My Blog List

Friday, April 16, 2010

ಇಂದಿನ ಇತಿಹಾಸ History Today ಏಪ್ರಿಲ್ 11

ಇಂದಿನ ಇತಿಹಾಸ

ಏಪ್ರಿಲ್ 11

'ನಡೆದಾಡುವ ರಾಯರು' ಎಂದೇ ಭಕ್ತ ಸಮೂಹದಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು (86) ಬೆಂಗಳೂರಿನಲ್ಲಿ ನಿಧನರಾದರು. ಶ್ರೀ ಸುಶಮೀಂದ್ರತೀರ್ಥರ ಪೂರ್ವಾಶ್ರಮದ ಹೆಸರು ಸುಪ್ರಜ್ಞೇಂದ್ರಾಚಾರ್ಯ. ಮೂಲತಃ ನಂಜನಗೂಡಿನವರು. ತುಂಗಭದ್ರಾ ನದಿ ತಟದಲ್ಲಿರುವ ಬಿಚ್ಚಾಲಿ ಗ್ರಾಮದಲ್ಲಿ 1985 ರಲ್ಲಿ ಸನ್ಯಾಸ ಸ್ವೀಕರಿಸಿದರು. 1986ರಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದರು.

2009: 'ನಡೆದಾಡುವ ರಾಯರು' ಎಂದೇ ಭಕ್ತ ಸಮೂಹದಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು (86) ಬೆಂಗಳೂರಿನಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಸಂಖ್ಯಾತ ಭಕ್ತರು, ಶಿಷ್ಯವೃಂದವನ್ನು ಅಗಲಿದರು. ಮೂರು ತಿಂಗಳುಗಳಿಂದ ಅಸ್ವಸ್ಥರಾಗಿದ್ದ ಶ್ರೀಪಾದಂಗಳವರು ಬೆಂಗಳೂರಿನ ಯಶವಂತಪುರ ಗೇಟ್ ಬಳಿಯ ಕೊಲಂಬಿಯಾ ಮಾಸಿನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಶ್ರೀ ಸುಶಮೀಂದ್ರತೀರ್ಥರ ಪೂರ್ವಾಶ್ರಮದ ಹೆಸರು ಸುಪ್ರಜ್ಞೇಂದ್ರಾಚಾರ್ಯ. ಮೂಲತಃ ನಂಜನಗೂಡಿನವರು. ತುಂಗಭದ್ರಾ ನದಿ ತಟದಲ್ಲಿರುವ ಬಿಚ್ಚಾಲಿ ಗ್ರಾಮದಲ್ಲಿ 1985 ರಲ್ಲಿ ಸನ್ಯಾಸ ಸ್ವೀಕರಿಸಿದರು. 1986ರಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದರು. ಶ್ರೀಪಾದಂಗಳವರು, ಶ್ರೀ ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನವೆಂದು ಪ್ರಸಿದ್ಧವಾದ ಶ್ರೀ ರಾಘವೇಂದ್ರಸ್ವಾಮಿ ಮಠದ ಗುರುಪರಂಪರಾ ಪಟ್ಟಿಯ ಪ್ರಕಾರ 53ನೇ ಪೀಠಾಧಿಪತಿಗಳು. ಕಳೆದ 25 ವರ್ಷದ ಅವಧಿಯಲ್ಲಿ ಶ್ರೀಪಾದಂಗಳು ಮಂತ್ರಾಲಯ ಮಠದ ಪೀಠಾಧಿಪತಿಗಳಾಗಿ ಮಾಡಿದ ಕಾರ್ಯಗಳು ಮಂತ್ರಾಯಲಕ್ಕಷ್ಟೇ ಸೀಮಿತವಾಗಿರಲಿಲ್ಲ. ಸುನಾಮಿ ಸಂತ್ರಸ್ತರಿಗೆ, ಆತ್ಮಹತ್ಯೆ ಮಾಡಿಕೊಂಡ ರೈತ ಸಮೂಹಕ್ಕೆ, ಸಂಕಷ್ಟದಲ್ಲಿರುವ ರೈತರಿಗೆ ಹಾಗೂ ಸಮಾಜಕ್ಕೆ ವಿವಿಧ ರೀತಿಯಿಂದ ನೆರವಾಗಿದ್ದರು.

2009: ಉದ್ಯೋಗ ಕಡಿತ ದೇಶದ ಅತಿ ದೊಡ್ಡ ಐ.ಟಿ ಕಂಪೆನಿ ಬೆಂಗಳೂರು ಮೂಲದ ಇನ್ಛೋಸಿಸ್‌ನಲ್ಲೂ ಶುರುವಾಯಿತು. ಸುಮಾರು 2,100 ಉದ್ಯೋಗಿಗಳು ಕಂಪೆನಿಯಿಂದ ಹೊರಬಿದ್ದಿರುವುದಾಗಿ ಇನ್ಫೋಸಿಸ್ ಹೇಳಿತು. ಕಳಪೆ ಸಾಮರ್ಥ್ಯ ತೋರಿದ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾದರೆ, ಇನ್ನು ಕೆಲವರು ಬೇರೆ ಕಡೆ ಅವಕಾಶ ಅರಸಿ ಸ್ವಇಚ್ಚೆಯಿಂದ ಕಂಪೆನಿ ತ್ಯಜಿಸಿದ್ದಾರೆ ಎಂದು ಕಂಪೆನಿ ಹೇಳಿತು.

2009: ಗಾಂಧಿವಾದಿ, ಮಾಜಿ ಶಾಸಕ, ಹಿರಿಯ ಸಾಹಿತಿ ಬಿ.ಎಂ.ಇದಿನಬ್ಬ (90) ಅವರು ಉಳ್ಳಾಲದ ಸ್ವಗೃಹದಲ್ಲಿ ನಿಧನರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಆಡಳಿತದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಪ್ರಯತ್ನ ನಡೆಸಿದ್ದರು.. ಚೊಚ್ಚಲ ಅಖಿಲ ಭಾರತ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಗೌರವ ಅವರದಾಗಿತ್ತು. 12 ವರ್ಷ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮತ್ತು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿ, ಐದು ವರ್ಷ ಮಂಗಳೂರು ಕನ್ನಡ ಸಂಘದ ಅಧ್ಯಕ್ಷರಾಗಿ, ಒಂಬತ್ತು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಇದಿನಬ್ಬ ಅವರು, ರಾಜ್ಯೋತ್ಸವ ಪ್ರಶಸ್ತಿ (1987), ಸಂದೇಶ ಪ್ರಶಸ್ತಿ (2000), ಏಕೀಕರಣ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಪಡೆದಿದ್ದರು. ಶಿವಮೊಗ್ಗ ಕನ್ನಡ ಸಂಘದ ಸನ್ಮಾನ, ದಿ.ಗೋಪಾಲಗೌಡ ಅಭಿಮಾನಿಗಳ ಸಂಘದಿಂದ ಸನ್ಮಾನ, ಮೈಸೂರು ಸೌಹಾರ್ದ ಸಂಘದ ಸನ್ಮಾನಕ್ಕೆ ಅವರು ಪಾತ್ರರಾಗಿದ್ದರು. ಸಾಹಿತ್ಯ ರತ್ನ, ಕಾವ್ಯ ಜ್ಯೋತಿ, ದಕ್ಷ ಸಹಕಾರಿ ಕಾವ್ಯ ವಾಚನ ಭೂಷಣ ಬಿರುದು ಪಡೆದಿದ್ದರು. 'ಮಾನವತಾ ಸಾಹಿತ್ಯ ಮಾಲೆ' ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಅನೇಕ ಕೃತಿಗಳನ್ನು ಪ್ರಕಟಿಸಿದ್ದರು. ಬಾಳಿನ ಚಿತ್ರಗಳು, ಹರಿದ ಕೋಟು, ಒಂದು ಗೊನೆ ರಸಬಾಳೆ, ರತ್ನರಾಶಿ, ಹೃದಯ ಪರಿವರ್ತನೆ, ಕಥಾ ಗೊಂಚಲು ಇದಿನಬ್ಬ ಅವರ ಕಥಾ ಸಂಕಲನಗಳು. ಹೃದಯಗೀತೆಗಳು, ಜೇನುಗೂಡು, ವಿರಹಗೀತೆಗಳು, ಕಿಡಿಗಳು, ಹನಿಗವನಗಳು, ಕಾವ್ಯ ಕುಂಜ ಅವರ ಕವನ ಸಂಕಲನಗಳು. ಉದಯ ಚಂದ್ರ ವಾರಪತ್ರಿಕೆಯ ಪ್ರಧಾನ ಉಪ ಸಂಪಾದಕರಾಗಿ, ನವಕೀರ್ತಿ ಪತ್ರಿಕೆ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 1957ರಿಂದ 1965ರವರೆಗೆ 'ಪ್ರಜಾವಾಣಿ' ಮಂಗಳೂರು ಪ್ರತಿನಿಧಿಯಾಗಿ ಹಾಗೂ ವಿಶಾಲ ಕರ್ನಾಟಕ ಪತ್ರಿಕೆ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದರು. 1938ರಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಇದಿನಬ್ಬ ಬದುಕಿನುದ್ದಕ್ಕೂ ಖಾದಿಧಾರಿಯಾಗಿ ಗಾಂಧಿ ಮಾರ್ಗ ರೂಢಿಸಿಕೊಂಡಿದ್ದರು. ಉಳ್ಳಾಲ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಪತ್ನಿ ಅಲಿಮಮ್ಮ ಆರು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು.

2009: ಎಲ್‌ಟಿಟಿಇ ಬಂಡುಕೋರರನ್ನು ಹತ್ತಿಕ್ಕುವ ಕೊನೆಯ ಹಂತ ತಲುಪಿದ ಶ್ರೀಲಂಕಾ ಸೇನೆ, ಈ ಹೋರಾಟದ ನಡುವೆ ಸಂತ್ರಸ್ತರಾದ ನಾಗರಿಕರನ್ನು ರಕ್ಷಿಸಲು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 47 ಬಂಡುಕೋರರು ಹತರಾದರು. ಅಂಪಲವನ್ ಪೊಕ್ಕನೈ ಪ್ರದೇಶದಲ್ಲಿದ್ದ ಬಂಡುಕೋರರ ಹಲವು ತಾಣಗಳ ಮೇಲೆ ಸೇನೆ ತೀವ್ರ ದಾಳಿ ನಡೆಸಿತು.

2009: ಸಂಗೀತ ಹಲವು ರೋಗಗಳಿಗೆ ಮದ್ದು ಎಂಬುದು ಈ ಮೊದಲೇ ಸಾಬೀತಾಗಿದ್ದರೆ, ಅದು ಹೃದಯಕ್ಕೂ ಹತ್ತಿರ ಎಂದು ಸಂಶೋಧನೆಯೊಂದು ಬಹಿರಂಗ ಪಡಿಸಿತು. ಹೃದಯ ಬೇನೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಮೇಲೆ ಸಂಗೀತ ಬೀರುವ ಪರಿಣಾಮವನ್ನು ಅಧ್ಯಯನ ಮಾಡುವ ಮೂಲಕ ಸಂಶೋಧಕರು ಈ ವಿಚಾರವನ್ನು ಪತ್ತೆ ಹಚ್ಚಿದರು. ಫಿಲಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾನಿಲಯದ ಜೀವನ ಕಲೆ ಮತ್ತು ಗುಣಮಟ್ಟ ಸಂಶೋಧನಾ ಕೇಂದ್ರ ನಡೆಸಿದ ಸಂಶೋಧನೆ ಹೃದ್ರೋಗಿಗಳ ರಕ್ತದೊತ್ತಡ ಹಾಗೂ ತಳಮಳವನ್ನು ಸಂಗೀತ ಶಮನಗೊಳಿಸುತ್ತದೆ ಎಂದು ಬಹಿರಂಗ ಪಡಿಸಿತು. 'ಅನಿಶ್ಚಿತತೆ, ಆತಂಕದಿಂದ ಸುತ್ತುವರಿದ ಚಿಕಿತ್ಸೆ ಫಲಕಾರಿಯಾಗದು. ಉದಾಹರಣೆಗೆ ಕ್ಷೋಭೆಯಿಂದ ರಕ್ತದೊತ್ತಡ ಏರುತ್ತದೆ. ಇದು ಹಲವು ತೊಂದರೆಗಳಿಗೆ ಆಹ್ವಾನ ಒಡ್ಡುತ್ತದೆ. ಆದರೆ ಸಂಗೀತ ಆಲಿಕೆ ಒತ್ತಡವನ್ನು ಕಡಿಮೆ ಮಾಡುವುದರಿಂದ ಸಹಜವಾಗಿಯೇ ಇತರ ತೊಂದರೆಗಳೂ ದೂರಾಗುತ್ತವೆ. ಆದ್ದರಿಂದ ಹೃದ್ರೋಗಿಗಳು ಸಂಗೀತ ಕೇಳುವಂತೆ ನಮ್ಮ ಸಂಶೋಧನೆ ಸಲಹೆ ನೀಡುತ್ತದೆ' ಎಂದು ಕೇಂದ್ರದ ಜೋಕ್ ಬ್ರಾಟ್ ಹೇಳಿದರು. 1461 ರೋಗಿಗಳ ಮೇಲಿನ ಪ್ರಯೋಗದಿಂದ 23 ಅಧ್ಯಯನಗಳು ಕಂಡುಕೊಂಡ ದತ್ತಾಂಶಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಕೆಲವು ರೋಗಿಗಳಿಗೆ ಸಂಗೀತ ಚಿಕಿತ್ಸಕರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಕೆಲವರಿಗೆ ಆರೋಗ್ಯ ಸುರಕ್ಷಾ ವೃತ್ತಿಪರರು ಸಿದ್ಧಪಡಿಸಿದ್ದ ಧ್ವನಿಮುದ್ರಿತ ಸಂಗೀತವನ್ನು ಕೇಳಿಸಲಾಗಿತ್ತು ಎಂದು ಅವರು ಹೇಳಿದರು.

2009: ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಆದಿ ಚುಂಚನಗಿರಿಮಠದ ಬಾಲ ಗಂಗಾಧರನಾಥ ಸ್ವಾಮೀಜಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ ಸೇರಿದಂತೆ ಎಂಟು ಮಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲು ಕುಲಾಧಿಪತಿಯೂ ಆದ ರಾಜ್ಯಪಾಲ ರಾಮೇಶ್ವರ ಠಾಕೂರ್ ಒಪ್ಪಿಗೆ ಸೂಚಿಸಿದರು. ಬೆಂ.ವಿ.ವಿಯ ಸೆಂಟ್ರಲ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ಎಸ್.ಜೆ.ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಷಡಕ್ಷರ ಸ್ವಾಮಿ, ಪರಿಸರ ತಜ್ಞ ಎ.ಎನ್.ಯಲ್ಲಪ್ಪ ರೆಡ್ಡಿ, ಪ್ರಸಿದ್ಧ ಗಾಯಕ ಸಿ.ಆಶ್ವತ್ಥ್, ಉದ್ಯಮಿ ಆರ್.ಎನ್.ಶೆಟ್ಟಿ, ದಾನಿ ಬಿ.ಎಲ್.ಎಸ್. ಮೂರ್ತಿ ಅವರು ಗೌರವ ಡಾಕ್ಟರೇಟ್‌ಗೆ ಆಯ್ಕೆಯಾದ ಇತರ ಮಹನೀಯರು.

2008: ಸರ್ಕಾರಿ ಅಧಿಕಾರಿಗಳ ಕಿರುಕುಳ ತಾಳಲಾರದೆ ಬಿಜನೋರ್ ಸಚಿವಾಲಯದ ಕಚೇರಿ ಹೊರಗೆ ರೈತ ಅಶೋಕ ಕುಮಾರ್ (42) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಅಶೋಕ ಕುಮಾರ್ ಮತ್ತು ನೆರೆಯವನೊಂದಿಗಿನ ಭೂ ವಿವಾದವನ್ನು ಅಧಿಕಾರಿಗಳು ದೀರ್ಘಕಾಲದಿಂದ ಇತ್ಯರ್ಥಗೊಳಿಸಿರಲಿಲ್ಲ. ವಿವಾದವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

2008: ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಪತ್ನಿ, ರೂಪದರ್ಶಿ ಕಾರ್ಲಾ ಬ್ರೂನಿ ಅವರ ನಗ್ನ ಛಾಯಾಚಿತ್ರ ನ್ಯೂಯಾರ್ಕಿನಲ್ಲಿ 45,000 ಪೌಂಡುಗಳಿಗೆ ಮಾರಾಟವಾಯಿತು. ಅಂದಾಜಿಗಿಂತಲೂ 20 ಪಟ್ಟು ಹೆಚ್ಚು ಹಣಕ್ಕೆ ಈ ಚಿತ್ರ ಮಾರಾಟವಾಯಿತು. 15 ವರ್ಷಗಳ ಹಿಂದೆ ಛಾಯಾಚಿತ್ರಗ್ರಾಹಕ ಮೈಕೆಲ್ ಕೋಮ್ಟೆ ಅವರು ಫ್ರೆಂಚ್ ಪ್ರಥಮ ಮಹಿಳೆಯ ಅಕರ್ಷಕ ಚಿತ್ರವನ್ನು ಸೆರೆಹಿಡಿದಿದ್ದರು.

2008: 2007ರ ಜೂನ್ ತಿಂಗಳಲ್ಲಿ ಲಂಡನ್ನಿನ ಗ್ಲಾಸ್ಗೊ ವಿಮಾನನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯ ಪೂರ್ವಭಾವಿ ಮಾಹಿತಿ ತನಗಿದ್ದದ್ದು ನಿಜ ಎಂದು ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಬೆಂಗಳೂರಿನ ವೈದ್ಯ ಸಬೀಲ್ ಅಹ್ಮದ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಲಂಡನ್ನಿನ ಕೇಂದ್ರೀಯ ಕ್ರಿಮಿನಲ್ ಕೋರ್ಟ್ ಸಬೀಲ್ ಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಿತು. ವಿಮಾನನಿಲ್ದಾಣಕ್ಕೆ ಹೊತ್ತಿ ಉರಿಯುತ್ತಿದ್ದ ಜೀಪನ್ನು ನುಗ್ಗಿಸಿ ಭಾರಿ ಹಾನಿ ಉಂಟುಮಾಡಲು ಬಯಸಿದ್ದ ಕಫೀಲ್ ಅಹ್ಮದನ ಸಹೋದರನಾದ ಸಬೀಲ್, ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ತಾನು ಮೊದಲಾಗಿ ಪೊಲೀಸರಿಗೆ ದಾಳಿಯ ಯೋಜನೆ ತಿಳಿಸಿದ್ದರೆ ಅಪಾಯ ತಪ್ಪಿಸಬಹುದಿತ್ತು ಎಂದು ಹೇಳಿದ. ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಸಬೀಲ್ ಅಹ್ಮದನನ್ನು (26) ವಿಫಲ ಭಯೋತ್ಪಾದಕ ಕೃತ್ಯ ನಡೆದ ಕಳೆದ ಜೂನ್ 30ರಂದೇ ಲಿವರ್ ಪೂಲ್ನಲ್ಲಿ ಬಂಧಿಸಲಾಗಿತ್ತು. ದಾಳಿಯ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬ ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

2008: ನೇಪಾಳದ 'ಸಂವಿಧಾನ ಸಭೆ'ಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೊದಲ ಆಯ್ಕೆ ನಡೆದಿದ್ದು, ನೇಪಾಳ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಮಾನ್ ಸಿಂಗ್ ಗೆಲುವಿನ ನಗೆ ಚೆಲ್ಲಿದರು. ಸಂವಿಧಾನಾತ್ಮಕ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. 1990ರ ಪ್ರಜಾತಂತ್ರ ಚಳವಳಿ ಪೂರ್ವದ ನಾಯಕ ಗಣೇಶ ಮಾನ್ ಸಿಂಗ್ ಅವರ ಮಗನಾದ ಪ್ರಕಾಶ ಮಾನ್ ಸಿಂಗ್ ಅವರು ಪ್ರತಿಷ್ಠಿತ ಕಠ್ಮಂಡು 1 ಕ್ಷೇತ್ರದಲ್ಲಿ ನಡೆದ ನೇರ ಮತದಾನದಲ್ಲಿ 11,515 ಮತಗಳೊಂದಿಗೆ ತಮ್ಮ ಸಮೀಪ ಸ್ಪರ್ಧಿ ನೇಪಾಳ ಕಮ್ಯೂನಿಸ್ಟ್ ಪಕ್ಷದ (ಯುಎಂಎಲ್) ಪ್ರದೀಪ ನೇಪಾಳ ಅವರನ್ನು ಪರಾಭವಗೊಳಿಸಿದರು. ಪ್ರದೀಪ ನೇಪಾಳ ಅವರಿಗೆ 6000 ಮತಗಳು ಮಾತ್ರ ಲಭಿಸಿದವು. ಸಂವಿಧಾನ ಪುನರ್ರಚನೆಗಾಗಿ 'ಸಂವಿಧಾನ ಸಭೆ'ಯ ರಚನೆ ಸಲುವಾಗಿ ಈ ಚುನಾವಣೆ ನಡೆಯಿತು. ಈ ಸಂವಿಧಾನ ಸಭೆಯು 240 ವರ್ಷಗಳ ಇತಿಹಾಸ ಇರುವ ಹಿಂದೂ ದೊರೆಯ ಏಕಚಕ್ರಾಧಿಪತ್ಯಕ್ಕೆ ಮುಂದೆ ಕೊನೆ ಹಾಡಿತು.

2008: ಬೆಂಗಳೂರು ನಗರದ ಬೈಯಪ್ಪನಹಳ್ಳಿಯ ಬಳಿ ಇರುವ ಎನ್ ಜಿ ಇ ಎಫ್ ಜಮೀನನ್ನು ಮೆಟ್ರೋ ರೈಲು ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟ್ ಅನುಮತಿ ನೀಡಿತು. ಇದರಿಂದಾಗಿ ಎನ್ ಜಿ ಇ ಎಫ್ ಗೆ ಸೇರಿರುವ 53.10 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಮೆಟ್ರೊ ರೈಲು ನಿಗಮಕ್ಕೆ ಅನುಮತಿ ದೊರೆತಂತಾಯಿತು. ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟಿನ ಅನುಮತಿ ಕೋರಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆದರೆ ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಾಗ ಈ ರೀತಿ ಕೋರ್ಟಿನ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು, ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರ ಅನುಮತಿ ಪಡೆದು ಅರ್ಜಿಯನ್ನು ಹಿಂದಕ್ಕೆ ಪಡೆದರು. ಇದೇ ವೇಳೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಮೂರ್ತಿಗಳು ತಾಕೀತು ಮಾಡಿದರು.

2008: ಪ್ರೇಮದ ಸಂಕೇತ ಎನಿಸಿಕೊಂಡಿರುವ ತಾಜಮಹಲಿನ ರೂವಾರಿ ಶಹಜಹಾನ್ ಬಳಸುತ್ತಿದ್ದ ಚಿನ್ನದ ಲೇಪವಿರುವ ಕಠಾರಿಯನ್ನು ಲಂಡನ್ನಿನಲ್ಲಿ ಹರಾಜು ಹಾಕಿದಾಗ ನಿರೀಕ್ಷೆಗಿಂತಲೂ ಮೂರು ಪಟ್ಟು ಹೆಚ್ಚು ಬೆಲೆ ದೊರಕಿತು. 17 ನೇ ಶತಮಾನದ ಆದಿಯಲ್ಲಿ ತಯಾರಿಸಲಾಗಿದ್ದ ಈ ಕಠಾರಿಗೆ 5 ಲಕ್ಷ ಪೌಂಡ್ ದೊರೆಯಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಅದು 15ಲಕ್ಷ ಪೌಂಡುಗಳಿಗೆ ಹರಾಜಾಯಿತು.

2007: ಖ್ಯಾತ ಹೃದಯರೋಗ ತಜ್ಞ ಕನ್ನಡಿಗ, ಡಾ. ಅರಕಲಗೂಡು ಸಂಪತ್ ಕುಮಾರ್ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಹೃದಯ ಮತ್ತು ರಕ್ತನಾಳ ಶಸ್ತ್ರಚಿಕಿತ್ಸೆ ವಿಭಾಗ (ಸಿಟಿ ವಿ ಎಸ್) ಹಾಗೂ ಹೃದಯ ಮತ್ತು ನರಶಾಸ್ತ್ರ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

2007: `ರಾಷ್ಟ್ರಗೀತೆಗೆ ಅವಮಾನ ಮಾಡಿದ' ಇನ್ ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮೈಸೂರು ನಗರದ ವಕೀಲ ಅ.ಮ. ಭಾಸ್ಕರ್ ಅವರು ಮೈಸೂರಿನ ವಿಜಯನಗರದ ಪೊಲೀಸ್ ಠಾಣೆಗೆ ದೂರು ನೀಡಿದರು. ರಾಷ್ಟ್ರಗೀತೆ ಹಾಡುವುದರಿಂದ ಇನ್ ಫೋಸಿಸ್ ಕಂಪೆನಿಯಲ್ಲಿರುವ ವಿದೇಶಿ ನೌಕರರಿಗೆ ಮುಜುಗರವಾಗುತ್ತದೆ ಎಂದು ನಾರಾಯಣಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಸಂವಿಧಾನದ ಮೂಲಭೂತ ಕರ್ತವ್ಯಗಳ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಅರ್ಜಿದಾರರು ದೂರಿನಲ್ಲಿ ಪ್ರತಿಪಾದಿಸಿದರು.

2007: ನಷ್ಟಕ್ಕೆ ಒಳಗಾದ ಕಂಪೆನಿಗಳ ವಕ್ತಾರ ಎಂದೇ ಖ್ಯಾತಿ ಪಡೆದಿರುವ ಮೆಕ್ಸಿಕೊದ ಟೆಲಿಕಾಂ ದೊರೆ ಕಾರ್ಲೋಸ್ ಸ್ಲಿಮ್ ಜಗತ್ತಿನ ಎರಡನೇ ಅತಿ ಶ್ರೀಮಂತ ವ್ಯಕ್ತಿಯ ಪಟ್ಟಕ್ಕೆ ಏರಿದರು. ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ನಂತರದ ಸ್ಥಾನ ಕಾರ್ಲೋಸ್ ಸ್ಲಿಮ್ ಅವರಿಗೆ ಲಭಿಸಿತು. `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ವಾರೆನ್ ಬಫೆಟ್ ಅವರನ್ನು ಕೆಳಕ್ಕೆ ತಳ್ಳುವ ಮೂಲಕ ಕಾರ್ಲೋಸ್ ಸ್ಲಿಮ್ ಆ ಸ್ಥಾನಕ್ಕೆ ಬಂದರು. ಕಾರ್ಲೋಸ್ ಅವರ ಈಗಿನ ಆಸ್ತಿ 5300 ಕೋಟಿ ಡಾಲರುಗಳು. ಸ್ಲಿಮ್ ಅವರ ಕಂಪೆನಿಗಳ ಅದರಲ್ಲೂ ಅಮೆರಿಕ ಮೋವಿಲ್ ಸೆಲ್ ಫೋನ್ ಸಂಸ್ಥೆಯ ಷೇರುಬೆಲೆ ಇತ್ತೀಚಿನ ತಿಂಗಳಗಳಲ್ಲಿ ಏರಿದ ಹಿನ್ನೆಲೆಯಲ್ಲಿ ಸ್ಲಿಮ್ ಅವರಿಗೆ ಅದೃಷ್ಟ ಒಲಿಯಿತು.

2007: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡವರಿಗೆ ಹಾಗೂ ಈ ಕೃತ್ಯವನ್ನು ವರದಿ ಮಾಡದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ ಇರುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ವಿಧಾನ ಸಭೆ ಒಪ್ಪಿಗೆ ನೀಡಿತು.

2007: ಚಿತ್ರದುರ್ಗದ ಅಗಸನಕಲ್ಲು ಪ್ರದೇಶದ ಸಾದಿಕ್ ಎಂಬವರ ಪತ್ನಿ ಆರೀಫಾಭಾನು ಎಂಬ ಮಹಿಳೆ ಕೃಷ್ಣ ನರ್ಸಿಂಗ್ ಹೋಮಿನಲ್ಲಿ ಐದು ಮಕ್ಕಳಿಗೆ ಜನ್ಮನೀಡಿದರು. ಐದು ಮಕ್ಕಳಲ್ಲಿ ಒಂದು ಗಂಡು, ಒಂದು ಹೆಣ್ಣು ಮೃತಪಟ್ಟವು.

2007: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ವೆಸ್ಟ್ ಇಂಡೀಸ್ ನ ಬ್ರಯನ್ ಲಾರಾ ಅವರು. ವಿಶ್ವಕಪ್ ಚಾಂಪಿಯನ್ ಶಿಪ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಟಿಗೆ ವಿದಾಯ ಹೇಳುವುದಾಗಿ ಪ್ರಕಟಿಸಿದರು.

2006: ಇಸ್ರೇಲಿನ ಸೇನೆ ಮತ್ತು ರಾಜಕೀಯ ಕ್ಷಿತಿಜದಲ್ಲಿ ದಶಕಗಳ ಕಾಲ ಮೆರೆದ ಪ್ರಧಾನಿ ಏರಿಯಲ್ ಶೆರಾನ್ ಯುಗ ಸಾಂಕೇತಿಕವಾಗಿ ಸಮಾಪನಗೊಂಡಿತು. ಮೂರು ತಿಂಗಳುಗಳಿಂದ ಪ್ರಜ್ಞಾಹೀನರಾದ ಶೆರಾನ್ ಸ್ಥಾನಕ್ಕೆ ಯಹೂದಿ ಒಲ್ಮೆರ್ಟ್ (60) ಅವರನ್ನು ನೇಮಕ ಮಾಡುವ ಅಧಿಕೃತ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿತು.

2006: ಕೊಡಗಿನ ವಿರಾಜಪೇಟೆಯ ನಿವಾಸಿ ಅಹಮದಾಬಾದಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂಎ) ವಿದ್ಯಾರ್ಥಿ ಶರತ್ ಕೊಡಗು ಕ್ಯಾಂಪಸ್ ಆಯ್ಕೆಯಲ್ಲಿ ತಮಗೆ ಬಂದ ವಾರ್ಷಿಕ 60 ಲಕ್ಷ ರೂಪಾಯಿಗಳ ನೌಕರಿ ಆಹ್ವಾನವನ್ನು ತಿರಸ್ಕರಿಸಿದರು. ಕ್ಯಾಂಪಸ್ ಸಂದರ್ಶನ ಕಾಲದಲ್ಲಿ ಲಂಡನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಮುಂದಿಟ್ಟ ವಾರ್ಷಿಕ 60 ಲಕ್ಷ ರೂಪಾಯಿಗಳ ವೇತನದ ಆಹ್ವಾನ ಸಹಿತ ಹಲವಾರು ಬಹುರಾಷ್ಟೀಯ ಕಂಪೆನಿಗಳು ಮುಂದಿಟ್ಟ ಆಕರ್ಷಕ ಸಂಬಳದ ನೌಕರಿಗಳನ್ನು ತಿರಸ್ಕರಿಸಿ, ಸ್ವಂತ ಸಂಸ್ಥೆ ಆರಂಭಿಸಲು ಅವರು ನಿರ್ಧರಿಸಿದರು.

2006: ಪಟ್ನಾದಲ್ಲಿ ಕೊನೆಯ ಕ್ಷಣದಲ್ಲಿ ಚುನಾವಣಾ ಅಧಿಕಾರಿಯನ್ನು ಕಿತ್ತು ಹಾಕಿದ ಘಟನೆ ಹಾಗೂ ಹಾಲಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಆಭ್ಯರ್ಥಿ ಜಾರ್ಜ್ ಫರ್ನಾಂಡಿಸ್ ಮತ್ತು ಅವರಿಗೆ ನಿಷ್ಠವಾದ ರಾಜ್ಯ ಘಟಕಗಳ ಬಹಿಷ್ಕಾರದ ಮಧ್ಯೆ ನಡೆದ ವಿವಾದಾತ್ಮಕ ಚುನಾವಣೆಯಲ್ಲಿ ಶರದ್ ಯಾದವ್ ಅವರು ಜನತಾದಳ (ಯು) ಅಧ್ಯಕ್ಷರಾಗಿ ಆಯ್ಕೆಯಾದರು. ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಶರದ್ ಯಾದವ್ ಅವರು 413 ಮತಗಳನ್ನು ಪಡೆದರೆ, ಫರ್ನಾಂಡಿಸ್ ಅವರಿಗೆ 25 ಮತಗಳು ಮಾತ್ರ ಬಂದವು. 10 ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

1982: ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರು 1981ರ ಸಾಲಿನ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಪ್ರೀತಂ ಅವರ `ಕಾಗಜ್ ತ ಕನ್ವಾಸ್' ಕವನ ಸಂಕಲನಕ್ಕೆ ಈ ಪ್ರಶಸ್ತಿ ಬಂತು.

1937: ಭಾರತದ ಖ್ಯಾತ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ಹುಟ್ಟಿದ ದಿನ. ವಿಂಬಲ್ಡನ್ನಿನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ ಮೊತ್ತ ಮೊದಲ ಭಾರತೀಯ ಇವರು. ಇವರು ಟೆನಿಸ್ ಆಟಗಾರ ರಮೇಶ ಕೃಷ್ಣನ್ ಅವರ ತಂದೆ.

1908: ಜಪಾನಿನ ಎಲೆಕ್ಟ್ರಾನಿಕ್ ಉದ್ಯಮಿ ಮಸಾರು ಐಬುಕ (1908-1998) ಹುಟ್ಟಿದ ದಿನ. ಈತ ಸ್ಥಾಪಿಸಿದ `ಅಕಿಯೋ ಮೊರಿಟಾ' ಎಂಬ ಚಿಕ್ಕ ರೆಕಾರ್ಡಿಂಗ್ ಕಂಪೆನಿ ಮುಂದೆ `ಸೋನಿ ಕಾರ್ಪೊರೇಷನ್' ಆಗಿ ಬೆಳೆಯಿತು. ಜಪಾನಿಗೆ ಟ್ರಾನ್ಸಿಸ್ಟರ್ ತಂತ್ರಜ್ಞಾನವನ್ನು ತಂದವನು ಕೂಡಾ ಈತನೇ.

1887: ಜೆಮಿನಿ ರಾಯ್ (1887-1972) ಹುಟ್ಟಿದ ದಿನ. ಇವರು ಭಾರತದ ಖ್ಯಾತ ಕಲಾವಿದರು.

1850: ಜೋಸೆಫ್ ಚಾರ್ಲ್ಸ್ ಆರ್ಥರ್ (1850-1942) ಜನ್ಮದಿನ. ಸಸ್ಯಗಳಿಗೆ ತಗಲುವ ಬೂಸ್ಟುರೋಗಕ್ಕೆ ಸೂಕ್ಷ್ಮ ಅಣಬೆಗಳೇ ಕಾರಣ ಎಂದು ಈತ ಕಂಡು ಹಿಡಿದ.

1755: ಇಂಗ್ಲಿಷ್ ವೈದ್ಯ ಜೇಮ್ಸ್ ಪಾರ್ಕಿನ್ಸನ್ (1755-1824) ಜನ್ಮದಿನ. ಈತ ಕೈ ನಡುಕದ ರೋಗವನ್ನು ಮೊತ್ತ ಮೊದಲಿಗೆ ವಿವರಿಸಿದ. ಈತನ ಹೆಸರನ್ನೇ ಈ ರೋಗಕ್ಕೆ (ಪಾರ್ಕಿನ್ಸನ್ ಕಾಯಿಲೆ) ಇಡಲಾಯಿತು.

1770: ಜಾರ್ಜ್ ಕ್ಯಾನಿಂಗ್ (1770-1827) ಹುಟ್ಟಿದ ದಿನ. ಈತ ರಾಜತಾಂತ್ರಿಕ ಹಾಗೂ ಬ್ರಿಟನ್ ಪ್ರಧಾನಿಯಾಗಿದ್ದ ವ್ಯಕ್ತಿ. ಮುಂದೆ ಭಾರತದ ಗವರ್ನರ್ ಜನರಲ್ ಆದ ಲಾರ್ಡ್ ಕ್ಯಾನಿಂಗ್ ಈತನ ಪುತ್ರ.

1689: ಮೂರನೆಯ ವಿಲಿಯಂ ಮತ್ತು ಎರಡನೆಯ ಮೇರಿ ಅವರಿಗೆ ಜಂಟಿ ಸಾರ್ವಭೌಮರಾಗಿ ಕಿರೀಟಧಾರಣೆ ಮಾಡಲಾಯಿತು.

No comments:

Advertisement