Sunday, December 8, 2013

ಸಚ್ಚಿದಾನಂದ ನಗರ ಸಮಸ್ಯೆ: ಸುಪ್ರೀಂ ತೀರ್ಪಿನಂತೆ ಇತ್ಯರ್ಥ

ಸಚ್ಚಿದಾನಂದ ನಗರ ಸಮಸ್ಯೆ: ಸುಪ್ರೀಂ ತೀರ್ಪಿನಂತೆ ಇತ್ಯರ್ಥ
ಬಿಬಿಎಂಪಿ ಕಮೀಷನರ್ ಪ್ರಕಟಣೆ















ಬೆಂಗಳೂರು:
ನಗರದ ರಾಜ ರಾಜೇಶ್ವರಿ ನಗರ ವ್ಯಾಪ್ತಿಯಲ್ಲಿರುವ ಸಚ್ಚಿದಾನಂದ ನಗರ ಬಡಾವಣೆಯ ನಿವೇಶನದಾರರಿಗೆ ಖಾತೆ, ಕಟ್ಟಡ ನಕ್ಷೆ ಹಾಗೂ ಸವಲತ್ತು ನೀಡಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಪಾಲಿಸುವ ಮೂಲಕ  ಸಮಸ್ಯೆ ಬಗೆಹರಿಸುವುದಾಗಿ ಬಿಬಿಎಂಪಿ ಕಮೀಷನರ್  ಎಂ. ಲಕ್ಷ್ಮೀನಾರಾಯಣ ಅವರು ಶನಿವಾರ ಪ್ರಕಟಿಸಿದ್ದಾರೆ.

ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ ಕಚೇರಿಯಲ್ಲಿ ನಡೆದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಬಿ.ಎಸ್. ಸತ್ಯ ನಾರಾಯಣ ಅವರೂ ಹಾಜರಿದ್ದ ಸಭೆಯಲ್ಲಿ ಕ್ಷೇತ್ರದ ಶಾಸಕ ಮುನಿರತ್ನ ಅವರು ಸಚ್ಚಿದಾನಂದ ನಗರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ ಕಮೀಷನರ್ ಅವರು ಈ ಘೋಷಣೆ ಮಾಡಿರುವುದಾಗಿ ಬಿಬಿಎಂಪಿ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಬಡಾವಣೆಯ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಸುಪ್ರೀಂಕೋರ್ಟ್ ತೀರ್ಪು ನಿವೇಶನದಾರರ ಪರವಾಗಿದ್ದರೂ ಅಧಿಕಾರಿಗಳು ಸಮಸ್ಯೆ ನಿವಾರಿಸದೆ ಸತಾಯಿಸುತ್ತಿದ್ದಾರೆ ಎಂದಾಗ ಕಮೀಷನರ್, ಮೇಯರ್ ಹಾಗೂ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ನಿವಾರಿಸುವ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಹಾಜರಿದ್ದ ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನದ ಸದಸ್ಯರೂ ಸಭೆಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಳನ್ನು ಸಚಿವರು, ಮೇಯರ್ ಹಾಗೂ ಕಮೀಷನರ್ ಇತರರ ಗಮನಕ್ಕೆ ತಂದರು. ಬಡಾವಣೆಯ ಶಾಸನಬದ್ಧತೆಯನ್ನು ಎತ್ತಿ ಹಿಡಿದು ಖಾತೆ, ಕಟ್ಟಡನಕ್ಷೆ, ಸವಲತ್ತುಗಳನ್ನು ನೀಡುವಂತೆ ಆಜ್ಞಾಪಿಸಿದ್ದ ಸಿವಿಲ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ವಜಾ ಮಾಡಿದ್ದವು. ಹೀಗಾಗಿ ಸಿವಿಲ್ ಕೋರ್ಟ್ ತೀರ್ಪು ಅಂತಿಮಗೊಂಡಿತ್ತು.

Advertisement