My Blog List

Wednesday, January 30, 2013

ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ....

ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ....

ಲಕ್ಷ್ಮೀಶ ತೋಳ್ಪಾಡಿ ಅವರ ಚಿಂತನೆಯ ಧಾರೆಯಲ್ಲಿ ನಾನು ಮುಳುಗಿ ಎದ್ದಿದ್ದುದು 1975-76ರಲ್ಲಿ-  ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ  ಸೆರೆವಾಸಿಯಾಗಿದ್ದಾಗ. ಮಂಗಳೂರು ಸಬ್ ಜೈಲಿನಲ್ಲಿ. ಸೆರೆಮನೆಯನ್ನೇ ಅರಮನೆಯನ್ನಾಗಿಸಿ ಚಿಂತನೆಯ ಹೊಳೆ ಹರಿಸಿದ್ದ ತೋಳ್ಪಾಡಿ ಮತ್ತು ವಿಶ್ವೇಶ್ವರ ಭಟ್ಟರು, ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆಮನೆ ಸೇರಿದ್ದ ನೂರಾರು ಮಂದಿ ಸತ್ಯಾಗ್ರಹಿಗಳಿಗೆ ನಿತ್ಯ ಭಗವದ್ಗೀತೆಯ ಕುರಿತು ವ್ಯಾಖ್ಯಾನ ಮಾಡುತ್ತಿದ್ದುದು ನೆನಪಿನಿಂದ ಅಳಿಯುವಂತಹುದಲ್ಲ.


ಆ ಬಳಿಕ ಒಮ್ಮೆ ಪುತ್ತೂರಿಗೆ ಹೋಗಿದ್ದಾಗ ಪುತ್ತೂರಜ್ಜನ ಆಶ್ರಮದಲ್ಲಿ ಸಿಕ್ಕಿದ್ದರು. ಊರಿಗೆ ಬಂದ ಗುರುವಿನ ಜ್ಞಾನದ ಬಗ್ಗೆ ಮಾತನಾಡುವ ಬದಲು  ಬಹಳಷ್ಟು ಮಂದಿ ಉದ್ದಕ್ಕೆ ಬೆಳೆದ ಗುರುವಿನ 'ಉಗುರು' ಬಗ್ಗೆ ಯೋಚಿಸುವ ಬಗೆಯನ್ನು ಸ್ವಾರಸ್ಯಕರವಾಗಿ ವಿವರಿಸಿದ್ದರು.


ಪುತ್ತೂರಜ್ಜನ ಚಿಂತನೆಗಳ ಬಗ್ಗೆ ಬರೆದ ಬರವಣಿಗೆಗಳ ಪುಸ್ತಕ 'ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ..' ಇದೀಗ ಬಿಡುಗಡೆ'ಯಾಗುತ್ತಿದೆ. ಪ್ರಜಾವಾಣಿ ಮೆಟ್ರೊ ಗಮನಿಸಿ.


ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುವೆ.

- ನೆತ್ರಕೆರೆ ಉದಯಶಂಕರ

Saturday, January 26, 2013

ವಿಟ್ಲ ಪಂಚಲಿಂಗೇಶ್ವರ ಬ್ರಹ್ಮಕಲಶೋತ್ಸವ: ಇಲ್ಲಿದೆ ’ಚಿತ್ರ ಸಂತರ್ಪಣೆ...’


ವಿಟ್ಲ ಪಂಚಲಿಂಗೇಶ್ವರ ಬ್ರಹ್ಮಕಲಶೋತ್ಸವ:

ಇಲ್ಲಿದೆ ’ಚಿತ್ರ ಸಂತರ್ಪಣೆ...’

ವಿಟ್ಲದ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭವು ೨೦೧೩ರ ಜನವರಿ ೨೧ರ ಸೋಮವಾರ ಬೆಳಗ್ಗೆ ಸಂಭ್ರಮೋತ್ಸಾಹದೊಂದಿಗೆ ನೆರವೇರಿತು
.ಅದಕ್ಕೂ ಮುನ್ನ ಜನವರಿ ೧೮ರ ಶುಕ್ರವಾರ ಮರು ನಿರ್ಮಾಣಗೊಂಡ ದೇವಸ್ಥಾನದಲ್ಲಿ ಶ್ರೀ ಪಂಚಲಿಂಗೇಶ್ವರನ ಪುನರ್ ಪ್ರತಿಷ್ಠಾ ಕಾರ‍್ಯ ನಡೆಯಿತು.ಜನವರಿ ೯ರಿಂದ ೨೧ರವರೆಗೆ ನಡೆದ ಈ ಕಾರ‍್ಯಕ್ರಮದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಬ್ರಹ್ಮಕಲಶೋತ್ಸವದ ಸಡಗರವನ್ನು ಕಣ್ತುಂಬಿಕೊಂಡರು.
ಪ್ರತಿದಿನ ಪ್ರತಿಹೊತ್ತು ಸುಮಾರು ೨೦ ಸಾಇರದಿಂದ ೩೦ ಸಾವಿರದವರೆಗೆ ಭಕ್ತರು ಯಾವುದೇ ರೀತಿಯ ಗೊಂದಲಗಳಿಲ್ಲದೆ ಅತ್ಯಂತ ಸಾಮರಸ್ಯದೊಂದಿಗೆ ದೇವರ ಪ್ರಸಾದ ಸವಿದರುಈ ಅವಧಿಯಲ್ಲಿ ಪ್ರಸಾದ ಉಂಡವರ ಸಂಖ್ಯೆ ಒಟ್ಟು ೩ ಲಕ್ಷವನ್ನೂ ಮೀರಿದೆ ಎಂಬುದು ಸಂಘಟಕರ ಹೇಳಿಕೆ.ಜನವರಿ ೨೧ರಂದು ಬ್ರಹ್ಮಕಲಶೋತ್ಸವ ಹಾಗೂ ಪಂಚಯತಿಗಳ ಆಶೀರ‍್ವಚನದ ಬಳಿಕ ನೂತನ ಧ್ವಜಸ್ಥಂಭದಲ್ಲಿ ಗರುಡನನ್ನು ಏರಿಸುವುದರೊಂದಿಗೆ ಧ್ವಜಾರೋಹಣವಾಗಿ ವರ್ಷಾವಧಿ ಜಾತ್ರೆಯ ಸಂಭ್ರಮ ಆರಂಭವಾಯಿತು
ಜನವರಿ ೨೮ರಂದು ರಥೋತ್ಸವ ಜರುಗಲಿದ್ದುಜನವರಿ ೩೦ರ ಮುಂಜಾನೆ ಧ್ವಜಾವತರಣದೊಂದಿಗೆ ಜನವರಿ ೯ರಂದು ಆರಂಭಗೊಂಡ ಈ ಸಡಗರ ಮುಕ್ತಾಯಗೊಳ್ಳುವುದು
.
ಬ್ರಹ್ಮಕಲಶೋತ್ಸವದ ಇನ್ನೊಂದಷ್ಟು ಚಿತ್ರಗಳು ಇಲ್ಲಿವೆ.
-
ನೆತ್ರಕೆರೆಉದಯಶಂಕರ
ಚಿತ್ರಗಳು
ಸದಾಶಿವ ಬನ, ’ಶಿಲ್ಪಿ’ ವಿಟ್ಲ

















Thursday, January 24, 2013

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ


ಒಂದೆರಡಲ್ಲ
, ಬರೋಬ್ಬರಿ 4750 ಚದರ ಅಡಿ ವ್ಯಾಪ್ತಿಯ ವಿಸ್ತಾರವಾದ ಅಡಿಪಾಯ. 67 ಅಡಿ ಎತ್ತರದ ಮೂರು ಅಂತಸ್ತುಗಳ ಇಳಿಜಾರು ಛಾವಣಿ. ಛಾವಣಿಗಳಿಗೆ ತಾಮ್ರದ ಹೊದಿಕೆ. 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮಸ್ಥಳದಿಂದ ಕೊಡುಗೆಯಾಗಿ ಬಂದ ಮೂರು ಸ್ವರ್ಣ ಲೇಪಿತ ಕಳಸಗಳು.

ಇದು ಮರುಹುಟ್ಟು ಪಡೆದು ಭವ್ಯವಾಗಿ ತಲೆ ಎತ್ತಿ ನಿಂತಿರುವ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಿಹಂಗಮ ನೋಟ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದೆಂದು ಬಣ್ಣಿಸಲಾದ ವಿಟ್ಲದ ಈ ಪಂಚಲಿಂಗೇಶ್ವರ ದೇವಾಲಯಲ್ಲಿ ಇದೀಗ ಸಡಗರವೇ ಸಡಗರ
. ಗ್ರಾಮದ ಪ್ರಮುಖ ರಸ್ತೆಗಳು, ರಥ ಎಳೆಯುವ ಗದ್ದೆ, ದೇವಾಲಯದ ಆವರಣ ಸೇರಿದಂತೆ ಎಲ್ಲ ಕಡೆ ಚಪ್ಪರ, ತಳಿರು ತೋರಣದ ಶೃಂಗಾರ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಂಡೋಪತಂಡವಾಗಿ ಸ್ವಯಂ ಸೇವಕರಾಗಿ ಪಂಚಲಿಂಗೇಶ್ವರನ ಸೇವಾ ಕೈಂಕರ್ಯ ನಡೆಸುತ್ತಿರುವ ಜನರ ದಂಡು. ಸಹಸ್ರಾರು ಮಂದಿಗೆ ಪ್ರತಿನಿತ್ಯ ಅನ್ನದಾನ. ದೇವಾಲಯದ ಆವರಣದಲ್ಲೆಲ್ಲಾ ಭಕ್ತಾದಿಗಳಿಂದ ಬಂದ ಲೋಡುಗಟ್ಟಲೆ ಹೊರೆ ಕಾಣಿಕೆಯ ರಾಶಿ.
2001ರಲ್ಲಿ ಕಂಡ ಜೀರ್ಣೋದ್ಧಾರದ ಕನಸು 2013ರಲ್ಲಿ ನನಸಾಗುವ ವೇಳೆಗೆ ಆಗಿದ್ದುದು ಕೇವಲ ಜೀರ್ಣೋದ್ಧಾರವಲ್ಲ, ಬದಲಿಗೆ ದೇಗುಲದ ಸಂಪೂರ್ಣ ಪುನರ್ ನಿರ್ಮಾಣ. ಸಂಪೂರ್ಣ ಮಣ್ಣಿನಿಂದ ನಿರ್ಮಾಣವಾಗಿದ್ದ ದೇವಾಲಯ ಈಗ ಭವ್ಯವಾದ ಶಿಲಾಮಯ ದೇವಸ್ಥಾನವಾಗಿ ಎದ್ದು ನಿಂತಿದೆ.

ಇಡೀ ಗ್ರಾಮ ಈಗ
(ಜನವರಿ 9ರಿಂದ 21ರವರೆಗೆ) 13 ದಿನಗಳ ಕಾಲ ಪುನರ್ ನಿರ್ಮಾಣಗೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕೋತ್ಸವ ಸಮಾರಂಭ, ನಂತರ ಜನವರಿ 21ರಿಂದ 29ರವರೆಗೆ 9 ದಿನ ಮರು ಸಮರ್ಪಿತ ದೇಗಲದಲ್ಲಿ `ವಿಟ್ಲಾಯನ' ಎಂದೇ ಖ್ಯಾತಿ ಪಡೆದ ವರ್ಷಾವಧಿ ಜಾತ್ರೆ - ಹೀಗೆ 22 ದಿನಗಳ ಕಾಲ ಮಹಾ ಉತ್ಸವದ ಸಡಗರದಲ್ಲಿ ತೇಲುತ್ತಿದೆ. ಧರ್ಮಸ್ಥಳದ ನಡಾವಳಿಯ ಸಂಭ್ರಮವನ್ನು ನೆನಪಿಗೆ ತರುತ್ತಿದೆ. ಪ್ರತಿನಿತ್ಯ ಸಹಸ್ರಾರು ಮಂದಿಗೆ ಅನ್ನದಾನ, ಧಾರ್ಮಿಕ ವಿಧಿಗಳು, ಸಾಂಸ್ಕೃತಿಕ, ಮನರಂಜನಾ ಕಾರ‌್ಯಕ್ರಮಗಳು, ಯಕ್ಷಗಾನ, ನೃತ್ಯ, ನಾಟಕ ಸಂಗೀತದಲ್ಲಿ ಪ್ರತಿದಿನವೂ ಮಿಂದೇಳುತ್ತಿದ್ದಾರೆ.
ಅತ್ಯಂತ ಪುರಾತನವಾದ ಈ ಪಂಚಲಿಂಗೇಶ್ವರ ದೇವಸ್ಥಾನ ಪಾಂಡವ ನಿರ್ಮಿತ ದೇವಸ್ಥಾನ ಎಂದೇ ಪ್ರತೀತಿ. ಪಾಂಡವರು ಅರಗಿನ ಅರಮನೆಯಿಂದ ಪಾರಾದ ಬಳಿಕ ಕೆಲಕಾಲ ವಾಸವಿದ್ದ ಏಕಚಕ್ರ ನಗರವೇ ಈಗಿನ ವಿಟ್ಲ ಎಂಬ ನಂಬಿಕೆ ಇದೆ. ಭೀಮ ಬಕಾಸುರನನ್ನು ಕೊಂದದ್ದು ಇಲ್ಲಿಯೇ ಎಂದು ಹೇಳುವ ಜನ ಅದಕ್ಕೆ ಸಾಕ್ಷಿ ಎಂಬಂತೆ ದೇವಸ್ಥಾನದ ಆವರಣದಲ್ಲೇ ಕುಂತಿ ಮನೆ, ದೇವಾಲಯದಲ್ಲಿ ಕುಂತೀಶ್ವರ ಗುಡಿ, ಬಕಾಸುರ ವಾಸವಾಗಿದ್ದನೆನ್ನಲಾದ ಸಮೀಪದ ಕಳಂಜಿಮಲೆಯ ಬಕಾಸುರ ಗುಹೆ, ಭೀಮ- ಬಕಾಸುರ ಕದನದಲ್ಲಿ ಬಕಾಸುರನ ಅವಯವಗಳಾದ ತಲೆ, ಕಣ್ಣು, ಕೈ, ಬಾಯಿ ಹೋಗಿ ಬಿತ್ತೆನ್ನಲಾದ ಜಾಗಗಳಿಗೆ ತಲೆಂಗಳ, ಕಣ್ಣೂರು, ಕೈಯೂರು, ಬಾಯಾರು ಎಂದು ಹೆಸರಾದದ್ದು, ಭೀಮ ಸ್ನಾನ ಮಾಡಿದ ಕೆರೆ -ನೆತ್ತರಕೆರೆ ಎಂದು ಹೆಸರಾದ `ದಂತಕತೆ'ಯನ್ನು ಉಸುರುತ್ತಾರೆ.
ಇನ್ನೊಂದು ಪುರಾಣ ಕತೆಯ ಪ್ರಕಾರ ಪಾಂಡವರು ತಮ್ಮ ಸುತ್ತಾಟದ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ನೆಲೆಸಿದ್ದರು ಎನ್ನಲಾಗುತ್ತದೆ. ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸುವುದಕ್ಕೆ ಮನಮಾಡಿದ ಪಾಂಡವರು ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಾಶಿಗೆ ಕಳುಹಿಸಿ ಲಿಂಗಗಳನ್ನು ತರಲು ನಿಯೋಜಿಸಿದರು. ಭೀಮ ಲಿಂಗಗಳನ್ನು ತರುವಾಗ ತಡವಾದದ್ದರಿಂದ ನಿಶ್ಚಿತ ಲಗ್ನದಲ್ಲಿ ಆತನು ಆಗಮಿಸುವುದಕ್ಕೆ ಮೊದಲೇ ಶಿಲೆಯೊಂದನ್ನು ಪ್ರತಿಷ್ಠಿಸಿ ಪೂಜೆ ನೆರವೇರಿಸಲಾಯಿತು. ಆದರೆ ಭೀಮನು ಆಗಮಿಸಿ ಪ್ರತಿಷ್ಠಾಪಿಸಿದ ಶಿಲೆಯನ್ನು ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಾಪಿಸಿದನು. ಭೀಮನು ಕಿತ್ತೆಸೆದ ಲಿಂಗವು ವಿಟ್ಲ ದೇಗುಲದ ಬಡಗು ದಿಕ್ಕಿನಲ್ಲಿ ಕೆರೆಯ ಮಧ್ಯೆ ಕಲ್ಲಿನ ಮಂಟಪದಲ್ಲಿ ಈಗಲೂ ಇದೆಯೆಂದು ಹೇಳಲಾಗುತ್ತಿದೆ. ಹೀಗೆ ಈ ಶಿವಲಿಂಗಗಳು ಪಾಂಡವರಿಂದ ಪ್ರತಿಷ್ಠೆಗೊಂಡಿದೆ ಎನ್ನಲಾಗಿದೆ. ನೈವೇದ್ಯಕ್ಕೆ ಬೇರೇನೂ ಇಲ್ಲದೇ ಇದ್ದುದರಿಂದ ಅದಾಗಲೇ ನೈವೇದ್ಯ ಮಾಡಲಾದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ಭೀಮನು ನೈವೇದ್ಯ ಮಾಡಿದನು ಎಂದು ಹೇಳಲಾಗುತ್ತಿದೆ. ಅದೇ ಕಾರಣಕ್ಕೆ ಇಲ್ಲಿನ ಪಂಚಲಿಂಗನಿಗೆ ತಂಗುಳನ್ನದ ನೈವೇದ್ಯ ಇಂದಿಗೂ ನಡೆದುಕೊಂಡು ಬಂದಿದೆ. ಮತ್ತೊಂದು ಐತಿಹ್ಯದ ಪ್ರಕಾರ ಭೀಮನು ಕಾಶಿಗೆ ಹೋದಾಗ ಅವನ ಬೆನ್ನ ಹಿಂದೆಯೇ ಹನುಮಂತನೂ ಹೋದನಂತೆ. ವೇಗದಲ್ಲಿ ಹನುಮಂತ ಹೆಚ್ಚು ಸಮರ್ಥನಾದ ಕಾರಣ ಭೀಮನಿಗಿಂತ ಮೊದಲು ಲಿಂಗವನ್ನು ತಂದು ನಿಶ್ಚಿತ ಸಮಯಕ್ಕೆ ಪ್ರತಿಷ್ಠಾಪನೆ ನಡೆಯಿತು ಎಂದು ಡಾ.ಕೆ.ಅನಂತರಾಮು ಅವರು ಉದ್ಧರಿಸಿದ್ದಾರೆ. ಆದರೆ ಕಿತ್ತ ಲಿಂಗವು ಕೆರೆ ಮಧ್ಯದಲ್ಲಿ ಇದೆ ಎಂದು ಈ ಐತಿಹ್ಯದಲ್ಲಿ ಉದ್ಧರಿಸಿಲ್ಲ ಎಂದು ಡಾ.ಪಾದೆಕಲ್ಲು ವಿಷ್ಣು ಭಟ್ ಲೇಖನದಲ್ಲಿ ಬರೆದಿದ್ದಾರೆ.
ಖ್ಯಾತ ಸಂಶೋಧಕ ಡಾ. ಪಿ. ಗುರುರಾಜ ಭಟ್ ಅವರ ಪ್ರಕಾರ ಪಂಚಲಿಂಗೇಶ್ವರ ದೇವಸ್ಥಾನ ಕ್ರಿ.. 7-8ನೇ ಶತಮಾನದ್ದು. ಕ್ರಿ.. 1257ಕ್ಕೂ ಮೊದಲು ವಿಟ್ಲ ಸೀಮೆಯನ್ನು ಆಳುತ್ತಿದ್ದ ದೊಂಬ ಹೆಗ್ಗಡೆ ಅರಸು ಮನೆತನದ ಆರಾಧ್ಯ ದೈವ ವಿಟ್ಲದ ಪಂಚಲಿಂಗೇಶ್ವರ ಎನ್ನಲಾಗಿದೆ. ಕೇಪುವಿನಲ್ಲಿ ಇರುವ ಉಳ್ಳಾಳ್ತಿ ಗುಡಿಯೂ ಇದೇ ದೊಂಬ ಹೆಗ್ಗಡೆ ಅರಸು ಕುಟುಂಬಕ್ಕೆ ಸೇರಿದ್ದು. `ಬಲ್ಲಾಳ' ಎಂಬುದು ಈ ಅರಸು ಮನೆತನದ ಉಪನಾಮ.

ಲಭ್ಯ ಮಾಹಿತಿಗಳ ಪ್ರಕಾರ
1436, 1477 ಮತ್ತು 1894ರಲ್ಲಿ ದೇವಳದ ಜೀರ್ಣೋದ್ಧಾರ ನಡೆದಿತ್ತು ಎಂದು ಹೇಳಲಾಗಿದೆ. 1928, 1990ರಲ್ಲೂ ಅಲ್ಪಸ್ವಲ್ಪ ಜೀರ್ಣೋದ್ಧಾರ ನಡೆದಿತ್ತು.
ಈ ಮಧ್ಯೆ ಅರಸು ಮನೆತನಕ್ಕೆ ಸಂಕಷ್ಟದ ದಿನಗಳು ಎದುರಾದ ಹಿನ್ನೆಲೆಯಲ್ಲಿ ದೇವಸ್ಥಾನ ಜೀರ್ಣವಾಗುತ್ತಲೇ ಹೋಯಿತು. ಇಂತಹ ಸಂದರ್ಭದಲ್ಲಿ 2001ರಲ್ಲಿ ಭಕ್ತಾದಿಗಳು ದೇವಸ್ಥಾನದ ಜೀರ್ಣೋದ್ಧಾರ ಕೈಂಕರ್ಯಕ್ಕೆ ಕೈಹಾಕಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ
. ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ರೂಪುಗೊಂಡ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪೇಜಾವರದ ವಿಶ್ವೇಶ ತೀರ್ಥ ಶ್ರೀಪಾದರು, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತಿತರ ಯತಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯಿತು.




ಜೀರ್ಣೋದ್ಧಾರದ ಸಮಗ್ರ ಯೋಜನೆ
2002ರಲ್ಲಿ ರೂಪುಗೊಂಡು 2007ರವರೆಗೆ ನಿಧಿ ಸಂಗ್ರಹ ನಡೆಯಿತು. ವಿಟ್ಲ ಸೀಮೆಯ 16-17 ಗ್ರಾಮಗಳ ಮನೆ ಮನೆಯಿಂದಲೂ ದೇಣಿಗೆ ಹರಿದು ಬಂತು. ಜೊತೆಗೆ ವಿಟ್ಲದಿಂದ ಹೊರಹೋಗಿ ನೆಲೆಸಿದ ವ್ಯಕ್ತಿಗಳು ಅವರ ಮಿತ್ರರು, ಬಂಧುಗಳ ಮೂಲಕ ವಿಶ್ವಾದ್ಯಂತದಿಂದ ಕಾಣಿಕೆಯ ಪ್ರವಾಹ ಹರಿಯಿತು.2007ರ ಜನವರಿ 27ರಂದು `ಬಾಲಾಲಯ' ಉದ್ಘಾಟನೆ, ನಂದಿ (ಬಸವ) ಮೂಲಕ ಕಳಸವನ್ನು ಕೆಳಕ್ಕೆ ಎಳೆಯುವುದರೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ನಾಂದಿ. ಒಂದೇ ದಿನದಲ್ಲಿ ಸಹಸ್ರಾರು ಭಕ್ತರು ಮೂರು ಅಂತಸ್ತಿನ ಛಾವಣಿಯನ್ನು ಬಿಚ್ಚಿದರು. ಮುಂದಿನ 9 ದಿನದಲ್ಲಿ ಅಲ್ಲಿ ಉಳಿದಿದ್ದುದು ಅಡಿಪಾಯದ ಸ್ಥಳ ಮಾತ್ರ. ಅಂದಿನಿಂದ ಆರಂಭವಾದ ದೇಗುಲ ಪುನರ್ ನಿರ್ಮಾಣದ ಕಾರ‌್ಯ ನಿರಂತರವಾಗಿ 5 ವರ್ಷಗಳ ಕಾಲ ಮುಂದುವರೆಯಿತು. ಬೃಹದಾಕಾರದ ದೇವಾಲಯದ ಹೊರಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 42 ಸಾಲು, ಒಳಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 52 ಸಾಲು ಹೊರಭಾಗಕ್ಕೆ ಸಂಪೂರ್ಣವಾಗಿ ಶಿಲಾಮಯ ಗೋಡೆ. ಈ ಶಿಲೆಗಳಲ್ಲಿ ಸುಂದರ ಕೆತ್ತನೆ. `ಕೊಡಿಮರ' ಎಂದು ಕರೆಯಲಾಗುವ ಬೃಹತ್ ಧ್ವಜಸ್ಥಂಭವನ್ನು ದೀರ್ಘಕಾಲದ ಬಾಳಿಕೆಗಾಗಿ ಎಳ್ಳೆಣ್ಣೆಯ ತೊಟ್ಟಿಯಲ್ಲಿ ಮುಳಗಿಸಿ ಇಡಲಾಗಿತ್ತು ಇದಕ್ಕೆ ಭಕ್ತಾದಿಗಳೆಲ್ಲರೂ ದೇಣಿಗೆ ಅರ್ಪಿಸಿ ಎಳ್ಳೆಣ್ಣೆ ಎರೆದದ್ದು, ದೇವಾಲಯಕ್ಕೆ ಬಳಸಿದ ಮರಗಳಿಗೆ ಪರ್ಯಾಯವಾಗಿ ಸಹಸ್ರಾರು ಸಸಿಗಳು ವಿಟ್ಲ ಸೀಮೆ ಪರಿಸರಲ್ಲಿ ವಿತರಿಸಿ ನೆಟ್ಟದ್ದು ಸದಾಕಾಲ ನೆನಪಿನಲ್ಲಿ ಉಳಿಯುವ ಘಟನೆಗಳಾದವು.
ಐದು ಲಿಂಗ ಏಕೆ?


ಪಂಚಲಿಂಗೇಶ್ವರ ದೇಗುಲದ ಈ ಐದು ಲಿಂಗಗಳು ಪಂಚತತ್ವಗಳ ಸೂಚಕ. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಸ್ವರೂಪಗಳು ಭಾರತೀಯ ಪರಂಪರೆಯಲ್ಲಿ ಶಾಶ್ವತವಾಗಿ ಮಿಳಿತಗೊಂಡ ಪಂಚತತ್ವಗಳನ್ನು ಪ್ರತಿನಿಧೀಕರಿಸುವ ಮೂರ್ತ ಸ್ವರೂಪಗಳು. ಸದ್ಯೋಜಾತನಾಗಿ ಮೂಲಾಧಾರ(ಭೂಮಿ), ವಾಮದೇವನಾಗಿ ಸ್ವಾಧಿಷ್ಠಾನ(ಜಲ), ಅಘೋರನಾಗಿ ಮಣಿಪು (ಅಗ್ನಿ), ತತ್ಪುರುಷನಾಗಿ ಅನಾಹತ(ವಾಯು), ಈಶಾನನಾಗಿ ವಿಸುದ್ಧ(ಆಕಾಶ) ತತ್ವಗಳನ್ನು ಪ್ರತಿನಿಧೀಕರಿಸುವುದು. ಪ್ರಕೃತಿಯ ಶಕ್ತಿಸೆಲೆಗಳಾದ ಪಂಚಭೂತಗಳಲ್ಲಿ ಪರಮೇಶ್ವರನನ್ನು ಪ್ರಮಾಣೀಕರಿಸಿ ಶಿರಬಾಗಿ ಉಪಾಸನೆಯನ್ನು ಸಲ್ಲಿಸುವ ಪದ್ಧತಿ ಇಲ್ಲಿದೆ.
ದೇವಸ್ಥಾನದ ಗರ್ಭಗುಡಿಯೂ ಅಷ್ಟೇ ವಿಶಿಷ್ಟವಾದದ್ದು. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕೇರಳದಲ್ಲಿ ಇರುವ ದೇವಾಲಯಗಳದು `ಗಜಪೃಷ್ಠಾಕೃತಿಯ' ಶೈಲಿ. ಮುಖಮಂಟಪಗಳೂ ಗರ್ಭಗುಡಿಗೆ ಹೊಂದಿಕೊಂಡಿರುವುದು ಇದರ ವಿಶೇಷತೆ. ಗರ್ಭಗುಡಿಯ ಹಿಂಭಾಗ ಆನೆಯ ಹಿಂಭಾಗದಂತೆ ಇರುವುದರಿಂದ ಈ ಹೆಸರು. ಈ ಪರಿಸರದಲ್ಲಿ ಇಷ್ಟೊಂದು ಬೃಹತ್ತಾದ ಗಜಪೃಷ್ಠ ಗರ್ಭಗುಡಿಯ ದೇವಾಲಯ ಬೇರಾವುದೂ ಇಲ್ಲ. ಗಣಪತಿ, ಅಮ್ಮನವರ ಗುಡಿ, ಕುಂತೀಶ್ವರ ಗುಡಿ ಇವು ದೇವಾಲಯ ಪ್ರಾಂಗಣದಲ್ಲೇ ಇರುವ ಇತರ ಗುಡಿಗಳು.

ಧರ್ಮಸ್ಥಳವಿಟ್ಲದ ಬಾಂಧವ್ಯ


ವಿಟ್ಲ ಮತ್ತು ಧರ್ಮಸ್ಥಳಕ್ಕೆ ಅವಿನಾಭಾವ ಸಂಬಂಧ ಉಂಟು. ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ, `ಮಾತನಾಡುವ ಮಂಜುನಾಥ' ಎಂದೇ ಖ್ಯಾತರಾಗಿದ್ದ ದಿವಂಗತ ಮಂಜಯ್ಯ ಹೆಗ್ಗಡೆ ವಿಟ್ಲದವರು. ಇದನ್ನು ನೆನಪಿಸಿಕೊಂಡ ಈಗಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು `ಮಂಜುನಾಥ'ನ ಪ್ರೇರಣೆಯಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಮೂರು ಕಳಸಗಳನ್ನು ಧರ್ಮಸ್ಥಳದ ವತಿಯಿಂದ ನೀಡಿದರು. ಈ ಮೂರು ಸ್ವರ‌್ಣ ಲೇಪಿತ ಬೆಳ್ಳಿ ಕಳಸಗಳಿಗಾದ ವೆಚ್ಚ ಬರೋಬ್ಬರಿ 1.20 ಕೋಟಿ ರೂಪಾಯಿಗಳು. ಇಡೀ ದೇವಸ್ಥಾನದ ಜೀರ್ಣೋದ್ಧಾರ ಹೆಗ್ಗಡೆ ಅವರ ಗೌರವಾಧ್ಯಕ್ಷತೆಯಲ್ಲೇ ನಡೆದದ್ದು ಮತ್ತೊಮ್ಮೆ ವಿಟ್ಲ-ಧರ್ಮಸ್ಥಳದ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸಿತು.
ಚಿತ್ರಗಳು:
1) ಪುನರ್ ನಿರ್ಮಿತ ದೇವಾಲಯದ ಮುಂಭಾಗ.
2) ಹೊರೆ ಕಾಣಿಕೆ.
3) 
ಬ್ರಹ್ಮಕಲಶ ಸಂಭ್ರಮ.
4) ಹೊರೆ ಕಾಣಿಕೆ.

5) ನಂದಿಯಿಂದ ಕಳಸ ಎಳೆಯಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ
. ಹಿಂಭಾಗದಲ್ಲಿ ಹಿಂದಿದ್ದ ದೇವಸ್ಥಾನದ ಹಿಂಭಾಗದ ದೃಶ್ಯ.
6) ತೈಲದ ತೊಟ್ಟಿಯಲ್ಲಿ ನೂತನ ಧ್ವಜಸ್ಥಂಭ.
7) ಪುನರ್ ನಿರ್ಮಿತ ದೇವಾಲಯ, ಪುಷ್ಕರಣಿಯ ವಿಹಂಗಮ ನೋಟ.
8) ಪ್ರಜಾವಾಣಿಯಲ್ಲಿ 22-01-2013ರ ಮಂಗಳವಾರ ಕರ್ನಾಟಕ ದರ್ಶನದಲ್ಲಿ ಪ್ರಕಟವಾದ ಲೇಖನ.

-
ನೆತ್ರಕೆರೆಉದಯಶಂಕರ

ಚಿತ್ರಗಳು
ಸದಾಶಿವ ಬನ `ಶಿಲ್ಪಿ ವಿಟ್ಲಮತ್ತು ಯಶು ವಿಟ್ಲ.


Friday, January 11, 2013

ಶಿರಸಿ ಅರಣ್ಯ ಕಾಲೇಜಿಗೆ ರಜತ ಸಂಭ್ರಮ

ಶಿರಸಿ ಅರಣ್ಯ ಕಾಲೇಜಿಗೆ ರಜತ ಸಂಭ್ರಮ


ಬೆಂಗಳೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಶಿರಸಿಯ ಅರಣ್ಯ ಮಹಾವಿದ್ಯಾಲಯಕ್ಕೆ 25 ವರ್ಷಗಳು ತುಂಬಿದ್ದು ರಜತ ಮಹೋತ್ಸವ ಸಂಭ್ರಮಾಚರಣೆಗೆ ಅಣಿಯಾಗಿದೆ.

ಮಹಾವಿದ್ಯಾಲಯಕ್ಕೆ 25 ವರ್ಷ ತಂಬಿದ ಹಿನ್ನೆಲೆಯಲ್ಲಿ ಜನವರಿ 12 ಮತ್ತು 13ರಂದು ಅರಣ್ಯ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಮಹಾವಿದ್ಯಾಲಯದ ರಜತ ಮಹೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ಕೆ. ಪಾಟೀಲ ತಿಳಿಸಿದ್ದಾರೆ.

ಜನವರಿ  12ರಂದು ಮಧ್ಯಾಹ್ನ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಆರ್. ಹಂಚಿನಾಳ ಅಧ್ಯಕ್ಷತೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 13ರಂದು ಬೆಳಿಗ್ಗೆ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಸಿ.ಪಿ. ಯೋಗೇಶ್ವರ ಅವರು ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆಯುವ ರಜತ ಮಹೋತ್ಸವ ಸಮಾರಂಭದಲ್ಲಿ  ಕಾನೂನು ಸಚಿವ ಎಸ್. ಸುರೇಶ ಕುಮಾರ್, ಪಶ್ಚಿಮಘಟ್ಟ ಕಾರ‌್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಾಜಿ ಅರಣ್ಯ ಸಚಿವ ವಿಜಯಶಂಕರ, ಶಾಸಕ ಸುನೀಲ ಹೆಗಡೆ, ಕೃಷ್ಣ ನಾರಾಯಣ ಗೌಡ, ಗುರುಪಾದ ಹೆಗಡೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

Wednesday, January 9, 2013

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'


ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'


ಬ್ರಹ್ಮಕಲಶದ ಸಡಗರ
, ವಿಟ್ಲ ಪರಿಸರಗಲ್ಲಿ ಗೌಜಿಯೋ ಗೌಜಿ..
'ವಿಟ್ಲ ಪೇಟೆ ಇಡೀ ಗೌಜಿಯೋ ಗೌಜಿ. ನಾಕು ಮಾರ್ಗದವರೆಗೂ ಚಪ್ಪರ ಹಾಕಿದ್ದವು. ಎಲ್ಲಾ ಮಾರ್ಗಂಗಳಲ್ಲಿಯೂ ಕಾವಿ ಧ್ವಜ. ತೇರಗೆದ್ದೆಲಿದೇ ಚಪ್ಪರ. ಕಟ್ಟೆ ಸೇಸುಮೂಲ್ಯನ ಗೆದ್ದೆಲಿ ಅಡಿಗೆಗೆ ಭಾರೀ ಸಿದ್ಧತೆ ಆವುತ್ತಾ ಇದ್ದು. ಉದಿಯಪ್ಪಂದ ಕಸ್ತಲೆವರೆಗೂ ಬಪ್ಪೋರಿಂಗೆಲ್ಲಾ ಊಟ, ತಿಂಡಿ, ಕಾಫಿಯ ವ್ಯವಸ್ಥೆ ಆವುತ್ತಾ ಇದ್ದು. ಊರಿಲಿ ಆರುದೇ ಅಡಿಗೆ ಮಾಡುವ ಹಾಂಗೆ ಇಲ್ಲೆಡ್ಡ.....'
ಮಾಮೂಲಿಯಾಗಿ ಫೋನ್ ಮಾಡಿದ್ದೇ ತಡ ಆ ಕಡೆಯಿಂದ ಅಮ್ಮನ ವರದಿ. ಅವರಿಗೆ ವಯಸ್ಸು 80 ದಾಟಿದೆ. ಆದರೆ ಉತ್ಸಾಹಕ್ಕೆ ವಯಸ್ಸಿನ ಅಡ್ಡಿ ಎಲ್ಲಿಯದು? ನಮ್ಮ ಜೀವಮಾನದಲ್ಲಿ ನಡೆಯುವ ಹೆಮ್ಮೆಯ ಕಾರ್ಯಕ್ರಮ ಇದು ಎಂಬ ಅಭಿಮಾನ. ಫೋನ್ ಮಾಡಿದರೆ ಸಾಕು ಅದರದ್ದೇ ಸುದ್ದಿ.
ವಿಟ್ಲಪೇಟೆಯ ಯಾರ ಮನೆಗಳಿಗೆ ಫೋನ್ ಮಾಡಿದರೂ ಈಗ ಇಂತಹುದೇ ಸಂಭಾಷಣೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೇಟೆಯಲ್ಲಿ ಈ ಶತಮಾನದಲ್ಲೇ ಅಪೂರ್ವ ಎನ್ನಬಹುದಾದ ಕಾರ್ಯಕ್ರಮವೊಂದು ಜರುಗುತ್ತಿದೆ
. ಅದೇ ವಿಟ್ಲದ ಶ್ರೀ ಪಂಚಲಿಂಗೇಶ್ವರನ ಬ್ರಹ್ಮಕಲಶೋತ್ಸವ ಸಮಾರಂಭದ ಸಡಗರ. ಜನವರಿ 9ರಿಂದ 21ರ ವರೆಗೆ ಬ್ರಹ್ಮಕಲಶದ ಸಂಭ್ರಮವಾದರೆ, 21ರಿಂದ ನಂತರ 9 ದಿನ ವಿಟ್ಲಾಯನದ ಗೌಜಿ. ಅಂದರೆ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯ ಗೌಜಿ. ಅಂದರೆ ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಸಂಭ್ರಮವೋ ಸಂಭ್ರಮ.
ಸಂಭ್ರಮಕ್ಕೆ ನೀರೆರೆದವರು ಒಬ್ಬಿಬ್ಬರಲ್ಲ. ಮೊತ್ತ ಮೊದಲ ಸಾಲಿನಲ್ಲಿ ನಿಲ್ಲುವವರು ವಿಟ್ಲ ಸೀಮೆಯ 16 ಗ್ರಾಮಗಳ ಭಕ್ತ ಜನ, ವಿಟ್ಲದಿಂದ ಪರವೂರುಗಳು ಅಂದರೆ ಮಂಗಳೂರು, ಬೆಂಗಳೂರು, ಮುಂಬೈ, ದೆಹಲಿ ಅಷ್ಟೇ ಏಕೆ ಅಮೆರಿಕದವರೆಗೂ ತೆರಳಿ ಅಲ್ಲಿ ವ್ಯಾವಹಾರಿಕ ಬದುಕಿನ ಸಲುವಾಗಿ ಕೆಲಸಕ್ಕೆ ಸೇರಿಕೊಂಡ ಇಲ್ಲಿನ ಜನ ಅವರ ಕುಟುಂಬ ಸದಸ್ಯರು, ಬಂಧು ಮಿತ್ರರು ಅವರ ಮೂಲಕ ದೇಗುಲದ ಪುನರ್ ನಿರ್ಮಾಣಕ್ಕೆ ತಮ್ಮ ಅಳಿಲ ಸೇವೆಗಳನ್ನು ಸಲ್ಲಿಸಿದವರು.
ದೇವಾಲಯದ ನಿರ್ಮಾಣ ಒಬ್ಬಿಬ್ಬರಿಂದ ಆಗುವಂತಹುದಲ್ಲ. ಲಕ್ಷಾಂತರ ಕೈಗಳು ಜೊತೆಗೂಡಬೇಕು ಎನ್ನುತ್ತಾರೆ. ವಿಟ್ಲದ ಪಂಚಲಿಂಗೇಶ್ವರ ದೇವಾಲಯದ ವಿಚಾರದಲ್ಲಿ ಇದು ಸತ್ಯ. ಪುಟ್ಟ ಗುಡಿಸಲಿನಲ್ಲಿ ವಾಸಿಸುವ ಶ್ರಮಜೀವಿಯಿಂದ ಹಿಡಿದು, ದೊಡ್ಡ ಮನೆಗಳನ್ನು ಕಟ್ಟಿಕೊಂಡ ಶ್ರೀಮಂತರವರೆಗೆ ಸಹಸ್ರ ಸಹಸ್ರ ಮಂದಿ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ತಮ್ಮ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ. ಈಗಲೂ ಸಲ್ಲಿಸುತ್ತಲೇ ಇದ್ದಾರೆ.

ಪಾಂಡವರ ಕಾಲದಲ್ಲಿ ನಿರ್ಮಾಣವಾದದ್ದು ಎಂಬ ಪ್ರತೀತಿ ಇರುವ ಈ ದೇವಸ್ಥಾನ ಅದೆಷ್ಟು ಬಾರಿ ಜೀರ್ಣೋದ್ಧಾರಗೊಂಡಿದೆಯೋ ಖಚಿತವಾಗಿ ಯಾರಿಗೂ ಗೊತ್ತಿಲ್ಲ
. ಕೆಲವು ನೂರು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡದ್ದಕ್ಕೆ ದಾಖಲೆಗಳು ಸಿಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅಂದರೆ ಆರೇಳು ವರ್ಷಗಳ ಹಿಂದೆ ಮತ್ತೊಮ್ಮ ದೇವಾಲಯ ಜೀರ್ಣಾವಸ್ಥೆಗೆ ತಲುಪಿದಾಗ ಈಗಿನ ತಲೆಮಾರಿನ ಒಂದಷ್ಟು ಮಂದಿ ಭಕ್ತರು ಅದರ ಜೀರ್ಣೋದ್ಧಾರದ ಕೆಲಸಕ್ಕೆ ಕೈಹಾಕಿದರು.
ಜೀರ್ಣೋದ್ಧಾರ ಎಂದು ಬಸವನಿಂದ ಹಗ್ಗ ಕಟ್ಟಿ ಎಳೆಸುವ ಮೂಲಕ ಆರಂಭವಾದ ಕೆಲಸ, ಮುಗಿದದ್ದು ಜೀರ್ಣೋದ್ಧಾರದೊಂದಿಗೆ ಅಲ್ಲ, ಬದಲಾಗಿ ಸಂಪೂರ್ಣವಾಗಿ ಪುನರ್ ನಿರ್ಮಾಣದೊಂದಿಗೆ ಎಂಬುದೇ ವಿಶೇಷ. ಜೀರ್ಣೋದ್ಧಾರಕ್ಕಾಗಿ ದೇವಾಲಯವನ್ನು ಬಿಚ್ಚುವ ಕೆಲಸಕ್ಕೆ ಲಕ್ಷ ಲಕ್ಷ ಮಂದಿ ಟೊಂಕ ಕಟ್ಟಿ ಒಂದೇ ದಿನದಲ್ಲಿ ಮೂರು ಅಂತಸ್ಥಿನ ದೇಗುಲವನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿದ್ದರು. ಆಗ ಕಂಡು ಬಂದ ದೇವಾಲಯದ ಒಳಭಾಗ ಅಚ್ಚರಿ ಮೂಡಿಸುವಂತಹುದಾಗಿತ್ತು. ಸಂಪೂರ್ಣ ಮಣ್ಣಿನಿಂದ ದೇವಾಲಯ ಅಷ್ಟೊಂದು ಕಾಲ ಎದ್ದು ನಿಂತಿತ್ತು.
ಈಗ ಅದನ್ನು ಸಂಪೂರ್ಣವಾಗಿ ತೆಗೆದು ಅದೇ ಆಯ -ಅಡಿಪಾಯದಲ್ಲಿ ಸಂಪೂರ್ಣ ಕಲ್ಲಿನಿಂದಲೇ ನಿರ್ಮಿಸಿದ ಶಿಲಾಮಯ ದೇವಸ್ಥಾನ ಈಗ ಭವ್ಯವಾಗಿ ತಲೆ ಎತ್ತಿ ನಿಂತಿದೆ.ಈ ಮಹಾಕಾರ್ಯಕ್ಕೆ ಮಾರ್ಗದರ್ಶನ ಮಾಡಿದ ಮಹಾನುಭಾವರೂ ಕಡಿಮೆಯೇನಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಗೌರವಾಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ ದೇಗುಲ ಪುನರ್ ನಿರ್ಮಾಣ ಸಮಿತಿಯಲ್ಲಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು, ಸುಬ್ರಹ್ಮಣ್ಯ ಶ್ರೀಗಳು, ಒಡಿಯೂರು ಶ್ರೀಗಳು, ಮಾಣಿಲ ಶ್ರೀಗಳು - ಹೀಗೆ ಅನೇಕ ಯತಿವರ್ಯರೂ ಈ ಮಹಾ ಕಾರ್ಯಕ್ಕೆ ಮಾರ್ಗದರ್ಶನ ಮಾಡಿದ್ದಾರೆ.

ದೇವಸ್ಥಾನಕ್ಕಾಗಿ ರೂಪಿಸಲಾದ ಬೃಹತ್ ಗರುಡಗಂಭ ಸಹಸ್ರಾರು ವರ್ಷ ಬಾಳಲೆಂದು ಹರಸಿ ಕಾಣಿಕೆ ಸಲ್ಲಿಸಿ ಅದಕ್ಕೆ ಎಣ್ಣೆ ಎರೆದವರ ಸಂಖ್ಯೆಯಂತೂ ಲೆಕ್ಕವಿಲ್ಲದಷ್ಟು
.
ಇಡೀ ದೇಗುಲಕ್ಕೆ ಕಳಸಪ್ರಾಯವಾದ ಮುಗಳಿಯನ್ನು ಧರ್ಮಸ್ಥಳವೇ ಒದಗಿಸಿದೆ. ಈ ಬಂಗಾರದ ಮುಗುಳಿಯನ್ನು ಸಂಭ್ರಮದೊಂದಿಗೆ ಮೆರವಣಿಗೆಯಲ್ಲಿ ತರುವ ಮೂಲಕ 2013 ಜನವರಿ 6ರ ಭಾನುವಾರದಿಂದ ಇಡೀ ವಿಟ್ಲ ಪರಿಸರ ಸಡಗರದಲ್ಲಿ ತೇಲುತ್ತಿದೆ.
ಸಡಗರದ ಸಂಭ್ರಮದ ಕೆಲವು ಕ್ಷಣಗಳನ್ನು ಹಂಚಿಕೊಳ್ಳುವ ಅಳಿಸೇವೆಯನ್ನು 'ಪರ್ಯಾಯ' ಮಾಡುತ್ತಿದೆ. ಬನ್ನಿ ಸಡಗರದ ಪೂರ್ಣ ಅನುಭವ ಪಡೆಯಲುಮ್ಮ ತಲೆಮಾರಿನಲ್ಲಿ ಮಾತ್ರವೇ ಕಂಡು ಆನಂದಿಸಬಹುದಾಗ ಅಪೂರ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ವಿಟ್ಲಕ್ಕೆ ಬನ್ನಿ ಎಂಬ ಆದರ ಪೂರ್ವ ಕರೆ ಹೊತ್ತ ಆಮಂತ್ರಣ ಪತ್ರಿಕೆಯ ಕೆಲವು ಪುಟಗಳು ಇಲ್ಲಿವೆ. ಫೋಟೋಗಳನ್ನು ಕ್ಲಿಕ್ಕಿಸಿ ವಿವರವಾಗಿ ಆಮಂತ್ರಣವನ್ನು ವೀಕ್ಷಿಸಬಹುದು.
ಧರ್ಮಸ್ಥಳದಿಂದ ಬಂದ ಬಂಗಾರದ 'ಮುಗುಳಿ'ಯ ಮೆರವಣಿಗೆ ಚಿತ್ರವೂ ಇದರೊಂದಿಗಿದೆ.

ಬಂಟ್ವಾಳ ತಾಲ್ಲೂಕಿನ ವಿಟ್ಲ ಪಂಚಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಪ್ರಯುಕ್ತ ಗರ್ಭಗುಡಿ ಮತ್ತು ತೀರ್ಥಮಂಟಪಕ್ಕೆ ಅಳವಡಿಸುವ ನೂತನ 
`ಮುಗುಳಿ'ಯನ್ನು ಧರ್ಮಸ್ಥಳದಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆಯಲ್ಲಿ 6-01-2013ರ ಭಾನುವಾರ ಕೊಂಡೊಯ್ಯಲಾಯಿತು.
-ನೆತ್ರಕೆರೆ ಉದಯಶಂಕರ  

ಆಮಂತ್ರಣ ಪತ್ರಿಕೆ



Advertisement