿಸಿದ ಈ ಕನ್ನಡ ಉತ್ಸವವನ್ನು  ಕವಿ ಡಾ. ಚೆನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ ಡಾ.ಕೆ.ಎಸ್. ನಿಸಾರ್ ಅಹಮ್ಮದ್ ಉದ್ಘಾಟಿಸಿದರು.

 2007: ಕರ್ನಾಟಕ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಆದೇಶ ಹೊರಡಿಸಿದರು. ಇದರೊಂದಿಗೆ ಎರಡು ತಿಂಗಳಿನಿಂದ ರಾಜ್ಯದಲ್ಲಿ ತಲೆದೋರಿದ್ದ ರಾಜಕೀಯ ಗೊಂದಲಗಳಿಗೆ ತೆರೆ ಬಿತ್ತು.

2007: ಚೆಲುವು, ಅನುಭವ, ಚಿಂತನೆ ಇವೆಲ್ಲದರ ಖಣಿಯಾದ ಸೂಸಾನ್ ಪೋಲ್ಗಾರ್ (http://in.youtube.com/watch?v=4VlGGM5WYZo) ಅವರು ಈದಿನ ಬೆಂಗಳೂರಿನಲ್ಲಿ ನಡೆದ `ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್'ನ `ಮೈ ಬ್ರಿಲಿಯಂಟ್ ಬ್ರೈನ್' ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಇಪ್ಪತ್ತೊಂದು ಮಂದಿ ಆಟಗಾರರೊಂದಿಗೆ ಸ್ನೇಹ ಪರ ಚೆಸ್ ಆಡಿ, ಅತ್ಯುತ್ತಮ ಚಿಂತನಾ ಶಕ್ತಿಯ ಜೊತೆಯಲ್ಲಿ ಎದುರಾಳಿಯ ಮನಸ್ಸನ್ನು ಅರಿತು `ಕಾಯಿ'ಗಳನ್ನು ನಡೆಸುವ ಸಾಮರ್ಥ್ಯ ಇದ್ದರೆ ಎಷ್ಟೇ ಸಂಖ್ಯೆಯ ಸ್ಪರ್ಧಿಗಳಿದ್ದರೂ ಅವರನ್ನು ಸೋಲಿಸಬಹುದು ಎಂದು ತೋರಿಸಿದರು.

2007: ದಿನ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳು ಹಾಗೂ ಛಾಯಾಚಿತ್ರಗಳನ್ನು ಸಂಗ್ರಹಿಸುವ ಮೂಲಕ ಕೇರಳದ ಕೊಚ್ಚಿಯ ವಯೋವೃದ್ಧ, ಮಾಜಿ ಕಾಂಗ್ರೆಸ್ ಧುರೀಣ 78 ರ ಹರೆಯದ ಅಬ್ರಹಾಂ ಪುತುಸ್ಸೆರಿ ಲಿಮ್ಕಾ ದಾಖಲೆ ಸ್ಥಾಪಿಸಿದರು. 60 ವರ್ಷಗಳ  ಸಾರ್ವಜನಿಕ ಬದುಕಿನಲ್ಲಿ ತಮ್ಮ ಕುರಿತು  ವಿವಿಧ ದಿನಪತ್ರಿಕೆಗಳಲ್ಲಿ ಬಂದ 2000 ಕ್ಕೂ ಹೆಚ್ಚು ವರದಿಗಳು ಹಾಗೂ ಛಾಯಾಚಿತ್ರಗಳನ್ನು ಇವರು ಸಂಗ್ರಹಿಸಿದ್ದಾರೆ. 1948ರಿಂದ ಸಂಗ್ರಹಿಸಿದ ವರದಿಗಳು ಹಾಗೂ ಛಾಯಾಚಿತ್ರಗಳ 480 ಪುಟುಗಳ ಆಲ್ಬಂ ತಯಾರಿಸಿದ್ದಾರೆ. ಇದರ ತೂಕ 4.5 ಕೆಜಿ.

2007: ಗುಜರಾತಿನಲ್ಲಿ ವಿಧಾನಸಭೆ ಚುನಾವಣಾ ಸಿದ್ಧತೆಗಳು ಆರಂಭವಾದವು. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮಣಿನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. 2002ರಲ್ಲಿ ಗುಜರಾತಿನಲ್ಲಿ ಕೋಮುಗಲಭೆ ನಡೆದ ನಂತರ ಚುನಾವಣೆ ನಡೆದಿತ್ತು. ಆಗ ಕೆಲವು ಪ್ರದೇಶಗಳಲ್ಲಿ ಹಿಂದುತ್ವದ ಅಲೆ ಜೋರಾಗಿತ್ತು. ಹಿಂದೂಗಳೇ ಬಹುಸಂಖ್ಯಾತರಾದ ಮಣಿನಗರ ಕ್ಷೇತ್ರದಿಂದ ಮೋದಿ ಜಯಭೇರಿ ಬಾರಿಸಿದ್ದರು.

2007:  1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದ ನಟ ಸಂಜಯ್ ದತ್ ಹಾಗೂ ಇತರ 16 ಅಪರಾಧಿಗಳ ಬಿಡುಗಡೆಗೆ ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಸಂಜಯ್ ದತ್ ಅವರಿಗೆ ಟಾಡಾ ಕೋರ್ಟ್ 6 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಕ್ಟೋಬರ್ 22ರಿಂದ ಅವರು ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣದ ಇತರ ಆರೋಪಿಗಳನ್ನು ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು.ಸಂಜಯ್ ಹಾಗೂ ಇತರ 16 ಮಂದಿಗೆ ನವೆಂಬರ್ 27ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತು. 1995 ರಲ್ಲಿ ಮೊದಲ ಬಾರಿ ಸುಪ್ರೀಂಕೋರ್ಟ್ ಜಾಮೀನು ನೀಡಿದಾಗ ಸಂಜಯ್ ದತ್ 5 ಲಕ್ಷ ರೂ ಭದ್ರತಾ ಮುಚ್ಚಳಿಕೆ ನೀಡಿದ್ದರು. ಈಗಲೂ ಅಷ್ಟೇ ಮೊತ್ತದ ಹಣ ನೀಡಬೇಕು ಎಂದು ನ್ಯಾಯಾಧೀಶ ಕೋಡೆ ಸೂಚಿಸಿದರು.

2007: ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯ ಸ್ಥಾಪನೆ ಕುರಿತಂತೆ ಸ್ಥಗಿತವಾಗಿದ್ದ ದೀರ್ಘಕಾಲೀನ ಮಾತುಕತೆಯನ್ನು ಪುನರಾರಂಭಿಸಲು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರು ಒಪ್ಪಿಕೊಂಡರು. ಮುಂದಿನ ವರ್ಷದ ಅಂತ್ಯದೊಳಗಾಗಿ ಸ್ವತಂತ್ರ ಪ್ಯಾಲೆಸ್ಟೈನಿ ರಾಜ್ಯ ಸ್ಥಾಪಿಸಲು ಇಸ್ರೇಲ್ ಪ್ರಧಾನಿ ಎಹುದ್ ಓಲ್ಮರ್ಟ್ ಮತ್ತು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಪರಸ್ಪರ ಒಪ್ಪಿಗೆ ನೀಡಿದ್ದಾರೆ' ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮೇರಿ ಲ್ಯಾಂಡಿನ ಅನ್ನಾಪೊಲಿಸ್ನಲ್ಲಿ ಹೇಳಿದರು.

 2007: ಪಾಕಿಸ್ಥಾನದ ಸೇನಾ ಮುಖ್ಯಸ್ಥನ ಹುದ್ದೆಯನ್ನು ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಕೊನೆಗೂ ತ್ಯಜಿಸಿದರು. ಪುನಃ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಒಂದು ದಿನ ಮುಂಚಿತವಾಗಿ  ಮುಷರಫ್ ಅವರು ಸೇನಾ ಮುಖ್ಯಸ್ಥನ ಸ್ಥಾನವನ್ನು ಇಸ್ಲಾಮಾಬಾದಿನಲ್ಲಿ ಜನರಲ್ ಅಷ್ಫಾಕ್ ಪರ್ವೇಜ್ ಕಿಯಾನಿ ಅವರಿಗೆ ವಹಿಸಿಕೊಟ್ಟರು.

2007: ಕಿರ್ಗಿಜ್ ಸ್ಥಾನದ ಪ್ರಧಾನಿ ಅಲ್ಮಜ್ ಬೆಕ್ ಅತಾಂಬೆಯೆವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ರಾಜೀನಾಮೆಯನ್ನು ಅಧ್ಯಕ್ಷ ಕುರ್ಮನ್ ಬೆಕ್ ಬಕಿಯೆವ್ ಅಂಗೀಕರಿಸಿದರು.

2007: 2001ರಲ್ಲಿ ಬಹು ಚರ್ಚೆಗೆ ಗ್ರಾಸವಾಗಿದ್ದ `ಬಿಲ್ಡರ್' ಶ್ರೀನಿವಾಸ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಕ್ಕೆ ಒಳಗಾಗಿದ್ದ ಮುತ್ತಪ್ಪ ರೈ ಅವರನ್ನು ಆರೋಪ ಮುಕ್ತಗೊಳಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಊರ್ಜಿತಗೊಳಿಸಿತು.

2007: ತರಗತಿ ಬೋಧನೆಯಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಲು ನೆರವಾಗುವ, ಬೋಧನೆ ಮತ್ತು ಕಲಿಕೆಯನ್ನು ಹೆಚ್ಚು ಸುಲಲಿತಗೊಳಿಸುವ ಸಾಫ್ಟ್ಟವೇರನ್ನು ಬೆಂಗಳೂರಿನಲ್ಲಿ ಪ್ರೊಮೆಥಿಯಾನ್ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ವಿಭಿನ್ನ ಬಗೆಯ ತಂತ್ರಜ್ಞಾನ ಆಧಾರಿತ ಬೋಧನಾ ವಿಧಾನದ ಮೂಲಕ ಮಕ್ಕಳ ಗಮನ ಕೇಂದ್ರಿಕರಿಸುತ್ತಲೇ ಪರಿಣಾಮಕಾರಿ ಕಲಿಕೆಗೆ ಈ ಶ್ವೇತ ಹಲಗೆ (ವ್ಹೈಟ್ ಬೋರ್ಡ್) ಶ್ರೇಣಿಯ ಉತ್ಪನ್ನಗಳು ಶಿಕ್ಷಣ ರಂಗದಲ್ಲಿ ಹೊಸ ಅಲೆ ಮೂಡಿಸಲಿವೆ ಎಂಬುದು ಕಂಪೆನಿಯ ಅಂತಾರಾಷ್ಟ್ರೀಯ ಮಾರಾಟ ವ್ಯವಸ್ಥಾಪಕ ಪೀಟರ್ ಆರ್ಮೆರೋಡ್ ವಿಶ್ವಾಸ. ಈ ಶ್ವೇತ ಹಲಗೆಯನ್ನು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ಬಿಳಿ ಹಲಗೆ ಜೊತೆಗೆ ನೀಡಲಾಗುವ ಈ ಸಾಫ್ಟ್ಟವೇರ್ ವರ್ಣರಂಜಿತ ಕಲಿಕೆಯ ಅನುಭವ ನೀಡುತ್ತದೆ. ಬೋಧನೆಗೆ ಅಗತ್ಯವಾದ ಪಠ್ಯಕ್ರಮ, ಚಿತ್ರ, ನಕ್ಷೆ ಮತ್ತಿತರ ಪೂರಕ ಮಾಹಿತಿಯೂ ಈ ಸಾಫ್ಟವೇರಿನಲ್ಲಿ ಅಡಕವಾಗಿರುತ್ತದೆ.  ಸದ್ಯಕ್ಕೆ ಈ ತಂತ್ರಜ್ಞಾನವು 25 ಭಾಷೆಗಳಲ್ಲಿ ಲಭ್ಯ. ಮುಂದೆ ಶೀಘ್ರದಲ್ಲೇ 40 ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಬೆಥನಿ ಹೈಸ್ಕೂಲ್ ಈ ತಂತ್ರಜ್ಞಾನ ಅಳವಡಿಸಿಕೊಂಡಿದೆ.

2006: ತಮ್ಮ ಆಪ್ತ ಸಹಾಯಕ ಶಶಿನಾಥ ಝಾ ಕೊಲೆ ಪ್ರಕರಣದಲ್ಲಿ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಶಿಬು ಸೊರೇನ್ ತಪ್ಪಿತಸ್ಥ ಎಂಬುದಾಗಿ ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ಕೆದಿಯಾ ಅವರ ನ್ಯಾಯಾಲಯ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಶಿಬು ಸೊರೇನ್  ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಕತಾಳೀಯವಾಗಿ 12 ವರ್ಷಗಳ ಬಳಿಕ ಕೊಲೆ ನಡೆದ ದಿನಾಂಕದಂದೇ ತಪ್ಪಿತಸ್ಥರೆಂದು ಘೋಷಿತರಾಗಿರುವ ಸೊರೇನ್ ಸ್ವಾತಂತ್ರ್ಯಾನಂತರ ಕೊಲೆ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾದ ಮೊದಲ ಕೇಂದ್ರ ಸಂಪುಟ ಸಚಿವ ಎಂಬ ಕುಖ್ಯಾತಿಗೂ ಪಾತ್ರರಾದರು. 1994ರ ನವೆಂಬರ್ 28ರಂದು ಝಾ ಅವರನ್ನು ಕೊಂದ ಪ್ರಕರಣದಲ್ಲಿ ಇತರ ನಾಲ್ಕು ಮಂದಿಯನ್ನು ಕೂಡಾ ತಪ್ಪಿತಸ್ಥರು ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ತೀರ್ಪು ಹೊರಬೀಳುತ್ತಿದ್ದಂತೆಯೇ ನ್ಯಾಯಾಲಯದಲ್ಲಿ ಹಾಜರಿದ್ದ 62 ವರ್ಷದ ಸೊರೇನ್ ಅವರನ್ನು ಬಂಧಿಸಲಾಯಿತು. ಸೊರೇನ್ ಅವರು ಕ್ರಿಮಿನಲ್ ಸಂಚು, ಕೊಲೆ ಮತ್ತು ಅಪಹರಣದ ಅಪರಾಧಗಳಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಸೊರೇನ್ ಅವರು ಸಂಪುಟ ತ್ಯಜಿಸಬೇಕಾಗಿ ಬಂದದ್ದು ಇದು ಎರಡನೇ ಸಲ. ಈ ಮೊದಲು 1980ರ ಆದಿಯ ಪ್ರತಿಭಟನಾ ಪ್ರದರ್ಶನ ಕಾಲದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯವೊಂದು ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದಾಗ ಸೊರೇನ್ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ನಂತರ ಜಾಮೀನು ಪಡೆದಿದ್ದ ಸೊರೇನ್ ಅವರನ್ನು ಈ ವರ್ಷ ಜನವರಿಯಲ್ಲಿ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ಝಾ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಝಾ ಅವರನ್ನು 1994ರ ಮೇ 22ರಂದು ದೆಹಲಿಯಿಂದ ಅಪಹರಿಸಿ ರಾಂಚಿ ಸಮೀಪದ ಪಿಸ್ಕಾ ನಗರಿ ಗ್ರಾಮಕ್ಕೆ ಒಯ್ದು ಅಲ್ಲಿ ಕೊಲ್ಲಲಾಯಿತು ಎಂದು 1998ರ ನವೆಂಬರ್ 10ರಂದು ಸಲ್ಲಿಸಿದ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿತ್ತು. ಝಾ ಅವರಿಗೆ 1993ರ ಜುಲೈ ತಿಂಗಳಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ಅವಿಶ್ವಾಸ ನಿರ್ಣಯ ಎದುರಿಸಿದ ಸಂದರ್ಭದಲ್ಲಿ ರಾವ್ ಸರ್ಕಾರ ಉಳಿಕೆಗಾಗಿ ನಡೆದ ಜೆಎಂಎಂ - ಕಾಂಗ್ರೆಸ್ ಒಪ್ಪಂದದ ವಿವರ ಗೊತ್ತಿತ್ತು. ಅವರು ಈ ಹಣದಲ್ಲಿ ತಮ್ಮ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲಾಯಿತು. ಝಾ ಅವರು ಹೆಚ್ಚು ಹಣ ನೀಡುವಂತೆ ಸೊರೇನ್ ಅವರನ್ನು ಒತ್ತಾಯಿಸುತ್ತಿದ್ದರು. ಹೀಗೆ ಒತ್ತಾಯಿಸಲು ಸೊರೇನ್ ಅವರ ಅಕ್ರಮ ಹಣಕಾಸು ವ್ಯವಹಾರಗಳ ಬಗ್ಗೆ ಹಾಗೂ ಅವರ ಹಲವಾರು ರಹಸ್ಯಗಳು ಗೊತ್ತಿದ್ದುದು ಕಾರಣವಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ತಿಳಿಸಿತ್ತು. 1998ರ ಆಗಸ್ಟ್ 13ರಂದು ಸಿಬಿಐ ಝಾ ಅವರ ಅಸ್ಥಿಪಂಜರವನ್ನು ರಾಂಚಿ ಸಮೀಪದ ಪಿಸ್ಕಾನಗರಿ ಗ್ರಾಮದ ಸಮೀಪ ಪತ್ತೆ ಹಚ್ಚಲಾಯಿತು ಎಂದು ಹೇಳಿತ್ತು. ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಅಸ್ಥಿಪಂಜರದ ಪರಿಶೀಲನೆಯ ಬಳಿಕ ತಲೆ ಬುರುಡೆ ಝಾ ಅವರದ್ದು ಎಂದು ತಮ್ಮ ವರದಿಯಲ್ಲಿ ದೃಢಪಡಿಸಿದ್ದರು. ಸೊರೇನ್ ಅವರು ಮೊದಲಿಗೆ ಝಾ ಅವರಿಗೆ ದಕ್ಷಿಣ ದೆಹಲಿಯಲ್ಲಿ ಜವಳಿ ಗಿರಣಿ ಒಂದರ ಸ್ಥಾಪನೆಗಾಗಿ 15 ಲಕ್ಷ ರೂಪಾಯಿ ನೀಡಿದ್ದರು. ಈ ವಹಿವಾಟಿನಲ್ಲಿ ನಷ್ಟವಾದಾಗ ಝಾ ಮತ್ತೆ ಹಣ ನೀಡುವಂತೆ ಸೊರೇನ್ ಅವರನ್ನು ಕಾಡತೊಡಗಿದರು. ಇದು ಅಂತಿಮವಾಗಿ ಅವರ ಕೊಲೆಯಲ್ಲಿ ಪರ್ಯವಸಾನಗೊಂಡಿತು ಎಂದೂ ಸಿಬಿಐ ತಿಳಿಸಿತ್ತು.

2006: ಮುಂಬೈಯಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ಡಿನ ಜನಪ್ರಿಯ ನಟ ಸಂಜಯದತ್ (47) ಅವರು ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದ್ದು ಆತ ಡಿಸೆಂಬರ್ 19ರಂದು ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಆದರೆ ಸಾಕ್ಷ್ಯಾಧಾರಗಳ ಪ್ರಕಾರ ಸಂಜಯದತ್ ಭಯೋತ್ಪಾದಕ ಅಲ್ಲ, ಅವರ ಮೇಲಿನ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಆರೋಪ ಕೈಬಿಡಲಾಗಿದೆ ಎಂದು ನ್ಯಾಯಮೂರ್ತಿ ಪಿ.ಡಿ. ಖೋಡೆ ತೀರ್ಪು ನೀಡಿದರು.

2005: ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶಿವರಾಜ್ ಸಿಂಗ್ ಚೌಹಾಣ್ ಆಯ್ಕೆಯಾದರು. ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಮತ್ತು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ತೀವ್ರ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.

1990: ಬ್ರಿಟನ್ನಿನ ಮೊತ್ತ ಮೊದಲ ಮಹಿಳಾ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರು ರಾಣಿ ಎರಡನೇ ಎಲಿಜಬೆತ್ ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದರು. `ಉಕ್ಕಿನ ಮಹಿಳೆ' ಎಂದೇ ಖ್ಯಾತಿ ಪಡೆದಿದ್ದ ಇವರು  ಮೂರು ಚುನಾವಣೆಗಳನ್ನು ಸತತವಾಗಿ ಜಯಿಸಿ ಬ್ರಿಟನನ್ನು 11 ವರ್ಷಗಳಷ್ಟು ದೀರ್ಘಕಾಲ ಆಳಿದ (1979-1990) ಪ್ರಧಾನಿ.

1964: ಮೆರೈನರ್ -4 ಬಾಹ್ಯಾಕಾಶ ಸಂಶೋಧನಾ ನೌಕೆಯನ್ನು  ಅಮೆರಿಕವು ಮಂಗಳ ಗ್ರಹದತ್ತ ಹಾರಿಸಿತು.

1957: ಸಾಹಿತಿ ಹಾ.ವಿ. ಮಂಜುಳಾ ಶಿವಾನಂದ ಜನನ.

1954: ಸಾಹಿತಿ ನಂದಿನಿ ಕಾಪಡಿ ಜನನ.

1946: ಸಾಹಿತಿ ಎಸ್. ದಿವಾಕರ್ ಜನನ.

1944: ಸಾಹಿತಿ ಕ.ರಾ. ಮೋಹನ್ ಜನನ.

1943: ದ್ವಿತೀಯ ವಿಶ್ವ ಸಮರ ಕಾಲದಲ್ಲಿ ಅಮೆರಿಕದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹಾಗೂ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಮೂವರೂ ಟೆಹರಾನಿನಲ್ಲಿ ಸಭೆ ಸೇರಿದರು. `ಎರಡನೇ ರಂಗ' ಸ್ಥಾಪನೆ ಈ ಮಾತುಕತೆಯ ಗುರಿಯಾಗಿತ್ತು. ಜರ್ಮನ್ ಆಕ್ರಮಿತ ಫ್ರಾನ್ಸಿನಲ್ಲಿ ದಾಳಿ ನಡೆಯುವ ಕಾಲಕ್ಕೇ ಪೂರ್ವದಿಂದ ದಾಳಿ ನಡೆಸಲು ಸ್ಟಾಲಿನ್ ಒಪ್ಪಿಗೆ ನೀಡಿದರು.

1942: ಸಾಹಿತಿಗಳಾದ ಎಂ.ಎಂ. ಕಲಬುರ್ಗಿ, ಚಿ. ಶ್ರೀನಿವಾಸ ರಾಜು ಜನನ.

1940: ಸಾಹಿತಿ ಎಸ್. ರಾಜಗೋಪಾಲಾಚಾರಿ ಜನನ.

1934: ಸಾಹಿತಿ ಗೌರು ಭಟ್ ಜನನ.

1925: ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಡಾ. ಬಿ.ಸಿ. ರಾಮಚಂದ್ರ ಶರ್ಮ (28-11-1925ರಿಂದ 18-4-2005) ಅವರು ಚಂದ್ರಶೇಖರ ಶರ್ಮ- ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಮುಂಬೈಯಲ್ಲಿ ಜನಿಸಿದರು. ಇವರ ಪೂರ್ವೀಕರು ನಾಗಮಂಗಲ ತಾಲ್ಲೂಕಿನವರು.

1864: ಬಾಂಬೆ-ಬರೋಡಾ ಅಂಡ್ ಸೆಂಟ್ರಲ್ ಇಂಡಿಯಾ ರೈಲ್ವೇಸ್ (ಬಿಬಿ ಅಂಡ್ ಸಿಐ) ಮಾರ್ಗವನ್ನು ಸೂರತ್ ಸಮೀಪದ ಉಟ್ರಾನಿನಲ್ಲಿ  ಉದ್ಘಾಟಿಸಲಾಯಿತು. ಈ ರೈಲು ಮಾರ್ಗವು ಸೂರತ್ತಿನ ಉಟ್ರಾನಿನಿಂದ ಬಾಂಬೆಯ (ಈಗಿನ ಮುಂಬೈ) ಗ್ರಾಂಟ್ ರೋಡ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿತು. 1866ರಲ್ಲಿ ಗ್ರಾಂಟ್ ರೋಡ್ ಲೈನನ್ನು ಬ್ಯಾಕ್ ಬೇವರೆಗೆ ವಿಸ್ತರಿಸಲಾಯಿತು. 1973ರಲ್ಲಿ ಕೊಲಾಬಾದಲ್ಲಿ ನೂತನ ಟರ್ಮಿನಲ್ ಸ್ಥಾಪನೆ ಸಲುವಾಗಿ ಇನ್ನಷ್ಟು ವಿಸ್ತರಿಸಲಾಯಿತು.

1520: ಪೋರ್ಚುಗೀಸ್ ನಾವಿಕ ಫರ್ಡಿನಾಂಡ್ ಮೆಗೆಲ್ಲನ್ ದಕ್ಷಿಣ ಅಮೆರಿಕನ್ ಜಲಸಂಧಿಯ ಮೂಲಕವಾಗಿ ಫೆಸಿಫಿಕ್ ಸಾಗರವನ್ನು ತಲುಪಿದ. ಈ ಜಲಸಂಧಿಗೆ ಈಗ ಆತನ ಹೆಸರನ್ನೇ ಇಡಲಾಗಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement