Saturday, September 1, 2012

ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...

ಹರಿಕಥೆಯಲ್ಲ ಇದು 'ರಾಮಕಥಾ'  Unique Rama Katha


ಮುದ್ದು ಮಕ್ಕಳೇ ನಿಮಗೆ ಕೆಲವು ಕುತೂಹಲಕರ ಪ್ರಶ್ನೆಗಳು. ಪ್ರಶ್ನೆ: ನಿಮಗೆ ಜಗತ್ತಿನ ಅತ್ಯಂತ ಪ್ರಾಚೀನ ಕಾವ್ಯ ಯಾವುದು ಗೊತ್ತೇ? ಉತ್ತರ: ರಾಮಾಯಣ. ಪ್ರಶ್ನೆ: ರಾಮಾಯಣವನ್ನು ಹಾಡುವುದರ ಮೂಲಕ ಮೊದಲಿಗೆ ಜಗತ್ತಿಗೆ ಲೋಕಾರ್ಪಣೆ ಮಾಡಿದವರು ಯಾರು? ಉತ್ತರ: ಇಬ್ಬರು ಪುಟ್ಟ ಮಕ್ಕಳು... ಅವರೇ ಲವ ಕುಶರು. ಪ್ರಶ್ನೆ: ಹನುಮಂತ ಯಾವ ರಾಜ್ಯದವನು? ಉತ್ತರ: ಕರ್ನಾಟಕ.

ಹೀಗೊಂದು ಪ್ರಶ್ನಾ ಮಾಲಿಕೆಯ ಕರಪತ್ರ ಬೆಂಗಳೂರಿನ ಶಾಲೆಗಳಲ್ಲಿ ಅಡ್ಡಾಡುತ್ತಿದೆ. ಪುಟ್ಟ ಮಕ್ಕಳ ಕುತೂಹಲ ಕೆರಳಿಸುತ್ತಿದೆ. ಮಕ್ಕಳನ್ನು ಈ ಪ್ರಶ್ನೆಗಳಿಗೆ ಉತ್ತರ ಪಡೆಯುವತ್ತ ಸಾಗಲು ಸಜ್ಜಾಗಿಸುತ್ತಿದೆ.. ಹೀಗೆ ಸಜ್ಜಾಗುತ್ತಿರುವವರನ್ನೆಲ್ಲ ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರ ಕೈಬೀಸಿ ಕರೆಯುತ್ತಿದೆ.

ಮಕ್ಕಳಿಗಷ್ಟೇ ಅಲ್ಲ, ಅವರ ಪಾಲಕ, ಪೋಷಕರಿಗೂ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ದೊರಕಿಸುವ ಕಾರ‌್ಯಕ್ರಮವೊಂದರ ಭರದ ಸಿದ್ಧತೆ ನಡೆದಿದೆ.

ಹರಿಕಥೆಯ  ಸೊಬಗು, ರಾಮನವಮಿಯ ಸಂಗೀತ ಸುಧೆಯ ಸವಿ ಬಲ್ಲವರಿಗೆ ಬೆಂಗಳೂರಿನ ಅರಮನೆ ಮೈದಾನ ಇನ್ನೊಂದು ರೀತಿಯ ಸಾಂಸ್ಕೃತಿಕ ರಸಗವಳವನ್ನು ಉಣಬಡಿಸಲು ಸಜ್ಜಾಗಿದೆ.

ಹರಿಕಥೆ, ಸಂಗೀತ, ನೃತ್ಯ, ನಾಟಕ, ಜಾನಪದ ಕಲೆಗಳು, ಪ್ರವಚನ, ಗಮಕವಾಚನ ಇತ್ಯಾದಿಗಳು ನಮ್ಮಲ್ಲಿ ಭಾರತದ ಪುರಾಣೇತಿಹಾಸವನ್ನು ಜನ ಸಾಮಾನ್ಯರಿಗೆ ತಲುಪಿಸಲು ಬಳಕೆಯಾಗುತ್ತಿದ್ದ ವೈವಿಧ್ಯಮಯ ಪ್ರಾಕಾರಗಳು. ಈ ವೈವಿಧ್ಯಮಯ ಕಲಾ ಪ್ರಾಕಾರಗಳೆಲ್ಲವನ್ನು ಒಳಗೊಂಡ ಕಥೆ ಹೇಳುವ ಹೊಸದೊಂದು ಪರ್ಯಾಯವೇ ಮಕ್ಕಳಾದಿಯಾಗಿ ಬಹುಮಂದಿಯನ್ನು ಸೆಳೆಯುತ್ತಿರುವ ಮೇಲೆ ತಿಳಿಸಿದ ವಿನೂತನ ಕಾರ್ಯಕ್ರಮ.  'ರಾಮಕಥಾ' ಎಂಬುದು ಇದರ ಶೀರ್ಷಿಕೆ. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿನೂತನ ಪರಿಕಲ್ಪನೆ ಇದು.

ಬೆಂಗಳೂರಿನಲ್ಲಿ ನಡೆಸುತ್ತಿರುವ ತಮ್ಮ ಚಾತುರ್ಮಾಸ್ಯದ ಅಂಗವಾಗಿ ಸ್ವಾಮೀಜಿಯವರು ಸ್ವತಃ ನಡೆಸಿಕೊಡುತ್ತಿರುವ ಕಾರ‌್ಯಕ್ರಮವಿದು. ಸ್ವಾಮೀಜಿ ಅವರು ನಡೆಸುವ ಕಾರ್ಯಕ್ರಮ ಎಂದರೆ ಒಂದಷ್ಟು ಪ್ರವಚನ ಇರಬಹುದು ಎಂದು ಹೇಳುವ ಮಂದಿಯ ಬಾಯಿಗಳನ್ನು ಈ ಕಾರ್ಯಕ್ರಮ ಕಟ್ಟಿ ಹಾಕುತ್ತದೆ. ಏಕೆಂದರೆ ಈ 'ರಾಮಕಥೆ'ಯಲ್ಲಿ ಇರುವುದು ಕೇವಲ ಪ್ರವಚನವಲ್ಲ.ಇದು ಹರಿಕಥೆಯೂ ಅಲ್ಲ. ಈ ರಾಮಕಥೆ ವಿಶಿಷ್ಟ ಮತ್ತು ವಿಭಿನ್ನ. ಇಲ್ಲಿ ಪ್ರವಚನ ಉಂಟು, ಗೀತ ಉಂಟು, ವಾದ್ಯ ಉಂಟು, ನೃತ್ಯ ಉಂಟು, ಚಿತ್ರ ಉಂಟು, ರೂಪಕ  ಉಂಟು, ಅದ್ಭುತಗಳ ಅನಾವರಣ ಉಂಟು. ಈ ಎಲ್ಲ ಉಂಟುಗಳ ಮಧ್ಯೆ ರಾಮನ ಕಥೆ ಹೇಳುವ ಸ್ವಾಮೀಜಿ ವಾಲ್ಮೀಕಿ ರಾಮಾಯಣದ ದೃಶ್ಯ ಕಾವ್ಯವೊಂದನ್ನು  ನಿರ್ಮಿಸುತ್ತಾರೆ.

ಸಂಗೀತ, ನೃತ್ಯ, ಯಕ್ಷಗಾನ, ವಾದ್ಯ, ಚಿತ್ರಕಲೆಗಳನ್ನು ಒಳಗೊಂಡು ಚೈತನ್ಯ ಪೂರ್ಣವಾಗಿ ಈ 'ರಾಮಕಥೆ' ಮುಂದುವರಿಯುತ್ತಿದ್ದಂತೆಯೇ ಕಲಾವಿದರೊಬ್ಬರ ಕುಂಚದಿಂದ ಶ್ರೋತೃಗಳು ಕಿವಿಯಿಂದ ಕೇಳುವ ಕಥೆ ಚಿತ್ರದ ರೂಪದಲ್ಲಿ ಕಣ್ಮುಂದೆ ಪ್ರತ್ಯಕ್ಷವಾಗುತ್ತದೆ. ಸಂದರ್ಭೋಚಿತವಾಗಿ ಕಲಾವಿದರು ನೃತ್ಯ, ಯಕ್ಷಗಾನ ಇತ್ಯಾದಿಗಳ ಮೂಲಕ ಕಾರ‌್ಯಕ್ರಮಕ್ಕೆ ಕಳೆಗಟ್ಟಿಸುತ್ತಾರೆ.

ಹೀಗೆ ರಾಮಕಥೆ ಮುಂದುವರಿಯುತ್ತಿದ್ದಂತೆಯೇ ರಾಮಕಥೆಯ ರೂಪಕಗಳು ಅಲ್ಲಿ ಲಂಕೆಯನ್ನೋ, ಯಮಲೋಕವನ್ನೋ, ಕೈಲಾಸವನ್ನೋ ವೈಕುಂಠವನ್ನೋ ಸೃಷ್ಟಿ ಮಾಡುತ್ತವೆ. ನಾಟಕ, ನೃತ್ಯ ರೂಪಕ, ನೆರಳುಚಿತ್ರ, ಯಕ್ಷಗಾನ, ಸಂವಾದ, ಪಾತ್ರಗಳ ವಿಮರ್ಶೆ ಇತ್ಯಾದಿಗಳೆಲ್ಲ ರಾಮಕಥೆಯನ್ನು ಚೇತೋಹಾರಿಯಾಗಿ ಮಾಡುತ್ತವೆ.

ರಾಮಕಥೆಯ ಕ್ಲೈಮ್ಯಾಕ್ಸ್ ಇರುವುದು ಕಥೆಯ ಕೊನೆಗೆ ಬರುವ 'ಆನಂದ ನರ್ತನ'ದಲ್ಲಿ. ಜೈಜೈ ರಾಮಕಥಾ ಎನ್ನುತ್ತಾ ಗಾಯಕರು ವಾದಕರ ಮೇಳದೊಂದಿಗೆ ಹಾಡತೊಡಗುತ್ತಿದ್ದಂತೆಯೇ ಇಡೀ ಸಭಾಂಗಣ ನರ್ತಿಸತೊಡಗುತ್ತದೆ. ಈ ಸಂಭ್ರಮದೊಂದಿಗೆ ರಾಮಕಥೆ ಪಾಲ್ಗೊಂಡವರ ಮನದಲ್ಲಿ ಅಚ್ಚಳಿಯದ ನೆನಪೊಂದನ್ನು ಬಿತ್ತಿ ಬಿಡುತ್ತದೆ.

ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪ್ರಸ್ತುತ ಪಡಿಸುತ್ತಿರುವ ಈ 'ರಾಮಕಥೆ' ಬೆಂಗಳೂರಿನಲ್ಲಿ ಶ್ರೀಗಳ ಪ್ರಸ್ತುತ ಚಾತುರ್ಮಾಸ್ಯದ ಅವಧಿಯಲ್ಲಿ ಜೆ.ಪಿ. ನಗರ, ಮಲ್ಲೇಶ್ವರದಲ್ಲಿ ಸಹಸ್ರಾರು ಮಂದಿಯನ್ನು ಆಕರ್ಷಿಸಿದೆ. ಉತ್ತರ ಭಾರತದ ಜೋಧಪುರದಲ್ಲಿ ನಡೆದ 'ರಾಮಕಥೆ' ಐವತ್ತೊಂದು ಕಂತುಗಳ ರೂಪದಲ್ಲಿ 'ಯು ಟ್ಯೂಬ್' ನಲ್ಲಿ ವಿಡಿಯೋ ರೂಪದಲ್ಲಿ ಲಭಿಸುತ್ತದೆ.

ಇಷ್ಟೊಂದು ಖರ್ಚು ವೆಚ್ಚ ಮಾಡಿ 'ರಾಮಕಥೆ' ಮಾಡುತ್ತಿರುವುದು ಏತಕ್ಕೆ ಎಂಬ ಪ್ರಶ್ನೆ ಕಾಡುವುದು ಸಹಜ. ಅದಕ್ಕೆ ಸ್ವಾಮೀಜಿ ಹೇಳುವುದು ಇಷ್ಟೆ: ಬದುಕಿಗೆ ಬೇಕಾಗುವ ವಿವೇಕ ವಾಲ್ಮೀಕಿ ರಾಮಾಯಣದಲ್ಲಿ ಉಂಟು. ಆದರೆ ಅದು ಕಹಿ ಗುಳಿಗೆ. ಸ್ಚೀಕಾರಕ್ಕೆ ಜನ ಹಿಂದೇಟು ಹಾಕುತ್ತಾರೆ. ಅದನ್ನೇ ವೈವಿಧ್ಯಪೂರ್ಣವಾಗಿ ಮುಂದಿರಿಸಿದಾಗ ಜನ ಸ್ಚೀಕರಿಸುತ್ತಾರೆ. ಆದ್ದರಿಂದ ರಾಮಕಥೆಯೆಂಬ ಸಿಹಿ ಜೇನಿನಲ್ಲಿ ರಾಮಾಯಣದ ವಿವೇಕದ ಕಹಿ ಗುಳಿಗೆಯನ್ನು ಅದ್ದಿ ಜನರ ಹಿತಕ್ಕಾಗಿ ಕೊಡುತ್ತಿದ್ದೇವೆ.

ರಾಮಕಥೆಯ ಜೇನು ಸವಿಯಲು ನೀವೂ ಹೊರಡಬಹುದು. ಸ್ಥಳ: ಅರಮನೆ ಮೈದಾನದ ಗಾಯತ್ರಿ ವಿಹಾರ, ಸೆಪ್ಟೆಂಬರ 2ರ ಭಾನುವಾರದಿಂದ ಸೆಪ್ಟೆಂಬರ್ 9ರ ಭಾನುವಾರದವರೆಗೆ ಪ್ರತಿನಿತ್ಯ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ.



ರಾಮಕಥೆಯ ಕುರಿತ ವರದಿಯೊಂದು 'ಪ್ರಜಾವಾಣಿ' ಪತ್ರಿಕೆಯ 'ಮೆಟ್ರೋ ಬೆಂಗಳೂರು' ಪುರವಣಿಯಲ್ಲಿ ಆಗಸ್ಟ್ 31ರ ಶನಿವಾರ ಪ್ರಕಟವಾಗಿದೆ. ಪ್ರಜಾವಾಣಿ ಈ  ಕೊಂಡಿಯನ್ನು ಕ್ಲಿಕ್ಕಿಸಿ ನೀವು  ಅದನ್ನು ಇಲ್ಲಿಯೇ ಓದಬಹುದು.

ಪ್ರಜಾವಾಣಿ ವರದಿಯನ್ನು ಇಲ್ಲಿ ಓದಿರಿ.

ಹಾಗೆಯೇ ಚಿತ್ರಗಳ ವಿಶಾಲ ಗಾತ್ರ ವೀಕ್ಷಣೆಗೆ ಅವುಗಳ ಮೇಲೆ ಕ್ಲಿಕ್ಕಿಸಬಹುದು.

-ನೆತ್ರಕೆರೆ ಉದಯಶಂಕರ

Advertisement