My Blog List

Saturday, July 10, 2010

ಇಂದಿನ ಇತಿಹಾಸ History Today ಜೂನ್ 24

ಇಂದಿನ ಇತಿಹಾಸ

ಜೂನ್ 24

ಮಾಜಿ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡರು. ವಿವಿಧ ರಾಜ್ಯಗಳ ರಾಜ್ಯಪಾಲರುಗಳ ನೇಮಕ ಕುರಿತಂತೆ ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿತು.

2009: ಮಾಜಿ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡರು. ವಿವಿಧ ರಾಜ್ಯಗಳ ರಾಜ್ಯಪಾಲರುಗಳ ನೇಮಕ ಕುರಿತಂತೆ ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿತು. ಕರ್ನಾಟಕದ  ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು  ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು.

2009:  ಜಮ್ಮು ಖತ್ರಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಂಥಾಲ್ ಬಳಿ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಮಂದಿ ಮೃತರಾಗಿ 48 ಜನ ಗಾಯಗೊಂಡರು. ಖತ್ರಾದಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಉರುಳಿತು ಎಂದು ಖತ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜುಗಲ್ ಕಿಶೋರ್ ತಿಳಿಸಿದರು.

2009: ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ  ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯ ರೈ, ಸಜ್ಲಾನ್ ಪವನ ವಿದ್ಯುತ್ ಕಂಪೆನಿಯ ಅಧ್ಯಕ್ಷೆ ತುಳಸಿಬಾಯಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಲಾಯಿತು. ತಮ್ಮ ಜಮೀನನ್ನು 20,000 ರೂಪಾಯಿಗೆ ಖರೀದಿಸಿ, ಸಜ್ಲಾನ್ ಕಂಪೆನಿ ಹೆಸರಲ್ಲಿ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ರೈತ ಆನಂದ ಲಾಲ್ ಠಾಕ್ರೆ ದೂರು ದಾಖಲಿಸಿದರು.  'ಜಮೀನನ್ನು ಸಜ್ಲಾನ್ ಕಂಪೆನಿಯವರು ಅಕ್ರಮವಾಗಿ ವಶಪಡಿಸಿಕೊಂಡು ಗಾಳಿಯಂತ್ರ ಜೋಡಿಸಿದ್ದಾರೆ' ಎಂದು ರೈತ ಠಾಕ್ರೆ ತಾವು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದರು. ಐಶ್ವರ್ಯ ರೈ ಅವರು ಸಜ್ಲಾನ್ ಕಂಪೆನಿಯಲ್ಲಿ ಷೇರುಹೊಂದಿದ್ದಾರೆ.

2009:  ಪಾಕಿಸ್ಥಾನದಲ್ಲಿ 1990ರಲ್ಲಿ ನಾಲ್ಕು ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಶಾಮೀಲಾದ ಆರೋಪದ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಪಾಕಿಸ್ಥಾನದ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ನ್ಯಾಯಮೂರ್ತಿ ರಾಜಾ ಫಯಾಜ್ ಅಹ್ಮದ್ ನೇತೃತ್ವದ ಮೂವರು ಸದಸ್ಯ ಪೀಠದ ಎದುರು ಸರಬ್ಜಿತ್ ಪರ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ಪೀಠವು ಮರಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ, 1991ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯಿತು. ಸರಬ್ಜಿತ್‌ಗೆ ರಾಣಾ ಅಬ್ದುಲ್ ಹಮೀದ್ ಎಂಬುವವರು ವಕೀಲರಾಗಿದ್ದರು.. ಕಳೆದ ವರ್ಷ ಅವರನ್ನು ಪಂಜಾಬ್ ಪ್ರಾಂತ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನಿಯುಕ್ತಿಗೊಳಿಸಲಾಗಿತ್ತು. ಅವರ ಬದಲಿಗೆ ಇನ್ನೊಬ್ಬ ವಕೀಲರನ್ನು ನಿಯೋಜಿಸಲಾಗಿತ್ತು.  ವಿಚಾರಣೆ ವೇಳೆ ಕೂಡಾ ಕೆಲವು ವಿಚಾರಣೆ ಸಂದರ್ಭದಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. 1990ರಲ್ಲಿ ಪಾಕಿಸ್ಥಾನದಲ್ಲಿ ನಡೆದ ನಾಲ್ಕು ಬಾಂಬ್ ಸ್ಫೋಟ ಕೃತ್ಯಗಳಲ್ಲಿ 14 ಮಂದಿ ಸತ್ತಿದ್ದರು. ಇದರ ಹಿಂದೆ ಸರಬ್ಜಿತ್ ಸಿಂಗ್ ಪಾತ್ರ ಇದೆ ಎಂದು ಆರೋಪಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ 2003ರಲ್ಲಿ ತಿರಸ್ಕರಿಸಿತ್ತು. 2005ರಲ್ಲಿ ಸುಪ್ರೀಂಕೋರ್ಟ್ ಸಹ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. 2008ರಲ್ಲಿ ಆತ ಸಲ್ಲಿಸಿದ್ದ ದಯಾ ಅರ್ಜಿಯನ್ನು ಅಧ್ಯಕ್ಷ ಪರ್ವೆಜ್ ಮುಷರಫ್ ತಳ್ಳಿಹಾಕಿದ್ದರು. ಬಳಿಕ 2008ರ ಏಪ್ರಿಲ್‌ನಲ್ಲೇ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ದಿನಾಂಕ ನಿಗದಿಯಾಗಿತ್ತು.  ಆದರೆ ಭಾರತದ ಒತ್ತಡದ ಹಿನ್ನೆಲೆಯಲ್ಲಿ ಪ್ರಧಾನಿ ಯೂಸೂಫ್ ರಜಾಕ್ ಗಿಲಾನಿ ಮಧ್ಯಪ್ರವೇಶಿಸಿ ಶಿಕ್ಷೆ ಜಾರಿಯಾಗುವುದನ್ನು ತಡೆದಿದ್ದರು. ಇದೀಗ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಕೈಯಲ್ಲೇ ಸರಬ್ಜಿತ್ ಜೀವ ನಿಂತಂತಾಯಿತು.

2009: ಕೇಳಿಸಿಕೊಳ್ಳಲು ಬಲಗಿವಿಯನ್ನೇ ಹೆಚ್ಚು ಅವಲಂಬಿಸಲಾಗುತ್ತದೆ ಎಂಬ ಅಂಶ ಹೊಸ ಸಂಶೋಧನೆಯಿಂದ ಬೆಳಕಿಗೆ ಬಂತು. ಇಟಲಿಯ ಗ್ಯಾಬ್ರೆಲ್ ಅನುಂಜಿಯೊ ವಿಶ್ವವಿದ್ಯಾಲಯವು ನಡೆಸಿದ ಮೂರು ಸಂಶೋಧನೆಗಳಿಂದ ಈ ವಿಷಯ ಗೊತ್ತಾಯಿತು. ಬಲಗಿವಿಯಿಂದ ಕೇಳಿಸಿಕೊಂಡ ಮಾತುಗಳನ್ನು ಎಡಭಾಗದ ಮಿದುಳು ತಕ್ಷಣದಲ್ಲಿ ವಿಶ್ಲೇಷಿಸಿ ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಈ ಸಂಶೋಧನೆಯಿಂದ ತಿಳಿದುಬಂತು.

2009:  ಗೀತರಚನೆಗೆ 1978ರ ಆಸ್ಕರ್ ಪ್ರಶಸ್ತಿ ಪಡೆದಿದ್ದ ಜೋಸೆಫ್ ಬ್ರೂಕ್ಸ್‌ನನ್ನು (71) ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಯಿತು. 11 ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಿ ಆತನನ್ನು ಬಂಧಿಸಲಾಯಿತು. ಆದರೆ 5 ಲಕ್ಷ ಡಾಲರ್ ಮೊತ್ತದ ಠೇವಣಿ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಯಿತು. ಧ್ವನಿ ಪರೀಕ್ಷೆ ನೆಪದಲ್ಲಿ ವೆಬ್‌ ಸೈಟ್ ಮೂಲಕ ಮಹಿಳೆಯರನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆಸಿ, ಈ ಕೃತ್ಯ ಎಸಗಿರುವುದಾಗಿ ಆಪಾದಿಸಲಾಯಿತು.

2009:  ನಾಟಕ ಕರ್ನಾಟಕ ರಂಗಾಯಣದ ನೂತನ ನಿರ್ದೇಶಕಿಯಾಗಿ ಹೆಸರಾಂತ ರಂಗ ನಿರ್ದೇಶಕಿ, ಗಾಯಕಿ ಬಿ.ಜಯಶ್ರಿ ಮೈಸೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಒಂದೂವರೆ ವರ್ಷಗಳಿಂದ ಪ್ರಭಾರ ನಿರ್ದೇಶಕರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ ಅವರು ಜಯಶ್ರೀ ಅವರಿಗೆ ರಂಗಾಯಣದ ಕಚೇರಿಯಲ್ಲಿ ಅಧಿಕಾರವನ್ನು ಹಸ್ತಾಂತರಿಸಿದರು.

2009:  1990 ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್‌ನನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುವಂತೆ  ಆತನ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದರು. 'ನನ್ನ ಪತಿ ನಿರ್ದೋಷಿ ಎಂದು ಭಾರತ ಹಾಗೂ ಪಾಕಿಸ್ಥಾನ ಸರ್ಕಾರಗಳಿಗೆ ನಾನು ಅರಿಕೆ ಮಾಡಿಕೊಳ್ಳುವೆ. ಅವರು ಪಾಕಿಸ್ಥಾನದಲ್ಲಿ ಅನುಭವಿಸಿರುವ ಜೀವಾವಧಿ ಶಿಕ್ಷೆ  ಹೆಚ್ಚಿನದಾಯಿತು. ಅವರ ಬಿಡುಗಡೆಗೆ ವಿಳಂಬವಾಗುತ್ತಿರುವುದು ನಮಗೆ ಅತೀವ ಯಾತನೆಯನ್ನುಂಟು ಮಾಡುತ್ತಿದೆ. ಭಾರತ ಸರ್ಕಾರ ಪಾಕಿಸ್ಥಾನದ ಮೇಲೆ ಈ ಸಂಬಂಧ ಒತ್ತಡ ಹೇರಿದಲ್ಲಿ ಅವರು ಬದುಕುಳಿಯುತ್ತಾರೆ. ಭಾರತ ಸರ್ಕಾರ ಸುಮ್ಮನೆ ಕೂರಬಾರದು' ಎಂದು ಸರಬ್ಜಿತ್ ಪತ್ನಿ ಸುಖ್‌ಪ್ರೀತ್ ಕೌರ್ ಕಣ್ಣೀರಿಡುತ್ತಾ  ಹೇಳಿದರು.

2009:  ಹಿರಿಯ ಪತ್ರಕರ್ತ ಹರೀಶ್ ಖರೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು. ಖ್ಯಾತ ರಾಜಕೀಯ ಅಂಕಣಕಾರ ಖರೆ (62)  'ದಿ ಹಿಂದು' ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.

2009:  ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಟು ವಿಜೇತ ಅಶುತೋಷ್ ಕೌಶಿಕ್‌ಗೆ ಜೈಲುಶಿಕ್ಷೆ ವಿಧಿಸಲಾಯಿತು. ಜೂನ್ 13ರಂದು ಅಂಧೇರಿಯಲ್ಲಿ ಕುಡಿದು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕೌಶಿಕನನ್ನು ಬಂಧಿಸಲಾಗಿತ್ತು.  ಒಂದು ದಿನ ಸೆರೆಮನೆ ವಾಸ, ಎರಡು ವರ್ಷ ಚಾಲನಾ ಪರವಾನಗಿ ರದ್ದು  ಹಾಗೂ  ರೂ. 3100 ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತು.

2009:  ಉತ್ತರಾಖಂಡದ ಆರೋಗ್ಯ ಸಚಿವ ರಮೇಶ್ ಪೊಖ್ರಿಯಾಲ್ ಅವರು ಆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸೋತಿರುವುದಕ್ಕೆ  ನೈತಿಕ ಹೊಣೆ ಹೊತ್ತು ಉತ್ತರಾಖಂಡದ ಮುಖ್ಯಮಂತ್ರಿ ಬಿ.ಸಿ.ಖಂಡೂರಿ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2008: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು. ಪಕ್ಷದ ಹಳೆಯ ಪದಾಧಿಕಾರಿಗಳೊಂದಿಗೆ ಹೊಂದಿಕೊಳ್ಳದೆ ನಿಷ್ಕ್ರಿಯವಾಗಿರುವ ಕಾರಣದಿಂದ ಸಿಂಧ್ಯ ಅವರನ್ನು ಉಚ್ಚಾಟಿಸಲು ನಿರ್ಧರಿಸಲಾಯಿತು ಎಂದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ವೀರ್ಸಿಂಗ್ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗ ಸೇರಿದಂತೆ 4 ರಾಜ್ಯಗಳಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಒಟ್ಟು 130ಕ್ಕಿಂತಲೂ ಹೆಚ್ಚು ಮಂದಿ ಅಸು ನೀಗಿದರು. ಆಂಧ್ರಪ್ರದೇಶ, ಕೇರಳದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

2007: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರು ಬೆಂಗಳೂರಿನಲ್ಲಿ `ಮಾಸ್ತಿ' ಪ್ರಶಸ್ತಿ ಪ್ರದಾನ ಮಾಡಿದರು.

2007: 1980ರಲ್ಲಿ ತಮ್ಮ ವೈರಿಗಳನ್ನು ಕೊಲ್ಲುವ ಆಂದೋಲನದಲ್ಲಿ 1.80 ಲಕ್ಷ ಕುರ್ದ್ ಜನರನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ `ಕೆಮಿಕಲ್ ಅಲಿ' ಎಂದೇ ಕುಖ್ಯಾತಿ ಪಡೆದ ಸದ್ದಾಂ ಹುಸೇನ್ ಸೋದರ ಸಂಬಂಧಿ ಅಲಿ ಹಸನ್ ಅಲ್ ಮಜಿದ್, ಸುಲ್ತಾನ್ ಹಷೀಮ್ ಅಹ್ಮದ್ ಮತ್ತು ಹುಸೇನ್ ರಷೀದ್ ಅಹ್ಮದ್ ಅವರಿಗೆ ನ್ಯಾಯಾಧೀಶ ಮಹಮ್ಮದ್ ಒರೈಬಿ ಅಲ್ - ಖಲೀಫ ಮರಣ ದಂಡನೆ ವಿಧಿಸಿದರು. 140 ಶಿಯಾ ಮುಸ್ಲಿಮರನ್ನು ಕೊಂದ ಮತ್ತು 1982ರ ಹತ್ಯೆಗಳ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿತರಾದ ಸದ್ದಾಂ ಹುಸೇನರನ್ನು 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಗಿತ್ತು.

2007: ಪಾಕಿಸ್ಥಾನದ ಬಂದರು ನಗರ ಕರಾಚಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ತತ್ತರಿಸಿತು. ವಿವಿಧ ರೀತಿಯ ಅನಾಹುತಗಳಿಂದ ಒಟ್ಟು 220 ಮಂದಿ ಮೃತರಾಗಿ, ಹಲವರು ಗಾಯಗೊಂಡರು. ವಿದ್ಯುತ್ ವ್ಯವಸ್ಥೆ, ಜನಜೀವನ ಅಸ್ತವ್ಯಸ್ತಗೊಂಡಿತು.

2007: ಅಂದಾಜು 1.20 ಕೋಟಿ ಯೂರೋ ವೆಚ್ಚದಲ್ಲಿ ನವೀಕರಣಗೊಂಡ ಫ್ರಾನ್ಸಿನ ಪ್ಯಾರಿಸ್ ಸಮೀಪದ `ಹಾಲ್ ಆಫ ಮಿರರ್ಸ್' ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿತು. ಫ್ರೆಂಚ್ ಕಲಾವಿದ ಚಾರ್ಲ್ಸ್ ಲೀ ಬ್ರುನ್ (1619-1690) ಕಲಾಕೃತಿಗಳು ಇಲ್ಲಿವೆ. ಸ್ಥಾಪನೆಯಾಗಿ 300 ವರ್ಷಗಳ ಬಳಿಕ ಫ್ರಾನ್ಸಿನ ಮುಂಚೂಣಿಯ ರಿಯಲ್ ಎಸ್ಟೇಟ್ ಕಂಪೆನಿ ಮಿಂಚಿ `ಹಾಲ್ ಆಫ್ ಮಿರರ್ಸ್' ನವೀಕರಣದ ಹೊಣೆ ಹೊತ್ತಿತ್ತು.

2007: ಕೆನಡಾದಲ್ಲಿ ನೆಲೆಸಿದ ಬೆಂಗಳೂರು ಮೂಲದ ವೈದ್ಯೆ ಡಾ.ಶೀಲಾ ಬಸ್ರೂರು ಅವರನ್ನು, ಸಾರ್ವಜನಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರ್ಕಾರವು `ಕೆನಡಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2006: ಮಾನವ ಹಕ್ಕುಗಳ ಖ್ಯಾತ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರು  `ವಿಜಿಲ್ ಇಂಡಿಯಾ ಮೂವ್ ಮೆಂಟ್' ಸಂಸ್ಥೆಯ `ಎಮ್. ಎ. ಥಾಮಸ್ ರಾಷ್ಟ್ರೀಯ ಮಾನವ ಹಕ್ಕು 2006' ಪ್ರಶಸ್ತಿಗೆ ಆಯ್ಕೆಯಾದರು. ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್(1998), ಮೇಧಾ ಪಾಟ್ಕರ್(1999), ನ್ಯಾಯಮೂರ್ತಿ ವಿ. ಎಂ.ತಾರ್ಕುಂಡೆ (2000) ಇವರು ಈ ಹಿಂದೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ಬೆಂಗಳೂರಿನ ಬಹು ನಿರೀಕ್ಷಿತ, ಮಹತ್ವಾಕಾಂಕ್ಷೆಯ `ನಮ್ಮ ಮೆಟ್ರೋ' ಯೋಜನೆಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈದಿನ ಬೆಂಗಳೂರಿನ ಪೆರೇಡ್ ಮೈದಾನದಲ್ಲಿ ಶಿಲಾನ್ಯಾಸ ನೆರವೇರಿಸಿದರು.

2002: ರಷ್ಯದ ವ್ಲಾಡಿಮೀರ್ ಕ್ರಾಮ್ನಿಕ್ ಅವರು ಲಿಯೋನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸುವ ಮೂಲಕ `ಅಡ್ವಾನ್ಸ್ಡ್ ಚೆಸ್' ಪ್ರಶಸ್ತಿಯನ್ನು ತಮ್ಮ ಬಗಲಿಗೆ ಹಾಕಿಕೊಂಡರು. `ಅಡ್ವಾನ್ಸ್ಡ್ ಚೆಸ್' ಎಂಬುದು ಗ್ಯಾರಿ ಕ್ಯಾಸ್ಪರೋವ್ ಅವರ ಸಂಶೋಧನೆಯಾಗಿದ್ದು ಇದರಲ್ಲಿ ಕಂಪ್ಯೂಟರ್ ನೆರವಿನೊಂದಿಗೆ `ಮೋಸ ಮಾಡಲು' ಅಧಿಕೃತವಾಗಿ ಅನುಮತಿ ನೀಡಲಾಗಿದೆ.

1980: ಭಾರತದ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಅವರು ತಮ್ಮ 85ನೇ ವಯಸ್ಸಿನಲ್ಲಿ ತಮಿಳ್ನಾಡಿನ ಮದ್ರಾಸಿನಲ್ಲಿ (ಈಗಿನ ಚೆನ್ನೈ) ನಿಧನರಾದರು.

1974: ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಎರಡನೇ ಇನ್ನಿಂಗ್ಸ್ ನಲ್ಲಿ 42 ರನ್ ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಇದು ಟೆಸ್ಟ್ ಕ್ರಿಕೆಟಿನಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತದ ಇನ್ನಿಂಗ್ಸ್.

1966: ಕಲಾವಿದ ಪ್ರಕಾಶ ಕೆ. ನಾಯ್ಡು ಜನನ.

1949: ಕಲಾವಿದ ಚಂದ್ರಕುಮಾರ ಸಿಂಗ್ ಜನನ.

1935: ಕಲಾವಿದ ಬಳ್ಳಾರಿ ಎಂ. ಶೇಷಗಿರಿ ಆಚಾರ್ಯ ಜನನ.

1924: ಕರ್ನಾಟಕದಲ್ಲಿ ನಶಿಸುತ್ತಿರುವ ರಥ ನಿರ್ಮಾಣ ಸಂತತಿಯ ನಾಲ್ಕೈದು ಕುಟುಂಬ ವರ್ಗದವರಲ್ಲಿ ಒಬ್ಬರಾದ ರಥ ಶಿಲ್ಪಿ ಪರಮೇಶ್ವರಾಚಾರ್ಯ ಅವರು  ಮಾನಾಚಾರ್ಯರು- ವೀರಮ್ಮ ದಂಪತಿಯ ಮಗನಾಗಿ ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ್ಲಿ ಜನಿಸಿದರು.

1915: ಬ್ರಿಟಿಷ್ ಗಣಿತ ಹಾಗೂ ಖಗೋಳ ತಜ್ಞ ಸರ್ ಫ್ರೆಡ್ ಹೊಯ್ಲ್ ಜನ್ಮದಿನ. ಇವರು ತಮ್ಮ `ವಿಶ್ವ ವಿಕಸನ ಸಿದ್ಧಾಂತ'ಕ್ಕಾಗಿ ಖ್ಯಾತಿ ಪಡೆದಿದ್ದಾರೆ. ಇವರ ಸಿದ್ಧಾಂತದ ಪ್ರಕಾರ ವಿಶ್ವವು ವಿಕಸಿಸುತ್ತಿದೆ ಹಾಗೂ ಈ ವಿಕಸನದಿಂದ ಉಂಟಾಗುವ ಶೂನ್ಯವನ್ನು ತುಂಬಿ ಆಕಾಶದಲ್ಲಿನ ದ್ರವ್ಯದ ಸಾಂದ್ರತೆಯನ್ನು ನಿರಂತರವಾಗಿ ಇರಿಸಲು ಹೊಸ ದ್ರವ್ಯ ಸೃಷ್ಟಿಯಾಗುತ್ತಿರುತ್ತದೆ.

1885: ಅಕಾಲಿದಳದ ನಾಯಕ ಮಾಸ್ಟರ್ ತಾರಾಸಿಂಗ್ (1885-1967) ಜನ್ಮದಿನ. ಸಿಖ್ಖರ ರಾಜಕೀಯ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತಹ ಪಂಜಾಬಿ ಭಾಷಿಕರ ರಾಜ್ಯ ಸ್ಥಾಪನೆಯಾಗಬೇಕು ಎಂದು ಚಳವಳಿ ಹೂಡಿದ ಸಿಖ್ ಧುರೀಣರಿವರು. 1966ರಲ್ಲಿ ಈಗಿನ ಪಂಜಾಬ್ ರಾಜ್ಯ ರಚನೆಯೊಂದಿಗೆ ಅವರ ಕನಸು ನನಸಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, July 9, 2010

ಇಂದಿನ ಇತಿಹಾಸ History Today ಜೂನ್ 23

ಇಂದಿನ ಇತಿಹಾಸ

ಜೂನ್ 23

ಕೆನಡಾದ ಲ್ಯಾವಲಿನ್ ಕಂಪನಿಯೊಂದಿಗಿನ 374 ಕೋಟಿ ರೂಪಾಯಿಗಳ ಹಗರಣ ಪ್ರಕರಣದ ಆರೋಪಿಯಾದ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿತು.

2009: ಭಾರತೀಯರ ಮೇಲೆ ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ ಮುಂದುವರೆಯಿತು. ಹೈದರಾಬಾದಿನ 20 ವರ್ಷದ ಮತ್ತೊಬ್ಬ ವಿದ್ಯಾರ್ಥಿ ಹಾಗೂ ಟ್ಯಾಕ್ಸಿ ಚಾಲಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಗಾಯಗೊಳಿಸಿದರು. ಒಂದು ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯದವರ ಮೇಲೆ ನಡೆದಿರುವ 16ನೇ ದಾಳಿ ಇದು. ಹಲ್ಲೆಗೊಳಗಾದ ಯುವಕನನ್ನು ಎಂ.ಎ.ಖಾನ್. ಇನ್ನೊಂದು ಘಟನೆಯಲ್ಲಿ ಟ್ಯಾಕ್ಸಿ ಬಾಡಿಗೆಗೆ ಪಡೆದು ಪ್ರಯಾಣಿಸಿದ ಗುಂಪೊಂದು ನಂತರ ಆ ಟ್ಯಾಕ್ಸಿಯ ಚಾಲಕ ಗುಲ್ಷನ್ ಕುಮಾರ್ ಎಂಬುವವರನ್ನು ಕ್ಲೇಟನ್ ಪ್ರದೇಶದಲ್ಲಿ ಥಳಿಸಿತು ಎಂದು ಆಸ್ಟ್ರೇಲಿಯಾದಲ್ಲಿನ ಭಾರತೀಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಅಮಿತ್ ಮಘನಾನಿ ತಿಳಿಸಿದರು.

2009: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಕೆಸಿಸಿಐ) ನೀಡುವ ರಾಜ್ಯದ 2008-09ನೇ ಸಾಲಿನ 'ಶ್ರೇಷ್ಠ ರಫ್ತುದಾರ ಪ್ರಶಸ್ತಿ'ಯು (ಉತ್ಪಾದನಾ ವಿಭಾಗ)- ಮಂಗಳೂರು ರಿಫೈನರಿ ಅಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ಗೆ ಲಭಿಸಿತು. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕಂಪೆನಿಯ ಕಾರ್ಯಕಾರಿ ನಿರ್ದೇಶಕ ಉಪಾಧ್ಯ ರಫ್ತು  ಪ್ರಶಸ್ತಿ ಸ್ವೀಕರಿಸಿದರು. ಎಂಆರ್‌ಪಿಎಲ್ ಕಂಪೆನಿಯು 11,600 ಕೋಟಿ ರೂಪಾಯಿ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಿ ರಾಜ್ಯದ ಶ್ರೇಷ್ಠ ರಫ್ತುದಾರ ಕಂಪೆನಿಯಾಗಿ ಹೊರಹೊಮ್ಮಿದೆ.

2009: ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಒಂದೂ ಲೋಕಸಭಾ ಸ್ಥಾನ ಗೆಲ್ಲಲಾಗದೆ ತೀವ್ರ ಟೀಕೆಗೆ ಗುರಿಯಾಗಿದ್ದ ಉತ್ತರಾಖಂಡದ ಮುಖ್ಯಮಂತ್ರಿ ಬಿಜೆಪಿಯ ಬಿ.ಸಿ.ಖಂಡೂರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎಲ್.ಕೆ.ಅಡ್ವಾಣಿ ಅವರ ನಿವಾಸದಲ್ಲಿ ಪಕ್ಷದ ಹಿರಿಯ ಮುಖಂಡರು ಸಭೆ ಸೇರಿ ಖಂಡೂರಿ ಅವರ ಸ್ಥಾನಕ್ಕೆ ಬೇರೆಯವರನ್ನು ನಿಯೋಜಿಸಲು ನಿರ್ಧರಿಸಿದ ನಂತರ ಖಂಡೂರಿ ರಾಜನಾಥ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ನೀಡಿದರು.

2009: ಡೀಸೆಲ್‌ನೊಂದಿಗೆ ಜತ್ರೋಪ ಅಥವಾ ಹೊಂಗೆ ಎಣ್ಣೆಯನ್ನುಬಳಸಿ ವಾಹನ ಓಡಿಸಬಹುದು ಎನ್ನುವುದು ಹಳೆ ಸುದ್ದಿ ಆದರೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಸಿಇ) ವಿದ್ಯಾರ್ಥಿಗಳು ಜತ್ರೋಪ ಮತ್ತು ಹೊಂಗೆ ಬೀಜಗಳಿಂದ ತಯಾರಿಸಿದ ತೈಲಕ್ಕೆ ಸ್ವಲ್ಪ ಮಾತ್ರ ಡೀಸೆಲ್ ಹಾಕಿ ಗಾಡಿಯನ್ನು ಓಡಿಸುವ ಸಾಧ್ಯತೆ ಬಗ್ಗೆ ಸಂಶೋಧಿಸಿದ್ದನ್ನು ಬಹಿರಂಗ ಪಡಿಸಿದರು. ಹೊಂಗೆ ಎಣ್ಣೆ ಮತ್ತು ಜತ್ರೋಪದಿಂದ ತಯಾರಿಸಿದ ತೈಲ ಶೇ 60 ಹಾಗೂ ಶೇ 40ರಷ್ಟು ಡೀಸೆಲ್ ಬಳಸಿ ವಾಹನಗಳನ್ನು ಓಡಿಸಬಹುದು. ಇದಕ್ಕಾಗಿ ವಾಹನ ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾಗಿಲ್ಲ. ಎಂಜಿನ್ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇಂತಹ ಪ್ರಯೋಗ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ. ಹೊಂಗೆ ಹಾಗೂ ಜತ್ರೋಪ ಬೀಜಗಳಿಂದ ಕಚ್ಚಾ ತೈಲ ಉತ್ಪಾದಿಸಲು ವಿದ್ಯಾರ್ಥಿಗಳೇ ಹೊಸ ಯಂತ್ರವನ್ನು  ಅನ್ವೇಷಣೆ ಮಾಡಿದರು. ಅದರ ಸಹಾಯದಿಂದ ಜತ್ರೋಪ ಸಸ್ಯದ ಬೀಜಗಳನ್ನು ದ್ರವರೂಪಕ್ಕೆ ಪರಿವರ್ತಿಸಬಹುದು. ಹಲವು ಹಂತಗಳ ಪ್ರಯೋಗದಿಂದ ಜತ್ರೋಪದಲ್ಲಿನ ಭಾರದ ವಸ್ತುಗಳನ್ನು ಬೇರ್ಪಡಿಸಿ, ಬಳಿಕ ಉಳಿಯುವ ತೈಲದಿಂದ ಇಂಧನದ ಗುಣಗಳನ್ನು ಪಡೆಯಬಹುದು. ಈ ತೈಲವನ್ನು ಹೊಂಗೆ ಮರದ ಮಿಶ್ರಣದೊಂದಿಗೆ ಸೇರಿಸಲಾಗುತ್ತದೆ. ಈ ಎರಡೂ ಮಿಶ್ರಣಗಳು ಒಟ್ಟಾದಾಗ 'ಬಯೋ ಡೀಸೆಲ್' ಇಂಧನ ಸೃಷ್ಟಿಯಾಗುತ್ತದೆ. ಹೀಗೆ ಪ್ರಾಯೋಗಿಕವಾಗಿ ಸಿದ್ಧಪಡಿಸಿದ 'ಕಚ್ಚಾ ತೈಲ'ವನ್ನು ಡೀಸೆಲ್‌ನೊಂದಿಗೆ ಸೇರಿಸಬಹುದು. ಈ ಇಂಧನ ಮಾರುಕಟ್ಟೆ ಪ್ರವೇಶ ಮಾಡಿದರೆ ಇಂಧನ ವೆಚ್ಚದಲ್ಲಿ ಶೇ 50ರಷ್ಟನ್ನು ಉಳಿಸಬಹುದು. ಈ ಇಂಧನವನ್ನು ಬಳಸಿ ನಾವೀಗ ಎಂಜಿನ್ ಚಾಲನೆ ಮಾಡ್ದಿದೇವೆ ಎಂಬುದು ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕೆ. ಚಂದ್ರಶೇಖರ್ ಹೇಳಿಕೆ. ಬಯೋಡೀಸೆಲ್ ಪರಿಸರ ಸ್ನೇಹಿ ಇಂಧನ. ಇಂಧನ ಉರಿದ ನಂತರ ಹೊರಬರುವ ಹೊಗೆಯಿಂದ ಮಾಲಿನ್ಯದ  ಪ್ರಮಾಣ ಕಡಿಮೆ. ಜತ್ರೋಪ ಗಿಡ ಎಲ್ಲೆಡೆ ಹೇರಳವಾಗಿ ಬೆಳೆಯುತ್ತದೆ. ಯಾರೂ ನೀರೆರೆಯದ್ದಿದರೂ ತನ್ನಷ್ಟಕ್ಕೆ ತಾನೇ ಬೆಳೆಯುತ್ತವೆ. ರೈತರು ವಾಣಿಜ್ಯ ಬೆಳೆಯಂತೆ ಹೊಂಗೆ ಹಾಗೂ ಜತ್ರೋಪ ಬೆಳೆದು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಿಕೊಳ್ಳಬಹುದು. ಈ ಅಂಶವೂ ನಮ್ಮ ಸಂಶೋಧನೆಯಲ್ಲಿ ಅಡಗಿದೆ ಎನ್ನುತ್ತಾರೆ ಡಾ.ಕೆ  ಚಂದ್ರಶೇಖರ್.  ಈ ಇಂಧನದ ಬಳಕೆಯಿಂದ ಲೀಟರ್ ಒಂದಕ್ಕೆ 4 ರೂ. ಉಳಿಸಬಹುದು ಎಂಬುದು ಸಂಶೋಧಿಸಿದ ವಿದ್ಯಾರ್ಥಿಗಳ ಅನಿಸಿಕೆ. ಜತ್ರೋಪ ಗಿಡದಿಂದ ಪ್ರಯೋಗಾಲಯದಲ್ಲಿ ಹೊರಬಂದ ಜಿಡ್ಡಿನ ಪದಾರ್ಥವೂ ಬಹುಪಯೋಗಿ. ಬೀಜಗಳಿಂದ ಬೇರ್ಪಟ್ಟ ಘನತ್ಯಾಜ್ಯದಿಂದ ಸೋಪ್ ತಯಾರಿಸಬಹುದು.

2009: ದಕ್ಷಿಣ ಭಾರತದ ಪ್ರಖ್ಯಾತ ಪರ್ವತಾರೋಹಿ ವಿ.ಗೋವಿಂದರಾಜು (77) ಮೈಸೂರಿನ ರಾಘವೇಂದ್ರ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಗೋವಿಂದರಾಜ್ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದ ತೇನ್‌ಸಿಂಗ್ ಅವರ ಸಹವರ್ತಿ. ಡಾರ್ಜಿಲಿಂಗಿನ ಹಿಮಾಲಯನ್ ಮೌಂಟೆನಿಂಗ್ ಇನ್ಸ್‌ಟಿಟ್ಯೂಟಿನಲ್ಲಿ ಚಾರಣ ಮತ್ತು ಪರ್ವತಾರೋಹಣ ತರಬೇರತುದಾರರಾಗಿದ್ದ ತೇನ್‌ಸಿಂಗ್ ಬಳಿ 1962ರಲ್ಲಿ ಗೋವಿಂದರಾಜ್ ತರಬೇತಿ ಪಡೆದಿದ್ದರು. 1966ರಲ್ಲಿ ಚತುರಂಗಿಯ ಭಾಗೀರಥಿ-2 ಎಂಬ 26,800 ಅಡಿ ಪರ್ವತವನ್ನು ಮೊದಲ ಬಾರಿಗೆ ಚಾರಣ ಮಾಡಿದ ನಾಲ್ವರಲ್ಲಿ ಇವರೂ ಒಬ್ಬರು. ಚಾರಣ ಮುಗಿಸಿ ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಜೊತೆಯಲ್ಲಿದ್ದ ಮೂವರು ಸಾವನ್ನಪ್ಪಿದರೆ ಗೋವಿಂದರಾಜ್ 20 ಗಂಟೆಗಳವರೆಗೆ ಹಿಮದಲ್ಲಿ ಸಿಲುಕಿಯೂ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು. ನಂತರ ಅವರ ಎರಡೂ ಕಾಲುಗಳ 9 ಬೆರಳುಗಳನ್ನು ತೆಗೆದು ಹಾಕಲಾಯಿತು. ಇಂತಹ ಸ್ಥಿತಿಯಲ್ಲಿಯೂ ಗೋವಿಂದರಾಜ್ ಚಾರಣ, ಸಾಹಸ ಚಟುವಟಿಕೆಗಳನ್ನು ನಿಲ್ಲಿಸದೆ 80ರ ದಶಕದಲ್ಲಿ ಮೈಸೂರಿನಲ್ಲಿ  'ಡೆಕ್ಕನ್ ಮೌಂಟೆನಿಯರಿಂಗ್ ಲೀಗ್' ಪರ್ವತಾರೋಹಣ ತರಬೇತಿ ಸಂಸ್ಥೆ ಪ್ರಾರಂಭಿಸಿ ಸಾವಿರಾರು ಮಂದಿಗೆ ತರಬೇತಿ ನೀಡಿದ್ದರು. ಹೈದರಾಬಾದಿನ ನ್ಯಾಷನಲ್ ಪೋಲಿಸ್ ಅಕಾಡೆಮಿ ಮತ್ತು ಮೈಸೂರಿನ ಕರ್ನಾಟಕ ಪೋಲಿಸ್ ಅಕಾಡೆಮಿಯಲ್ಲಿ ಪೋಲಿಸ್ ಅಧಿಕಾರಿಗಳಿಗೆ ಪರ್ವತಾರೋಹಣದ ಬಗ್ಗೆ ತರಬೇತಿ ನೀಡಿದ್ದರು. ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 1982ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

2009: ನಿಲ್ದಾಣಕ್ಕೆ ಇಳಿಯುವಾಗ ಕೆಳಮಟ್ಟದಲ್ಲಿ ಹಾರಾಡುವ ವಿಮಾನಗಳ ಕಂಪೆನಿಗಳಿಂದ 12 ನೇ ಶತಮಾನದ ಸ್ಮಾರಕ ಕುತುಬ್ ಮಿನಾರ್‌ಗೆ ಹಾನಿಯಾಗುತ್ತಿದೆ. ಹಾಗಾಗಿ ತಕ್ಷಣವೇ ವಿಮಾನಗಳ ಮಾರ್ಗವನ್ನು ಬದಲಾಯಿಸಬೇಕು ಎಂದು  ಭಾರತೀಯ ಪುರಾತತ್ವ ಇಲಾಖೆ (ಎಸ್‌ಐಎ) ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಸೂಚಿಸಿತು. ಕೆಳಮಟ್ಟದಲ್ಲಿ ಹಾರಾಡುವ ವಿಮಾನಗಳು 72.5 ಮೀಟರ್ ಎತ್ತರದ ಈ ಸ್ಮಾರಕಕ್ಕೆ ಯಾವ ರೀತಿಯಲ್ಲಿ ಅಪಾಯಕಾರಿಯಾಗಿವೆ ಎನ್ನುವುದನ್ನು ಎಸ್‌ಐಎ, ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿತು.

2009: ಹೊಸದಾಗಿ ಅಸ್ತಿತ್ವಕ್ಕೆ ಬಂದ 'ಕುವೆಂಪು ಭಾಷಾ ಭಾರತಿ' ಅಧ್ಯಕ್ಷರಾಗಿ ಪ್ರಧಾನ  ಗುರುದತ್ ಅವರನ್ನು ಸರ್ಕಾರ ನೇಮಕ ಮಾಡಿತು. ನೂತನ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಯಿತು. ಇದರಿಂದ ಹಲವಾರು ವರ್ಷಗಳಿಂದ ಅನುವಾದ ಅಕಾಡೆಮಿಯನ್ನು ಮುನ್ನಡೆಸಿದ ಹಿರಿಯ ಅನುಭವಿಗೆ ಹೊಸದೊಂದು ಜವಾಬ್ದಾರಿ ವಹಿಸಿದಂತಾಯಿತು.

2009: ಕೆನಡಾದ ಲ್ಯಾವಲಿನ್ ಕಂಪನಿಯೊಂದಿಗಿನ 374 ಕೋಟಿ ರೂಪಾಯಿಗಳ ಹಗರಣ ಪ್ರಕರಣದ ಆರೋಪಿಯಾದ ಸಿಪಿಎಂ ಕೇರಳ ಘಟಕದ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿತು. ಲ್ಯಾವಲಿನ್ ಕಂಪನಿ ಜತೆಗಿನ ಒಪ್ಪಂದದ ಈ ಹಗರಣಕ್ಕೆ ಸಂಬಂಧಿಸಿದಂತೆ ಪಿನರಾಯಿ ವಿಜಯನ್ ಹಾಗೂ ಇತರ ಎಂಟು ಜನ ಆರೋಪಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸುತ್ತ್ದಿದಂತೆಯೇ ನ್ಯಾಯಾಲಯ ಈ ಕ್ರಮ ಜರುಗಿಸಿತು.

2009: ಸಿಗರೇಟು ತಯಾರಕರ ಮೇಲೆ ನಿಯಂತ್ರಣ ಹೇರಲು ಸರ್ಕಾರಕ್ಕೆ ಅಧಿಕಾರ ನೀಡುವ ಮಹತ್ವದ ತಂಬಾಕು ಮಸೂದೆಗೆ ಅಧ್ಯಕ್ಷ ಬರಾಕ್ ಒಬಾಮ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದರು. ಇದರೊಂದಿಗೆ ಕಟ್ಟುನಿಟ್ಟಿನ ಕಾನೂನೊಂದು ಅಮೆರಿಕದಲ್ಲಿ ಜಾರಿಗೆ ಬಂದಂತಾಯಿತು. ಅಮೆರಿಕದಲ್ಲಿ ಪ್ರತಿ ದಿನ 19 ವರ್ಷದೊಳಗಿನ ಸಾವಿರ ಮಂದಿ ಸಿಗರೇಟಿಗೆ ದಾಸರಾಗುತ್ತಿದ್ದಾರೆ ಎಂಬ ಭಯಾನಕ ವಿದ್ಯಮಾನದ ನಡುವೆಯೇ ಯುವಕರನ್ನು ಈ ಚಟದಿಂದ ದೂರ ಇರಿಸಲು ನೂತನ ಕಾನೂನನ್ನು ಜಾರಿಗೆ ತರಲಾಯಿತು. ಈ ಮೂಲಕ ಒಬಾಮ ಅವರು ತಾವು ನೀಡಿದ ಭರವಸೆಯಂತೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದನ್ನು ಸಾಬೀತುಪಡಿಸಿದರು. ಈ ಕಾನೂನು ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ತಂಬಾಕು ಉತ್ಪನ್ನಗಳ ಕೆಲವು ಬಗೆಯ ಸುವಾಸನೆಗಳನ್ನು ಸೇರಿಸುವುದನ್ನು ನಿಷೇಧಿಸುವ, ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯವಾಗಿ ಛಾಪಿಸುವಂತೆ ಮಾಡುವ ಅಧಿಕಾರ ನೀಡಿತು.

2008: ಬ್ರಿಟನ್ನ ಪ್ರಧಾನಿ ಗೋರ್ಡಾನ್ ಬ್ರೌನ್ ಅವರ ಪತ್ನಿ ಸಾರಾ ಬ್ರೌನ್ ಅವರು, ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಶಿವರಾಜ್ ಪೌಲ್ ಅವರ ಕಿರಿಯ ಮಗಳು ಅಂಬಿಕಾ ಅವರ ನೆನಪಿನ `ಪ್ರಿಥ್ರಿ' (ಪೋಡಿಯಂ ಥ್ರಿ) ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದರು. ಈ ಅಧ್ಯಯನ ಕೇಂದ್ರ, ಕಲಿಕೆ, ತರಬೇತಿ ನೀಡುತ್ತಾ ಸಂಶೋಧನೆಗಳ ಅನುಷ್ಠಾನಕ್ಕೆ ಪುರಕವಾಗಿ ಉದ್ಯಮಿಗಳು ಮತ್ತು ಶಿಕ್ಷಣವೇತ್ತರಿಗೆ ಒಂದು ಸಮಾನ ವೇದಿಕೆ ಒದಗಿಸುವುದು.

2007: ಕರ್ನಾಟಕದಲ್ಲಿ ಉಗ್ರ ಸ್ವರೂಪ ತಾಳಿದ ಮಳೆ 35 ಜನರನ್ನು ಬಲಿ ತೆಗೆದುಕೊಂಡಿತು.

2007: ನವ ಮಂಗಳೂರು ಬಂದರಿನಿಂದ ಯುಎಇಗೆ ಕಬ್ಬಿಣದ ಅದಿರನ್ನು ಹೊತ್ತು ಹೊರಟ `ಡೆನ್ ಡೆನ್' ಆಫ್ರಿಕನ್ ಹಡಗು ತಾಂತ್ರಿಕ ದೋಷದ ಜೊತೆಗೆ ಭಾರಿ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಮಂಗಳೂರು ಸಮೀಪದ ತಣ್ಣೀರು ಬಾವಿ ಸಮುದ್ರ ದಂಡೆ ಬಳಿ ಸಂಭವಿಸಿದ ದುರಂತದಲ್ಲಿ ಇಬ್ಬರು ಅಸು ನೀಗಿ ಒಬ್ಬರು ಕಣ್ಮರೆಯಾದರು.

2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ - ಎಡಪಕ್ಷಗಳ ಅಭ್ಯರ್ಥಿಯಾಗಿ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿದರು.

2007: ಬಾಹ್ಯಾಕಾಶದಲ್ಲಿ 195 ದಿನಗಳನ್ನು ಕಳೆದು ಭೂಮಿಗೆ ವಾಪಸಾದ ಭಾರತೀಯ ಸಂಜಾತ ಅಮೆರಿಕದ ಗಗನಯಾನಿ ಸುನೀತಾ ವಿಲಿಯಮ್ಸ್ (41) ಅವರನ್ನು ನ್ಯೂಯಾರ್ಕಿನ ಎಬಿಸಿ ಟೆಲಿವಿಷನ್ ನೆಟ್ ವರ್ಕ್ `ವಾರದ ವ್ಯಕ್ತಿ' ಎಂಬುದಾಗಿ ಆಯ್ಕೆ ಮಾಡಿತು.

2006: ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ದಿನದ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ `ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ'ಯು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಗೆ ಲಭಿಸಿತು. ವಿಶ್ವಸಂಸ್ಥೆಯು ಜೂನ್ 23ರ ಈ ದಿನವನ್ನು `ವಿಶ್ವಸಂಸ್ಥೆ ಸಾರ್ವಜನಿಕ ಸೇವಾದಿನ'ವಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸೇರಿದಂತೆ ಜಗತ್ತಿನ ವಿವಿಧ 11 ರಾಷ್ಟ್ರಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾರ್ವಜನಿಕ ಸೇವಾ ಸಂಸ್ಥೆ(ಇಲಾಖೆ)ಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು..

2005: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಕ ಸದಸ್ಯ ಸುಂದರಸಿಂಗ್ ಭಂಡಾರಿ ನಿಧನ.

1997: ಜೈನ ಧರ್ಮದ ತೇರಾಪಂಥದ ಸ್ಥಾಪಕ ಆಚಾರ್ಯ ತುಳಸಿ ನಿಧನ.

1995: ವೈದ್ಯಕೀಯ ತಜ್ಞ ಡಾ. ಜಾನ್ ಸಾಲ್ಕ್ ತಮ್ಮ 80ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದ ಲಾಜೊಲ್ಲಾದಲ್ಲಿ ನಿಧನರಾದರು. ಇವರು ಪೋಲಿಯೋ ವಿರುದ್ಧ ಮೊತ್ತ ಮೊದಲಿಗೆ ಲಸಿಕೆ ಅಭಿವೃದ್ಧಿ ಪಡಿಸಿದರು.

1985: ಏರ್ ಇಂಡಿಯಾ 747 `ಎಂಪರರ್ ಕನಿಷ್ಕ' ವಿಮಾನ ಐರಿಷ್ ಕರಾವಳಿಯಲ್ಲಿ ಸ್ಫೋಟಗೊಂಡು ಅದರಲ್ಲಿದ್ದ 329 ಜನ ಅಸುನೀಗಿದರು. ಈ ವಿಮಾನಸ್ಫೋಟಕ್ಕೆ ಸಿಖ್ ಭಯೋತ್ಪಾದಕರು ಕಾರಣ ಎಂದು ಶಂಕಿಸಿ ಖಟ್ಲೆ ಹೂಡಲಾಗಿತ್ತು. ಇದರ ವಿಚಾರಣೆ ಇತ್ತೀಚಿನವರೆಗೂ ನಡೆಯಿತು.

1981: ಪ್ರಮುಖ ಕಾಂಗೈ ನಾಯಕ, ಕೇಂದ್ರದ ಮಾಜಿ ಸಚಿವ ಎಸ್. ಕೆ. ಪಾಟೀಲ ಅವರು ಈದಿನ  ನಿಧನರಾದರು.

1980: ಇಂದಿರಾ ಗಾಂಧಿ ಅವರ ಕಿರಿಯ ಪುತ್ರ ಸಂಜಯಗಾಂಧಿ ನವದೆಹಲಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

1956: ಗಮೆಲ್ ಅಬ್ದುಲ್ ನಾಸ್ಸೇರ್ ಈಜಿಪ್ಟಿನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿತ್ತು. ನಾಸ್ಸೇರ್ ಕಣದಲ್ಲಿ ಇದ್ದ ಏಕೈಕ ಅಭ್ಯರ್ಥಿ.

1955: ಕಲಾವಿದ ಪುಟ್ಟೇಗೌಡ ಎಚ್. ಬಿ. ಜನನ.

1953: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕಾಶ್ಮೀರದ ಸೆರೆಮನೆಯೊಂದರಲ್ಲಿ ಮೃತರಾದರು.

1953: ಕಲಾವಿದೆ ಇಂದೂ ವಿಶ್ವನಾಥ್ ಜನನ.

1941: ಕಲಾವಿದ ಪ್ರಭಾಶಂಕರ್ ಜನನ.

1932: ಕಲಾವಿದ ರಾಜಾರಾಮ್ ಗಿರಿಯನ್ ಜನನ.

1931: ಸಾಹಿತಿ ದೇವಕಿ ಮೂರ್ತಿ ಜನನ.

1920: ಜನತಾ ಪಕ್ಷದ ಹಿರಿಯ ಮುಖಂಡ ಜಗನ್ನಾಥರಾವ್ ಜೋಶಿ ಜನನ.

1912: ಸಾಹಿತಿ ಜಯದೇವಿ ತಾಯಿ ಲಿಗಾಡೆ ಜನನ.

1896: ಕನ್ನಡ ರಂಗಭೂಮಿಯ ಭೀಷ್ಮ ಪಿತಾಮಹರೆನಿಸಿದ್ದ ಆರ್. ನಾಗೇಂದ್ರರಾವ್ ಅವರು ರಟ್ಟಿಹಳ್ಳಿ ಕೃಷ್ಣರಾವ್ - ರುಕ್ಮಿಣಿದೇವಿ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದರು. ಅಪೂರ್ವ ಸಹೋದರಗಳ್, ಸತಿ ಸುಲೋಚನಾ, ವಸಂತ ಸೇನಾ, ಗಾಳಿ ಗೋಪುರ, ವಿಜಯನಗರದ ವೀರಪುತ್ರ, ನಮ್ಮ ಮಕ್ಕಳು, ಹಣ್ಣೆಲೆ ಚಿಗುರಿದಾಗ, ಚಂದ್ರಹಾಸ, ಮದುವೆ ಮಾಡಿ ನೋಡು, ವೀರ ಕೇಸರಿ, ಕರುಳಿನ ಕರೆ ಮುಂತಾದ ಚಿತ್ರಗಳಲ್ಲಿ ತಮ್ಮ ಅಚ್ಚಳಿಯದ ಅಭಿನಯದಿಂದ ಜನಮನದಲ್ಲಿ ವಿರಾಜಮಾನರಾದವರು ನಾಗೇಂದ್ರರಾವ್. ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ನಟ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿದ್ದವು.

1868: ಕ್ರಿಸ್ಟೋಫರ್ ಲಾಥಮ್ ಶೋಲ್ಸ್ ತಮ್ಮ ಸಂಶೋಧನೆ `ಟೈಪ್ ರೈಟರ್'ಗೆ ಪೇಟೆಂಟ್ ಪಡೆದರು.

1761: ಮರಾಠಾ ದೊರೆ ಪೇಶ್ವಾ ಬಾಲಾಜಿ ಬಾಜಿ ರಾವ್ ಮೂರನೇ ಪಾಣಿಪತ್ ಯುದ್ಧದಲ್ಲಿ ಸೋಲು ಅನುಭವಿಸಿದ ಬಳಿಕ ಅದೇ ದುಃಖದಲ್ಲಿ ಅಸುನೀಗಿದ.

1757: ರಾಬರ್ಟ್ ಕ್ಲೈವನು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬ ಸಿರಾಜ್- ಉದ್- ದೌಲನನ್ನು ಸೋಲಿಸಿದ. ಈ ಜಯದಿಂದ ಬ್ರಿಟಿಷರಿಗೆ ಬಂಗಾಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಅನುಕೂಲವಾಯಿತು. ಇದು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೂ ಅಡಿಗಲ್ಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, July 8, 2010

ಇಂದಿನ ಇತಿಹಾಸ History Today ಜೂನ್ 22

ಇಂದಿನ ಇತಿಹಾಸ

ಜೂನ್ 22


ಚುಕ್ಕಿ ಚಿತ್ರಕಲೆ ಮತ್ತು ಸಾಹಿತ್ಯ ಎರಡೂ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಮೋಹನ್ ವೆರ್ಣೇಕರ್ ಅವರು ವಾಸುದೇವ ಶೇಟ್- ತುಳಸೀಬಾಯಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸ ಪಟ್ಟಣದಲ್ಲಿ ಜನಿಸಿದರು.

2009: ತುಂಗಭದ್ರಾ ನದಿಯಲ್ಲಿ ಸಂಭವಿಸಿದ ತೆಪ್ಪ ದುರಂತದ ಎರಡು ಪ್ರಕರಣಗಳಲ್ಲಿ ಒಟ್ಟು 18 ಜನ ಮೃತರಾದರು. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ವಿಠಲಾಪುರ ಬಳಿ ಮೀನುಗಾರರ ತೆಪ್ಪಗಳೆರಡು ನದಿಯಲ್ಲಿ ಬುಡಮೇಲಾಗಿ ಒಟ್ಟು 12 ಜನ ಜಲ ಸಮಾಧಿಯಾದರೆ, ಕೊಪ್ಪಳ ತಾಲ್ಲೂಕಿನ ಹ್ಯಾಟಿ-ಮುಂಡರಗಿ ಬಳಿ ಇದೇ ನದಿಯ ಹಿನ್ನೀರಿನಲ್ಲಿ ಸಂಭವಿಸಿದ ಇನ್ನೊಂದು ಘಟನೆಯಲ್ಲಿ ಮೂವರು ಮೃತರಾಗಿ ಇತರ ಮೂವರು ಕಣ್ಮರೆಯಾದರು. ಇವರು ಕೂಡ ಮೃತರಾಗಿರಬಹುದು ಎಂದು ಶಂಕಿಸಲಾಯಿತು.

2009: ದೇಶದ ಹಲವು ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿರುವ ಸಿಪಿಐ- ಮಾವೋವಾದಿ ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರ, ಅದನ್ನು ಭಯೋತ್ಪಾದನಾ ಸಂಘಟನೆ ಎಂದು ಕರೆಯಿತು. ಕಾನೂನು ವಿರೋಧಿ ಚಟುವಟಿಕೆ ಪ್ರತಿಬಂಧಕ ಕಾಯ್ದೆ ಅಡಿ ಈ ನಿಷೇಧ ಹೇರಲಾಯಿತು. ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಿಪಿಐ ಮಾವೋವಾದಿ ಸಂಘಟನೆ ದೇಶದ ಪ್ರಮುಖ ನಕ್ಸಲ್ ಸಂಘಟನೆಯಾಗಿದ್ದು, ಇತರ 32 ನಿಷೇಧಿತ ಉಗ್ರರ ಸಂಘಟನೆಗಳ ಸಾಲಿಗೆ ಸೇರಿತು. ಸಿಮಿ, ಲಷ್ಕರ್ ಇತ್ಯಾದಿ ಗುಂಪುಗಳು ನಿಷೇಧಿತ ಸಂಘಟನೆಗಳ ಪಟ್ಟಿಯಲ್ಲಿ ಇವೆ.

2009: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮೈಸೂರು-ಬೆಂಗಳೂರು ನಡುವೆ ಮರ್ಸಿಡಿಸ್ ಬೆಂಜ್ ಬಸ್ ಸೇವೆಯನ್ನು ಆರಂಭಿಸಿತು. ಮರ್ಸಿಡಿಸ್ ಬೆಂಜ್ ಕಂಪೆನಿ ತಯಾರಿಸಿರುವ ಮೊದಲ ಬಸ್ಸನ್ನು ನಿಗಮವು ಸಾರ್ವಜನಿಕರ ಸೇವೆಗೆ ಬಿಟ್ಟಿತು.

2009: ರಾಜ್ಯ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಅರಣ್ಯ ಸೇವೆಯ ಹಿರಿಯ ಅಧಿಕಾರಿ ಡಾ.ಪಿ.ಜೆ.ದಿಲೀಪ್ ಕುಮಾರ್ ಅವರನ್ನು ಕೇಂದ್ರ ಅರಣ್ಯ ಸಚಿವಾಲಯದ ಮಹಾ ನಿರ್ದೇಶಕರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು. ಈ ಮೂಲಕ ಕನ್ನಡಿಗರೊಬ್ಬರು ಅರಣ್ಯ ಇಲಾಖೆಯ ಅತ್ಯುನ್ನತ ಹುದ್ದೆಗೆ ಏರಿದಂತಾಯಿತು.1974ರ ತಂಡದ ಐಎಫ್‌ಎಸ್ ಅಧಿಕಾರಿಯಾದ ಬೆಂಗಳೂರಿನವರೇ ಆದ ಇವರನ್ನು ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಸೂಚಿಸಿ ಕೇಂದ್ರವು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು.

2009: ಭೂಗತ ಪಾತಕಿ ಛೋಟಾ ಶಕೀಲ್ ಸಹೋದರನ ಹೆಸರಿನಲ್ಲಿ ಧಾರಾವಾಹಿಗಳ ನಿರ್ದೇಶಕರೊಬ್ಬರಿಂದ ಹಣ ಸುಲಿಗೆಗೆ ಯತ್ನಿಸಿ, ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಆಸ್ಕರ್ ಪ್ರಶಸ್ತಿ ವಿಜೇತ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ನಟ 21 ವರ್ಷದ ಆರೋಪಿ ಅಜಿತ್ ಪಾಂಡೆಯನ್ನು ಪೊಲೀಸರು ಬಂಧಿಸಿದರು. ರಮಾನಂದ ಸಾಗರ್ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿದ್ದ ಈತ ತನ್ನನ್ನು ಛೋಟಾ ಶಕೀಲ್ ಸಹೋದರ ಇರ್ಫಾನ್ ಹುಸ್ರಿ ಎಂದು ಪರಿಚಯಿಸಿಕೊಂಡಿದ್ದ.

2009: ಶಾಲಾ ಶಿಕ್ಷಕರಿಗಾಗಿ ಕೇರಳ ಸರ್ಕಾರವು  ಖ್ಯಾತ ಉರ್ದು ಕವಿ ಇಕ್ಬಾಲ್ ಅವರ 'ಸಾರೆ ಜಹಾಂ ಸೆ ಅಚ್ಛಾ' ಗೀತೆಯನ್ನು  ಮಲಯಾಳಂಗೆ ಅನುವಾದಿಸಿದಾಗ ಹಲವಾರು ತಪ್ಪುಗಳು ನುಸುಳಿದ ಕಾರಣ  7 ಮಂದಿ ಬೋಧಕ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು. ತಪ್ಪುಗಳು ನುಸುಳಿದ ವಿಷಯ ಬೆಳಕಿಗೆ ಬಂದದ್ದೇ ತಡ ಕೇರಳ ಶಿಕ್ಷಣ ಇಲಾಖೆಯು ಇಕ್ಬಾಲ್ ಅವರ ಗೀತೆಯ ಮಲಯಾಳಂ ಕೈಪಿಡಿಯನ್ನು ವಾಪಸ್ ತೆಗೆದುಕೊಂಡಿತು. ಇದನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 6 ಶಿಕ್ಷಕರು ಹಾಗೂ ಬೋಧಕ ಸಹಾಯಕರೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿತು.

2009: ಸಿಪಿಐ(ಎಂ) ಪಕ್ಷದ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ವಲಯ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಉಚ್ಚಿಲ (65) ಅವರು  ಹೃದಯಾಘಾತದಿಂದ ಉಳ್ಳಾಲದ ಸ್ವಗೃಹದಲ್ಲಿ ನಿಧನರಾದರು. ಸಿಪಿಐಎಂ ರಾಜ್ಯ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿದ್ದ ಉಚ್ಚಿಲ ಅವರು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಜಿಲ್ಲೆಯಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಸಂಘಟನೆ ಕಟ್ಟಿ ಅವರ ಬೇಡಿಕೆಗಳಿಗಾಗಿ ಅನೇಕ ಚಳುವಳಿಗಳ ನೇತೃತ್ವ ವಹಿಸಿದ್ದರು. ಭೂಸುಧಾರಣೆಗಾಗಿ ನಡೆದ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿದ್ದರು.

2009: ಅಭಿರುಚಿ ಪ್ರಕಾಶನದ 'ಮೈಸೂರು ನೂರಿನ್ನೂರು ವರ್ಷಗಳ ಹಿಂದೆ' ಕೃತಿ ಸೇರಿದಂತೆ ಒಟ್ಟು ಆರು ಕೃತಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರದ 2007ನೇ ಸಾಲಿನ ಪುಸ್ತಕ ಸೊಗಸು ಬಹುಮಾನ ಲಭಿಸಿತು. ಧಾರವಾಡದ 'ಮನೋಹರ ಗ್ರಂಥಮಾಲೆ'ಯು 2007ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಆಯ್ಕೆಯಾಯಿತು.

2009: ಏಡ್ಸ್ ರೋಗದ ಚಿಕಿತ್ಸೆ ಕುರಿತ ಮಹತ್ವದ ಸಂಶೋಧನೆಯೊಂದರಲ್ಲಿ ಈ ರೋಗದ ವೈರಸ್ ಮನುಷ್ಯನ ದೇಹದಲ್ಲಿ ಎಲ್ಲಿ ಅವಿತುಕೊಳ್ಳುತ್ತದೆ ಎಂಬುದನ್ನು ಕೆನಡಾದ ವಿಜ್ಞಾನಿಗಳು ಪತ್ತೆ ಹಚ್ಚಿದರು. ಈ ಸಂಶೋಧನೆಯು ಏಡ್ಸ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ನೆರವಾಗಲಿದೆ ಎಂದು ಅಮೆರಿಕದ ಸಂಶೋಧಕರೊಂದಿಗೆ ಅಧ್ಯಯನ ನಡೆಸಿರುವ ಈ ವಿಜ್ಞಾನಿಗಳು ಪ್ರತಿಪಾದಿಸಿದರು. ಪ್ರಸ್ತುತ ಎಚ್‌ಐವಿ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆಯು ಕೇವಲ ತಾತ್ಕಾಲಿಕ ಶಮನವನ್ನಷ್ಟೇ ನೀಡಬಲ್ಲುದು. ಅದು ಸೋಂಕಿಗೆ ಕಾರಣವಾಗುವ ವೈರಸ್ಸನ್ನು ದೇಹದಿಂದ ನಾಶಪಡಿಸುವುದಿಲ್ಲ. ಈ ಸಂದರ್ಭದಲ್ಲಿ ವೈರಸ್ ದೇಹದ ಯಾವುದೋ ಭಾಗದಲ್ಲಿ ಅಡಗಿ ಕುಳಿತು ಪುನಃ ದಾಳಿ ಮಾಡುತ್ತದೆ. 'ಇದುವರೆಗೂ ಏಡ್ಸ್‌ಗೆ  ಕಾರಣವಾಗುವ ವೈರಸ್ಸುಗಳು ಮನುಷ್ಯನ ಮೂತ್ರಪಿಂಡ ಅಥವಾ ಮೆದುಳಿನಲ್ಲಿ ಅವಿತಿರುತ್ತವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ, ಈ ವೈರಸ್ಸುಗಳು ಮನುಷ್ಯನ ದೇಹದಲ್ಲಿ ಸುರಕ್ಷಿತ ಜಾಗದಲ್ಲಿ ಅವಿತಿರುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ' ಎಂದು ವಿಜ್ಞಾನಿಗಳು ಹೇಳಿದರು. ವೈರಸ್ಸುಗಳು ಮನುಷ್ಯನ ದೇಹದಲ್ಲಿ ಅತಿ ಹೆಚ್ಚು ಕಾಲ ಜೀವಿಸುವ ಸ್ಮೃತಿ ಕೋಶಗಳಲ್ಲಿ (ಮೆಮೊರಿ ಸೆಲ್ಸ್) ಅವಿತಿರುತ್ತವೆ ಎಂದು ಪ್ರೊ. ರಫೀಕ್ ಪೀರ್ರೆ ಸೆಕಾಲಿ ನೇತೃತ್ವದಲ್ಲಿ ಅಧ್ಯಯನ ಕೈಗೊಂಡ ಸಂಶೋಧಕರು ಹೇಳಿದರು. ದೇಹದಲ್ಲಿರುವ ಆಕರ ಕೋಶಗಳ ರೀತಿಯಲ್ಲಿ ಹೆಚ್ಚು ಕಾಲ ಜೀವಿಸುವ ಸಾಮರ್ಥ್ಯ ಹೊಂದಿರುವ ಈ ಸ್ಮೃತಿಕೋಶಗಳು ಹೊಸ ವೈರಸ್ಸುಗಳು ದಾಳಿ ಮಾಡುವವರೆಗೂ ನಿದ್ರಾವಸ್ಥೆಯಲ್ಲಿಯೇ ಇರುತ್ತವೆ. ಆಕರ ಕೋಶಗಳಂತೆಯೇ ಸ್ಮೃತಿಕೋಶಗಳೂ ತಮಗೆ ತಾವೇ ದ್ವಿಗುಣಗೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ. ಎಚ್‌ಐವಿ ವೈರಸ್ ದೇಹದೊಳಕ್ಕೆ ಹೊಕ್ಕ ತಕ್ಷಣ ಈ ಕೋಶಗಳು ದೇಹವನ್ನು ರಕ್ಷಿಸುವುದಕ್ಕಾಗಿ ದ್ವಿಗುಣಗೊಳ್ಳುತ್ತವೆ. ಆದರೆ ಸಮಸ್ಯೆಯೆಂದರೆ, ಒಮ್ಮೆ ವೈರಸ್ ಈ ಕೋಶಗಳಿಗೆ ಹೊಕ್ಕಿತೆಂದರೆ ಅವುಗಳು ಕೂಡಾ ಸ್ಮೃತಿಕೋಶಗಳೊಂದಿಗೆ ದ್ವಿಗುಣಗೊಳ್ಳುತ್ತವೆ. ಏಡ್ಸ್ ರೋಗಕ್ಕೆ ನೀಡಲಾಗುತ್ತಿರುವ ಚಿಕಿತ್ಸೆಯಲ್ಲಿ 5ರಿಂದ 6 ಔಷಧಗಳನ್ನು ಬಳಸಲಾಗುತ್ತಿದ್ದು, ಇವುಗಳು ಏಡ್ಸ್ ರೋಗಿಯನ್ನು 13 ವರ್ಷಗಳವರೆಗೆ ಬದುಕಿಸಬಹುದು. ಅದುವರೆಗೆ ವೈರಸ್ಸುಗಳು ಈ ಸುರಕ್ಷಿತ ಕೋಶಗಳಲ್ಲಿ ಅವಿತಿರುತ್ತವೆ. ದೇಹದಲ್ಲಿರುವ ನಿರೋಧಕ ವ್ಯವಸ್ಥೆಗೆ ಯಾವುದೇ ಹಾನಿಯಾಗದಂತೆ ಸ್ಮೃತಿಕೋಶಗಳಲ್ಲಿ ಅಡಗಿರುವ ವೈರಸ್ಸುಗಳನ್ನು ನಾಶಪಡಿಸುವ ದಾರಿಗಳನ್ನು ತಾವು ಹುಡುಕುತ್ತಿರುವುದಾಗಿ ವಿಜ್ಞಾನಿಗಳು ಹೇಳಿದರು. 'ಈ ಸಂಶೋಧನೆಯು ಏಡ್ಸ್ ವೈರಸ್ ನಾಶಕ್ಕೆ ದೊರೆತಿರುವ ಮೊದಲ ಸುಳಿವು' ಎಂದು ಸಂಶೋಧನೆಯ ನೇತೃತ್ವ ವಹಿಸಿರುವ ಸೆಕಾಲಿ ನುಡಿದರು. ವಿಶ್ವದಾದ್ಯಂತ ಒಟ್ಟು 33 ದಶಲಕ್ಷ ಎಚ್‌ಐವಿ ಸೋಂಕಿತರಿದ್ದು, ಪ್ರತಿವರ್ಷ 27 ಲಕ್ಷ ಮಂದಿಗೆ ಈ ಸೋಂಕು ತಗುಲುತ್ತಿದೆ. ಈ ಅಧ್ಯಯನದ ವರದಿಯು 'ನೇಚರ್ ಮೆಡಿಸಿನ್' ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿತು.

2009: ನಂಬಿದರೆ ನಂಬಿ ಬಿಟ್ಟರೆ ಬಿಡಿ. ಸಸ್ಯಗಳು ಪರಸ್ಪರ ಮಾತನಾಡುತ್ತವೆ ! ಸಸ್ಯಗಳ ಸಂವಹನ ಕೌಶಲ್ಯಗಳು ಈ ಹಿಂದೆ ಯೋಚಿಸಿದ್ದಕ್ಕಿಂತ ಹೆಚ್ಚು ಅಭಿವೃದ್ಧಿ ಹೊಂದಿದೆ ಎಂಬುದು ಅಂತಾರಾಷ್ಟ್ರೀಯ ತಂಡ ನಡೆಸಿದ ಅಧ್ಯಯನದಿಂದ ತಿಳಿದುಬಂದಿತು. ತಮ್ಮ ಪಕ್ಕದಲ್ಲಿರುವ ಸಸ್ಯಗಳಿಗೆ ಸಂಭಾವ್ಯ ಬೆದರಿಕೆಯ ಕುರಿತು ಎಚ್ಚರಿಕೆಯನ್ನೂ ಅವು ನೀಡಬಲ್ಲವು ಎಂದು ಅದು ಹೇಳಿತು. ಹಾನಿಕಾರಕ ಕೀಟಗಳ ದಾಳಿ ಕುರಿತು ಎಚ್ಚರಿಕೆ ಹಾಗೂ ಮಧುಹೀರುವ ಜೇನಿನ ಇರುವಿಕೆಯ ಕುರಿತು ಚರ್ಚೆ ನಡೆಸಲು ಸಸ್ಯಗಳು ಪರಸ್ಪರ ರಾಸಾಯನಿಕ ಸಂದೇಶ ರವಾನಿಸಿರುವುದನ್ನು ಸಂಶೋಧನಕಾರರು ಪತ್ತೆಹಚ್ಚಿದರು ಎಂದು ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿತು. 'ನಾವು ಈ ಹಿಂದೆ ಅಂದುಕೊಂಡದ್ದಕ್ಕಿಂತ ಉತ್ತಮವಾಗಿ ಸಸ್ಯಗಳು ವ್ಯವಹರಿಸಬಲ್ಲವು' ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಮುಖ ಅಧ್ಯಯನಕಾರ ರಿಚರ್ಡ್ ಕರ್ಬಾನ್ ಹೇಳಿದರು.

2009: ಮನುಷ್ಯನ ಮೆದುಳು ದುಃಖ, ಹೆದರಿಕೆ ಇತ್ಯಾದಿ ಋಣಾತ್ಮಕ ಭಾವನೆಗಳಿಗಿಂತ ಸಂತಸ, ಖುಷಿಯಂತಹ ಧನಾತ್ಮಕ ಭಾವಗಳನ್ನು ಬಹಳ ಬೇಗ ಗುರುತಿಸುತ್ತದೆ ಎಂದು ಅಂತಾರಾಷ್ಟ್ರೀಯ  ತಜ್ಞರ ತಂಡ ಅಭಿಪ್ರಾಯಪಟ್ಟಿತು. ಭಾವನಾತ್ಮಕ ವಿಷಯಗಳಿಗೆ ವ್ಯಕ್ತಿಯ ಮುಖದಲ್ಲಿ ಉಂಟಾಗುವ ಬದಲಾವಣೆ ಹಾಗೂ ಮೆದುಳಿನಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಸಮೀಕರಿಸಿ ನೋಡಲು ತಜ್ಞರು ಪ್ರಯತ್ನಿಸಿದ್ದರು. ಪ್ರಸ್ತುತ ಅಧ್ಯಯನದಲ್ಲಿ ಮನಃ ಶಾಸ್ತ್ರ ವಿಷಯದ 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಭಜಿತ ದೃಶ್ಯ ಕ್ಷೇತ್ರ ತಂತ್ರವನ್ನು ಬಳಸಿ ಮೆದುಳಿನ ಎಡ ಮತ್ತು ಬಲ ಅರ್ಧ ಭಾಗಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗಿತ್ತು. ಮೆದುಳಿನ ಬಲಭಾಗ ಭಾವನೆಗಳಿಗೆ ಹೆಚ್ಚು ಸ್ಪಂದಿಸುತ್ತದೆ. ಇದು ಸುಖ ಮತ್ತು ದುಃಖದ ವಿಷಯಗಳಿಗೆ ಹೆಚ್ಚು ಅನ್ವಯವಾಗುತ್ತದೆ ಎಂದು ಅಧ್ಯಯನದಿಂದ ತಿಳಿಯಿತು ಎಂದು  ಬಾರ್ಸಿಲೋನಾ ವಿಶ್ವವಿದ್ಯಾಲಯದ  ಸಂಶೋಧಕ ಜೆ.ಆಂಟೋನಿಯೊ ಅಜ್ನರ್ ಕಸನೋವ ತಿಳಿಸಿದರು.

2009: 'ಹಂದಿಜ್ವರದ ವೈರಸ್ ನಿಯಂತ್ರಣಕ್ಕಾಗಿ ಸೂಕ್ತ ಲಸಿಕೆಯನ್ನು ಅಭಿವೃದ್ಧಿ ಪಡಿಸಿರುವುದಾಗಿ ಚೀನಾದ ಔಷಧ ಸಂಸ್ಥೆಯೊಂದು ತಿಳಿಸಿತು. ಲಸಿಕೆಯು ಪರೀಕ್ಷಾ ಹಂತದಲ್ಲಿದೆ. ಎಲ್ಲಾ ಸುರಕ್ಷಾ ತಪಾಸಣೆಯ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಔಷಧ ಮಾರುಕಟ್ಟೆಯನ್ನು ಪ್ರವೇಶಿಸಲಿದೆ' ಎಂದು ಹೋಲಾನ್ ಜೈವಿಕ ಎಂಜಿನಿಯರಿಂಗ್ ಸಂಸ್ಥೆಯ ತಜ್ಞರು ತಿಳಿಸಿದರು.

2008: ಇರಾಕ್ನ ಈಶಾನ್ಯ ಭಾಗದಲ್ಲಿರುವ ಬಕುಬಾ ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳ ಸಮುಚ್ಚಯದ ಎದುರು ಮಹಿಳೆಯೊಬ್ಬಳು ತಾನು ತೊಟ್ಟ ಕಪ್ಪು ಬಟ್ಟೆಯಲ್ಲಿ ಮುಚ್ಚಿಟ್ಟುಕೊಂಡ ಬಾಂಬ್ನ್ನು ಸ್ಪೋಟಿಸಿ 15 ಜನರ ಸಾವಿಗೆ ಕಾರಣವಾದ ದುರಂತ ಘಟನೆ ನಡೆಯಿತು. ದುರಂತದಲ್ಲಿ 40 ಜನರು ಗಾಯಗೊಂಡರು.  ಉಗ್ರವಾದಿ ಸಂಘಟನೆಗೆ ಸೇರಿದ ಮಹಿಳೆಯರು ಈ ವರ್ಷ ನಡೆಸಿದ 21ನೇ ಆತ್ಮಹತ್ಯಾ ಸ್ಪೋಟ ಇದು.

 2007: ಪ್ರತಿಕೂಲ ಹವಾಮಾನದಿಂದ ಮತ್ತೊಂದು ದಿನವನ್ನು ಬಾಹ್ಯಾಕಾಶದಲ್ಲೇ ಕಳೆದ ಅಟ್ಲಾಂಟಿಸ್ ನೌಕೆ ಕೊನೆಗೂ ಈದಿನ ನಸುಕಿನ 1.20ರ ಸುಮಾರಿಗೆ ಕ್ಯಾಲಿಫೋರ್ನಿಯಾದ ಎಡ್ವರ್ಡ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ಅಟ್ಲಾಂಟಿಸ್ ನಭದಲ್ಲಿ ಕಾಣುತ್ತಿದ್ದಂತೆಯೇ ಎಲ್ಲರೂ ಉಸಿರು ಬಿಗಿಹಿಡಿದು ಸುರಕ್ಷಿತ ಭೂಸ್ಪರ್ಶಕ್ಕೆ  ಪ್ರಾರ್ಥಿಸಿದರು. ಈ ಎಲ್ಲ ಪ್ರಕ್ರಿಯೆಯನ್ನು ವಿಶ್ವದ ಬಹುತೇಕ ಟೆಲಿವಿಷನ್ ಚಾನೆಲ್ಲುಗಳು ನೇರ ಪ್ರಸಾರ  ಮಾಡಿದವು. ಆಕಾಶದಲ್ಲಿ ಎರಡು ಸುತ್ತು  ಬಂದ ಅಟ್ಲಾಂಟಿಸ್ ನಿಗದಿತ ಸಮಯಕ್ಕಿಂತ ಒಂದು ನಿಮಿಷ ಮೊದಲೇ ತಾಣದಲ್ಲಿ ಬಂದು ನಿಂತಿತು. ಎಲ್ಲ ಗಗನಯಾತ್ರಿಗಳು ಸುರಕ್ಷಿತವಾಗಿರುವ ಸಂದೇಶ ನೌಕೆಯಿಂದ ಬಂತು. ಇದಕ್ಕೂ ಮುನ್ನ ಫ್ಲಾರಿಡಾದಲ್ಲಿಯೇ ಗಗನ ನೌಕೆಯನ್ನು ಇಳಿಸುವ ಪ್ರಯತ್ನವನ್ನು ನಾಸಾ ಕೈಬಿಟ್ಟಿತ್ತು. ಬದಲಿಗೆ ಕ್ಯಾಲಿಫೋರ್ನಿಯಾದಲ್ಲಿ ಈದಿನ ಬೆಳಗಿನ 1.20ಕ್ಕೆ ಇಳಿಸಲು ಅನುಮತಿ ನೀಡಿತು. ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದ ಸುತ್ತಲೂ ಕಾರ್ಮೋಡ ಕವಿದದ್ದರಿಂದ ಹಾಗೂ ಗುಡುಗಿನಿಂದ ಕೂಡಿದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದುದರಿಂದ ಹಿಂದಿನ ದಿನ ಮಧ್ಯರಾತ್ರಿ 2 ಬಾರಿ ಭೂಸ್ಪರ್ಶ ಮುಂದೂಡಲಾಗಿತ್ತು. ಆ ನಂತರ ಕಮಾಂಡರ್ ಫ್ರೆಡರಿಕ್ ಸ್ಟ್ರಕೋವ್ ಎಡ್ವರ್ಡ್ ವಾಯುನೆಲೆಯಲ್ಲಿ ಶಟ್ಲ್ ನೌಕೆ ಇಳಿಯುವಂತೆಯೂ ನೌಕೆಯ ಕಕ್ಷೆಯನ್ನು ಸಿದ್ಧಪಡಿಸಿದರು. ಭೂಮಿಯ ವಾತಾವರಣ ಪ್ರವೇಶಿಸುವಾಗಿನ ಅಸಾಧ್ಯ ಉಷ್ಣಾಂಶ ತಡೆದುಕೊಳ್ಳಲು ಸಾಧ್ಯವಾಗುವಂತೆ ನೌಕೆಯ ಹೊರಮೈಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಳವಡಿಸಿರುವ ಸೆರಾಮಿಕ್ ಹೆಂಚುಗಳು ಹಾಳಾಗುವ ಸಾಧ್ಯತೆಯಿರುವುದರಿಂದ ಮಳೆಯಲ್ಲಿ ನೌಕೆ ಭೂಸ್ಪರ್ಶ ಮಾಡುವಂತಿರಲಿಲ್ಲ.  ಆದರೂ ಹಿಂದಿನ ದಿನ ಮಧ್ಯರಾತ್ರಿ ಫ್ಲಾರಿಡಾದಲ್ಲೇ ನೌಕೆ ಇಳಿಸಲು ನಾಸಾ ಎರಡು ಬಾರಿ ಯತ್ನಿಸಿತ್ತು. ಈ ಪೈಕಿ ರಾತ್ರಿ 11.48ರ ಮೊದಲ ಯತ್ನ ಕೈಬಿಡಲಾಯಿತು. ಹವಾಮಾನ ಕೈಕೊಟ್ಟು ಈ ಪ್ರಯತ್ನಗಳು ವಿಫಲವಾದ ಬಳಿಕ ಕ್ಯಾಲಿಫೋರ್ನಿಯಾದ ಎಡ್ವರ್ಡ್ ವಾಯುನೆಲೆಯಲ್ಲಿ ಅಟ್ಲಾಂಟಿಸ್ ಇಳಿಸಲು ನಾಸಾ ಅನುಮತಿ ನೀಡಿತ್ತು. ಇಷ್ಟಾದ ಬಳಿಕ ಅಟ್ಲಾಂಟಿಸ್ ಕಮಾಂಡರ್ ಫ್ರೆಡರಿಕ್ ಸ್ಟ್ರಕೋವ್ ಮತ್ತು ಪೈಲಟ್ ಲೀ ಅವರು ಕಕ್ಷೆಯಿಂದ ಗಗನ ನೌಕೆಯನ್ನು ಭೂಮಿಯತ್ತ ತಿರುಗಿಸುವ ಸಾಧನ ಚಾಲು ಮಾಡಿದರು. ಅಟ್ಲಾಂಟಿಸ್ ಭೂಸ್ಪರ್ಶದ ಸುದ್ದಿ ಕೇಳಲು ವಿಶ್ವದಾದ್ಯಂತ ಕಾತರರಾಗಿದ್ದ ಜನ, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ನೌಕೆಯಲ್ಲಿನ 7 ಗಗನಯಾತ್ರಿಗಳ ಸುರಕ್ಷತೆಗಾಗಿ ಪ್ರಾರ್ಥಿಸಿದ್ದರು. ಈ ಗಗನಯಾತ್ರೆ ಕಾಲದಲ್ಲಿ ಸುನೀತಾ ವಿಲಿಯಮ್ಸ್ ಅವರು 195 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ವಿಶ್ವದಾಖಲೆ ಸ್ಥಾಪಿಸಿದರು. 1996ರಲ್ಲಿ ರಷ್ಯಾ ಗಗನಯಾತ್ರಿ ಶಾನನ್ ಲುಸಿಡ್ 188 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ಸುನೀತಾ ಅವರ ಮೊದಲ ಗಗನಯಾತ್ರೆಯಾಗಿದ್ದರೂ ನಾಲ್ಕು ಬಾರಿ ಬಾಹ್ಯಾಕಾಶದಲ್ಲಿ ನಡಿಗೆ ನಡೆಸಿದ ಅನುಭವಿ ಎಂಬ ಹೆಸರನ್ನೂ ಗಳಿಸಿಕೊಂಡರು.

2007: ರಾಷ್ಟ್ರಪತಿ ಸ್ಥಾನಕ್ಕೆ ಪುನಃ ಸ್ಪರ್ಧಿಸದಿರಲು ರಾಷ್ಟ್ರಪತಿ ಅಬ್ದುಲ್ ಕಲಾಂ ಕೊನೆಗೂ ನಿರ್ಧರಿಸಿದರು. ಇದರಿಂದಾಗಿ ಈ ಕುರಿತ ಅನುಮಾನಗಳಿಗೆಲ್ಲ ತೆರೆ ಬಿದ್ದಂತಾಯಿತು. ಈ ಬೆಳವಣಿಗೆಯಿಂದಾಗಿ ಎನ್ ಡಿಎ ಮತ್ತು ಯುಎನ್ ಪಿಎ (ತೃತೀಯ ರಂಗ) ತಾತ್ಕಾಲಿಕ ಹೊಂದಾಣಿಕೆಯೂ ಕೊನೆಗೊಂಡಿತು. ಗೆಲುವು ನಿಶ್ಚಿತವಾದರೆ ಮಾತ್ರ ಸ್ಪರ್ಧಿಸುವುದಾಗಿ ಸೂಚನೆ ನೀಡಿದ್ದ ಕಲಾಂ, ತಾವು ಎರಡನೇ ಬಾರಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಈದಿನ ಪ್ರಕಟಿಸಿದರು. ಈ ಹಿನ್ನೆಲೆಯಲ್ಲಿ ಎನ್ ಡಿಎ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್  ಅವರನ್ನು ಬೆಂಬಲಿಸುವುದಾಗಿ ತಿಳಿಸಿತು.

2007: ಎರಡು ವರ್ಷಗಳ ಹಿಂದೆ ನಡೆದ ತನ್ನ ಪತಿಯ ಹತ್ಯೆಯಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ ಪ್ರತಿಭಾ ಪಾಟೀಲ್ ಸಹೋದರನ ಕೈವಾಡ ಇರುವುದಾಗಿ ಮಹಾರಾಷ್ಟ್ರದ ಜಲಗಾಂವ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ದಿವಂಗತ ವಿ.ಜಿ. ಪಾಟೀಲ್ ಅವರ ವಿಧವಾ ಪತ್ನಿ ಪ್ರೊ. ರಜನಿ ಪಾಟೀಲ್ ಆರೋಪಿಸಿದರು. ಆದರೆ ಕಾಂಗ್ರೆಸ್ ಪಕ್ಷ ಈ ಆರೋಪವನ್ನು ಖಡಾಖಂಡಿತವಾಗಿ ನಿರಾಕರಿಸಿತು. ಶಿರೋಮಣಿ ಅಕಾಲಿದಳ ಮುಖಂಡ ಸುಖ್ ದೇವ್ ಸಿಂಗ್ ಧಿಂಡ್ಸಾ ಅವರ ನಿವಾಸದಲ್ಲಿ ಬಿಜೆಪಿ ನಾಯಕರಾದ ಎ.ಬಿ. ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರಿಗೆ ಆಪ್ತರಾದ ಸುಧೀಂದ್ರ ಕುಲಕರ್ಣಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಲಗಾಂವ್ ಕಾಲೇಜಿನ ಮರಾಠಿ ಪ್ರೊಫೆಸರ್ ರಜನಿ ಮಾತನಾಡಿದರು. ತಮ್ಮ ಪತಿಯ ಹತ್ಯೆಗೆ ಪ್ರತಿಭಾ ಸಹೋದರ ಜಿ.ಎನ್. ಪಾಟೀಲ್ ಮತ್ತು ಇನ್ನೊಬ್ಬ ಕಾಂಗ್ರೆಸ್ ಮುಖಂಡ ಸಂಚು ರೂಪಿಸಿದರು. ಅವರನ್ನು ಪ್ರತಿಭಾ ರಕ್ಷಿಸುತ್ತಿದ್ದಾರೆ. 2005ರ ಜಲಗಾಂವ್ ಜಿಲ್ಲಾ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲನುಭವಿಸಿದ ಪ್ರತಿಭಾ ಅವರ ಸೋದರನ ಬೆಂಬಲಿಗರು ತನ್ನ ಪತಿಯನ್ನು ಹತ್ಯೆ ಮಾಡಿದ್ದಾರೆ. ಈ ಬಗೆಗಿನ ತನಿಖೆಯ ಮೇಲೆ ರಾಜಸ್ಥಾನದ ಮಾಜಿ ರಾಜ್ಯಪಾಲರೂ ಆದ ಪ್ರತಿಭಾ ಪ್ರಭಾವ ಬೀರಿ, ತಮ್ಮ ಸೋದರನಿಗೆ ರಕ್ಷಣೆ ನೀಡಿದ್ದಾರೆ. ಆದ್ದರಿಂದ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಸಲ್ಲಿಸಲಾದ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಅವರು ಬಿಡುಗಡೆ ಮಾಡಿದರು.

 2007: ಕರ್ನಾಟಕದ ವಿವಾದಾತ್ಮಕ ನಂದಗುಡಿ ವಿಶೇಷ ಆರ್ಥಿಕ ವಲಯ (ಎಸ್ ಇಜೆಡ್) ಸ್ಥಾಪನೆಗೆ ಅನುಮೋದನೆ ನೀಡುವುದನ್ನು ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟ ಮಂಡಳಿ ಮುಂದೂಡಿತು. ನವದೆಹಲಿಯಲ್ಲಿ ಸಭೆ ಸೇರಿದ್ದ ವಿಶೇಷ ಆರ್ಥಿಕ ವಲಯ ಮಂಜೂರಾತಿ ಮಂಡಳಿ (ಬಿಒಎ) ಈ ನಿರ್ಧಾರ ಕೈಗೊಂಡಿತು. ನಂದಗುಡಿ ಎಸ್ ಇಜೆಡ್ ಯೋಜನೆ ಮಂಜೂರಾತಿ ಮಂಡಳಿಯ ಪರಿಶೀಲನೆಗೆ ಬಂದರೂ ಈ ಕುರಿತಾದ ತೀರ್ಮಾನವನ್ನು ಮುಂದೂಡಲಾಯಿತು ಎಂದು ವಾಣಿಜ್ಯ ಇಲಾಖೆಯ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಪಟ್ಟ ನಿರ್ದೇಶಕ ಯೋಗೇಂದ್ರ ಗಾರ್ಗ್ ತಿಳಿಸಿದರು. ಒಟ್ಟು 9 ಪ್ರಸ್ತಾವಗಳಿಗೆ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ.

2007:  ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿ.(ಬಿಇಎಲ್) ಹಾಗೂ ಹಿಂದೂಸ್ತಾನ್ ಏರೊನಾಟಿಕ್ಸ್ ಲಿ. (ಎಚ್ ಎಎಲ್)ಗೆ ಪ್ರತಿಷ್ಠಿತ ನವರತ್ನ ಉದ್ದಿಮೆಗಳ ಸ್ಥಾನಮಾನ ನೀಡಲಾಯಿತು. ಈ ಎರಡೂ ಸಂಸ್ಥೆಗಳು ಹಾಗೂ ದೆಹಲಿ ಮೂಲದ ಪವರ್ ಫೈನಾನ್ಸ್ ಕಾರ್ಪೊರೇಷವನ್ ಗಳಿಗೆ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಸಂಬಂಧ ಅಧಿಕೃತ ಪತ್ರ ನೀಡಲಾಯಿತು. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಬೃಹತ್ ಕೈಗಾರಿಕಾ ಸಚಿವ ಸಂತೋಷ ಮೋಹನ್ ದೇವ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರೊಂದಿಗೆ ನವರತ್ನ ಸ್ಥಾನಮಾನ ಪಡೆದ ಕಂಪೆನಿಗಳ ಸಂಖ್ಯೆ 12ಕ್ಕೆ ಏರಿತು.

  2007: ವರ್ಜೀನಿಯಾದಲ್ಲಿ ನಡೆದ ಆಕರ್ಷಣೀಯ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಯುದ್ಧವಿಮಾನಗಳನ್ನು ಇಳಿಸಬಹುದಾದ ಬೃಹತ್ ನೌಕೆ `ಐಎನ್ಎಸ್ ಜಲಾಶ್ವ'ವನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಭಾರತೀಯ ನೌಕಾಪಡೆಯಲ್ಲಿ ಮೊದಲ ಬಾರಿ ಇಂತಹ ನೌಕೆ ಅಳವಡಿಸಲಾಗಿದ್ದು, ಅಮೆರಿಕದಿಂದ ಇದನ್ನು ಪಡೆಯಲಾಗಿದೆ. ಸೈನ್ಯ ತುಕಡಿಗಳು, ಟ್ಯಾಂಕರುಗಳು ಹಾಗೂ ಅಸ್ತ್ರಗಳನ್ನು ದೂರ ಪ್ರದೇಶಗಳಿಗೆ ಸಾಗಿಸುವಲ್ಲಿ ನೌಕಾಪಡೆಯ ಸಾಮರ್ಥ್ಯವನ್ನು ಇದು ಹೆಚ್ಚಿಸಿತು. ಈ ಮುನ್ನ ಅಮೆರಿಕ ನೌಕಾಪಡೆಯಲ್ಲಿ `ಟ್ರೆಂಟನ್' ಹೆಸರಿನಿಂದ ಪ್ರಸಿದ್ಧವಾದ ನೌಕೆ 2006ರಲ್ಲಿ ಲೆಬನಾನಿನಿಂದ ಅಮೆರಿಕ ಪ್ರಜೆಗಳನ್ನು ತಾಯ್ನಾಡಿಗೆ ಸಾಗಿಸಿತ್ತು. ವರ್ಷದ ಹಿಂದೆ ಜುಲೈ ತಿಂಗಳಲ್ಲಿ ಭಾರತ ಸರ್ಕಾರ ಟ್ರೆಂಟನ್' ಖರೀದಿಸಲು ನಿರ್ಧರಿಸಿತ್ತು. ಆನಂತರ ನೌಕಾಪಡೆಯ 330 ಸಿಬ್ಬಂದಿಯನ್ನು ತರಬೇತಿಗಾಗಿ ಅಮೆರಿಕಕ್ಕೆ ಕಳುಹಿಸಲಾಯಿತು. ಜನವರಿ 17ರಂದು ಭಾರತೀಯ ಸೇನೆಗೆ ಯುದ್ಧ ನೌಕೆ ಹಸ್ತಾಂತರಿಸಲಾಯಿತು. ಭಾರತ- ಅಮೆರಿಕ ಬಾಂಧವ್ಯದಲ್ಲೂ ಇದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಯಿತು.

2007:  ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ತಲೆ ತಂದುಕೊಟ್ಟರೆ 10 ದಶಲಕ್ಷ ರೂಪಾಯಿ ನೀಡುವುದಾಗಿ ಪಾಕಿಸ್ತಾನದ ವರ್ತಕರ ಸಂಘಟನೆ ಪ್ರಕಟಿಸಿತು. ಬ್ರಿಟನ್ ಸರ್ಕಾರ ರಶ್ದಿಗೆ ನೈಟ್ ಹುಡ್ ಪ್ರಶಸ್ತಿ ನೀಡಿರುವುದರಿಂದ ಮುಸ್ಲಿಂ ಜಗತ್ತು ಸಿಟ್ಟಿಗೆದ್ದಿತು. ಇದೇ ವೇಳೆಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಅರ್ಬಾಬ್ ಗುಲಾಂ ರಹೀಮ್ ಅವರು ತಮ್ಮ ಹಿರಿಯರಿಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಬ್ರಿಟನ್ ಸರ್ಕಾರ ರಶ್ದಿಗೆ ನೈಟ್ಹುಡ್ ಪ್ರಶಸ್ತಿ ನೀಡಿರುವುದನ್ನು ವಿರೋಧಿಸುವ ಸಲುವಾಗಿ ತಮ್ಮ ತಾತ ಮತ್ತು ಚಿಕ್ಕಪ್ಪನಿಗೆ 1937ರಲ್ಲಿ ನೀಡಲಾಗಿದ್ದ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಅವರು ಪ್ರಕಟಿಸಿದರು.

2006: ಒಂಬತ್ತು ವರ್ಷಗಳ ಹಿಂದೆ ನಡೆದ ಅರಣ್ಯ ಸಿಬ್ಬಂದಿ ಅಪಹರಣ ಆರೋಪ ಎದುರಿಸುತ್ತಿದ್ದ ನರಹಂತಕ ವೀರಪ್ಪನ್ ನ ಐವರು ಸಹಚರರಿಗೆ ಚಾಮರಾಜನಗರದ ಶೀಘ್ರಗತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಸತ್ಯಮಂಗಲ ತಾಲ್ಲೂಕಿನ ಕಲ್ಮಂಡಿಪುರ ತುಪಾಕಿ ಸಿದ್ದ, ಆತನ ಪತ್ನಿ ಕುಂಬಿ ಉರುಫ್ ಚಿಕ್ಕಮಾದಿ ಹಾಗೂ ಹಂದಿಯೂರಿನ ತಂಗರಾಜು, ಅನ್ಬುರಾಜು ಮತ್ತು ಅಪ್ಪುಸ್ವಾಮಿ ಅವರಿಗೆ ನ್ಯಾಯಾಧೀಶ ವಿ.ಜಿ. ಬೋಪಯ್ಯ ಜೀವಾವಧಿ ಶಿಕ್ಷೆ ವಿಧಿಸಿದರು.

2006: ಟಾಟಾ ಸಮೂಹ ಕಂಪೆನಿಗಳ ಅಧ್ಯಕ್ಷ ರತನ್ ಟಾಟಾ ಮತ್ತು ಹನಿವೆಲ್ ಸಂಸ್ಥೆಯ ಅಂತಾರಾಷ್ಟ್ರೀಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡೇವಿಡ್ ಎಂ. ಕಾಟೆ ಅವರಿಗೆ ವಾಷಿಂಗ್ಟನ್ನಿನಲ್ಲಿ ನಡೆದ ಅಮೆರಿಕ-ಭಾರತ ವ್ಯಾಪಾರ ಮಂಡಳಿ ಸಭೆಯಲ್ಲಿ `ನಾಯಕತ್ವ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಭಾರತ-ಅಮೆರಿಕ ವಾಣಿಜ್ಯ ಸಂಬಂಧ ಬಲಪಡಿಸಲು ಅಮೆರಿಕ ಹನಿವೆಲ್ ಕಂಪನಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಮತ್ತು ಬಹುರಾಷ್ಟ್ರೀಯ ವ್ಯಾಪಾರ ಸಂಘಟನೆಗೆ ಟಾಟಾ ಸಮೂಹ ಕಂಪನಿಗಳು ಸಲ್ಲಿಸಿರುವ ಸೇವೆಯನ್ನು ಗೌರವಿಸಿ ಈ ಪ್ರಶಸ್ತಿ ನೀಡಲಾಯಿತು.

1993: ಗ್ರಾಹಕ ಸಂರಕ್ಷಣಾ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲಾಯಿತು.

1982: ಮುಂಬೈಯ ಸಹಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈದಿನ ಏರ್ ಇಂಡಿಯಾ ಬೋಯಿಂಗ್ ವಿಮಾನವೊಂದು ಅಪಘಾತಕ್ಕೆ ಈಡಾಗಿ ಕನಿಷ್ಠ 19 ಜನ ಮೃತರಾದರು.

1981: ದೀರ್ಘ ವೃತ್ತಾಕಾರದಲ್ಲಿ ಭೂಮಿಯನ್ನು ಸುತ್ತುತ್ತಿದ್ದ ಆಪಲ್ ಉಪಗ್ರಹಕ್ಕೆ ಚಾಲನೆ ನೀಡುವ ಮೂಲಕ ಈದಿನ ಮುಂಜಾನೆ 5.30ಕ್ಕೆ ಅದನ್ನು ಭೂ ಸ್ಥಿರ ಕಕ್ಷೆಗೆ ವರ್ಗಾಯಿಸುವಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ವಿಯಾದರು.

1959: ಖ್ಯಾತ ಪತ್ರಿಕೋದ್ಯಮಿ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್ ನಿಧನ.

1953: ಸಾಹಿತಿ ಕೆ.ಆರ್. ಸಂಧ್ಯಾರೆಡ್ಡಿ ಜನನ.

1950: ಚುಕ್ಕಿ ಚಿತ್ರಕಲೆ ಮತ್ತು ಸಾಹಿತ್ಯ ಎರಡೂ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಮೋಹನ್ ವೆರ್ಣೇಕರ್ ಅವರು ವಾಸುದೇವ ಶೇಟ್- ತುಳಸೀಬಾಯಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸ ಪಟ್ಟಣದಲ್ಲಿ ಜನಿಸಿದರು.

1944: ಬ್ರಿಟಿಷರ 14ನೇ ಸೇನೆಯಿಂದ ಅಸ್ಸಾಂ ಮತ್ತು ಇಂಫಾಲ ಬಿಡುಗಡೆ ಪಡೆದವು.

1941: ಜರ್ಮನಿಯು `ಆಪರೇಷನ್ ಬಾರ್ಬರೋಸಾ' ಕಾರ್ಯಾಚರಣೆಯ ಅಂಗವಾಗಿ ರಷ್ಯದ ಮೇಲೆ ಆಕ್ರಮಣ ಮಾಡಿತು.

1941ರ ಡಿಸೆಂಬರ್ ವೇಳೆಗೆ ಜರ್ಮನ್ನರು ಮಾಸ್ಕೋದ ಸಮೀಪ ಬಂದಿದ್ದರು. ಆದರೆ ನೂರು ವರ್ಷಗಳಿಗೂ ಹಿಂದೆ ನೆಪೋಲಿಯನ್ ಪಡೆಗೆ ಆದಂತೆ ತೀವ್ರ ಚಳಿಯನ್ನು ಎದುರಿಸಲಾಗದೆ ಹಿಮ್ಮೆಟ್ಟಬೇಕಾಯಿತು. ಇದೇ ಸಂದರ್ಭವನ್ನು ಬಳಸಿಕೊಂಡ ರಷ್ಯನ್ನರು ಪ್ರತಿದಾಳಿ ನಡೆಸಿ 1942ರ ವೇಳೆಗೆ ಜರ್ಮನ್ನರನ್ನು ಪಶ್ಚಿಮದತ್ತ ಅಟ್ಟಿದರು.

1940: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಈದಿನ ಫಾರ್ವರ್ಡ್ ಬ್ಲಾಕ್ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಮುಖಂಡರ ಜೊತೆಗಿನ ಭಿನ್ನಾಭಿಪ್ರಾಯ ಅವರ ಈ ತೀರ್ಮಾನಕ್ಕೆ ಕಾರಣವಾಗಿತ್ತು. ಫಾರ್ವರ್ಡ್ ಬ್ಲಾಕಿನ ರೂಪುರೇಷೆಯನ್ನು ಅವರು 1939ರಲ್ಲೇ ಸಿದ್ಧಪಡಿಸಿದ್ದರು. ಸಂಘಟನೆಯ ಮೊದಲ ಸಮ್ಮೇಳನ ಮುಂಬೈಯಲ್ಲಿ ನಡೆಯಿತು.

1936: ತತ್ವಶಾಸ್ತ್ರ ವಿದ್ಯಾಂಸ, ಸಂಗೀತಾಸಕ್ತ, ಸಾಹಿತಿ ಡಾ. ಗೋವಿಂದರಾವ್ ಅ. ಜಾಲಿಹಾಳ ಅವರು ಅನಂತರಾವ್ ಜಾಲಿಹಾಳ- ರಾಧಾಬಾಯಿ ದಂಪತಿಯ ಪುತ್ರನಾಗಿ ಗದಗದಲ್ಲಿ ಜನಿಸಿದರು.

1898: ಹತ್ತೊಂಬತ್ತನೇ ಶತಮಾನದ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸಿತು.

1897: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ದಾಮೋದರ ಹರಿ ಚಾಪೇಕರ್ ಅವರು ಪೂನಾದಲ್ಲಿ (ಈಗಿನ ಪುಣೆ) ಬ್ರಿಟಿಷ್ ಅಧಿಕಾರಿಗಳಾದ ರ್ಯಾಂಡ್ ಮತ್ತು ಐರೆಸ್ಟ್ ಅವರನ್ನು ಗುಂಡಿಟ್ಟು ಕೊಂದರು. ಚಾಪೇಕರ್ ಮತ್ತು ಅವರ ಸಹೋದರ ಬಾಲಕೃಷ್ಣ ಅವರನ್ನು ಈ ಕೃತ್ಯಕ್ಕಾಗಿ ಯರವಾಡ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಇನ್ನೊಬ್ಬ ಸಹೋದರ ವಾಸುದೇವ್ ಅವರನ್ನು ಅವರ ಬಗ್ಗೆ ಮಾಹಿತಿ ನೀಡಿದ ದ್ರೋಹಿಯನ್ನು ಕೊಂದ ಕಾರಣಕ್ಕಾಗಿ ಗಲ್ಲಿಗೇರಿಸಲಾಯಿತು.

1805: ಜೀಸೆಪ್ ಮ್ಯಾಝಿನಿ (1805-72) ಜನ್ಮದಿನ. ಇಟಲಿಯ ಕ್ರಾಂತಿಕಾರಿಯಾದ ಈತ ಇಟಲಿಯ ಏಕೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

1757: ಜಾರ್ಜ್ ವ್ಯಾಂಕೋವರ್ (1757-98) ಜನ್ಮದಿನ. ಇಂಗ್ಲಿಷ್ ನಾವಿಕನಾದ ಈತನ ಹೆಸರನ್ನೇ ಮುಂದೆ ವ್ಯಾಂಕೋವರ್ ದ್ವೀಪಕ್ಕೆ ಇಡಲಾಯಿತು.

1633: ಭೂಮಿಯ ಚಲನೆಗೆ ಸಂಬಂಧಿಸಿದಂತೆ ಕೊಪರ್ನಿಕನ್ ಸಿದ್ಧಾಂತದಲ್ಲಿದ್ದ ತನ್ನ ನಂಬಿಕೆಗಳನ್ನು ಬದಲಾಯಿಸಿಕೊಂಡು ರೋಮನ್ ಕ್ಯಾಥೋಲಿಕ್ ವಿಚಾರಣಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಳ್ಳುವಂತೆ ಗೆಲಿಲಿಯೋನನ್ನು ಬಲಾತ್ಕಾರಪಡಿಸಲಾಯಿತು. ನಂತರ ಆತನಿಗೆ ಜೀವಾವಧಿ ಶಿಕ್ಷೆ ನೀಡಿ ಗೃಹಬಂಧನದಲ್ಲಿ ಇರಿಸಲಾಯಿತು. 1992ರಲ್ಲಿ ಆತನ ಸಾವಿನ 350 ವರ್ಷಗಳ ಬಳಿಕ ಈ ದಿನ ಗೆಲಿಲಿಯೋ ಜೊತೆಗಿನ ತನ್ನ ವರ್ತನೆಯಲ್ಲಿ ತಪ್ಪಾಗಿತ್ತು ಎಂದು ರೋಮನ್ ಕ್ಯಾಥೋಲಿಕ್ ಚರ್ಚ್ ಅಧಿಕೃತವಾಗಿ ಒಪ್ಪಿಕೊಂಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, July 6, 2010

ಇಂದಿನ ಇತಿಹಾಸ History Today ಜೂನ್ 21

ಇಂದಿನ ಇತಿಹಾಸ

ಜೂನ್ 21

ಭಾರತದ ಬ್ಯಾಡ್ಮಿಂಟನ್ ರಂಗದಲ್ಲಿ ಈದಿನ ಸ್ಮರಣೀಯ ದಿನ. ಇಂಡೊನೇಷ್ಯಾ ಸೂಪರ್ ಸೀರೀಸ್ ಟೂರ್ನಿಯನ್ನು ಗೆದ್ದುಕೊಳ್ಳುವ ಮೂಲಕ ಸೈನಾ ನೆಹ್ವಾಲ್ ಹೊಸ ಇತಿಹಾಸ ನಿರ್ಮಿಸಿ, ಸೂಪರ್ ಸೀರೀಸ್ ಟೂರ್ನಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2009: ಭಾರತದ ಬ್ಯಾಡ್ಮಿಂಟನ್ ರಂಗದಲ್ಲಿ ಈದಿನ ಸ್ಮರಣೀಯ ದಿನ. ಇಂಡೊನೇಷ್ಯಾ ಸೂಪರ್ ಸೀರೀಸ್ ಟೂರ್ನಿಯನ್ನು ಗೆದ್ದುಕೊಳ್ಳುವ ಮೂಲಕ ಸೈನಾ ನೆಹ್ವಾಲ್ ಹೊಸ ಇತಿಹಾಸ ನಿರ್ಮಿಸಿ, ಸೂಪರ್ ಸೀರೀಸ್ ಟೂರ್ನಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಸ್ತೋರಾ ಜಿಬಿಕೆ ಸೆನಾಯನ್ ಕ್ರೀಡಾಂಗಣದ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ನಡೆದ ಫೈನಲ್‌ನಲ್ಲಿ ಚೀನಾದ ಲಿನ್ ವಾಂಗ್ ಅವರನ್ನು ಮಣಿಸಿ ಸೈನಾ 'ಇಂಡೊನೇಷ್ಯಾ ಸೂಪರ್ ಸೀರೀಸ್' ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ನ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯನ್ನು ತಮ್ಮ ಬಗಲಿಗೆ ಏರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಸೈನಾ 12-21, 21-18, 21-9 ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಲಿನ್ ವಾಂಗ್ ಅವರನ್ನು ಮಣಿಸಿದರು. ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲ ಗೋಪಿಚಂದ್ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆದ್ದುಕೊಂಡದ್ದು ಒಟ್ಟಾರೆಯಾಗಿ ಭಾರತದ ಬ್ಯಾಡ್ಮಿಂಟನ್ ಕ್ಷೇತ್ರದ ಶ್ರೇಷ್ಠ ಪ್ರದರ್ಶನ. ಸೈನಾ ಸಾಧನೆ ಆ ಬಳಿಕದ ಸ್ಥಾನದಲ್ಲಿ ನಿಲ್ಲುವಂತಹುದು.
2009: ಲಂಡನ್ನಿನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಾಕಿಸ್ಥಾನಕ್ಕೆ ಈದಿನ ಬಹುದಿನಗಳ ಕನಸೊಂದು ನನಸಾಯಿತು. ಈ ಬಾರಿಯ ಐಸಿಸಿ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಪಾಕಿಸ್ಥಾನದ ಮಡಿಲು ಸೇರಿತು. ಫೈನಲ್ ಮಹಾಸಮರದಲ್ಲಿ ಶ್ರೀಲಂಕಾ ತಂಡವನ್ನು ಎಂಟು ವಿಕೆಟುಗಳಿಂದ ಬಗ್ಗುಬಡಿದ ಪಾಕ್ ತಂಡದವರು ಚುಟುಕು ಕ್ರಿಕೆಟ್ ಚಾಂಪಿಯನ್ ಆದರು.

2009: 19 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ 48 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿದ್ದ ರಾಜಸ್ಥಾನದ ಮೊರಾಡಿ ಗ್ರಾಮದ ಬಾಲಕಿ ನಾಲ್ಕು ಅಂಜುವನ್ನು ಹೊರ ತೆಗೆದು, ಜೈಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಕೊಳವೆ ಬಾವಿಯ ಪಕ್ಕದಲ್ಲಿ ಸುರಂಗ ಕೊರೆದ ರಕ್ಷಣಾ ತಂಡ ಬಾಲಕಿಯನ್ನು ಹೊರತಗೆಯಿತು. ಆಟವಾಡುತ್ತಿದ್ದ ಅಂಜು ಕಾಲುಜಾರಿ ಕೊಳವೆಬಾವಿಯೊಳಗೆ ಬಿದ್ದಿದ್ದಳು.

 2009: ವಾಹನ ಅಪಘಾತ ವಿಮೆ ಪರಿಹಾರ ಮೊತ್ತ ಪಾವತಿಗೆ ಸಂಬಂಧಿಸಿದಂತೆ ವಿಮಾ ಸಮೀಕ್ಷರು ನೀಡುವ ನಷ್ಟದ  ಅಂದಾಜು ವರದಿ ಅನಿವಾರ್ಯ ಅಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಈ ಸಂಬಂಧ ಕ್ಷುಲ್ಲಕ ದಾವೆಗೆ ಹಣ ಖರ್ಚು ಮಾಡಿದ್ದಕ್ಕಾಗಿ ಸುಪ್ರೀಂಕೋರ್ಟ್ 'ನ್ಯೂ ಇಂಡಿಯಾ ಅಶ್ಯೂರೆನ್ಸ್' ಕಂಪೆನಿಗೆ ಛೀಮಾರಿ ಹಾಕಿತು. ಪಾಲಿಸಿದಾರನಿಗೆ ವಿಮಾ ಪರಿಹಾರ ಮೊತ್ತ  ನೀಡುವುದಕ್ಕೆ ಸಮೀಕ್ಷಕರ ವರದಿ ಆಧಾರವಾಗಬಹುದು. ಆದರೆ ಖಂಡಿತವಾಗಿಯೂ ಇದು ಅನಿವಾರ್ಯವೂ ಅಲ್ಲ;  ಪವಿತ್ರವೂ ಅಲ್ಲ ಎಂದು ನ್ಯಾಯಮೂರ್ತಿ ಡಿ.ಕೆ.ಜೈನ್ ಹಾಗೂ ಆರ್.ಎಂ.ಲೋಧ ಅವರನ್ನು ಒಳಗೊಂಡ ಪೀಠ ತೀರ್ಪಿನಲ್ಲಿ ಹೇಳಿತು. ಬಹುತೇಕ ಪ್ರಕರಣಗಳಲ್ಲಿ ವಿಮಾ ಸಮೀಕ್ಷಕರು ನೀಡುವ ನಷ್ಟದ ಅಂದಾಜು ವರದಿ ಆಧಾರದಲ್ಲಿಯೇ ಪಾಲಿಸಿದಾರನಿಗೆ ಪರಿಹಾರ ನಿಗದಿ ಮಾಡಲಾಗುತ್ತದೆ. ಹಾಗಾಗಿ  ಪಾಲಿಸಿದಾರನಿಗೆ ಸಿಗಬೇಕಾಗಿರುವುದಕ್ಕಿಂತ ಕಡಿಮೆ ಹಣ ಸಿಗುವ ಸಾಧ್ಯತೆಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮಹತ್ವ ಪಡೆಯಿತು. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ವಿವಾದಗಳ ರಾಷ್ಟ್ರೀಯ ಆಯೋಗ (ಎನ್‌ಸಿಡಿಆರ್‌ಸಿ) ನೀಡಿದ ನಿರ್ದೇಶನವನ್ನು ಪ್ರಶ್ನಿಸಿ 'ನ್ಯೂ ಇಂಡಿಯಾ ಅಶ್ಯೂರೆನ್ಸ್' ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುತ್ತಾ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು. ತೆಹ್ರಿ ಜಿಲ್ಲೆಯಲ್ಲಿ (ಮೊದಲು ಉತ್ತರ ಪ್ರದೇಶ ವ್ಯಾಪ್ತಿಯಲ್ಲಿತ್ತು) ನಡೆದ ಅಪಘಾತದಲ್ಲಿ ಜಖಂಗೊಂಡ ಲಾರಿಗೆ 1.58 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಎನ್‌ಸಿಡಿಆರ್‌ಸಿ, 'ನ್ಯೂ ಇಂಡಿಯಾ ಅಶ್ಯೂರೆನ್ಸ್‌ಗೆ' ನಿರ್ದೇಶನ ನೀಡಿತ್ತು. ಲಾರಿ ಮಾಲಿಕ ಪ್ರದೀಪ್ ಕುಮಾರ್ ಪರವಾಗಿ ಜಿಲ್ಲಾ ಹಾಗೂ ರಾಜ್ಯ ಗ್ರಾಹಕ ಆಯೋಗಗಳು ನೀಡಿದ ತೀರ್ಪನ್ನು ಎತ್ತಿಹಿಡಿದ ಎನ್‌ಸಿಡಿಆರ್‌ಸಿ, ಈ ನಿರ್ದೇಶನ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಬಾರಿ ಸಮೀಕ್ಷೆ ನಡೆಸಿದ ಅಧಿಕಾರಿಯೊಬ್ಬರು, ಪ್ರದೀಪ್ ಕುಮಾರ್‌ಗೆ 63,771 ರೂಪಾಯಿ ಮಾತ್ರ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ. ಹಾಗಾಗಿ  ಗ್ರಾಹಕರ ಆಯೋಗವು ಅವರಿಗೆ 1.58 ಲಕ್ಷ ರೂಪಾಯಿ ಪರಿಹಾರ ಮೊತ್ತ ನೀಡಬೇಕೆಂದು ನಿರ್ದೇಶನ ನೀಡುವಂತಿಲ್ಲ ಎಂದು ಅಶ್ಯೂರೆನ್ಸ್ ಕಂಪೆನಿ ಕೋರ್ಟಿನಲ್ಲಿ ಸಮರ್ಥಿಸಿಕೊಂಡಿತ್ತು. ಇದಕ್ಕೆ ಮೊದಲು ಮನೋಜ್ ಕುಮಾರ್ ಅಗರ್‌ವಾಲ್ ಹಾಗೂ ವಿವೇಕ್ ಅರೋರಾ ತಯಾರಿಸಿದ್ದ ಸಮೀಕ್ಷಾ ಅಂದಾಜು ವರದಿಯಲ್ಲಿ ಪ್ರದೀಪ್ ಕುಮಾರ್‌ಗೆ ಸುಮಾರು 1.66 ಲಕ್ಷ ರೂಪಾಯಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿತ್ತು. ಮೊದಲು ನಡೆಸಿದ ಎರಡು ಸಮೀಕ್ಷೆಗಳಲ್ಲಿ ಸತ್ಯಾಂಶವಿದೆ. ಆದರೆ ವಿಮಾ ಕಂಪೆನಿಯು ಇದನ್ನು ಕಡೆಗಣಿಸಿ ಮೂರನೇ ವ್ಯಕ್ತಿಯಿಂದ ಸಮೀಕ್ಷೆ ನಡೆಸಿದೆ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ವಿಮಾ ಕಂಪೆನಿಯ ವಾದವನ್ನು ತಳ್ಳಿಹಾಕಿತು.

2009: 'ಕ್ರಿಕೆಟ್ ಕಾಶಿ' ಲಂಡನ್ನಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸುವ ಮೂಲಕ ಇಂಗ್ಲೆಂಡ್ ವನಿತೆಯರು ಟ್ವೆಂಟಿ-20 ಕ್ರಿಕೆಟ್ ವಿಶ್ವ ಚಾಂಪಿಯನ್ ಪಟ್ಟ ಗಳಿಸಿದರು. ಫೈನಲ್ ಕಾದಾಟದಲ್ಲಿ ನ್ಯೂಜಿಲೆಂಡ್ ನೀಡಿದ 86 ರನ್‌ಗಳ ಗುರಿಯನ್ನು ಆತಿಥೇಯ ಇಂಗ್ಲೆಂಡ್ ತಂಡದವರು 17 ಓವರುಗಳಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ತಲುಪಿದರು. ಹಾಲಿ ಏಕದಿನ ಚಾಂಪಿಯನ್ ಕೂಡ ಆದ ಇಂಗ್ಲೆಂಡ್ ಇದರೊಂದಿಗೆ ಟ್ವೆಂಟಿ-20 ಕ್ರಿಕೆಟಿನಲ್ಲೂ ತನ್ನ ಪ್ರಭುತ್ವ ಸಾಧಿಸಿತು.

2009: ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಲ್ಲಿ 48 ಗಂಟೆಗಳ ಬಂದ್‌ಗೆ ನಕ್ಸಲರು ನೀಡಿದ ಕರೆಯ  ಮಧ್ಯೆಯೇ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿ, ನಕ್ಸಲರ ವಶದಲ್ಲಿರುವ ಗ್ರಾಮಗಳತ್ತ ಮುನ್ನುಗ್ಗಿ, ನಕ್ಸಲರ ಮುಷ್ಠಿಯಲ್ಲಿರುವ 17 ಗ್ರಾಮಗಳನ್ನು ಮುಕ್ತಗೊಸುವ ಗುರಿಯೊಂದಿಗೆ  ಕಾರ್ಯಾಚರಣೆ ಬಿರುಸುಗೊಳಿಸಿದವು.

2009: ವಿಶ್ವದ  ಅತ್ಯಂತ ಅರ್ಹ ಬ್ರಹ್ಮಚಾರಿ ಎಂಬ ಬಿರುದು ಗೆದ್ದ ರಾಬರ್ಟ್ ಪ್ಯಾಟಿನ್‌ಸನ್ ಬ್ರಾಡ್ ಪಿಟ್ ಮತ್ತು ಡೇನಿಯಲ್ ಕ್ರೆಗ್ ಅವರನ್ನು ಸೋಲಿಸಿ ವಿಶ್ವದ ಅತ್ಯಂತ ಸುಂದರ ವ್ಯಕ್ತಿ ಎಂಬ ಬಿರುದಿಗೆ ಭಾಜನರಾದರು. ಲಾಸ್ ಏಂಜಲೀಸ್ ನ ವ್ಯಾನಿಟಿ ಫೇರ್ ಪತ್ರಿಕೆ ನಡೆಸಿದ ಚುನಾವಣೆಯಲ್ಲಿ 23 ವರ್ಷದ ಈ ನಟನಿಗೆ ಶೇ 51 ರಷ್ಟು ಮತಬಂದಿತು. 1,37,946 ಮಂದಿ ಈತನ ಪರವಾಗಿ ಮತ ಚಲಾಯಿಸಿದರು. ಎರಡನೇ ಅತ್ಯಂತ ಸುಂದರ ವ್ಯಕ್ತಿ ಬಿರುದು ಅರ್ಜೆಂಟೀನಾದ ಪೊಲೋ ಆಟಗಾರ ನಚೋ ಫಿಗುರಾಸ್‌ಗೆ ದೊರಕಿತು. ಇವರಿಗೆ ಶೇ 15 ರಷ್ಟು ಮತ ಸಿಕ್ಕಿತು.

2009: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ರವಿವರ್ಮ ಕುಮಾರ್ ಅವರಿಗೆ ನ್ಯಾಯಮೂರ್ತಿ ಎಚ್. ನಾಗಮೋಹನ್‌ದಾಸ್ 'ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ' ಪ್ರದಾನ ಮಾಡಿದರು.  ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಘಟಕ ಪ್ರಥಮ ಬಾರಿ ನೀಡುತ್ತಿರುವ ಈ ಪ್ರಶಸ್ತಿಯ ಜೊತೆ ಫಲಕ ಹಾಗು 25 ಸಾವಿರ ರೂಪಾಯಿ ನೀಡಿ ಗೌರವಿಸಿತು. ರವಿವರ್ಮ ಕುಮಾರ್ ಪ್ರಶಸ್ತಿ ರೂಪದಲ್ಲಿ ಪಡೆದ ಹಣವನ್ನು ಪರಿಷತ್ತಿನ ಮರಳಿ ನೀಡಿದರು.

2008:  ಅಖಿಲ ಕರ್ನಾಟಕ ಎನ್.ಟಿ.ರಾಮರಾವ್ ಅಭಿಮಾನಿಗಳ ಸಂಘವು ಪ್ರಸ್ತುತ ಸಾಲಿನ `ಎನ್.ಟಿ.ಆರ್.ಪ್ರಶಸ್ತಿ'ಗೆ ತ್ರಿಭಾಷಾ ತಾರೆ ಕೃಷ್ಣಕುಮಾರಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ ಅವರನ್ನು ಆಯ್ಕೆ  ಮಾಡಿತು.

2007: ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ಆತನಿಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಸಹಕರಿಸಿದ ಬೆಂಗಳೂರು ನಗರದ ಇಬ್ಬರು ವೈದ್ಯರಿಗೆ ತಲಾ 7 ವರ್ಷಗಳ ಕಠಿಣ ಸಜೆ ವಿಧಿಸಿ, ನಗರ ವಿಶೇಷ ನ್ಯಾಯಾಲಯ ಆದೇಶಿಸಿತು. ತೆಲಗಿಗೆ 25 ಲಕ್ಷ ರೂಪಾಯಿ ದಂಡ ಹಾಗೂ ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಾದ ಡಾ. ಜ್ಞಾನೇಂದ್ರಪ್ಪ ಹಾಗೂ ಡಾ. ಕೆ.ಎಂ.ಚೆನ್ನಕೇಶವ ಅವರಿಗೆ ನ್ಯಾಯಾಧೀಶ ವಿಶ್ವನಾಥ ವಿರೂಪಾಕ್ಷ ಅಂಗಡಿ ಅವರು ತಲಾ 14 ಲಕ್ಷ ರೂ. ದಂಡ ವಿಧಿಸಿದರು. ದಂಡ ನೀಡಲು ತಪ್ಪಿದಲ್ಲಿ ಎರಡು ವರ್ಷಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ಅವರು ಹೇಳಿದರು. ತೆಲಗಿಗೆ ಈಗಾಗಲೇ 3 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ ಅಡಿ ಶಿಕ್ಷೆಯಾಗಿರುವ ಪ್ರಕರಣ ಇದೇ ಮೊದಲನೆಯದು. ಈತ ಜೈಲಿನಲ್ಲಿದ್ದಾಗ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿರುವ ತಪ್ಪಿಗಾಗಿ ವೈದ್ಯರಿಬ್ಬರೂ ಶಿಕ್ಷೆಗೆ ಒಳಗಾದರು. ಈ ಪ್ರಕರಣದಲ್ಲಿ ಪುಣೆಯ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತೆಲಗಿಯ ವಿಚಾರಣೆ ನಡೆಸಲಾಗಿತ್ತು.

 2007: ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎಯ ಅಭ್ಯರ್ಥಿಯಾದ ಪ್ರತಿಭಾ ಪಾಟೀಲ್ ರಾಜಸ್ಥಾನದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದರು. ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಭವನದಲ್ಲಿ ಈದಿನ ಮಧ್ಯಾಹ್ನ 3.45ಕ್ಕೆ ಭೇಟಿಯಾದ  ಪ್ರತಿಭಾ ಅವರು ರಾಜೀನಾಮೆ ಪತ್ರ ಸಲ್ಲಿಸಿದರು. 73ರ ಹರೆಯದ ಪ್ರತಿಭಾ 2004 ರಿಂದ ರಾಜಸ್ಥಾನದ ರಾಜ್ಯಪಾಲರಾಗಿ ಅಧಿಕಾರದಲ್ಲಿದ್ದರು.

 2007:  ವಿಶ್ವದಾಖಲೆ ಸ್ಥಾಪಿಸುವ ನೆಪದಲ್ಲಿ 15ರ ಹರೆಯದ ಬಾಲಕನೊಬ್ಬ ಸಿಜೇರಿಯನ್ ಶಸ್ತ್ರಕ್ರಿಯೆ ನಡೆಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ತಿರುಚಿರಾಪಳ್ಳಿ ಜಿಲ್ಲಾಧಿಕಾರಿ ಅಶೀಶ್ ವಚಾನಿ ಆದೇಶಿಸಿದರು. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ತಿರುಚ್ಚಿಯ ಕಂದಾಯ ವಿಭಾಗದ ಅಧಿಕಾರಿಗೆ ಜಿಲ್ಲಾಧಿಕಾರಿ ಆಜ್ಞಾಪಿಸಿದರು. `ಘಟನೆ ನಡೆದಿರುವುದು ನಿಜವೆಂದು ಸಾಬೀತಾದರೆ ಇದಕ್ಕೆ ಕಾರಣರಾದ ವೈದ್ಯ ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ವಚಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಗಿನ್ನೆಸ್ ದಾಖಲೆ ಸ್ಥಾಪಿಸುವ ಸಲುವಾಗಿ 10ನೇ ತರಗತಿಯ ವಿದ್ಯಾರ್ಥಿ 15ರ ಹರೆಯದ ಎಂ. ದಿಲೀಪನ್ ರಾಜ್ ತಿರುಚಿರಾಪಳ್ಳಿಯ ಮಥಿ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಸಿಜೇರಿಯನ್ ಶಸ್ತ್ರಕ್ರಿಯೆ ನಡೆಸಿದ್ದ. ಇದಕ್ಕೆ ವೈದ್ಯರಾಗಿರುವ ತಂದೆ ಮುರುಗೇಶನ್ ಮತ್ತು ಪ್ರಸೂತಿ ತಜ್ಞೆಯಾಗಿರುವ ತಾಯಿ ಎಂ. ಗಾಂಧಿಮತಿ ಮಾರ್ಗದರ್ಶನ ನೀಡಿದ್ದರು. ಭಾರತೀಯ ವೈದ್ಯಕೀಯ ಸಂಘದ (ಐಎಂಎ)ನ ತಮಿಳುನಾಡು ವಿಭಾಗ ಬಾಲಕನ ದುಸ್ಸಾಹಸವನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಈ ಘಟನೆ ಹೊರಲೋಕದ ಅರಿವಿಗೆ ಬಂದಿತು.

  2007: ಚೆನ್ನೈ (ಯುಎನ್ಐ): 1993ರಲ್ಲಿ ಆರೆಸ್ಸೆಸ್ ಮುಖ್ಯ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಕೋರ್ಟ್ ಟಾಡಾ ಕಾಯ್ದೆ ಅನ್ವಯ 11 ಮಂದಿಯನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿತು. ನಿಷೇಧಿತ ಅಲ್ ಉಮ್ಮಾ ಸಂಘಟನೆಯ ನಾಯಕ ಎಸ್. ಎ. ಪಾಶಾ ಸೇರಿದಂತೆ ನಾಲ್ವರನ್ನು ನ್ಯಾಯಲಯ ಆರೋಪ ಮುಕ್ತ ಗೊಳಿಸಿತು. ಈ ಬಾಂಬ್ ಸ್ಫೋಟ ಪ್ರಕರಣದಲ್ಲಿ 11 ಜನ ಮೃತರಾಗಿದ್ದರು. ನ್ಯಾಯಮೂರ್ತಿ ಟಿ.ರಾಮಸ್ವಾಮಿ ಅವರು ಈ ತೀರ್ಪು ನೀಡಿದರು. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಏಳು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮುಸ್ತಾಕ್ ಅಹ್ಮದ್ ಎನ್ನುವ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಘಟನೆಯಲ್ಲಿ ಭಾಗಿಯಾಗಿದ್ದ ಐಎಸ್ ಐ ಏಜೆಂಟ್ ಇಮಾಮ್ ಅಲಿ ಮತ್ತು ಜೆಹಾದ್ ಸಮಿತಿ ಸಂಸ್ಥಾಪಕ ಪಳನಿ ಬಾಬಾನನ್ನು ಬೇರೆ ಪ್ರಕರಣದಲ್ಲಿ ಹತ್ಯೆ ಮಾಡಲಾಗಿತ್ತು.

2007: ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ವಿಭಜಿಸಿ ಕ್ರಮವಾಗಿ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳನ್ನಾಗಿ ರಚಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತು. ಹತ್ತು ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಏಳು ಹೊಸ ಜಿಲ್ಲೆಗಳನ್ನು ರಚಿಸಿದ್ದರು.

 2007: ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಏಳು ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರುತ್ತಿದ್ದ ಬಾಹ್ಯಾಕಾಶ ನೌಕೆ ಅಟ್ಲಾಂಟಿಸ್ ನ ಭೂಸ್ಪರ್ಶವನ್ನು ಪ್ರತಿಕೂಲ ಹವಾಮಾನ ಕಾರಣ ಮುಂದೂಡಲಾಯಿತು. ನಿಗದಿತ ವೇಳಾಪಟ್ಟಿಯಂತೆ ಈದಿನ ರಾತ್ರಿ 11.24ರ ಸುಮಾರಿಗೆ (ಭಾರತೀಯ ಕಾಲಮಾನ) ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಅಂತರಿಕ್ಷ ನೌಕೆ ಇಳಿಯಬೇಕಿತ್ತು. ಆದರೆ, ಫ್ಲಾರಿಡಾದಲ್ಲಿ ಮೋಡ ಕವಿದ ವಾತಾವರಣ, ಗುಡುಗು, ಮಿಂಚು ಹಾಗೂ ಬಿರುಗಾಳಿ ಕಾರಣದಿಂದ ರಾತ್ರಿ ಒಂದು ಗಂಟೆಗೆ ಮುಂದೂಡಲಾಯಿತು. ನಂತರ ಅಂತಿಮವಾಗಿ ಮುಂದೂಡಲಾಯಿತು.

2007: ಕಮ್ಯೂನಿಕೇಷನ್ ಫಾರ್ ಡೆವಲಪ್ ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆ ನೀಡುವ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ 2006ನೇ ಸಾಲಿನಲ್ಲಿ ರವೀಂದ್ರ ಭಟ್ ಐನಕೈ, ರಾಜಶೇಖರ ಜೋಗಿಮನೆ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಪ್ರೋತ್ಸಾಹಕ ಪ್ರಶಸ್ತಿಗೆ ಶ್ರೀಪಡ್ರೆ ಆಯ್ಕೆಯಾದರು.

2007: ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಪೆಟ್ರೋಲಿಯಂ ಕಂಪೆನಿಯ ಭಟಿಂಡಾ ತೈಲ ಸಂಸ್ಕರಣೆ ಘಟಕದ ಶೇಕಡಾ 49ರಷ್ಟು ಷೇರನ್ನು ಖರೀದಿಸಲು ಉಕ್ಕು ಸಾಮ್ರಾಟ ಲಕ್ಷ್ಮಿ ಮಿತ್ತಲ್ ಅವರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.

2006: ಸಿಬ್ಬಂದಿ ಸೇರಿದಂತೆ ಸುಮಾರು 70 ಜನರಿದ್ದ ಹಡಗೊಂದು ಜಕಾರ್ತದ ಸುಮಾತ್ರಾ ದ್ವೀಪ ಸಮೀಪದಲ್ಲಿ  ಸಮುದ್ರದಲ್ಲಿ ಮುಳುಗಿ ಎಲ್ಲರೂ ಸಾವನ್ನಪ್ಪಿದರು. ಸಿಬೊಲ್ಗಾ ಬಂದರಿನಿಂದ ಸುಮಾರು 64 ಕಿ.ಮೀ. ಅಂತರದಲ್ಲಿ ಈ ದುರಂತ ಸಂಭವಿಸಿತು. ಹವಾಮಾನದ ದುಷ್ಪರಿಣಾಮ ಮತ್ತು ಹಡಗಿನಲ್ಲಿ ಉಂಟಾಗಿದ್ದ ರಂಧ್ರದಿಂದ ಈ ದುರಂತ ಸಂಭವಿಸಿತು.

2006: ಒಟ್ಟಾವಾದಲ್ಲಿ 1985ರಲ್ಲಿ ಬಾಂಬ್ ಸ್ಫೋಟದಿಂದ 324 ಪ್ರಯಾಣಿಕರು ಹತರಾದ ಕನಿಷ್ಕ ಏರ್ ಇಂಡಿಯಾ ವಿಮಾನ ದುರಂತದ ನ್ಯಾಯಾಂಗ ತನಿಖೆಯನ್ನು ಕೆನಡಾದ ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಾನ್ ಮೇಜರ್ ಟೊರಾಂಟೊದಲ್ಲಿ  ಆರಂಭಿಸಿದರು. ಈ ಹಿಂದಿನ ಎರಡು ವಿಚಾರಣೆಗಳಲ್ಲೂ ನ್ಯಾಯಾಲಯ ಇಬ್ಬರು ಸಿಖ್ ಪ್ರತ್ಯೇಕತಾವಾದಿಗಳನ್ನು ಆರೋಪ ಮುಕ್ತಗೊಳಿಸಿದ ಕ್ರಮವನ್ನು ಪ್ರಶ್ನಿಸಿ ದುರಂತದಲ್ಲಿ ಮಡಿದವರ ಕುಟುಂಬದ ಸದಸ್ಯರು ಕೆನಡಾ ಸರ್ಕಾರಕ್ಕ್ಕೆ ಮನವಿ ಸಲ್ಲಿಸಿದ ಮೇರೆಗೆ ಹೊಸದಾಗಿ ಇನ್ನೊಮ್ಮೆ ನ್ಯಾಯಮೂರ್ತಿ ಜಾನ್ ಮೇಜರ್ ನೇತೃತ್ವದಲ್ಲಿ ಸಾರ್ವಜನಿಕ ತನಿಖೆಗೆ ಆದೇಶಿಸಲಾಗಿತ್ತು.

2006: ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಜನ್ ಝೆಡ್ ಅವರನ್ನು ಅಂತಾರಾಷ್ಟ್ರೀಯ ವಾಣಿಜ್ಯ ಸಂಘಟನೆ ನೆವಾಡಾ ಜಾಗತಿಕ ವಾಣಿಜ್ಯ ಮಂಡಳಿಯ (ಎನ್ ಇಡಬ್ಲ್ಯೂಟಿಆರ್ ಎಸಿ) ನಿರ್ದೇಶಕರಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಯಿತು. ನೆವಾಡಾದ ರೆನೋ ನಿವಾಸಿಯಾಗಿರುವ ರಾಜನ್ ಅವರು ಅಮೆರಿಕಕ್ಕೆ ವಲಸೆ ಹೋಗುವ ಮುನ್ನ ಭಾರತದಲ್ಲಿ ಪತ್ರಕರ್ತರಾಗಿದ್ದರು.

2006: ಈಶಾನ್ಯ ಚೀನಾದ ಜಿಲಿನ್ ಪ್ರಾಂತದಲ್ಲಿ ಕನಿಷ್ಠ 3000 ವರ್ಷಗಳಷ್ಟು ಹಳೆಯದಾದ ಪಿರಮಿಡ್ಡುಗಳನ್ನು ಚೀನೀ ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದರು.

2006: ಕರ್ನಾಟಕದಾದ್ಯಂತ ಹರಡಿರುವ ಚಿಕುನ್ ಗುನ್ಯ ರೋಗಕ್ಕೆ ಹುಬ್ಬಳ್ಳಿಯ ಸರ್ಕಾರಿ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾಗವು ಔಷಧ ಕಂಡು ಹಿಡಿದಿದ್ದು, ರೋಗಿಗಳಿಗೆ ಉಚಿತವಾಗಿ ಹಂಚಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಚಾರ್ಯ ಡಾ. ಎಂ.ಎ. ಕುಂದಗೋಳ ಪ್ರಕಟಿಸಿದರು.

2006: ಇಂಡೋನೇಷ್ಯದ ಸುಲೇಸಿಯಾ ಪ್ರಾಂತ್ಯದಲ್ಲಿ ಎರಡು ದಿನಗಳಿಂದ ಸತತ ಮಳೆ ಸುರಿದ ಪರಿಣಾಮವಾಗಿ ಭೂಕುಸಿತಗಳು ಸಂಭವಿಸಿ 114 ಮಂದಿ ಮೃತರಾದರು.

1991: ಪಿ.ವಿ. ನರಸಿಂಹರಾವ್ ಅವರು ಭಾರತದ 9ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

1977: ಮೊನಾಚೆಮ್ ಬೆಗಿನ್ ಇಸ್ರೇಲಿನ 6ನೇ ಪ್ರಧಾನಮಂತ್ರಿಯಾದರು.

1970: ಮೆಕ್ಸಿಕೋ ನಗರದಲ್ಲಿ ಇಟಲಿಯನ್ನು ಸೋಲಿಸಿದ ಬ್ರೆಜಿಲ್ ಮೂರನೇ ಬಾರಿಗೆ ಸಾಕರ್ ವರ್ಲ್ಡ್ ಚಾಂಪಿಯನ್ ಎನಿಸಿಕೊಂಡು ದಾಖಲೆ ನಿರ್ಮಿಸಿತು. ಜೂಲ್ಸ್ ರಿಮೆಟ್ ಟ್ರೋಫಿಯನ್ನು ಕಾಯಂ ಆಗಿ ಇರಿಸಿಕೊಳ್ಳಲು ಬ್ರೆಜಿಲ್ ಗೆ ಅನುಮತಿ ನೀಡಲಾಯಿತು.

1963: ಕಾರ್ಡಿನಲ್ ಗಿಯಾವನ್ನಿ ಬಟ್ಟಿಸ್ಟ ಮೊಂಟಿನಿ ಅವರು ರೋಮನ್ ಕ್ಯಾಥೋಲಿಕ್ ಚರ್ಚಿನ ದಿವಂಗತ ಪೋಪ್ 23ನೇ ಜಾನ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಅವರು 6ನೇ ಪೌಲ್ ಎಂಬ ಹೆಸರನ್ನು ಪಡೆದುಕೊಂಡರು.

1956: ಶಂಭುಗೌಡ ನೀ. ಪಾಟೀಲ ಜನನ.

1953: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಜನ್ಮದಿನ. 1988ರಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಯಾದ ಇವರು ಆಧುನಿಕ ಇತಿಹಾಸದಲ್ಲಿ ಮುಸ್ಲಿಂ ರಾಷ್ಟ್ರವೊಂದರಲ್ಲಿ ಮೊತ್ತ ಮೊದಲ ಬಾರಿಗೆ ಪ್ರಧಾನಿಯಾದ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1948: ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರು ಭಾರತದ ಮೊತ್ತ ಮೊದಲ ಹಾಗೂ ಏಕೈಕ ಗವರ್ನರ್ ಜನರಲ್ ಆಗಿ ನೇಮಕಗೊಂಡರು.

1947: ಸಾಹಿತಿ ಈಚನೂರು ಜಯಲಕ್ಷ್ಮಿ ಅವರು ಖ್ಯಾತ ಸೂತ್ರದ ಬೊಂಬೆಯಾಟಗಾರ ಸೀತಾರಾಮಯ್ಯ- ಸಾವಿತ್ರಮ್ಮ ದಂಪತಿಯ ಮಗಳಾಗಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಈಚನೂರು ಗ್ರಾಮದಲ್ಲಿ ಜನಿಸಿದರು.

1940: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಈ ದಿನ ನಿಧನರಾದರು. 1889ರ ಏಪ್ರಿಲ್ 1ರಂದು ನಾಗಪುರದಲ್ಲಿ ಜನಿಸಿದ ಇವರು 1925ರಲ್ಲಿ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸ್ಥಾಪಿಸಿದರು.

1932: ಭಾರತೀಯ ಚಲನಚಿತ್ರನಟ ಅಮರೇಶ್ ಪುರಿ ಜನ್ಮದಿನ.

1926: ಪುರುಷರಿಗೆ ಸರಿಸಮಾನವಾಗಿ ನಾಟಕ ಸಂಸ್ಥೆ ಕಟ್ಟಿ ಬೆಳೆಸಿ ಮಹಿಳೆಯರಿಂದಲೇ ನಾಟಕ ಮಾಡಿಸಿ, ಪುರುಷ ಪಾತ್ರಗಳನ್ನೂ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡ ಕಲಾವಿದೆ ನಾಗರತ್ನಮ್ಮ ಕೃಷ್ಣ ಭಟ್ಟ- ರುಕ್ಮಿಣಿಯಮ್ಮ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1907: ಕಲಾವಿದ ಕೆರೆಮನೆ ಶಿವರಾಮ ಹೆಗಡೆ ಜನನ.

1906: ಸಾಹಿತಿ ಕಾಮಾಕ್ಷಮ್ಮ ಆರ್. ಜನನ.

1906: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ಉಮೇಶ ಚಂದ್ರ ಬ್ಯಾನರ್ಜಿ ನಿಧನರಾದರು.

1893: ಚಿಕಾಗೋದ ಕೊಲಂಬಿಯನ್ ಪ್ರದರ್ಶನದಲ್ಲಿ `ಫೆರ್ರಿಸ್ ವ್ಹೀಲ್' ಪ್ರದಶರ್ಿಸಲಾಯಿತು. ಪಿಟ್ಸ್ ಬರ್ಗ್ ಸೇತುವೆ ನಿರ್ಮಾಪಕ ಜಾರ್ಜ್ ಟಬ್ಲ್ಯೂ ಫೆರ್ರಿಸ್ ನ ಸಂಶೋಧನೆ ಇದು. ಪ್ಯಾರಿಸ್ಸಿನ ಐಫೆಲ್ ಗೋಪುರದಂತೆ ಜನರನ್ನು ಆಕರ್ಷಿಸುವ ಸಲುವಾಗಿ ನಿರ್ಮಿಸಲಾದ ಈ `ಫೆರ್ರಿಸ್ ವ್ಹೀಲ್' ನಲ್ಲಿ ಒಂದು ಸಲಕ್ಕೆ 60 ಪ್ರಯಾಣಿಕರನ್ನು ಸುತ್ತಿಸಬಲ್ಲ 36 ತೊಟ್ಟಿಲುಗಳಿದ್ದವು. ಈ ಸಂಶೋಧನೆಯ 4 ವರ್ಷಗಳ ಬಳಿಕ ತನ್ನ 38ನೇ ವಯಸ್ಸಿನಲ್ಲಿಫೆರ್ರಿಸ್ ಮೃತನಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, July 3, 2010

'ಸಯಾಮಿ ಅವಳಿಗಳು' ಮತ್ತು ಪರಮಾಧಿಕಾರ..!

'ಸಯಾಮಿ ಅವಳಿಗಳು'

ಮತ್ತು ಪರಮಾಧಿಕಾರ..! 






ತಹಶೀಲ್ದಾರರನ್ನು 'ತಾಲೂಕು ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಎಂತಹುದು? ಜಿಲ್ಲಾಧಿಕಾರಿಗಳಿಗೆ 'ಜಿಲ್ಲಾ ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಪರಮಾಧಿಕಾರ ಅಲ್ಲವೇ?



-ನೆತ್ರಕೆರೆ ಉದಯಶಂಕರ
ರಾಜಕಾರಣಿಗಳು ಮತ್ತು ಅಧಿಕಾರಿಗಳು ಕನ್ ಜಾಯಿನ್ಡ್ ಟ್ವಿನ್ಸ್  (Conjoined Twins) ಅಂದರೆ ಸಯಾಮಿ ಅವಳಿಗಳು ಇದ್ದಂತೆ. ಅವರನ್ನು ಪರಸ್ಪರ ಬೇರ್ಪಡಿಸುವುದು ಬಹಳ ಕಷ್ಟ..!

ಕೆಲವೇ ದಿನಗಳ ಹಿಂದೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರನ್ನು ಭೇಟಿ ಮಾಡಿದ್ದಾಗ ಅವರ ಬಾಯಿಯಿಂದ ಹೊರಬಂದಿದ್ದ ಮಾತುಗಳಿವು.


ಮೊನ್ನೆ 23 ಜೂನ್ 2010ರ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಹೆಗ್ಡೆಯವರು ಈ ಮಾತನ್ನು ಸ್ವಲ್ಪ ಬದಲಾಯಿಸಿ 'ರಾಜಕಾರಣಿಗಳೆಲ್ಲ ಒಂದೇ ಪಾಠಶಾಲೆಯ ಮಕ್ಕಳು' ಎಂದು ಹೇಳಿದರು.


ಲೋಕಾಯುಕ್ತರಿಗೆ ಪರಮಾಧಿಕಾರ ನೀಡುತ್ತೇವೆ ಎಂಬುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ರಾಜ್ಯದ ಬಿಜೆಪಿ ಧುರೀಣರು ಈಗ ಹಠಾತ್ತನೆ ರಾಗ ಬದಲಾಯಿಸಿದ್ದು ನೋಡುವಾಗ ಲೋಕಾಯುಕ್ತರ ಮಾತುಗಳು ಮತ್ತೆ ಮತ್ತೆ ಮನಸ್ಸಿನಲ್ಲಿ ಹಾದು ಹೋಗುತ್ತದೆ.




ಮುಖ್ಯಮಂತ್ರಿಗಳು ಪ್ರೆಸ್ ಕ್ಲಬ್ಬಿನಲ್ಲಿ ಪತ್ರಕರ್ತರ ಸಂವಾದದಲ್ಲಿ ಪಾಲ್ಗೊಂಡು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾಗ ಅಪ್ಪಿತಪ್ಪಿಯೂ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡುವ ಬಗ್ಗೆ ತುಟಿ ಬಿಚ್ಚಲಿಲ್ಲ.




ಅದೇ ಹೊತ್ತಿನಲ್ಲಿ ಕೆಲವು ಪತ್ರಕರ್ತ ಮಿತ್ರರ ಜೊತೆಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ 'ಪರಮಾಧಿಕಾರ ಅಂದರೆ ಏನು? ಸ್ವತಃ ನೋಟಿಸ್ ನೀಡಿ, ವಿಚಾರಣೆ ನಡೆಸಿ, ಸ್ವತಃ ತೀರ್ಪು ನೀಡುವ ಅಧಿಕಾರವೇ? ಇಂತಹ ಅಧಿಕಾರದಿಂದ ಸಹಜ ನ್ಯಾಯಕ್ಕೆ ಧಕ್ಕೆ ಆಗುವುದಿಲ್ಲವೇ?' ಎಂದು ಪ್ರಶ್ನಿಸಿದ್ದರು.




ಈಗ ಸಚಿವ ರಾಮಚಂದ್ರ ಗೌಡ ಅವರು ಇದೇ ಧಾಟಿಯಲ್ಲಿ ಮಾತನಾಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಒಟ್ಟಾರೆಯಾಗಿ ಪರಮಾಧಿಕಾರ ನೀಡುವುದು ಇವರೆಲ್ಲರಿಗೆ ಈಗ ಅಲರ್ಜಿಯ ವಿಚಾರ..!




ಬಿಜೆಪಿಯ ಕಥೆ ಹೀಗಾದರೆ ಇತರ ಪಕ್ಷಗಳು ಸಾಚಾಗಳೇನೂ ಅಲ್ಲ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಲೋಕಾಯುಕ್ತರಿಗೆ ಒಮ್ಮೆ ಇಂತಹ ಅಧಿಕಾರ ಕೊಟ್ಟಿದ್ದರು. ಆದರೆ ನಂತರ ಬಂದ ಸರ್ಕಾರ ಅದನ್ನು ಹಿಂತೆಗೆದುಕೊಂಡಿತು. ಆ ಬಳಿಕ ರಾಜ್ಯವನ್ನು ಎರಡು ದಶಕಗಳ ಕಾಲ ಆಳಿದ ಕಾಂಗ್ರೆಸ್ಸು, ಜನತಾದಳ ಸರ್ಕಾರಗಳಾದರೂ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಬಹುದಾಗಿತ್ತಲ್ಲ?

ಅಧಿಕಾರದಲ್ಲಿ ಇದ್ದಾಗ ತೆಪ್ಪಗೆ ಇದ್ದು, ವಿರೋಧ ಪಕ್ಷಗಳ ಸ್ಥಾನಕ್ಕೆ ಬಂದು ಕೂತೊಡನೆ ಎಲ್ಲ ರಾಜಕೀಯ ಪಕ್ಷಗಳಿಗೂ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂಬುದು ನೆನಪಾಗುತ್ತದೆ. ಮತ್ತೆ ಅಧಿಕಾರಕ್ಕೆ ಬಂದೊಡನೆ ಈ ವಿಚಾರದಲ್ಲಿ 'ಜಾಣ ಮರೆವು' ಆವರಿಸಿ ಬಿಡುತ್ತದೆ.







ಈಗ ಅಧಿಕಾರ ಪೀಠದಲ್ಲಿ ಕುಳಿತಿರುವ ಬಿಜೆಪಿಗೆ ಆಗಿರುವುದೂ ಇದೇ. ಏಕೆ ಎಂದರೆ....





ಅಧಿಕಾರಿಗಳನ್ನು ಹಾಗೂ ಸರ್ಕಾರಿ ಯಂತ್ರದ ಸಿಬ್ಬಂದಿಯನ್ನು ಬಿಟ್ಟು ಇವರಾರಿಗೂ ಆಡಳಿತ ನಡೆಸಲು ಬರುವುದಿಲ್ಲ. ಹಾಗಾಗಿ ಸದಾಕಾಲ ಅಧಿಕಾರಿಗಳು, ಆಡಳಿತ ಯಂತ್ರದ ಸಿಬ್ಬಂದಿಯೊಂದಿಗೆ ರಾಜಕಾರಣಿಗಳದ್ದು 'ನೀ ನನಗಿದ್ದರೆ ನಾ ನಿನಗೆ' ಎಂಬ ಹಾಡು..!




ಅದಕ್ಕಾಗಿಯೇ ಹೆಗ್ಡೆಯವರು ಹೇಳಿದ್ದು 'ಇವರು ಕನ್ ಜಾಯಿನ್ಡ್ ಟ್ವಿನ್ಸ್' ಅಂತ.




ಪ್ರಜಾಪ್ರಭುತ್ವದಲ್ಲಿ ಆಡಳಿತಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಅಂಗಗಳು ಇರುವುದು ಸುಗಮ ಆಡಳಿತಕ್ಕಾಗಿ ಅಷ್ಟೇ ಅಲ್ಲ, ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಅವರ ಜುಟ್ಟು ಹಿಡಿಯುವಂತಿರಬೇಕು ಎಂಬ ಕಾರಣಕ್ಕಾಗಿ. ಆದರೆ ಈ ಮೂಲಭೂತ ತತ್ವ ನಮಗೆ ಮರೆತೇ ಹೋಗಿದೆ ಎಂದರೆ ತಪ್ಪಿಲ್ಲವೇನೋ!




'ಪರಮಾಧಿಕಾರ'ದ ಪ್ರಶ್ನೆ ಬಂದಾಗ ರಾಜಕಾರಣಿಗಳು ಲೋಕಾಯುಕ್ತರಿಗೆ ಅದನ್ನು ಕೊಡಲು ಏಕೆ ಹಿಂದೇಟು ಹೊಡೆಯುತ್ತಾರೆ ಗೊತ್ತೆ? ಬೇರೆ ಯಾವುದಕ್ಕೂ ಅಲ್ಲ, ಲೋಕಾಯುಕ್ತರ ಚಾಟಿ ಬೀಸುವುದು ಅಧಿಕಾರಿಗಳ, ರಾಜಕಾರಣಿಗಳ ದುರಾಡಳಿತ, ಭ್ರಷ್ಟತೆಯ ವಿರುದ್ಧ ಎಂಬ ಕಾರಣಕ್ಕಾಗಿ.




ಅಂದರೆ ಲೋಕಾಯುಕ್ತರಿಗೆ ಪರಮಾಧಿಕಾರ ಇದ್ದರೆ ದುರಾಡಳಿತ ನಡೆಸುವ  ಆಡಳಿತಾಂಗದ ಭ್ರಷ್ಟ ಅಧಿಕಾರಿ, ಸಿಬ್ಬಂದಿ ಮಾತ್ರವೇ ಅಲ್ಲ ಅವರಿಗೆ ರಕ್ಷಕರಾಗಿ ನಿಲ್ಲುವ ರಾಜಕಾರಣಿಗಳ ಆಟಗಳಿಗೂ 'ಅಂಕೆ' ಬೀಳುತ್ತದೆ.




ಲೋಕಾಯುಕ್ತರ ನೇರ ಪ್ರಹಾರ ಭ್ರಷ್ಟ ಅಧಿಕಾರಿ - ಸಿಬ್ಬಂದಿ ಮತ್ತು ರಾಜಕಾರಣಿಗಳ ಮೇಲೆಯೇ ಹೊರತು ಸಾರ್ವಜನಿಕರ ಮೇಲೆ ಅಲ್ಲ. ಈ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಲೋಕಾಯುಕ್ತ ವ್ಯವಸ್ಥೆ ಮಾಡಿಕೊಡುತ್ತದೆ.




ಗಮನಿಸಬೇಕಾದ ಮಹತ್ವದ ವಿಷಯ ಏನೆಂದರೆ ಒಬ್ಬರಿಗೇ ನೋಟಿಸ್ ನೀಡುವ, ವಿಚಾರಣೆ ನಡೆಸುವ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಕೊಟ್ಟು ಬಿಟ್ಟರೆ ಸಹಜ ನ್ಯಾಯಕ್ಕೆ ಧಕ್ಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಈ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಬರುವುದು ಅವರ ವಿರುದ್ಧ ಚಾಟಿ ಬೀಡುವ ಲೋಕಾಯುಕ್ತರಿಗೆ ಈ 'ಅಧಿಕಾರ' ನೀಡಬೇಕು ಎಂಬ ಆಗ್ರಹ ಬಂದಾಗ ಮಾತ್ರ.




ಆದರೆ ಇದೇ ನಮ್ಮ ಆಡಳಿತ ವ್ಯವಸ್ಥೆಯಲ್ಲಿ 'ಇಂತಹ ಪರಮ ಅಧಿಕಾರವನ್ನು' ಅಧಿಕಾರಿಗಳೇ ಹೊಂದಿರುವ ನಿದರ್ಶನ ಇಲ್ಲವೇ?




  



ತಹಶೀಲ್ದಾರರನ್ನು 'ತಾಲೂಕು ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಎಂತಹುದು? ಜಿಲ್ಲಾಧಿಕಾರಿಗಳಿಗೆ 'ಜಿಲ್ಲಾ ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ಕೊಟ್ಟಿರುವ ಅಧಿಕಾರ ಪರಮಾಧಿಕಾರ ಅಲ್ಲವೇ? ಇದೇ ರೀತಿಯಾಗಿ ವಿಶೇಷ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತಿತರ ವರ್ಗದ ಅಧಿಕಾರಿಗಳಿಗೂ 'ಮ್ಯಾಜಿಸ್ಟ್ರೇಟ್' ಎಂಬುದಾಗಿ ಕರೆದು ಅವರಿಗೆ ನೋಟಿಸ್ ನೀಡುವ, ವಿಚಾರಣೆ ನಡೆಸುವ ಮತ್ತು ತೀರ್ಪು ನೀಡುವ ಅಧಿಕಾರವನ್ನು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕೊಟ್ಟಿಲ್ಲವೇ?




ತಕರಾರುಗಳು ಎದ್ದಾಗ ಅವುಗಳನ್ನು ಇತ್ಯರ್ಥ ಪಡಿಸಲು 'ನ್ಯಾಯಾಂಗ' ಎಂಬ ಪ್ರತ್ಯೇಕ ವ್ಯವಸ್ಥೆಯೇ ಇದ್ದರೂ, ಆಡಳಿತಾಂಗದ ಈ ಕೆಲವು ಅಧಿಕಾರಿಗಳಿಗೆ 'ನ್ಯಾಯಾಂಗದ' ಅಧಿಕಾರವನ್ನೂ ಕೊಟ್ಟಿರುವುದು, ಅವರಿಗೆ ತನಿಖೆ - ವಿಚಾರಣೆ ನಡೆಸುವ ಮತ್ತು ತೀರ್ಪು ನೀಡುವ 'ಪರಮಾಧಿಕಾರ' ಕೊಟ್ಟದ್ದನ್ನು ಸೂಚಿಸುವುದಿಲ್ಲವೇ?




ಉದಾಹರಣೆಗೆ: ಯಾರಾದರೂ ತಾನು ಖರೀದಿಸಿದ ಕೃಷಿಭೂಮಿಯನ್ನು ಬೇರೆ ಯಾವುದಾದರೂ ಉದ್ದೇಶಕ್ಕೆ ಬಳಸುತ್ತಾರೆ ಎಂದಿಟ್ಟುಕೊಳ್ಳಿ. ಅಂತಹ ಸಂದರ್ಭದಲ್ಲಿ ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ ಎಂಬುದಾಗಿ ನೋಟಿಸ್ ನೀಡಿ, ವಿಚಾರಣೆ ನಡೆಸಿ ಆ ತಪ್ಪಿಗಾಗಿ ಆಸ್ತಿಯನ್ನೇ ಮುಟ್ಟುಗೋಲು ಹಾಕಿರುವುದಾಗಿ ತೀರ್ಫು ನೀಡುವ ಅಧಿಕಾರ ಅಸಿಸ್ಟೆಂಟ್ ಕಮೀಷನರ್, ಜಿಲ್ಲಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ... ಎಂಬ ಅಧಿಕಾರಿ ವರ್ಗಕ್ಕೆ ಉಂಟಲ್ಲ?




ಇದಕ್ಕೆ ಏನಂತ ಹೆಸರು?  ಪರಮಾಧಿಕಾರ ಅಲ್ಲವೇ?




ಇವರೆಲ್ಲರೂ ತಮ್ಮ ಪರಮಾಧಿಕಾರ ಚಲಾಯಿಸುವುದು ಅಧಿಕಾರಿಗಳು, ಆಡಳಿತ ಯಂತ್ರದ ಸಿಬ್ಬಂದಿಯ ಮೇಲೆ ಅಲ್ಲ, ಬದಲಿಗೆ ಸಾಮಾನ್ಯ ನಾಗರಿಕರ ಮೇಲೆ.




ಅಂದರೆ ಸಾಮಾನ್ಯ ನಾಗರಿಕರ ಮೇಲೆ ಈ ರೀತಿ ಅಧಿಕಾರ ಚಲಾಯಿಸುವ ಪರಮಾಧಿಕಾರವನ್ನು ಆಡಳಿತ ವರ್ಗದ ಒಂದು ವರ್ಗಕ್ಕೆ ನೀಡಿರುವುದು ನಮ್ಮ ರಾಜಕಾರಣಿಗಳಿಗೆ 'ಸಹಜ ನ್ಯಾಯ'ಕ್ಕೆ ವಿರುದ್ಧ ಎಂದು ಅನ್ನಿಸುವುದಿಲ್ಲ. ಆದರೆ ಇದೇ ಆಡಳಿತ ವರ್ಗದ ಅಧಿಕಾರಿಗಳು ಅಥವಾ ಸಿಬ್ಬಂದಿಯ ದುರಾಡಳಿತ, ಕರ್ತವ್ಯ ಲೋಪ, ಭ್ರಷ್ಟಾಚಾರ ವಿರುದ್ಧ ತನಿಖೆ- ವಿಚಾರಣೆ ನಡೆಸುವ ಲೋಕಾಯುಕ್ತರು ಅವರನ್ನು ದಂಡಿಸುವ 'ಪರಮ' ಅಧಿಕಾರ ಬೇಕು ಎಂದು ಕೇಳಿದಾಗ ಮಾತ್ರ ಅದು 'ಸಹಜ ನ್ಯಾಯ'ಕ್ಕೆ ವಿರುದ್ಧ ಆಗಿ ಬಿಡುತ್ತದೆ..!




ಅಧಿಕಾರ ಎಂಬ ಆಡಳಿತದ ಪರಮ 'ದಂಡಾಸ್ತ್ರ'ವನ್ನು ಹೊಂದಿರುವ ರಾಜಕಾರಣಿ, ಅಧಿಕಾರಿಗಳಿಗೆ ಅದೇ ಅಸ್ತ್ರವನ್ನು ತಮ್ಮ ಜುಟ್ಟು ಹಿಡಿದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಯತ್ನಿಸುವವರಿಗೆ ಕೊಡಲು ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ರಾಜಕಾರಣಿಗಳ ಬಾಯಿಗಳಿಂದ ಹೊರಬೀಳುತ್ತಿರುವ ಈ 'ಮುತ್ತುಗಳೇ' ತೋರಿಸಿಕೊಡುತ್ತಿವೆ.




ಹೌದು.. ತಮ್ಮ ಸಯಾಮಿ ಅವಳಿಗಳನ್ನು ರಕ್ಷಿಸಲಾಗದಿದ್ದರೆ ರಾಜಕಾರಣಿಗಳು ಬದುಕಿ ಬಾಳುವುದಾದರೂ ಹೇಗೆ?

ಹೀಗಾಗಿಯೇ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರಂತಹ ಪ್ರಾಮಾಣಿಕರಿಗೆ 'ಪರಮಾಧಿಕಾರ' ಕೊಡಲು ಅಧಿಕಾರಸ್ಥ ರಾಜಕಾರಣಿಗಳಿಗೆ 'ಕಷ್ಟ' ಆಗುತ್ತಿರುವುದು.







ಭ್ರಷ್ಟರನ್ನು ಸಾಕ್ಷ್ಯ ಸಮೇತ ಪತ್ತೆ ಹಚ್ಚಿದ ಬಳಿಕ ಇಂತಹ ಬೇರ್ಪಡಿಸಲಾಗದ 'ಸಯಾಮಿ' ಅವಳಿಗಳ ಮುಂದೆ ವರದಿ ಸಲ್ಲಿಸಿ ಏನೂ ಮಾಡಲಾಗದೆ ಕೈಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಇನ್ನೂ ಮುಂದುವರೆಯುವುದು ಬೇಡವೆಂದೇ ಹೆಗ್ಡೆಯವರು 'ಅಧಿಕಾರವಿಲ್ಲದ' ಹುದ್ದೆಗೆ ರಾಜೀನಾಮೆ ಕೊಟ್ಟಿರುವುದು.





ಲೋಕಾಯುಕ್ತರ ಪ್ರಕರಣ ರಾಜಕಾರಣಿ- ಅಧಿಕಾರಿ ಸಿಬ್ಬಂದಿಯ ಕಣ್ತೆರೆಸಿದರೆ ಲಾಭವಾಗುವುದು ಅವರ ಬಳಿ ದೂರು ನೀಡಿದ ಒಂದಷ್ಟು ಕಕ್ಷಿದಾರರಿಗೆ ಅಷ್ಟೇ ಅಲ್ಲ, ಒಂದು ಪ್ರಾಮಾಣಿಕ, ಪಾರದರ್ಶಕ ವ್ಯವಸ್ಥೆಗೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಈಗ ಎಂದಿಗಿಂತ ಹೆಚ್ಚು ಇದೆ..!


ಇಂದಿನ ಇತಿಹಾಸ History Today ಜೂನ್ 20

ಇಂದಿನ ಇತಿಹಾಸ

ಜೂನ್ 20

 ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಹೊಣೆ ಹೊತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ಇದೇ ನೆಪದಿಂದ ಹಿಂದುತ್ವ ಸಿದ್ಧಾಂತದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.

2009: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಹೊಣೆ ಹೊತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ಇದೇ ನೆಪದಿಂದ ಹಿಂದುತ್ವ ಸಿದ್ಧಾಂತದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಪಕ್ಷ ರಾಷ್ಟ್ರಾದ್ಯಂತ ಹಿನ್ನಡೆ ಅನುಭವಿಸಿಲ್ಲ. ಬದಲಾಗಿ ರಾಜ್ಯದಿಂದ ರಾಜ್ಯಕ್ಕೆ ಫಲಿತಾಂಶದ ಚಿತ್ರಣ ಬದಲಾಗಿದೆ. ಹಾಗಾಗಿ ಚುನಾವಣೆಗೆ ಒಬ್ಬರನ್ನೇ ಹೊಣೆಯನ್ನಾಗಿ ಮಾಡುವುದು ಸರಿಯಲ್ಲ ಎಂದು ಅವರು ವಿಶ್ಲೇಷಿಸಿದರು.

2009: ಮೂರು ದಿನಗಳ ತೀವ್ರ ಹೋರಾಟದ ನಂತರ ರಕ್ಷಣಾ ಪಡೆಗಳು ಲಾಲ್‌ಗಢದ ಪೊಲೀಸ್ ಠಾಣೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡವು. 2008ರ ನವೆಂಬರ್ ತಿಂಗಳಿನಿಂದ ಈ ಪೊಲೀಸ್ ಠಾಣೆ ಮಾವೋವಾದಿಗಳ ಹಿಡಿತದಲ್ಲಿತ್ತು. ನೆಲಬಾಂಬ್ ನಿಗ್ರಹ ವಾಹನದ ನೆರವಿನೊಂದಿಗೆ 'ದಾರಿ ಸುಗಮ' ಮಾಡಿಕೊಂಡ ರಕ್ಷಣಾ ಪಡೆಯ ಯೋಧರು, ಯಾವುದೇ ವಿರೋಧಗಳಿಲ್ಲದೇ ಒಳಗಿನಿಂದ ಬೀಗ ಹಾಕಿಕೊಂಡಿದ್ದ ಪೊಲೀಸ್ ಠಾಣೆ ಕಟ್ಟಡವನ್ನು ವಶಪಡಿಸಿಕೊಂಡರು.

2009: ಹಿರಿಯ ಐಎಎಸ್ ಅಧಿಕಾರಿ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸಿ.ಆರ್.ಚಿಕ್ಕಮಠ ಅವರನ್ನು ರಾಜ್ಯದ ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು. ಈವರೆಗೂ ಚುನಾವಣಾ ಆಯುಕ್ತರಾಗಿದ್ದ ಎಂ.ಆರ್.ಹೆಗಡೆ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಯಿತು. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ 308(1)ನೇ ಕಲಮಿನ ಅನ್ವಯ ರಾಜ್ಯಪಾಲರು ಈ ಆದೇಶ ಹೊರಡಿಸಿದರು.

2009: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿನ್ನಡೆಗೆ ತಮ್ಮ ಪುತ್ರ ವರುಣ್ ಗಾಂಧಿಯನ್ನು 'ಹರಕೆಯ ಕುರಿ'ಯಾಗಿ ಮಾಡಬಾರದು ಎಂದು ಹಿರಿಯ ಬಿಜೆಪಿ ನಾಯಕಿ ಮೇನಕಾ ಗಾಂಧಿ ನವದೆಹಲಿಯಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಆಗ್ರಹಿಸಿದರು. ಯಾರು ಕೆಲಸ ಮಾಡಬೇಕಿತ್ತೋ ಅವರು ಸರಿಯಾಗಿ ಕೆಲಸ ಮಾಡದೆ ಇದ್ದುದರಿಂದ ಪಕ್ಷಕ್ಕೆ ಸೋಲುಂಟಾಗಿದೆ, ಈ ಸೋಲಿಗೆ ವರುಣ್ ಹೊಣೆಯಲ್ಲ ಎಂದು ಅವರು ನುಡಿದರು.

2009: ಗುಜರಾತ್ ವಿಧಾನಸಭೆ ಅಂಗೀಕರಿಸಿದ ಕಠಿಣ ಭಯೋತ್ಪಾದನಾ ವಿರೋಧಿ ಮಸೂದೆಯನ್ನು ತಿದುಪಡಿ ಮಾಡುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿತು. ನವದೆಹಲಿಯಲ್ಲಿ ಈ ಬಗ್ಗೆ ವಿವರ ನೀಡಿದ ಗೃಹ ಸಚಿವ ಪಿ.ಚಿದಂಬರಂ, ಮೂರು ತಿದ್ದುಪಡಿಗಳಿಗಾಗಿ ಗುಜರಾತ್ ಸಂಘಟಿತ ಅಪರಾಧ ನಿಯಂತ್ರಣ ಮಸೂದೆಯನ್ನು (ಗುಜ್‌ಕೋಕ) ಹಿಂದಕ್ಕೆ ಕಳುಹಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.

2009: ತೆಹರಿಕ್-ಎ-ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಸೂದ್ ಬಂಡುಕೋರ ಪಡೆ ವಿರುದ್ಧ ಪಾಕಿಸ್ಥಾನದ ಪಡೆಗಳು ಇದೇ ಮೊತ್ತಮೊದಲ ಬಾರಿಗೆ ದಾಳಿ ನಡೆಸಿ, ದಕ್ಷಿಣ ವಜೀರಿಸ್ಥಾನದಲ್ಲಿ ಕನಿಷ್ಠ 50 ಭಯೋತ್ಪಾದರನ್ನು ಹತ್ಯೆಗೈದವು. ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ ಬಳಿಕ ಪಾಕ್ ಸೇನೆ  ವಜೀರಿಸ್ಥಾನದಲ್ಲಿ ಉಗ್ರರನ್ನು ಮಣಿಸಲು ಮುಂದಾಯಿತು.

2009: ಬೆಂಗಳೂರು ನಗರದ 'ಟಾಪ್ ಆಫ್ ದಿ ವರ್ಲ್ಡ್' ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ಡಾ ಎಸ್ ರಮೇಶ್ ಒಂದು ಗಂಟೆ ಅವಧಿಯಲ್ಲಿ ಯಾರ ಸಹಾಯವೂ ಇಲ್ಲದೇ 1,800 ಭಾವಚಿತ್ರಗಳಿಗೆ ಸಹಿ ಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು. ಡಾ. ರಮೇಶ್ ಅವರ ಈ ವಿಶಿಷ್ಟ ದಾಖಲೆಗೆ ಈದಿನ ವಿದ್ಯಾರಣ್ಯಪುರದ ಸೈಂಟ್ ಫಿಲೋಮಿನಾಸ್ ಇಂಗ್ಲಿಷ್ ಸ್ಕೂಲ್‌ನಲ್ಲಿ ಸೇರಿದ್ದ ನೂರಾರು ಜನರು ಸಾಕ್ಷಿಯಾದರು. ಅವರು ಈ ಮೊದಲೇ ವಿವಿಧ ರೀತಿಯ ಸಾಧನೆ ಮಾಡುವ ಮೂಲಕ 38 ವಿಶ್ವ ದಾಖಲೆ ಮತ್ತು ಏಳು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದರು. ಈ ಹಿಂದೆ ಸಿಂಗಪುರದ ಜೆಜೆ ಲಾಮ್ ಒಂದು ಗಂಟೆಯಲ್ಲಿ 1200 ಭಾವಚಿತ್ರಗಳಿಗೆ ಸಹಿ ಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು.

2009: ಚಲನಚಿತ್ರ ನಿರ್ಮಾಪಕ ಆರ್.ಲಕ್ಷ್ಮಣ್ (82) ಅವರು ಬೆಂಗಳೂರಿನಲ್ಲಿ ನಿಧನರಾದರು. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ ಲಕ್ಷ್ಮಣ್ ಚಿತ್ರ ವಿತರಕರಾಗಿದ್ದರು. 1960 ರ ದಶಕದಲ್ಲಿ ಕನ್ನಡ ಡಬ್ಬಿಂಗ್ ಚಿತ್ರಗಳ ವಿರುದ್ಧ ನಡೆದ ಚಳವಳಿ ಹಾಗೂ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೇ ಆದ್ಯತೆ ಕೊಡಬೇಕೆಂದು ಒತ್ತಾಯಿಸಿ ನಡೆದ ಚಳವಳಿಯಲ್ಲಿ ಲಕ್ಷ್ಮಣ್ ಅವರ ಪಾತ್ರವೂ ಹಿರಿಯದು. ಬಳಿಕ ಬೆಂಗಳೂರಿನಲ್ಲಿ ಭಾರತ್ ಚಿತ್ರಮಂದಿರದ ನಿರ್ವಾಹಕರಾಗಿ ಅಲ್ಲಿ ಗೋಪಾಲ್ ಅವರೊಡಗೂಡಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವ ಪಣತೊಟ್ಟು, ಕನ್ನಡ ಚಿತ್ರಗಳತ್ತ ಪ್ರೇಕ್ಷಕರು ಒಲಿಯುವಂತೆ ಮಾಡಿದರು.  ಡಾ. ರಾಜ್‌ಕುಮಾರ್ ಅಭಿನಯದ 'ಬಂಗಾರದ ಮನುಷ್ಯ', ನಟಸಾರ್ವಭೌಮ ಮುಂತಾದ ಚಿತ್ರಗಳನ್ನು ನಿರ್ಮಿಸಿದರು. ದಕ್ಷಿಣ ಭಾರತ ಚಲನಚಿತ್ರ ಮಂಡಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ಸಲ್ಲಿಸಿದರು.

2009: ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಹಾಗೂ ಖ್ಯಾತ ಅನುವಾದಕ ಡಾ.ತಿಪ್ಪೇಸ್ವಾಮಿ ಅವರನ್ನು ನವದೆಹಲಿಯ ಭಾರತೀಯ ಅನುವಾದ ಪರಿಷತ್ ಪ್ರತಿಷ್ಠಿತ ದ್ವಿವಾಗೀಶ ಪುರಸ್ಕಾರಕ್ಕೆ ಆಯ್ಕೆ ಮಾಡಿತು.  

 2009: ತನ್ನ ಸಹವರ್ತಿ ಸ್ಟೇಟ್ ಬ್ಯಾಂಕ್ ಆಫ್ ಇಂದೋರನ್ನು ತನ್ನೊಳಗೆ ವಿಲೀನಗೊಳಿಸುವ ಪ್ರಸ್ತಾವಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು.

2008: ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಷೇಧಿತ ಉಲ್ಫಾ ಉಗ್ರಗಾಮಿ ಸಂಘಟನೆಗೆ (ಪಿಆರ್ಇಪಿಎಕೆ) ಸೇರಿದ ನಾಲ್ವರು ಉಗ್ರಗಾಮಿಗಳನ್ನು ಬಂಧಿಸಿದರು. ಮಣಿಪುರದ ತಲ್ಲಬೆ, ಜಾನಿ, ಜಿತನ್ಸಿಂಗ್ ಮತ್ತು ಮೇಘಚಂದರ್ ಬಂಧಿತರು. ಉಗ್ರರು ಕಗ್ಗದಾಸನಪುರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಪಿಆರ್ಇಪಿಎಕೆ ಸಂಘಟನೆಯನ್ನು 1970ರಲ್ಲಿಯೇ ಸರ್ಕಾರ ನಿಷೇಧಿಸಿತ್ತು.

2007: ಕ್ರಿ.ಪೂ.1800ರಿಂದ 1500 ವರೆಗಿನ ಋಗ್ವೇದದ 30 ಹಸ್ತಪ್ರತಿಗಳು ಸೇರಿದಂತೆ ಒಟ್ಟು 38 ಪುರಾತನ ವಿಷಯಗಳನ್ನು ಯುನೆಸ್ಕೊ ತನ್ನ ಪರಂಪರೆ ಪಟ್ಟಿಯಲ್ಲಿ ಹೊಸದಾಗಿ ಸೇರಿಸಿತು. ಭವಿಷ್ಯದ ಪೀಳಿಗೆಗೆ ಪುರಾತನ ಸಂಸ್ಕೃತಿಯನ್ನು ಪರಿಚಯಿಸುವ ಕಾರಣಕ್ಕಾಗಿ ಇವನ್ನು ಸಂರಕ್ಷಿಸಲಾಗುತ್ತಿದೆ ಎಂದು ಯುನೆಸ್ಕೊ ಪ್ರಕಟನೆ ತಿಳಿಸಿತು .ವಿಶ್ವದ ಮೊದಲ ಉದ್ದನೆಯ ಸಾಕ್ಷ್ಯಚಿತ್ರ ಸೇರಿದಂತೆ ಸ್ವೀಡಿಷ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಕುಟುಂಬ ಒಡೆತನದ ಪತ್ರಾಗಾರ ಹಾಗೂ ದಕ್ಷಿಣ ಆಫ್ರಿಕಾದ ವರ್ಣನೀತಿ ವಿರೋಧಿ ನಾಯಕ ನೆಲ್ಸನ್ ಮಂಡೇಲಾ ಅವರ ಸಾಧನೆಯನ್ನು ಕೂಡಾ ಯುನೆಸ್ಕೊ ಪರಂಪರೆ ಪಟ್ಟಿಯಲ್ಲಿ ಸೇರಿಸಿತು. ವಿಶ್ವಸಂಸ್ಥೆಯ ವೈಜ್ಞಾನಿಕ ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗ ತಯಾರಿಸಿರುವ `ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್' ಎನ್ನುವ ಯೋಜನೆಯಲ್ಲಿ ಈ ಪಾರಂಪರಿಕ ಪಟ್ಟಿ ಇದೆ. ಯುನೆಸ್ಕೊ ನಿರ್ದೇಶಕ ಕೂಚಿರೊ ಮತ್ ಸೂರಾ ಅವರು ಈ ಪಾರಂಪರಿಕ ಪಟ್ಟಿ ಕುರಿತು ಮಾಹಿತಿ ನೀಡಿದರು. ವಿಶ್ವದ ಪಾರಂಪರಿಕ ಹಾಗೂ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಈ ಯೋಜನೆಯನ್ನು ವಿಶ್ವಸಂಸ್ಥೆಯು 1992ರಿಂದ ಆರಂಭಿಸಿತು. ಈ ಬಾರಿ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ `ದಿ ಸ್ಟೋರಿ ಆಫ್ ಕೆಲ್ಲಿ ಗ್ಯಾಂಗ್' ಎಂಬ ವಿಶ್ವದ ಮೊದಲ ಸಾಕ್ಷ್ಯ ಚಿತ್ರ (1906), 1840ರಿಂದ 1900ರವರೆಗೆ ಇದ್ದ ನೊಬೆಲ್ ಕುಟುಂಬದ ಪುರಾತನ ಪತ್ರಾಗಾರ ಹಾಗೂ ಸ್ವೀಡಿಷ್ ಚಲನಚಿತ್ರ ನಿರ್ದೇಶಕ ಇನ್ಗ್ ಮರ್ ಬರ್ಗ್ ಮನ್ ಮತ್ತು 1914ರಿಂದ 1923ರವರೆಗಿನ ರೆಡ್ ಕ್ರಾಸ್ ಸಂಸ್ಥೆಯ ದಾಖಲೆಗಳನ್ನು ಸಂರಕ್ಷಿಸಿಡುವ ಕಾರ್ಯವನ್ನು ಹಮ್ಮಿಕೊಂಡಿತ್ತು. ದಕ್ಷಿಣ ಕೊರಿಯಾದ ಕಾಯಾ ಪರ್ವತದಲ್ಲಿ ಸಂರಕ್ಷಿಸಿರುವ 1237ರಿಂದ 1248ವರೆಗಿನ 81,258 ಮರದ ಕೆತ್ತನೆಗಳ ಸಂಗ್ರಹ ಕೂಡಾ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಬುದ್ಧನ ಕುರಿತಾದ ಸಂಪೂರ್ಣ ಪಠ್ಯವನ್ನು ಹೊಂದಿದೆ ಎಂಬ ನಂಬಿಕೆ ಇದೆ. ಕೆನಡಾವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 1670ರ ಹಡ್ಸನ್ನಿನ ಬೇ ಕಂಪನಿ, ಮಧ್ಯ ವಿಶ್ವದ ಅಪರೂಪದ ಭೂಪಟ ಕೂಡಾ ಯುನೆಸ್ಕೊ ಪರಂಪರೆಯ ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದವು.

2007:  ಆಂಧ್ರ ಪ್ರದೇಶದ ಸರ್ಕಾರ ಮುಸ್ಲಿಮರಿಗೆ ಜಾತಿ ಆಧಾರದ ಮೇಲೆ ಶಿಕ್ಷಣ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಲು ಉದ್ದೇಶಿಸಿರುವುದನ್ನು ವಿರೋಧಿಸಿ ಮುಸ್ಲಿಂ ಸಂಯುಕ್ತ ಕ್ರಿಯಾ ಸಮಿತಿ ಹಾಗೂ ಕೆಲ ಮುಸ್ಲಿಂ ಧಾರ್ಮಿಕ ಸಂಘಟನೆಗಳು `ಫತ್ವಾ' ಹೊರಡಿಸಿದವು. ತಮ್ಮ ಜನಾಂಗವನ್ನು ಮೇಲುಸ್ತರಕ್ಕೆ ತರಲು ಜಾತಿ ಆಧಾರದ ಮೇಲೆ ಮೀಸಲು ಕಲ್ಪಿಸುವುದರಿಂದ ಸಾದ್ಯ ಎನ್ನುವುದು ಹುಚ್ಚು ಸಾಹಸ. ಈ ರೀತಿ ಮೀಸಲಾತಿ ಪಡೆಯುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದುದು ಎಂದು ಆಲ್ ಇಂಡಿಯಾ ಮಜ್ಲೀಸ್ - ಎ- ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಹಾಗೂ ಸಂಸದ ಅಸಾದ್ದುದೀನ್ ಒವಾಸಿ ಸ್ಪಷ್ಟಪಡಿಸಿದರು.

 2007: ರಾಜ್ಯಸಭೆಯ ಮಾಜಿ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಅವರಿಗೆ 2007ನೇ ಸಾಲಿನ `ವೀರಾಂಗನ ಸಮ್ಮಾನ್' ಪ್ರಶಸ್ತಿ ಲಭಿಸಿತು. ನಜ್ಮಾ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಯಿತು.  ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಮಧ್ಯಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಜ್ಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮ ಚಂದ್ರಶೇಖರ್ ಆಜಾದ್ ಸ್ಮರಣಾರ್ಥ ನೀಡಲಾಗುವ ಪ್ರಶಸ್ತಿಯನ್ನು ಛತ್ತೀಸಗಢದ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಕೇಂದ್ರಕ್ಕೆ ಪ್ರದಾನ ಮಾಡಲಾಯಿತು. ಬುಡಕಟ್ಟು ಜನರ ಶಿಕ್ಷಣ, ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಉನ್ನತೀಕರಣಕ್ಕೆ ಸಲ್ಲಿಸಿದ ಸೇವೆಗಾಗಿ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮಕ್ಕೆ ಈ ಪ್ರಶಸ್ತಿ ದೊರಕಿತು. ಈ ಪ್ರಶಸ್ತಿಯು ಒಂದೂವರೆ ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ಪತ್ನಿ ಮತ್ತು ತನ್ನ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ ಮಧ್ಯ ಪ್ರದೇಶದ ವಿಜೇಂದ್ರ ಸಿಂಗ್ ಗೆ ದಿವಾಸ್ ಸೆಷನ್ಸ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತು. ಈತ 2005ರ ಫೆಬ್ರುವರಿ 27ರಂದು ಹರಿತವಾದ ಆಯುಧ ಬಳಸಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ.

2007: 1975ರ ಹಿಟ್ ಚಿತ್ರ `ಜೈ ಸಂತೋಷಿ ಮಾ'ದಲ್ಲಿ ಸಂತೋಷಿ ಮಾ ಪಾತ್ರ ವಹಿಸಿದ್ದ ಅನಿತಾ ಗುಹಾ (70) ಅವರು ಹೃದಯಾಘಾತದಿಂದ ಮುಂಬೈಯಲ್ಲಿ ನಿಧನರಾದರು. ಪಶ್ಚಿಮ ಬಂಗಾಳದಿಂದ ಅವಕಾಶ ಅರಸಿ ಮುಂಬೈಗೆ ಬಂದ ಅನಿತಾ ಪೂರ್ಣಿಮಾ, ಪ್ಯಾರ್ ಕೀ ರಾಹೇ, ಗೇಟ್ ವೇ ಆಫ್ ಇಂಡಿಯಾ, ಸಂಜೋಗ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಸಂಪೂರ್ಣ ರಾಮಾಯಣ ಚಿತ್ರದಲ್ಲಿ ಅನಿತಾ ಅವರು ಸೀತೆಯ ಪಾತ್ರ ನಿರ್ವಹಿಸಿದ್ದರು.

2007: ಬ್ರಿಟನ್ ಸಂಸತ್ತಿನ ಅತಿ ಹಿರಿಯ ಸದಸ್ಯ ಭಾರತೀಯ ಮೂಲದ ಪಿಯಾರ ಸಿಂಗ್ ಖಾಬ್ರಾ (82) ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು. ಪಂಜಾಬಿನ ಕಹರ್ಪುರದಲ್ಲಿ ಜನಿಸಿದ್ದ ಖಾಬ್ರಾ 1959ರಲ್ಲಿ ಬ್ರಿಟನ್ನಿಗೆ ವಲಸೆ ಹೋಗಿದ್ದರು. ಅಲ್ಲಿ ಶಿಕ್ಷಕನಾಗಿ ಜೀವನ ಆರಂಬಿಸಿದ್ದ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, 1992ರಲ್ಲಿ ಲೇಬರ್ ಪಕ್ಷದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದರು.

2007: ಮೂರು ತಿಂಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ತಮ್ಮ ಪುತ್ರ ಧಿಲೀಪನ್ ರಾಜ್ ಚೆನ್ನೈಗೆ ಸಮೀಪದ ಮನಪ್ಪರೈಯ ಖಾಸಗಿ `ಮತಿ ಸರ್ಜಿಕಲ್ ಹಾಗೂ ಮೆಟರ್ನಿಟಿ ಆಸ್ಪತೆ'ಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ವಿಶ್ವದಾಖಲೆ ಸ್ಥಾಪಿಸಿದ್ದನ್ನು ಬಹಿರಂಗ ಪಡಿಸಿದ ಆತನ ತಂದೆ ಡಾ. ಮುರುಗೇಶನ್ ಇದನ್ನು ಸಾಬೀತು ಪಡಿಸುವ ಸಿಡಿ ಪ್ರದರ್ಶಿಸಿ ಸಹೋದ್ಯೋಗಿಗಳನ್ನು ಅಚ್ಚರಿಯಲ್ಲಿ ಕೆಡವಿದರು. ತಂದೆ ಮುರುಗೇಶನ್ ಹಾಗೂ ತಾಯಿ ಗಾಂಧಿಮತಿ ಮೇಲ್ವಿಚಾರಣೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು.

2006: ಭಾರತ - ಪಾಕ್ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪೂಂಚ್ ಮತ್ತು ಪಾಕಿಸ್ತಾನದ ರಾವಲ್ ಕೋಟ್ ನಡುವೆ ಮತ್ತೊಂದು ಬಸ್ ಸೇವೆಯನ್ನು ಈದಿನ ಆರಂಭಿಸಲಾಯಿತು.

1996: `ವಿಶ್ವದಲ್ಲಿ ಪರಮಾಣು ಅಸ್ತ್ರ ಪರೀಕ್ಷೆ ನಿಷೇಧ' ಕುರಿತ ಜಿನೀವಾ ಸಮ್ಮೇಳನದಲ್ಲಿ ಸಿಟಿಬಿಟಿಗೆ ಸಹಿ ಹಾಕದೇ ಇರಲು ಭಾರತವು ತೀರ್ಮಾನಿಸಿತು.

1987: ಪ್ರಸಿದ್ಧ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ನಿಧನರಾದರು.

1976: ಭಾರತೀಯ ಕ್ರಿಕೆಟಿಗ ದೇಬಸಿಸ್ ಮೊಹಂತಿ ಜನನ.

1960: ಫ್ಲಾಯ್ಡ್ ಪ್ಯಾಟರ್ಸನ್ ಅವರು ಇಂಗ್ಮಾರ್ ಜಾನ್ಸನ್ ಅವರನ್ನು ಸೋಲಿಸುವ ಮೂಲಕ ಜಾಗತಿಕ ಹೆವಿವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ಮತ್ತೆ ಪಡೆದುಕೊಂಡ ಜಗತ್ತಿನ ಮೊತ್ತ ಮೊದಲ ಬಾಕ್ಸರ್ ಎನಿಸಿಕೊಂಡರು.

1954: ಸಾಹಿತಿ ಬಸವರಾಜ ಸಬರದ ಅವರು ಬಸಪ್ಪ ಸಬರದ- ಬಸಮ್ಮ ದಂಪತಿಯ ಮಗನಾಗಿ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಈ ದಿನ ಜನಿಸಿದರು.

1952: ಇಂಗ್ಲಿಷ್ ಸಾಹಿತ್ಯದಲ್ಲೇ ಬೃಹತ್ ಕಾದಂಬರಿ `ಎ ಸ್ಯುಟೇಬಲ್ ಬಾಯ್' ಎಂಬ ಕೃತಿ ನೀಡಿದ ಭಾರತೀಯ ಕಾದಂಬರಿಕಾರ ವಿಕ್ರಮ್ ಸೇಠ್ ಅವರು ಈದಿನ ಕೋಲ್ಕತ್ತಾದಲ್ಲಿ (ಅಂದಿನ ಕಲ್ಕತ್ತಾ) ಜನಿಸಿದರು.

1952: ಶಾಸ್ತ್ರೀಯ, ಸುಗಮ ಸಂಗೀತ ಎರಡರಲ್ಲೂ ಪ್ರಾವೀಣ್ಯ ಗಳಿಸಿದ್ದ ಪ್ರತಿಭಾನ್ವಿತ ಗಾಯಕ ಮತ್ತೂರು ಲಕ್ಷ್ಮೀ ಕೇಶವ ಅವರು ಕೆ. ಸೂರ್ಯ ನಾರಾಯಣ ಅವಧಾನಿ- ಸುಂದರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಜನಿಸಿದರು.

1926: ಕಲಾವಿದ ಮಲ್ಪೆ ರಾಮದಾಸ ಸಾಮಗ ಜನನ.

1897: ಮುಂಬೈಯಲ್ಲಿ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ ಕೇಂದ್ರ ಕಚೇರಿಗೆ `ವಿಕ್ಟೋರಿಯಾ ಟರ್ಮಿನಸ್' ಎಂದು ಹೆಸರಿಡಲಾಯಿತು. ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಅವರ ರಾಜ್ಯಭಾರದ ಸ್ವರ್ಣಮಹೋತ್ಸವದ ನೆನಪಿಗಾಗಿ ಈ ಕ್ರಮ ಕೈಗೊಳ್ಳಲಾಯಿತು. 99 ವರ್ಷಗಳ ಬಳಿಕ 1996ರಲ್ಲಿ ಈ ಟರ್ಮಿನಸ್ ಗೆ `ಛತ್ರಪತಿ ಶಿವಾಜಿ ಟರ್ಮಿನಸ್' ಎಂದು ಮರುನಾಮಕರಣ ಮಾಡಲಾಯಿತು.

1789: ಫ್ರೆಂಚ್ ಕ್ರಾಂತಿಯ ಮಹತ್ವದ ಘಟನೆಯಾಗಿ ನ್ಯಾಷನಲ್ ಅಸೆಂಬ್ಲಿ ತನ್ನ ಎಂದಿನ ಸಮಾವೇಶ ತಾಣಕ್ಕೆ ಬದಲಾಗಿ ಪ್ಯಾರಿಸಿನ ಟೆನಿಸ್ ಕೋರ್ಟ್ ಒಂದರಲ್ಲಿ ಸಮಾವೇಶಗೊಂಡಿತು. ಫ್ರಾನ್ಸಿಗೆ ಸಂವಿಧಾನ ನೀಡುವವರೆಗೆ ಅಲ್ಲಿಂದ ಕದಲುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಈ ಸಮಾವೇಶ ಮಾಡಿತು. ಈ ಪ್ರತಿಜ್ಞೆ `ಟೆನಿಸ್ ಕೋರ್ಟ್ ಪ್ರತಿಜ್ಞೆ' ಎಂದೇ ಖ್ಯಾತಿ ಪಡೆದಿದೆ.

1756: ಬಂಗಾಳದ ನವಾಬ ಸಿರಾಜ್- ಉದ್- ದೌಲನ ಆಜ್ಞೆಯಂತೆ ಸೆರೆಹಿಡಿಯಲಾದ 146 ಮಂದಿ ಬ್ರಿಟಿಷ್ ಕಾವಲುಪಡೆ ಸೈನಿಕರನ್ನು 18 ಅಡಿ ಉದ್ದ 15 ಅಡಿ ಅಗಲದ ಸುರಂಗದಲ್ಲಿ ಕೂಡಿ ಹಾಕಲಾಯಿತು. ಅವರಲ್ಲಿ 23 ಮಂದಿ ಮಾತ್ರ ಬದುಕಿ ಉಳಿದರು. ಈ ಘಟನೆ `ಬ್ಲ್ಯಾಕ್ ಹೋಲ್ ಆಫ್ ಕಲ್ಕತ್ತ ಅಟ್ರೋಸಿಟಿ' ಎಂದೇ ಖ್ಯಾತವಾಗಿದೆ. ನಂತರ ನಡೆದ ಸಂಶೋಧನೆಗಳಲ್ಲಿ ಈ ಸುರಂಗಕ್ಕೆ ತಳ್ಳಲಾದವರ ಸಂಖ್ಯೆ 64 ಮಾತ್ರ ಹಾಗೂ ಅವರಲ್ಲಿ ಬದುಕಿ ಉಳಿದವರ ಸಂಖ್ಯೆ 21 ಎಂದು ತಿಳಿದುಬಂತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement